ಅದೇ
ಆ ಚರ್ಮ- ದೊಳಗೆ
ಆಡಂ-ಈವ್ ಘಳಿಗೆ
ಅಂಗೈ ಸಾಲದಾಗಿ ಎಲೆಯಲಿ ಅಂಗ ಮರೆಯಾಚಿ
ಮೊದಲುದಿತ ‘ಹಾಡುಸಾಲು’ ಮರೆತು ಹೋಯಿತು
ತರಗಲೆಗಳಡಿಯಿಂದ ಬೀಸಿಬಂದ ಗಾಳಿಯಲಿ ಬೆರೆತುಹೋಯಿತು
ತಣಿದ ಯಜ್ಞಕುಂಡದಲಿ ಸೂರ್ಯ ಕಾಲನಿಳಿಬಿಟ್ಟು
ಹಸಿ ಬೆಚ್ಚಗಿನ ಬೂದಿಯಲಿ ಹೆಬ್ಬೆರಳನ್ನು ಆಡಿಸಾಡಿಸುತ
ತುಪ್ಪದ ಕಮಟಿನೊಂದಿಗೆ ಕಟ್ಟಿದ ಮೂಗು ಒಗ್ಗಿಕೊಳ್ಳುತ
ತುಪ್ಪಳವು ಅರೆಬೆಂದು ಕ್ಷೀಣಹೊಗೆ ಅರೆಜೀವವಾಗುತ
ನೆರೆದ ದೈವವು ಒಲಿದ ದೈವದೊಡಗೂಡಿ ಬರೆಧರ್ಮವಾಗುತ
ನೆಲವ ಸೀಳಿ ಗೆರೆಯನೆಳೆದು ಕುಲವು ಅಂದು ಠಸ್ಸೆಯಾಗಿ
ಅಗ್ನಿಸೋಮ ಬಲಿಗಳೆಲ್ಲ ಬೆಂದು ಬಳಲಿಯಿಂದು ಹವಿಸ್ಸಾಗಿ
ಬಿಳಿಯ ಹೊದಿಕೆ ಕರಗಿ ಸರಿದು ಬೆತ್ತಲಾದ ಬೆಟ್ಟಸಾಲು
ಓರೆಯಾದ ಮೈಗುಂಟ ಜಾರಿಳಿಯುವ ಕಿರಣ ತಬ್ಬಿ ಮೈಯುಬ್ಬಿ
ಮಣ್ಣಮಣ ಜೀವಕಣ ಹುಳುಹುಪ್ಪಡಿ ಹಲ್ಲಿಹಾವು ಅಲ್ಲಿಇಲ್ಲಿ
ಎಲ್ಲಿಯಲ್ಲಿ ? ಜೀವಜಾಲ ತೇವಸಂಕುಲ ನೆಲಜಲ ಆಕಾಶದಲ್ಲಿ
ಛಳಿಬಿಟ್ಟು ಕಳೆಕಟ್ಟಿ ವಿಹರಿಸಿ ವಿರಮಿಸಿ ತಲೆಯನೊರಗುವಲ್ಲಿ
ಎರಡೆರಡು... ಎರಡೇ ಎರಡು ಕಾಲುಗಳು ಬಂದವು ತಗ್ಗು ತೆವರಿ
ದಿನ್ನೆ ಸವರಿ, ಕಣಿಕೆ ಗರಿಕೆ ಸಮ ಮಾಡಿ ಬೋಳುದಾರಿ
ಮರಬೊಡ್ಡೆ ಗಿಡದೆಲೆ ಬಳ್ಳಿಹೂವು ಕಳ್ಳಿಹಾಲು ರಸವ ಹಿಂಡು
ಸೊಂಯ್ ಎಂದು ಸೆಳೆದುಕೊಂಡು ನಡುಬಿಂದುವಿನಲಿ ಕಳೆದುಕೊಂಡು
ಸುತ್ತಣದ ಕೂಟಕುಳಿ ನುಂಗಿ ನೊಣೆದು ಕಪ್ಪುಕುಳಿ
ಹೆದರಿ ಬೆದರಿ ಉಡುಗುತಿರಲು ಪ್ರತ್ಯಕ್ಷ ದೈವ ಕಣ್ಣ ಮುಂದೆಯೆ
ಸರ್ವಶಕ್ತ ತಂದೆಯೇ.... ಜಗವು ತುಂಬಿದೆ ಮಂದ ಮಂದೆಯೇ !
ನಗ್ನಕಾಮ ಅಗ್ನಿಗಾಹುತಿ ಇಷ್ಟಕಾಮ ಸಿದ್ಧಿಯಾಗಿ
ಅಷ್ಟಲಕ್ಷ್ಮಿ ಒಲಿಯುತಲಿ ಅಷ್ಟಿಷ್ಟು ಪುಣ್ಯ ಪ್ರಾಪ್ತಿ
ಅಷ್ಟಭೋಗ ಭಾಗ್ಯ ಫಲಿಸಿ ಅನ್ನಪಾಕ ನಿಷ್ಪತ್ತಿ
ಕಾಡಿನೆದೆಯ ಖಡ್ಗವಿರಿದು ಕಿಡಿಗೆ ಸುಡಲು ಹುಲ್ಲುಗಾವಲು
ಸೋಮರಸವ ಹಿಂಡಿ ತೆಗೆದು ಮಂಡಗೇರಿದಮಲು
ಮಂಟಪಕೆ ಮರಕಡಿದು ಸ್ವರ್ಗಪ್ರಾಪ್ತಿಗೆ ತಲೆಕಡಿದು
ಮಾಘಸ್ನಾನಕೆ ಮುಳುಗುತಿರಲು ಪಾಪ ಪ್ರಪಂಚವೆಲ್ಲಿಯದು?
