Poem

ಸುಮ್ಮನೆ ನಗುತ್ತೇನೆ

ನಗುವೆಂದರೆ ಹೀಗಿದ್ದರೆ ಚಂದವೆಂದು
ಬೆರಳು ತೋರಿಸಿ, ಹಾಗೇ ಮುಖವರಳಿಸಿ
ನನ್ನಂತೆ ನಗುವವರ ನೆನೆ ನೆನೆದು
ಈಗೀಗ ಸುಮ್ಮನೆ ನಗುತ್ತೇನೆ

ಅವರ ಗೆಲುವಿಗಾದರೂ ಸರಿ
ನನ್ನ ಚೆಲುವಿಗಾದರೂ ಸರಿ
ಮತ್ತೆ ಮತ್ತೆ ನಗಬೇಕು
ಒಲ್ಲದವುಗಳ ಒಳಗೊಳಗೇ ಮುರುಕಿ

ಕೊಚ್ಚೆಯೊಳಬಿದ್ದು ಮಣ್ಣ ಮೆತ್ತಿಸಿಕೊಂಡ
ಭಾವಗಳ ಮುಖ ತೊಳೆದು
ಇಟ್ಟಿರುವೆ ನೆನಪುಗಳ ಒಳಮನೆಯಲ್ಲಿ
ತೇದು ಬಸವಳಿದವುಗಳೂ ಇಲ್ಲಿವೆ

ಇವಿಷ್ಟೇ ಕುಳಿತು ಜಿಗುಟು ನಾಥ ಬಾರದಿರಲೆಂದು
ಹುಡುಕಿ ತಂದ ಮಂಜು ಮನಸ್ಸಿನ
ಭಾವಬಂಧಗಳನೂ ಜೊತೆಯಿಟ್ಟಿರುವೆ
ಮತ್ತೆ ಮತ್ತೆ ನಗುವಿನೊಲವಿಗೆ ಸೋಕಿ
ತಣ್ಣಗೆ ಹಿತಗಾಣಿಸಬೇಕಲ್ಲಾ...|

ಅದ್ಯಾವ ಕಡೆಯಿಂದಲೋ ಅಡ್ಡಾದಿಡ್ಡಿಯಾಗಿ
ಬೀಸುವ ಬಿರುಗಾಳಿ ಕೆಲವೊಮ್ಮೆ
ನಡೆಯ ಗತಿ ಬದಲಿಸುವುದುಂಟು
ಮುದ್ದಾದವುಗಳನ್ನೆಲ್ಲ ನುಜ್ಜುಗುಜ್ಜು ಮಾಡುವುದುಂಟು
ಮೇಲಿಂದ ಮೇಲೆ ತೇಪೆ ಹಾಕಿ
ಕಾಣದಂತೆ ಅಡ್ಡ ನಿಂತು ನಗುತ್ತೇನೆ
ನಗೆಯ ಕಾಯುವವರ ಮುಂದೆ

ಯಾರೊದ್ದು ಗೆದ್ದು ಹೋದರೂ
ಬಿದ್ದಲ್ಲೇ ಮತ್ತೆದ್ದು ಕೂತು ಹುಡುಕುತ್ತೇನೆ
ಎಲ್ಲಾದರೂ ಸಿಗುವುದೇ... |
ನನಗಾಗಿ ಅರಳುವ ಒಂದು ಹೂವು
ಜೊತೆ ಸೇರಿ ಮತ್ತೆ ಮತ್ತೆ ನಗಲು.

ಛಾಯಾಚಿತ್ರ: ಪಿ. ಪರಶುರಾಮ

ಆಡಿಯೋ
ವಿಡಿಯೋ

ಅನಿತಾ ಪಿ. ತಾಕೊಡೆ

ಅನಿತಾ ಪಿ. ತಾಕೊಡೆ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ತಾಕೊಡೆಯವರು. ಪ್ರಸ್ತುತ ಮುಂಬಯಿ ನಿವಾಸಿ. ಇವರು ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ  ಹೆಸರು ಮಾಡಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್‍ನೊಂದಿಗೆ  ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕದ ಅರ್ಹತೆಯನ್ನು ಸಾಧಿಸಿದ್ದಾರೆ. ಇವರು 2019ರಲ್ಲಿ  ಮೈಸೂರು ಅರಮನೆಯ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ಇವರ ಎಂಟು ಕೃತಿಗಳು ಲೋಕಾರ್ಪಣೆಗೊಂಡಿವೆ. ಪಿಎಚ್.ಡಿ ಕೋರ್ಸ್‍ವರ್ಕ್‍ನ ಸಲುವಾಗಿ ಜಯ ಸಿ. ಸುವರ್ಣರ ಕುರಿತು ಸಿದ್ಧಪಡಿಸಿದ ‘ಸುವರ್ಣಯುಗ’ ಶೋಧ ಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದ ವತಿಯಿದ ಸಂಶೋಧಕಿ ಡಾ.ಲೀಲಾ ಬಿ. ಅವರು ಕೊಡಮಾಡುವ ‘ಶೋಧಸಿರಿ’ ಪುರಸ್ಕಾರ ಮತ್ತು ಡಾ.ವಿಶ್ವನಾಥ ಪ್ರತಿಷ್ಠಾನದ ವತಿಯಿಂದ ‘ವಿಕಾಸ ಪುಸ್ತಕ’ ಬಹುಮಾನ ಲಭಿಸಿದೆ.  ನಿವಾಳಿಸಿಬಿಟ್ಟ ಕೋಳಿ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಡಮಾಡುವ 2022ನೆಯ ಸಾಲಿನ ಕೆ. ವಸುದೇವಾಚಾರ್ಯ ದತ್ತಿ ಪ್ರಶಸ್ತಿ, ಮಾಣಿಕ್ಯ ಪ್ರಕಾಶನ ಹಾಸನದಿಂದ ‘ಪದ್ಮಾವತಿ ವೆಂಕಟೇಶ ದತ್ತಿ ಪುರಸ್ಕಾರ’ ಲಭಿಸಿದೆ. ‘ಮೋಹನ ತರಂಗ’ ಕೃತಿಗೆ 2019-20ನೆಯ ಸಾಲಿನ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಗದು ಪುರಸ್ಕಾರ ಪ್ರಾಪ್ತಿಯಾಗಿದೆ. 

ಎರಡನೇ ಕವನಸಂಕಲನ “ಅಂತರಂಗದ ಮೃದಂಗ”ದ ಹಸ್ತಪ್ರತಿಗೆ, ಜಗಜ್ಯೋತಿ ಕಲಾವೃಂದ ಮುಂಬಯಿ ವತಿಯಿಂದ “ಶ್ರೀಮತಿ ಸುಶೀಲಾ ಎಸ್ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ” ಹಾಗೂ “ಜನಸ್ಪಂದನ ಟ್ರಸ್ಟ್(ರಿ) ಸುವ್ವಿ ಪಬ್ಲಿಕೇಷನ್ಸ್, ಶಿಕಾರಿಪುರ” ಕೊಡಮಾಡುವ “ಅಲ್ಲಮ ಸಾಹಿತ್ಯ ಪ್ರಶಸ್ತಿ” ಲಭಿಸಿದೆ. ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ಇವರು ಎರ್ಪಡಿಸಿದ ಕೆ ಎಸ್ ನ, ನೆನಪಿನ ಪ್ರೇಮ ಕಾವ್ಯಸ್ಪರ್ಧೆಯಲ್ಲಿ ಎರಡು ಬಾರಿ ಪ್ರೇಮಕಾವ್ಯ ಪುರಸ್ಕಾರ,(2011, 2015) ಹಾಗೂ 2017ರಲ್ಲಿ “ವಿಶ್ವ ಕವಿ ಕುವೆಂಪು ಕಾವ್ಯ ಪುರಸ್ಕಾರ” ಲಭಿಸಿದೆ.

ಮಹಾರಾಷ್ಟ್ರ ನವಚಿಂತನ ಸಂಸ್ಥೆಯಿಂದ ಕವಿರತ್ನ ಪುರಸ್ಕಾರ(2012-13), ಮುಂಬಯಿ ಕಲಾಜಗತ್ತು ಸಂಸ್ಥೆಯ ವತಿಯಿಂದ “ದಿ ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ(2013), ಡೊಂಬಿವಲಿ ತುಳುಕೂಟ ವತಿಯಿಂದ ‘ತುಳುಸಿರಿ’ಪ್ರಶಸ್ತಿ (2013), ಕವಿವಾಣಿ ಪತ್ರಿಕಾ ಬಳಗದ ವತಿಯಿಂದ ಕಾವ್ಯಸಿರಿ ಪ್ರಶಸ್ತಿ (2019) ಶ್ರೀಕೃಷ್ಣ ವಿಠಲ ಪ್ರತಿಷ್ಠಾನದ ವತಿಯಿಂದ “ಶ್ರೀಕೃಷ್ಣ ವಿಠಲ ಪ್ರಶಸ್ತಿ” ಲಭಿಸಿದೆ. ಮುಂಬಯಿ ಮತ್ತು ಮಂಗಳೂರು ಆಕಾಶವಾಣಿಯಲ್ಲಿಯೂ ಇವರ ಕತೆ, ಕವಿತೆ ಮತ್ತು ಭಾವಗೀತೆಗಳು ಪ್ರಸಾರವಾಗಿವೆ. 

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ) ಇದರ ಕಾರ್ಯಕಾರಿ ಸಮಿತಿಯ ಸದಸ್ಯತ್ವವನ್ನು ಪಡೆದಿರುವ ಇವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಾ. ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.

More About Author