Poem

ತದೇಕದ ಚಿತ್ತಕ್ಕೆ ಸಾವಿರ ಚಿಂತೆ

ಮಂಜಿನ ಹನಿಯಂತೆ
ರವಿ ಕಿರಣಕೆ ಹೊಳೆವ
ಕಣ್ಣೋಟದ ಬೆಡಗಿ
ಮುಡಿಗೆ ಶ್ಯಾವಂತಿಗೆ ಮುಡಿದವಳ
ಮೊಗ ಸಿರಿಯ ಗುಟ್ಟು
ಕೂಗಿ ಹೇಳಿದೆ

ಹರೆಯದ ಮೊಡವೆಯ ಧ್ವನಿಗೆ
ರಾಗವೊಂದು ಜೊತೆಗೂಡಿತಲ್ಲಿ
ಭಾವಗಳ ಬಂಧನವಾಗಿ

ರಾಶಿ ರಾಶಿ ಆಸೆಗಳಿಗೆ
ಪದಕೋಶ ಜಾಡಿನಲ್ಲಿ
ಪ್ರೇಮಕ್ಕೆ ಅರ್ಥ ಹುಡುಕುವುದು ಸಮಯ ವ್ಯರ್ಥ

ಉಮ್ಮಳಸಿ ಬರುವವು ಕಡಲ ತೆರೆಗಳಂತೆ
ಬಚ್ಚಿಟ್ಟ ಪ್ರೀತಿಯ ಕುರುಹುಗಳು
ಮುಗಿದಿರುವ ಕತೆಯ
ಸೂರಿಲ್ಲದ ಊರು-ಕೇರಿಗೆ
ಸಾರಿ ಹೇಳಿದಂತೆ

ರೋಷಿ ಹೋಗಿರುವ ಘೋಷವಾಕ್ಯಗಳ
ಕೂಸಿನಂತೆ ಜ್ವಾಕಿ ಮಾಡಿದರೆ
ಅನಾರೋಗ್ಯದ ಭಾಗ್ಯಗಳ ಗುಡಾಗುವುದು ಮನ

ನೆನಪೇಂಬ ರೆಪ್ಪೆ ತಡೆಯಿಲ್ಲದೆ ಮಿಟುಕಿಸಿದೆ
ಏಕಾಂಗಿತನವು ಏಕಾಂತಕ್ಕೆ ಜಾರುವ ಅರೇಘಳಿಗೆಯ
ತದೇಕದ ಚಿತ್ತಕ್ಕೆ ಸಾವಿರ ಚಿಂತೆ

ಬಲವಾದ ಒಲವಿಗೆ ನೆಲೆಯಿಲ್ಲ
ನಲ್ಲೆಯರು ನೋಡುವರು ಕುಲವ
ಸಖಾ-ಸಖಿಯರಿಗೆ ಪಕ್ವಗೊಳ್ಳಬೇಕಿದೆ ಪ್ರೇಮ ತತ್ವ.

ಪಿ. ನಂದಕುಮಾರ

ಪಿ. ನಂದಕುಮಾರ್

ಪಿ. ನಂದಕುಮಾರ್ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಕಾವ್ಯ, ಕಥೆ, ವಿಮರ್ಶೆ, ಸಂಶೋಧನೆಗಳಲ್ಲಿ ಆಸಕ್ತಿ ಹೊಂದಿರುವ ಅವರ ಲೇಖನ, ವಿಮರ್ಶೆ, ಕವಿತೆಗಳು ಬುಕ್ ಬ್ರಹ್ಮ ಸೇರಿದಂತೆ ಹಲವು ಸಾಹಿತ್ಯಿಕ ವೆಬ್ ಸೈಟ್, ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

More About Author