ಬೈರಮಂಗಲ ರಾಮೇಗೌಡ ಅವರು ಪ್ರಗತಿಪರ ಚಿಂತಕ, ಲೇಖಕ, ಸಂಶೋಧಕ, ಸಂಘಟಕ, ಹೋರಾಟಗಾರ ಮತ್ತು ಸ್ನೇಹಜೀವಿ. ಕನ್ನಡ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾದ ರಾಮೇಗೌಡರು ನಮ್ಮ ನಡುವಿನ ಜಾನಪದ ತಜ್ಞ , ಸಂಸ್ಕೃತಿ ಚಿಂತಕ ಕೂಡಾ ಹೌದು. ಅವರ ಸ್ವಪ್ನ ಸುಂದರಿ ಕತೆ ನಿಮ್ಮ ಓದಿಗಾಗಿ.
ರಾಧಾಕೃಷ್ಣನನ್ನು ಒಂದು ರೀತಿಯಲ್ಲಿ ಅದೃಷ್ಟವಂತನೆಂದೇ ಹೇಳಬೇಕು. ತಂದೆ ಭುಜಂಗಯ್ಯ ರೆವಿನ್ನೂ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರು, ತಾಯಿ ಮಹಾಲಕ್ಷ್ಮಿ ಗೃಹಣಿ. ಈ ದಂಪತಿಗಳ ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯನಾದ ರಾಧಾಕೃಷ್ಣ ಓದಿದ್ದೆಲ್ಲ ಬೆಂಗಳೂರಿನ ಸರ್ಕಾರಿ ಶಾಲೆ ಕಾಲೇಜುಗಳಲ್ಲೇ. ಓದುವುದರಲ್ಲಿ ಬುದ್ದಿವಂತನಾಗಿದ್ದ ರಾಧಾಕೃಷ್ಣ ಪಿಯುಸಿಯಲ್ಲಿ ಯಾವ ವಿಷಯಗಳನ್ನು ಆಯ್ಕೆಮಾಡಿಕೊಳ್ಳುವುದು ಎಂದು ಗೊಂದಲದಲ್ಲಿದ್ದಾಗ ತಂದೆಯೇ ಕಾಮರ್ಸ್ ಮತ್ತು ಅಕೌಂಟೆನ್ಸಿ ತಗೋ ಎಂದು ಒತ್ತಾಯಿಸಿದರು. ಭುಜಂಗಯ್ಯನವರ ಸೀಮಿತ ತಿಳಿವಳಿಕೆಯಲ್ಲಿ ಮಗ ಬ್ಯಾಂಕಿಂಗ್ ಕ್ಷೇತ್ರದ ಕಡೆ ಹೋಗಲಿ, ಸಿ.ಎ. ಮಾಡಿಕೊಳ್ಳಲಿ, ಬಿ.ಪಿ.ಓ. ಕಡೆಗೂ ಹೋಗಬಹುದು ಎನ್ನುವ ಆಸೆಯಿತ್ತು. ಅದೇ ವಿಷಯಗಳನ್ನು ತೆಗೆದುಕೊಂಡು ಎರಡು ವರ್ಷಗಳನ್ನು ಮುಗಿಸುವಷ್ಟರಲ್ಲಿ ಅವುಗಳ ಬಗೆಗೆ ಹೆಚ್ಚಿನ ಆಸಕ್ತಿಯೂ ಮೂಡಿತ್ತು. ಎರಡನೇ ಪಿಯುಸಿಯಲ್ಲಿ ಅವನ ನಿರೀಕ್ಷೆಗೂ ಮೀರಿದ ಅಂಕಗಳು ಬಂದಿದ್ದುದರಿಂದ ಪದವಿ ಅಧ್ಯಯನಕ್ಕೆ ವಾಣಿಜ್ಯಶಾಸ್ತ್ರವನ್ನೇ ಆಯ್ಕೆಮಾಡಿಕೊಂಡ. ಒಳ್ಳೆಯ ಅಧ್ಯಾಪಕರ ಬೋಧನೆ ಮತ್ತು ಪ್ರೋತ್ಸಾಹದಿಂದ ಅಲ್ಲೂ ಚೆನ್ನಾಗಿ ಓದಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಬ್ಯಾಂಕನ್ನೂ ಪಡೆದುಕೊಂಡ. ಮಗ ಕೆಲಸಕ್ಕೆ ಸೇರಿಕೊಳ್ಳಲಿ ಎಂದು ಭುಜಂಗಯ್ಯನವರು ಅಪೇಕ್ಷಿಸುತ್ತಿದ್ದರೂ ನೆಚ್ಚಿನ ಮೇಷ್ಟು 'ನಿನ್ನಂಥವರು ಎಂ.ಕಾಂ. ಮಾಡೋಬೇಕು, ಕೆಲಸ ನಿನ್ನನ್ನೇ ಹುಡುಕಿಕೊಂಡು ಬರುತ್ತದೆ' ಎಂದು ಹುರಿದುಂಬಿಸಿದರು. ಎಂ.ಕಾಂ. ಪ್ರವೇಶಕ್ಕಾಗಿ ನಡೆದ ಕೌನ್ಸೆಲಿಂಗ್‌ನಲ್ಲಿ ಮೊದಲ ಸುತ್ತಿನಲ್ಲೇ ಆಯ್ಕೆಯಾದ ರಾಧಾಕೃಷ್ಣ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗಕ್ಕೆ ಸೇರಿಕೊಂಡ. ಎಂ.ಕಾಂ. ಓದುತ್ತಿರುವಾಗಲೇ ಅಲ್ಲಿ ಪಾಠ ಮಾಡುತ್ತಿದ್ದ ಕೆಲವು ಅಧ್ಯಾಪಕರು ಅವರ ಹೆಸರಿನ ಹಿಂದೆ 'ಡಾ.' ಎಂದು ತಗುಲಿಸಿಕೊಂಡಿದ್ದುದು ಗಮನ ಸೆಳೆಯಿತು. ಅದು ಹೇಗೆ ಏನು ಎತ್ತ ಎಂದೆಲ್ಲಾ ತಿಳಿದುಕೊಂಡ. ಎಂ.ಕಾಂ. ಮುಗಿಯುವಷ್ಟರಲ್ಲಿ ಜ್ಯೂನಿಯರ್ ರೀಸರ್ಚ್ ಫೆಲೊ ಪರೀಕ್ಷೆ ಬರೆದ. ಎಂ.ಕಾಂ. ಪರೀಕ್ಷಾ ಫಲಿತಾಂಶ ಪ್ರಕಟವಾಗುವ ವೇಳೆಗೆ ವಿಶ್ವವಿದ್ಯಾಲಯದಲ್ಲಿ ನಾಲ್ಕು ವರ್ಷಗಳ ಅವಧಿಗೆ ಪ್ರತಿ ತಿಂಗಳ ಸ್ಟೈಫಂಡ್‌ನೊಂದಿಗೆ ಕಿರಿಯ ಸಂಶೋಧಕನಾಗಿ ಆಯ್ಕೆಯಾಗಿದ್ದ. ವಿಶ್ವವಿದ್ಯಾಲಯವೇ ಅವನ ಪಿಎಚ್.ಡಿ. ಅಧ್ಯಯನಕ್ಕೆ ಒಬ್ಬ ಪ್ರಾಧ್ಯಾಪಕರನ್ನು ಮಾರ್ಗದರ್ಶಕರಾಗಿ ಆಯ್ಕೆಮಾಡಿತ್ತು. ಅವನ ಅಧ್ಯಯನಕ್ಕೆ ಬೇಕಾದ ಕೊಠಡಿಯನ್ನು ಒದಗಿಸಿತ್ತು. ವಿಭಾಗದ ಪ್ರಾಧ್ಯಾಪಕರ ಪೈಕಿ ಯಾರನ್ನು ಅತ್ಯಂತ ನಿಷ್ಪ್ರಯೋಜಕ ಎಂದು ಭಾವಿಸಿದ್ದನೋ ಅವರೇ ಅವನ ಮಾರ್ಗದರ್ಶಕರಾಗಿದ್ದರು. ಆ ವಿಷಯವನ್ನು ಉಳಿದ ಕಿರಿಯ ಸಂಶೋಧಕರ ಜೊತೆಯಲ್ಲಿ ಹೇಳಿಕೊಂಡಾಗ ಅವರು “ಮಾರ್ಗದರ್ಶಕರನ್ನು ಸಂಶೋಧಕರು ಹೊಂದಿರಬೇಕೆನ್ನುವುದು ವಿಶ್ವವಿದ್ಯಾಲಯದ ನಿಯಮ. ಅನೇಕ ಮಾರ್ಗದರ್ಶಕರಿಗೆ ಅವರ ವಿದ್ಯಾರ್ಥಿ ಆಯ್ಕೆಮಾಡಿಕೊಂಡಿರುವ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದಂತೆ ಆಳವಾದ ಜ್ಞಾನವೇ ಇರುವುದಿಲ್ಲ. ಸಂಶೋಧನಾರ್ಥಿಗಳ ಪ್ರಶ್ನೆ ಅನುಮಾನಗಳಿಗೆ ಅವರಲ್ಲಿ ಉತ್ತರವೂ ಇರುವುದಿಲ್ಲ. ಯಾವ ಪುಸ್ತಕಗಳನ್ನು ಪರಾಮರ್ಶೆ ಮಾಡಬೇಕೆನ್ನುವ ತಿಳಿವಳಿಕೆಯೂ ಇರುವುದಿಲ್ಲ. ಆರು ತಿಂಗಳಿಗೊಮ್ಮೆ ನಾವು ಸಿದ್ಧಪಡಿಸುವ ಸಂಶೋಧನಾ ವರದಿಗೆ ಸಹಿ ಹಾಕುವ ಕೆಲಸವನ್ನಷ್ಟೇ ಅವರು ಮಾಡುತ್ತಾರೆ. ಕೆಲವರಂತೂ ಹಾಗೆ ಸಹಿಹಾಕುವುದಕ್ಕೆ ನಿರ್ದಿಷ್ಟ ಮೊತ್ತವನ್ನೂ ವಸೂಲಿ ಮಾಡಿಕೊಳ್ಳುತ್ತಾರೆ. ಆದ್ದರಿಂದ ನಾಮಕಾವಾಸ್ತೆ ಮಾರ್ಗದರ್ಶಕರನ್ನು ಪಕ್ಕಕ್ಕಿರಿಸಿ ನಮ್ಮ ಶ್ರದ್ದ ಶ್ರಮದ ಮೂಲಕವೇ ಪಿಎಚ್.ಡಿ. ಪದವಿ ಗಳಿಸಿಕೊಳ್ಳಬೇಕಾಗುತ್ತದೆ” ಎಂದು ಹೇಳಿದಾಗ ಸಮಾಧಾನವಾಯಿತು. ನಾಲ್ಕು ವರ್ಷ ಮುಗಿಯುವುದರೊಳಗಾಗಿ ಸಂಶೋಧನ ನಿಬಂಧವನ್ನು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಲೇಬೇಕೆಂದು ಸಂಕಲ್ಪ ಮಾಡಿ ಕಾರ್ಯಪ್ರವೃತ್ತನಾದ. ಪಿಎಚ್.ಡಿ. ಅಧ್ಯಯನ ಮಾಡುತ್ತಿದ್ದಾಗಲೇ ಅಧ್ಯಾಪಕನಾಗಲು ಅಗತ್ಯವಾದ ಅರ್ಹತಾ ಪರೀಕ್ಷೆ ಎನ್.ಇ.ಟಿ. ಬರೆದು ಉತ್ತೀರ್ಣನಾದ. ಅದರ ಬೆನ್ನ ಹಿಂದೆಯೇ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿಯಿದ್ದ ಅಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಪ್ರಕಟಣೆಯೂ ಹೊರಬಿತ್ತು. ಅದರಲ್ಲಿ ವಾಣಿಜ್ಯಶಾಸ್ತ್ರ ಅಧ್ಯಾಪಕರ ಹುದ್ದೆಯ ಸಂಖ್ಯೆ ಅತ್ಯಧಿಕವಾಗಿತ್ತು. ಬಿ.ಕಾಂ.ನಲ್ಲಿ ಬ್ಯಾಂಕ್, ಎಂ.ಕಾಂ.ನಲ್ಲಿ ಅತ್ಯುತ್ತಮ ಅಂಕಗಳು, ಪಿಎಚ್.ಡಿ. ಅಧ್ಯಯನ ಮುಗಿಸಿದ್ದೇನೆ, ಅಧ್ಯಾಪಕರ ಅರ್ಹತಾ ಪರೀಕ್ಷೆ ಪಾಸ್ ಮಾಡಿದ್ದೇನೆ- ಇವೆಲ್ಲವುಗಳ ಸಹಾಯದಿಂದ ನಾನು ಅಧ್ಯಾಪಕನಾಗಿ ಆಯ್ಕೆಯಾಗುವುದು ಖಚಿತ ಎನ್ನುವ ಆಶಾಭಾವನೆಯಿಂದಲೇ ಅರ್ಜಿ ಸಲ್ಲಿಸಿದ. ಸಂದರ್ಶನಕ್ಕೆ ಕರೆ ಬರುವವರೆಗೆ ನಿರುದ್ಯೋಗಿಯಾಗಿ, ಆಲಸಿಯಾಗಿ ಕಾಲ ಕಳೆಯಬಾರದೆಂದು ಬಿ.ಕಾಂ. ವಿದ್ಯಾರ್ಥಿಗಳಿಗೆ ಸಂಜೆ 5 ರಿಂದ ರಾತ್ರಿ 8 ರವರೆಗೆ ಟ್ಯೂಷನ್ ಹೇಳಿಕೊಡುತ್ತ ವಾಣಿಜ್ಯಶಾಸ್ತ್ರ ವಿಷಯಗಳೊಂದಿಗೆ ಜೀವಂತ ಸಂಬಂಧವಿರಿಸಿಕೊಂಡ. ಆರು ತಿಂಗಳು ಕಳೆಯುವಷ್ಟರಲ್ಲಿ ಪಿಎಚ್.ಡಿ. ಮೌಖಿಕ ಸಂದರ್ಶನ ನಡೆದು ಡಾಕ್ಟರೇಟ್ ಪದವಿ ಘೋಷಣೆಯಾಯಿತಲ್ಲದೆ, ಅಧ್ಯಾಪಕರ ಹುದ್ದೆಯ ಸಂದರ್ಶನವೂ ನಡೆದು, ಆಯ್ಕೆಯೂ ಆಗಿ ಕೆಲವೇ ದಿನಗಳಲ್ಲಿ ಮಲ್ಲೇಶ್ವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅಧ್ಯಾಪಕನಾಗಿ ನಿಯುಕ್ತಿಯೂ ಆದ, ಬದುಕಿನಲ್ಲಿ ಉನ್ನತವಾದ ಧೈಯವಾಗಲೀ ಕನಸಾಗಲೀ ಆದರ್ಶವಾಗಲೀ ಇಲ್ಲದಿದ್ದರೂ ಎದುರಾದ ಸನ್ನಿವೇಶಗಳಿಗೆ ಸೂಕ್ತವಾದ ರೀತಿಯಲ್ಲಿ ಸ್ಪಂದಿಸಿ, ಎಲ್ಲಿಯೂ ನಿಲ್ಲದೆ ಎಂ.ಕಾಂ ಪದವಿ, ಕಿರಿಯ ಸಂಶೋಧಕನಾಗಿ ಆಯ್ಕೆ, ಪಿಎಚ್.ಡಿ. ಪದವಿ, ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣತೆ, ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕನಾಗಿ ನೇಮಕಾತಿ ಇವೆಲ್ಲವೂ ಒಂದರ ಹಿಂದೆ ಒಂದರಂತೆ ಆಗಿಬಂದದ್ದು ಅದೃಷ್ಟವಲ್ಲದೆ ಮತ್ತೇನು? 28ನೇ ವಯಸ್ಸಿನಲ್ಲಿ ಅಧ್ಯಾಪಕನಾಗಿ, ದೊಡ್ಡ ಮೊತ್ತದ ಸರ್ಕಾರಿ ಸಂಬಳವನ್ನು ತೆಗೆದುಕೊಳ್ಳುತ್ತಿರುವ ಮಗ ರಾಧಾಕೃಷ್ಣನ ಬಗೆಗೆ ಭುಜಂಗಯ್ಯ - ಮಹಾಲಕ್ಷ್ಮಿ ದಂಪತಿಗಳಿಗೆ ಅಕ್ಕರೆ ಮಾತ್ರವಲ್ಲ ಅಪಾರವಾದ ಅಭಿಮಾನ.
ಅಧ್ಯಾಪಕನಾಗಿ ಒಂದು ವರ್ಷ ಸೇವೆ ಸಲ್ಲಿಸುತ್ತಿದ್ದಂತೆ ಒಂದರ ಹಿಂದೆ ಒಂದರಂತೆ ಮದುವೆಯ ಸಂಬಂಧಗಳು ಬರತೊಡಗಿದವು. ಅವುಗಳಲ್ಲಿ ಅಪ್ಪ ಅಮ್ಮನ ಕಡೆಯ ಬಂಧುಗಳೂ ಇದ್ದರು, ಬೇರೆಯವರ ಮೂಲಕ ವಿಷಯ ತಿಳಿದುಕೊಂಡ ಹೊರಗಿನವರೂ ಇದ್ದರು. ಅಪ್ಪ ಅಮ್ಮ ಮದುವೆಯಾದಾಗ ಅವರ ವಯಸ್ಸು 24-20. ಮದುವೆಯಾದ ಎರಡು ವರ್ಷಗಳಲ್ಲೇ ರಾಧಕೃಷ್ಣ ಹುಟ್ಟಿದ್ದ. ಆ ಲೆಕ್ಕದಲ್ಲಿ ಇನ್ನಷ್ಟು ತಡಮಾಡದೆ ಮಗನ ಮದುವೆ ಮಾಡಿಬಿಡಬೇಕೆನ್ನುವ ಕಾತರ ಮಹಾಲಕ್ಷ್ಮಿಯವರಲ್ಲಿ ಬಂತು. ಅದನ್ನೇ ಗಂಡನೊಂದಿಗೂ ಹೇಳಿಕೊಂಡರು. ಭುಜಂಗಯ್ಯನವರು “ಮದುವೆ ವಿಷಯದಲ್ಲಿ ಅವನ ತೀರ್ಮಾನ ಮುಖ್ಯ. ನೀನು ಬೇಕಾದರೆ ಕೇಳಿನೋಡು, ಅವನ ಮನಸ್ಸಿನಲ್ಲಿ ಏನಿದೆ ಅಂತ ತಿಳಿದುಕೋ. ಆಮೇಲೆ ಬೇಕಾದರೆ ನಾನು ಮಾತಾಡ್ತೀನಿ” ಅಂತ ಹೆಂಡತಿಯನ್ನು ಪುಸಲಾಯಿಸಿದರು. ಮಗನ ಬಳಿ ತಾಯಿ ಮದುವೆ ವಿಷಯ ಪ್ರಸ್ತಾಪಿಸಿದಾಗ, ಮುಖ ನೋಡಿ ಸುಮ್ಮನೆ ನಕ್ಕ. “ಈ ಬಗ್ಗೆ ಇನ್ನೂ ಏನೂ ಯೋಚನೆ ಮಾಡಿಲ್ಲ, ನಂತರ ಹೇಳ್ತೀನಿ” ಅಂದ. ಮಹಾಲಕ್ಷ್ಮಿ “ಒಳ್ಳೆಯ ಸಂಬಂಧಗಳು ಬಂದಿವೆ, ಅದಕ್ಕೆ ಹೇಳಿದೆ. ವಯಸ್ಸು 29 ಆಯಿತು, ಒಳ್ಳೆಯ ಕೆಲಸ, ಒಳ್ಳೆಯ ಸಂಬಳ, ಇದರಲ್ಲಿ ಯೋಚನೆ ಮಾಡೋದು ಏನಪ್ಪಾ ಇದೆ, ಬೇಗ ಒಪ್ಪಿಗೆ ಕೊಡು” ಎಂದರು. “ಆಯಿತು, ಹೇಳ್ತೀನಿ” ಅಂತ ರಾಧಾಕೃಷ್ಣ ಅಮ್ಮನನ್ನೇನೋ ಕಳಿಸಿಕೊಟ್ಟಿದ್ದ. ಆದರೆ ಒಳಗೆ ನಿಜವಾಗಿ ಯೋಚನೆಗೆ ಬಿದ್ದಿದ್ದ. ಮುವ್ವತ್ತು ದಾಟಿದ ಮೇಲೆ ಬೇಡಿಕೆ ಕುಗ್ಗಬಹುದು. ಬಯಸಿದಂಥ ಹುಡುಗಿಯರು ಸಿಗದೇ ಹೋಗಬಹುದು. ಈಗ ಪ್ರಯತ್ನ ಮಾಡಿದರೆ ಆರು ತಿಂಗಳು ಅಥವಾ ಒಂದು ವರ್ಷದೊಳಗೆ ಮದುವೆಯಾಗಬಹುದು ಎನ್ನುವ ಆಲೋಚನೆ ಬಂತು. ಅಮ್ಮ ಇನ್ನೊಮ್ಮೆ ಮದುವೆ ಪ್ರಸ್ತಾಪ ತಂದಾಗ ಸ್ಪಷ್ಟವಾಗಿ ಹೇಳಿಬಿಡೋಣ ಎಂದು ಸುಮ್ಮನಾದ.
