Story

"ತುಂಬಾ ಮುದ್ದಾದ ಹೆಸರು, ನಿಮ್ಮ ಹೆಸರಿನ ಅರ್ಥವೇನು?"

2022ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂಯ್ರೋತ್ಸವ ಕಥಾಸ್ಪರ್ದೆಯ ಪ್ರಥಮ ಬಹುಮಾನ ವಿಜೇತ ಪೂರ್ಣಿಮಾ ಮಾಳಗಿಮನಿ ಅವರ ‘ವಿನ್ನರ್ ವಿನ್ನರ್ ಚಿಕನ್ ಡಿನ್ನರ್’ ಕತೆ ನಿಮ್ಮ ಓದಿಗಾಗಿ..

'ಅಮ್ಮ, ವಿ ಬೋಥ್ ಹ್ಯಾವ್ ವಿಯರ್ಡ್ ಮದರ್ಸ್ ಅಲ್ವಾ?' ಯಾವುದೇ ವ್ಯಂಗ್ಯವಿಲ್ಲದೇ ಚಯನ್ ಹೇಳಿದ್ದ. 

ಎದ್ದ ಕೂಡಲೇ ಮೊಬೈಲ್ ಹಿಡಿದುಕೊಂಡು ಗೇಮ್ ಆಡುತ್ತಿದ್ದ ಮಗನೊಂದಿಗೆ ಎಂದಿನಂತೆ ಜಗಳವಾಡಿಕೊಂಡೇ ಬೆಳಿಗ್ಗೆ ಮನೆಯಿಂದ ಹೊರಡುವಾಗ ಕಲ್ಯಾಣಿಗೆ ಮಗ ಆಡಿದ ಆ ಮಾತು, ಸಂಜೆಯಾದರೂ ಅಂಗಿ ಮೇಲೆ ಬಿದ್ದೊಂದು ಕಾಫಿ ಹನಿಯಂತೆ ಕಾಡುತ್ತಲೇ ಇತ್ತು. ಹದಿನೈದು ವರ್ಷದ ಮಗ ಹಾಗೆ ಹೇಳಿದ ಎನ್ನುವುದಕ್ಕಿಂತ, ಅವನು ಹೇಳಿದ್ದರಲ್ಲಿ ತಪ್ಪೇನೂ  ಇರಲಿಲ್ಲ ಎನ್ನುವುದು ಅವಳನ್ನು ಇನ್ನೂ ಹೆಚ್ಚಾಗಿ ನೋಯಿಸಿತ್ತು.

'ನೀನೂ ಅಮ್ಮ ಆಗಿದ್ರೆ ನಿಂಗೆ ಅರ್ಥ ಆಗ್ತಿತ್ತು, ವಿಯರ್ಡ್ ಅಮ್ಮನಿಗಿಂತ ವಿಯರ್ಡ್ ಮಗ ಎಷ್ಟು ಪೇನ್ ಫುಲ್ ಅನ್ನೋದು?' ಎಂದು ತಿರುಗಿಸಿ ಕೊಟ್ಟೇ ಆಫೀಸಿಗೆ ಬಂದಿದ್ದಳು ದೊಡ್ಡ ಐ.ಟಿ ಕಂಪನಿಯಲ್ಲಿ ಸೀನಿಯರ್ ಟೆಕ್ನಿಕಲ್ ಡಿಸೈನರ್ ಆಗಿದ್ದ ಕಲ್ಯಾಣಿ.

***

ಇಪ್ಪತ್ತೈದು ಜನರನ್ನು ಕೊಂದ ಮೇಲೆ ಅಷ್ಟು ದೊಡ್ಡ ದ್ವೀಪದಲ್ಲಿ ತಾನೊಬ್ಬನೇ ಬದುಕುಳಿದಿರುವುದು ಎನ್ನುವುದು ಅರಿವಾಗುತ್ತಲೇ ಸ್ಟಾರ್ಕ್ ಸ್ಟಾಕರ್ ಗೆ ರೋಮಾಂಚನವಾಯಿತು!

ಉಗುಳು ನುಂಗಿ, ಗುರಿಯಿಟ್ಟು ಕೈಲಿ ಹಿಡಿದಿದ್ದ ಸಬ್ ಮಷಿನ್ ಗನ್ ಕೆಳಗಿಳಿಸಿ, ಧೀರ್ಘವಾಗಿ ಉಸಿರೆಳೆದುಕೊಂಡು ನಿಂತು ಸುತ್ತಲೂ ನೋಡಿದ. ಅವನ ಸ್ಕ್ವಾಡ್ ನಲ್ಲಿದ್ದ ಜೊತೆಗಾರರಾದ ಮ್ಯಾಡ್ ಮ್ಯಾಕ್ಸ್ , ಪ್ರಿನ್ಸೆಸ್ ಪೂ, ಡಾರ್ಕ್ ಸೋಲ್, ಎಲ್ಲಾ ಸತ್ತು, ಹೊತ್ತಿ ಉರಿದು ಹಸಿರು ಹೊಗೆಯಾಗಿ ಮರೆಯಾಗಿದ್ದರು. ಅವರ ಬಳಿಯಿದ್ದ ಪಿಸ್ತೂಲ್, ಔಷಧಿಗಳು, ಗ್ರನೇಡ್ ಎಲ್ಲವನ್ನೂ ಸ್ವಲ್ಪವೂ ಅಳುಕಿಲ್ಲದೆ, 'ಸಿಗ್ತಾರೆ, ಲೋಫರ್ಸ್, ಎಲ್ಲಿ ಹೋಗ್ತಾರೆ' ಎಂದು ಬೈದು ಕೊಳ್ಳುತ್ತಾ ಲೂಟಿ ಮಾಡಿದ್ದ. ದ್ವೀಪದಲ್ಲಿ ಕೊನೆತನಕ ಉಳಿದವನು ಎನ್ನುವುದರರ್ಥ ಅವನೇ ವಿನ್ನರ್ ಎನ್ನುವುದು ಅರಿವಾಗುತ್ತಲೇ "ವಿನ್ನರ್ ವಿನ್ನರ್ ಚಿಕನ್ ಡಿನ್ನರ್" ಅಂತ ಕೂಗಿ ಹಾಡುತ್ತಾ ಕುಣಿದಾಡತೊಡಗಿದ.

***

ಅವನ ಗದ್ದಲಕ್ಕೆ ರೋಸಿಹೋಗಿದ್ದ ಅಜ್ಜಿ ಅವನ ರೂಮಿನ ಬಾಗಿಲು ತೆಗೆದುಕೊಂಡು ಒಳಗೆ ನುಗ್ಗಿ ಬೈಯ್ಯತೊಡಗಿದಳು. "ಲೇ ಚಯನಾ, ಅದೇನೋ ಅದು ಮೂರು ಹೊತ್ತೂ ಚಿಕನ್ ಚಿಕನ್ ಅಂತ ಬರಗೆಟ್ಟವರಂಗೆ ಆಡ್ತಿಯಲ್ಲೋ? ನಿಮ್ಮಮ್ಮ ಬರೋ ಹೊತ್ತಾಯ್ತು, ಇನ್ನೂ ಸ್ನಾನನೂ ಮಾಡಿಲ್ಲ. ಈಗ ನಿಂಗೇನು... "

"ಅಯ್ಯೋ ಅಜ್ಜೀ, ನಿಂಗೆ ಗೊತ್ತಾ ಇವತ್ತು ಏನಾಯ್ತು ಅಂತ? ನಾನು ಪಬ್ಜಿ ಗೇಮ್ ನಲ್ಲಿ ಇಪ್ಪತ್ತೈದು ಜನರನ್ನ ಕೊಂದು, ಗೆದ್ದು ಬಿಟ್ಟೆ. ಫಸ್ಟ್ ಟೈಮ್! ಡು ಯು ಈವನ್ ನೋ ವಾಟ್ ಇಟ್ ಮೀನ್ಸ್?"

"ಏನು, ಬಜ್ಜಿನಾ? ಗೇಮ? ಅದೇನೋ..." ಟಿವಿಯಲ್ಲಿ ತಾನು ನೋಡುತ್ತಿದ್ದ ಧಾರಾವಾಹಿಯನ್ನು ಬಿಟ್ಟು ಬರಬೇಕಾಯಿತಲ್ಲ ಎಂದು ಮೊದಲೇ ಸಿಟ್ಟಾಗಿದ್ದ ಅಜ್ಜಿಗೆ ಅವನು ಮಾತನಾಡುವುದನ್ನು ಕೇಳಿಸಿಕೊಳ್ಳುವಷ್ಟು ತಾಳ್ಮೆ ಇರಲಿಲ್ಲ. ಅವಳು ಬೆಳಗಿನ ಸಪ್ಪ್ಲಿಮೆಂಟ್ಸ್  ಮಾತ್ರೆಯನ್ನೂ ನುಂಗುವುದು ಮರೆತಿದ್ದಳು. ಇತ್ತೀಚಿಗೆ ಒಂದು ಪೂರ್ತಿ ಮಾತ್ರೆ ಬೇಡ, ಅರ್ಧ ನುಂಗಿದರೆ ಸಾಕು ಎಂದು ಡಾಕ್ಟರ್ ಹೇಳಿದ್ದಕ್ಕೆ ಅರ್ಧ ಮುರಿದೂ ಮುರಿದೂ ನುಂಗುತ್ತಿದ್ದಳು. ಅವಳ ಕೈಲಿದ್ದ ಮಾತ್ರೆಗಳ ಡಬ್ಬಿಯ ಬಾಯಿ ಚಿಕ್ಕದಿದ್ದುದರಿಂದ ನೆನ್ನೆ ಮುರಿದ ಮಾತ್ರೆಯ ಅರ್ಧ ತುಂಡು ಅವಳಿಗೆ ಕಾಣುತ್ತಿರಲಿಲ್ಲ. ಕೈಗೆ ಸಿಗುತ್ತಲೂ ಇರಲಿಲ್ಲ.

"ಇದರಲ್ಲಿರೋ ಅರ್ಧ ಮಾತ್ರೆ ತೆಗೆದು ಕೊಡೋ." ಎಂದು ಮೊಮ್ಮಗನ ಮುಂದೆ ಹಿಡಿದಳು.

"ನೆನ್ನೆ ಮುರಿದ ಮಾತ್ರೆಯ ತುಂಡೇ ಬೇಕು ಅಂತ ಯಾಕೆ ಹಠ ಮಾಡ್ತಿಯಾ ಅಜ್ಜಿ? ಅಷ್ಟು ಕಷ್ಟ ಪಡೋದು ಬೇಡ. ಹೇಗಿದ್ರೂ ಎಲ್ಲಾ ಮಾತ್ರೆಗಳೂ ತುಂಡಾಗೋದೇ ತಾನೇ? ನಿನ್ನ ಕೈಯಿಂದ ಯಾರಾದ್ರೂ ತಪ್ಪಿಸಿಕೊಳ್ಳೋಕೆ ಆಗುತ್ತಾ? ಕೈಗೆ ಸಿಕ್ಕಿದ್ದನ್ನೇ ತಗೋ, ಮುರಿದುಕೋ, ಅರ್ಧ ನುಂಗು, ಅರ್ಧ ವಾಪಸ್ ಹಾಕು." ಎಂದು ಹೇಳಿದ. ಈಗ ಅಜ್ಜಿಗೆ ಅವನು ತನ್ನನ್ನು ಹೊಗಳಿದನೋ, ತೆಗಳಿದನೋ ಗೊತ್ತಾಗದೇ ಗೊಂದಲದಿಂದ ನೋಡುತ್ತಿದ್ದಾಗ ಚಯನ ಮತ್ತೆ ತನ್ನ ಆಟದ ಸುದ್ದಿಯನ್ನು ಹುಮ್ಮಸ್ಸಿನಿಂದ ಹೇಳತೊಡಗಿದ. 

"ಅಜ್ಜೀ, ಪಬ್ಜಿ ಅಂದ್ರೆ ಪಿ. ಯು. ಬಿ.  ಜಿ. ಪ್ಲೇಯರ್ ಅನ್ ನೋನ್ಸ್  ಬ್ಯಾಟಲ್ ಗ್ರೌಂಡ್ ಅಂತ.  ತುಂಬಾ ಫೇಮಸ್ ಗೇಮ್ ಇದು. ಒಂದು ದ್ವೀಪ ಇರುತ್ತೆ.  ನಾವು ಒಬ್ಬೊಬ್ಬರಾಗಿ ಹೆಲಿಕಾಪ್ಟರಿನಿಂದ ಅದರ ಮೇಲೆ ಇಳಿಯಬೇಕು. ಅಲ್ಲಿ ನಮಗೆ  ಇಳಿದ ಕೊಡಲೇ ಗನ್, ಪಿಸ್ತೂಲ್ ಎಲ್ಲ ಸಿಗುತ್ತೆ.  ಅದನ್ನು ತಗೊಂಡು ಬೇಗ ಬಚ್ಚಿಟ್ಟುಕೊಂಡು, ಬೇರೆ ಯಾರಾದ್ರೂ ಬದುಕಿದ್ದಾರಾ ಅಂತ ಹುಡುಕಬೇಕು. ಆ ದ್ವೀಪದ ಸೈಜ್ ಬರ್ತಾ ಬರ್ತಾ ಕಡಿಮೆ ಆಗುತ್ತೆ. ಅದರ ಬೌಂಡರಿ ಒಳಗೆ ಇರ್ಬೇಕು. ಲಿವಿಂಗ್ ಆನ್ ದಿ ಎಡ್ಜ್ ಯು ನೋ? ಯಾರು ಎಲ್ಲರನ್ನು ಸಾಯಿಸಿ ಕೊನೆತನಕ... " ಎಂದು ಹೇಳುತ್ತಿದ್ದ ಚಯನ್ ಅಜ್ಜಿಯ ಗಂಟು ಮುಖ ನೋಡಿ, "ಹೋಗ್ಲಿ ಬಿಡು, ನೀನು ಸ್ಟೋನ್ ಏಜ್ ಅಜ್ಜಿ, ನಿಂಗೆ ಅರ್ಥ ಆಗಲ್ಲ. ಅದೊಂದು ವಿಡಿಯೋ ಗೇಮ್."  ಎಂದು  ಅವಸರದಲ್ಲಿ ತನ್ನ ಆನ್ಲೈನ್ ಜೊತೆಗಾರರೊಂದಿಗೆ ಮಾತನಾಡಲು ಮರಳಿ ಟೇಬಲ್ ಮೇಲಿದ್ದ ಲ್ಯಾಪ್ಟಾಪ್ ಬಳಿ ಓಡಿದ.

ಅಜ್ಜಿಗೆ ಸಿಟ್ಟು ಬಂತು. "ನೋಡೋ ಮಾತು ಮಾತಿಗೆ ಸ್ಟೋನ್ ಏಜ್ ಅಂತ ಹಂಗಿಸಬೇಡ. ನಾಳೆ ನಿಂಗೂ ವಯಸ್ಸಾಗುತ್ತೆ. ಈಗ ಒಳ್ಳೇ ಮಾತಲ್ಲಿ ಎದ್ದು ಬಂದು ಸ್ನಾನ ಮಾಡಿದ್ರೆ ಸರಿ," ಕೂಡಲೇ ಫೋನ್ ತೆಗೆದು ಡಯಲ್ ಮಾಡಿದಳು.

"ಇಲ್ಲಾಂದ್ರೆ ಏನು ಮಾಡ್ತೀಯಾ? ಶೂಟ್ ಮಾಡಿ ಕಿಲ್ ಮಾಡ್ತೀಯಾ? ನೀನು ಚಿಕನ್ ತಿನ್ನೋದೇ ಇಲ್ವಲ್ಲ, ನೀನು ಗೆದ್ರೂ ವೇಸ್ಟ್ ಅಜ್ಜಿ." ಎಂದು ನಕ್ಕು, "ಅಜ್ಜಿ ಬಜ್ಜಿ ಡೋಂಟ್ ನೋ ಪಬ್ಜಿ." ಎಂದು ಗೋಳು ಹುಯ್ದು ಕೊಳ್ಳತೊಡಗಿದ. ಅಜ್ಜಿಗೆ ಕೋಪ ಬಂದು ದಡದಡನೇ ಅವನ ಟೇಬಲ್ ಬಳಿ ನಡೆದು ಲ್ಯಾಪ್ ಟಾಪ್ ಅನ್ನು ಜೋರಾಗಿ ಮುಚ್ಚಿಬಿಟ್ಟಳು. 

"ಅಯ್ಯೋ ಯು ಸ್ಟುಪಿಡ್ ಓಲ್ಡ್ ವುಮನ್," ಎನ್ನುತ್ತಾ ಚಯನ್ ದುಃಖ ರೋಷದಿಂದ ಕುದಿಯುತ್ತಾ, ತನ್ನ ಅಮ್ಮನಿಗೆ ಕರೆ ಮಾಡಿದ. ಇಬ್ಬರೂ ಒಂದೇ ನಂಬರಿಗೆ ಪದೇ ಪದೇ ಡಯಲ್ ಮಾಡಿದರೂ ಅತ್ತಲಿಂದ ಯಾರೂ ಉತ್ತರಿಸಲಿಲ್ಲ.  

"ಗೆಟ್ ಔಟ್ ಆಫ್ ಮೈ ರೂಮ್." ಚಯನ್ ಸಿಟ್ಟು ಮಾಡಿಕೊಂಡು ಚೀರಿದ. "ನಿನ್ನಿಂದ ನನ್ನ ಮುದ್ದು ನಾಯಿಮರಿಯನ್ನೇ ಅಮ್ಮ ಹೊರಗೆ ಹಾಕಿದ್ರು. ಐ ಹೇಟ್ ಯು." ಎಂದು ಹಳೆಯ ಜಗಳವನ್ನು ತಾಜಾ ಮಾಡಿದ.  

ಜೊತೆಗಿದ್ದಷ್ಟೂ ವರ್ಷಗಳಲ್ಲಿ ಗಂಡನಿಂದ ಕೂಡ ಅಷ್ಟು ಜೋರಾಗಿ ಎಂದೂ ಬೈಯ್ಯಿಸಿಕೊಂಡಿರದ ಅಜ್ಜಿಗೆ ನಖ ಶಿಖಾಂತ ಉರಿದುಹೋಯಿತು. "ಅಯ್ಯೋ ಸೋಮಾರಿ, ನಿಂಗೆ ಅಡಿಕ್ಷನ್ ಆಗಿಬಿಟ್ಟಿದೆ. ಮೊದಲು ನಿನ್ನನ್ನು ಒಳ್ಳೇ ಸೈಕಿಯಾಟ್ರಿಸ್ಟ್ ಹತ್ರ ಸೇರಿಸ್ತೀವಿ ತಾಳು. ಆಗ ಗೊತ್ತಾಗುತ್ತೆ. ನಿಂಗೇನಂದು ಏನು ಪ್ರಯೋಜನ? ನಿನ್ನನ್ನು ಹೀಗೆ ಲಂಗು ಲಗಾಮಿಲ್ಲದೆ, ಕೇಳಿದ್ದೆಲ್ಲಾ ಕೊಡಿಸಿ ಕೊಡಿಸಿ ಹದಿನೈದು ವರ್ಷಕ್ಕೇ ಒಳ್ಳೇ ಗಡವನಂತೆ ಬೆಳೆಸಿದ್ದಾಳಲ್ಲ ನಿಮ್ಮಮ್ಮ ಅವಳಿಗೆ ... " ಎಂದು ಬೇಸರದಿಂದ ಅಜ್ಜಿ ಚಯನನ ಕೋಣೆಯಿಂದ ಹೊರಬಂದಳು. ಮನದಲ್ಲೇ, 'ತಾನಂತೂ ಸಣ್ಣ ಆಗಲಿಲ್ಲ, ಯಾವದೇ ಡಯಟ್ ಆಗ್ಲೀ, ವರ್ಕ್ ಔಟ್ ಆಗ್ಲೀ  ಮೂರೇ ದಿನಕ್ ಮುಕ್ತಾಯ! ಈಗ ಮಗನನ್ನು ಹಾಳು ಮಾಡ್ತಿದಾಳೆ, ಮಾತು ನೋಡು, ದೊಡ್ಡೋರು, ಚಿಕ್ಕೋರು ಎನ್ನುವುದೇನೂ ಪ್ರಜ್ಞೆ ಇಲ್ಲ' ಎಂದು ಬೇಸರದಿಂದ ಬೈಯ್ದು ಕೊಳ್ಳುತ್ತಾ ಹೊರಬಂದು ಟಿವಿ ಮುಂದೆ ಕುಳಿತು, ಮತ್ತೊಮ್ಮೆ ಫೋನ್ ಮಾಡಲು ಪ್ರಯತ್ನಿಸಿ, 'ಇವಳೊಬ್ಬಳು ದೊಡ್ಡ ಮನುಷಿ, ಅದೇನಷ್ಟು ಕೆಲಸ ಇರತ್ತೆ ಅಂತೀನಿ, ಫೋನ್ ಎತ್ತಲ್ಲ, ನಾಳೆ ನಾನು ಸತ್ರು ... ' ಎಂದೆಲ್ಲ ಕಣ್ಣು ತುಂಬಿಕೊಂಡಳು.   

