Poem

ಯಾರು?

ಯಾರು ಕದ್ದವರು ಬೆಳಕ ಚೆಲುವನು
ಕತ್ತಲೆಯನು ಹರಿಸಿ
ನಿನ್ನೆ ನೋಡಿದಾ ಹಕ್ಕಿ ಗೂಡಿನ
ನೆಮ್ಮದಿಯನು ಒರೆಸಿ

ಯಾರು ಪತಂಗದ ರೆಕ್ಕೆ ಮುರಿದವರು
ಹಾರುವುದನು ತಡೆದು
ಕನಸಿನರಮನೆಯ ಅಡಿಯ ತಪ್ಪಿಸುತ
ಉಂಡೆರಡು ಬಗೆದು

ಯಾರು ನದಿಯನು ತಿರುವಿಬಿಟ್ಟವರು
ತನ್ನುದಯದ ಸ್ವಾರ್ಥವ ಬಯಸಿ
ಬೆಂದೊಡಲುಗಳ ದಾಹ ತಣಿಸದೆ
ಬಾಳನು ಕಂಗೆಡಿಸಿ

ಯಾರು ತರಣಿಯ ಮಧ್ಯೆ ಧರಣಿ
ತೂರಿ ಶಶಿಯ ಮರೆಸಿದವರು
ಸವಿಯೆ ಕುಳಿತವರ ನಿರಾಸೆಗೊಳಿಸಿ
ಆಟ ಆಡಿದವರು

ಯಾಕೆ ಸುಮ್ಮನೆ ಗೋಳು ಹೊಯ್ಯುತ
ಪೂತನಿಯ ಹಾಲುಣುತಿಹರು
ಜೊತೆಗೆ ನಡೆಯದೆ ನಡೆಯಗೊಡದೆ
ವಿಕಟ ನುಡಿಯುತಿಹರು

ಇಂದುಚೇತನ ಬೋರುಗುಡ್ಡೆ

ಕವಿ ಇಂದುಚೇತನ ಬೋರುಗುಡ್ಡೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕು ಬೋರುಗುಡ್ಡೆಯವರು. ಇವರು ಬಿ.ಬಿ.ಎಂ, ಎಂ.ಕಾಂ ಪಧವೀದರರು. ಇವರಿಗೆ ಪ್ರಭಾಕರ ನೀರುಮಾರ್ಗ ಯುವ ಸಾಹಿತ್ಯ ಪ್ರಶಸ್ತಿ 2021 ಲಭಿಸಿದೆ. ಇವರ ಮುರಳಿಗಾನ ಕವನ ಸಂಕಲನ ಜನಮನ್ನಣೆ ಗಳಿಸಿ ಕನ್ನಡ ಪ್ರಾಧಿಕಾರದ ಚೊಚ್ಚಲ ಯುವಬರಹಗಾರರ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿದೆ. ಕೃತಿಗಳು: ಮುರಳಿಗಾನ, ಅವಳೂ ನೀರೆ (ಕವನ ಸಂಕಲನ).

More About Author