ರಾಧಾಕೃಷ್ಣ ಮದುವೆಯ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಿ, ಹುಡುಗಿಯರನ್ನು ನೋಡಲು ಶುರುಮಾಡಬೇಕು ಅಂದುಕೊಂಡಿರುವಾಗಲೇ ವಿಚಿತ್ರವೊಂದು ಘಟಿಸಿ ಅವನನ್ನು ಗೊಂದಲದಲ್ಲಿ ಕೆಡವಿ ಚಿಂತಾಕ್ರಾಂತನನ್ನಾಗಿ ಮಾಡಿಬಿಟ್ಟಿತು. ಆ ವಿಚಿತ್ರ ಅವನಿಗೆ ಬೀಳತೊಡಗಿದ ಕನಸಿಗೆ ಸಂಬಂಧಪಟ್ಟಿದ್ದು. ವಾರದಲ್ಲಿ ಎರಡು ದಿನ ಅಥವಾ ಮೂರು ದಿನ ಬೆಳಗಿನ ಜಾವ ನಾಲ್ಕರಿಂದ ಐದು ಗಂಟೆಯ ನಡುವಿನ ಸಮಯದಲ್ಲಿ ಒಂದು ಕನಸು ಏನೇನೂ ವ್ಯತ್ಯಾಸವಿಲ್ಲದಂತೆ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿತ್ತು. ರಾಧಾಕೃಷ್ಣನ ಕೈಗಳು ರೆಕ್ಕೆಗಳಂತಾಗಿ ಮೇಲಕ್ಕೆ ಚಾಚಿಕೊಂಡು ಹಾರುತ್ತಾ ಹೋಗುತ್ತಿದ್ದ. ಎದುರಿಗೆ ಮಹಾಸುಂದರಿಯೊಬ್ಬಳು ಅದೇ ಭಂಗಿಯಲ್ಲಿ ಉಲ್ಲಾಸದಿಂದ ಹಾರಿಕೊಂಡು ಬರುತ್ತಿದ್ದಳು. ಸುತ್ತಮುತ್ತ ನಿಸರ್ಗ ರಮಣೀಯ ದೃಶ್ಯಗಳು. ಆಕಾಶ ಕೈಗೆಟಕುವಂತೆ ಇಬ್ಬರೂ ಹಾರಿಕೊಂಡು ಹತ್ತಿರ ಹತ್ತಿರ ಬರುತ್ತಿರಬೇಕಾದರೆ ರಾಧಾಕೃಷ್ಣನ ಬಾಯಿಂದ ಸವಿಗಾನ ಲಹರಿ ಹೊಮ್ಮುತ್ತಿತ್ತು. ಅದು ಒಂದು ದಿನ “ಅಮರ ಮಧುರ ಪ್ರೇಮ, ನೀ ಬಾ ಬೇಗ ಚಂದಮಾಮ” ಅಂತಲೂ ಇನ್ನೊಂದು ದಿನ “ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ” ಅಂತಲೂ, ಮತ್ತೊಂದು ದಿನ “ಬಾರೇ ಬಾರೇ ಚಂದದ ಚೆಲುವಿನ ತಾರೆ” ಅಂತಲೂ ಮಗದೊಂದು ದಿನ ನನ್ನ ನಿನ್ನ ಮನವು ಸೇರಿತು, ನಿನ್ನ ನನ್ನ ಹೃದಯ ಹಾಡಿತು” ಅಂತಲೂ ಬದಲಾಗುತ್ತಿದ್ದುದನ್ನು ಬಿಟ್ಟರೆ ಉಳಿದದ್ದು ಏನೂ ವ್ಯತ್ಯಾಸವಾಗುತ್ತಿರಲಿಲ್ಲ. ವ್ಯಥೆಯ ಸಂಗತಿ ಅಂದರೆ ಇಬ್ಬರದೂ ತೆರೆದ ಬಾಹುಗಳು ಇನ್ನೇನು ಆಲಿಂಗಿಸಿದವು ಅನ್ನುವಷ್ಟರಲ್ಲಿ ಕನಸು ಕೊನೆಯಾಗಿ ಅಪ್ಪುಗೆಯ ಸುಖವೇ ಇಲ್ಲದಂತಾಗಿಬಿಡುತ್ತಿತ್ತು. ಅಷ್ಟು ಹೊತ್ತಿಗೆ ಕನಸೊಡೆದು ಎಚ್ಚರವಾಗಿಬಿಡುತ್ತಿತ್ತು. ಹಾಗೆ ಎಚ್ಚರವಾದ ಮೇಲೆ ಮತ್ತೆ ನಿದ್ದೆ ಬರದೆ ಬೆಳಗಾಗುವವರೆಗೆ ಒದ್ದಾಡಬೇಕಾಗುತ್ತಿತ್ತು. ತೋಳುಗಳಲ್ಲಿ ತೋಳುಗಳನ್ನು ಬೆಸೆಯುವಂತೆ ಹಾರಿಕೊಂಡು ಬರುತ್ತಿದ್ದ ಸುಂದರಿಯ ಮುಖ ಮಾತ್ರ ಚಿತ್ರ ಬರೆದಂತೆ ಅವನ ಕಣ್ಣು ಮತ್ತು ಮನಸ್ಸಿನಲ್ಲಿ ನಿಂತುಬಿಟ್ಟಿತ್ತು. ಕಲಾವಿದನಾಗಿದ್ದರೆ ಆ ಮುಖದ ಚೆಲುವಿನ ಚಿತ್ತಾರವನ್ನು ಬಿಡಿಸಿಬಿಡುತ್ತಿದ್ದನೇನೋ?! ಪೊಲೀಸ್ ಇಲಾಖೆಯಲ್ಲಿ ವಂಚಕರ, ಹಂತಕರ ಮುಖದ ವಿವರಗಳಿಂದ ಮೂಲವನ್ನು ಹೋಲುವಂತೆ ಚಿತ್ರ ಬಿಡಿಸುತ್ತಾರಲ್ಲ ಹಾಗೆ ಹೇಳಿ ಯಾರಾದರೂ ಕಲಾವಿದರಿಂದ ಚಿತ್ರ ಬಿಡಿಸಿ ನೋಡಲೇ ಎನ್ನುವ ಆಲೋಚನೆಯೂ ಬಂತು. ಆದರೆ ಅಂಥ ಕಲಾವಿದರಿಗಾಗಿ ಹುಡುಕುವುದು, ಕನಸಿನಲ್ಲಿ ಕಂಡದ್ದನ್ನೆಲ್ಲ ಅವರಿಗೆ ಬಣ್ಣಿಸುವುದು ಇದನ್ನೆಲ್ಲ ಮಾಡಲು ಹೋದರೆ, ಇವನು ಯಾರೋ ಲೂಜ್ ಗಿರಾಕಿ ಅಂತ ಅವರಿಗೆ ಅನುಮಾನ ಬಂದು ಗುಲ್ಲೆಬ್ಬಿಸಿ ಅದು ಪ್ರಚಾರವಾಗಿಬಿಟ್ಟರೆ ನಂತರ ಸಮಾಜದಲ್ಲಿ ತಲೆಯೆತ್ತಿಕೊಂಡು ಓಡಾಡುವುದು ಕಷ್ಟವಾಗಿಬಿಡಬಹುದು ಅಂತ ಅನುಮಾನ ಬಂದು ಆ ಪ್ರಯತ್ನಕ್ಕೆ ಕೈ ಹಾಕದೆ ಸುಮ್ಮನಾಗಿಬಿಟ್ಟ, ಆದರೆ ಕನಸು ಮಾತ್ರ ಯಥಾ ರೀತಿಯಲ್ಲಿ ಪುನರಾವರ್ತನೆಯಾಗುವುದು ನಿಲ್ಲಲೇ ಇಲ್ಲ. ಕನಸು ಮುಗಿದು ಎಚ್ಚರವಾಗಿ ಕುಳಿತಾಗಲೆಲ್ಲ ಅವನಿಗೆ ಹುಚ್ಚು ಹಿಡಿದಂತಾಗುತ್ತಿತ್ತು. ಇತ್ತ ಕಡೆ ಅಮ್ಮ ಐದು ದಿವಸಕ್ಕೆ, ವಾರಕ್ಕೆ ಒಮ್ಮೆ ಮಗನ ಬಳಿ ಬಂದು ಪ್ರೀತಿಯಿಂದ “ಮದುವೆ ವಿಷಯ ಏನ್ಮಾಡಿದೆ ಮಗನೆ?” ಅಂತ ಕೇಳುವುದು, ಅದಕ್ಕೆ ರಾಧಾಕೃಷ್ಣ “ಹೇಳ್ತೀನಿ ಇರಮ್ಮ” ಎಂದು ಮುಂದೂಡುತ್ತ ಹೋಗುವುದು ನಡೆದೇ ಇತ್ತು. ಮಗನಿಂದ ನಿಶ್ಚಿತ ಉತ್ತರ ಬರದೇ ಹೋದುದರಿಂದ ಅನುಮಾನಗೊಂಡ ಭುಜಂಗಯ್ಯನವರು ಹೆಂಡತಿಯ ಕಿವಿಯಲ್ಲಿ ಗುಟ್ಟಾಗಿ “ನಿನ್ನ ಮಗಾನೇ ಹುಡುಗೀನ ಹುಡುಕಿಕೊಂಡಿರಬಹುದೇನೋ ನೋಡೆ” ಎಂದರು. “ನನ್ನ ಮಗ ಅಪರಂಜಿ, ಹಂಗೆಲ್ಲ ಮಾಡೋದಿಲ್ಲ” ಅಂತ ಗಂಡನಿಗೆ ಹೇಳಿದರಾದರೂ ಮಹಾಲಕ್ಷ್ಮಿಯವರ ಮನಸ್ಸಿನಲ್ಲಿ ಸಂಶಯದ ಬೀಜವೊಂದು ಊರಿಕೊಂಡುಬಿಟ್ಟಿತ್ತು. ಅದನ್ನು ಹೆಚ್ಚು ಕಾಲ ತಡೆ ಹಿಡಿದುಕೊಳ್ಳಲಾಗದೆ, ಸಮಯ ಸಾಧಿಸಿ ಕೇಳಿಯೇಬಿಟ್ಟರು. “ಏನು ಮಗನೇ, ನಾನು ಎಷ್ಟು ಸಾರಿ ಕೇಳಿದ್ದೀನಿ, ಮದುವೆ ಬಗ್ಗೆ ಒಂದು ತೀರ್ಮಾನಕ್ಕೆ ಬಾ ಅಂತ. ಪ್ರತಿ ಸಾರಿ ಕೇಳಿದಾಗಲೂ ಮುಂದಕ್ಕೆ ಹಾಕ್ಕೊಂಡೇ ಬರ್ತಿದ್ದಿ. ನೀನು ಹೀಗೆ ಮಾಡ್ತಾ ಇರೋದು ನೋಡಿದರೆ ನನಗೆ ಯಾಕೋ ಡೌಟು. ನಿನ್ನ ಮನಸ್ಸಿನಲ್ಲಿ ಯಾವುದಾದರೂ ಹುಡುಗಿ ಇದ್ದರೆ ಹೇಳಿಬಿಡಪ್ಪ” ಎನ್ನುತ್ತಿದ್ದಂತೆ ಒಳಗಿನಿಂದ ಸಿಟ್ಟು ಗುಮ್ಮಿಕೊಂಡು ಬಂದು “ಅಯ್ಯೋ ನನ್ನ ಕಷ್ಟ ನನಗೆ, ನಿನಗೆ ಸುಮಾನ ಆಗ್ಲಿಟ್ಟಿದೆ. ಅದೇನೋ ಹೇಳ್ತಾರಲ್ಲ, ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಅಂತ, ಹಂಗಾಗಿದೆ ನನ್ನ ಕಥೆ. ಸದ್ಯಕ್ಕೆ ನನಗೆ ಹುಡುಗೀನೂ ತೋರಿಸ್ಬೇಡಿ, ನಾನು ಮದುವೇನೂ ಆಗೋದಿಲ್ಲ. ಕೆಲವು ತಿಂಗಳು ಕಳೆಯಲಿ, ಆಮೇಲೆ ನಾನೇ ಹೇಳ್ತೀನಿ ಅಲ್ಲೀವರೆಗೂ ಬಾಯಿ ಮುಚ್ಚಿಕೊಂಡು ಸುಮ್ಮನೆ ಇರಿ” ಎಂದುಬಿಟ್ಟ. ರಾಧಾಕೃಷ್ಣನ ಬಿರುನುಡಿಗಳು ಅಮ್ಮನ ಮರ್ಮಕ್ಕೆ ತಾಗಿತ್ತು. ಪೆಟ್ಟು ತಿಂದ ಹಾವಿನಂತೆ, ಕಣ್ಣಿನಲ್ಲಿ ನೀರು ತುಂಬಿಕೊಂಡು ಅಲ್ಲಿಂದ ಸರಿದುಹೋದರು. ಅಮ್ಮನ ಮನಸ್ಸಿಗೆ ನೋವಾಗುವಂತೆ ಮಾತಾಡಿಬಿಟ್ಟೆ ಎಂದು ರಾಧಾಕೃಷ್ಣನಿಗೂ ಬೇಸರವಾಯಿತು. ಅಮ್ಮ ಇನ್ನಷ್ಟು ದಿವಸ ಈ ಸುದ್ದಿ ಎತ್ತೋದಿಲ್ಲ ಅಂತ ಸಮಾಧಾನವೂ ಆಯಿತು.
ಅಲ್ಲಿಂದಾಚೆಗೆ ರಾಧಾಕೃಷ್ಣನ ವರ್ತನೆಯಲ್ಲಿ ಕೆಲವೊಂದು ಬದಲಾವಣೆಗಳು ಕಾಣಿಸಿಕೊಂಡವು. ಆಗಾಗ ಕನಸಿನಲ್ಲಿ ಬಂದು ಕಾಡುವ ಸುಂದರಿಯನ್ನು ಹೇಗಾದರೂ ಪತ್ತೆ ಮಾಡಬೇಕು. ಮದುವೆಯಾಗುವುದಿದ್ದರೆ ಅವಳನ್ನು ಮಾತ್ರ ಅವಳು ಸಿಗದಿದ್ದರೆ ಮದುವೆಯೇ ಬೇಡ ಎಂದು ನಿರ್ಧರಿಸಿ ಸ್ವಪ್ನಸುಂದರಿಯ ಅನ್ವೇಷಣೆಗೆ ತೊಡಗಿದ. ಅವಳು ಎಲ್ಲಿ ಅಡಗಿದ್ದರೂ ಬಿಡುವುದಿಲ್ಲ ಎಂದು ಹಟ ಹುಟ್ಟಿತು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಹುಡುಕಬೇಕೆಂದು ನಿರ್ಧರಿಸಿದ. ತರಗತಿಗಳಲ್ಲಿ ಪಾಠ ಮಾಡುವಾಗ ಬೋರ್ಡ್ ವರ್ಕ್ ಜಾಸ್ತಿ ಇರುತ್ತಿತ್ತು. ಥಿಯರಿ ಇದ್ದಾಗ, ಪ್ರಶ್ನೆ ಕೇಳುವಾಗ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮುಖ ನೋಡುತ್ತಿದ್ದ. ಈಗ ಬದಲಾದ ಸನ್ನಿವೇಶದಲ್ಲಿ ಹುಡುಗಿಯರ ಮುಖಗಳನ್ನು ಹೆಚ್ಚಿನ ಆಸ್ಥೆಯಿಂದ ಗಮನಿಸುತ್ತಿದ್ದ. ಅಟೆಂಡನ್ಸ್ ಹಾಕುವಾಗ ಎಸ್ ಸಾರ್, ಪ್ರಸೆಂಟ್ ಸರ್ ಅನ್ನುವವರನ್ನೆಲ್ಲ ಕ್ಷಣ ಕಾಲ ನೋಡತೊಡಗಿದ. ಸ್ವಪ್ನಸುಂದರಿಯ ರೂಪಕ್ಕೆ ಹತ್ತಿರ ಬಂದಂಥವರನ್ನು ದಿಟ್ಟಿಸಿ ನೋಡುತ್ತಿದ್ದ. ಪಾಠ ಮಾಡುತ್ತಿರುವಾಗ ಯಾವುದೋ ಒಂದು ಹುಡುಗಿಯ ಮೇಲೆ ಅಚಾನಕವಾಗಿ ದೃಷ್ಟಿ ನೆಟ್ಟುಬಿಡುತ್ತಿತ್ತು. ಮೇಷ್ಟ್ರು ಯಾಕೆ ಹಾಗೆ ನೋಡ್ತಿದ್ದಾರೆ ಅಂತ ಹಾಗೆ ನೋಡಿಸಿಕೊಂಡ ಹುಡುಗಿಯರಿಗೂ ಗಲಿಬಿಲಿ ಆಗುತ್ತಿತ್ತು. ಅಂಥವರು ತಮ್ಮಲ್ಲೇ ಏನೋ ವ್ಯತ್ಯಾಸ ಆಗಿದೆಯಾ ಅನ್ನೋ ರೀತಿಯಲ್ಲಿ ಅತ್ತಿತ್ತ ನೋಡಿ ವೇಲ್ ಸರಿಪಡಿಸಿಕೊಳ್ಳುತ್ತಿದ್ದರು. ಒಂದೊಂದು ತರಗತಿಯಲ್ಲಿ ಏಳೆಂಟು ಹುಡುಗಿಯರಿಗಾದರೂ ಈ ಥರಾ ಅನುಭವ ಆಗುತ್ತಿದ್ದುದರಿಂದ ಮೇಷ್ಟ್ರು ಹೋದ ಮೇಲೆ ಒಬ್ಬರನ್ನೊಬ್ಬರು ಅರ್ಥಗರ್ಭಿತವಾಗಿ ನೋಡಿ ಸಮ್‌ಥಿಂಗ್ ರಾಂಗ್ ಎನ್ನುವಂತೆ ಹುಬ್ಬೇರಿಸುತ್ತಿದ್ದರು. ಮಧ್ಯಾಹ್ನ ಲಂಚ್ ಅವರ್‌ನಲ್ಲಿ ಒಟ್ಟಿಗೆ ಕುಳಿತು “ಆ ರಾಧಾಕೃಷ್ಣ ಮೇಷ್ಟ್ರಿಗೆ ಏನೋ ಆಗಿದೆ? ನಮ್ಮ ಮೇಲೆ ದೃಷ್ಟಿ ನಿಲ್ಲಿಸಿ ತಿನ್ನೋ ಥರಾ, ಒಂದೊಂದು ಸಾರಿ ಚಕಿತರಾದವರಂತೆ ನೋಡುತ್ತಿರುತ್ತಾರೆ. ಏನಾಗಿದೆ ಅವರಿಗೆ?” ಎಂದು ಅನುಮಾನ, ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು. ಈ ಸುದ್ದಿ ತರಗತಿಯಿಂದ ತರಗತಿಗೆ ಓಡಾಡಿ, ಕೊನೆಗೆ ಒಂದಷ್ಟು ಹುಡುಗಿಯರು ಸೇರಿಕೊಂಡು ಪ್ರಿನ್ಸಿಪಾಲರ ಬಳಿ ಮೌಖಿಕವಾಗಿ ದೂರು ಕೊಟ್ಟಿದ್ದೂ, ಅವರು ರಾಧಾಕೃಷ್ಣನನ್ನು ವಿಚಾರಣೆಗೊಳಪಡಿಸಿ ಎಚ್ಚರಿಕೆ ನೀಡಿದ್ದೂ ಆಯಿತು. ನಂತರ ಆ ವಿಚಿತ್ರ ವರ್ತನೆಯನ್ನು ರಾಧಾಕೃಷ್ಣ ತರಗತಿಗಳಲ್ಲಿ ನಿಯಂತ್ರಣ ಮಾಡಿಕೊಂಡರೂ ಕಾಲೇಜು ಮತ್ತು ಮನೆಯಿಂದ ಹೊರಗಡೆ ಇದ್ದ ಸಂದರ್ಭದಲ್ಲಿ ಸ್ವಲ್ಪ ಹೆಚ್ಚೇ ಆಯಿತು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಬಸ್ಸಿನಲ್ಲಿ ಪ್ರಯಾಣ ಮಾಡುವಾಗ, ಅಂಗಡಿ ಹೋಟೆಲ್ಲುಗಳಿಗೆ ಹೋದಾಗ, ಸಭೆ ಸಮಾರಂಭ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ, ಮಾರುಕಟ್ಟೆಯಲ್ಲಿ ಸುಳಿದಾಡುವಾಗ ಎದುರಿಗೆ ಸುಂದರ ಹೆಣ್ಣುಮಗಳೊಬ್ಬಳು ಸುಳಿದರೆ ಸಾಕು ಇವಳು ಆ ಸ್ವಪ್ನಸುಂದರಿಯೇ ಇರಬಹುದಾ ಅಂತ ಅನುಮಾನ ಜಾಗೃತವಾಗಿ ಬಿಟ್ಟ ಕಣ್ಣು ಬಿಟ್ಟಂತೆ ಆಗಿಬಿಡುತ್ತಿದ್ದ. ಅವನತ್ತ ನೋಡದಿದ್ದವರೇನೋ ತಮ್ಮ ಪಾಡಿಗೆ ತಾವು ಹೋಗಿಬಿಡುತ್ತಿದ್ದರು. ಅವನು ಹಾಗೆ ನೋಡುತ್ತಿದ್ದಾನೆಂದು ಗೊತ್ತಾದವರು ಭಯ ಸಂಕೋಚ ಕೋಪ ಅಸಹ್ಯ ಆಶ್ಚರ್ಯಗಳಿಂದ ಕೂಡಿದ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಗೆಳತಿಯರ ಜೊತೆಯಲ್ಲಿದ್ದ ಹುಡುಗಿಯರಂತೂ “ಆ ಕೋತಿ ನೋಡು, ಹೆಂಗ್ ನೋಡ್ತಾ ಇದೆ” ಅಂತ ಅಪಹಾಸ್ಯ ಮಾಡಿ ಮುಂದಕ್ಕೆ ಹೋಗುತ್ತಿದ್ದರು. ಹೀಗೆ ಯಾರಾದರೂ ಬೈದಾಗ, ತಮಾಷೆ ಮಾಡಿದಾಗ, ಕೋಪ ಮಾಡಿಕೊಂಡಾಗ ರಾಧಾಕೃಷ್ಣ ಜಾಗೃತಾವಸ್ಥೆಗೆ ಬರುತ್ತಿದ್ದನಾದರೂ, ತನ್ನನ್ನು ಸರಿಪಡಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದನಾದರೂ ಸುಂದರ ಹೆಣ್ಣುಮಕ್ಕಳನ್ನು ಕಂಡಾಗ ತನ್ನನ್ನು ನಿಯಂತ್ರಿಸಿಕೊಳ್ಳಲಾಗದೆ ಎಲ್ಲಿಯೋ ಜಾರಿಬಿಡುತ್ತಿದ್ದ. ಮದುವೆ ಮನೆಗೆ ಹೋದಾಗಲಂತೂ ಅಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಂಥ ಹೆಣ್ಣುಮಕ್ಕಳ ಸಂಖ್ಯೆಯೇ ಜಾಸ್ತಿಯಾಗಿರುತ್ತಿದ್ದುದರಿಂದ ಕುಳಿತ ಜಾಗದಿಂದ ಒಬ್ಬೊಬ್ಬರನ್ನೇ ನೋಡಿನೋಡಿ, ಇವಳಲ್ಲ, ಇವಳಲ್ಲ ಎಂದು ನಿರಾಶೆಗೊಳ್ಳುವಷ್ಟರಲ್ಲಿ ಅವನಿಗೆ ತಲೆನೋವು ಬಂದುಬಿಡುತ್ತಿತ್ತು, ಕೆಲವೊಮ್ಮೆ ಹುಚ್ಚು ಹಿಡಿದಂತೆ ಆಗಿಬಿಡುತ್ತಿದ್ದುದೂ ಉಂಟು. ಈ ಸಂಕಟವನ್ನು ಅವನು ಯಾರ ಬಳಿಯೂ ಹೇಳಿಕೊಳ್ಳುವಂತಿರಲಿಲ್ಲ. ಒಂದು ಪಕ್ಷ ಹೇಳಿಕೊಂಡರೂ ಪರಿಹಾರ ಸಿಗುತ್ತಿರಲಿಲ್ಲ. ಹಾಗಾಗಿ ರಾಧಾಕೃಷ್ಣ ಹೇಳಲಾಗದೆ, ತಾಳಲಾಗದೆ ತಳಮಳಿಸುತ್ತಿದ್ದ.