***

"ಮನೆಗೆ ಹೋಗ್ಬೇಕು ಅಂತಾನೆ ಅನ್ನಿಸಲ್ಲ ಕಣೇ. ಹಾವು ಮುಂಗುಸಿ ಥರ ಜಗಳ ಆಡೋ ಅಜ್ಜಿ, ಮೊಮ್ಮಗ...ದೆ ಆರ್ ಪೇನ್ ಇನ್ ದಿ ಆಸ್. ನನ್ನ ಮಗನಿಗೆ ತಮ್ಮನನ್ನೋ ತಂಗಿಯನ್ನೋ ಕೊಡಲಿಲ್ಲ ಎನ್ನುವ ನೋವೇ ಇಲ್ಲ ಈಗ ನಂಗೆ. ಅವರ ಜಗಳ ಬಗೆಹರಿಸುವಷ್ಟರಲ್ಲಿ ನನಗೆ ತಲೆ ಕೆಟ್ಟು ಮತ್ತೆ ಹಸಿವಾಗಿಬಿಡುತ್ತೆ. ನಾನು ಜಗಳ ನಿಲ್ಲಿಸಿದೆನಾ ಅಥವಾ ತಿನ್ನೋ ವಿಷಯಕ್ಕೆ ಬಂದು ಮತ್ತೆ ಹೊಸದಾಗಿ ಜಗಳ ಶುರು ಮಾಡಿದೆನಾ ಎನ್ನುವುದೇ ಗೊತ್ತಾಗಲ್ಲ." ಎಂದು ಹೊಸದಾಗಿ ಪರಿಚಯವಾಗಿದ್ದ ಸಹೋದ್ಯೋಗಿ ಅರುಣಿಮಾಳೆದುರು ದುಃಖ ತೋಡಿಕೊಳ್ಳುತ್ತಾ ಕಲ್ಯಾಣಿ  ತನ್ನ ಬರೋಬ್ಬರಿ ನೂರು ಕೇಜಿ ತೂಕದ ದೇಹವನ್ನು ಆಫೀಸ್ ಕ್ಯಾಂಟೀನ್ ನ ಪುಟ್ಟ ಕುರ್ಚಿಯಲ್ಲಿ ಹೇಗೋ ತೂರಿಸಿಕೊಂಡು ಕುಳಿತು, ಎದುರುಗಿದ್ದ ಚಿಕನ್ ಕಬಾಬ್, ಮಶ್ರುಮ್ ಮಸಾಲಾ, ಫ್ರೆಂಚ್ ಫ್ರೈಸ್ ನೋಡುತ್ತಾ, ಮೊದಲು ಯಾವುದನ್ನ ತಿನ್ನುವುದೆಂದು ಚಿಂತಿಸುತ್ತಾ, ಎಡಗೈಲಿದ್ದ ಮೆನು ಕಾರ್ಡ್ ಮೇಲೆಯೂ ಇನ್ನೇನು ಹೇಳಬಹುದೆಂದು ಒಂದು ಕಣ್ಣಿಟ್ಟು, ಎದುರಿಗೆ ಕುಳಿತಿದ್ದ ಕಡ್ಡಿ ಕಾಲಿನಂಥ ಅವಳನ್ನು ಅಸಹನೆಯಿಂದ ನೋಡಿದಳು. ಅದೇ ಸಮಯಕ್ಕೆ ಅವಳ ಮೊಬೈಲ್ ರಿಂಗ್ ಆಗತೊಡಗಿತು. ಕಲ್ಯಾಣಿಯ ಸಹನೆ ಪರೀಕ್ಷೆ ಮಾಡುವಂತಿತ್ತು ಆ ಕರೆ. ಆದರೆ ಅವಳು ನೋಡಿಯೂ ನೋಡದಂತೆ ಮಾತನಾಡತೊಡಗಿದಳು.

"ನಂಗೆ ನಿಮ್ಮ ಕಂಡೀಷನ್ ಅರ್ಥವಾಗುತ್ತೆ ಕಲ್ಯಾಣಿ ಮ್ಯಾಮ್, ಇದೆಲ್ಲದರ ಜೊತೆ ಆಫೀಸ್ ಕೆಲಸದ ಸ್ಟ್ರೆಸ್ ಬೇರೆ ಅಲ್ವಾ?  ದೊಡ್ಡ ಪೊಸಿಷನ್ ನಲ್ಲಿದೀರಿ ಬೇರೆ, ಬಾಸ್ ನೋಡುದ್ರೆ ಮತ್ತೆ ಕಾಲ್ ಮೇಲೆ ಕಾಲ್ ಫಿಕ್ಸ್ .. " ಎನ್ನುತ್ತಾ ಅರುಣಿಮಾ, ತನ್ನ ಮಾತನ್ನು ಕಲ್ಯಾಣಿ  ಅಷ್ಟೇನೂ ಆಸ್ಥೆಯಿಂದ ಕೇಳಿಸಿಕೊಳ್ಳದೆ ತಿನ್ನಲು ಶುರು ಮಾಡಿದ್ದು ನೋಡಿ ಕಸಿವಿಸಿಯಾಗಿ ಕಿಟಕಿಯಿಂದ ಹೊರಗೆ ಸಂಜೆಯ ಸೂರ್ಯನನ್ನು ನೋಡುತ್ತಾ ಕಾಫಿ ಗುಟುಕರಿಸಿದಳು. 

"ಅಯ್ಯೋ ಆ ಬಿಎಸ್ಕೆ ಬಾಸ್ ನ ಮಾತ್ರ ಈಗ ನೆನಪಿಸಬೇಡ," ಕಲ್ಯಾಣಿ ತಲೆ ಎತ್ತದೆ ತಿನ್ನುತ್ತಲೇ ಗೊಣಗಿದಳು. ಮತ್ತೆ ಕೂಗಿಕೊಳ್ಳತೊಡಗಿದ ಮೊಬೈಲ್ ಅನ್ನು ತಲೆ ಕೆಳಗೆ ಮಾಡಿ ಸೈಲೆಂಟ್ ಮಾಡಿ ಇಟ್ಟುಬಿಟ್ಟಳು.

"ಬಿಎಸ್ಕೆ ಯಾರು?" ಸಹಜವಾದ ಕುತೂಹಲ ಮತ್ತು ಮುಗ್ಧತೆಯಿಂದ ಅರುಣಿಮಾ ಕೇಳಿದಳು.

ಕಲ್ಯಾಣಿ  ಬಾಯಿ ತನಕ ತೆಗೆದುಕೊಂಡು ಹೋಗಿದ್ದ ಚಿಕನ್ ತುಂಡನ್ನು ಮತ್ತೆ ಪ್ಲೇಟ್ ನಲ್ಲಿಟ್ಟು, ಬೆಪ್ಪಾಗಿ ನೋಡಿದಳು. "ನಿಂಗೆ ಬಿಎಸ್ಕೆ ಅಂದ್ರೆ ಗೊತ್ತಿಲ್ವಾ?" ಎಂದು ಕೇಳಿ ತಕ್ಷಣ ಇನ್ನೀಗ ಇವಳೂ ಎಲ್ಲಿ ತನಗೆ ಇಂತಹ ಪದಗಳನ್ನೆಲ್ಲಾ ಹೆಂಗಸರು ಉಪಯೋಗಿಸಬಾರದು ಎಂದೆಲ್ಲಾ ತಲೆ ಚಿಟ್ಟು ಹಿಡಿಯುವಂತೆ ಭಾಷಣ ಬಿಗಿಯುತ್ತಾಳೋ ಎಂದು ಹೆದರಿ, ಎಚ್ಚೆತ್ತುಕೊಂಡು, "ನಿಂಗೆ ಅವರು ಗೊತ್ತಿಲ್ಲ ಬಿಡು," ಎಂದು ತಿನ್ನುವುದನ್ನು ಮುಂದುವರೆಸಿದಳು. ಮತ್ತೆ ಏನೋ ನೆನೆಸಿಕೊಂಡು, "ಮೂರು ವರ್ಷಗಳಿಂದ ನಾನು ಟಾಪ್ ಪರ್ಫಾರ್ಮರ್ ಆಗಿರೋದಕ್ಕೆ ಏನು ಹೇಳ್ತಾನೆ ಗೊತ್ತಾ, ಗ್ರಾವಿಟಿ ಈಸ್ ನಾಟ್ ವರ್ಕಿಂಗ್, ಅಂತೆ. ಎಂಥ ಬಿ.ಸಿ ಇರ್ಬೇಕು ಅಲ್ವಾ?" ಎಂದಳು.

ಮತ್ತೆ ಆವರಿಸಿದ ದಿವ್ಯ ಮೌನದಿಂದ ಅರುಣಿಮಾಗೆ ತನ್ನ ಮಾತುಗಳು ಅರ್ಥವಾಗುತ್ತಿಲ್ಲವೆಂಬ ಕಿರಿಕಿರಿಯನ್ನು ಸಹಿಸಿಕೊಂಡು ಸುಮ್ಮನಾದಳು ಕಲ್ಯಾಣಿ .  

"ಅಲ್ಲಾ ಮ್ಯಾಮ್ ನಿಮ್ಮ ... "

ಮತ್ತೆ ಟೇಬಲ್ ಮೇಲಿದ್ದ ಕಲ್ಯಾಣಿ  ಫೋನ್ ವೈಬ್ರೇಟ್ ಆಗತೊಡಗಿತು. ಅವಳು ಅದನ್ನು ಮುಖ ಮೇಲೆ ಮಾಡಿಟ್ಟು, ಒಮ್ಮೆ ಯಾರದೆಂದು ನೋಡಿ, ಸುಮ್ಮನೇ ಇತ್ತ ತಿರುಗಿ,  

"ಹೇ ಪರ್ವಾಗಿಲ್ಲ ನೀನು ಅಂತ ಹೇಳಮ್ಮ, ನಂಗೆ ನಿನಗಿಂತ ನಾಲ್ಕೈದು ವರ್ಷ ಹೆಚ್ಚಿಗೆ ಇರಬಹುದು, ನೋಡೋಕೆ ದಪ್ಪ ಇದೀನಿ ಅಷ್ಟೇ," ಎಂದಳು.

ಅರುಣಿಮಾ ಕುತೂಹಲಕ್ಕೆ ಫೋನ್ ಸ್ಕ್ರೀನ್ ಕಡೆ ಕಣ್ಣು ಹಾಯಿಸಿ, ತಿರುಗಿದ್ದ ಅಕ್ಷರಗಳನ್ನು ಓದಿದಳು. 'ಬಗ್1' ಅಂತ ಕಂಡಿತು. ಬಲವಂತವಾಗಿ ನಗು ತಡೆದುಕೊಂಡು, "ಅಯ್ಯೋ ಅದು ನಿಮ್ಮ ಪೊಸಿಷನ್ ನೋಡಿ ... "

"ನಿಂಗೆ ಗೊತ್ತಾ, ಈ ಆಫೀಸ್ ನಲ್ಲಿ ಒಬ್ಬ ಹುಡುಗನಿಗೂ ನನ್ನ ಹಗ್ ಮಾಡುವಷ್ಟು ಧೈರ್ಯ ಇಲ್ಲ, ಮುಖ ನೋಡಿಕೊಂಡು ಮಾತಾಡಿಸ್ರೋ ಅಂದ್ರೆ, ಮೇಡಂ ಮೇಡಂ ಅಂತ ಕಾಲಿಗೇ ಬೀಳ್ತವೆ ಸೀದಾ, ಹೇತ್ಲಾಂಡಿಗಳು," ಮತ್ತೆ ಮುಖ ಸಿಂಡರಿಸಿದಳು.

ಅರುಣಿಮಾಗೆ ಈಗಂತೂ ನಗು ತಡೆಯಲು ಆಗಲೇ ಇಲ್ಲ. "ನೀವು ಎಷ್ಟೊಂದು ನಗುಸ್ತೀರಿ." ಎಂದು ಮತ್ತೆ ಜೊರಾಗಿ ನಕ್ಕು, "ನಾನು ಏನು ಹೇಳೋಕೆ ಹೊರಟಿದ್ದೆ ಅಂದ್ರೆ ನಿಮ್ಮ ಗಂಡ ಮಗನಿಗೆ ಏನೂ ಹೇಳಲ್ವಾ? "

ಕಲ್ಯಾಣಿ  ಒಂದು ಧೀರ್ಘವಾದ ನಿಟ್ಟುಸಿರು ಬಿಟ್ಟು ಕುಳಿತಳು. ಅರುಣಿಮಾಳಿಗೆ ಗಾಬರಿಯಾಯಿತು. ಅಷ್ಟರಲ್ಲಿ ಮತ್ತೆ ಅವಳ ಫೋನ್ ಬೊಬ್ಬೆ ಹಾಕಿತು. ಈಗಲೂ ಅವಳು ಒಮ್ಮೆ ನೋಡಿ ಸುಮ್ಮನಾದಳು. ಅರುಣಿಮಾಳಿಗೆ ತನ್ನ ಕಣ್ಣುಗಳ ಮೇಲೇ ಅನುಮಾನ ಬರುವಂತೆ ಹೆಸರು, 'ಬಗ್2' ಅಂತಿತ್ತು! 

"ನನ್ನ ಗಂಡ ನಾನು ಸೆಪೆರೇಟ್ ಆಗಿ ಮೂರು ವರ್ಷ ಆಯ್ತು." ನಿರ್ಭಾವುಕಳಾಗಿ ಕಲ್ಯಾಣಿ  ಹೇಳಿದಳು.

"ಓಹ್, ಐ ಯಾಮ್ ಸಾರಿ," ಅರುಣಿಮಾ ಅಳುಕುತ್ತಾ, "ಯಾಕೇಂತ ... " ಎಂದು ಕೇಳುತ್ತಿರುವಾಗಲೇ ಕಲ್ಯಾಣಿ ಅವಳನ್ನು ತಡೆದು, "ಅಯ್ಯೋ ಅಂಥದ್ದೇನಿಲ್ಲ, ತಿಕ ಕೊಬ್ಬು ಅವನಿಗೆ ಅಷ್ಟೇ." ಎಂದು ಮತ್ತೆ ತಿನ್ನತೊಡಗಿದಳು. ಅಷ್ಟರಲ್ಲಿ ಇವರ ಟೇಬಲ್ ಬಳಿ ಬಂದ ವೇಟರ್ ಗೆ, "ಒಂದು ಚೀಸ್ ಕೇಕ್ ಪ್ಯಾಕ್ ಮಾಡಿಕೊಡಿ, ಬೇರೆ ಏನಾದ್ರೂ ತಿಂತೀಯಾ?" ಎಂದು ಅರುಣಿಮಾ ಕಡೆ ನೋಡಿದಳು. ಅರುಣಿಮಾ ಜೋರಾಗಿ ನಕ್ಕು ಬಿಟ್ಟಳು. ಮತ್ತೆ ಬಾಯಿಗೆ  ಕೈ ಅಡ್ಡ ಹಿಡಿದು, "ನಂಗೇನೂ ಬೇಡ, ಐ ಯಾಮ್ ಸಾರಿ, ನಿಮ್ಮ ಮಾತು ಕೇಳ್ತಿದ್ರೆ.. "

"ಅಯ್ಯೋ ನಗಮ್ಮಾ ನಂಗೇನೂ ಬೇಜಾರಿಲ್ಲ," ಎಂದು ಮತ್ತೆ ಏನೋ ನೆನಪಾದವಳಂತೆ, "ಬೇರೇನೂ ಬದಲಾಗಿಲ್ಲ, ಮೊದಲು ಮನೇಲಿ ಮೂರು ಜನ ಅತ್ತೆಯರಿದ್ದರು, ಈಗ ಇಬ್ಬರು. ನಮ್ಮನೆ ಅಡಿಗೆಯವಳಿಗೆ ನಮ್ಮನೆ ಅತ್ತೆಯರ ಯಾವ ಮಾತನ್ನೂ ಕಿವಿ ಮೇಲೆ ಹಾಕಿಕೊಳ್ಳದೇ ಇರೋಕೆ ಐನೂರು ಎಕ್ಸ್ಟ್ರಾ ಕೊಡ್ತೀನಿ." ಎಂದು ತನ್ನ ಜೋಕಿಗೆ ತಾನೇ ನಕ್ಕಳು. 

"ಬಗ್ ಒನ್ ಬಗ್ ಟೂ ಅಂದ್ರೆ ಯಾರು? ಅದೇ ಆಗಿನಿಂದಲೂ ಫೋನ್ ಮಾಡ್ತಾ ಇದಾರಲ್ಲ, ಆಫೀಸ್ ನಲ್ಲಿ ಯಾರಿಗಾದ್ರೂ ಹಾಗೆ ಹೆಸರು ... "

"ಅಯ್ಯೋ ಅಲ್ಲ, ಅದು ನನ್ನ ಮಗ ಮತ್ತು ... "

"ನಿಮ್ಮತ್ತೆ, ಅಲ್ವ?"

"ನಾನು ಕೊಟ್ಟ ವಿವರಣೆ ಕೇಳಿ ನೀನು ಅತ್ತೆ ಅಂತ ಗೆಸ್ ಮಾಡಿದ್ರಲ್ಲಿ ತಪ್ಪೇನಿಲ್ಲ. ಆದ್ರೆ ಅದು ನನ್ನ ಮಗ ಮತ್ತು ನನ್ನ ಅಮ್ಮ! ಹೆಸರಿಗೆ ಬಗ್ ಅಷ್ಟೇ, ಯಾರಿಗೂ ಬಗ್ಗಲ್ಲ ಇಬ್ಬರೂ..." ಕಲ್ಯಾಣಿ  ವಿಷಾದದಿಂದ ನಕ್ಕಳು.

ಅವಳ ಮಾತಿಗೆ ಜೋರಾಗಿ ನಕ್ಕು ಮತ್ತೆ ಗಂಭೀರವಾಗಿ, "ಅಮ್ಮನಾ?" ಎಂದ ಅರುಣಿಮಾಗೆ ಎಲ್ಲವೂ ಗೊಂದಲವೆನಿಸಿತು.

"ಹೂಂ, ಅವರು ನನ್ನ ಜೊತೆಲೇ ಇದಾರೆ. ಅವರಿದ್ರೆ ನಾನಿರಲ್ಲ ಅಂತ ನನ್ನ ಗಂಡ ತಿಕ ಗಾಂಚಲಿ ಮಾಡಿಕೊಂಡು ಹೋಗಿದಾನೆ." ಮತ್ತೇನೂ ಹೇಳುವ ಇಚ್ಛೆಯಿಲ್ಲದೆ ಕಲ್ಯಾಣಿ  ಬಿಲ್ ಪಾವತಿಸಿ ಎದ್ದು ನಿಂತಳು.

"ಅಂದ್ರೆ ನೀವು ಗಂಡ ಮತ್ತು ಅಮ್ಮ ಇಬ್ರಲ್ಲಿ ಅಮ್ಮನನ್ನು ಚೂಸ್ ಮಾಡಿಕೊಂಡ್ರಾ?" 

"ಹೂಂ, ನನ್ನಿಂದ ನನ್ನ ಅಮ್ಮ ಒಂಟಿಯಾಗಿದ್ದು ಎನ್ನುವ ಗಿಲ್ಟ್ ಇದೆ ನಂಗೆ, ಇರಲಿ ಅದನ್ನು ಇನ್ನೊಂದು ದಿನ ಹೇಳ್ತೀನಿ." ಎಂದು ಸರಸರ ನಡೆದು ಹೋದಳು.