ಗೋತ್ರ ಮುನಿಯನು ಗೋವು ಕಂಡು ಕಣ್ಣಿ ಕಿತ್ತೋಡುವುದು
ಯಾವ ನ್ಯಾಯವು ? ಕಾಕದೃಷ್ಟಿ ಬೀರುವುದು ಯಾವ ದೈವವು ?
ತೊಗಲಬಿಳಿ ಮೊಗದಗೆಂಪು ಹೊತ್ತ ಶಲ್ಯಕೆ ಹತ್ತು ಬಣ್ಣಗಳು
ಈವ್ ಮಾತೆಯ ಗೋರಿಯಲ್ಲಿ ಪಡಿಯಚ್ಚಿನ ಮರಿಗಳು
ಪುಟಗಟ್ಟಲೆ ಇತಿಹಾಸದ ಅಧ್ಯಾಯಗಳು ನಾನು ನೀನು
ಎದೆಯದೆಯಲಿ ಹೊತ್ತು ತಂದು ಬಿಸಿದೋಸೆ ಬಿಕರಿ ಮಾಡಿ
ಭೂಮ್ತಾಯ ಮಕ್ಕಳು ನೆಲೆಯೂರಲು ಹುಡುಕುತ ಮೆಕ್ಕಲು
ಕುಲವಿರದ ವಲಸೆಯಾನ ಎಲ್ಲರೊಂದೇ ಭಾವಯಾನ
ಮರೆತ ಹಾಡು ಬೆರೆತ ನಾಡು ಹಲವು ದೈವದೊಕ್ಕಲು
ಹುಡುಕಬೇಕು ಮನುಜಮತ ಕವಿನುಡಿದ ವಿಶ್ವಪಥ
ಹಾಡುಹಸೆ ಆಲಾಪ ಒಂಟಿಮರದ ವಿಲಾಪ ನೀಗಿನೀಗಿ
ಒಳೊಳಗೆ ತೂಗಿ ತೂಗಿ; ಹೆಕ್ಕಿ ತೆಗೆದು ಹಾಡುಸಾಲು
-ಚನ್ನಪ್ಪ ಅಂಗಡಿ
ಚನ್ನಪ್ಪ ಅಂಗಡಿ
ಚನ್ನಪ್ಪ ಅಂಗಡಿ ಅವರು ಎಮ್ ಎಸ್ ಸಿ (ಕೃಷಿ) ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ.
ಇವರು ಜನಿಸಿದ್ದು15.04.1970, ಬಮ್ಮನಹಳ್ಳಿ ಹಾವೇರಿ ಜಿಲ್ಲೆಯಲ್ಲಿ.
ಮಂದ ಬೆಳಕಿನ ಸಾಂತ್ವನ, ಭೂಮಿ ತಿರುಗುವ ಶಬ್ದ (ಕವನಸಂಕಲನ), ಮಣ್ಣಿನೊಳಗಣ ಮರ್ಮ, ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ), ಎದೆಯ ಒಕ್ಕಲಿಗ (ವೈಚಾರಿಕ), ಕೃಷಿ ಕಾರಣ ಸಂಪಾದನೆ : ಮಡಿಲು, ಕಾಯಕಯೋಗಿ, ಕದಂಬ, ಬಿತ್ತೋಣ ಹತ್ತಿ ಬೆಳೆಯೋಣ, ಗಿಡಗಂಟೆಗಳ ಕೊರಳು ಕೃತಿಗಳನ್ನು ರಚಿಸಿದ್ದಾರೆ.
ಭೂಚೇತನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಾವ್ಯ), ಮುದ್ದಣ ರತ್ನಾಕರವರ್ಣಿ ಅನಾಮಿಕ (ಕಸಾಪ) ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ಪೇಜಾವರ ಸದಾಶಿವವರಾವ್ (ಮುಂಬೈ) ಪ್ರಶಸ್ತಿ, ಪೆರ್ಲ ಕಾವ್ಯ (ಕಾಸರಗೋಡು-ಕೇರಳ) ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರ ನಗದು ಪುರಸ್ಕಾರ, ಬೆಟದೂರ ಪ್ರತಿಷ್ಠಾನ ಪ್ರಶಸ್ತಿ, ಸಂಗಮ ಸಾಹಿತ್ಯ ಪ್ರಶಸ್ತಿ (ಹುನಗುಂದ), ಅಸರ್ ಪುಸ್ತಕ ಪ್ರಶಸ್ತಿ, 'ಶ್ರೀಲೇಖಿಕಾ' ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 'ಹಣತೆ' ರಾಜ್ಯ ಮಟ್ಟದ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಸಂಕ್ರಮಣ ಕಥೆ ಹಾಗೂ ಕಾವ್ಯ ಪ್ರಶಸ್ತಿ, ಪ್ರಜಾವಾಣಿ ದೀಪಾವಳಿ ಸ್ಪರ್ಧೆಯ ಕಾವ್ಯ ಹಾಗೂ ಕಥಾ ಪ್ರಶಸ್ತಿ, ಸಂಯುಕ್ತ ಕರ್ನಾಟಕದ 'ವರ್ಷದ ಕಥೆ' ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ತರಂಗ ಕಥಾ ಸ್ಪರ್ಧೆಯಲ್ಲಿ “ಅತ್ಯುತ್ತಮ ಕಥೆ' ಪ್ರಶಸ್ತಿ, ತುಷಾರ ಕಥಾ ಪ್ರಶಸ್ತಿ, ವಿಜಯವಾಣಿ ದೀಪಾವಳಿ ಕಥಾ ಪ್ರಶಸ್ತಿ, ವಿಜಯ ಕರ್ನಾಟಕ ಯುಗಾದಿ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾರೆ.
More About Author