ಹೀಗಿರಬೇಕಾದರೆ ಒಂದು ದಿನ ಬೆಳಗ್ಗೆ ದಿನಪತ್ರಿಕೆ ಓದುತ್ತಾ ಪುಟಗಳನ್ನು ಮಗುಚುತ್ತಿದ್ದ ರಾಧಾಕೃಷ್ಣನ ಕಣ್ಣಿಗೆ ಒಂದು ಆಕರ್ಷಕ ಜಾಹೀರಾತು ಬಿತ್ತು. ಯಾವುದೋ ಜ್ಯೋತಿಷ್ಯಾಲಯದ ಹೆಸರಿನಲ್ಲಿ ಪ್ರಕಟವಾಗಿದ್ದ ಆ ಜಾಹೀರಾತಿನಲ್ಲಿ ಎಲ್ಲ ರೀತಿಯ ದಾಂಪತ್ಯ ಸಮಸ್ಯೆಗಳಿಗೆ ಪರಿಹಾರ, ಸ್ತ್ರೀ ವಶೀಕರಣ, ಒಲಿದ ಹುಡುಗಿಯ ಮನಸ್ಸನ್ನು ಪರಿವರ್ತಿಸುವುದು ಇತ್ಯಾದಿಗಳಿಗೆ ಸಂಬಂಧಿಸಿದ ವಿವರಗಳಿದ್ದವು. ಕೊನೆಯಲ್ಲಿ ನೋಂದಣಿ ಮೂಲಕ ಭೇಟಿಗಾಗಿ ಸಂಪರ್ಕಿಸಿ ಎಂದು ಎರಡು ಪೋನ್ ನಂಬರ್‌ಗಳನ್ನು ಕೊಡಲಾಗಿತ್ತು. ಅದನ್ನು ಓದುತ್ತಿದಂತೆ ವಿಜ್ಞಾನಿಯೊಬ್ಬ ಬಹುಕಾಲದ ಸಂಶೋಧನೆಯಲ್ಲಿ ಯಶಸ್ಸು ಪಡೆದ ಕ್ಷಣದಲ್ಲಿ ಹೇಗೆ ಆನಂದದಿಂದ ಕೂಗಾಡುತ್ತಾನೋ ಅಂಥ ಪರಿಸ್ಥಿತಿ ರಾಧಾಕೃಷ್ಣನದಾಯಿತು. ನನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಅವನೇ ಸರಿಯಾದ ವ್ಯಕ್ತಿ, ಅವನಿಂದ ನನ್ನ ಸಮಸ್ಯೆ ಖಂಡಿತ ಪರಿಹಾರವಾಗುತ್ತದೆ. ಕಾಡುತ್ತಿರುವ ಸ್ವಪ್ನಸುಂದರಿಯನ್ನು ಹಿಡಿದೇ ಹಿಡಿಯುತ್ತೇನೆ ಎನ್ನುವ ಭರವಸೆ ಮೂಡಿತು. ಕೂಡಲೇ ಒಂದು ನಂಬರ್‌ಗೆ ಪೋನ್ ಮಾಡಿದ. ಸ್ವಲ್ಪ ಹೊತ್ತು ರಿಂಗ್ ಆಗಿ ಆ ಕಡೆಯಿಂದ “ಹಲೋ, ಯಾರು ಮಾತಾಡ್ತಿರೋದು?” ಎಂದು ಧ್ವನಿ ಕೇಳಿಸಿತು. ಇವನು ಹೆಸರು ಹೇಳಿದ ಮೇಲೆ ನಿಮ್ಮ ವಯಸ್ಸು, ವೃತ್ತಿ, ಜನ್ಮ ದಿನಾಂಕ ಹೇಳಿ” ಎಂದು ಕೇಳಿತು. ಇವನು ಉತ್ಸಾಹದಿಂದ ಉತ್ತರಿಸಿದ ಮೇಲೆ “ನೀವು ಬಾಯಿ ಬಿಟ್ಟು ಹೇಳಿಕೊಳ್ಳದೇ ಇದ್ದರೂ ನಾವು ಹಿಮಾಲಯದ ಯೋಗಿಗಳ ಬಳಿ ಸಾಧನೆ ಮಾಡಿ ಸಂಪಾದಿಸಿಕೊಂಡಿರುವ ದಿವ್ಯಶಕ್ತಿಯಿಂದ ನಮಗೆ ಎಲ್ಲವೂ ಗೊತ್ತಾಗುತ್ತದೆ. ನಿಮಗಿರೋದು ಒಂದು ಹೆಣ್ಣಿನ ಸಮಸ್ಯೆ ಅಲ್ಲವಾ? ನೀವೇನೂ ಯೋಚನೆ ಮಾಡಬೇಡಿ, ಎಲ್ಲವನ್ನೂ ಪರಿಹಾರ ಮಾಡಿಕೊಡ್ತೀವಿ. ನಮ್ಮ ಜ್ಯೋತಿಷ್ಯಾಲಯ ಇರೋದು ಕೆಂಪೇಗೌಡ ರಸ್ತೆಯಲ್ಲಿ ಮೇನಕಾ ಟಾಕೀಸ್ ಇದೆಯಲ್ಲ ಅದರ ಪಕ್ಕಾನೇ, ಚಗನ್‌ಲಾಲ್ ಬಿಲ್ಡಿಂಗ್ ನಲ್ಲಿ ಎರಡನೇ ಮಹಡಿ, ಯಾವಾಗ ಬರ್ತೀರಿ ಹೇಳಿ, ಅಪಾಯಿಂಟ್‌ಮೆಂಟ್ ಫಿಕ್ಸ್ ಮಾಡಿಕೊಳ್ಳಿ, ಕರೆಗಳು ಬತ್ತಾ ಇರ್ತವೆ, ಒಬ್ಬರ ಬಳಿಯಲ್ಲೇ ಹೆಚ್ಚು ಹೊತ್ತು ಮಾತಾಡಕ್ಕಾಗಲ್ಲ” ಎಂದು ಆ ಜ್ಯೋತಿಷಿ ಆಸೆಯನ್ನೂ ಹುಟ್ಟಿಸಿ ಅವಸರವನ್ನೂ ಮಾಡಿದ. ಕೈಗೆ ಬಂದದ್ದು ಎಲ್ಲಿ ಬಾಯಿಗೆ ಬರದಂತಾಗುತ್ತದೋ ಎಂದು ಒದ್ದಾಡಿಕೊಳ್ಳುತ್ತಲೇ ರಾಧಾಕೃಷ್ಣ “ನಾಳೇನೇ ಬಂದು ಬಿಡ್ತೀನಿ ಸ್ವಾಮಿ” ಎನ್ನುತ್ತಿದ್ದಂತೆ “ಸರಿ ಹಾಗಾದರೆ, ಸಂಜೆ ನಾಲ್ಕೂವರೆ ಗಂಟೆಗೆ ಬಂದು ಬಿಡಿ” ಎಂದು ಜ್ಯೋತಿಷಿ ಸಂಪರ್ಕ ಕಡಿತಗೊಳಿಸಿದ.
ಮಾರನೆಯ ದಿನ ಸರಿಯಾಗಿ ನಾಲ್ಕೂವರೆ ಗಂಟೆಗೆ ಜ್ಯೋತಿಷ್ಯಾಲಯಕ್ಕೆ ಹೋದ ರಾಧಾಕೃಷ್ಣ ಮುಚ್ಚಿದ ಬಾಗಿಲಿನ ಮೇಲ್ತುದಿಯಲ್ಲಿದ್ದ ಕರೆಗಂಟೆ ಒತ್ತಲು ಒಳಗೆ ಕಿಣಿ ಕಿಣಿ ನಾದವಾಗಿ ನಿಲ್ಲುತ್ತಿದ್ದಂತೆ “ಬನ್ನಿ ಒಳಗೆ” ಎನ್ನುವ ಗಡುಸಾದ ಧ್ವನಿ ಕಿವಿಗೆ ಅಪ್ಪಳಿಸಿತು. ನಿನ್ನೆ ಪೋನಿನಲ್ಲಿ ಮಾತಾಡಿದ್ದು ಅದೇ ಧ್ವನಿ ಅಂತ ಖಾತ್ರಿಯಾಗಿ ರಾಧಾಕೃಷ್ಣ ಬಾಗಿಲು ತಳ್ಳಿ ಒಳಗೆ ಕಾಲಿಡುತ್ತಿದ್ದಂತೆ ಮೇಲಿಂದ ಇಳಿಬಿದ್ದ ಕೆಂಪು ಬಣ್ಣದ ತೆರೆ ಮುಖದತ್ತ ಸುಳಿಯಿತು. ಅದನ್ನು ಪಕ್ಕಕ್ಕೆ ಸರಿಸಿ ಭಯಭಕ್ತಿಯಿಂದ ಒಳಗೆ ಹೆಜ್ಜೆಯಿರಿಸಲು ಎದುರುಗಡೆಯೇ ಕೇಸರಿ ಪಂಚೆ, ಕೆಂಪು ಜುಬ್ಬಾ, ತಲೆಯಿಂದ ಭುಜದ ಎರಡೂ ಕಡೆ ಇಳಿಬಿದ್ದ ದಟ್ಟ ಕಪ್ಪು ಕೂದಲು, ಹಣೆ ತುಂಬ ಅರಿಶಿನ, ನಡುವೆ ರಕ್ತವರ್ಣದ ಕೆಂಪು ಬೊಟ್ಟು, ಸ್ತೂಲ ದೇಹದ ವ್ಯಕ್ತಿಯೊಂದು ಗೋಡೆಗೊರಗಿಕೊಂಡು ಹಳೆಯ ರತ್ನಗಂಬಳಿಯ ಮೇಲೆ ಕುಳಿತು ರಾಧಾಕೃಷ್ಣನನ್ನೇ ದಿಟ್ಟಿಸುತ್ತಾ “ಹೂಂ, ಬನ್ನಿ” ಎಂದು ಗರ್ಜಿಸಿದಂತಾಯಿತು. ಆತ ಕೈ ತೋರಿದ ಕಡೆ ರಾಧಾಕೃಷ್ಣ ಹೋಗಿ ಕುಳಿತುಕೊಂಡ. ಜ್ಯೋತಿಷಿಯ ಎದುರಿಗೆ ನಾಲ್ಕು ಕೈಗಳಲ್ಲಿ ಆಯುಧಗಳನ್ನು ಹಿಡಿದು ನಾಲಿಗೆಯನ್ನು ಹೊರಚಾಚಿ ರಕ್ತಬಲಿಗಾಗಿ ಕಾದಿರುವಂಥ ದೇವಿಯ ವಿಗ್ರಹ ಭಯ ಹುಟ್ಟಿಸುವಂತಿತ್ತು. ಭೀತಿಯನ್ನು ಮೆಟ್ಟಲು ರಾಧಾಕೃಷ್ಣ ಪ್ರಯತ್ನಿಸುತ್ತಿರುವಂತೆ ಜ್ಯೋತಿಷಿ ಗುಡುಗಿನಂಥ ಧ್ವನಿಯಲ್ಲಿ “ನಿಮ್ಮ ತೊಂದರೆ ಏನೂ ಅಂತ ದೇವಿಯೆದುರು ಅರಿಕೆ ಮಾಡಿಕೊಳ್ಳಿ, ಅಮ್ಮನೇ ಅದಕ್ಕೆ ಪರಿಹಾರ ಸೂಚಿಸುತ್ತಾಳೆ” ಎಂದ. ರಾಧಾಕೃಷ್ಣ ವಿನೀತ ಭಾವದಲ್ಲಿ ಎಲ್ಲವನ್ನೂ ಹೇಳಿಕೊಂಡ ನಂತರ ಜ್ಯೋತಿಷಿ “ಅಮ್ಮನ ಬಳಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ. ಅದನ್ನು ಕೇಳುವ ಮೊದಲು ಅಮ್ಮನನ್ನು ಪ್ರಸನ್ನಳಾಗಿಸಲು ಒಂದು ಪೂಜೆ ಮಾಡಿಬಿಡ್ತೀನಿ” ಎಂದು ಹೇಳಿ ನಾಲ್ಕು ನಿಂಬೆ ಹಣ್ಣುಗಳನ್ನು ಕೈಗೆ ತೆಗೆದುಕೊಂಡು ಗಂಧದ ಕಡ್ಡಿಗಳ ಒಂದು ಕಟ್ಟಿಗೆ ವಿಗ್ರಹದೆದುರು ಉರಿಯುತ್ತಿದ್ದ ದೀಪದಿಂದ ಬೆಂಕಿ ಸೋಂಕಿಸಿಕೊಂಡು ಹೊಗೆಯನ್ನು ನಿಂಬೆಹಣ್ಣುಗಳತ್ತ ತಳ್ಳಿ ಸಂಸ್ಕೃತದ ಮಂತ್ರಗಳನ್ನು ಮಣಮಣ ಉಚ್ಚರಿಸುತ್ತಾ ನಡುನಡುವೆ ಜೋರಾಗಿ 'ಫಟ್, ಫಟ್' ಎನ್ನುತ್ತಿದ್ದ. ಪೂಜೆ ಮುಗಿದಮೇಲೆ ಗಂಧದ ಕಡ್ಡಿಗಳನ್ನು ರಾಧಾಕೃಷ್ಣನ ಕೈಯಲ್ಲಿರಿಸಿ ದೇವಿಗೆ ಪೂಜೆ ಸಲ್ಲಿಸಲು ಹೇಳಿದ. ರಾಧಾಕೃಷ್ಣ ಭಕ್ತಿ ಪೂರ್ವಕವಾಗಿ ದೇವಿಗೆ ಗಂಧದ ಕಡ್ಡಿಗಳನ್ನು ಸುತ್ತಿಸಿದ. ಜ್ಯೋತಿಷಿ ಗಂಧದ ಕಡ್ಡಿಗಳನ್ನು ಚಿಪ್ಪಿನಲ್ಲಿದ್ದ ಬಾಳೆ ಹಣ್ಣುಗಳಿಗೆ ಸಿಕ್ಕಿಸಿ ದೇವಿಯ ಪಾದಗಳ ಬುಡದಲ್ಲಿದ್ದ ಪುಸ್ತಕವನ್ನು ಕೈಗೆತ್ತಿಕೊಂಡು ಕಣ್ಣುಗಳ ಬಳಿತಂದು ಭಕ್ತಿಪೂರ್ವಕವಾಗಿ ವಂದಿಸಿದ. ಪುಸ್ತಕದ ಮೊದಲ ಪುಟದಲ್ಲಿ ಕಾಡುಹಂದಿಯ ಮುಳ್ಳಿನಂಥ ಒಂದು ಕಡ್ಡಿಯಿತ್ತು. ಅದನ್ನು ರಾಧಾಕೃಷ್ಣನ ಕೈಗೆ ಕೊಟ್ಟು, ಕಣ್ಮುಚ್ಚಿ ಮನೆದೇವರನ್ನು ಸ್ಮರಿಸಿ, ಪುಸ್ತಕದ ಯಾವುದಾದರೂ ಪುಟದಲ್ಲಿ ನಾಟುವಂತೆ ಕಡ್ಡಿಯನ್ನು ತೂರಿಸಬೇಕೆಂದು ತಿಳಿಸಿದ. ರಾಧಾಕೃಷ್ಣ ಹಾಗೆಯೇ ಮಾಡಲು, ಜ್ಯೋತಿಷಿ ಕಡ್ಡಿ ತೂರಿದ್ದ ಪುಟವನ್ನು ತೆರೆದು ಓದಿಕೊಂಡ. ಒಳಗಿನ ಅಕ್ಷರಗಳು ಕಾಣುತ್ತಿದ್ದವಾದರೂ ಮೋಡಿ ಲಿಪಿಯಲ್ಲಿ ಇದ್ದುದರಿಂದ ರಾಧಾಕೃಷ್ಣನಿಗೆ ಅರ್ಥವಾಗಲಿಲ್ಲ. ಜ್ಯೋತಿಷಿ ಮಾತ್ರ ಓದಿ ಅರ್ಥ ಮಾಡಿಕೊಂಡವನಂತೆ ತಲೆಯಾಡಿಸುತ್ತ ನಿನಗೆ ಕನಸಿನಲ್ಲಿ ಕಂಡಿರುವ ಕನ್ಯಾರತ್ನ ಇಲ್ಲಿಂದ ಐದುನೂರು ಕಿಲೋಮೀಟರುಗಳ ದೂರದಲ್ಲಿರುವ ಪಟ್ಟಣದಲ್ಲಿದೆ. ದೇವಿ ಕೃಪೆ ಮಾಡಿರುವುದರಿಂದ ಅವಳೇ ತಾನಾಗಿ ಬಂದು ನಿನ್ನೆದುರು ಪ್ರತ್ಯಕ್ಷವಾಗ್ತಾಳೆ. ಈಗ ನಿನ್ನ ಗ್ರಹಗತಿ ಅಷ್ಟೊಂದು ಚೆನ್ನಾಗಿಲ್ಲದಿರುವುದರಿಂದ ಕೆಲವು ತಿಂಗಳು ಕಾಯಬೇಕಾಗುತ್ತದೆ. ಅಲ್ಲಿಯವರೆಗೆ ನೀನು ಆಕಾಶಕ್ಕೆ ಹಾರಿ ಭೂಮಿ ಮೇಲೆ ಬಿದ್ದರೂ ಅವಳು ಸಿಗುವುದಿಲ್ಲ. ನಿನ್ನ ಗ್ರಹಗತಿ ಸರಿ ಮಾಡುವುದಕ್ಕೆ ಮುಂದಿನ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಒಂದು ಶಾಂತಿ ಪೂಜೆ ನೆರವೇರಿಸುತ್ತೇನೆ. ಎಲ್ಲ ಸೇರಿ ಐದು ಸಾವಿರ ರೂಪಾಯಿ ಕೊಟ್ಟು ಹೋಗಪ್ಪ” ಎಂದ. ಜ್ಯೋತಿಷಿಯ ಮಾತಿನಲ್ಲಿ 'ಕಂಟಕ ನಿವಾರಣೆ ಆಗುತ್ತೆ, ಹುಡುಗಿ ತಾನಾಗೇ ಪ್ರತ್ಯಕ್ಷವಾಗುತ್ತಾಳೆ' ಎನ್ನುವ ಎರಡು ವಿಚಾರಗಳಷ್ಟೇ ರಾಧಾಕೃಷ್ಣನ ತಲೆಯಲ್ಲಿ ಉಳಿದವು. ಏನೂ ಮಾತನಾಡದೆ ಐದು ಸಾವಿರ ರೂಪಾಯಿಗಳನ್ನು ಜ್ಯೋತಿಷಿ ಸೂಚಿಸಿದಂತೆ ದೇವಿಯ ಪದತಲದಲ್ಲಿಟ್ಟು ಭಕ್ತಿಪೂರ್ವಕವಾಗಿ ನಮಸ್ಕರಿಸಿ ಹೊರಬಂದ.
