Poem

ಸ್ವಚ್ಛ ಹಗಲಿನಲ್ಲಿ

ಜಗದ ಕಣ್ ತಪ್ಪಿಸಿ ನಾವು ಓಡಾಡಿದೆವು ಸ್ವಚ್ಛ ಹಗಲಿನಲ್ಲಿ
ಗೋಧಿ ತೆನೆಗಳ ಮರೆಯಲ್ಲಿ ಪ್ರೀತಿಸಿದೆವು ಸ್ವಚ್ಛ ಹಗಲಿನಲ್ಲಿ

ಜನ್ಮ ಜನ್ಮಾಂತರದಿಂದ ಹಂಬಲಿಸಿ ಕೂಡಿದಂಥಾ ಉತ್ಕಟತೆಯು
ಯಾರೊ ನೋಡುವರೆಂಬ ಶಂಕೆಯಲಿ ಆಡಿದೆವು ಸ್ವಚ್ಛ ಹಗಲಿನಲ್ಲಿ

ಮಧ್ಯಾಹ್ನ ಬೆಟ್ಟದ ನೆರಳಿನಲಿ ಮಿಡಿಯಿತು ಮಧುರ ಯಾತನೆಯ ಗೀತೆ
ಕಾಲವನು ಹಿಡಿದಿಡುವಂತೆ ಕೈಗಳ ಬೆಸೆದೆವು ಸ್ವಚ್ಛ ಹಗಲಿನಲ್ಲಿ

ಸಂಜೆಯ ಹೊಂಗಿರಣ ಅವನ ಮುಂಗುರುಳ ಶೃಂಗರಿಸಿ ಲಾಸ್ಯವಾಡಿತು
ವಿದಾಯ ಸನಿಹವಾದಂತೆ ಕಂಬನಿದುಂಬಿದೆವು ಸ್ವಚ್ಛ ಹಗಲಿನಲ್ಲಿ

ನಾವು ಪರಸ್ಪರ ಬೇರೆ ಬೇರೆ ಜಗತ್ತುಗಳಲ್ಲಿ ಕಳೆದುಹೋದವರು
ಈ ಕ್ಷಣವನ್ನು ಹೇಗೋ ಹಿಡಿದುಕೊಂಡಿರುವೆವು ಸ್ವಚ್ಛ ಹಗಲಿನಲ್ಲಿ

ಅಗಲುವುದೇ ಈ ಬದುಕು ನಮಗೆ ಇತ್ತ ಕ್ರೂರ ಕಾಣಿಕೆಯೇನೋ
ವಲಸೆ ಬಂದ ಹಕ್ಕಿಗಳಂತೆ ನಾವು ಅಗಲಿದೆವು ಸ್ವಚ್ಛ ಹಗಲಿನಲ್ಲಿ

- ಎಚ್.ಎಸ್. ಮುಕ್ತಾಯಕ್ಕ

ಎಚ್.ಎಸ್. ಮುಕ್ತಾಯಕ್ಕ

ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.

More About Author