ರೈಲು ಓಡುತ್ತದೆ
ಅನನ್ಯ ವೇಗದಲ್ಲಿ,
ನೇರ ನಿರ್ಭಿಡೆಯಲ್ಲಿ,
ಅನುರಣಿಸುವ ಲಯದಲ್ಲಿ.
ಅದೆಷ್ಟು ಸವಕಲು ಮುಖಗಳನ್ನು,
ಸಾಮಾನು ಸರಂಜಾಮುಗಳನ್ನು
ಹೊತ್ತು ಮೆರೆಸಿದೆಯೋ
ದಣಿವರಿಯದ ಕಾಯಕಯೋಗಿ!
ಸರೀಸೃಪದಂಥ
ಈ ಯಂತ್ರಜೀವಿಗೆ
ಬೋಗಿಗಳೇ ಅವಯವಗಳು;
ಯಾವುದ್ಯಾವುದೋ ಊರುಕೇರಿಗಳಿಂದ
ಬಂದವರ ಅರಿವಿಗೆ ಬಾರದೆ
ಬಂಧ ಬೆಸೆಯುವ ಕೊಂಡಿಗಳು!
ಅವನ್ಯಾರೋ
ತಲೆ ಕೆಟ್ಟವನು,
ತಲೆ ಮಾಸಿದವನು,
ಜೀವನ ರೋಸಿದವನು
ಹಳಿಗಳ ಮೇಲೆ
ಶಾಂತಿಯನರಸಿ ಬಂದರೆ
ಮುಲಾಜಿಲ್ಲದೆ ಮುಕ್ತಿ ಕಾಣಿಸುತ್ತದೆ!
ರೈಲಿಗೂ ರೈಲುಹಳಿಗಳಿಗೂ
ಅದೆಂಥ ಜುಗಲ್ಬಂದಿ!
ಹಳಿಗಳಿಲ್ಲದೆ
ರೈಲು ಓಡುವುದಿಲ್ಲ;
ರೈಲೇ ಇಲ್ಲದೆ
ಹಳಿಗಳ ಕೇಳುವವರಿಲ್ಲ!
ಹಳಿಗಳು
ಒಂದನ್ನು ಬಿಟ್ಟು ಇನ್ನೊಂದಿಲ್ಲ;
ಸಮಾನಾಂತರ ಕಾಯ್ದುಕೊಂಡು
ಆಪ್ತತೆಯ ಸುಖಿಸುತ್ತವಲ್ಲ!
ರೈಲು ಚಲಿಸುತ್ತದೆ
ಬಿಕೋ ಎನ್ನುವ ಬಯಲನ್ನು,
ರೋದಿಸುವ ಬಂಜರನ್ನು,
ಉನ್ಮತ್ತ ವನಸಿರಿಯನ್ನು
ದಾಟಿಕೊಂಡು;
ಗಿರಿಸುರಂಗಗಳ
ಸೀಳಿಕೊಂಡು.
ತಿಂದು ಬಿಸಾಕಿದ ತಿಂಡಿ ಪೊಟ್ಟಣಗಳಿಗೆ,
ಬಳಸಿ ಬಿಸಾಡಿದ ಫ್ರೆಂಚ್ ಲೆಟರುಗಳಿಗೆ,
ತಡೆಯಲಾರದೆ ಹಡೆದ
ಮಲಮೂತ್ರಗಳಿಗೆ
ಹೇಸದೆ
ನಿರ್ಲಿಪ್ತನಾಗಿ ಮುನ್ನುಗ್ಗುತ್ತದೆ!
ಕಲ್ಲಿದ್ದಲು, ಡೀಸಲ್, ವಿದ್ಯುತ್
ಯಾವುದೋ ಒಂದನ್ನು ಅರಗಿಸಿಕೊಂಡು
ಶಕ್ತಿವಾನನಾಗಿ ಧಾವಿಸುತ್ತದೆ!
ಹತ್ತುವವರು ಹತ್ತುತ್ತಾರೆ;
ಇಳಿಯುವವರು ಇಳಿಯುತ್ತಾರೆ.
ಹಳಬರ ಜಾಗದಲ್ಲಿ ಹೊಸಬರು ಬರುತ್ತಾರೆ;
ಹೊಸಬರು ಹಳಬರಾಗುವ ಹೊತ್ತಿಗೆ
ಇನ್ಯಾರೋ ಇರುತ್ತಾರೆ!
ಹತ್ತಿರ ದೂರವಾಗುತ್ತದೆ;
ದೂರ ಹತ್ತಿರವಾಗುತ್ತದೆ.
ರೈಲು ಚಲಿಸುತ್ತದೆ,
ಚಲಿಸುತ್ತಲೇ ಇರುತ್ತದೆ!
---ರೇವಣಸಿದ್ದಪ್ಪ ಜಿ.ಆರ್.
ರೇವಣಸಿದ್ದಪ್ಪ ಜಿ.ಆರ್.
ರೇವಣಸಿದ್ದಪ್ಪ ಜಿ.ಆರ್. ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದವರು. ಎಂ.ಎ(ಇಂಗ್ಲಿಷ್). ಹಾಗೂ ಬಿ.ಇಡಿ. ವಿದ್ಯಾರ್ಹತೆಯನ್ನು ಹೊಂದಿರುವ ಅವರಿಗೆ ಕಾವ್ಯ ಕೃಷಿ, ಕಲೆ, ಸಾಹಿತ್ಯ, ಸಂಸ್ಕೃತಿ, ಚರ್ಚೆ, ಭಾಷಣ ಇತ್ಯಾದಿಗಳಲ್ಲಿ ಒಲವು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ಕೇಂದ್ರದಲ್ಲಿರುವ ಎಸ್ಜೆವಿಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
More About Author