***

ದಾರಿಯುದ್ದಕ್ಕೂ ಕಾರಿನ ಹಿಂದಿನ ಸೀಟ್ ನಲ್ಲಿ ಕುಳಿತು ಕಲ್ಯಾಣಿ  ಮೂವತ್ತೆಂಟು ವರ್ಷಕ್ಕೆ ತನ್ನ ಜೀವನದಲ್ಲಿ ಏನೆಲ್ಲಾ ಘಟಿಸಿಬಿಟ್ಟಿತು ಎಂದು ವಿಷಾದದಿಂದ ನೆನೆಸಿಕೊಳ್ಳುತ್ತಿದ್ದಳು. ಸ್ವಲ್ಪ ಮೂಡ್ ಸರಿ ಹೋಗಬಹುದೆಂದು ಮೊಬೈಲ್ ತೆಗೆದು ಆನ್ಲೈನ್ ಶಾಪಿಂಗ್ ಸೈಟ್ ನಲ್ಲಿ ಒಂದೆರಡು ಬಟ್ಟೆಗಳನ್ನು ಆರಿಸಿಕೊಂಡಳು. ಆದರೆ ಯಾವ ಬಟ್ಟೆಯೂ ಡಬಲ್ ಎಕ್ಸೆಲ್ ಸೈಜ್ ನಲ್ಲಿರಲಿಲ್ಲ. 'ಥೂ ಈ ಫ್ಯಾಶನ್ ಡಿಸೈನರ್ ಗಳಿಗೆ ಫ್ಯಾಶನ್ ಸೆನ್ಸೇ ಇಲ್ಲ. ಎಲ್ಲಾ ಬಟ್ಟೆಗಳನ್ನೂ ಹಾಸ್ಟೆಲ್ ಸೇರಿ ನೆಟ್ಟಗೆ ಉಣ್ಣೋಕಿಲ್ದೇ ನೋಡೋಕೆ ಪೆನ್ಸಿಲ್ ಹಾಗೆ, ಹ್ಯಾಂಗರ್ ಹಾಗೆ ಇರೋ ಹುಡುಗಿಯರಿಗಾಗೇ ಮಾಡ್ತಾರೆ, ಬಡ್ಡೆತವು. ಮನೇಲಿದ್ದು ಚೆನ್ನಾಗಿ ಉಂಡುಕೊಂಡು, ತಿಂದುಕೊಂಡು ಸೊಂಪಾಗಿರುವ ನಮ್ಮಂಥವರ ಬಗ್ಗೆ... ' ಬೇಸರದಿಂದ ಫೋನ್ ಎತ್ತಿಟ್ಟಳು. ಅಮ್ಮನ ಬಿಗಿ ಮುಷ್ಟಿಯಿಂದ ತಪ್ಪಿಸಿಕೊಳ್ಳಲು ತಾನು ಹೈ ಸ್ಕೂಲ್ ನಲ್ಲೇ ಹಾಸ್ಟೆಲ್ ಸೇರಬೇಕೆಂದು ಹಠ ಮಾಡಿದ್ದು ನೆನಪಾದಾಗೆಲ್ಲಾ ಹಾಸ್ಟೆಲ್ ಸೇರಿದ ಹುಡುಗಿಯರ ಬಗ್ಗೆ ಸಿಟ್ಟು ಬರುತಿತ್ತು ಕಲ್ಯಾಣಿಗೆ.

ಮತ್ತೆ ಫೋನ್ ಮೇಲೆ ಕಣ್ಣಾಡಿಸಿದಾಗ ಅಮ್ಮನ ಹತ್ತಾರು ಕರೆಗಳು, ವಾಟ್ಸಾಪ್ ನಲ್ಲಿ ಒಂದಿಪ್ಪತ್ತು ವಾಯ್ಸ್ ಮೆಸೇಜ್ಗಳು. ಅದರಲ್ಲಿ ಬಹುತೇಕ ಎಷ್ಟೊತ್ತಿಗೆ ಬರ್ತೀಯ? ಅಲ್ಲಿ ಮಳೆ ಬರ್ತಿದೀಯಾ? ನಿನ್ನ ಗಂಡ ಏನಾದ್ರೂ ಫೋನ್ ಮಾಡಿದ್ದನಾ? ನಿನ್ನ ಮಗನನ್ನು ನೋಡಿಕೊಳ್ಳೋಕೆ ಆಗಲ್ಲಮ್ಮಾ ನಂಗೆ ...ಇವೇ.

ಎಂದಾದರೂ, ಏನಾದರೂ ತುರ್ತು ಪರಿಸ್ಥಿತಿ ಇರಬಹುದೇನೋ ಎಂದು ಎಷ್ಟೇ ಬ್ಯುಸಿ ಇದ್ದರೂ ಅಮ್ಮನ ಕರೆಗೆ ಉತ್ತರಿಸಿ ಉತ್ತರಿಸಿ, ಇಂಥವೇ ಪ್ರಶ್ನೆಗಳನ್ನು ಎದುರಿಸಿ ಸಿಟ್ಟು ಬಂದು ಈಗ ಉತ್ತರಿಸುವ ಗೋಜಿಗೇ ಹೋಗುತ್ತಿರಲಿಲ್ಲ ಕಲ್ಯಾಣಿ. ಒಮ್ಮೊಮ್ಮೆ ಭಯವಾಗುತ್ತಿತ್ತು, ತೋಳ ಬಂತು ತೋಳ ಕಥೆಯಂತೆ ನಿಜವಾಗಿಯೂ ತುರ್ತು ಇದ್ದಾಗ ತಾನು ಹೀಗೇ ಉದಾಸೀನ ಮಾಡಿಬಿಟ್ಟರೆ ಎಂದು. ಧೀರ್ಘವಾಗಿ ನಿಟ್ಟುಸಿರು ಬಿಟ್ಟು ಅಮ್ಮನಿಗೆ ಫೋನ್ ಮಾಡಿದಳು.

ಡ್ರೈವರ್ ಸುನಿಲ್ ಪ್ರತಿದಿನದಂತೆ ಮೇಡಂ ಎಲ್ಲಿ ಬೈತಾರೋ, ಏನು ಎಡವಟ್ಟಾಗುತ್ತದೆಯೋ ಎಂದು ಹೆದರಿ ಹೆದರಿ ನಿಧಾನವಾಗಿ ಗಾಡಿ ಓಡಿಸುತ್ತಿದ್ದನು. ಮಂಡ್ಯದ ಸೋಮನಹಳ್ಳಿಯಿಂದ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದ ಇಪ್ಪತ್ತೈದು ವರ್ಷದವನಾದ ಸುನಿಲ್ ಹೆಚ್ಚೇನೂ ಓದದೆ, ಕೆಲಸ ಕೂಡ ಮಾಡದೇ, ಕೆಟ್ಟಾ ಕೊಳಕಾಗಿ ಬೈದುಕೊಂಡು ಎಂದೂ ಯಾರಿಗೂ ಹೆದರದೆ ಗೂಳಿಯಂತೆ ತಿರುಗಿಕೊಂಡಿದ್ದವನು, ಕಲ್ಯಾಣಿ  ಕೈಗೆ ಸಿಕ್ಕು ಬಾಲ ಮುದುರಿಕೊಂಡಿದ್ದ. ಕೆಲವೇ ತಿಂಗಳುಗಳಲ್ಲಿ ಬೆಂಗಳೂರಿನ ಜೀವನದ ಬಗೆಗಿದ್ದ ಕನಸುಗಳೆಲ್ಲಾ ಒಡೆದು, ಭ್ರಮನಿರಸವಾಗಿತ್ತು. ಜೀವನದಲ್ಲಿ ಮೊದಲ ಬಾರಿಗೆ ಅವನಿಗೆ ಒಬ್ಬ ಹೆಣ್ಣು ಹೆಂಗಸಿನ ಕೈಲಿ ಬಯ್ಯಿಸಿಕೊಳ್ಳುವುದು ಎಷ್ಟು ಅವಮಾನಕರ ಎನ್ನುವುದು ಅರ್ಥವಾಗಿತ್ತು. ಸೋಮನಹಳ್ಳಿಯಲ್ಲಿ ಹೆಂಗಸರು ಬೈಯ್ಯುತ್ತಿರಲಿಲ್ಲವೆಂದಲ್ಲ. ಗದ್ದೆಗಳಲ್ಲಿ ಮೊಣಕಾಲಿನ ತನಕ ಸೀರೆ ಎತ್ತಿಕೊಂಡು, ಕೂಲಿ ಮಾಡುವ, ಕೆದರಿದ ಕೂದಲಿನ, ಕೆಂಚು ಹಲ್ಲುಗಳ ಕಮಲಿ, ನಂಜಿ, ಎಂಕಟಮ್ಮ ಎಲ್ಲಾ ಇದಕ್ಕಿಂತ ಕೆಟ್ಟದಾಗಿ ಬೈಯ್ಯುತ್ತಿದ್ದರು. ಆದರೆ ಇಲ್ಲಿ ಚೆಂದದ ಬಟ್ಟೆ ತೊಟ್ಟು, ಲಿಪ್ಸ್ಟಿಕ್ ಹಚ್ಚಿಕೊಂಡು, ದೊಡ್ಡ ದೊಡ್ಡ ಗಾಡಿಗಳನ್ನು ಓಡಿಸುವ ಹೆಂಗಸರು ಕಪ್ಪು ಕನ್ನಡಕ ಧರಿಸಿ, ಕಣ್ಣುಗಳೇ ಕಾಣದಂತೆ, ಅವರ ಭಾವನೆಯೇ ಗೊತ್ತಾಗದಂತೆ ಇಂಗ್ಲೀಷ್ನಲ್ಲಿ ಬೈಯ್ಯುತ್ತಿದ್ರೆ  ಹೇಗೆ ಪ್ರತಿಕ್ರಿಯಿಸಬೇಕೆಂದೂ ಗೊತ್ತಾಗದೆ ಒದ್ದಾಡಿದ್ದನು. ಇಷ್ಟು ಚೆಂದದ ಹೆಸರಿನ ಈ ಮೇಡಂ ನೋಡಿದರೆ ಇಂಗ್ಲೀಷ್ನಲ್ಲಿ ಬೈದರೆ ಇವನಿಗೆ ನಾಟುತ್ತಿಲ್ಲವೆಂದು ಗೊತ್ತಾದ ಮೇಲೆ ಅಚ್ಚ ಕನ್ನಡದಲ್ಲಿ ಬೈಯ್ಯ ತೊಡಗಿದ್ದರು. ಒಮ್ಮೊಮ್ಮೆ ತನಗೆ ಬೈತಾ ಇದಾರೋ ಅಥವಾ ಹೊರಗೆ ಅಡ್ಡ ಬಂದ ಬೇರೆ ಗಾಡಿಗಳೊಳಗೆ ಕುಳಿತವರಿಗೆ ಬೈತಾ ಇದಾರೋ ಎಂದು ಗೊತ್ತಾಗದೆ ಒದ್ದಾಡಿದ್ದನು. ತಿಂಗಳುಗಳಿಂದ ಎದ್ದು ಬಿದ್ದು ಪ್ರತಿದಿನ ಓಡಾಡುವ ಏರಿಯಾಗಳು, ತಾನು ಗೂಗಲ್ ಮ್ಯಾಪ್ ಹಾಕಿಕೊಂಡು ಗುರುತು ಮಾಡಿಕೊಂಡ ಬೀದಿಗಳೆಲ್ಲಾ ಹೊಸದಾಗಿ, ಗೊಂದಲವಾಗಿ, ಮರೆತು ಅರುಳು ಮರಳಾಗಿದ್ದನು. ಕೆಲಸ ಬಿಡುತ್ತೇನೆಂದು ಹೇಳುವುದಾದರೂ ಹೇಗೆ ಎಂದು ಹೆದರಿ ಹೇಗೋ ಇಕ್ಕಟ್ಟಿನಲ್ಲಿ ಕೆಲಸ ಮಾಡಿಕೊಂಡಿದ್ದನು. ಅಂದು ಮನೆಯಿಂದ ಹೊರಡುವಾಗ ಅವನ ಅಮ್ಮ, ಏನೋ ಕೆಡುಕೆನಿಸುತ್ತಿದೆ ಎಂದು ದೃಷ್ಟಿ ಬೇರೆ ತೆಗೆದಿದ್ದಳು. ಅದರಿಂದ ಇನ್ನಷ್ಟು ಗಾಬರಿಯಾಗಿದ್ದ ಸುನಿಲ್ ಕೈ ಕಾಲು ಆಡುತ್ತಲೇ ಇರಲಿಲ್ಲ. ಅವನು ಅದೇ ಚಿಂತೆಯಲ್ಲಿ ಇಂಚಿಂಚೇ ಸಾಗುತ್ತಿದ್ದ ದಟ್ಟ ಟ್ರಾಫಿಕ್ ನಲ್ಲಿ ಗಾಡಿ ಓಡಿಸುತ್ತಿದ್ದ. ಅಷ್ಟರಲ್ಲಿ ಕಲ್ಯಾಣಿ  ಮೊಬೈಲ್ ಗೆ ಬೇರೊಂದು ಕರೆ ಬಂದಿತು. ಬೇಸರದಿಂದಲೇ ಉತ್ತರಿಸಿದ ಅವಳು ಹೆಚ್ಚು ಮಾತನಾಡದೆ ಹೂಂ, ಓಕೆ, ಡನ್ ಅಂತಷ್ಟೇ ಹೇಳುತ್ತಿದ್ದಳು.

ಇದ್ದಕ್ಕಿದ್ದಂತೆ "ಎಲ್ಲಿಟ್ಟುಕೊಳ್ತಾರಂತೆ ತುತ್ತು?" ಎಂದು ಕೋಪದಿಂದ ಕೇಳಿದಳು.

ಗಾಬರಿ ಬಿದ್ದು ಸುನಿಲ್ ಗಾಡಿ ನಿಲ್ಲಿಸಿ, ತಿರುಗಿ, "ಏನ್ ಮೇಡಂ?" ಎಂದು ಕೇಳಿದ. ಇಂಥ ಬೈಗುಳವನ್ನು ಅವನಂಥ ಅವನೇ ಕೇಳಿರಲಿಲ್ಲ.

"ಅಯ್ಯೋ ನಿಂಗಲ್ಲಪ್ಪಾ, ಇಲ್ಲಿ ಫೋನ್ ನಲ್ಲಿ, ನೀನೇನು ಇವತ್ತೇ ಮನೆ ತಲುಪುಸ್ತೀಯಾ ಹೇಗೆ?" ಎಂದು ಹೇಳಿ, ಫೋನ್ ನಲ್ಲಿ ಮಾತು ಮುಂದುವರೆಸಿದಳು. ಬೆಂಗಳೂರಿನ ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕಿನಿಂದ ರಾಜರಾಜೇಶ್ವರಿ ನಗರದ ಅವಳ ಮನೆ ತಲುಪಲು ಇನ್ನೂ ಒಂದು ಘಂಟೆಯಾದರೂ ಬೇಕು ಎನ್ನುವುದು ಅರಿವಾಗುತ್ತಲೇ ಸುನಿಲ್ ಮಂಕಾದನು. ಮೇಡಂ ಮಾತುಗಳು ಅಸ್ಪಷ್ಟವಾಗಿ ಕೇಳುತ್ತಿದ್ದವು. ಎಷ್ಟೋ ಹೊತ್ತು ಕಳೆದಂತೆ ಅನಿಸಿದರೂ ನಿಂತಲ್ಲೇ ಇದ್ದೇವೆ ಅನಿಸತೊಡಗಿತು. ಅವನಿಗೆ ಎಷ್ಟು ಕಷ್ಟ ಪಟ್ಟರೂ ಗಮನ ಕೊಟ್ಟು ಓಡಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಬೇಡವೆಂದರೂ ಮೇಡಂ ಮಾತುಗಳನ್ನು ಕೇಳಿಸಿಕೊಳ್ಳತೊಡಗಿದ್ದ. ಅಷ್ಟೇ ಅಲ್ಲದೆ ಪ್ರತಿಯೊಂದಕ್ಕೂ ಅರ್ಥ ಹುಡುಕುತ್ತಿದ್ದ. ಅಷ್ಟರಲ್ಲಿ ಒಂದು ಆಟೋರಿಕ್ಷಾ ಕಲ್ಯಾಣಿಯ ಕಾರು ಮತ್ತೊಂದು ಪಕ್ಕದಲ್ಲಿದ್ದ ಕಾರುಗಳ ಮಧ್ಯೆ ಹೇಗೋ ತೂರಿಕೊಂಡು ಬಂತು. ಅದನ್ನು ಉಜ್ಜಿಕೊಂಡು ಹೋಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿದ ಸುನಿಲ್ ಸಿಟ್ಟಿನಿಂದ ಜೋರಾಗಿ ಹಾರ್ನ್ ಮಾಡಿ, 'ಓಯ್ ಮೈ ಮ್ಯಾಲೆ ಗ್ಯಾನ ಇದ್ದತೋ ಇಲ್ವೋ?' ಎಂದು ಕೂಗಿದ. ಅಷ್ಟಕ್ಕೇ ತನ್ನದೇ ತಪ್ಪಿದ್ದರೂ ಆ ಆಟೋ ಡ್ರೈವರ್ ಇವರ ಕಾರಿನ ಮುಂದೆ ಅಡ್ಡ ನಿಲ್ಲಿಸಿದ. ಅಷ್ಟೇ! ಅದೆಲ್ಲಿದ್ದರೋ ನಾಲ್ಕಾರು ಆಟೋಗಳು ಚಕ್ಕಂತ ಬಂದು ಎಲ್ಲರೂ ಗುಂಪು ಕಟ್ಟಿಕೊಂಡು ಡ್ರೈವರ್ ಸೀಟಿನ ಕಿಟಕಿ ಬಡಿಯುತ್ತಾ 'ಬಾರೋ ಇಲ್ಲಿ ಹೊರಗೆ ಮೊದ್ಲು... " ಎಂದು ಜೋರು ಮಾಡತೊಡಗಿದರು. ಸುನಿಲ್ ಯಾವ ಕಾರಣಕ್ಕೂ ಇಳಿಯಬಾರದೆಂದು ಒಳಗೆ ಕುಳಿತೇ ಇದ್ದ. ಒಂದು ಕ್ಷಣ ಕಣ್ಣು ಮುಚ್ಚಿ ಬಿಟ್ಟು ನೋಡುತ್ತಾನೆ, ಆಗಲೇ ಕಲ್ಯಾಣಿ ಕೆಳಗಿಳಿದು, ಸೊಂಟದ ಮೇಲೆ ಎರಡೂ ಕೈ ಇಟ್ಟುಕೊಂಡು "ಎನ್ರಪ್ಪಾ, ಏನು ತೊಂದ್ರೆ ಹೇಳಿ?" ಎಂದಳು.

"ನೀವು ಸುಮ್ನಿರಿ ಮೇಡಂ, ಈ ಡ್ರೈವರ್ ಗೆ ಬುದ್ದಿ ಕಲಿಸಲಿಲ್ಲ ಅಂದ್ರೆ ನಿಮ್ ಗಾಡಿಗೆ ಏನಾರ ಆಗಿರದು"

"ಈ ವಮ್ಮನ್ ತಾವ ಏನ್ ಮಾತು ಬರ್ರೋ ಪೊಲೀಸ್ ಟೇಶನ್ ಗೆ ಹೋಗುಮ"

"ಮದ್ಲು ಆ ಹೆಂಗ್ಸುಬ್ಬನ ಒರಾಕ್ ಎಳಿರೋ"

ಹೀಗೆ ತಲೆಗೊಂದೊಂದು ಮಾತಾಡತೊಡಗಿದರು.

ಡ್ರೈವರ್ ಸೀಟಿನ ಬಾಗಿಲು ತೆಗೆದು ಕಲ್ಯಾಣಿ, "ಜರುಗೂ ಆ ಕಡೆ" ಎಂದಳು. ಸುನಿಲ್ ಗೇರ್ ಬಾಕ್ಸ್ ಮೇಲಿಂದಲೇ ಜಿಗಿದು ಅತ್ತ ಕುಳಿತ. ಕಾರು ಏರಿ ಕಲ್ಯಾಣಿ, "ಆಯ್ತು ನಡೀರಿ ನನ್ನ ಮಕ್ಕಳ, ಅದ್ಯಾವ ಪೊಲೀಸ್ ಹತ್ರ ಹೋಗ್ಬೇಕೋ ಹೋಗೋಣ." ಎಂದು ಜೋರು ಮಾಡಿ ಪೂರ್ತಿ ಆಕ್ಸಲರೇಟರ್ ಒತ್ತಿ, ಬ್ರೂಮ್ ಬ್ರೂಮ್ ಎಂದು ಸದ್ದು ಮಾಡಿದಳು. ಅಷ್ಟೂ ಜನ ಆಟೋ ಡ್ರೈವರ್ ಗಳು ಸುನಿಲನನ್ನು ಕ್ರಿಮಿಯಂತೆ ನೋಡಿ, ಬುಸುಗುಡುತ್ತಾ ಒಂದೇ ನಿಮಿಷಕ್ಕೆ ಜಾಗ ಖಾಲಿ ಮಾಡಿದರು. ಸುನಿಲನಿಗೆ ಬಹಳ ಅವಮಾನವಾಯಿತು.