ಜ್ಯೋತಿಷಿಯ ಮಾತಿನಲ್ಲಿ ನಂಬಿಕೆಯಿರಿಸಿದ್ದ ರಾಧಾಕೃಷ್ಣನಿಗೆ ಸ್ವಪ್ನಸುಂದರಿ ಸಿಕ್ಕೇ ಸಿಗುತ್ತಾಳೆ ಎನ್ನುವ ಭರವಸೆಯಿತ್ತು. ಈಗ ಎಲ್ಲೂ ಅವನು ಸುಂದರಿಯರನ್ನು ದಿಟ್ಟಿಸಿ ನೋಡದೆ ಅವಳಾಗಿಯೇ ಬರುತ್ತಾಳಲ್ಲ, ಬರಲಿ ಎಂದುಕೊಂಡಿದ್ದ. ಇಷ್ಟೆಲ್ಲ ಆದಮೇಲೂ ವಾರದಲ್ಲಿ ಎರಡು ಮೂರು ದಿನ ಕನಸಿನಲ್ಲಿ ಸುಂದರಿ ಹಾರಿಕೊಂಡು ಬರುವುದಾಗಲೀ, ಆಲಿಂಗನ ಸುಖದಿಂದ ತಪ್ಪಿಸಿಕೊಂಡು ಹೋಗುತ್ತಿದ್ದುದಾಗಲೀ, ಪ್ರೇಮಗೀತೆಯೊಂದು ಮೂಡಿಬರುತ್ತಿದ್ದುದಾಗಲೀ, ಕನಸೊಡೆದ ಮೇಲೆ ನಿದ್ದೆ ಬಾರದೆ ಪರಿತಪಿಸುತ್ತಿದ್ದುದಾಲೀ ತಪ್ಪಿರಲಿಲ್ಲ. ಹೀಗಿರುವಾಗಲೇ ಎಂ.ಕಾಂ. ಸಹಪಾಠಿ ಪುರುಷೋತ್ತಮ ಫೋನ್ ಮಾಡಿ ಮುಂದಿನ ತಿಂಗಳು ಚಿಕ್ಕಮಗಳೂರಿನಲ್ಲಿ ಅವನ ತಂಗಿಯ ಮದುವೆ ಇರುವುದಾಗಿಯೂ, ಆ ವೇಳೆಗೆ ಕಾಲೇಜಿಗೆ ಬೇಸಿಗೆ ರಜಾ ಇರುವುದರಿಂದ ಯಾವುದೇ ಸಬೂಬು ಹೇಳದೆ ಮದುವೆಗೆ ಬರಬೇಕೆಂದೂ, ಮುಂದಿನ ವಾರವೇ ಮನೆಗೆ ಲಗ್ನಪತ್ರಿಕೆ ಕೊಡಲು ಬರುವುದಾಗಿಯೂ ತಿಳಿಸಿದ. ಮದುವೆಗೆ ಅಂತ ಯಾರು ಅಷ್ಟು ದೂರ ಹೋಗೋದು ಎನ್ನುವ ಲೆಕ್ಕಾಚಾರದಲ್ಲಿ “ಆಗಲಿ ಪುರು ನೋಡ್ತೀನಿ, ಆದಷ್ಟೂ ಬರುವುದಕ್ಕೆ ಪ್ರಯತ್ನ ಮಾಡ್ತೀನಿ” ಅಂದ. ಆದರೆ ಪುರುಷೋತ್ತಮ ಲಗ್ನಪತ್ರಿಕೆ ಕೊಡಲು ಒಬ್ಬನೇ ಬರಲಿಲ್ಲ, ತಂಗಿ ಸಂಚಿತಾಳನ್ನೂ ಕರೆದುಕೊಂಡು ಬಂದು, ಅವಳಿಂದಲೇ ಪತ್ರಿಕೆ ಕೊಡಿಸಿ, ಮದುವೆಗೆ ಹೋಗೋದರಿಂದ ತಪ್ಪಿಕೊಳ್ಳಲಾಗದೇ ಇರೋ
ರೀತಿಯಲ್ಲಿ ಕಮಿಟ್ ಮಾಡಿದ. “ಇವಳನ್ನು ಮದುವೆಯಾಗುತ್ತಿರುವ ಹುಡುಗ, ಅಂದರೆ ನನ್ನ ಭಾವ ಆಗಲಿರುವವನು ಬೆಂಗಳೂರಿನ ಇನ್ಫೋಸಿಸ್‌ನಲ್ಲಿ ಸಾಫ್ಟ್ವೇರ್ ಇಂಜಿನಿಯರ್. ಅವನ ಜನ್ಮಸ್ಥಳ ಚಿಕ್ಕಮಗಳೂರು. ತಂದೆ ತಾಯಿ ಬಂಧು ಬಳಗ ಎಲ್ಲ ಅಲ್ಲೇ ಇರುವುದರಿಂದ ಮದುವೆಯನ್ನೂ ಅಲ್ಲೇ ಮಾಡಿಕೊಡಿ ಅಂತ ಕೇಳಿಕೊಂಡ, ನಾವೂ ಒಪ್ಪಿಕೊಂಡಿದ್ದೇವೆ. ಮದುವೆಗೆ ಎರಡು ದಿನ ಮುಂಚೆಯೇ ನಾವು ಅಲ್ಲಿಗೆ ಹೋಗಿ ಹೋಟೆಲ್ ಮಯೂರ ಫಾರೆಸ್ಟ್ ವ್ಯೂನಲ್ಲಿ ಉಳಿದುಕೊಳ್ಳುತ್ತೇವೆ. ನೀನೂ ನಮ್ಮ ಜೊತೆಯಲ್ಲಿ ಬಂದರೆ ಸಂತೋಷ. ಇಲ್ಲ ಅಂದರೆ ಮದುವೆ ದಿನ ಬೆಳಗ್ಗೆ ಬೆಂಗಳೂರಿನಿಂದ ಹೊರಟರೂ ಹನ್ನೊಂದು ಗಂಟೆಗೆಲ್ಲ ಸರ್ಕಾರಿ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಕಲ್ಯಾಣ ಮಂಟಪಕ್ಕೆ ಬರಬಹುದು. ಮುಹೂರ್ತ 11.30 ರಿಂದ 12.15, ಹಿಂದಿನ ದಿನ ರಾತ್ರಿ ಆರತಕ್ಷತೆ ಇರಲ್ಲ, ಮದುವೆ ಮುಗಿದ ಮೇಲೆ ಮಧ್ಯಾಹ್ನ 1.00 ಗಂಟೆಯಿಂದ ಆರತಕ್ಷತೆ ಇರುತ್ತದೆ. ಆ ದಿನ ಅಲ್ಲೇ ಉಳಿದುಕೊಂಡು ಮಾರನೆಯ ದಿನ ಎಲ್ಲರೂ ಒಟ್ಟಿಗೆ ಬೆಂಗಳೂರಿಗೆ ಹೊರಟು ಬರೋಣ ಬಾ” ಎಂದ. ಪುರುಷೋತ್ತಮನ ಮಾತುಗಳಲ್ಲಿದ್ದ ಆಪ್ತತೆ ರಾಧಾಕೃಷ್ಣನನ್ನು ತಟ್ಟಿತು. ಈ ಮದುವೆಗೆ ಹೋಗಲೇಬೇಕು ಎಂದು ತೀರ್ಮಾನಿಸಿದ. “ಮರು, ನೀನು ಇಷ್ಟೆಲ್ಲ ಹೇಳಿದ ಮೇಲೆ, ಮದುವೆ ಹೆಣ್ಣಿನಿಂದಲೇ ಆಹ್ವಾನ ಕೊಡಿಸಿದ ಮೇಲೆ ನಾನು ತಪ್ಪಿಸಿಕೊಳ್ಳುವುದುಂಟೇ? ಬಂದೇ ಬರ್ತೀನಿ” ಎಂದು ಹೇಳಿ, ಅಮ್ಮನನ್ನು ಕರೆದು ಅವರಿಬ್ಬರನ್ನೂ ಪರಿಚಯಿಸಿ, ಅಮ್ಮ ಅವರಿಬ್ಬರಿಗೂ ಮೈಸೂರು ಪಾಕು, ಚೌಚ್, ಕಾಫಿಯಿಂದ ಉಪಚರಿಸಿದ್ದಾದ ನಂತರ “ನಿನ್ನ ತಂಗಿ ಮದುವೆಗೆ ಎಷ್ಟೋ ಜನ ಹುಡುಗಿಯರು ಬಂದಿರುತ್ತಾರಲ್ಲ, ಅವರ ಪೈಕಿ ಅಂದವಾಗಿರುವ ಹುಡುಗಿಯೊಂದನ್ನು ಅಲ್ಲೇ ನನ್ನ ಮಗನಿಗೆ ಗಂಟು ಹಾಕಿಬಿಡಪ್ಪ ಮರು” ಎನ್ನಲು ಎಲ್ಲರೂ ಗೊಳ್ಳೆಂದು ನಕ್ಕರು. “ಮಲೆನಾಡಿನ ಹುಡುಗಿಯರಲ್ಲಿ ಅಂದ ಚಂದಕ್ಕೇನು ಕೊರತೆ? ಒಂದು ಒಳ್ಳೆಯ ಹುಡುಗಿಯನ್ನು ಅಲ್ಲೇ ನೋಡೋಣಂತೆ ಇರಿ” ಎಂದು ಅಮ್ಮನಿಗೆ ಭರವಸೆಯಿತ್ತು ಪುರುಷೋತ್ತಮ ತಂಗಿಯೊಂದಿಗೆ ಹೊರಟ.
ಮದುವೆ ದಿನವೇ ಚಿಕ್ಕಮಗಳೂರಿಗೆ ಹೋಗೋದು ಸ್ವಲ್ಪ ಗಡಿಬಿಡಿಯಾಗುತ್ತದೆ, ಮದುವೆಯ ಸಿದ್ಧತೆಯಲ್ಲಿರುವ ಅವರಿಗೆ ತೊಂದರೆ ಕೊಡುವುದೂ ಬೇಡ ಎಂದು ಆಲೋಚಿಸಿದ ರಾಧಾಕೃಷ್ಣ ಹಿಂದಿನ ದಿನ ಮಧ್ಯಾಹ್ನವೇ ಬೆಂಗಳೂರಿನಿಂದ ಬಸ್ಸಿನಲ್ಲಿ ಹೊರಟು ರಾತ್ರಿ ಎಂಟು ಗಂಟೆಗೆ ಚಿಕ್ಕಮಗಳೂರು ತಲುಪಿದ. ಬಸ್ ನಿಲ್ದಾಣದ ಎದುರಿಗೇ ಇದ್ದ ಪರಾಗ್ ವಸತಿಗೃಹದಲ್ಲಿ ರೂಮು ತೆಗೆದುಕೊಂಡು, ಆಯಾಸ ಪರಿಹಾರಕ್ಕೆಂದು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಅದೇ ಹೋಟೆಲ್ಲಿನಲ್ಲಿ ಊಟ ಮುಗಿಸಿ ಕಲ್ಯಾಣ ಮಂಟಪದ ದಾರಿಯಲ್ಲಿ ನಡೆಯುತ್ತಾ ಹೋದ. ಐದು ನಿಮಿಷ ನಡೆಯುವಷ್ಟರಲ್ಲೇ ಕಲ್ಯಾಣ ಮಂಟಪ ಸಿಕ್ಕಿತು. ಬಣ್ಣದ ದೀಪಮಾಲೆಗಳಿಂದ ಮಿನುಗುತ್ತಿದ್ದ ಕಲ್ಯಾಣ ಮಂಟಪದಲ್ಲಿ ಅಡಿಗೆಯವರು ಪಾತ್ರೆ ಪದಾರ್ಥ ತೆಗೆದುಕೊಂಡು ಹೋಗುತ್ತಿದ್ದುದನ್ನು ಬಿಟ್ಟರೆ ಜನ ಇರಲಿಲ್ಲ. ನಾಳೆ ಹೇಗಿದ್ದರೂ ಬರ್ತೀನಲ್ಲ ಎಂದುಕೊಂಡು ಹಾಗೇ ಮುಂದೆ ನಡೆದ, ಅಂಗಡಿಗಳಿಗೆ, ಮಾಲ್‌ಗಳಿಗೆ ಏನೋ ಕೊಳ್ಳಲೆಂದು ಬಂದಿದ್ದ ಕೆಲವು ತರುಣಿಯರು ಅವನ ಗಮನ ಸೆಳೆದರು. ಪರಸ್ಥಳದಲ್ಲಿ ಸ್ವಪ್ನಸುಂದರಿಯನ್ನು ಯಾವಳೇ ಚೆಲುವೆಯಲ್ಲಿ ಹುಡುಕಲು ಹೋಗಿ ಏನಾದರೂ ಅನಾಹುತವಾದರೆ ಕಷ್ಟ ಎನ್ನುವ ವಿವೇಕ ಎಚ್ಚರಿಸಿತು. ಅಲ್ಲದೆ ಜ್ಯೋತಿಷಿ ಹೇಳಿದ್ದ ಮಾತು ನೆನಪಿಸಿಕೊಂಡು ಅವಳೇ ನನ್ನ ಬಳಿಗೆ ಬರುತ್ತಾಳೆ ಎನ್ನುವ ಭರವಸೆಯಲ್ಲಿ ಒಂದಷ್ಟು ದೂರ ಸುತ್ತಾಡಿಕೊಂಡು ವಸತಿಗೃಹಕ್ಕೆ ಹಿಂದಿರುಗಿದ. ಅಚ್ಚರಿಯೆಂದರೆ ರಾತ್ರಿ ಸರಿದು ಬೆಳಗಿನ ಜಾವ ನಾಲ್ಕೂವರೆಯ ಹೊತ್ತಿಗೆ ಸ್ವಪ್ನಸುಂದರಿ ಕನಸಿನಲ್ಲಿ ಹಾರುತ್ತಾ ಬಂದು ಅಡುಗೆಗೆ ಸಿಗದೆ ಕಣ್ಮರೆಯಾಗಿ ಅವನ ನಿದ್ದೆ ಕೆಡಿಸಿದಳು. ಟಿ.ವಿ. ಆನ್ ಮಾಡಿ ಚಾನೆಲ್‌ಗಳನ್ನು ಬದಲಾಯಿಸುತ್ತಾ ಒಂದು ಗಂಟೆ ಕಳೆದ. ಅಷ್ಟು ಹೊತ್ತಿಗೆ ಹೊರಗಡೆ ವಾಹನಗಳ ಓಡಾಟದ, ಜನರ ಮಾತಿನ ಸದ್ದು ಕಿವಿಗೆ ಬಿತ್ತು. ಹಲ್ಲುಜ್ಜಿ, ಮುಖ ತೊಳೆದುಕೊಂಡು ಕೆಳಗಿಳಿದು ಮನಸ್ಸು ಬಂದತ್ತ ವಾಕ್ ಮಾಡುತ್ತಾ ಹೋದ. ಎಂಟು ಗಂಟೆಯವರೆಗೆ ಸುತ್ತಾಡಿ ವಾಪಸ್ ಬಂದವನೇ ಸ್ನಾನ ಮುಗಿಸಿ, ತಿಂಡಿ ತಿಂದು ಬಂದ. ಹೋಟೆಲ್‌ನವರೇ ರೂಮಿನೊಳಗೆ ತೂರಿಸಿದ್ದ ಇಂಗ್ಲಿಷ್ ದಿನಪತ್ರಿಕೆಯನ್ನು ಹಾಸಿಗೆಯ ಮೇಲೆ ಹರಡಿಕೊಂಡು ಓದುತ್ತಾ ಒಂದಷ್ಟು ಕಾಲ ಕಳೆದ. ಹತ್ತೂವರೆಯಾಗುವ ಹೊತ್ತಿಗೆ ಟಿಪ್‌ಟಾಪ್ ಆಗಿ ಡ್ರೆಸ್ ಮಾಡಿಕೊಂಡು, ಎಲಿಜಬಲ್ ಬ್ಯಾಚುಲರ್ ಥರಾ ಕಾಣಿಸ್ತಿದ್ದೀನಲ್ಲವೇ ಎಂದು ಕನ್ನಡಿಯಲ್ಲಿ ನೋಡಿ ಮೆಚ್ಚಿಕೊಂಡು, ಎಲ್ಲ ಸರಿಯಾಗಿದೆ ಎಂದು ಖಾತ್ರಿಪಡಿಸಿಕೊಂಡು ರೂಮಿನಿಂದ ಹೊರಬಂದ.
ಮುಹೂರ್ತಕ್ಕೆ ಅರ್ಧಗಂಟೆ ಮುಂಚೆಯೇ ರಾಧಾಕೃಷ್ಣ ಕಲ್ಯಾಣ ಮಂಟಪದ ಬಳಿ ಬಂದಿದ್ದ. ಪುರುಷೋತ್ತಮ ಬಾಗಿಲಲ್ಲೇ ನಿಂತು ಒಳಗೆ ಬರುವವರನ್ನು ಸ್ವಾಗತಿಸುತ್ತಿದ್ದ. ರಾಧಾಕೃಷ್ಣನನ್ನು ನೋಡುತ್ತಿದ್ದಂತೆಯೇ “ಅಂತೂ ಬಂದೆಯಲ್ಲ ಗೆಳೆಯ, ತುಂಬಾ ಸಂತೋಷವಾಯಿತು” ಎಂದು ಪ್ರೀತಿಯಿಂದ ತಬ್ಬಿಕೊಂಡ. ಕಲ್ಯಾಣ ಮಂಟಪ ವಿಶಾಲವಾಗಿತ್ತು. ಮುಂಭಾಗದಲ್ಲಿ ಮಹಿಳೆಯರು ಒಂದು ಕಡೆ, ಪುರುಷರು ಒಂದು ಕಡೆ ಕುಳಿತಿದ್ದರು. ಹಿಂದುಗಡೆ ಆ ರೀತಿಯ ನಿಯಮವೇನೂ ಇರಲಿಲ್ಲ. ಪುರುಷೋತ್ತಮ ಅವನನ್ನು ಕರೆದುಕೊಂಡು ಹೋಗಿ ಮುಂಭಾಗದಲ್ಲಿ ಜೋಡಿಸಿದ್ದ ಸೋಫಾಗಳಲ್ಲಿ ಒಂದು ಕಡೆ ಕೂರಿಸಿದ. ವೇದಿಕೆಯ ಮೇಲೆ ಪುರೋಹಿತರು ಮಂತ್ರ ಘೋಷಣೆ ಮಾಡುತ್ತಿದ್ದರು. ರೇಷ್ಮೆ ಸೀರೆ ಧರಿಸಿ, ಭರ್ಜರಿ ಅಲಂಕಾರ ಮಾಡಿಕೊಂಡು, ಕೊರಳ ತುಂಬಾ ಚಿನ್ನದ ಆಭರಣಗಳನ್ನು ನೇತಾಡಿಸುತ್ತಿದ್ದ ನಾರೀಮಣಿಯರು ಅತ್ತಿಂದಿತ್ತ ಸರಭರ ಓಡಾಡುತ್ತಿದ್ದರು. ಹಿಂಬದಿಯಲ್ಲಿ ಮಂಗಳವಾದ್ಯಗಳು ಕನ್ನಡದ ಜನಪ್ರಿಯ ಸಿನಿಮಾ ಹಾಡುಗಳನ್ನು ಮೊಳಗಿಸುತ್ತಿದ್ದವು. ಪುರೋಹಿತರು ಅಲ್ಲಿ ಓಡಾಡುತ್ತಿದ್ದ ಮಹಿಳೆಯರನ್ನು ಉದ್ದೇಶಿಸಿ, “ಮುಹೂರ್ತ ಸಮೀಪಿಸುತ್ತಿದೆ, ಗಂಡು ಹೆಣ್ಣು ಕರೆಯಿರಿ” ಎಂದು ಆದೇಶ ಜಾರಿ ಮಾಡಿದರು. ಅದಕ್ಕೆ ಕಾಯುತ್ತಿದ್ದರೋ ಎನ್ನುವಂತೆ ಬಲಭಾಗದ ಕೊಠಡಿಯಿಂದ ಸಾಲಂಕೃತ ಕನ್ಯಾರತ್ನ ಸಂಚಿತಾಳನ್ನೂ, ಎಡಭಾಗದ ಕೊಠಡಿಯಿಂದ ಕಚ್ಚೆಪಂಚೆ ಮತ್ತು ಮೈಸೂರು ಪೇಟ ತೊಟ್ಟಿದ್ದ ವರನನ್ನೂ ಕರೆತರಲಾಯಿತು. ಪುರೋಹಿತರು ಮಣಮಣ ಮಂತ್ರದ ನಡುವೆ ಅದು ಕೊಡಿ, ಇದು ತಗೊಳ್ಳಿ, ಈಗ ಎದ್ದು ನಿಂತುಕೊಳ್ಳಿ, ಈಗ ಕುಳಿತುಕೊಳ್ಳಿ, ಪರಸ್ಪರರ ಕೊರಳಿಗೆ ಮಾಲೆ ಹಾಕಿ ಎಂದು ಹೇಳುತ್ತ ಮದುವೆ ಶಾಸ್ತ್ರ ಪ್ರಾರಂಭಿಸಿದರು. ಹಿರಿಯ ಮುತ್ತೈದೆಯೊಬ್ಬರು ಅಕ್ಕಿ ತುಂಬಿದ ತಟ್ಟೆಯಲ್ಲಿ ಮಾಂಗಲ್ಯವನ್ನು ಜೋಪಾನವಾಗಿ ತೆಗೆದುಕೊಂಡು ಬಂದು ಹಿರಿಯರ ಕೈಯಲ್ಲಿ ಮುಟ್ಟಿಸಿ ತೆಗೆದುಕೊಂಡು ಹೋದರು. ಇನ್ನೊಬ್ಬರು ತಟ್ಟೆಯಲ್ಲಿ ಅಕ್ಷತೆ ತೆಗೆದುಕೊಂಡು ಬಂದು ಎಲ್ಲರ ಕೈಗೂ ಅಷ್ಟಷ್ಟು ಹಾಕಿ ಹೋದರು. ಶಾಸ್ತ್ರ ನಡೆಯುತ್ತ ಹೋದಂತೆ ಮಹಿಳೆಯರು, ಕೆಲವು ಗಂಡಸರು ಗಂಡು ಹೆಣ್ಣಿನ ಸುತ್ತ ಕೋಟೆ ಕಟ್ಟಿದ್ದರಿಂದ ಅಲ್ಲಿ ಏನು ನಡೆಯುತ್ತಿದೆ ಅಂತಲೇ ಗೊತ್ತಾಗುತ್ತಿರಲಿಲ್ಲ. ವಿಡಿಯೋ ಮಾಡುವವರು, ಫೋಟೊ ತೆಗೆಯುವವರು ಅವರನ್ನು ಆಗಾಗ ಪಕ್ಕಕ್ಕೆ ಸರಿಸಿ ತಮ್ಮ ಕೆಲಸ ಮಾಡುತ್ತಿದ್ದರು. ಕುರ್ಚಿಗಳಲ್ಲಿ ಕುಳಿತವರು ಹೆಣ್ಣನ್ನಾಗಲೀ ಅಲ್ಲಿ ನಡೆಯುತ್ತಿರುವ ಶಾಸ್ತ್ರಗಳನ್ನಾಗಲೀ ನೇರವಾಗಿ ನೋಡಲಾಗದೆ ಅಲ್ಲಲ್ಲಿ ಹಾಕಿದ್ದ ಸಿಸಿ ಟಿವಿಯತ್ತ ಕಣ್ಣುಹಾಯಿಸಬೇಕಾಗುತ್ತಿತ್ತು. ಆಗ ಹೆಣ್ಣಿನ ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ ತರುಣಿಯೊಬ್ಬಳು ರಾಧಾಕೃಷ್ಣನ ಗಮನವನ್ನು ವಿಶೇಷವಾಗಿ ಸೆಳೆದಳು. ಅವಳು ಅತ್ತಿತ್ತ ಸರಿದಾಡುತ್ತಿದ್ದುದರಿಂದಲೂ, ಬೇರೆ ಹೆಂಗಸರು ಅವಳಿಗೆ ಅಡ್ಡ ಬರುತ್ತಿದ್ದುದರಿಂದಲೂ ಸರಿಯಾಗಿ ನೋಡಲಾಗುತ್ತಿರಲಿಲ್ಲ. ಅವಳ ಓಡಾಟಕ್ಕೆ ಅನುಗುಣವಾಗಿ ಇವನೂ ಕೊರಳನ್ನು ಎಡಕ್ಕೂ ಬಲಕ್ಕೂ ಪದೇಪದೇ ಹೊರಳಿಸುತ್ತಿದ್ದುದರಿಂದ ಹಿಂದೆ ಇದ್ದವರು “ಅದ್ಯಾಕ್ರೀ ಹಾಗಾಡ್ತಾ ಇದ್ದೀರಿ? ನೆಟ್ಟಗೆ ಕುಳಿತುಕೊಳ್ಳಬಾರದೆ?” ಎಂದು ಗದರಿದರು. ಸಿಸಿಟಿವಿಯಲ್ಲಿ ಕಣ್ಣು ನೆಟ್ಟು ಕುಳಿತಾಗ ಅವಳ ಮುಖಾರವಿಂದ ಪಳಕ್ಕನೆ ಮಿಂಚಿ ಮಾಯವಾಗುತ್ತಿತ್ತು. ಅಷ್ಟು ಹೊತ್ತಿಗೆ ಪುರೋಹಿತರು ಮಾಂಗಲ್ಯಧಾರಣೆಗೆ ಸೂಚನೆ ಕೊಟ್ಟು 'ಗಟ್ಟಿಮೇಳ' ಅಂದರು. ವೇದಿಕೆ ಮೇಲಿದ್ದ ಗಂಡಸರು ಕೆಲವರು ಬಲಗೈಯನ್ನು ಮೇಲೆತ್ತಿ ತೋರು ಬೆರಳನ್ನು ಹಿಂದೆ ಮುಂದೆ ಆಡಿಸುತ್ತಾ 'ಗಟ್ಟಿಮೇಳ ಗಟ್ಟಿಮೇಳ' ಎಂದು ಜೋರಾಗಿ ಕೂಗಿದರು. ಅದು ಹಿಂದೆ ಇದ್ದ ಮಂಗಳವಾದ್ಯದವರಿಗೆ ತಲುಪಿ, ಹಾಡು ನುಡಿಸುವುದನ್ನು ನಿಲ್ಲಿಸಿ, ಡೋಲನ್ನು ಡಬಡಬ ಡಬ ಎಂದು ಬಡಿದರು, ವಾಲಗವನ್ನು ಪೆಪೆಪೆಪೆ ಎಂದು ಊದಿದರು. ಜನ ಅಕ್ಷತೆ ಕಾಳನ್ನು ತಾವು ಕುಳಿತಲ್ಲಿನಿಂದಲೇ ಗಂಡು ಹೆಣ್ಣಿನತ್ತ ತೂರಿದರು. ಅವು ಮುಂದೆ ಹತ್ತು ಹನ್ನೆರಡು ಅಡಿಯಷ್ಟು ಹೋಗಿ ಯಾರದೋ ತಲೆಯ ಮೇಲೆ ಬಿದ್ದವು. ರಾಧಾಕೃಷ್ಣ ಮುಂದುಗಡೆ ಕುಳಿತಿದ್ದುದರಿಂದ ಅವನ ತಲೆ ಮೇಲೆ ಸಿಕ್ಕಾಪಟ್ಟೆ ಅಕ್ಷತೆ ಕಾಳುಗಳು ಬಿದ್ದವು. ಅವನ ಲಕ್ಷವೆಲ್ಲ ವೇದಿಕೆಯ ಮೇಲೆ ಗಮನ ಸೆಳೆದ ತರುಣಿಯಲ್ಲೇ ನೆಟ್ಟಿತ್ತು. ಮಾಂಗಲ್ಯಧಾರಣೆಯಾಗುವಾಗ ಅದು ಕೊರಳಲ್ಲಿ ಸರಿಯಾಗಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಆ ತರುಣಿ ಸಂಚಿತಾಳ ಜಡೆಯನ್ನು ಮೇಲೆತ್ತಿ ಹಿಡಿದಿದ್ದಳು. ಅಂದರೆ ಅವಳು ಸಂಚಿತಾಳ ಆತ್ಮೀಯ ಗೆಳತಿ ಅಥವಾ ಹತ್ತಿರದ ಬಂಧುವಾಗಿರುತ್ತಾಳೆ ಎನ್ನುವುದು ಖಾತ್ರಿಯಾದಂತಾಯಿತು. ಅವಳನ್ನು ಸಮೀಪದಿಂದ ನೋಡಬೇಕು, ಯಾರು ಏನು ಅಂತ ತಿಳಿದುಕೊಳ್ಳಬೇಕು ಎನ್ನುವ ಬಯಕೆ ತೀವ್ರವಾಯಿತು. ಅವಳು ಸಂಚಿತಾಳಿಗೆ ಆತ್ಮೀಯಳಾಗಿದ್ದರೆ ಮದುವೆ ಗೌಜೆಲ್ಲ ಮುಗಿದ ಮೇಲೂ ಇದ್ದೇ ಇರುತ್ತಾಳೆ, ಪುರುಷೋತ್ತಮನಿಗೂ ಗೊತ್ತಿರಬಹುದು, ಅವನನ್ನೇ ವಿಚಾರಿಸಿದರೆ ಆಯಿತು ಎಂದು ಸ್ವಲ್ಪ ಸಮಾಧಾನ ತಂದುಕೊಂಡ. ಮಾಂಗಲ್ಯಧಾರಣೆ ಆಗುತ್ತಿದ್ದಂತೆ ಜನ ಹಿಂಡು ಹಿಂಡಾಗಿ ಊಟದ ಅಂಗಳಕ್ಕೆ ನುಗ್ಗಿಬಿಟ್ಟರು. ಐವತ್ತರವತ್ತು ಜನರಷ್ಟೇ ಕುರ್ಚಿಗಳಲ್ಲಿ ಕುಳಿತಿದ್ದರು. ಗಂಡು ಹೆಣ್ಣಿಗೆ ಎದುರು ಬದುರಾಗಿ ಎರಡು ಕುರ್ಚಿ ಹಾಕಿಸಿ, ಅದರ ಮೇಲೆ ಕೂರಿಸಿ, ಇಬ್ಬರ ಎರಡೂ ಹಸ್ತಗಳನ್ನು ಒಂದರಮೇಲೆ ಒಂದನ್ನು ಇರಿಸಿ, ಅದರಲ್ಲಿ ವೀಳೆಯದೆಲೆ, ಮೇಲೊಂದು ತೆಂಗಿನಕಾಯಿ, ಕೆಳಭಾಗದಲ್ಲಿ ಒಂದು ದೊಡ್ಡದಾದ ಖಾಲಿ ಸ್ಟೀಲ್ ಪಾತ್ರೆ ಇರಿಸಿ ಧಾರಾ ಮೂಹೂರ್ತಕ್ಕೆ ವ್ಯವಸ್ಥೆ ಮಾಡಲಾಯಿತು. ಇದ್ದವರೆಲ್ಲ ಬಂದು ಧಾರೆ ಎರೆಯಲು ಕ್ಯೂ ನಿಂತರು. ಅದರಲ್ಲಿ ಸೇರಿಕೊಂಡರೆ ಆ ತರುಣಿಯನ್ನು ಹತ್ತಿರದಿಂದ ನೋಡಬಹುದು ಅನ್ನಿಸಿ ರಾಧಾಕೃಷ್ಣ ಥಟ್ಟನೆ ಎದ್ದು ಹದಿನೈದು ಇಪ್ಪತ್ತು ಮಂದಿ ಇದ್ದ ಸರತಿ ಸಾಲಿನ ಬಾಲದಲ್ಲಿ ಸೇರಿಕೊಂಡ. ಮುಂದೆ ಮುಂದೆ ಸಾಗುತ್ತ ಅವಳತ್ತಲೇ ಕಾತರದ ದೃಷ್ಟಿ ಹಾಯಿಸುತ್ತಿದ್ದ. ತೀರಾ ಹತ್ತಿರ ಬಂದಾಗ ಅವಳ ಪೂರ್ಣ ನೋಟ ಸಿಕ್ಕಿತು. ಅವನ ಎದೆ ಬಡಿತ ಹೆಚ್ಚಾಯಿತು. ಇಷ್ಟು ದಿನ ಕನಸಿನಲ್ಲಿ ಕಾಡುತ್ತಿದ್ದ ಸ್ವಪ್ನ ಸುಂದರಿ ಅವಳೇ ಎನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ. ಅವಳನ್ನೇ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತ, ಒಂದೊಂದೇ ಹೆಜ್ಜೆ ಮುಂದೆ ಬರುತ್ತಾ ಧಾರೆಯೆರೆಯಲು ಹಾಲು ತುಂಬಿದ ಚೊಂಬು ಕೈಗೆ ತೆಗೆದುಕೊಂಡು “ಹ್ಯಾಪಿ ಮ್ಯಾರೀಡ್ ಲೈಫ್ ಸಂಚಿತಾ” ಎಂದ. 'ಥ್ಯಾಂಕ್ಯೂ ಎಂದ ಅವಳು ಮಂದಹಾಸ ಬೀರುತ್ತ “ನಮ್ಮಣ್ಣನ ಆತ್ಮೀಯ ಸ್ನೇಹಿತರು, ರಾಧಾಕೃಷ್ಣ, ಕಾಮರ್ಸ್ ಪ್ರೊಫೆಸರ್” ಎಂದು ಸಂಗಾತಿಗೆ ಪರಿಚಯ ಮಾಡಿಕೊಟ್ಟಳು. ಚೊಂಬಿನಲ್ಲಿದ್ದ ಹಾಲನ್ನು ಮೂರು ಬಾರಿ ಅವರ ಕೈಗಳಲ್ಲಿದ್ದ ತೆಂಗಿನಕಾಯಿಯ ಮೇಲೆ ಹಾಕಿ, ಚೊಂಬನ್ನು ಪಕ್ಕದಲ್ಲಿ ಕಾಯುತ್ತಿದ್ದವರಿಗೆ ಕೊಟ್ಟ. ಅಕ್ಷತೆ ತೆಗೆದುಕೊಂಡು ಇಬ್ಬರ ತಲೆಯ ಮೇಲೂ ಹಾಕುವಾಗ ಸಂಚಿತಾ ಪಕ್ಕದಲ್ಲೇ ನಿಂತಿದ್ದ ಆ ತರುಣಿಯತ್ತ ದೃಷ್ಟಿ ಹೊರಳಿಸಿದ. ಇಬ್ಬರ ನೋಟವೂ ಸಂಧಿಸಿ, ಅವಳು ಮುಗುಳಕ್ಕಂತಾಯಿತು. ಅದು ಎದೆಯಲ್ಲಿ ಮಿಂಚಿನ ಸಂಚಲನ ಉಂಟುಮಾಡಿತು. ಮೊದಲು ಕುಳಿತಿದ್ದ ಜಾಗದಲ್ಲೇ ಮತ್ತೆ ಹೋಗಿ ಕುಳಿತುಕೊಂಡ ರಾಧಾಕೃಷ್ಣ ಅವಳನ್ನು ಪರಿಚಯ ಮಾಡಿಕೊಳ್ಳುವುದು ಅಥವಾ ಅವಳ ಬಗೆಗೆ ತಿಳಿದುಕೊಳ್ಳುವುದು ಹೇಗೆಂದು ಲೆಕ್ಕಾಚಾರ ಹಾಕತೊಡಗಿದ.
ಅಷ್ಟರಲ್ಲಿ ಬಿಡುವು ಮಾಡಿಕೊಂಡು ಅಲ್ಲಿಗೆ ಬಂದ ಪುರುಷೋತ್ತಮ “ಊಟ ಮಾಡು ಬಾ” ಎಂದು ಒತ್ತಾಯಿಸಿದ. ಅದಕ್ಕೆ ರಾಧಾಕೃಷ್ಣ “ನೂಕು ನುಗ್ಗಲೆಲ್ಲ ಕಡಿಮೆಯಾಗಲಿ, ಕೊನೆಯಲ್ಲಿ ಎಲ್ಲ ಒಟ್ಟಿಗೇ ಊಟ ಮಾಡೋಣ” ಎಂದ. “ಸರಿ ಹಾಗಾದರೆ, ನಾನು ಕೆಳಗಡೆ ಹೋಗಿ ಊಟ ಮಾಡ್ತಿರುವವರನ್ನು ವಿಚಾರಿಸಿಕೊಂಡು ಬರ್ತೀನಿ” ಎಂದು ಪುರುಷೋತ್ತಮ ಹೋಗುವ ಸಮಯಕ್ಕೆ ಪುರೋಹಿತರು ಗಂಡು ಹೆಣ್ಣು ಕರೆದುಕೊಂಡು ಅರುಂಧತಿ ನಕ್ಷತ್ರ ದರ್ಶನ ಮಾಡಿಸಲು ಹೊರಟರು. ಹೆಣ್ಣಿನ ಜೊತೆಗೆ ಆ ಸುಂದರಿಯೂ ಇಳಿದು ಬಂದಳು. ಇವನು ಕುಳಿತಿದ್ದ ಸೋಫಾದ ಪಕ್ಕದಲ್ಲೇ ಅವಳು ಹಾದು ಹೋದುದರಿಂದ ಸಮೀಪದ ದರ್ಶನ ಪ್ರಾಪ್ತವಾಯಿತು. ಆ ಗುಂಪಿನಲ್ಲಿ ಏಳೆಂಟು ಮಂದಿಯಷ್ಟೇ ಇದ್ದುದರಿಂದ ಅವರನ್ನು ಇವನೂ ಹಿಂಬಾಲಿಸಿದ. ಪುರೋಹಿತರು ಮಂತ್ರ ಹೇಳಿ, ಹಗಲಿನಲ್ಲೇ ಆಕಾಶದತ್ತ ಬೆರಳುಮಾಡಿ 'ಅರುಂಧತಿ ನಕ್ಷತ್ರ ನೋಡಿ' ಎಂದು ಹೇಳಿ ಅಲ್ಲೊಂದು ಪೂಜೆ ಮಾಡಿಸಿದರು. ಆಮೇಲೆ ವಿಡಿಯೋ ಮತ್ತು ಫೋಟೋಗ್ರಾಫರ್‌ಗಳು ಗಂಡು ಹೆಣ್ಣನ್ನು ಅಮರಿಕೊಂಡರು. ಗಂಡು ಎಡಗೈಯಿಂದ ಹೆಣ್ಣಿನ ಸೊಂಟ ಬಳಸಿ ಮುಖವನ್ನು ಆಕಾಶದ ಕಡೆಗೆ ಎತ್ತಿ ತೋರುಬೆರಳಿನಿಂದ ನಕ್ಷತ್ರವನ್ನು ತೋರಿಸುತ್ತಿರುವಂತೆ, ಹೆಣ್ಣು ಕೂಡ ಬೆರಳೆತ್ತಿ ಅದನ್ನು ನೋಡುತ್ತಿರುವಂತೆ ಹತ್ತಾರು ಭಂಗಿಗಳಲ್ಲಿ ಫೋಟೋ ತೆಗೆದರು. ಆಮೇಲೆ ಸುತ್ತ ಇದ್ದವರು 'ಗಂಡು ಹೆಣ್ಣಿನ ಜೊತೆಗೆ ನಮ್ಮದೂ ಫೋಟೋ ತೆಗೆಯಿರಿ' ಎಂದು ಬೇಡಿಕೆಯಿಟ್ಟರು. ಹೆಣ್ಣಿನ ಪಕ್ಕದಲ್ಲಿ ಸುಂದರಿ ನಿಂತಿದ್ದಳು. ಅಷ್ಟು ಹೊತ್ತಿಗೆ ಸಂಚಿತಾ ರಾಧಾಕೃಷ್ಣನನ್ನು ಗಮನಿಸಿ “ನೀವೂ ಬನ್ನಿ ಫೋಟೋಗೆ” ಎಂದು ಕರೆದು ಗಂಡಿನ ಪಕ್ಕ ನಿಲ್ಲಲು ಸೂಚಿಸಿದಳು. ಫೋಟೋಗ್ರಾಫರ್ ನಾಲೈದು ಫೋಟೋಗಳನ್ನು ತೆಗೆದ ಮೇಲೆ, ರಾಧಾಕೃಷ್ಣ ತನ್ನ ಮೊಬೈಲ್ ಕ್ಯಾಮೆರಾದಿಂದ ಒಂದು ಕ್ಲಿಕ್ ಮಾಡುವಂತೆ ಕೇಳಿಕೊಂಡ. ಫೋಟೋಗ್ರಾಫರ್ ಎರಡು ಮೂರು ಕ್ಲಿಕ್‌ಗಳನ್ನು ಮಾಡಿಕೊಟ್ಟ. ನಂತರ ಆರತಕ್ಷತೆಯಲ್ಲೂ ಸುಂದರಿ ನಿಂತಿದ್ದ ಸಂದರ್ಭ ನೋಡಿಕೊಂಡು ತಾನೂ ಹೋಗಿ ನಿಂತು ಒಂದೇ ಫೋಟೋದಲ್ಲಿ ಇಬ್ಬರು ಇರುವಂತೆ ಮಾಡಿದ. ಒಬ್ಬ ಹುಡುಗನಿಗೆ ಮೊಬೈಲ್ ಕೊಟ್ಟು ಕ್ಲಿಕ್ ಮಾಡಲು ಹೇಳಿ ತನ್ನ ಸಂಗ್ರಹದಲ್ಲೂ ಆ ಫೋಟೋ ಉಳಿಯುವಂತೆ ಮಾಡಿಕೊಂಡ. ಆರತಕ್ಷತೆ ಮುಗಿಯುವಷ್ಟರಲ್ಲಿ ಮೂರು ಗಂಟೆ ದಾಟಿತ್ತು. ಎಲ್ಲರಿಗೂ ಹೊಟ್ಟೆ ತಾಳ ಹಾಕುತ್ತಿದ್ದುದರಿಂದ ಪುರುಷೋತ್ತಮ ಒತ್ತಾಯ ಮಾಡಿ ಊಟಕ್ಕೆ ಕರೆದುಕೊಂಡು ಹೋದ. ಗಂಡು ಹೆಣ್ಣಿನ ಜೊತೆ ಊಟಕ್ಕೆ ಕುಳಿವರು ಇಪ್ಪತ್ತು ಮಂದಿ ಇದ್ದರು. ಅಲ್ಲೂ ಸುಂದರಿ ಸಂಚಿತಾಳ ಒಂದು ಪಕ್ಕದಲ್ಲೇ ಜಾಗ ಹಿಡಿದಿದ್ದಳು. ನೋಡಲು ಅನುಕೂಲವಾಗುತ್ತದೆ ಎಂದು ರಾಧಾಕೃಷ್ಣ ಎದುರು ಸಾಲಿನಲ್ಲಿ ಕುಳಿತುಕೊಂಡ. ಆಗೊಮ್ಮೆ ಈಗೊಮ್ಮೆ ಇಬ್ಬರ ನೋಟಗಳು ಸಂಧಿಸಿದವಾದರೂ ಅದರಲ್ಲಿ ವಿಶೇಷತೆಯೇನೂ ಇರಲಿಲ್ಲ. ಅವಳಂತೂ ಗಲಗಲ ಮಾತಾಡುತ್ತ, ಸಂಚಿತಾಳನ್ನು ತಮಾಷೆ ಮಾಡುತ್ತ, ಗಂಡನ್ನು ರೇಗಿಸುತ್ತ, ಬಡಿಸುವವರಿಗೆ ಅದು ಹಾಕಿ ಇದು ಹಾಕಿ ಎಂದು ಹೇಳುತ್ತ ಚೇತೋಹಾರಿಯಾಗಿದ್ದಳು. ಇನ್ನೂ ಹೊತ್ತಿನವರೆಗೆ ಪ್ರಾಪ್ತವಾದ ಸಮೀಪದರ್ಶನ ಭಾಗ್ಯ ಮತ್ತು ಮೊಬೈಲಿನಲ್ಲಿ ಸೆರೆಯಾಗಿದ್ದ ಅವಳ ಮೋಟೋವನ್ನು ದೊಡ್ಡದು ಮಾಡಿಕೊಂಡು ನೋಡಿದ ಮೇಲೆ ಅವಳು ಸ್ವಪ್ನಸುಂದರಿಯೇ ಅನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ. ಮುಂದಿನ ಹಂತದಲ್ಲಿ ಅವಳ ಬಗೆಗೆ ಮಾಹಿತಿ ಪಡೆಯಬೇಕು, ಪರಿಚಯ ಮಾಡಿಕೊಳ್ಳಬೇಕು, ತನ್ನತ್ತ ಆಕರ್ಷಣೆ ಮೂಡುವಂತೆ ಮಾಡಬೇಕು, ಮದುವೆಯ ಪೀಠಿಕೆ ಹಾಕಬೇಕು, ಒಪ್ಪಿಸಿ ಮದುವೆ ಮಾಡಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕು, ಇಂಥ ವಿಷಯಗಳಲ್ಲಿ ತಡ ಮಾಡಿದಷ್ಟೂ ಅಪಾಯಗಳು ಎದುರಾಗುವುದರಿಂದ ಕೂಡಲೇ ಕಾರ್ಯ ಪ್ರವೃತ್ತನಾಗಬೇಕೆಂದು ನಿರ್ಧರಿಸಿದ.
