Poem

ವಿಶ್ವಪ್ರೀತಿ

ಸೆಳೆಯುತಿದೆ ಎಲ್ಲವನು
ನೋವು ನಲಿವು ಸುಖ ದುಃಖಗಳ
ಅಳೆಯುತ ಜನನ-ಮರಣಗಳ ದೂರವ
ಸಂದಿಗ್ದ ಕಾಲದ ಕತ್ತಲೆಯ ತಳ್ಳುತ
ದಿಗಂತದಾಚೆಯ ಸ್ವಪ್ನಲೋಕಕೆ ದೂಡುತ

ಎಲ್ಲೆ ಮೀರಿ, ಭಾವ ತೂರಿ, ತಾಕಲಾಟ ತಡೆ ಹಿಡಿದು
ಕುಹುಕನಗೆಗೆ ಮರುಕ ತೋರಿ,
ಅರಹುತ ಬಾಲಪಥವ, ತಲೆ ತಲೆಗೆ ಮೊಟ್ಟಿ, ಹೊಡೆದು
ಸುತ್ತಲಿನ ಸೌಂದರ್ಯವ ಮನಕೆಲ್ಲಾ ಎರಕಹೊಯ್ದ
ಕಂಗೊಳಿಸುತಿದೆ

ಸಾಗುತಿದೆ, ಹಾದಿಹಿಡಿದು ವಿಶ್ವಪಥವಿಡಿದು
ಸವರಿಸಿ ಮನಗಳ ಪ್ರೀತಿಮಳೆ ಸುರಿಸಿ
ಒಟ್ಟುಗೂಡಿಸಿ ಒಡೆದ ಮನಗಳ
ಸೋತು ಮುದುಡಿಹ ಜೀವಗಳ ಆಲಂಗಿಸಿ
ಅಪ್ಪಿಕೊಳ್ಳುತ್ತದೆ

ಆ ಲೋಕ ಈ ಲೋಕವೆಂದಲ್ಲ
ಸಮಸ್ತಲೋಕವೂ ತನ್ನದೇ
ಬ್ರಹಾಂಡದೆಲ್ಲಡೆ ಪಸರಿಸಿ, ಚರಾಚರಗಳಲ್ಲೂ
ಸ್ಪಂದನೆಯುಂಟುಮಾಡಿ, ಕರಗಿಸಿ ಕಲ್ಲ
ಸಮಸ್ತಮನಗಳಲಿ, ಪ್ರೇಮ
ಅರಳಿಸುವುದು

ಕೈಚಾಚಿ ದೂರ ದೂರಕೆ
ಅಪ್ಪಿಕೊಳ್ಳಲು ಸಕಲವ, ಒಳಗೊಳ್ಳಲು ಎಲ್ಲವ
ಆಳದೆ, ಅಳಿಸದೆ ಯಾವ ಮನವ
ನಗಿಸಿ ಜಗವ, ಪಸರಿಸಿ ಒಲವ
ಸಲುಹಿ ಸಕಲರ
ಕಾಪಿಡುವುದೇ ವಿಶ್ವಪ್ರೀತಿ!!

- ಎಂ.ವಿ.ಶಶಿಭೂಷಣ ರಾಜು

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,

More About Author