Story

ಸುಮನ್

ಸುಚೇತಾ ಗೌತಮ್ ಅವರು ಎಂ. ಟೆಕ್ ಪದವೀಧರೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಸದ್ಯ, ಸಾಫ್ಟ್ ವೇರ್ ಕಂಪೆನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದಾರೆ. ಸೈಬರ್ ಕ್ರೈಮ್ ಸರಣಿ, ವೈಜ್ಞಾನಿಕ ಹಾಗೂ ಸಾಮಾಜಿಕ ಕಥೆ, ಕಾದಂಬರಿಗಳನ್ನು ತರಂಗ, ಸುಧಾ, ಕರ್ಮವೀರ, ಕಸ್ತೂರಿ ಮತ್ತು ಇತರೆ ವಾರ ಪತ್ರಿಕೆಗಳಲ್ಲಿ ಪ್ರಕಟಿಸಿದ್ದು, ಪ್ರಸ್ತುತ ಅವರ ‘ಸುಮನ್’ ಕಿರು ಕಾದಂಬರಿಯ ಕತೆ ನಿಮ್ಮ ಓದಿಗಾಗಿ...

ಆದರ್ಶವನ್ನೆ ಕವಚವಾಗಿಸಿಕೊಂಡ ವ್ಯವಹಾರ ಜ್ಞಾನಾವಿಲ್ಲದ ಸುಮನಳ ಏಕೈಕ ಆಸೆ ಪ್ರೀತಿಸುವ ಗಂಡ ಮತ್ತು ಮುದ್ದಾದ ಮಕ್ಕಳು. ಆ ಆಸೆಯ ಬೆನ್ನ ಹತ್ತಿ ಗಿರೀಶನನ್ನು ಮದುವೆಯಾಗುತ್ತಾಳೆ. ಮಧ್ಯಮ ವರ್ಗದಿಂದ ಬಂದಿದ್ದರೂ ಅದರ ಕುರುಹನ್ನೂ ಅಳಿಸಿ ಹಾಕಿ ಸಾಹೇಬನಾಗಿರುವ ಗಿರೀಶ ಅವಳನ್ನು ತನ್ನ ಜೀವನಶೈಲಿಗೆ ಬದಲಾಗಲು ಒತ್ತಾಯಿಸುತ್ತಾನೆ. ಸುಮನಗೆ ಅವನ ಟ್ರೊಫಿ ವೈಫ್ ಆಗಲು ