Poem

ತಯಾರಿ 


ನಾಲ್ಕನೇ ಮಹಡಿಯ ಎತ್ತರದಲ್ಲಿರುವ ನನಗೆ
ನಾಲ್ಕೂ ದಿಕ್ಕಿನಿಂದ ಹೆಕ್ಕಿ ತಂದು
ಚೌಕಟ್ಟಿನೊಳಗೆ ಛಾಪಿಸಿಟ್ಟಿರುವ ಸುದ್ದಿಪತ್ರಿಕೆಗೆ
ಸೈಕಲ್ಲಿನ ಪೆಡಲು ತುಳಿಯುತ್ತಾ ಬರುವ ಪೇಪರಿನ ಹುಡುಗ
ಪುಟ್ಟ ಬೆರಳುಗಳಿಂದ ಮಡಚಿ ಮೇಲೆಸೆದಾಗ
ಸುದ್ದಿಗಳು ಆಕಾಶದ ತುಂಬಾ ಚದುರಿ ಚಲಿಸತೊಡಗುತ್ತವೆ
ಇಳಿಯಲಾಗದೆ ಧರಣಿ ಕೂತ ಗಂಗೆಗೆ
ಕೆಳಗಿಳಿಯಲಾಗದಷ್ಟು ಮಂಡಿನೋವು
ಕೆಟ್ಟು ಕೂತ ಲಿಫ್ಟಿಗೆ ಋಷಿಯ ಶಾಪ
ಹತ್ತಿದಷ್ಟೂ ಹೆಚ್ಚಾಗುವ ಮೆಟ್ಟಿಲುಗಳ ಭಯ
ಅಲ್ಲೆಲ್ಲೋ ಬೀದಿದೀಪದ ಕೆಳಗಡೆ ಓದಲು ಕೂತಿರುವ
ಮಕ್ಕಳ ಕನಸಿನ ವೇಗ, ವೇಗೋತ್ಕರ್ಷಗಳು
ಬೆಳಕಿನ ವೇಗವನ್ನೂ ದಾಟಿಬಿಟ್ಟಿವೆ
ಚಿಮಣಿ ಬುಡ್ಡಿಯ ಬೆಳಕಲಿ ಬದುಕುವ
ಬಡವರ ಊಟದ ಡಬ್ಬಿಯಲಿ
ಉಪ್ಪಿನಕಾಯಿ ಕೇಕಿನ ಮೇಲೆ ಕೂತ
ಚೆರ್ರಿ ಹಣ್ಣಿನಂತೆ ಕಾಣಿಸುತ್ತದೆ

ಸಾಲಿನ ಕೊನೆಯಲ್ಲಿ ಕೂತವರ ಕಿವಿಗೆ
ಮೊದಲಿನಿಂದ ಬಂದಿದ್ದೆಂಬ ದೇವವಾಣಿ
ಕೊಲ್ಲುವ ಕತ್ತಿಯಂತೆ ಇರಿಯುತ್ತದೆ
ಸುದ್ದಿಯನ್ನು ಮಧ್ಯದಲ್ಲಿ ಯಾರೋ ತಿರುಚಿಬಿಟ್ಟಿರಬೇಕು
ಹೃದಯವಿಲ್ಲದ ಹತ್ತು ತಲೆಯ ರಾಜರು
ದಿನಂಪ್ರತಿ ಕಾಪಿಡುವ ಲಕ್ಷ್ಮಣ ರೇಖೆಗಳ
ದಾಟಿಕೊಳ್ಳುತ್ತಾ ಬದುಕಲು ಬಡವರು
ಹಲವು ಹಗಲು ವೇಷ ತೊಡಲೇಬೇಕಾಗಿದೆ

ದಣಿದ ರಾತ್ರಿಯ ತಲೆಯ ನೋವಿಗೆ
ಅಮೃತಾಂಜನವನ್ನು ಕೊಳ್ಳಲು
ಕೆಲವೇ ರೂಪಾಯಿ ಇನ್ನು ಕಡಿಮೆ ಇದೆ
ನಾಳೆ ಮಾಲೆಯಾಗುವ ಕಣಗಿಲೆ
ಅರಳುವ ಹಬ್ಬದ ತಯಾರಿಯಲ್ಲಿದೆ
ಆಕಾಶದ ಅವಕಾಶದ ತುಂಬೆಲ್ಲ ಈಗ ಅಕ್ಷರಗಳು
ಅವುಗಳ ನಿಜದ ಗುಡುಗಿಗೆ ಕಲ್ಲು
ಹೃದಯಗಳು ನಡುಗಿ ಹೋಗುತ್ತವೆ.

ಕಲೆ : ಎಸ್. ವಿ. ಹೂಗಾರ

ದಾದಾಪೀರ್‌ ಜೈಮನ್‌

ಕವಿ, ಕತೆಗಾರ ಸೇರಿದಂತೆ ಮುಂತಾದ ಅನೇಕ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ದಾದಾಪೀರ್‌ ಜೈಮನ್‌. ಅವರ ಹಲವಾರು ಕವಿತೆಗಳು ಪ್ರಜಾವಾಣಿ ಮುಂತಾದ ಕನ್ನಡ ದಿನ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅವರ ‘ಜಾಲಗಾರ’ ಕತೆಗೆ ಸಂಗಾತ ಕತಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಹಾಗೂ ಮುಂತಾದ ರಾಜ್ಯ ಮಟ್ಟದ ಕತಾ ಸ್ಪರ್ಧೆಯಲ್ಲಿ ಬಹುಮಾನಗಳು ಸಂದಿವೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸಾಹಿತ್ಯ ಓದು-ಬರೆಹದಲ್ಲಿ ಸಕ್ರಿಯರು.

ಪ್ರಶಸ್ತಿಗಳು: 2021ನೇ ಸಾಲಿನ ಪುಸ್ತಕ ಬಹುಮಾನ 

More About Author