ಸುನಿಲ್ ಏನೂ ಅರ್ಥವಾಗದೇ ಕಣ್ಣು ಪಿಳಿ ಪಿಳಿ ಬಿಡುತ್ತಿದ್ದಾಗ, "ಇವತ್ತು ಬೇಗ ಹೋಗಲೇಬೇಕು, ಅಮ್ಮನನ್ನು ಕರೆದುಕೊಂಡು ಚಿಕ್ಕಮ್ಮನ ಮನೆಗೆ ಹೋಗಬೇಕು, ನೀನು ಅಲ್ಲೇ ಕುಳಿತು ನೋಡು," ಎಂದಳು.

ಸುನಿಲ್ ಬೆಪ್ಪನಾಗಿ, ಏನು ಮಾಡುವುದೆಂದು ಗೊತ್ತಾಗದೇ ಅವಳನ್ನೇ ಹೆದರಿಕೆಯಿಂದ ನೋಡುತ್ತಿದ್ದ. ಒಳೊಗೊಳಗೇ ಮೇಡಂ ತಾವಾಗಿಯೇ ಕೆಲಸದಿಂದ ತೆಗೆದುಹಾಕಿದರೆ ಚೆನ್ನಾಗಿರುತ್ತೆ ಎಂತಲೂ ಕನಸು ಕಾಣುತ್ತಿದ್ದ. ಅವನಿಗೆ ಏಕೋ ಇದೆಲ್ಲ ಅತಿಯಾಗುತ್ತಿದೆ ಅನಿಸುತಿತ್ತು. ಮೇಡಂಗೆ ಇಷ್ಟು ದೊಡ್ಡ ಇನ್ನೋವಾ ಕಾರ್ ಓಡಿಸಲು ಬರುತ್ತದೆಯೇ? ಬಂದರೂ ಡ್ರೈವರ್ ಯಾಕಿಟ್ಟುಕೊಂಡರು ಎನ್ನುವುದೇ ಅರ್ಥವಾಗದೇ ರಸ್ತೆಯನ್ನೇ ಗರ ಬಡಿದವನಂತೆ ನೋಡುತ್ತಾ ಕೈ ಕೈ ಹಿಸುಕಿಕೊಳ್ಳುತ್ತಾ ಕುಳಿತ. ಮೇಡಂ ಗಾಡಿಯ ಸ್ಟಿಯರಿಂಗ್ ಹಿಡಿದದ್ದಷ್ಟೇ ನೆನಪು, ಇದುವರೆಗೂ ತನಗೆ ಕಂಟಕವಾಗಿದ್ದ ರಸ್ತೆಯ ತುಂಬಾ ಅಡ್ಡಾ ದಿಡ್ಡಿಯಾಗಿದ್ದ ಗಾಡಿಗಳೆಲ್ಲ ಎಲ್ಲಿ ಹೋದವೆಂದು ಸುನಿಲನಿಗೆ ಅಚ್ಚರಿಯಾಗುವಂತೆ, ಮೂರನೆಯದೋ ನಾಲ್ಕನೆಯದೋ ಗೇಯರಿನಿಂದ ಕೆಳಗೆ ಬರದೇ, ಅವಳಿಗೆ ಅಡ್ಡ ಬಂದವರಿಗೆಲ್ಲಾ ಮನುಷ್ಯನ ದೇಹದಲ್ಲಿ ಯಾವ ಯಾವ ಅಂಗಗಳನ್ನೆಲ್ಲಾ ಹೆಸರಿಸಿ ಬೈಯ್ಯಲು ಸಾಧ್ಯವೋ ಬೈದುಕೊಳ್ಳುತ್ತಾ, ಅರ್ಧ ಘಂಟೆಯೊಳಗೇ ಮನೆ ಮುಂದೆ ಗಕ್ಕೆಂದು ನಿಲ್ಲಿಸಿ, ಸುನಿಲ್ ಕಡೆ ಅರ್ಥವಾಯಿತೇನೋ ಗೂಬೇ ಎನ್ನುವಂತೆ ನೋಡಿದಳು. "ನಾನು ಗಾಡಿ ಓಡಿಸಿಕೊಂಡು ಬಂದೆ ಅಂತ ಅಮ್ಮನ ಮುಂದೆ ಬಾಯಿ ಬಿಟ್ ಬಿಟ್ಟೀಯ ಮತ್ತೆ." ಎಂದು ಗದರಿಸಿ ಇಳಿದು ಹೋದವಳನ್ನು ಬೆಪ್ಪನಂತೆ ನೋಡುತ್ತಿದ್ದಾಗ, ಊರಿನಲ್ಲಿ ಯಾರಿಗಾದರೂ ಇದು ಗೊತ್ತಾದರೆ, ಈ ಯಮ್ಮ ನನ್ನನ್ನು ರೇಪ್ ಮಾಡಿಬಿಟ್ಟಳು ಎಂದೇ ಹೇಳುತ್ತಾರೇನೋ ಎನಿಸಿ ಸುನಿಲನಿಗೆ ತನ್ನ ಬಗ್ಗೆ ತನಗೇ ಅಸಹ್ಯವಾಯಿತು. ಇದೆಲ್ಲದರ ನಡುವೆ ಮೇಡಂ ತನ್ನ ಅಮ್ಮನಿಗೆ ಫೋನ್ ಮಾಡಿ, ಹತ್ತು ನಿಮಿಷದಲ್ಲಿ ಮನೆ ತಲುಪುತ್ತಿರುವುದಾಗಿಯೂ, ಮನೆ ಗೇಟ್ ಮುಂದೆ ರೆಡಿ ಇರಬೇಕೆಂದೂ ಹೇಳಿದ್ದು ಸಹ ಹಾಸ್ಯಾಸ್ಪದ ಎನಿಸಿತ್ತು. ಅವನು ಊಹಿಸಿದ್ದಂತೆ ಮೇಡಂ ಅಮ್ಮ ಹೊರಗೆ ಬಂದು ಬಾಗಿಲಿನಲ್ಲಿ ಕಾಯುತ್ತಿರಲಿಲ್ಲ. ಸದ್ಯ ಇವರಿಗೆ ಹೆದರದವರು ಇವರಮ್ಮನಾದರೂ ಧೈರ್ಯವಂತರು ಇದ್ದಾರೆ ಬಿಡು ಎಂದು ಮನಸ್ಸಿನಲ್ಲೇ ನಿಟ್ಟುಸಿರಿಟ್ಟು ಸುನಿಲ್ ಅಲುಗಾಡದೇ ಕುಳಿತಲ್ಲೇ ಕುಳಿತ.

***

ಅಮ್ಮ ಮಗಳು ಇಬ್ಬರೂ ಸೇರಿ ಎಷ್ಟೆಲ್ಲಾ ಸರ್ಕಸ್ ಮಾಡಿದರೂ ಚಯನನನ್ನು ತಮ್ಮೊಂದಿಗೆ ಹೊರಡಿಸಲು ಸಾಧ್ಯವಾಗಲೇ ಇಲ್ಲ. ಮನೆಗೆ ಬಂದ ಮೇಲೆ ಎಷ್ಟೇ ತಾಳ್ಮೆಯಿಂದಿರಬೇಕೆಂದುಕೊಂಡರೂ ಇಬ್ಬರ ನಿಲ್ಲದ ದೂರುಗಳು, ನಿಂದನೆಗಳು, ಗೋಳಾಟ, ತಾನೊಬ್ಬ ಸಿಂಗಲ್ ಪೇರೆಂಟ್ ಎನ್ನುವ ಸ್ವಾನುಕಂಪ ಅವಳನ್ನು ಕಂಗೆಡಿಸುತ್ತಿದ್ದುವು. ಚಯನ ಚಿಕ್ಕವನಿದ್ದಾಗ ಫಾರ್ಟ್ ಎನ್ನುವ ಪದದ ಅರ್ಥವನ್ನು ಹೊಸದಾಗಿ ಕಲಿತುಕೊಂಡಾಗ ಪದೇ ಪದೇ ಅದನ್ನು ಹೇಳಿ ಜೋರಾಗಿ ನಗುತ್ತಿದ್ದ. ಅಮ್ಮನೂ ನಗಲಿ ಎಂದು ಬಯಸುತ್ತಿದ್ದ. ಒಂದೆರಡು ಬಾರಿ ಬಲವಂತಕ್ಕೆ ನಕ್ಕು ಕಲ್ಯಾಣಿ  ಕಿರಿಕಿರಿಯಾಗುತ್ತಿದ್ದಳು. ಆಮೇಲಾಮೇಲೆ ನಿರ್ಲಕ್ಷ್ಯ ಮಾಡಿದಳು. ಅದರಿಂದ ತಾನೇ ದಾರಿಗೆ ಬರುತ್ತಾನೆ ನೋಡು ಎನ್ನುವುದು ಅವಳ ಅಮ್ಮನ ಪಾಠವಾಗಿತ್ತು. ಆದರೆ ಆದದ್ದೇ ಬೇರೆ. ಚಯನ ಅಮ್ಮನ ಗಮನ ಸೆಳೆಯಲು ಫಾರ್ಟ್ ಪದ ಬಿಟ್ಟು ಫಕ್, ಶಿಟ್, ಆಸ್ ಹೋಲ್ ಎನ್ನುವಂಥ ಕೆಟ್ಟ ಪದಗಳನ್ನು ರೊಚ್ಚಿಗೆ ಬಿದ್ದವನಂತೆ ಬಳಸಲು ತೊಡಗಿದ. ಇಂದಿನ ಬಹುತೇಕ ಮಕ್ಕಳು ಅಪ್ಪ ಅಮ್ಮನ ಗಮನ ಸೆಳೆಯಲು ಈ ರೀತಿ ನಡೆದುಕೊಳ್ಳುವುದು ಸಹಜ, ತಾಳ್ಮೆಯಿಂದಿರಿ, ಇದಕ್ಕೆ ಏ. ಡಿ. ಎಚ್. ಡಿ ಸಿನ್ಡ್ರೋಮ್ ಎನ್ನುತ್ತಾರೆ ಎಂದು ಸಮಝಾಯಿಷಿ ನೀಡುತ್ತಿದ್ದ ಡಾಕ್ಟರ್ ಗಳಿಗೆ ನಿಜವಾಗಿಯೂ ಮಕ್ಕಳಿರಬಹುದೇ ಎಂದು ಅನುಮಾನವಾಗುತಿತ್ತು ಕಲ್ಯಾಣಿಗೆ. ಅಂದು ಮನಬಿಚ್ಚಿ ನಕ್ಕು ಬಿಟ್ಟಿದ್ದರೆ ಇಂದು ಅಳುವಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎನಿಸಿತು.  

"ಯಾವ ನೆಂಟರ ಮನೆಗೂ ಹೋಗುವ ಹಾಗಿಲ್ಲ ಇವನ ಕಡೆಯಿಂದ." ಪ್ರತಿಸಲದಂತೆ ಎಲ್ಲಿ ಈ ಸಲವೂ ಮಗ ಒಬ್ಬನನ್ನೇ ಬಿಟ್ಟು ಹೋಗಲಾರದೆ, ತನ್ನನ್ನು ಅವನೊಂದಿಗಿರಲು ಬಿಟ್ಟು ಹೋಗುವಳೋ? ಇಲ್ಲಾ, ಯಾರೂ ಹೋಗುವುದೇ ಬೇಡ ಎಂದು ಬಿಡುವಳೋ ಎನ್ನುವ ಅನುಮಾನದಲ್ಲಿ ಅಜ್ಜಿ ವಟವಟ ಶುರು ಮಾಡಿಯಾಗಿತ್ತು. "ನಾನಂತೂ ನೀನು ಹೇಳಿದ ಕೂಡಲೇ ರೆಡಿಯಾಗಿದ್ದೇನಮ್ಮಾ, ನನ್ನಿಂದ ಲೇಟ್ ಆಯ್ತು ಅನ್ನಬೇಡ." ಎಂದು ತನ್ನ ಝರಿಯಂಚಿನ ಕಾಟನ್ ಸೀರೆಯ ನೆರಿಗೆಗಳನ್ನು ತಿದ್ದಿ ತೀಡಿಕೊಳ್ಳುತ್ತಿದ್ದ ಅಮ್ಮನನ್ನು ನೋಡಿ ಕಲ್ಯಾಣಿಗೆ ತನಗಿರುವುದು ಇಬ್ಬರು ಮಕ್ಕಳೇ ಎನ್ನುವ ಅನುಮಾನ ಬಂತು. ಅವಳು ಗೊಂದಲದಿಂದ ನೋಡುತ್ತಿರುವಾಗಲೇ, ಅಜ್ಜಿ,  "ಲಟ್ಟಣಿಗೆ ತಗೊಂಡು ಒಂದು ಸರಿಯಾಗ್ ಕೊಡು ಹೇಳ್ತೀನಿ, ಬೆಳಿಗ್ಗೆಯಿಂದ ನನಗೆಷ್ಟು ಜೀವ ತಿಂದಿದಾನೆ ಗೊತ್ತಾ? ನಾವೂ ಮಕ್ಕಳು ಹಡೆದಿದೀವಿ, ಬೆಳೆಸಿದೀವಿ ಆದ್ರೂ ಇಂಥ ಮಕ್ಳು ... " ಎಂದಿತು. 

ಕಲ್ಯಾಣಿಗೆ ಬೇಡವೆಂದರೂ ಬಾಲ್ಯದ ಕಹಿ ನೆನಪುಗಳು ನುಗ್ಗಿ ಬರುತ್ತಿದ್ದುವು. ಎರಡೂ ಕಾಲುಗಳ ಮೀನುಖಂಡದ ಮೇಲೆ ಅಮ್ಮ ತಪ್ಪು ಮಾಡಿದಾಗೆಲ್ಲಾ ಚುಂಚಕದಿಂದ ಹಾಕಿದ ಬರೆಗಳ ಕಲೆಯಿಂದ ಸ್ಕರ್ಟ್ ಅಥವಾ ಶಾರ್ಟ್ಸ್ ಹಾಕಿಕೊಳ್ಳುವುದನ್ನೇ ಬಿಟ್ಟಿದ್ದಳು. ಕಲ್ಯಾಣಿ  ಮೊದಲ ಬಾರಿ ಅಮ್ಮನ ಸಿಟ್ಟಿಗೆ ಬೆಚ್ಚಿದ್ದು ಅವಳು ಆರು ವರ್ಷದವಳಿದ್ದಾಗ. ಎದುರು ಮನೆಯಲ್ಲಿ ವಾಸವಿದ್ದ ಶಿಶುವಿಹಾರದ ಟೀಚರ್ ಮನೆಯ ಮುಂದೆ ಊರಗಲ ಅರಳಿದ್ದ ಡೇರೆ ಹೂವನ್ನು ಬಾಯಿಬಿಟ್ಟು ಕೇಳಿದಾಗ ಕೊಡದಿದ್ದುದಕ್ಕೆ ಸಿಟ್ಟು ಮಾಡಿಕೊಂಡು, ಅವರು ಮಧ್ಯಾನ್ಹ ಮಲಗಿದ್ದಾಗ ಮೆಲ್ಲನೆ ಗೇಟು ತೆಗೆದು ಕದ್ದು ಕಿತ್ತುಕೊಂಡು ಬ್ಯಾಗಿನಲ್ಲಿಟ್ಟು ಕೊಂಡು ಬಂದಿದ್ದಳು. ಆದರೆ ಬಾಗಿಲಲ್ಲೇ ಎದುರಾದ ಅಮ್ಮ ಎಂದಿನಂತೆ ಬ್ಯಾಗ್ ಕೇಳಿದಾಗ ಕೊಡಲು ಹೆದರಿ, ಅರ್ಜೆಂಟ್ ಆಗಿ ಸುಸು ಮಾಡಬೇಕು ಎಂದು ನೆಪ ಹೇಳಿ ಕೋಣೆಯಲ್ಲಿ ಬ್ಯಾಗ್ ಬಚ್ಚಿಟ್ಟು ಬಂದಿದ್ದಳು. ಊಟ ಮಾಡುವುದೆಂದರೆ ಕಲ್ಯಾಣಿಗೆ ಬಾಲ್ಯದಿಂದಲೂ ಧ್ಯಾನ ಮಾಡಿದಂತೆ. ಎಷ್ಟೋ ಬಾರಿ ಅಪ್ಪ, 'ನಮ್ಮ ಕಲ್ಯಾಣಿಗೆ ಊಟ ಅಂದು ಬಿಟ್ರೆ ಮಾತ್ರ ಬೇರೇನೂ ಬೇಡ. ಅಚ್ಚುಕಟ್ಟಾಗಿ ತಟ್ಟೆಗೆ ಹಾಕಿದ್ದನ್ನೆಲ್ಲಾ ಬಿಡದೆ ತಿಂದೇ ಏಳುವುದು. ಆಮೇಲೆ ಒಂಥರಾ ಹೆಬ್ಬಾವಿನಂತೆ ಮೂಲೆ ಸೇರಿ, ಮೈ ಮುದುರಿಕೊಂಡು ಕುಳಿತುಬಿಡುತ್ತಾಳೆ... ಇತರೆ ಎಂದು ತಮಾಷೆ ಮಾಡುತ್ತಿದ್ದುದು ಅರ್ಥವಾಗದೇ ಸುಮ್ಮನಾಗುತ್ತಿದ್ದಳು.  ಅಂದು ಕೂಡ ಅಮ್ಮ ತಟ್ಟೆಗೆ ಹಾಕಿದ್ದನ್ನೆಲ್ಲಾ ಸಮಾಧಾನದಿಂದ ಚಪ್ಪರಿಸಿಕೊಂಡು ತಿನ್ನುವಾಗ ಬ್ಯಾಗ್ ಒಳಗಿದ್ದ ಡೇರೆ ಹೂವಿನ ಬಗ್ಗೆ ಸಂಪೂರ್ಣವಾಗಿ ಮರೆತೇಬಿಟ್ಟಿದ್ದಳು. ಅಷ್ಟರಲ್ಲಿ ಹಿಂದೆಯೇ ಬಂದ ಶಿಶುವಿಹಾರದ ಟೀಚರ್, "ಏನ್ರೀ ನಿಮ್ಮ ಮಗಳಿಗೆ ಕಳ್ಳತನ ಮಾಡೋದು ನೀವೇ ಹೇಳಿಕೊಟ್ಟಿದೀರಾ? ಅವಳು ಹೂವು ಕದ್ದು ತಂದಿದಾಳೆ ಅಂತಲಾದರೂ ಗೊತ್ತಾ?" ಎಂದು ದಬಾಯಿಸಿಕೊಂಡೇ ಮನೆ ಬಾಗಿಲಿಗೆ ಬಂದಿದ್ದಳು. ಹೊರಗೆ ಜಗಳವಾಗುತ್ತಿರುವುದರ ಪರಿಣಾಮ ಏನಾಗಬಹುದೆಂದು ಊಹಿಸಿರದ ಕಲ್ಯಾಣಿ  ಆಗಲೂ ಏಳಲಿಲ್ಲ. ಇನ್ನೇನು ಮೊಸರನ್ನ ತಿನ್ನುವುದು ಬಾಕಿಯಿತ್ತು. ಅಷ್ಟರಲ್ಲಿ ಅಮ್ಮ ಅವಳ ಬ್ಯಾಗ್ ತೆರೆದು ನೋಡಿ, ಸಿಟ್ಟಿನಿಂದ ಬಂದವಳೇ ಅವಳನ್ನು ನಿಲ್ಲಿಸಿಕೊಂಡು ಕುಂಡಿ ಮೇಲೆ ನಾಲ್ಕು ಬಾರಿಸಿದಳು. ಇದನ್ನು ಎಣಿಸಿರದ ಕಲ್ಯಾಣಿ  ಬೆದರಿ, ಅಳಲು ಶುರು ಮಾಡಿ, ಊಟದ ತುತ್ತು ನೆತ್ತಿಗೇರಿ ಕೆಮ್ಮತೊಡಗಿದಳು. ಅಮ್ಮ ಮತ್ತೆರಡು ಬಿಗಿದು, ಉಸಿರು ನುಂಗು, ಉಸಿರು ನುಂಗು ಎಂದು ಬಯ್ಯುತ್ತಲೇ ಇದ್ದಳು.