ಊಟ ಆದಮೇಲೆ ಸ್ವಲ್ಪಹೊತ್ತು ವಿಶ್ರಾಂತಿಗಾಗಿ ಎಲ್ಲರೂ ಅಲ್ಲಲ್ಲಿ ಕುಳಿತುಕೊಂಡರು. ಒಂದೆರಡು ಗಂಟೆಯಲ್ಲಿ ಕಲ್ಯಾಣ ಮಂಟಪದಿಂದ ರತ್ನಗಿರಿ ಬಡಾವಣೆಯಲ್ಲಿದ್ದ ಗಂಡನ ಮನೆಗೆ ಹೋಗಬೇಕಾಗಿತ್ತು. ಎಲ್ಲರ ಲೆಕ್ಕವನ್ನೂ ಚುಕ್ತಾ ಮಾಡಿ ಬಂದ ಪರುಷೋತ್ತಮ ರಾಧಾಕೃಷ್ಣನ ಪಕ್ಕದಲ್ಲೇ ಉಸ್ಸೆಂದು ಕುಳಿತ. “ಅಂತೂ ತಂಗಿಯ ಮದುವೆ ಮಾಡಿ, ಒಂದು ದೊಡ್ಡ ಜವಾಬ್ದಾರಿಯಿಂದ ಮುಕ್ತನಾದೆ” ಎಂದು ರಾಧಾಕೃಷ್ಣ ಮೆಚ್ಚುಗೆಯ ಮಾತಾಡಿ, ಅವನೊಂದಿಗಿದ್ದ ಸಲಿಗೆಯಿಂದಾಗಿ “ಸಂಚಿತಾ ಅಕ್ಕಪಕ್ಕದಲ್ಲೇ ಓಡಾಡಿಕೊಂಡು ಇದ್ದಳಲ್ಲ ಆ ಹುಡುಗಿ ಯಾರು ಪುರು?” ಎಂದ. ಅದಕ್ಕೆ ಪ್ರತಿಯಾಗಿ ಪುರುಷೋತ್ತಮ “ಏನಪ್ಪ ಹುಡುಗಿ ಸುಂದರವಾಗಿದ್ದಾಳೆ ಅಂತ ಕಣ್ಣಾಕ್ತಿದ್ದೀಯಾ? ಮದುವೆ ಮಾಡಿಕೊಳ್ಳುವಂತಿದ್ದರೆ ನೋಡು ವಿಚಾರಿಸ್ತೀನಿ” ಎಂದು ಚುಡಾಯಿಸಿದ. “ಆ ಹುಡುಗಿ ಯೂನಿಸಿಸ್ ಕಂಪನಿಯಲ್ಲಿ ನಮ್ಮ ಸಂಚಿತಾ ಜೊತೆಯಲ್ಲಿ ಕೆಲಸ ಮಾಡ್ತಾಳೆ. ಅವರ ತಂದೆ ಆಂಧ್ರದ ನೆಲ್ಲೂರಿನಿಂದ ಬಂದು ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ. ವೃತ್ತಿಯಿಂದ ಕಂಟ್ರಾಕ್ಟರ್, ಇತ್ತೀಚೆಗೆ ಒಂದು ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯನ್ನೂ ಪ್ರಾರಂಭ ಮಾಡಿದ್ದಾರೆ. ಮನೆ ಇರೋದು ಬೊಮ್ಮನಹಳ್ಳಿಯಲ್ಲಿ. ಅವಳು ಹುಟ್ಟಿದ್ದು, ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ಎಲ್ಲ ಬೆಂಗಳೂರಿನಲ್ಲೇ. ಕಂಪನಿಯಿಂದ ಒಂದೆರಡು ಬಾರಿ ಅಮೆರಿಕಕ್ಕೂ ಹೋಗಿ ಬಂದಿದ್ದಾಳೆ, ಹೆಸರು ರಾಧಿಕಾ” ಎಂದು ತನಗೆ ತಿಳಿದಿದ್ದ ಉಳಿದ ಮಾಹಿತಿಯನ್ನೂ ಕೊಟ್ಟ, ರಾಧಿಕಾ ಎನ್ನುವ ಹೆಸರು ಕೇಳುತ್ತಿದ್ದಂತೆ ರಾಧಾಕೃಷ್ಣನಿಗೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ಆಯಿತು. ನಾನು ರಾಧಾಕೃಷ್ಣ, ಅವಳು ರಾಧಿಕಾ. ಅಂದರೆ ನನ್ನ ರಾಧೆಯೇ ಅವಳು. ನಮ್ಮ ಅನುಬಂಧ ಬೆಸೆಯಲು ಈ ಮದುವೆ ನಿಮಿತ್ತವಾಯಿತು ಅಷ್ಟೆ. ನನ್ನ ಇಷ್ಟವನ್ನು ಅವಳೆದುರು ಮಂಡಿಸಿ ಬಾಂಧವ್ಯವನ್ನು ಕೂಡಿಸಿಕೊಳ್ಳುವುದಷ್ಟೇ ಉಳಿದಿರುವ ಕೆಲಸ. ಅದು ಇವತ್ತೇ ಆಗಿಹೋದರೆ ಎಷ್ಟು ಚಂದ ಎಂದು ಮನಸ್ಸಿನಲ್ಲೇ ಮಂಡಿಗೆ ಸವಿಯುತ್ತ “ಹುಡುಗೀನ ಪರಿಚಯ ಮಾಡಿಸಪ್ಪ ಪುರು” ಎಂದು ಗೋಗರೆದ. “ಈಗ ಕಲ್ಯಾಣ ಮಂಟಪ ಖಾಲಿ ಮಾಡಿ ಗಂಡಿನವರ ಮನೆಗೆ ಹೋಗಬೇಕಲ್ಲ, ಬಟ್ಟೆ ಬರೆ, ಒಡವೆ ಇತ್ಯಾದಿಗಳನ್ನೆಲ್ಲ ಪ್ಯಾಕ್ ಮಾಡೋದಿಕ್ಕೆ ಅವಳು ಸಂಚಿತಾ ರೂಮಿನಲ್ಲಿ ಸೇರಿಕೊಂಡಿರಬೇಕು, ನೋಡ್ತೀನಿ ಇರು” ಎಂದು ಪುರುಷೋತ್ತಮ ಸಂಚಿತಾಳಿಗೆ ಕರೆ ಮಾಡಿ “ರಾಧಿಕಾ ನಿನ್ನ ರೂಮಿನಲ್ಲಿದ್ದರೆ ಒಂದೈದು ನಿಮಿಷ ಹೊರಗಡೆಗೆ ಕಳಿಸು” ಎಂದ. ಅವಳು “ಹೂಂ ಇದ್ದಾಳೆ” ಎಂದವಳೇ “ರಾಧಿಕಾ, ನಮ್ಮಣ್ಣ ಕರೆಯುತ್ತಿದ್ದಾನೆ ನೋಡೆ, ಅದೇನು ಹೋಗಿ ಕೇಳಿಕೊಂಡು ಬಾ” ಎಂದಳು. ರೇಷ್ಮೆ ಸೀರೆಯ ಭಾರದಿಂದ ಮುಕ್ತಳಾಗಿ, ಹೊಸ ಚೂಡಿದಾರ್ ವೇಷದಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದ್ದ ರಾಧಿಕಾ ಗೆಳೆಯರು ಕುಳಿತಿದ್ದಲ್ಲಿಗೆ ಚಂಗನೆ ಹಾರುತ್ತಲೇ ಬಂದಳು. “ಏನಣ್ಣ ಬರೋದಕ್ಕೆ ಹೇಳಿದೆಯಂತೆ?” ಎಂದು ಪುರುಷೋತ್ತಮನನ್ನು ಕೇಳುತ್ತ, ಪಕ್ಕದಲ್ಲೇ ನಿಂತುಕೊಂಡಳು. ಪುರುಷೋತ್ತಮ ಪಕ್ಕದಲ್ಲಿದ್ದ ಕುರ್ಚಿಯನ್ನು ಎದುರಿಗೆ ತಳ್ಳಿ 'ಕುಳಿತುಕೋ' ಎಂದ. ರಾಧಾಕೃಷ್ಣನ ಹೃದಯದ ಬಡಿತ ಹೆಚ್ಚಾಗತೊಡಗಿತು. ರಾಧಿಕಾ ಕುಳಿತುಕೊಳ್ಳುತ್ತಿದ್ದಂತೆ ಪರುಷೋತ್ತಮ “ನೋಡು ರಾಧಿಕಾ, ನೀನು ನನ್ನ ತಂಗಿಯ ಸಹೋದ್ಯೋಗಿ ಮತ್ತು ಕುಟುಂಬದ ಆತ್ಮೀಯ ಸದಸ್ಯಳಾದ್ದರಿಂದ ನೇರವಾಗಿ ಮಾತಾಡುತ್ತಿದ್ದೇನೆ. ಇವನು ರಾಧಾಕೃಷ್ಣ, ಎಂ.ಕಾಂ ಸಹಪಾಠಿ, ಆತ್ಮೀಯ ಗೆಳೆಯ, ಎಂ.ಕಾಂ, ಆಗುತ್ತಿದ್ದಂತೆ ಪಿಎಚ್.ಡಿ.ಯನ್ನೂ ಮಾಡಿ, ಅದರ ಫಲಿತಾಂಶ ಬಂದು ಡಾ. ರಾಧಾಕೃಷ್ಣ ಆಗುವಷ್ಟರಲ್ಲಿ ಸರ್ಕಾರಿ ಕಾಲೇಜಿನಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡು ಈಗ ಯುಜಿಸಿ ಸಂಬಳ ಪಡೆಯುತ್ತಿದ್ದಾನೆ. ತಂದೆ ಸರ್ಕಾರಿ ನೌಕರರು, ತಾಯಿ ಗೃಹಣಿ, ಒಬ್ಬನೇ ತಮ್ಮ ಎಂ.ಬಿ.ಎ. ಮಾಡಿಕೊಂಡು ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದಾನೆ. ಮದುವೆ ಮನೆಯಲ್ಲಿ ಬೆಳಗ್ಗೆಯಿಂದ ನಿನ್ನನ್ನು ನೋಡಿ ಮನಸೋತಿದ್ದಾನೆ. ನೀನೂ ಹೂಂ ಅನ್ನೋದಾದರೆ ಮುಂದಿನ ಮಾತುಕತೆ ಆಡೋಣ. ಹುಡುಗ ನೋಡುವುದಕ್ಕೂ ಚೆನ್ನಾಗಿದ್ದಾನೆ ಅಲ್ವೆ?” ಎಂದ. ರಾಧಿಕಾ ಸ್ವಲ್ಪ ನಾಚಿದಂತೆ ಕಂಡಳು. “ಆದರೆ . . . ಆದರೆ. - .” ಎಂದು ಮುಂದಕ್ಕೆ ಮಾತನಾಡದೆ ತಡೆದಳು. ಪುರುಷೋತ್ತಮ, “ಆದರೆ ಗೀದರೆ ಎಲ್ಲ ಯಾಕೆ? ಅದೇನೇ ಸಮಸ್ಯೆ ಇದ್ದರೂ ನಿವಾರಣೆ ಮಾಡೋಣ ಹೇಳು. ನಮ್ಮ ಹುಡುಗ ನಿನ್ನನ್ನು ಅಷ್ಟೊಂದು ಇಷ್ಟಪಡ್ತಿದ್ದಾನೆ” ಎಂದು ಮಾತನಾಡುವಂತೆ ಪುಸಲಾಯಿಸಿದ. ರಾಧಿಕಾ ಮಾತು ಮುಂದುವರೆಸಿ, “ವಿಷಯ ಏನು ಅಂದರೆ, ನಮ್ಮ ತಂದೆಯ ಸ್ನೇಹಿತರೊಬ್ಬರ ಮಗ ಕೆನಡಾದಲ್ಲಿ ಇಂಜಿನಿಯರ್, ರಜಾದ ಮೇಲೆ ಒಂದು ತಿಂಗಳು ಇಂಡಿಯಾಕ್ಕೆ ಬಂದಿದ್ದರು. ಹಾಗೇ ಬೆಂಗಳೂರಿನ ನಮ್ಮ ಮನೆಗೂ ಭೇಟಿ ಕೊಟ್ಟಿದ್ದರು. ನನ್ನನ್ನು ನೋಡಿದ ಮೇಲೆ ಹುಡುಗನ ತಂದೆ ನಮ್ಮ ತಂದೆಗೆ ಹೇಳಿದರಂತೆ “ನೀವೂ ನಿಮ್ಮ ಹುಡುಗಿಯೂ ಒಪ್ಪುವುದಾದರೆ ನನ್ನ ಮಗನಿಗೆ ಮದುವೆ ಮಾಡಿಕೊಳ್ಳಿನಿ' ಅಂತ. ಅಪ್ಪ ಅಮ್ಮನಿಗೆ ನಾನು ಒಬ್ಬಳೇ ಮಗಳಾದ್ದರಿಂದ ದೂರದ ಕೆನಡಾಕ್ಕೆ ಹೇಗೆ ಮದುವೆ ಮಾಡಿಕೊಡೋದು ಅಂತ ಹಿಂದೇಟು ಹೊಡೆದು ನನ್ನ ಅಭಿಪ್ರಾಯಕ್ಕೆ ಬಿಟ್ಟರು. ಕೆನಡಾಕ್ಕೆ ಹೋಗಿ ಅಲ್ಲೇ ಏನಾದರೂ ಸಾಧನೆ ಮಾಡಬಾರದೇಕೆ ಅನ್ನುವ ಆಸೆ ಒಂದು ಕಡೆ, ಅಪ್ಪ ಅಮ್ಮ ನನ್ನನ್ನು ಬಿಟ್ಟು ಹೇಗಿರುತ್ತಾರೋ ಅನ್ನುವ ಚಿಂತೆ ಒಂದು ಕಡೆ, ಈ ಸಂದಿಗ್ಧದಲ್ಲಿ ನಾನು ನಿರ್ಧಾರ ಪ್ರಕಟಿಸುವ ಮೊದಲೇ ಆ ಹುಡುಗ “ಎಂಗೇಜ್‌ಮೆಂಟ್ ಅಂತ ಏನೂ ಮಾಡಿಕೊಳ್ಳದಿದ್ದರೂ ಪರವಾಗಿಲ್ಲ. ಮೂರು ತಿಂಗಳ ನಂತರ ಕಂಪನಿಯಿಂದ ರಜಾ ಪಡೆದು ಬರ್ತೀನಿ, ಮದುವೇನೆ ಮಾಡಿಕೊಡಿ' ಅಂತ ನಮ್ಮ ತಂದೆ ಬಳಿ ಹೇಳಿ ಹೋಗಿದ್ದಾನೆ. ಇದಾಗಿ ಒಂದು ತಿಂಗಳು ಕಳೆದಿದೆ. ಈ ವಿಷಯ ಸೂಕ್ಷ್ಮವಾಗಿ ಸಂಚಿತಾಗೆ ಹೇಳಿ, ನಮ್ಮಲ್ಲೇ ಇರಲಿ ಅಂತ ತಿಳಿಸಿದ್ದೆ” ಎಂದಳು. ರಾಧಾಕೃಷ್ಣನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. ಆಕಾಶವೇ ತಲೆಯಮೇಲೆ ಬಿದ್ದಂತೆ ಅವನು ದಿಗೂಢನಾಗಿದ್ದ. ಪುರುಷೋತ್ತಮನೇ ಸಮಾಧಾನ ಮಾಡುತ್ತ “ವಿಷಯ ಗೊತ್ತಾಯಿತಲ್ಲ, ಇನ್ನೇನಪ್ಪ ಮಾಡೋದು? ಋಣಾನುಬಂಧ ಎಲ್ಲೆಲ್ಲಿದೆಯೋ?” ಎಂದ. ರಾಧಾಕೃಷ್ಣನಿಗೆ ಎದೆಯೇ ಒಡೆದುಹೋದಂತಾಗಿದ್ದರೂ ಅವರೆದುರು “ಹಲವು ತಿಂಗಳುಗಳಿಂದ ತನಗೆ ಬೀಳುತ್ತಲೇ ಇರುವ ಕನಸು, ಅದರಲ್ಲಿ ಕಾಣಿಸಿಕೊಂಡು ಕಾಡುತ್ತಿರುವವಳು ಇದೇ ರಾಧಿಕಾ. ಇವಳನ್ನು ಹುಡುಕಿ ಮದುವೆಯಾಗಲೇಬೇಕೆಂದು ಮನೆಯಲ್ಲಿ ನಡೆದ ಮದುವೆ ಪ್ರಯತ್ನಗಳನ್ನೆಲ್ಲ ಮುಂದೂಡುತ್ತ ಬಂದದ್ದು' ಇದನ್ನೆಲ್ಲ ಹೇಳಿಕೊಂಡರೆ ನನ್ನನ್ನು ಅರೆಹುಚ್ಚನೆಂದೇ ಭಾವಿಸುತ್ತಾರೆಂದು ಅದೇನನ್ನೂ ಹೇಳಲು ಹೋಗಲಿಲ್ಲ. ರಾಧಿಕಾ ತಾನು ಬಂದ ಕೆಲಸ ಮುಗಿಯಿತೆಂದು ಪ್ರೀತಿಯೋ ಅನುಕಂಪವೋ ಗೊತ್ತಾಗದಂಥ ಒಂದು ದೃಷ್ಟಿಯನ್ನು ಹಾಯಿಸಿ “ನಾನಿನ್ನು ಬರ್ತೀನಿ” ಎಂದು ಹೋಗಿಬಿಟ್ಟಳು. ಪುರುಷೋತ್ತಮನೂ ಮೇಲೆದ್ದು “ಪ್ಯಾಕಿಂಗ್ ಎಲ್ಲ ಆಗಿದೆಯ ನೋಡಿ, ಎಲ್ಲರನ್ನೂ ಹೊರಡಿಸ್ತೀನಿ ಮಾರಾಯ. ನೀನೇನು ಬೆಂಗಳೂರಿಗೆ ಈಗಲೇ ಹೊರಡುತ್ತೀಯ ಅಥವಾ ನಮ್ಮ ಜೊತೆಗೆ ಇರ್ತೀಯ” ಎಂದು ಕೇಳಿದ. ರಾಧಿಕಾ ತನ್ನವಳಾಗುವುದಿಲ್ಲವೆನ್ನುವ ನಿರಾಶೆ ಕವಿದುಕೊಂಡಿದ್ದುದರಿಂದ ಅವರ ಜೊತೆಗಿರಲು ಮನಸ್ಸಾಗದೆ “ಇಲ್ಲ ಮುರು, ನಾನೀಗ ಹೋಟೆಲ್ಲಿಗೆ ಹೋಗಿ ರೂಮು ಖಾಲಿ ಮಾಡಿ ಬೆಂಗಳೂರಿಗೆ ಹೊರಡ್ತೀನಿ, ನೀವೆಲ್ಲ ಬೆಂಗಳೂರಿಗೆ ಬಂದ ಮೇಲೆ ಫೋನ್ ಮಾಡು, ಭೇಟಿ ಆಗೋಣವಂತೆ” ಎಂದು ಹೇಳಿ ಅಲ್ಲಿಂದ ಹೊರಟ, ಪರಾಗ್ ವಸತಿಗೃಹಕ್ಕೆ ಬಂದವನೇ ರಾತ್ರಿ ಉಳಿದುಕೊಂಡು, ಬೆಳಗ್ಗೆ ರೂಮ್ ಖಾಲಿಮಾಡುವುದಾಗಿ ತಿಳಿಸಿ, ರೂಮಿಗೆ ಬಂದು ಹಾಸಿಗೆಯ ಮೇಲೆ ಬಿದ್ದುಕೊಂಡ. ಕೇವಲ ಆರು ಗಂಟೆ ಅವಧಿಯಲ್ಲಿ ಏನೆಲ್ಲ ನಡೆದುಹೋಯಿತಲ್ಲ ಎಂದು ಅಚ್ಚರಿಗೊಂಡ. ಎಲ್ಲವೂ ಸರಿಯಾಗಿದ್ದರೆ ರಾಧಿಕಾಳನ್ನು ವರಿಸುವ ಸುಂದರ ಕನಸು ಹೊತ್ತು ಬೆಂಗಳೂರಿಗೆ ಹೋಗಬಹುದಿತ್ತು, ಅಮ್ಮ ಅಪ್ಪನನ್ನೂ ಖುಷಿಪಡಿಸಬಹುದಿತ್ತು. ಆದರೆ ಅವಳಿಗೆ ಯಾರೋ ಕೆನಡಾದವನು ಗಂಟುಬಿದ್ದಿದ್ದಾನಲ್ಲ ಎಂದು ನೋಡದೇ ಇರುವ ಅವನ ಬಗೆಗೆ ಕೋಪ ಬಂತು. ಹಾಗಾದರೆ ನನಗೆ ಬೀಳುತ್ತಿದ್ದ ಕನಸಿಗೇನು ಅರ್ಥ? ಕನಸಾದರೂ ಅವಳ ರೂಪ ಸೌಂದರ್ಯಗಳು ಅಷ್ಟು ಸ್ಪಷ್ಟವಾಗಿ ಕಂಡಿದ್ದೇಕೆ? ಆ ಸ್ವಪ್ನಸುಂದರಿ ರಾಧಿಕಾ ಆಗಿ ಸಾಕಾರಗೊಂಡಿದ್ದೇಕೆ? ನನ್ನ ಹೆಸರು ರಾಧಾಕೃಷ್ಣ, ಅವಳ ಹೆಸರು ರಾಧಿಕಾ ಎಂದೇಕೆ ಇದೆ? ಹೆಣ್ಣುಮಕ್ಕಳಿಗಿಡುವ ಸಾವಿರಾರು ಹೆಸರುಗಳಲ್ಲಿ ಅವಳದು ಮತ್ತೇನೋ ಆಗಿರಬಹುದಿತ್ತಲ್ಲವೇ? ರಾಧಿಕಾ ವಾಸ್ತವ ಸಂಗತಿಯನ್ನು ಹೇಳಿ ಹೋಗುವಾಗಲೂ ಒಂದು ಪ್ರೇಮಭರಿತ ನೋಟವನ್ನು ಹಾಯಿಸಿ ಹೋದದ್ದು ಸುಳ್ಳೇ? ಅವನು ಕೆನಡಾದಲ್ಲಿ ಒಳ್ಳೆಯ ಹುದ್ದೆಯಲ್ಲಿರುವ ಹುಡುಗ, ಇವಳು ಅನುಪಮ ಸುಂದರಿ. ಈ ಸಂಬಂಧ ಯಾವುದೇ ರೀತಿಯಲ್ಲಿ ಕಡಿದುಹೋಗುವುದಕ್ಕೆ ಸಾಧ್ಯವೇ? ಎಂದು ಯೋಚಿಸುತ್ತ ಹೋದಂತೆ ರಾಧಾಕೃಷ್ಣನ ತಲೆಕೆಟ್ಟು ಮೊಸರಾಗುತ್ತಿತ್ತು, ತನ್ನ ತಲೆ ಕೂದಲುಗಳನ್ನೇ ಕಿತ್ತುಕೊಂಡು ಬಿಡಬೇಕು ಅನ್ನುವಷ್ಟು ಸಿಟ್ಟು ಮತ್ತು ಬೇಸರ ಬರುತ್ತಿತ್ತು. ಬೆಳಗ್ಗೆ ಸಂಚಿತಾಳ ಗಂಡನ ಮನೆಯಲ್ಲಿರುವ ಅವಳನ್ನು ಹೇಗಾದರೂ ಏಕಾಂತದಲ್ಲಿ ಭೇಟಿ ಮಾಡಿ, ಕಾಲು ಹಿಡಿದು ಬೇಡಿಯಾದರೂ ನನ್ನನ್ನು ಮದುವೆಯಾಗುವಂತೆ ಕೇಳಿಕೊಳ್ಳಲೇ ಎಂದೆಲ್ಲ ಯೋಚನಾಲಹರಿ ಹರಿಯಿತು. ಆಮೇಲೆ ವಿವೇಕವೂ ಅವನನ್ನು ಎಚ್ಚರಿಸಿ, ಅದೆಲ್ಲ ಆಲೋಚನೆ ಮಾಡಿದಷ್ಟು ಸುಲಭವಲ್ಲ. ಅಂಥವು ನಿರ್ದಿಷ್ಟ ಅಥವಾ ಅಪೇಕ್ಷಿತ ಫಲಿತಾಂಶ ಕೊಡದೆ ಮರ್ಯಾದೆ ಕಳೆದುಕೊಳ್ಳುವುದಕ್ಕೂ ಅಪಹಾಸ್ಯಕ್ಕೆ ಗುರಿಯಾಗುವುದಕ್ಕೂ ಕಾರಣವಾಗಿಬಿಡಬಹುದು. ಕನಸನ್ನು ನೆಚ್ಚಿಕೊಂಡು, ಹುಸಿ ಭರವಸೆ ಇಟ್ಟುಕೊಂಡು ಮುಂದುವರಿಯುವುದು ತನ್ನ ಮೂರ್ಖತನವನ್ನೇ ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ಸ್ವಪ್ನಸುಂದರಿ ರಾಧಿಕಾನೇ ಅಂತ ಬಲವಾಗಿ ನಂಬಿ, ಅವಳನ್ನು ಪಡೆಯುವ ದುಸ್ಸಾಹಸದಲ್ಲಿ ಅನಪೇಕ್ಷಿತ ಅನಾಹುತಗಳಿಗೆ ಅವಕಾಶ ಕೊಡುವುದು ಬೇಡ ಎಂದುಕೊಂಡು ರಾಧಿಕಾಳ ಬಿಂಬವನ್ನು ಕಣ್ಮನಗಳಿಂದ ಕಿತ್ತೊಗೆಯಲು ಪ್ರಯತ್ನಿಸಿದ.
