Poem

ಎಷ್ಟು ಅನಿವಾರ್ಯ ಈ ಬದುಕು!

ಅಣುಕಿಸುವ ಜನರ ಮಧ್ಯೆ ಬದುಕಲೇ ಬೇಕು
ಅಷ್ಟು ಅನಿವಾರ್ಯ ಈ ಬದುಕು.

ಬೆನ್ನಿಗಂಟಿದ ಹೊರೆ ಹೊರಲೇ ಬೇಕು
ಎಷ್ಟು ಮನ ನೊಂದರೂ ಬಿಡದೆ.

ಅಂಜಿಕೆಯ ಮನಕೆ ಧೈರ್ಯ ತುಂಬಲೇ ಬೇಕು
ಬೇರೆ ಗತ್ಯಂತರವಿಲ್ಲ ಅದಕೆ.

ದುಃಖತಪ್ತ ಮನ ಸಂತೈಸಿಕೊಳ್ಳಲೇ ಬೇಕು
ನಮಗೆ ನಾವೇ ಅದಕೆ.

ಒಂಟಿ ಬದುಕಿನ ಯಾನ ಅನುಭವಿಸಲೇ ಬೇಕು
ಕಾಲನ ಕೋಲು ಬೀಸುವ ತನಕ.

ಕ್ಷಣ ಕ್ಷಣ ಹತಾಷೆಗೆ ಹೃದಯವಡ್ಡಲೇ ಬೇಕು
ಕಾಲ ಕೂಡಿ ಬರುವವರೆಗೆ.

ಚಿಂತಿಸುವ ಮನ ಹೈರಾಣಾಗದಂತೆ ತಡೆಯಲೇ ಬೇಕು
ನಮ್ಮ ನಂಬಿದ ಕರುಳ ಬಳ್ಳಿಗೆ.

ಅಪವಾದ ನಿಂದನೆಗಳಿಗೆ ಕಿವುಡಾಗಲೇ ಬೇಕು
ನಮ್ಮ ನಾವು ಉಳಿಸಿಕೊಳ್ಳಲು.

ಸಹಿಸಿಕೊಳ್ಳುವ ತಾಳ್ಮೆ ಮನುಜಗೆ ಇರಲೇ ಬೇಕು
ಮನಸಲಿ ಶಾಂತಿ ನೆಲೆಗೊಳ್ಳಲು.

ನಾನು ನನದೆಂಬ ಆಸೆ ತೊರೆದು ಬದುಕಲೇ ಬೇಕು
ಆಗಾಗ ಮೌನಕೆ ಶರಣಾಗಿ.

ಬರುವ ಜಂಜಾಟಕೆ ತಲೆ ಕೊಡಲೇ ಬೇಕು
ಜೀವನವೇ ಹೀಗಲ್ಲವೆ?

ಗೀತಾ ಜಿ ಹೆಗಡೆ ಕಲ್ಮನೆ

ಗೀತಾ ಜಿ ಹೆಗಡೆ ಕಲ್ಪನೆ

ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.

ಕೃತಿಗಳು: ಮನಸೆ ನಿನೇಕೆ ಹೀಗೆ (ಲೇಖನಗಳ ಸಂಗ್ರಹ) 

More About Author