"ಅಮ್ಮಾ, ಡಿಡ್ ಯು ಹಿಯರ್ ವಾಟ್ ಐ ಸೆಡ್?" ಚಯನ್ ಅಮ್ಮನ ಕೈ ಹಿಡಿದು ಜಗ್ಗಿದಾಗ ಕಲ್ಯಾಣಿ  ವಾಸ್ತವಕ್ಕೆ ಮರಳಿದಳು. ತನ್ನ ಮಕ್ಕಳು ಎಷ್ಟೇ ಕೆಟ್ಟವರಾದರೂ ತಾನು ಅವರಿಗೆ ಹೊಡೆಯುವುದಿಲ್ಲವೆಂದು ಕಲ್ಯಾಣಿ  ಮದುವೆಗೂ ಮೊದಲೇ ನಿರ್ಧರಿಸಿದ್ದಳು.

"ಇದೊಂದು ಸಲ ಬಂದು ಬಿಡೋ ಮಗನೇ, ಪ್ಲೀಸ್, ನಂಗೆ ತುಂಬಾ ಸುಸ್ತಾಗಿದೆ, ನಿನ್ನ ಒಬ್ಬನನ್ನೇ ಬಿಟ್ಟು ... "

"ಅಮ್ಮ, ನನ್ನ ಫ್ರೆಂಡ್ಸ್ ಬರ್ತಾರೆ, ನಾವು ಮೂವಿ ನೈಟ್ ಮಾಡ್ತೀವಿ, ನೀವು ಬಂದ ಮೇಲೆ ಅವರನ್ನ ಮನೆಗೆ ಬಿಟ್ಟರೆ ಆಯ್ತು." ಅವನು ಆಗಲೇ ಎಲ್ಲಾ ನಿರ್ಧರಿಸಿಯಾಗಿತ್ತು. 

ಚಯನ ಅಜ್ಜಿ ಕೈಲೇ ಬೆಳೆದರೂ, ಅಜ್ಜಿಯ ಯಾವ ಮಾತನ್ನೂ ಕೇಳದೆ ಮೊಂಡು ಹಿಡಿಯುವುದು ಕಲ್ಯಾಣಿಗೆ ವಿಸ್ಮಯವೆನಿಸುತಿತ್ತು. ತಮ್ಮ ಪ್ರಯತ್ನ ವ್ಯರ್ಥವೆನಿಸಿ, ಬರೋಬ್ಬರಿ ಅರ್ಧ ಘಂಟೆಯ ನಂತರ ಅಮ್ಮ ಮಗಳು ಹೊರಗೆ ಬಂದರು.

***

ಮನೆಯ ಒಳಗಿನಿಂದ ಮೂರ್ನಾಲ್ಕು ಹುಡುಗರು ಬಾಯ್ ಆಂಟಿ, ಬಾಯ್ ಅಮ್ಮ ಅಂತೆಲ್ಲಾ ಕೂಗಿದ್ದು ಸುನಿಲ್ ಗೆ ಕೇಳಿಸಿತು. ಡ್ರೈವರ್ ಸೀಟ್ನಲ್ಲಿ ಮತ್ತೆ ಸ್ಥಾಪಿತನಾಗಿ ಗಾಡಿ ಓಡಿಸತೊಡಗಿದನು. ಒಂದು ಹತ್ತು ನಿಮಿಷವಾಗಿರಬಹುದೇನೋ ಅಷ್ಟರಲ್ಲಿ, ಮೇಡಂಗೆ ಫೋನ್ ಬಂದಿತು. ಬಗ್ 2 ಅಂತ ಬ್ಲೂಟೂತ್ ಕನೆಕ್ಟ್ ಆಗಿದ್ದ ಕಾರಿನ ಸ್ಕ್ರೀನ್ ಮೇಲೆ ಕಾಣಿಸಿತು.

"ಬಗ್ಗರ್" ಎಂದು ಬೈದುಕೊಳ್ಳುತ್ತಲೇ ಕಲ್ಯಾಣಿ ಉತ್ತರಿಸಿದಳು.

"ಅಮ್ಮ ಯೂ ಶುಡ್ ಬಿ ಅಶೇಮ್ಡ್ ಆಫ್ ಯುವರ್ ಸೆಲ್ಫ್" ಚಯನ ಕೋಪದಿಂದ ಕಿರುಚುತ್ತಿದ್ದ.

"ಚಯನ್ ಮೈಂಡ್ ಯುವರ್ ಲ್ಯಾಂಗ್ವೇಜ್, ನಾನು ಸುಮ್ನೆ ಇರ್ತೀನೀಂತ ... "

"ಅದೇ ಉಗಿ ಸ್ವಲ್ಪ, ಹೆಂಗೆ ಬೇಕೋ ಹಂಗೆ ಮಾತಾಡ್ತಾನೆ ಸ್ವಲ್ಪಾನು ... " ಅಮ್ಮನ ಸಿಕ್ಕಿದ್ದೇ ಚಾನ್ಸ್ ಅಂತ ಗೊಣಗಲು ಶುರು ಮಾಡಿದರು. ಸುನಿಲಗೆ ಏನೂ ಅರ್ಥವಾಗದಿದ್ದರೂ ಏನೋ ಎಡವಟ್ಟಾಗಿದೆ ಎನ್ನುವುದು ಗಮನಕ್ಕೆ ಬಂತು. ಇನ್ನು ವಾಪಸ್ ಮನೆಗೆ ಹೋಗಲು ಹೇಳಬಹುದು ಎಂದೂ ಆಶಿಸತೊಡಗಿದ.

"ನಾನು ನನ್ನ ಫ್ರೆಂಡ್ಸ್ ಟಿವಿನಲ್ಲಿ ಯು ಟ್ಯೂಬ್ ಹಾಕಿಕೊಂಡು ಗೇಮ್ಸ್ ವೀಡಿಯೋಸ್ ನೋಡೋಣಾಂತ ಹಾಕಿದ್ರೆ, ನಿನ್ನ ಅಕೌಂಟ್ ನಲ್ಲಿ ಏನ್ ಏನ್ ಪಾಪ್ ಅಪ್ ಬರ್ತಿದೆ ಗೊತ್ತಾ? ನನ್ನ ಫ್ರೆಂಡ್ಸ್ ಎದುರಿಗೆ ನನಗೆ ಎಷ್ಟು ಇನ್ಸಲ್ಟ್ ಆಯ್ತು." ಚಯನನ ದ್ವನಿಯಲ್ಲಿ ಸಿಟ್ಟಿನ ಜೊತೆ ಸ್ವಲ್ಪ ಸ್ವಾನುಕಂಪವೂ ಸೇರಿತ್ತು. ಕಲ್ಯಾಣಿಗೆ ಈಗ ಕೊಂಚ ದಿಗಿಲಾಯಿತು. ಅಂಥದ್ದು ಏನು ನೋಡಿರಬಹುದೆಂದು ಹೊಳೆಯಲೇ ಇಲ್ಲ.

"ಅಮ್ಮ, ಯು ಹ್ಯಾವ್ ಬೀನ್ ವಾಚಿಂಗ್ ಪೋರ್ನ್ ಲೈಕ್ ಥಿಂಗ್ಸ್. ಥು ಅಸಹ್ಯ."  ಎಂದು ಚಯನ ಫೋನಿನಲ್ಲಿ ಕಿರುಚಿದ್ದು ಕಾರಿನ ಸ್ಪೀಕರ್ ಗಳಿಂದ ರಪ್ಪೆಂದು ಎಲ್ಲರ ಕಿವಿ ಮೇಲೆ ಅಪ್ಪಳಿಸಿತು.

ಎಂಥದ್ದೇ ಸಮಯದಲ್ಲಿಯೂ ಧೈರ್ಯ ಕಳೆದುಕೊಳ್ಳದೆ, ನಮ್ಮದೇ ತಪ್ಪಿದ್ದರೂ ಭಂಡ ಬೀಳಬೇಕೆನ್ನುವುದನ್ನು ಹೆಚ್ಚು ಕಡಿಮೆ ಅನಾಥೆಯಾಗಿಯೇ, ಚಿಕ್ಕಪ್ಪನ ಮನೆಯಲ್ಲಿ ಬೆಳೆದ ಅಮ್ಮನಿಂದಲೇ ಕಲಿತಿದ್ದಳು ಕಲ್ಯಾಣಿ. ಶತ್ರು ದಾಳಿಯಿಂದ ತಪ್ಪಿಸಿಕೊಳ್ಳುವ ಅತ್ಯುತ್ತಮ ಉಪಾಯವೆಂದರೆ ಮೊದಲು ನಾವೇ ದಾಳಿ ಮಾಡಬೇಕು ಎನ್ನುವುದನ್ನು ದಶಕಕ್ಕೂ ಹೆಚ್ಚು ಕಾಲ ದುಡಿದ ಕಾರ್ಪೊರೇಟ್ ಆಫೀಸ್ ಕೆಲಸ ಕಲಿಸಿತ್ತು.

"ಸೋ ಯು ಆಲ್ಸೋ ನೋ ವಾಟ್ ಈಸ್ ಪೋರ್ನ್? ಹೌ?" ಕಲ್ಯಾಣಿ  ಸಿಟ್ಟು, ಅಪಮಾನಗಳಿಂದ ಕುದಿಯುತ್ತಲೇ ಪ್ರಹಾರ ಮಾಡಿದಳು. "ಆನ್ಲೈನ್ ಕ್ಲಾಸ್ ಅಟೆಂಡ್ ಮಾಡ್ತಿದೀಯ ಅಂದುಕೊಂಡಿದ್ರೆ ಇದೆಲ್ಲಾ ಮಾಡ್ತಿಯಾ? ನಾಳೇನೇ ನಿಮ್ಮ ಟೀಚರ್ ಗೆ ಹೇಳ್ತೀನಿ ತಾಳು, ಮೊದ್ಲು ಟಿವಿ ಆಫ್ ಮಾಡಿ, ಊಟ ಮಾಡಿರಿ ಎಲ್ಲಾ. ಬೇರೆ ಏನಾದ್ರು ಬೋರ್ಡ್ ಗೇಮ್ಸ್ ಆಡಿ." ಎಂದು ಹೇಳಿ ಫೋನ್ ಕಟ್ ಮಾಡಿದಳು. ಮತ್ತೆ ಫೋನ್ ಬಂದಾಗ, "ಲುಕ್ ಚಯನ್, ಅಮ್ಮ ಅಂಥದ್ದನ್ನು ನೋಡುವಷ್ಟು ದೊಡ್ಡೋರು, ಓಕೆ? ಅದು ತಪ್ಪಲ್ಲ. ಮಕ್ಕಳು ನೋಡಿದ್ರೆ ... " ಅಂತೆಲ್ಲಾ ಹೇಳುವಾಗ, ಅತ್ತಲಿಂದ ಚಯನ್, "ಐ ಹೇಟ್ ಯು." ಎಂದು ಫೋನ್ ಕಟ್ ಮಾಡಿದ.  

ಒಂದೆರಡು ನಿಮಿಷದ ದಿವ್ಯ ಮೌನದ ನಂತರ ಕಲ್ಯಾಣಿ  ಅರಿವಿಗೆ ಬಂದಿದ್ದೇನೆಂದರೆ, ಸುನಿಲ್ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಬಿಟ್ಟಿದ್ದ. ಅವನೊಂದಿಗೆ ಅಮ್ಮನೂ ಅವಳ ಕಡೆಯೇ ನೋಡುತ್ತಿದ್ದರು. 'ಒಂದು ಕ್ಯಾಬ್ ಬುಕ್ ಮಾಡಿಕೊಳ್ಳಿ ಅಂದ್ರೆ ನಂಗೆ ಅವೆಲ್ಲ ಗೊತ್ತಾಗಲ್ಲ ಅಂತಾರೆ, ಆದ್ರೆ ಪೋರ್ನ್ ಅಂದ್ರೆ ಏನುಂತ ಮಾತ್ರ ಗೊತ್ತು ಇವ್ರಿಗೆ' ಎಂದು ಮನದಲ್ಲೇ ಬೈದುಕೊಂಡಳು. ಪರಿಸ್ಥಿತಿಯನ್ನು ಕೈ ಮೀರಲು ಬಿಡಬಾರದೆಂದು ಅರಿವಾಗಿ, "ಏನು ಹಾಗೆ ನೋಡ್ತಾ ಇದ್ದೀಯ, ತಿಕ ಮುಚ್ಕೊಂಡು ಓಡಿಸು ಗಾಡಿ." ಎಂದು ರೇಗಿದಳು. ಬೆದರಿ ಮುಂದೆ ತಿರುಗಿದ ಸುನಿಲ ಯಾವುದೇ ಮಾತನ್ನಾಡದೆ, ಕಾರನ್ನು ಆಫ್ ಮಾಡಿ, ಇಳಿದು ಹೋಗಿ ಬಿಟ್ಟ! ಕಲ್ಯಾಣಿಗೆ ತಲೆ ಕೆಟ್ಟಿತು. ಆಗಲೇ ಕತ್ತಲಾಗಿತ್ತು. ಯಾವುದೋ ನಿರ್ಜನ ರಸ್ತೆಯಲ್ಲಿದ್ದೇವೆ ಅನಿಸಿ ಒಂದು ಕ್ಷಣ ಕಲ್ಯಾಣಿ  ಕೂಡ ಬೆದರಿದಳು.

"ಏಯ್, ಎಲ್ಲಿಗೆ ಹೋಗ್ತಿದೀಯಾ? ಕಮ್ ಬ್ಯಾಕ್ ಯು ಸ್ಟುಪಿಡ್." ಎಂದು ಚೀರಿದಳು. ಆದರೆ ಸುನಿಲ್ ಹಿಂದೆ ಕೂಡ ತಿರುಗಿ ನೋಡದೆ ನಡೆದು ಹೋಗುತ್ತಿದ್ದ. ಕಲ್ಯಾಣಿ  ಪೆಚ್ಚಾಗಿ ನೋಡುತ್ತಲೇ ಇರುವಾಗ, ಸುನಿಲ್ ಯಾವುದೋ ಬಸ್ಸು ಹತ್ತಿದಂತೆನಿಸಿತು. ಸಾಫ್ಟವೇರ್ ಎಂಜಿನಿಯರ್ ಆಗಿ ತಾನು ಇಷ್ಟು ಕೇರ್ ಲೆಸ್ ಹೇಗಾದೆ, ಹಿಸ್ಟರಿ ಡಿಲೀಟ್ ಮಾಡುವುದು ಯಾಕೆ ಮರೆತೇ ಎಂದೆಲ್ಲಾ ಯೋಚಿಸುತ್ತ ಕುಳಿತೇ ಇದ್ದಳು. ಇವರಿಬ್ಬರೂ ಇಷ್ಟು ಓವರ್ ರಿಯಾಕ್ಟ್ ಮಾಡುವಂಥದ್ದು ನಾನೇನು ಮಾಡಿದೆ? ಎಂದು ತನ್ನನ್ನೇ ತಾನು ಅಚ್ಚರಿಯಿಂದ ಕೇಳಿಕೊಳ್ಳುತ್ತಿದ್ದಳು.

"ಈಗೇನು, ಇಲ್ಲೇ ಇರೋದಾ ಇಲ್ಲಾ ಚಿಕ್ಕಿ ಮನೆಗೆ ಹೋಗೋದಾ? ಮನೆಗೆ ಮಾತ್ರ ತಿರುಗಿಸಬೇಡಮ್ಮ. ಆ ಹುಡುಗು ಮುಂಡೇವು ಪಿಜ್ಜಾ ಅಂತೇನೋ ತರಿಸಿಕೊಂಡಿರ್ತವೆ. ನನಗೆ ಅದು ತಿನ್ನೋಕಾಗಲ್ಲ. ಬೇರೆ ಅಡಿಗೇನೂ ಮಾಡಿಸಿಲ್ಲ ನಾನು." ಅಮ್ಮನ ಗೊಣಗಾಟ ಎಂಥ ಹೊತ್ತಲ್ಲೂ ಅವಳ ಸುತ್ತಲೇ ಇರುತ್ತದೆ, ಎನ್ನುವುದು ಕಲ್ಯಾಣಿಗೆ ಆ ಸಮಯದಲ್ಲಿ ಗಮನಕ್ಕೆ ಬಂದಿತು. ಪಿಜ್ಜಾ ಇಷ್ಟವಿಲ್ಲ ಎನ್ನುವುದಕ್ಕಿಂತ ಅದಕ್ಕೆ ಸಾವಿರಾರು ರೂಪಾಯಿಗಳನ್ನು ಕೊಟ್ಟು ತರಿಸುತ್ತಾರೆ ಎನ್ನುವುದು ಅಮ್ಮನ ಮುಖ್ಯ ಆಕ್ಷೇಪ  ಎನ್ನುವುದು ಕಲ್ಯಾಣಿಗೆ ತಿಳಿಯದ ವಿಷಯವೇನಲ್ಲ. ಆದರೆ ಹಣದ ಪ್ರಸ್ತಾಪವಾದ ಕೂಡಲೇ ಅಮ್ಮ ತಾನು ಎಷ್ಟೆಲ್ಲಾ ಕಷ್ಟ ಪಟ್ಟು ಹೊಟ್ಟೆ ಬಟ್ಟೆ ಕಟ್ಟಿ ನಿನ್ನನ್ನು ಬೆಳೆಸಿದ್ದೇನೆ ಎಂದು ಮತ್ತೆ ಮತ್ತೆ ಅದೇ ಕ್ಯಾಸೆಟ್ ಹಾಕಿ ಇಂದು ಲಕ್ಷಾಂತರ ಸಂಬಳ ತೆಗೆದು ಕೊಳ್ಳುವ ಮನಸೋ ಇಚ್ಛೆ ಖರ್ಚು ಮಾಡುವ ತನ್ನನ್ನು ತಪ್ಪಿತಸ್ಥೆಯನ್ನಾಗಿ ಮಾಡಿಬಿಡುತ್ತಿದ್ದಳು. ಅಮ್ಮನಿಗಾಗಿ ಎಂದು ಇಷ್ಟ ಪಟ್ಟು ಒಂದು ಸೀರೆಯನ್ನೋ, ಒಡವೆಯನ್ನೋ ತಂದೊಡನೆ ಮೊದಲು ಬಿಲ್ ನೋಡಿ ನೀನು ಮೋಸ ಹೋಗಿದ್ದೀಯ, ಇದು ಅಷ್ಟು ಬಾಳುವುದಿಲ್ಲ ಎಂದು ಬಿಡುತ್ತಿದ್ದಳು. ಕಷ್ಟದ ದಿನಗಳು ಮುಗಿದರೂ ಅಮ್ಮ ಮಾತ್ರ ಕಷ್ಟವನ್ನೇ ನೆನೆದು ನೆನೆದು ಜೀವಂತವಾಗಿಟ್ಟುಕೊಳ್ಳುತ್ತಿದ್ದುದು ಕಲ್ಯಾಣಿಯ ಅರಿವಿಗೆ ನಿಲುಕದ ವಿಚಾರವಾಗಿತ್ತು.   