ಮನೆಗೆ ಹಿಂದಿರುಗಿದ ಮೇಲೆ ಅಮ್ಮನ ಪಟ್ಟಿಯಲ್ಲಿರುವ ಸಂಬಂಧಗಳಲ್ಲಿ ನನಗೆ ಇಷ್ಟವಾಗುವುದನ್ನು ಆಯ್ಕೆಮಾಡಿಕೊಂಡು ಮದುವೆಯಾಗುವವಳೊಂದಿಗೆ ಸುಖಸಂಸಾರ ನಡೆಸಿಕೊಂಡು ಇದ್ದುಬಿಡಬೇಕು ಎಂಬ ತೀರ್ಮಾನವನ್ನು ಗಟ್ಟಿ ಮಾಡಿಕೊಂಡ. ಕೆಳಗೆ ಹೋಗಿ ಊಟ ಮಾಡಿಕೊಂಡು ಬಂದು, ಟಿ.ವಿ. ಆನ್ ಮಾಡಿ ಒಂದಷ್ಟು ಹೊತ್ತು ನ್ಯೂಸ್ ಚಾನಲ್‌ಗಳನ್ನು ತಿರುಗಿಸಿದ. ಕಣ್ಣುಗಳು ತುಂಬಿ ಬಂದಂತಾಗಿ ಹಾಗೇ ನಿದ್ದೆಗೆ ಜಾರಿದ. ಬೆಳಗ್ಗೆ ಎದ್ದು ಗಡಿಯಾರ ನೋಡಿಕೊಂಡಾಗ ಎಂಟು ಗಂಟೆಯಾಗಿತ್ತು. ಮನೆಯಲ್ಲಿದ್ದಾಗ ರಾಧಾಕೃಷ್ಣ ಬೆಳಗ್ಗೆ 6 ಗಂಟೆಯ ನಂತರ ಹಾಸಿಗೆಯಲ್ಲಿ ಇದ್ದವನೇ ಅಲ್ಲ ರಾತ್ರಿ ತಡವಾಗಿ ಮಲಗಿದರೂ 6 ಗಂಟೆಯೊಳಗೆ ಎಚ್ಚರವಾಗಿಬಿಡುತ್ತಿತ್ತು. ಮಧ್ಯದಲ್ಲಿ ಎಚ್ಚರವೇ ಇಲ್ಲದ ಎಂಥ ಗಾಢ ನಿದ್ದೆ ಬಂತಲ್ಲ ಎಂದು ಅಚ್ಚರಿಯಾಗಿತ್ತು. ಅಲ್ಲದೆ ಸ್ವಪ್ನಸುಂದರಿಯ ಕನಸೂ ಬಿದ್ದಿರಲಿಲ್ಲ. ಸುಂದರಿ ಸಾಕ್ಷಾತ್ಕಾರವಾದ ಮೇಲೆ ಇನ್ನು ಆ ಕನಸು ಬೀಳುವುದಿಲ್ಲವೇನೋ ಅಂದುಕೊಂಡ. ಸ್ನಾನ ಮಾಡಿ, ಬ್ಯಾಗೇಜ್ ಸಿದ್ದ ಮಾಡಿಕೊಂಡು ಕೆಳಗಿಳಿದು ರೂಮಿನ ಬಾಡಿಗೆ ಚುಕ್ತಾ ಮಾಡಿ, ಅಲ್ಲೇ ಉಪಾಹಾರ ಮುಗಿಸಿ ಬಸ್ ನಿಲ್ದಾಣಕ್ಕೆ ಬಂದವನೇ ಬೆಂಗಳೂರು ಬೋರ್ಡು ಹಾಕಿಕೊಂಡು ಹೊರಡಲು ಸಿದ್ದವಾಗಿದ್ದ ಬಸ್ ಹತ್ತಿ ಕುಳಿತ. ಗಾಢ ನಿದ್ದೆ, ಅಲ್ಪ ಎಚ್ಚರಗಳಲ್ಲಿ ಬೆಂಗಳೂರು ತಲುಪಿದಾಗ ಮಧ್ಯಾಹ್ನ 3 ಗಂಟೆ. ಮನೆ ಸೇರುವಷ್ಟರಲ್ಲಿ ರಾಧಾಕೃಷ್ಣ ಒಂದು ನಿರ್ಧಾರಕ್ಕೆ ಬಂದಿದ್ದ. ಪ್ರಾಧ್ಯಾಪಕ ಜೀವನದ ಮುಂದಿನ ಬೆಳವಣಿಗೆಯ ದೃಷ್ಟಿಯಿಂದ ಒಂದಷ್ಟು ಪುಸ್ತಕಗಳನ್ನು ಪ್ರಕಟಿಸಬೇಕಿತ್ತು. ಆರಂಭಕ್ಕೆ ಪಿ.ಎಚ್.ಡಿ. ನಿಬಂಧವನ್ನು ಮತ್ತೊಮ್ಮೆ ಪರಿಶೀಲಿಸುವುದು, ಅಗತ್ಯವಾದ ತಿದ್ದುಪಡಿ ಅಥವಾ ಸೇರ್ಪಡೆಗಳನ್ನು ಮಾಡಿ ಪ್ರಕಟಿಸುವುದು. ಪುಸ್ತಕ ಪ್ರಕಟಣೆಗೆ ವಿಶ್ವವಿದ್ಯಾಲಯ ಕಾಮರ್ಸ್ ಅಸೋಸಿಯೇಷನ್ ಸಿದ್ಧವಾಗಿತ್ತು. ಇನ್ನು ತಡಮಾಡುವುದು ಬೇಡ, ಮನಸ್ಸು ಮಾಡಿದರೆ ಆ ಕೆಲಸವನ್ನು ಒಂದು ತಿಂಗಳಲ್ಲಿ ಮುಗಿಸಬಹುದೆಂದು ಕಾರ್ಯಪ್ರವೃತ್ತನಾದ. ತಿಂಡಿ, ಊಟದ ಸಮಯ ಬಿಟ್ಟರೆ ರೂಮಿನಲ್ಲಿ ಏನೋ ಬರೆಯುತ್ತ ಕುಳಿತಿರುತ್ತಿದ್ದ ಮಗನನ್ನು ಅಮ್ಮ ಮದುವೆ ವಿಷಯದತ್ತ ಸೆಳೆಯುವ ಪ್ರಯತ್ನ ಮಾಡಲಿಲ್ಲ. ಚಿಕ್ಕಮಗಳೂರಿಗೆ ಹೋಗಿ ಬಂದಾಗಿನಿಂದ ಸ್ವಪ್ನಸುಂದರಿಯ ಕನಸು ಬೀಳದೇ ಹೋದುದು ರಾಧಾಕೃಷ್ಣನಿಗೆ ಆಶ್ಚರ್ಯವನ್ನು ಉಂಟುಮಾಡಿತ್ತು. ಆದರೆ ರಾಧಿಕಾಳ ಮುಖ ಆಗೀಗ ಕಣ್ಣೆದುರು ತೇಲಿಬಂದು ಸ್ವಲ್ಪ ಹೊತ್ತು ಕಾಡುತ್ತಿದ್ದುದುಂಟು. ಪಿಎಚ್.ಡಿ. ನಿಬಂಧವನ್ನು ಪ್ರಕಟಣೆಗೆ ಸಿದ್ಧಪಡಿಸುವ ಕೆಲಸ ಒಂದು ತಿಂಗಳಲ್ಲಿ ಮುಗಿದಿದ್ದರಿಂದ ಮತ್ತೆ ಒಂದೆರಡು ಪುಸ್ತಕಗಳನ್ನು ಬರೆಯಬೇಕೆನ್ನುವ ಉತ್ಸಾಹ ಮೂಡಿತ್ತು. ಪುರುಷೋತ್ತಮ ಚಿಕ್ಕಮಗಳೂರಿನಿಂದ ಬಂದ ಮೇಲೆ ಪೋನ್ ಮಾಡಿದ್ದನಾದರೂ ಅದು ಉಭಯಕುಶಲೋಪರಿಗೆ ಸೀಮಿತವಾಗಿತ್ತು. ಸಂಚಿತಾ ಮತ್ತು ಅವಳ ಗಂಡ ಮಧುಚಂದ್ರದ ನೆಪದಲ್ಲಿ ಹದಿನೈದು ದಿನ ಉತ್ತರ ಭಾರತದ ಸುತ್ತಾಟಕ್ಕೆ ಹೊರಟಿರುವುದಾಗಿ ತಿಳಿಸಿದ್ದ. ಮದುವೆಯ ಸಿದ್ಧತೆ, ಮದುವೆ, ಆರತಕ್ಷತೆ, ಹೆಣ್ಣನ್ನು ಮನೆ ತುಂಬಿಸುವುದು ಈ ಎಲ್ಲ ಕೆಲಸಗಳಲ್ಲಿ ಸಹಾಯಕ್ಕೆ ನಿಂತ ರಾಧಿಕಾಳನ್ನು ಕುರಿತು ಮೆಚ್ಚಿಗೆಯ ಮಾತುಗಳನ್ನು ಆಡಿದ್ದ. ಸದ್ಯದಲ್ಲೇ ಭೇಟಿಯಾಗೋಣ ಎಂದು ಹೇಳಿ ಮಾತು ಮುಗಿಸಿದ್ದ.
ಒಂದು ತಿಂಗಳು ಬಿಟ್ಟು ಮತ್ತೆ ಫೋನ್ ಮಾಡಿದ್ದ ಪುರುಷೋತ್ತಮ “ನಿನ್ನ ಜೊತೆ ಹಂಚಿಕೊಳ್ಳಬೇಕಾದ ಒಂದು ಮುಖ್ಯ ಸುದ್ದಿ ಇದೆ ರಾಧಾಕೃಷ್ಣ, ನೀನು ಸಂಚಿತಾ ಮದುವೆಗೆ ಚಿಕ್ಕಮಗಳೂರಿಗೆ ಬರದೇ ಇದ್ದಿದ್ದರೆ, ಅಲ್ಲಿ ರಾಧಿಕಾಳನ್ನು ನೋಡದೇ ಇದ್ದಿದ್ದರೆ, ಅವಳನ್ನು ಮದುವೆಯಾಗುವ ಬಯಕೆ ವ್ಯಕ್ತಪಡಿಸದೇ ಇದ್ದಿದ್ದರೆ ಈ ಮಾತುಗಳನ್ನು ನಿನಗೆ ಹೇಳುವ ಪ್ರಮೇಯವೇ ಬರುತ್ತಿರಲಿಲ್ಲ. ನಿನಗೆ ಆ ದಿನ ರಾಧಿಕಾ ತಿಳಿಸಿದ ಹಾಗೆ ಕೆನಡಾದಲ್ಲಿದ್ದ ಇಂಜಿನಿಯರ್ ಹುಡುಗ, ರಾಧಿಕಾಳನ್ನು ನೋಡಿ ಇಷ್ಟಪಟ್ಟು ಮೂರು ತಿಂಗಳ ನಂತರ ರಜಾ ಹಾಕಿ ಬಂದು ಅವಳನ್ನು ಮದುವೆ ಮಾಡಿಕೊಂಡು ಕೆನಡಾಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದ ಹುಡುಗ ನಿನ್ನೆ ದಿನ ಬೆಳಗ್ಗೆ ನ್ಯೂಯಾರ್ಕ್‌ನಲ್ಲಿ ನಡೆಯಬೇಕಿದ್ದ ಇಂಜಿನಿಯರ್‌ಗಳ ಸಮಾವೇಶದಲ್ಲಿ ಭಾಗವಹಿಸಲು ಟೊರಾಂಟೊದಿಂದ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದನಂತೆ. ತಾಂತ್ರಿಕ ದೋಷವೋ ಮತ್ತೇನೋ ಖಚಿತವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಆ ವಿಮಾನ ಮಾರ್ಗಮಧ್ಯದಲ್ಲೇ ಪತನಗೊಂಡು ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರೊಂದಿಗೆ ಆ ಹುಡುಗನೂ ಪ್ರಾಣ ಕಳೆದುಕೊಂಡಿದ್ದಾನಂತೆ. ಹಾಗೆಂದು ಹುಡುಗನ ತಂದೆ ತಮ್ಮ ಗೆಳೆಯರೇ ಆದ ರಾಧಿಕಾ ತಂದೆಗೆ ಪೋನ್ ಮಾಡಿ ತಿಳಿಸಿದರಂತೆ. ಅದನ್ನು ರಾಧಿಕಾ ಸಂಚಿತಾಗೆ ತಿಳಿಸಿ, ಸಂಚಿತಾ ಈಗಷ್ಟೇ ನನಗೆ ಫೋನ್ ಮಾಡಿದಳು. ಹುಡುಗ ಸತ್ತನಲ್ಲ ಅಂತ
ಸಂತಾಪ ವ್ಯಕ್ತಪಡಿಸೋಣ. ಅವನೊಂದಿಗೆ ಮಾತುಕತೆ, ಓಡಾಟ ಏನೂ ಇರಲಿಲ್ಲವಾದರೂ ಮದುವೆಯಾಗುವ ಹುಡುಗ ಅಂದುಕೊಂಡಿದ್ದವನು ಹೀಗೆ ದಿಢೀರಂತ ಹೋಗಿಬಿಟ್ಟನಲ್ಲ ಎನ್ನುವ ಬೇಸರವಂತೂ ರಾಧಿಕಾಳಿಗೆ ಇರುತ್ತದೆ. ಒಂದು ಹದಿನೈದು ಇಪ್ಪತ್ತು ದಿನ ಕಳೆಯಲಿ, ಬೊಮ್ಮನಹಳ್ಳಿಯಲ್ಲಿರುವ ಅವರ ಮನೆ ನೋಡಿದ್ದೀನಿ, ಇಬ್ಬರೂ ಹೋಗಿ ಬರೋಣ” ಎಂದ ಪುರುಷೋತ್ತಮನ ಮಾತು ಕೇಳಿ ಬರಡು ನೆಲದಲ್ಲಿ ಗರಿಕೆ ಹುಲ್ಲು ಮೊಳೆತಂತೆ ರಾಧಾಕೃಷ್ಣನ ಮನಸ್ಸಿನಲ್ಲಿ ಮತ್ತೆ ಆಸೆ ಚಿಗುರೊಡೆದು ನಳನಳಿಸತೊಡಗಿತು. “ಆಯಿತು ಹೋಗೋಣ” ಎಂದು ಹೇಳಿ ಪುರುಷೋತ್ತಮನೊಂದಿಗೆ ಮಾತು ಮುಗಿಸಿದರೂ ಅಂತರಂಗದಲ್ಲಿ ಆಸೆ ಮತ್ತು ಗೊಂದಲಗಳು ಪರಸ್ಪರ ಡಿಕ್ಕಿ ಹೊಡೆಯುವುದು ರಾಧಾಕೃಷ್ಣನ ಅನುಭವಕ್ಕೆ ಬರುತ್ತಿತ್ತು. ಕನಸಿನಲ್ಲಿ ಬಂದು ಕಾಡುತ್ತಿದ್ದ ಸುಂದರಿಗಾಗಿಯೇ ನಾನು ಪರಿತಪಿಸುತ್ತಿದ್ದೆ. ಅವಳು ರಾಧಿಕಾ ರೂಪದಲ್ಲಿ ಪ್ರತ್ಯಕ್ಷವಾದಾಗ ಸಿಕ್ಕೇಬಿಟ್ಟಳು ಎಂದು ಸಂತೋಷಪಟ್ಟಿದ್ದೆ. ಅವಳನ್ನು ಇನ್ನಾರೋ ಮದುವೆಯಾಗಲು ಮಾತು ಕೊಟ್ಟಿದ್ದಾರೆ ಅಂತ ಗೊತ್ತಾದಾಗ ಅಯ್ಯೋ ನನಗೆ ಸಿಕ್ತಾ ಇಲ್ಲವಲ್ಲ ಅನ್ನಿಸಿ ವಿಲವಿಲ ಒದ್ದಾಡಿದ್ದೆ. ಆದರೆ ನನ್ನ ಆಳದಲ್ಲಿ ಎಲ್ಲೋ ಹೇಗಾದರೂ ಸರಿ ರಾಧಿಕಾ ನನ್ನವಳಾಗಬೇಕೆಂದು ಮೊರೆ ಇಟ್ಟಿದ್ದೆನೆ? ಆ ಮೊರೆ ಯಾರಿಗೆ ಕೇಳಿತು? ಹೇಗೆ ಅದು ಕಾರ್ಯಪ್ರವೃತ್ತವಾಯಿತು? ಅದರಿಂದಾಗಿಯೇ ಕೆನಡಾದ ಹುಡುಗ ಸತ್ತನೆ? ಆದರೆ ಅವನೊಬ್ಬನೇ ಸಾಯದೆ, ಅವನೊಂದಿಗೆ ವಿಮಾನದಲ್ಲಿದ್ದವರೆಲ್ಲ ಹೋಗಿಬಿಟ್ಟರಲ್ಲ? ಹೀಗೆ ಬಗೆಹರಿಯದ ತೊಳಲಾಟದಲ್ಲಿ, ಅರ್ಥವಾಗದ ಅಪರಾಧೀ ಭಾವದಲ್ಲಿ ನರಳಿದ. ಕೊನೆಗೆ, ಕನಸು ಭವಿಷ್ಯ ಸೂಚಕ, ಅದರಂತೆಯೇ ಎಲ್ಲವೂ ನಡೆದಿದೆ, ನಡೆಯುತ್ತದೆ ಎನ್ನುವ ತೀರ್ಮಾನಕ್ಕೆ ಬಂದು ಸಮಾಧಾನ ತಂದುಕೊಂಡ. - ರಾಧಿಕಾ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಶನಿವಾರ, ಭಾನುವಾರ ರಜಾದಿನಗಳಾಗಿದ್ದುದರಿಂದ ಒಂದು ಶನಿವಾರ ಬೆಳಗ್ಗೆಯೇ ಅವರ ಮನೆಗೆ ಬರುವುದಾಗಿ ಮುಂಚಿತವಾಗಿ ತಿಳಿಸಿದ್ದ ಪುರುಷೋತ್ತಮ ಅವನದೇ ಕಾರಿನಲ್ಲಿ ರಾಧಾಕೃಷ್ಣನನ್ನು ಕರೆದುಕೊಂಡು ಹೊರಟ. ಅಪ್ಪಿತಪ್ಪಿಯೂ ಕೆನಡಾ ಹುಡುಗನ ಸುದ್ದಿ ಎತ್ತುವುದು ಬೇಡವೆಂದು ಪುರುಷೋತ್ತಮ ತಾಕೀತು ಮಾಡಿದ್ದ. ವಾಹನ ಪಾರ್ಕ್ ಮಾಡಿ ಇಬ್ಬರೂ ಬಾಗಿಲಿಗೆ ಬರುಷರಲ್ಲಿ ರಾಧಿಕಾಳೇ ಎದುರಿಗೆ ಬಂದು ಸ್ವಾಗತಿಸಿದಳು. ಅವಳು ನಮಸ್ಕರಿಸಿದ ಭಂಗಿ, 'ಬನ್ನಿ ಬನ್ನಿ' ಎಂದು ಮಧುರವಾಗಿ ಉಲಿದ ರೀತಿಯೇ ರಾಧಾಕೃಷ್ಣನಿಗೆ ಮೋಡಿಹಾಕುವಂತಿತ್ತು. ಅಡಿಗೆ ಮನೆಯಲ್ಲಿದ್ದ ಅಮ್ಮನನ್ನು ಕರೆದು ಪರಿಚಯಿಸಿದಳು. “ಅಪ್ಪ ಮನೆಯಲ್ಲಿ ಇರುವುದೇ ಕಡಿಮೆ. ಕೆಲಸ, ಸ್ನೇಹಿತರು, ಮಂತ್ರಿಗಳನ್ನೋ ಶಾಸಕರನ್ನೋ ಅಧಿಕಾರಿಗಳನ್ನೋ ಭೇಟಿಯಾಗೋದು, ಶಾಲೆ ಮೇಲ್ವಿಚಾರಣೆ ಅಂತ ಹೊರಗಡೆ ಓಡಾಟವೇ ಜಾಸ್ತಿ. ಬೆಳಗ್ಗೆ ಹೊರಟರು ಅಂದರೆ ಮಧ್ಯಾಹ್ನ ಊಟಕ್ಕೆ ಒಮ್ಮೊಮ್ಮೆ ಬರ್ತಾರೆ, ಇಲ್ಲ ಅಂದರೆ ರಾತ್ರಿಗೇ ವಾಪಸ್ಸು ಬರೋದು. ಬನ್ನಿ ಮೇಲೆ ಹೋಗೋಣ” ಎಂದು ಮೆಟ್ಟಿಲುಗಳನ್ನು ಹತ್ತಿಕೊಂಡು ಅವಳ ರೂಮಿಗೆ ಕರೆದುಕೊಂಡು ಹೋದಳು. ಸೋಫಾದ ಮೇಲೆ ಅವರಿಗೆ ಕುಳಿತುಕೊಳ್ಳಲು ಹೇಳಿ ಎದುರಿಗೆ ಕುಳಿತುಕೊಂಡಳು. ರಾಧಾಕೃಷ್ಣನನ್ನು ಸಾಕ್ಷಿಯಾಗಿರಿಸಿಕೊಂಡು ಅವರಿಬ್ಬರೂ ಸಂಚಿತಾ ಮದುವೆ, ರಾಧಿಕಾಳ ಉದ್ಯೋಗ, ಅದರಲ್ಲಿ ಸಿಗಲಿರುವ ಪ್ರೊಮೋಶನ್, ಬೆಂಗಳೂರಿನ ಟ್ರಾಫಿಕ್ ಜಾಮ್ ಇತ್ಯಾದಿಗಳ ಬಗೆಗೆ ಮಾತುಕತೆ ಆಡುತ್ತಿರಬೇಕಾದರೆ ರಾಧಾಕೃಷ್ಣ ರೂಮಿನ ಒಳಾಂಗಣ ಅಲಂಕಾರ, ಪೀಠೋಪಕರಣಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದ ರೀತಿ, ಗೋಡೆಗೆ ಬಳಿದಿದ್ದ ಪೇಂಟ್, ಅದರ ಮೇಲೆ ತೂಗುಹಾಕಿದ್ದ ಕಲಾಕೃತಿಗಳು, ಕಿಟಕಿಗೆ ಹಾಕಿದ್ದ ಅಪರೂಪದ ಬಣ್ಣದ ಪರದೆಗಳು, ಬರೆಯಲು ಓದಲು ಅನುಕೂಲವಾಗುವಂತೆ ಜೋಡಿಸಿದ ಕುರ್ಚಿ ಟೇಬಲ್- ಅವುಗಳ ಹಿಂದಿದ್ದ ರಾಧಿಕಾಳ ಸದಭಿರುಚಿಯನ್ನು ಗುರುತಿಸಿ ಬೆರಗಾಗುತ್ತಿದ್ದ. ಅವರ ಮಾತುಕತೆ ಒಂದು ಹಂತಕ್ಕೆ ಬಂದ ಮೇಲೆ ಮುಖ್ಯ ವಿಷಯಕ್ಕೆ ಬರುವಂತೆ ಪುರುಷೋತ್ತಮ “ರಾಧಿಕಾ, ಮದುವೆ ಮನೆಯಲ್ಲಿ ನನ್ನ ಗೆಳೆಯ ರಾಧಾಕೃಷ್ಣ ನಿನ್ನನ್ನು ಇಷ್ಟಪಡ್ತಿದ್ದಾನೆ ಅಂತ ಹೇಳಿದ್ದೆ. ನೀನು ನಿನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೊರಹಾಕಿದ್ದೆ. ನಡುವೆ ಏನೇನೋ ಆಯಿತು. ಈಗ ಬೇಸರಪಟ್ಟುಕೊಂಡು ಕುಳಿತುಕೊಳ್ಳುವುದರಲ್ಲಿ ಅರ್ಥ ಇಲ್ಲ. ಎಲ್ಲಿಯದೋ ಗಂಡು, ಎಲ್ಲಿಯದೋ ಹೆಣ್ಣು ಮದುವೆಯ ಮೂಲಕ