'ಇನ್ನು ಹೀಗೇ ಕುಳಿತಿರಲು ಆಗದು, ಮತ್ತೆ ಕೆಲಸ ಕೇಳಿಕೊಂಡು ಬಂದಾಗ ನೋಡಿಕೊಳ್ಳುವೆ ಈ ಬೇವರ್ಸಿಯನ್ನು' ಎಂದು ಮನದಲ್ಲೇ ಬೈದುಕೊಂಡು, ಕಲ್ಯಾಣಿ ಹೆಚ್ಚು ಮಾತನಾಡದೆ, ಅಮ್ಮನನ್ನು ಸರಸರನೆ ಚಿಕ್ಕಮ್ಮನ ಮನೆ ಬಾಗಿಲಲ್ಲಿ ಬಿಟ್ಟು, "ನಂಗೆ ಅರ್ಜೆಂಟ್ ಕೆಲಸ ಇದೆ, ಆಫೀಸ್ಗೆ ಹೋಗಲೇಬೇಕು, ಕಾಲ್ ಇಟ್ಟುಬಿಟ್ಟಿದಾರೆ, ನೀನು ಊಟ ಮುಗಿಸಿಕೋ, ಒಂದೆರಡು ಘಂಟೆಗೆಲ್ಲಾ ಬರ್ತೀನಿ" ಎಂದವಳೇ ಅಮ್ಮನ ಉತ್ತರಕ್ಕೂ ಕಾಯದೆ ಗಾಡಿ ತಿರುಗಿಸಿದಳು. ಕೆಂಗೇರಿ ದಾಟಿ ಒಂದು ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಕುಳಿತಳು. ಡೇರೆ ಹೂವು ಕದ್ದಿದ್ದಕ್ಕೆ ಅಮ್ಮ ಅಷ್ಟು ಜೋರಾಗಿ ಹೊಡೆದದ್ದು ನೆನಪಾಗಿ ಬಹಳ ಅಳು ಬಂದಿತು. ಗೊಳೋ ಎಂದು ಅಳತೊಡಗಿದಳು. ಅಷ್ಟು ಪೆಟ್ಟು ತಿಂದರೂ, ತಾನು ಮಾಡುತ್ತಿರುವುದು ತಪ್ಪು ಎಂದು ಅರಿವಾಗುವಷ್ಟು ಬೆಳೆದರೂ ತಾನು ಕದಿಯುವುದನ್ನು ನಿಲ್ಲಿಸಿಯೇ ಇಲ್ಲವೆನ್ನುವುದು ಅವಳಿಗೆ ಮತ್ತಷ್ಟು ದುಃಖ ತಂದಿತು.

ಮಗನಿಂದ ಕಣ್ಣು ತಪ್ಪಿಸುವುದು, ಅಮ್ಮ ಕೊಡುವ ಸಲಾಡ್ ತುಂಬಿದ ಊಟದ ಡಬ್ಬಿ ಬದಲು ಕ್ಯಾಂಟೀನ್ ನಲ್ಲಿ ಹೆವಿ ಊಟ ಕದ್ದು ತಿನ್ನುವುದು, ಗಂಡನ ಫೋನ್ ಹ್ಯಾಕ್ ಮಾಡಿ ಕದ್ದು ನೋಡುವುದು, ಬಾಸ್ ನಿಂದ ಸಮಯ ಕದಿಯುವುದು, ಟೀಮ್ ಮಾಡಿದ ಕೆಲಸಕ್ಕೆ ಕ್ರೆಡಿಟ್ ಕದಿಯುವುದು, ಆ ಡ್ರೈವರ್ ಸುನಿಲನಿಂದ ಅವನ ಆತ್ಮಗೌರವ ಕದ್ದು... ಒಂದೇ ಎರಡೇ ... 

ಮತ್ತೆ ಆಫೀಸ್ ನಲ್ಲಿ ಮೋನಿಕಾ ಜೊತೆ ತಾನು ನಡೆದುಕೊಂಡ ರೀತಿಯನ್ನು ನೆನೆದು ಕಲ್ಯಾಣಿ  ಮತ್ತಷ್ಟು ಕುಗ್ಗಿದಳು. ತಾನು ಎಕ್ಸ್ಟ್ರಾ ಸ್ಮಾಲ್ ಸೈಜ್ ಬಟ್ಟೆ ತೆಗದುಕೊಂಡರೂ ತನಗದು ಸಡಿಲವಾಗುತ್ತದೆ, ದೊಗಳೆಯಾಗುತ್ತದೆ ಎನ್ನುವುದನ್ನು ಬೇಕೆಂತಲೇ ಕಲ್ಯಾಣಿ  ಮುಂದೆ ಹೇಳುತ್ತಿದ್ದ ಮೋನಿಕಾಳ ಮೇಲೆ ಬಹಳ ಸಿಟ್ಟಿತ್ತು. 'ಅವಳು ತನ್ನ ಟೇಬಲ್ ಮೇಲೆ ಇಟ್ಟುಕೊಂಡಿದ್ದ ಮನಿ ಪ್ಲಾಂಟ್ ಗಿಡ ನನ್ನ ಕೇಬಿನ್ ನ ಬಳ್ಳಿಯಿಂದ ಮುರಿದಿರುವುದು, ಅದನ್ನು ಮುರಿದುಕೊಳ್ಳುವಾಗ ಇಡೀ ಬಳ್ಳಿಯನ್ನೇ ಬುಡ ಮೇಲು ಮಾಡಿದ್ದಾಳೆ' ಎಂದು ಕಲ್ಯಾಣಿ ಎಲ್ಲರ ಮುಂದೆ ಆರೋಪಿಸಿದ್ದಳು. ಕಿಟಕಿ ಸರಳುಗಳಿಗೆ ಸೊಂಪಾಗಿ ಹಬ್ಬಿಕೊಂಡಿದ್ದ ಬಳ್ಳಿ ನಿಜಕ್ಕೂ ನೋಡಿದವರಿಗೆ ಕಲ್ಯಾಣಿ  ಮೇಲೆ ಕನಿಕರ ಬರುವಂತೆ ತುಂಡು ತುಂಡಾಗಿ ನೆಲದ ಮೇಲೆ ಬಿದ್ದಿತ್ತು. ಕುಂಡದಿಂದ ಕೆದಕಿ ಕೆದಕಿ ಹೊರ ಚೆಲ್ಲಿದ್ದ ಮಣ್ಣು ನೋಡಿ, ಆಫೀಸ್ನಲ್ಲಿದ್ದವರೆಲ್ಲಾ ಒಂದೇ ಕ್ಷಣಕ್ಕೆ ಮೊನಿಕಾಳದ್ದೆ ಕೆಲಸವೆಂದು ನಂಬಿ, ಅವಳನ್ನು ಎಷ್ಟು ಕೀಳಾಗಿ ನೋಡಿದ್ದರು. ಎಲ್ಲರ ಅನುಕಂಪ ಕಲ್ಯಾಣಿ  ಮೇಲೆಯೇ ಇತ್ತು. ಆದರೆ ಮರು ದಿನ ಅಲ್ಲಲ್ಲಿ ಬಿದ್ದಿದ್ದ ಇಲಿ ಪಿಕ್ಕೆಯನ್ನು ನೋಡಿದಾಗ ನಿಜವೇನೆಂದು ಕಲ್ಯಾಣಿಗೆ ಅರಿವಾಗಿತ್ತು. ಆದರೂ ಅದನ್ನು ಯಾರ ಮುಂದೆಯೂ ಹೇಳದೆ, ಮೊನಿಕಾಳನ್ನೇ ವಿಲನ್ ಆಗಿಸಿದ್ದಳು. ಅವಳಿಂದ ಅವಳ ಇಮೇಜ್ ಕದ್ದಿದ್ದಳು. 

ಆದರೆ ಇನ್ನು ಕದಿಯುವುದು ಸಾಕಾಗಿತ್ತು. ಬೇರೆ ಏನಾದರೂ ಮಾಡಲೇ ಬೇಕೆಂದು ಅನಿಸುತ್ತಿತ್ತು. ಆ ರಾತ್ರಿ ಹೊತ್ತು, ಒಬ್ಬಳೇ ಕಾರಿನಲ್ಲಿ ಕುಳಿತು ಅಳುವಾಗ, ಒಂದು ತೀರ್ಮಾನಕ್ಕೆ ಬಂದಳು. ಹೌದು ಕೊಲೆ! ಅದೇ ಸರಿಯಾದ ದಾರಿ. ತನಗೆ ಸಿಟ್ಟು ಬರಿಸುವವರನ್ನೆಲ್ಲಾ ಕೊಲ್ಲಬೇಕೆಂದು ನಿರ್ಧರಿಸಿದಳು. ಮೊದಲು ಯಾರು ಎಂದು ಯೋಚಿಸುತ್ತಿರುವಾಗ ತಕ್ಷಣ ಹೊಳೆದಿದ್ದು ನಡು ರಸ್ತೆಯಲ್ಲಿ ಅಮ್ಮನೆದುರು ಅಪಮಾನ ಮಾಡಿದ ಸುನಿಲ್. ಹೌದು ಬಹಳ ದೂರ ಹೋಗಿರಲಿಕ್ಕಿಲ್ಲ. ಅವನೇ ಮೊದಲ ಬಲಿ!

ಲ್ಯಾಪ್ಟ್ಯಾಪ್ ಓಪನ್ ಮಾಡಿಕೊಂಡು ಕುಳಿತಳು.  ಅವಳ ಕಣ್ಣುಗಳು ಹೊಳೆಯುತ್ತಿದ್ದವು!

***

ಚಯನ, ಇಂದಾದರೂ ಅಮ್ಮ ಸಿಕ್ಕಿ ಬಿದ್ದಳು, ಅವಳಿಗೆ ಬುದ್ದಿ ಕಲಿಸಬೇಕೆಂದುಕೊಂಡಿದ್ದ. ಆದರೆ ಅಮ್ಮ ಅವನ ಗುಟ್ಟನ್ನೂ ತಿಳಿದುಕೊಂಡು, ಬೈದು ಪ್ಲಾನ್ ಹಾಳು ಮಾಡಿದ್ದಳು. ತನ್ನ ಸ್ನೇಹಿತರ ಗಮನ ಬೇರೆಡೆ ತಿರುಗಿಸಲು ಏನಾದರೂ ಮಾಡಬೇಕಿತ್ತು.  ಅಜ್ಜಿಯ ಮಾತನ್ನು ಕೇಳಿಕೊಂಡು ಅಮ್ಮ ತನ್ನನ್ನು ಎಲ್ಲಿ ಹುಚ್ಚಾಸ್ಪತ್ರೆಗೆ ಸೇರಿಸಿಬಿಡ್ತಾಳೋ ಎಂದು ಹೆದರಿ ಅವನು ಎಷ್ಟೋ ದಿನಗಳಿಂದ ಪಬ್ಜಿ ವಿಡಿಯೋ ಗೇಮ್ ಆಡಿರಲಿಲ್ಲ. ಆದರೆ ಈಗ ಅದೇ ಒಳ್ಳೆಯ ಉಪಾಯವೆನಿಸಿ ಸ್ನೇಹಿತರಿಗೆಲ್ಲಾ ವೈ ಫೈ ಪಾಸ್ ವರ್ಡ್ ಕೊಟ್ಟು, ಎಲ್ಲರನ್ನೂ ಅವರವರ ಮೊಬೈಲ್ ನಲ್ಲಿ ಆಟಕ್ಕೆ ಕೂರಿಸಿಕೊಂಡನು. ಕೆಲವೇ ನಿಮಿಷಗಳಲ್ಲಿ ಆಟದಲ್ಲಿ ಎಲ್ಲಾ ಕಳೆದುಹೋದರು. ಎಷ್ಟೋ  ದಿನಗಳ ಬಳಿಕ ಆಡತೊಡಗಿದ್ದರಿಂದ ಚಯನ್ ಬಹಳ ಖುಷಿಯಾಗಿ ಆಡುತಿದ್ದ. ಮೊದಲು ಒಬ್ಬೊಬ್ಬರೇ ಆಡಿದರು, ನಂತರ ಸ್ಕ್ವಾಡ್ ಮಾಡಿಕೊಂಡು ನಾಲ್ಕು ಜನ ಒಟ್ಟಿಗೇ ಆಡಿದರು. ಯಾಕೋ ಆಟದಲ್ಲಿ ಮೊದಲಿನಷ್ಟು ಹೊತ್ತು ಉಳಿಯಲು ಆಗುತ್ತಲೇ ಇರಲಿಲ್ಲ. ಹೆಲಿಕಾಪ್ಟರ್ ನಿಂದ ದ್ವೀಪದ ಮೇಲೆ ಇಳಿಯುತ್ತಲೇ, ಒಂದೆರಡು ನಿಮಿಷಗಳಲ್ಲಿ, ಒಂದೂ ಕಿಲ್ ಕೂಡ ಮಾಡಲಾಗದೇ ಹೋಗಿಬಿಡುತ್ತಿದ್ದರು. ಎಲ್ಲರೂ ಬೇಗ ಬೇಗ ಶೂಟ್ ಆಗಿ, ಸತ್ತು, ಹಸಿರು ಹೊಗೆಯಾಗಿ ಮರೆಯಾಗುತ್ತಿದ್ದರು. ಸ್ವಲ್ಪ ಹೊತ್ತು ಗಮನಿಸಿದಾಗ ಚಯನ್ ಗೆ ಬಗ್ ಕಿಲ್ಲರ್ ಎನ್ನುವ ಹೆಸರಿನಲ್ಲಿ ಹೊಸ ಆಟಗಾರ ಸೇರಿಕೊಂಡಿದ್ದು ಅರಿವಾಯಿತು. ಅವನು ಯಾವುದೋ ಕಿಚ್ಚಿಗೆ ಬಿದ್ದವನಂತೆ ಸಿಕ್ಕ ಸಿಕ್ಕವರನ್ನೆಲ್ಲಾ ಕೊಚ್ಚಿ ಹಾಕುತ್ತಿದ್ದ. ಮಿಂಚಿನ ವೇಗದಲ್ಲಿ ಎಲ್ಲರನ್ನೂ ಶೂಟ್ ಮಾಡಿ ಸಾಯಿಸಿ, ಮುಂದೆ ಹೋಗುತ್ತಿದ್ದ. ಸತ್ತವರ ಬಂದೂಕು, ಇತರೆ ನಿಧಿಗಳನ್ನು ಸ್ವಲ್ಪವೂ ತಡಮಾಡದೆ ಲೂಟಿ ಮಾಡುತ್ತಿದ್ದ. ನಾಲ್ಕಾರು ಆಟಗಳಲ್ಲಿ  ಅವನೇ ಗೆದ್ದು, ವಿನ್ನರ್ ವಿನ್ನರ್ ಚಿಕನ್ ಡಿನ್ನರ್ ಎಂದು ಬೀಗಿದ. ಕೆಲಹೊತ್ತಿಗೇ ಎಲ್ಲರಿಗೂ ಅವನನ್ನು ಮಾತನಾಡಿಸಬೇಕೆಂದು ಆಸೆಯಾಯಿತು. ಆದರೆ ಅವನು ಮಾತನಾಡುತ್ತಿರಲಿಲ್ಲ. ಹಾಗೇ ಎಷ್ಟೋ ಹೊತ್ತು ಆಡಿದ ಮೇಲೆ ಬಗ್ ಕಿಲ್ಲರ್ ಮರೆಯಾಗಿಬಿಟ್ಟ. ಎಲ್ಲರೂ ನಿರಾಳವಾಗಿ ಮತ್ತೆ ಆಡುತ್ತಿರುವಾಗ ಬಾಗಿಲು ಬಡಿದ ಸದ್ದಾಯಿತು. ಆಗಲೇ ಅವರಿಗೆಲ್ಲಾ ತಾವು ಸತತವಾಗಿ ಮೂರು ಘಂಟೆಗಳು ಆಟವಾಡಿದ್ದೇವೆಂದು ಅರಿವಾಯಿತು. ಚಕ್ಕನೆ ಗೇಮ್ ನಿಂದ ಹೊರಬಂದು ಚೆಸ್ ಬೋರ್ಡ್ ಹಿಡಿದುಕೊಂಡು ಕುಳಿತರು. ಕಲ್ಯಾಣಿ  ಮಗನ ಮುಖ ನೋಡದೆ ತನ್ನ ಕೋಣೆಗೆ ಹೋಗಿ ಮಲಗಿಬಿಟ್ಟಳು. ಅಜ್ಜಿ ಮಾತ್ರ ಮೊಮ್ಮಗನಿಗೇ ತನ್ನ ಗೋಳು ಹೇಳಿಕೊಂಡಳು, "ನಿಮ್ಮಮ್ಮ ನನ್ನನ್ನು ಅಲ್ಲಿ ಉದುರಿಸಿ ಆಫೀಸ್ ಕೆಲಸ ಅಂತ ಹೋಗಿಬಿಟ್ಟಳು ಗೊತ್ತಾ? ನನಗಂತೂ ಊಟ ಮುಗಿಸಿ ಕಾದು ಕಾದು ಸಾಕಾಯ್ತು. ಅದೇನು ಕೆಲ್ಸವೋ ಏನೋ,"

"ಅಂದ್ರೆ ಅಮ್ಮ ಚಿಕ್ಕಜ್ಜಿ ಮನೆಯಲ್ಲಿ ಇರಲಿಲ್ವಾ?" ಚಯನ್ ಅಚ್ಚರಿಯಿಂದ ಕೇಳಿದನು. ಅಮ್ಮನಿಗೆ ತನ್ನ ಕೈಲಿ ಸಿಕ್ಕಿಕೊಂಡಿದ್ದು ಬೇಸರವಾಗಿರಬೇಕೆಂದುಕೊಂಡನು. ಅವಳ ಕೋಣೆಯ ಬಾಗಿಲು ಮೆಲ್ಲಗೆ ತೆರೆದು "ಅಮ್ಮಾ, ಐ ಯಾಮ್ ಸಾರಿ," ಎಂದು ಹೇಳಿದ.

"ಓಹ್, ಬಟ್ ಯು ಜಸ್ಟ್ ಡೈಡ್" ಎಂದು ಕಲ್ಯಾಣಿ  ಹೇಳಿದಾಗ, ಇದುವರೆಗೂ ಗೇಮ್ ಆಡುವಾಗ ಸ್ನೇಹಿತರು ಅದನ್ನೇ ಹೇಳುತ್ತಿದ್ದುದು ಕಿವಿಗಪ್ಪಳಿಸಿದಂತಾಗಿ ಚಯನ್ ಹೆದರಿದ. ಅಂದರೆ ಅಮ್ಮನಿಗೆ ನಾವು ವಿಡಿಯೋ ಗೇಮ್ ಆಡುತ್ತಿದ್ದುದು ಗೊತ್ತಾಗಿದೆ ಎಂದು ಹೆಚ್ಚು ಮಾತನಾಡದೆ ಹೊರಗೆ ಬಂದು ಬಿಟ್ಟ. 

***

ಮುಂದಿನ ದಿನಗಳಲ್ಲಿ ಅಮ್ಮ ತನ್ನೊಂದಿಗಷ್ಟೇ ಅಲ್ಲ ಯಾರೊಂದಿಗೂ ಹೆಚ್ಚು ಮಾತನಾಡುತ್ತಿಲ್ಲವೆನ್ನುವುದು ಅವನ ಗಮನಕ್ಕೆ ಬಂದಿತು. ಯಾವಾಗಲೂ ಕಾಲ್ ಇದೆಯೆಂದು ಕೋಣೆ ಸೇರಿಬಿಡುತ್ತಿದ್ದಳು. ಚಯನ್ ಮತ್ತು ಅಜ್ಜಿ ಎಷ್ಟೇ ಜಗಳವಾಡಿಕೊಂಡರೂ ಕಲ್ಯಾಣಿ  ತಾಳ್ಮೆ ಕಳೆದುಕೊಳ್ಳದೆ ಸುಮ್ಮನಿರುತ್ತಿದ್ದಳು. ಅವಳ ಬಾಯಿಂದ ಒಂದೂ ಬೈಗುಳವಿರಲಿ, ಕೋಪದ, ವ್ಯಂಗ್ಯದ, ತಿರಸ್ಕಾರದ ಮಾತುಗಳೂ ಬರುತ್ತಾ ಇರಲಿಲ್ಲ. ಇದರಿಂದ ಅವರಿಬ್ಬರ ಜಗಳ, ವಿತಂಡ ವಾದಗಳು ಮತ್ತಷ್ಟು ಹೆಚ್ಚಿದವು.  "ಇವನನ್ನು ಹಾಸ್ಟೆಲ್ಲಿಗೆ ಹಾಕು, ಹುಚ್ಚಾಸ್ಪತ್ರೆಗೆ ಸೇರಿಸು" ಅಂತೆಲ್ಲಾ ಅಜ್ಜಿ ಕೂಗಾಡುವುದು ಹೆಚ್ಚಾಯಿತು. ಊಟ ಬಿಡುವುದು, ಮಾತ್ರೆಗಳನ್ನು ನುಂಗದಿರುವುದು, ಕೋಣೆಯಿಂದ ಹೊರಗೇ ಬರದಿರುವುದು, ಯಾರಾದರೂ ಮನೆಗೆ ಬಂದರೆ ಅವರೆದುರು ತನ್ನಂಥ ನತದೃಷ್ಠೆಯೇ ಇಲ್ಲವೆಂದು ಗೋಳಾಡುವುದು ಎಲ್ಲಾ ಸಾಮಾನ್ಯವಾಗತೊಡಗಿತು. ಕಲ್ಯಾಣಿ  ಮಾತ್ರ ಎಲ್ಲದರಿಂದ ದೂರವಿದ್ದುಬಿಟ್ಟಳು. ಚಯನ್ ಯಾರೂ ಹೇಳುವವರಿಲ್ಲದೆ, ಕೇಳುವವರಿಲ್ಲದೆ ಮತ್ತೆ ಮತ್ತೆ ವಿಡಿಯೋ ಗೇಮ್ ಅಡತೊಡಗಿದ. ಎಷ್ಟೋ ಬಾರಿ ಚಯನ್ ಗೆ ನಡುರಾತ್ರಿ ನೀರು ಕುಡಿಯಲು ಎದ್ದು ಕೋಣೆಯಿಂದ ಹೊರಗೆ ಬಂದರೆ, 'ವಿನ್ನರ್ ವಿನ್ನರ್ ಚಿಕನ್ ಡಿನ್ನರ್' ಎನ್ನುವ ಹಾಡು ಕೇಳಿಸುತ್ತಿದೆಯೆಂದು ಭ್ರಮೆಯಾಗತೊಡಗಿತು. ತನಗೆ ನಿಜಕ್ಕೂ ಹುಚ್ಚು ಹಿಡಿದಿದೆಯೇ ಎಂದು ಹೆದರಿದ. 

ಚಯನ್ ಒಮ್ಮೆ ಅಪ್ಪನಿಗೆ ಫೋನ್ ಮಾಡಿ, "ಅಪ್ಪ, ಯಾಕೋ ಅಮ್ಮ ಮತ್ತು ಅಜ್ಜಿ ಇಬ್ಬರೂ ವಿಚಿತ್ರವಾಗಿ ಆಡುತ್ತಿದ್ದಾರೆ, ಕ್ಯಾನ್ ಯೂ ಕಮ್ ಬ್ಯಾಕ್?" ಎಂದು ಕೇಳಿದ.

"ಆ ಹುಚ್ಚಾಸ್ಪತ್ರೆಗೆ ನಾನು ಇನ್ನೆಂದೂ ವಾಪಸ್ ಬರುವುದಿಲ್ಲ, ಬೇಕಾದರೆ ನೀನು ನನ್ನ ಜೊತೆ ಬಂದಿರಬಹುದು." ಎಂದು ಹೇಳಿ ಬಿಟ್ಟ ಅಪ್ಪನ ಬಗ್ಗೆ ಚಯನ್ ಬೇಸರಿಸಿಕೊಂಡ. ತಾನೇ ಏನಾದರೂ ಮಾಡಬೇಕೆನಿಸಿತು.      

***

ಒಂದು ದಿನ ಚಯನ್ ಅಮ್ಮನ ಕೋಣೆಗೆ ಹೋಗಿ, "ಅಮ್ಮ ಕ್ಯಾನ್ ಐ ಸ್ಲೀಪ್ ಇನ್ ಯುವರ್ ರೂಮ್?" ಎಂದು ಕೇಳಿದ. ಆದರೆ ಕಲ್ಯಾಣಿ  ಬೆಚ್ಚಿ, "ಯಾಕೆ? ಏನಾಯ್ತು? ಅದೂ ನನಗೆ ಕಾಲ್ ಇದೆ, ನಾಳೆ ನೋಡುವ." ಎಂದು ತನ್ನ ಲ್ಯಾಪ್ಟ್ಯಾಪ್ ನಲ್ಲಿ ಮತ್ತೆ ಮುಳುಗಿದಳು. ಯಾವಾಗಲೂ ಏನಾದರೂ ತಿನ್ನುತ್ತಲೇ ಇರುತ್ತಿದ್ದ ಅಮ್ಮ ಈಗ ಊಟಕ್ಕೂ ಬರವುದಿಲ್ಲ ಎನ್ನುವುದನ್ನು ಚಯನ್ ಕೂಡ ಗಮನಿಸಿದ್ದನು. ಸೊರಗಿದ್ದಾಳೆ ಅಮ್ಮ ಎಂದು ನೊಂದುಕೊಂಡ.

"ಅಮ್ಮ ಆರ್ ಯು ಆಲ್ರೈಟ್?"

"ಆಫ್ ಕೋರ್ಸ್"

"ಐ ಯಾಮ್ ಸಾರಿ, ಅಮ್ಮ. ನೀನು ಏನು ಬೇಕೋ ಯೂ ಟ್ಯೂಬ್ ನಲ್ಲಿ ನೋಡಿಕೋ, ನಾನು ಹಾಗೆಲ್ಲಾ ಮಾತನಾಡಲ್ಲ." ಎಂದು ಬೇಡಿಕೊಂಡ.

ಕಲ್ಯಾಣಿ  ಉತ್ತರಿಸಲಿಲ್ಲ.

"ಅಮ್ಮ, ಅಜ್ಜಿ ... "

"ನೋ ಚಯನ್, ಮತ್ತೆ ಅಜ್ಜಿ ಮೇಲೆ ಚಾಡಿ ಹೇಳಬೇಡ." ಎಂದು ಗದರಿದಳು. 

"ನನ್ನ ಮೇಲೆ ಸಿಟ್ಟು ಬಂದಾಗ ಮಾತ್ರ ಹಾಸ್ಟೆಲ್ ಗೆ ಸೇರಿಸ್ತೀನಿ ಅಂತ ಹೆದರಿಸ್ತೀಯ, ಆದ್ರೆ ಅಜ್ಜಿಗೂ ಹಾಗೆ ಯಾಕೆ ಹೇಳಲ್ಲ? ನನ್ನ ಮುದ್ದು ಪಪ್ ಸ್ಟಾರ್ಕ್ ಕೂದಲಿಂದ ಅಜ್ಜಿಗೆ ಅಲರ್ಜಿ ಆಗ್ತಿತ್ತು. ಅಂದ್ರೆ ಅದು ಅಜ್ಜಿ ಪ್ರಾಬ್ಲಮ್. ಬಟ್ ಸ್ಟಾರ್ಕ್ ನ ಮನೆಯಿಂದ ಹೊರಗೆ ಹಾಕಿದ್ವಿ. ಯಾವಾಗ್ಲೂ ನಾನೇ ಬೇರೆಯವರ ಮನೆಗೆ ಹೋಗಿ ಸ್ಲೀಪ್ ಓವರ್ ಮಾಡಬೇಕು, ಯಾಕೆ ನಮ್ಮನೆಗೆ ಯಾರೂ ಬರಬಾರದು? ಶಿ ಹೇಟ್ಸ್ ಎವ್ರಿಥಿಂಗ್ ಅಬೌಟ್ ಮಿ. ಯಾಕೆ ಯಾವಾಗ್ಲೂ ನಾನೇ ಅಡ್ಜಸ್ಟ್ ಮಾಡಿಕೋ ಬೇಕು? ಅಜ್ಜಿ ಮಾತ್ರ ಯಾವುದ್ರಲ್ಲೂ ಅಡ್ಜಸ್ಟ್ ಮಾಡಿಕೊಳ್ಳಲ್ಲ? ನನ್ನ ಫ್ರೆಂಡ್ಸ್ ಯಾರ ಮನೇಲೂ ಅಜ್ಜಿ ಇಲ್ಲ, ಪೆಟ್ಸ್ ಇದಾವೆ..." ಅಂತೆಲ್ಲಾ ಗೋಳಾಡುತ್ತಾ ಚಯನ್ ಮಾತನಾಡುತ್ತಿದ್ದರೆ ಕಲ್ಯಾಣಿ  ತಡೆದುಕೊಳ್ಳಲಾರದೆ ಸಿಟ್ಟಿನಿಂದ ಒಂದು ಕಪಾಳಕ್ಕೆ ಕೊಟ್ಟಳು.

ಅದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತೇ ಹೊರತು ಏನೂ ಬಗೆಹರಿಯಲಿಲ್ಲ.

ಚಯನ್ ಪ್ರತಿಬಾರಿಯಂತೆ ರಫ್ ಎಂದು ಬಾಗಿಲು ಹಾಕಿಕೊಂಡು ಹೊರ ನಡೆಯುವ ಬದಲು ಅವಳೆದುರೇ ನಿಂತು, ಅಂಗಿಯ ತೋಳಿನಿಂದ ಕಣ್ಣಿನಿಂದ ಮೂಗಿನಿಂದ ಇಳಿಯುತ್ತಿದ್ದ ಕಣ್ಣೀರು, ಸಿಂಬಳವನ್ನು ಒರೆಸಿಕೊಂಡು ಹೇಳಿದ, "ಆಲ್ರೈಟ್, ಅಮ್ಮ. ನಾನೇ ಹಾಸ್ಟೆಲ್ ಗೆ ಹೋಗ್ತೀನಿ. ನಾಳೇನೇ ಸೇರಿಸಬೇಕು. ನೀನು ನನ್ನ ಮೀಟ್ ಮಾಡೋಕೆ ಬರಕೂಡದು." ಎಂದು ಹೇಳಿದ.

ಈಗ ಅಳುವ ಸರದಿ ಕಲ್ಯಾಣಿಯದಾಗಿತ್ತು.

ಅವಳ ಫೋನ್ ಮೇಲಿಂದ ಮೇಲೆ ರಿಂಗ್ ಆಗುತ್ತಿದ್ದರೂ ಅದನ್ನು ಉತ್ತರಿಸುವ ಗೋಜಿಗೆ ಹೋಗದೆ ಚಯನನನ್ನು ಮಂಚದ ಮೇಲೆ ಕೂರಲು ಹೇಳಿದಳು.  

"ಚಯನ, ಹಾಗೆಲ್ಲಾ ಮಾತಾಡಬೇಡ ಕಣೋ. ಐ ಯಾಮ್ ಸಾರಿ. ನಿಂಗೆ ಹೊಡೀಬಾರದೂಂತ ಎಷ್ಟು ಸಾರಿ ಅಂದ್ಕೊಂಡ್ರೂ ... " ಅವನ ಕೆನ್ನೆ ಮೇಲೆ ಕೈ ಇಟ್ಟು ಪ್ರೀತಿಯಿಂದ ಸವರಿದಳು. "ನಂಗೆ ಗೊತ್ತು, ಅಮ್ಮನ ಜೊತೆ ಹೊಂದಿಕೊಂಡಿರೋದು ಕಷ್ಟಾಂತ. ಮೊದಲು ಅಣ್ಣ ಮನೆ ಬಿಟ್ಟು ಹೋದ. ಆಮೇಲೆ ಅಪ್ಪ ಅವಳನ್ನು ಬಿಟ್ಟು ಹೋದ್ರು, ಮತ್ತೆ ನನ್ನ ಮದುವೆಯಾದ ಮೇಲೆ ನಿನ್ನ ಪಪ್ಪ, ಈಗ ಈ ಮನೆಗೆ ಗಂಡು ದಿಕ್ಕು ಅಂತ ಇರೋ ಒಬ್ಬನೇ ಮೊಮ್ಮಗ ನೀನೂ... "

"ಅಮ್ಮ, ವಿಚ್ ಕ್ಲಿಯರ್ಲಿ ಮೀನ್ಸ್ ಶಿ ಈಸ್ ಟ್ರಬಲ್ಸಮ್, ಈಸ್ ಇಟ್ ನಾಟ್?" ಚಯನನಿಗೆ ಇನ್ನೂ ಸಿಟ್ಟು ಉಕ್ಕಿ ಉಕ್ಕಿ ಬರುತಿತ್ತು.

"ಯೆಸ್ ಶಿ ಈಸ್, ಬಟ್ ಐ ಕಾಂಟ್ ಅಬ್ಯಾಂಡನ್ ಹರ್."

"ಈವನ್ ಅಟ್ ದಿ ಕಾಸ್ಟ್ ಆಫ್ ಗೆಟ್ಟಿಂಗ್ ಅಬ್ಯಾಂಡನ್ಡ್?" ಚಯನ್ ಅರ್ಥವಾಗದಂತೆ ನೋಡುತ್ತಿದ್ದವನು, "ಬಟ್ ವೈ? ಯಾಕಮ್ಮ? ನನಗಿಂತ ನಿಂಗೆ ಅಜ್ಜಿನೇ ಯಾಕೆ ಇಷ್ಟ?" ಎಂದು ಚೀರಿ, ಮಂಚದ ಮೇಲಿದ್ದ ಅಮ್ಮನ ಆಫೀಸ್ ಪುಸ್ತಕಗಳನ್ನೆಲ್ಲಾ  ಸಿಟ್ಟಿನಿಂದ ಕೆಳಗೆ ದೂಡಿದ.  

"ಯಾಕಂದ್ರೆ ಅಜ್ಜಿ ಒಂಟಿಯಾಗೋಕೆ ನಾನೇ ಕಾರಣ, ಐ ಯಾಮ್ ದಿ ಕಲ್ಪ್ರೀಟ್."  ಕಲ್ಯಾಣಿ  ಜೋರಾಗಿ ಅಳತೊಡಗಿದಳು.

"ಹೇಗಮ್ಮಾ?" ಚಯನ್ ಗೊಂದಲದಿಂದ ನೋಡಿದ.

ಸತ್ಯವನ್ನು ಹೇಳಲೇ ಬೇಕಾದ ಸಮಯ ಬಂದಿತೆಂದು ಅರಿತ ಕಲ್ಯಾಣಿ  ಧೀರ್ಘವಾದ ಉಸಿರೆಳೆದುಕೊಂಡು ಕಣ್ಣೀರೊರೆಸಿಕೊಂಡು, ತನ್ನ ಮಗ ತಾನು ಹೇಳುವುದನ್ನು ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವನಾಗಿದ್ದಾನೆಂದು ಹೇಳತೊಡಗಿದಳು. "ನಾನು ಚಿಕ್ಕವಳಿದ್ದಾಗ ಅಜ್ಜಿಯೇ ಮನೆಯಲ್ಲಿ ನಾವೆಲ್ಲಾ ಯಾವಾಗ ಯಾವ ಬಟ್ಟೆ ಹಾಕಿಕೊಳ್ಳುವುದು ಅಂತ ಡಿಸೈಡ್ ಮಾಡ್ತಾ ಇದ್ದಿದ್ದು. ಸ್ಕೂಲ್ ನಲ್ಲಿ ಡಾನ್ಸ್, ಸ್ಕಿಟ್ ಏನೇ ಇರಲಿ, ಟೀಚರ್ ಹೇಳಿದ ಬಟ್ಟೆ ಕೊಡಿಸದೆ ತಾನೇ ಬೇರೆ ತಂದು ಬಿಡೋದು, ಮತ್ತೆ ಅವರೊಂದಿಗೆ ಜಗಳವಾಡೋದು, ಬರೀ ಇದೇ. ನನ್ನ ಕಂಡರೆ ಟೀಚರ್ಸ್ ಗೆ ಇಷ್ಟವೇ ಇರಲಿಲ್ಲ. ಆಮೇಲಾಮೇಲೆ ಅಮ್ಮನೊಂದಿಗೆ ಜಗಳವಾಡೋದು ತಪ್ಪಿಸಿಕೊಳ್ಳಲು, ನನ್ನನ್ನು ಯಾವುದಕ್ಕೂ ಸೇರಿಸಿಕೊಳ್ತಾನೆ ಇರಲಿಲ್ಲ. ಅದಕ್ಕೂ ಅಮ್ಮ ಹೋಗಿ ಜಗಳವಾಡೋಳು. ಎಕ್ಸಾಮ್ ಆದ್ಮೇಲೆ ಆನ್ಸರ್ ಶೀಟ್ ಕೊಟ್ರೆ, ಇಲ್ಲಿ ಒಂದು ಮಾರ್ಕು ಕಡಿಮೆ, ಅಲ್ಲಿ ನೀವು ಯಾಕೆ ತಪ್ಪು ಅಂತ ಹಾಕಿದೀರಿ ಅಂತೆಲ್ಲಾ ಜಗಳ ಮಾಡೋಳು. ಇದರಿಂದ ನನಗೆ ಸ್ಕೂಲ್ ಅಂದ್ರೇನೇ ಭಯ ಆಗ್ತಿತ್ತು. ನನ್ನ ಫ್ರೆಂಡ್ಸ್ ಎಲ್ಲಾ ಜಗಳಗಂಟಿ ಮಗಳು ಅಂತ ರೇಗಿಸೋರು. ಯಾರಾದ್ರೂ ಹುಡುಗಿಯರು ಜಗಳ ಆಡುವಾಗ, ಕಲ್ಯಾಣಿ  ಅಮ್ಮನಿಗೆ ಹೇಳ್ತೀನಿ ನೋಡು ಅಂತ ತಮಾಷೆ ಮಾಡೋರು. ಅಣ್ಣ ಅಂತೂ ಎಂಟನೇ ಕ್ಲಾಸಿಗೇ ಸ್ಕೂಲ್ ಡ್ರಾಪ್ ಔಟ್ ಆಗ್ಬಿಟ್ಟ. ಅವನಿಗೆ ಓದು ತಲೆಗೆ ಹತ್ತುತ್ತಿರಲಿಲ್ಲ. ಅಮ್ಮನ ಹೊಡೆತ, ಬೈಗುಳಗಳು ಅವನನ್ನು ಕದಿಯುವುದು, ಸುಳ್ಳು ಹೇಳುವುದು, ರಾತ್ರಿಯೆಲ್ಲಾ ಸ್ನೇಹಿತರೊಂದಿಗೇ ಇರುವಂತೆ ಮಾಡಿದುವು. ಅಪ್ಪ ಎಷ್ಟು ಪ್ರಯತ್ನ ಪಟ್ಟರೂ ಅವನನ್ನು ಮತ್ತೆ ಸ್ಕೂಲಿಗೆ ಕಳಿಸೋಕೆ ಆಗಲೇ ಇಲ್ಲ. ಅವನಿಗೆ ಹೊಡೆಯೋದು ಬಡಿಯೋದು ಮಾಡಿ, ಹೆದರಿಸಿ ಮತ್ತೆ ಸ್ಕೂಲಿಗೆ ಕಳಿಸಬೇಕಿತ್ತು, ನೀವು ಅವನಂತೆ ಹೇಡಿ ಅಂತೆಲ್ಲಾ ಅಪ್ಪನಿಗೆ ಬೈದಳು. ಎಂಪ್ಲಾಯ್ಮೆಂಟ್ ಆಫೀಸ್ನಲ್ಲಿ ಕ್ಲರ್ಕ್ ಆಗಿದ್ದ ಅಪ್ಪನಿಗಿಂತ ಮೊದಲು ಅವರ ಜೂನಿಯರಿಗೆ ಪ್ರಮೋಷನ್ ಸಿಕ್ಕಿತು ಎಂದು ಗೊತ್ತಾದಾಗ, ಅವರ ಆಫೀಸ್ ಗೆ ಹೋಗಿ ಅವರ ಬಾಸ್ ಜೊತೆ ಅಸಭ್ಯವಾಗಿ ಮಾತನಾಡಿ, ರಂಪ ಮಾಡಿಬಿಟ್ಟಳು. ಅಂದಿನಿಂದ ಅಪ್ಪ ಮಾತು ಮರೆತು ಮೌನಿಯಾಗಿಬಿಟ್ಟರು. ಅಮ್ಮ ಅಣ್ಣನಿಗೆ ನಿಂತಲ್ಲಿ ನಿಲ್ಲಲು, ಕೂತಲ್ಲಿ ಕೂರಲು ಬಿಡದೆ ಹಂಗಿಸತೊಡಗಿದಳು. ಒಂದು ದಿನ ಅವನು ‘ನನ್ನನ್ನು ಹುಡುಕಬೇಡಿ’ ಎಂದು ಪತ್ರ ಬರೆದಿಟ್ಟು ಮನೆ ಬಿಟ್ಟು ಓಡಿ ಹೋದ. ಆ ದಿನ ನಾನು ಬಹಳ ಡಿಸ್ಟರ್ಬ್ ಆಗಿಬಿಟ್ಟೆ. ಮೊದಲ ಬಾರಿ ಅಪ್ಪ ನನ್ನನ್ನು ತಬ್ಬಿಕೊಂಡು ಅತ್ತು ಬಿಟ್ಟರು. ಆ ಕ್ಷಣದಲ್ಲಿ ನನಗೆ ಅಮ್ಮನ ಮೇಲೆ ಬಹಳ ಸಿಟ್ಟು ಬಂದಿತ್ತು. ಅಂದು ರಾತ್ರಿ ಅಪ್ಪನ ಪಕ್ಕದಲ್ಲೇ ಮಲಗಿ, ರಾತ್ರಿ ಪೂರ್ತಿ, ಅಮ್ಮನಿಗೆ ಏನಾದರೂ ಕೆಟ್ಟದಾಗಲಿ ಅಂತ ಶಪಿಸಿದೆ. ಅಳುತ್ತ ಅಳುತ್ತ ಯಾವಾಗಲೋ ನಿದ್ದೆ ಬಂದಿತ್ತು. ಎದ್ದಾಗ ಅಪ್ಪ ನಮ್ಮನ್ನು ಬಿಟ್ಟು ಹೋಗಿದ್ದರು. ನನಗೆ ತುಂಬಾ ಭಯವಾಯಿತು. ಅಮ್ಮನಿಗೆ ಇದು ಗೊತ್ತಾದರೆ ನನ್ನನ್ನು ಬಹಳ ಹೊಡೆಯುತ್ತಾರೆಂದು ನೆನೆದು ಅಳತೊಡಗಿದೆ. ಆದರೆ ನಾನೇ ಹಾಗೆ ವಿಶ್ ಮಾಡಿದ್ದೂ ಅಂತ ಇದುವರೆಗೂ ಅವರಿಗೆ ಗೊತ್ತಾಗದಂತೆ ಮೇಂಟೇನ್ ಮಾಡಿದೀನಿ. ಅಂದು ಅಮ್ಮ ಅಳಲಿಲ್ಲ, ಆದರೆ ಇನ್ನಷ್ಟು ಕೆರಳಿ ಹುಚ್ಚಿಯಂತಾದಳು. ಅಪ್ಪನನ್ನು ಪ್ರತಿದಿನ ಬಿಡದೆ ಶಪಿಸಿದಳು. ಬೇರೆಯವರ ಮನೆಯಲ್ಲಿ ಅಡಿಗೆ ಮಾಡುವುದು, ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಬಟ್ಟೆ ಹೊಲೆಯುವುದು, ಪ್ಲೇ ಸ್ಕೂಲ್ ನಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಹೀಗೆ ಏನು ಕೆಲಸ ಸಿಕ್ಕರೂ ಸರಿ ಒಪ್ಪಿಕೊಂಡು, ಅಪ್ಪನ ಮೇಲೆ ಹಠಕ್ಕೆ ಬಿದ್ದವಳಂತೆ ದುಡಿಯ ತೊಡಗಿದಳು. ಅಮ್ಮನ ಅಂದಿನ ಪರಿಸ್ಥಿತಿಗೆ ನಾನೇ ಕಾರಣ ಎನ್ನುವುದು ನನಗಷ್ಟೇ ಗೊತ್ತಿತ್ತು. ಅಮ್ಮ ಮಾತ್ರ... " ಕಲ್ಯಾಣಿ  ಗದ್ಗದಿತಳಾಗಿ ಹಳೆಯದನ್ನೆಲ್ಲಾ ಹೇಳಿಕೊಳ್ಳತೊಡಗಿದ್ದಳು.