ಒಂದಾಗಿ ದಾಂಪತ್ಯ ನಡೆಸೋದು ಋಣಾನುಬಂಧ ಅಂತ ಹಿರಿಯರು ಹೇಳಿದ್ದಾರೆ. ಅದನ್ನು ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ರಾಧಾಕೃಷ್ಣನನ್ನು ಕಳೆದ ಎಂಟು ವರ್ಷಗಳಿಂದ ನೋಡ್ತಿದ್ದೀನಿ. ಆತ್ಮೀಯ ಸ್ನೇಹಿತ. ಗೌರವಾನ್ವಿತವಾದ ಪ್ರೊಫೆಸರ್ ಹುದ್ದೆಯಲ್ಲಿದ್ದಾನೆ. ಕೈ ತುಂಬ ಸರ್ಕಾರಿ ಸಂಬಳ ಬರುತ್ತದೆ. ಮನೆಯಲ್ಲಿ ಅಪ್ಪ ಅಮ್ಮ ಬಿಟ್ಟರೆ ಇರುವವನು ಒಬ್ಬನೇ ತಮ್ಮ, ಅವನೂ ಬ್ಯಾಂಕಿನಲ್ಲಿ ಕೆಲಸದಲ್ಲಿದ್ದಾನೆ. ನನಗಾದರೆ ಸ್ನೇಹಿತರ ಜೊತೆ ಸೇರಿದಾಗ ಕುಡಿಯೋದು, ತಿನ್ನೋದು ಮನೆಯವರಿಗೆ ತಿಳಿಯದ ರೀತಿಯಲ್ಲಾದರೂ ಅಭ್ಯಾಸ ಇದೆ. ಇವನಿಗೆ ಅಂಥ ದುರಭ್ಯಾಸಗಳೂ ಇಲ್ಲ. ನೀನು ನನ್ನ ತಂಗಿಯ ಗೆಳತಿ, ಇವನು ನನ್ನ ಗೆಳೆಯ. ನೀನು ಒಪ್ಪಿಗೆ ಕೊಟ್ಟರೆ ನಿಮ್ಮಿಬ್ಬರನ್ನೂ ಒಂದುಗೂಡಿಸಿದ ಪುಣ್ಯ ನನ್ನದಾಗುತ್ತದೆ” ಎಂದು ಅವಳ ಮನಕರಗುವಂತೆ, ಆಗಲೇ ಅವಳಿಂದ 'ಹೂಂ' ಅನ್ನಿಸಿಬಿಡುವಂತೆ ಮಾತನಾಡಿದ ರಾಧಾಕೃಷ್ಣ ಆಶಾಕಾತರನಾಗಿ ರಾಧಿಕಾಳ ಮುಖವನ್ನೇ ದಿಟ್ಟಿಸಿದ. ರಾಧಿಕಾ ಕುಡಿನೋಟವೊಂದನ್ನು ರಾಧಾಕೃಷ್ಣನು ಹಾಯಿಸಿದಳು. ಇಬ್ಬರ ನೋಟವೂ ಸಂಧಿಸಿತು. “ಸಂಚಿತಾಳ ಅಣ್ಣನಾಗಿ ನನಗೆ ಪರಿಚಯವಾದಾಗಿನಿಂದ ನಿಮ್ಮನ್ನು ನಾನು ಕೂಡ ಅಣ್ಣ ಅಂತಲೇ ಭಾವಿಸಿದ್ದೇನೆ. ಇದುವರೆಗೆ ಎಂದೂ ಹೆಸರು ಹಿಡಿದು ಕರೆದಿಲ್ಲ. ಕೂಗುವ, ಕರೆಯುವ ಸಂದರ್ಭ ಬಂದಾಗಲೆಲ್ಲ ಅಣ್ಣ ಎಂದೇ ಹೇಳಿದ್ದೇನೆ. ಅದು ಹೃದಯದಿಂದ ಬಂದದ್ದು. ನಮ್ಮ ಕುಟುಂಬದ ಹಿತೈಷಿಗಳೂ ನನಗೆ ಸದಾ ಒಳಿತನ್ನೇ ಬಯಸುವವರೂ ಆಗಿರುವ ನಿಮ್ಮ ಮಾತಿಗೆ ಖಂಡಿತ ಬೆಲೆ ಕೊಡುತ್ತೇನೆ. ಮದುವೆಯ ವಿಚಾರದಲ್ಲಿ ನೀವು ಹೇಳಿದ ಋಣಾನುಬಂಧ ನಿಜ ಅಂತಲೇ ನನಗೂ ಅನ್ನಿಸಿದೆ. ಕೆನಡಾ ಹುಡುಗ ಮದುವೆ ಪ್ರಸ್ತಾಪ ಇಟ್ಟಾಗ ನಾನು ಆಗಬಹುದು ಅಂತ ಅಂದುಕೊಂಡೆ ಅಷ್ಟೆ. ನಾನು ಆಳವಾಗಿ ಆಲೋಚಿಸುವುದಕ್ಕೆ, ವಿವೇಚಿಸುವುದಕ್ಕೆ ಮೊದಲೇ ಅವನ ತಂದೆ, ನಮ್ಮ ತಂದೆ ಸೇರಿ ನಿರ್ಣಯಕ್ಕೆ ಬಂದುಬಿಟ್ಟಿದ್ದರು. ಸರಿಯಾಗಿ ನನ್ನ ಅಭಿಪ್ರಾಯ ಕೇಳಲಿಲ್ಲ. ಮುಂದುವರಿದ ರಾಷ್ಟ್ರವೊಂದರಲ್ಲಿ ನನ್ನ ಭವಿಷ್ಯದ ಬದುಕು ಅಂತ ಕಲ್ಪಿಸಿಕೊಂಡಾಗ ಒಂದು ರೀತಿಯ ಡ್ರಿಲ್ ಮತ್ತು ಫಿಯರ್ ಎರಡೂ ಇತ್ತು. ಅದೇನೂ ಆಗಲಿಲ್ಲವಲ್ಲ ಅಂತ ನನಗೆ ಸಂತೋಷವೂ ಇಲ್ಲ, ಸಂಕಟವೂ ಇಲ್ಲ. ವಿಮಾನ ಪ್ರಯಾಣದಲ್ಲಿ ಹುಡುಗ ಸತ್ತನಂತೆ ಅಂತ ತಂದೆ ಸುದ್ದಿ ಬಿತ್ತರಿಸಿದಾಗ ಅವನ ಮುಖ ಕೂಡ ಕಣ್ಮುಂದೆ ಬರದಷ್ಟು ನೆನಪು ದುರ್ಬಲವಾಗಿತ್ತು. ಹಾಗಾಗಿ ಅದರಿಂದ ನನಗೇನೂ ಬೇಸರವಾಗಲಿಲ್ಲ. ನನಗೂ ಸಂಚಿತಾಗೂ ಸಮಾನ ಪ್ರೀತಿಯ ಗೆಳತಿ ಮತ್ತು ಸಹೋದ್ಯೋಗಿಯಾಗಿರುವ ಮಧುರಾಣಿ 'ನಾವು ಪ್ರೀತಿಸಿ ಮದುವೆಯಾಗುವವರಿಗಿಂತ, ನಮ್ಮನ್ನು ಪ್ರೀತಿಸಿದವರನ್ನು ಮದುವೆಯಾದರೆ ಸಂಸಾರದಲ್ಲಿ ಹೆಚ್ಚಿನ ಸುಖ ಸಂತೋಷ ಇರುತ್ತದೆ' ಅಂತ ಹೇಳುತ್ತಿರುತ್ತಾಳೆ. ಹತ್ತಿರದ ಕೆಲವು ಉದಾಹರಣೆಗಳನ್ನು ನೋಡಿದರೆ ಆ ಮಾತು ನಿಜ ಅಂತ ನನಗೂ ಅನ್ನಿಸುತ್ತದೆ. ನಿಮ್ಮ ಗೆಳೆಯರು ನನ್ನಲ್ಲಿ ಏನು ನೋಡಿ ಇಷ್ಟಪಟ್ಟರೋ ಗೊತ್ತಿಲ್ಲ. ಅವರ ಪ್ರೀತಿಯನ್ನು ನಾನು ನಿರಾಕರಣೆ ಮಾಡುವುದಿಲ್ಲ. ಅಪ್ಪನ ಬಳಿಯಲ್ಲಿ ಈ ಸಂಬಂಧದ ಬಗೆಗೆ ನೀವು ಮಾತನಾಡಿದರೆ ಅವರು ಖಂಡಿತ ಒಪ್ಪಿಕೊಳ್ಳುತ್ತಾರೆ. ಅಮ್ಮನಿಗೆ ನಾನೇ ಹೇಳುತ್ತೇನೆ. ಅಪ್ಪನಿಗೆ ತಿಳಿಸಿ ಒಂದು ದಿನ ಅವರ ಅಪ್ಪ, ಅಮ್ಮ, ಇನ್ನು ಯಾರಾದರೂ ಹಿರಿಯರು ಇದ್ದರೆ ಔಪಚಾರಿಕವಾಗಿ ಬಂದು ಹೆಣ್ಣನ್ನೂ ಮನೆಯನ್ನೂ ನೋಡುವ ಶಾಸ್ತ್ರ ಮಾಡಿಕೊಂಡು ಹೋಗಲಿ” ಎಂದು ರಾಧಿಕಾ ಕೊಟ್ಟ ಸಲಹೆ ಇಬ್ಬರಿಗೂ ಒಪ್ಪಿಗೆಯಾಯಿತು. ರಾಧಿಕಾ ಪೂರ್ಣ ಮನಸ್ಸಿನಿಂದ ಒಪ್ಪಿಗೆ ಕೊಟ್ಟ ಮೇಲೆ ರಾಧಾಕೃಷ್ಣನಿಗೂ ಮಾತನಾಡುವ ಹುಮ್ಮಸ್ಸು ಬಂದು, ಅನೇಕ ತಿಂಗಳುಗಳಿಂದ ಬೆಳಗಿನ ಜಾವದ ಕನಸಿನಲ್ಲಿ ಒಬ್ಬಳು ಸುಂದರಿಯ ಮುಖ ಆಗಾಗ ಕಾಣಿಸಿಕೊಳ್ಳುತ್ತಿದ್ದುದ್ದು, ಆ ಸುಂದರಿ ಎಲ್ಲೋ ಇದ್ದಾಳೆ ಪತ್ತೆ ಹಚ್ಚಲೇಬೇಕು ಎಂದು ಪ್ರಯತ್ನಿಸಿದ್ದು, ಕೊನೆಗೆ ಆ ಮುಖ ಸಂಚಿತಾಳ ಮದುವೆಯಲ್ಲಿ ಪ್ರತ್ಯಕ್ಷವಾಗಿ 'ಆಪರೇಷನ್ ಸ್ವಪ್ನಸುಂದರಿ'ಯಲ್ಲಿ ಯಶಸ್ವಿಯಾದೆನೆಂದು ಭಾವಿಸಿದರೂ ಅದು ನನಗೆ ದಕ್ಕುವುದಿಲ್ಲ ಎಂದು ನಿರಾಶನಾದದ್ದು, ಈ ಋಣಾನುಬಂಧವೇ ಕಾರಣವಾಗಿ ಅದೇ ಸುಂದರಿ ಬಾಳಸಂಗಾತಿಯಾಗಲು ಒಪ್ಪಿಗೆಯ ಮುದ್ರೆ ಒತ್ತಿರುವುದು, ಇದರಿಂದ ನನ್ನಷ್ಟು ಪರಮಸುಖಿ ಪ್ರಪಂಚದಲ್ಲಿ ಯಾರೂ ಇರಲಾರರು ಎಂದು ಈ ಕ್ಷಣದಲ್ಲಿ ಅನ್ನಿಸುತ್ತಿರುವುದು - ಇದನ್ನೆಲ್ಲ ಭಾವಪೂರ್ಣವಾಗಿ ರಾಧಾಕೃಷ್ಣ ಹೊರಹಾಕಿದಾಗ ರಾಧಿಕಾಳಲ್ಲಿ ತಡೆಹಿಡಿದುಕೊಳ್ಳಲಾಗದಂಥ ನಗು ಅಲೆಯಲೆಯಾಗಿ ಹೊಮ್ಮಿ ಕೊಠಡಿಯನ್ನೆಲ್ಲ ಆವರಿಸಿಕೊಂಡಂತಾಯಿತು. ನಕ್ಕು ನಕ್ಕು ಕಣ್ಣುಗಳಲ್ಲಿ ನೀರು ಕಾಣಿಸಿಕೊಂಡಿತು. ಅವಳ ನಗೆಯಲ್ಲಿ ಪುರುಷೋತ್ತಮನೂ ಪಾಲುದಾರನಾದುದನ್ನು ರಾಧಾಕೃಷ್ಣ ಚಕಿತನಾಗಿ ನೋಡುತ್ತಿದ್ದ. ಅಷ್ಟರಲ್ಲಿ ಅಮ್ಮ ಸಿಹಿತಿಂಡಿ, ಹುರಿದ ಖಾರದ ಗೋಡಂಬಿ, ಹಬೆಯಾಡುತ್ತಿರುವ ಕಾಫಿಯೊಂದಿಗೆ ರೂಮಿಗೆ ಬರಲು ರಾಧಿಕಾ ಅವುಗಳನ್ನು ತನ್ನ ಕೈಯಿಂದಲೇ ಪುರುಷೋತ್ತಮನಿಗೂ ರಾಧಾಕೃಷ್ಣನಿಗೂ ಕೊಟ್ಟು ತಾನೂ ತೆಗೆದುಕೊಂಡಳು. ಮತ್ತಷ್ಟು ಹೊತ್ತು ಹರಟಿದ ಮೇಲೆ ಪುರುಷೋತ್ತಮ “ಮುಂದಿನ ವಾರದೊಳಗೆ ಅಪ್ಪನಿಗೆ ವಿಷಯ ಮುಟ್ಟಿಸುತ್ತೇನೆ” ಎಂದು ತಿಳಿಸಿ ರಾಧಾಕೃಷ್ಣನನ್ನು ಕರೆದುಕೊಂಡು ಹೊರಟ. ಗೇಟಿನವರೆಗೂ ಬಂದ ರಾಧಿಕಾ ಕಾರು ತಿರುವಿನಲ್ಲಿ ಮರೆಯಾಗುವವರೆಗೆ ಕೈ ಆಡಿಸುತ್ತಲೇ ಇದ್ದಳು.
ಬೆಳಗಿನ ಜಾವದಲ್ಲಿ ಮತ್ತೆ ರಾಧಾಕೃಷ್ಣನಿಗೆ ಕನಸು ಬಿತ್ತು. ಸ್ವಲ್ಪ ರೂಪಾಂತರಗೊಂಡಿದ್ದ ಕನಸಿನಲ್ಲಿ, ಮಂಗಳ ವಾದ್ಯದವರು ತಾಳಿ ಕಟ್ಟಿದ ಮೇಲೆ ನುಡಿಸುವ “ಫಲಿಸಿತು ಒಲವಿನ ಪೂಜಾ ಫಲ, ಎನಗಿಂದು ಕೂಡಿಬಂತೆ ಕಂಕಣ ಬಲ” ಕೇಳಿಬರುತ್ತಿರಲು, ಅದಕ್ಕೆ ತಕ್ಕಂತೆ ಅಭಿನಯಿಸುತ್ತ ರಾಧಾಕೃಷ್ಣ -ರಾಧಿಕಾ ಎತ್ತಿ ಹಿಡಿದಿದ್ದ ಹಾರವನ್ನು ಪರಸ್ಪರರ ಕೊರಳಿಗೆ ಹಾಕಿ ಬಿಗಿಯಾಗಿ ಅಪ್ಪಿಕೊಂಡರು. ಎಚ್ಚರಗೊಂಡ ರಾಧಾಕೃಷ್ಣ ತುಂಬು ನಗೆಯಿಂದ ಸಂಭ್ರಮಿಸುತ್ತ, ಮತ್ತೊಮ್ಮೆ ಆ ಕನಸು ಬೀಳಲೆಂದು ಹಾರೈಸುತ್ತ, ಮಗ್ಗಲು ಬದಲಾಯಿಸಿದ.
ಜನ್ಮಸ್ಥಳ ರಾಮನಗರ ಜಿಲ್ಲೆಯ ಬೈರಮಂಗಲ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಿAದ ಕನ್ನಡ ಎಂ.ಎ. ,ಮೈಸೂರು ವಿಶ್ವವಿದ್ಯಾನಿಲಯದಿಂದ `ಕುವೆಂಪು ಕಾವ್ಯ' ಕುರಿತ ಸಂಶೋಧನೆಗೆ ಪಿಎಚ್.ಡಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರಗಳಲ್ಲಿ 35 ವರ್ಷಗಳ ಬೋಧನಾನುಭವ.
ಕಥೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಅಂಕಣ ಬರಹ, ಮಕ್ಕಳ ಸಾಹಿತ್ಯ, ಸಂಪಾದನೆ, ಅಭಿನಂದನೆ ಪ್ರಕಾರಗಳಲ್ಲಿ 40ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ. ಸಿವಿಜಿ ಪಬ್ಲಿಕೇಷನ್ಸ್ನಿಂದ `ಕುವೆಂಪು 108 ನೇ ಜನ್ಮ ದಿನಕ್ಕೆ 108 ಕೃತಿಗಳು' ಮಾಲಿಕೆ ಮತ್ತು `ಕುವೆಂಪು ಸಾಹಿತ್ಯ' ಮಾಲಿಕೆಯ 25 ಕೃತಿಗಳ ಸಂಪಾದಕ.
ಕೆಲವು ಪ್ರಕಟಿತ ಕೃತಿಗಳು : ರಸಸಿದ್ಧಿ, ರಸಗ್ರಹಣ, ರಸಾನುಭೂತಿ, ರಸಲಹರಿ, ರಸಯಾನ, ಸಿಂಧೂರಿ, ಮಾಯಾ ಕಿನ್ನರಿ, ಕೆಂಗಲ್ ಹನುಮಂತಯ್ಯ, ಹಡಪದ ಅಪ್ಪಣ್ಣ, ಈ ಪರಿಯ ಸೊಬಗು, ಜಾನಪದ ದರ್ಶನ, ಜಗತ್ತಿನ ಜನಪದ ಕಥೆಗಳು, ಯೇಸು ಕ್ರಿಸ್ತ, ಮಹಾತ್ಮ ಗಾಂಧಿ, ಬುದ್ಧ, ಸ್ವಾಮಿ ವಿವೇಕಾನಂದ, ನೆಲ್ಸನ್ ಮಂಡೆಲಾ, ಮದರ್ ತೆರೆಸಾ, ಅಲೆಗ್ಸಾಂಡರ್, ಚಾರ್ಲಿ ಚಾಪ್ಲಿನ್.
ಪ್ರಶಸ್ತಿ-ಗೌರವ : ಮೈಸೂರಿನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ನಿಂದ ವಿಶ್ವಮಾನವ ಪ್ರಶಸ್ತಿ, ಸಹಕಾರ ರತ್ನ ಬಿ.ಎಲ್. ಲಕ್ಕೇಗೌಡ ಪ್ರಶಸ್ತಿ, ಚಿತ್ರದುರ್ಗ ಮುರುಘಾಮಠದ ಮುರುಘಾಶ್ರೀ ಪ್ರಶಸ್ತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಅಖಿಲ ಕರ್ನಾಟಕ ವಿಚಾರವಾದಿ ಸಂಘದ ಕರ್ನಾಟಕ ಮಹಾ ವಿಚಾರರತ್ನ ಪ್ರಶಸ್ತಿ, ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಜಿ. ನಾರಾಯಣಕುಮಾರ್ ಪ್ರಶಸ್ತಿ, ಎಚ್.ಎ.ಎಲ್. ರಾಜ್ಯೋತ್ಸವ ಪ್ರಶಸ್ತಿ, ಜಿ.ಪಿ. ರಾಜರತ್ನಂ ಸ್ಮರಣಾರ್ಥ ರಾಮನಗರ ರತ್ನ ಪ್ರಶಸ್ತಿ, ಮೈಸೂರಿನ ಬಾಲಚಿಂತನ ಬಳಗದಿಂದ ಕರ್ನಾಟಕ ಸಾಹಿತ್ಯ ಶಿರೋಮಣಿ ಪ್ರಶಸ್ತಿ, ರೋಟರಿ ಮಧುಗಿರಿಯಿಂದ ವೃತ್ತಿ ಸೇವಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಿರಿಗನ್ನಡ ಪ್ರಶಸ್ತಿ.
ರಾಮನಗರ ಜಿಲ್ಲಾ 2ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಗೌರವ. ಒಂದು ಅವಧಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ.
ಕನ್ನಡ ಜಾಗೃತಿ ಉಪನ್ಯಾಸ ಮತ್ತು ಕುವೆಂಪು ವಿಚಾರಗಳ ಪ್ರಚಾರದಲ್ಲಿ ಆಸಕ್ತ.
More About Author