ಚಯನ್ ಅವಳ ಮಾತನ್ನು ಅರ್ಧಕ್ಕೇ ನಿಲ್ಲಿಸಿ, "ಅಮ್ಮ, ನಂಗೆ ಎರಡು ಡೌಟ್ಸ್. ಮೊದಲನೇದು, ನೀನು ಅಜ್ಜಿಗೆ ಕೆಟ್ಟದಾಗ್ಲಿ ಅಂತ ವಿಶ್ ಮಾಡಿದ್ದಕ್ಕೇ ಅಜ್ಜಿ ಒಂಟಿಯಾದ್ರು ಅಂದ್ರೆ, ನೀನೇ ಅದನ್ನು ಸರಿ ಮಾಡಬಹುದಿತ್ತು ಅಲ್ವ? ನೀನು ಅವತ್ತಿಂದ ಅಜ್ಜಿಗೆ ಒಳ್ಳೇದಾಗ್ಲಿ ಅಂತ ಮತ್ತೆ ಯಾಕೆ ವಿಶ್ ಮಾಡಲಿಲ್ಲ? ಎರಡನೇದು ನೀನು ಒಂಟಿಯಾಗಲಿ ಅಂತ ಯಾರು ವಿಶ್ ಮಾಡಿದ್ದು ಅಂತ ... ಹೇ...  ಹೇ ... ನನ್ನ ಕಡೆ ಹಾಗೆ ನೋಡಬೇಡ. ನನಗೆ ಹೀಗೆಲ್ಲಾ ವಿಶ್ ಮಾಡಿದ್ದು ನಿಜ ಆಗುತ್ತೆ ಅಂತ ಗೊತ್ತಿದ್ರೆ ನಾನು ಇಡೀ ಪ್ರಪಂಚದಲ್ಲಿರೋ ಸ್ಕೂಲ್ ಗಳೆಲ್ಲಾ ಹಾಳಾಗೋಗ್ಲಿ ಅಂತ ವಿಶ್ ಮಾಡ್ತಿದ್ದೆ. ನನ್ನ ಪವರ್ ಅನ್ನು ಹೀಗೆಲ್ಲಾ ಸಣ್ಣ ಸಣ್ಣ ಪ್ರಾಬ್ಲಮ್ಸ್ ಗೆ ಸ್ಪೆಂಡ್ ಮಾಡ್ತಿರಲಿಲ್ಲ." ಎಂದು ಹೇಳಿದ.

ಕಲ್ಯಾಣಿಗೆ ಎಂದಿನಂತೆ ಚಯನನ ಮಾತುಗಳು ಸ್ವಲ್ಪವೂ ಇಷ್ಟವಾಗಲಿಲ್ಲ. ಆದರೆ ಅವನು ಮತ್ತೆ ಸತ್ಯವನ್ನು ಸರಳವಾಗಿ ಹೇಳಿ ಅವಳನ್ನು ಬೆಚ್ಚಿ ಬೀಳಿಸಿದ್ದ. ತಕ್ಷಣ ಕೆಲಸವನ್ನು ಬದಿಗಿಟ್ಟು, ಚಯನನನ್ನು ತಬ್ಬಿಕೊಂಡು ಮಲಗಿದಳು. ಅಪ್ಪನನ್ನು ತಬ್ಬಿ ಮಲಗಿದ್ದ ಆ ಕರಾಳ ರಾತ್ರಿಯೇ ನೆನಪಾಗುತಿತ್ತು. ಅಪ್ಪ ಹಾಗೇಕೆ ಮಾಡಿದರು ಎನ್ನುವುದು ಇದುವರೆಗೂ ಅವಳಿಗೆ ಸವಾಲಾಗಿಯೇ ಉಳಿದಿತ್ತು.

***

ಎರಡು ದಿನಗಳ ನಂತರ ಇದ್ದಕ್ಕಿದ್ದಂತೆ ಚಯನ್ ಅಮ್ಮನೆದುರು ಬಂದು, "ಅಮ್ಮ, ನಂಗೆ ವಿಡಿಯೋ ಗೇಮ್ ಅಡಿಕ್ಷನ್ ಆಗಿಬಿಟ್ಟಿದೆ. ಬಿಡೋಕೆ ಆಗ್ತಿಲ್ಲ. ನನ್ನನ್ನು ಕೌನ್ಸೆಲಿಂಗ್ ಗೆ ಕರೆದುಕೊಂಡು ಹೋಗ್ತೀಯ? ಐ ಯಾಮ್ ವಿಲ್ಲಿಂಗ್ ಟು ಸೀ ಎ ಥೆರಪಿಸ್ಟ್." ಎಂದು ಹೇಳಿದ.

ಕಲ್ಯಾಣಿ  ಮಗನಿಂದ ಈ ನಿರ್ಧಾರವನ್ನು ನಿರೀಕ್ಷಿಸಿಯೇ ಇರಲಿಲ್ಲವಾದ್ದರಿಂದ ಒಂದು ಕ್ಷಣ ಬೆಚ್ಚಿ, ಹೇಗೆ ಉತ್ತರಿಸಬೇಕೆಂದು ಗೊತ್ತಾಗದೇ ಅವನ ತುಂಟ ಕಣ್ಣುಗಳನ್ನೇ ನೋಡುತ್ತಿದ್ದಳು. ಇವನ ಮನಸ್ಸಿನಲ್ಲಿ ಏನೋ ನಡೆಯುತ್ತಿದೆಯೆಂದು ಅವಳಿಗೆ ಬಲವಾಗಿ ಅನಿಸಿತು. ಇದು ಮತ್ತೆ ತನ್ನ ಬುಡಕ್ಕೇ ಬಂದು ನಿಲ್ಲಬಹುದೇ ಎಂದು ಅಳುಕಿದಳು ಕೂಡ. ಅವಳು ಏನಾದರೂ ಉತ್ತರಿಸುವ ಮೊದಲೇ ಅಜ್ಜಿ ನಡುವೆ ಬಾಯಿ ಹಾಕಿ, "ಹೂಂ ಮೊದಲು ಕರೆದುಕೊಂಡು ಹೋಗು, ಇಲ್ಲಾಂದ್ರೆ ಇವನು ಉದ್ಧಾರ ಆಗಲ್ಲ ಕಣೇ," ಎಂದು ಗೊಣಗಿದಳು. 

ಸರಿ, ಅಮ್ಮ ಮಗ ಇಬ್ಬರೂ ಬಿಟಿಎಮ್ ಲೇ ಔಟ್ ನಲ್ಲಿದ್ದ ಒಂದು ಮೆಂಟಲ್ ಹೆಲ್ತ್ ವೆಲ್ ನೆಸ್ ಸೆಂಟರಿಗೆ ಹೋದರು.

ಕೌನ್ಸಲರ್ ಎದುರು ಕುಳಿತಾಗ, ಕಲ್ಯಾಣಿಗೆ ಬಹಳ ಹೆದರಿಕೆಯಾಗುತ್ತಿತ್ತು. ‘ಇದಕ್ಕೆಲ್ಲಾ ನೀವೇ ಕಾರಣ, ಎಷ್ಟು ದುಡಿದರೆ ಏನು ಬಂತು, ಮಗನನ್ನು ಸರಿಯಾಗಿ ಬೆಳೆಸಿಲ್ಲ, ಮನೆಯ ವಾತಾವರಣ ಸರಿಯಿಲ್ಲ, ಗಂಡನ ಜೊತೆ ಯಾಕಿಲ್ಲ, ಅಮ್ಮನಾಗಿ ಇಷ್ಟು ಸ್ವಾರ್ಥಿಯಾಗಬಹುದೇ’ ಎಂದೆಲ್ಲಾ ಬೈಯ್ಯಬಹುದೆಂದು ಬೆವರಿದಳು.

"ಹೇಳಿ, ನೀವಿಬ್ಬರೂ ಇಲ್ಲಿಗೆ ಬಂದ ಕಾರಣವೇನು?" ಕೌನ್ಸಲರ್ ಮುಗುಳುನಕ್ಕು ಮಾತಿಗಾರಂಭಿಸಿದರು. ಕಲ್ಯಾಣಿ ಏನು ಹೇಳುವುದೆಂದು ಯೋಚಿಸುತ್ತಿರುವಾಗಲೇ, ಚಯನ್, "ಮ್ಯಾಮ್, ನನ್ನ ಅಮ್ಮನಿಗೆ ಪಬ್ಜಿ ವೀಡಿಯೋ ಗೇಮಿನ ಅಡಿಕ್ಷನ್ ಆಗಿಬಿಟ್ಟಿದೆ. ಅದನ್ನು ಬಿಡಿಸಬೇಕು," ಎಂದು ಹೇಳಿ ಅಮ್ಮನ ಕಡೆ ಅಮ್ಮನಾಗಿ ನೋಡಿದ.

ಕಲ್ಯಾಣಿ ಬೆದರಿ ಅವನನ್ನೇ ನೋಡಿದಳು!

ಅಮ್ಮನ ಫೋನಿನಲ್ಲಿ ಗೇಮ್ ಇನ್ಸ್ಟಾಲ್ ಆಗಿರುವುದನ್ನು ಒಮ್ಮೆ ಆಕಸ್ಮಿಕವಾಗಿ ನೋಡಿದ್ದ ಚಯನ್ ಇತ್ತೀಚಿಗೆ ಆಕೆಯ ನಡೆ ನುಡಿಯಲ್ಲಾದ ಬದಲಾವಣೆಯ ಕಾರಣ ಹುಡುಕತೊಡಗಿದ್ದ. ತನಗೆ ಆಗಾಗ ಕೇಳಿಸುತ್ತಿದ್ದ 'ವಿನ್ನರ್ ವಿನ್ನರ್ ಚಿಕನ್ ಡಿನ್ನರ್' ಹಾಡು ತನ್ನ ಭ್ರಮೆಯಲ್ಲ, ಆದರೆ ಅವಳ ಕೋಣೆಯಿಂದ ಬರುತ್ತಿದ್ದದ್ದು ಎಂದು ಗೊತ್ತಾಗಲು ಹೆಚ್ಚು ದಿನ ಬೇಕಾಗಲಿಲ್ಲ. ಅವಳು ತನ್ನ ಮತ್ತು ಅಜ್ಜಿಯ ಹೆಸರುಗಳನ್ನು ಬಗ್ ಒನ್ ಬಗ್ ಟೂ ಎಂದು ಸೇವ್ ಮಾಡಿಕೊಂಡಿರುವುದನ್ನೂ ಗಮನಿಸಿದ್ದ ಚಯನ್ ಗೆ ಹೊಸ ಆಟಗಾರ 'ಬಗ್ ಕಿಲ್ಲರ್' ಎಂಟ್ರಿ ಕೊಟ್ಟಾಗ ಸಹಜವಾಗಿಯೇ ಅನುಮಾನದೊಂದಿಗೆ ಕುತೂಹಲವಾಗಿತ್ತು. ಮನೆಯ ಸಮಸ್ಯೆಗಳಿಂದ ಬೇಸತ್ತು ಅಮ್ಮನೇ ವೀಡಿಯೋ ಗೇಮ್ ಅಡಿಕ್ಟ್ ಆಗಿದ್ದು ಚಯನ್ ಗೆ ನಿಜಕ್ಕೂ ದುಃಖವಾಗಿತ್ತು. ಇದೆಲ್ಲವನ್ನೂ ಹೇಳುವ ಅಗತ್ಯವೇ ಇಲ್ಲದಂತೆ, ಅವಳ ಕೈ ಹಿಡಿದುಕೊಂಡು ಮೃದುವಾಗಿ ಒತ್ತಿ,  "ಹಲೋ ವಿನ್ನರ್" ಎಂದ.

ಕಲ್ಯಾಣಿ  ಕಣ್ಣುಗಳಿಂದ ನೀರು ನಿಧಾನವಾಗಿ ಇಳಿದು ಅವಳ ಕುತ್ತಿಗೆಯ ಮೇಲೆ ಹರಿಯಿತು. ಚಯನನಿಗೆ ಹೊರಗೆ ಹೋಗಿ ಕುಳಿತುಕೊಳ್ಳುವಂತೆ ಕೌನ್ಸಲರ್ ಸೂಚಿಸಿ, ಕಲ್ಯಾಣಿಯನ್ನು ಪ್ರೀತಿಯಿಂದ ನೋಡಿ "ತುಂಬಾ ಮುದ್ದಾದ ಹೆಸರು, ನಿಮ್ಮ ಹೆಸರಿನ ಅರ್ಥವೇನು?" ಎಂದು ಕೇಳಿದರು.

ತನ್ನೆರಡೂ ಕಣ್ಣುಗಳನ್ನು ಒರೆಸಿಕೊಂಡು ತೋಯ್ದ ಅಂಗೈಯನ್ನು ನೋಡುತ್ತಾ ಕಲ್ಯಾಣಿ ಮೌನವಾದಳು. 'ಅಮ್ಮನ ಸಿಟ್ಟು, ಧಿಮಾಕು, ಜಗಳಗಂಟಿತನ, ಅಧಿಕಾರ ಚಲಾಯಿಸುವುದು, ದಬ್ಬಾಳಿಕೆ ಯಾವುದನ್ನೂ ಇಷ್ಟಪಡದ ನಾನು ಅವೆಲ್ಲವನ್ನೂ ಕಲಿತೆ; ಅಣ್ಣನಂತೆ ಸುಳ್ಳು ಹೇಳುವುದು, ಕದಿಯುವುದು ಸರಾಗವಾಗಿ ಬಂದಿತ್ತು; ಅಪ್ಪನಂತೆ ಸಮಸ್ಯೆಗಳಿಗೆ ಬೆನ್ನು ಮಾಡಿ, ಗಂಡನಂತೆ ತನ್ನ ಅನುಕೂಲ ನೋಡಿಕೊಳ್ಳುವುದನ್ನೂ ಯಾರೂ ಹೇಳಿಕೊಡಬೇಕಾಗಿರಲಿಲ್ಲ. ಇನ್ನು ಮಗನಿಗೆ ಯಾವುದರಿಂದ ದೂರವಿರಲು ಪ್ರತಿದಿನ ಹೇಳುತ್ತಿದ್ದೆನೋ  ಅದನ್ನೇ ನನ್ನ ಚಟವಾಗಿಸಿಕೊಂಡೆ.' ಒಮ್ಮೆ ಧೀರ್ಘವಾಗಿ ನಿಟ್ಟುಸಿರಿಟ್ಟು, "ದೇವಸ್ಥಾನದ ಒಳಗೆ ಹೋಗುವ ಮೊದಲು ಭಕ್ತರ ಮೈಗಂಟಿದ ಧೂಳು, ಮಣ್ಣು ಎಲ್ಲವನ್ನೂ ಕಲ್ಯಾಣಿಯೇ ತೊಳೆದು ಶುಚಿ ಮಾಡುವುದು. ಹರಿಯುವ ನದಿಯಲ್ಲ ನೋಡಿ, ಅದೆಲ್ಲಾ ಕೊಳಕು ಕಲ್ಯಾಣಿಯ ತಳದಲ್ಲಿಯೇ ತಾನೇ ಉಳಿಯುವುದು ..." ಎಂದು ಹೇಳಿ ವಿಷಾದದ ನಗು ಬೀರಿದಳು.

***  

ಮನೆಗೆ ಬಂದವಳೇ ಕಲ್ಯಾಣಿ  ಟಿವಿ ಮುಂದೆ ಸಪ್ಪೆಯಾಗಿ ಕುಳಿತಿದ್ದ ಅಮ್ಮನನ್ನು ಕಂಡು, 'ಅಮ್ಮ, ವಿ ಬೋಥ್ ಹ್ಯಾವ್ ವಿಯರ್ಡ್ ಕಿಡ್ಸ್ ಅಲ್ವಾ?' ಎಂದಳು.

***

ಪೂರ್ಣಿಮಾ ಮಾಳಗಿಮನಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...

ಪೂರ್ಣಿಮಾ ಮಾಳಗಿಮನಿ

ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹನುಮಂತಪುರದವರು. ಮಂಡ್ಯ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿ, ಚಿತ್ರದುರ್ಗದ ಎಸ್.ಜೆ.ಎಂ.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಪದವೀಧರೆ. 

'ಎನಿ ವನ್ ಬಟ್ ದಿ ಸ್ಪೌಸ್' ಎನ್ನುವ ಇಂಗ್ಲೀಷ್ ಕಿರುಗತೆಗಳ (2017) ಸಂಕಲನ ಪ್ರಕಟಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಹಲವಾರು ತಾಂತ್ರಿಕ ಹಾಗೂ ಸಾಹಿತ್ಯಕ  ವಿಷಯ ಕುರಿತ ಲೇಖನಗಳು ಪ್ರಕಟವಾಗಿವೆ. ಪ್ರತಿಷ್ಠಿತ ಭಾರತೀಯ ವಾಯುಸೇನೆಯಲ್ಲಿ ಏರೊನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಧಿಕಾರಿಯಾಗಿ ಆರು ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಜಂಟಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  

ಕೃತಿಗಳು: Anyone but the Spouse- ಇಂಗ್ಲಿಷಿನಲ್ಲಿ ಬರೆದ ಸಣ್ಣ ಕಥೆಗಳ ಸಂಕಲನ, ಇಜಯಾ (ಕಾದಂಬರಿ),ಪ್ರೀತಿ ಪ್ರೇಮ: ಪುಸ್ತಕದಾಚೆಯ ಬದನೆಕಾಯಿ, ಆಗಮ್ಯ, ಡೂಡಲ್ ಕತೆಗಳು, ಲವ್ ಟುಡೆ, ಮ್ಯಾಜಿಕ್ ಸೌಟು

More About Author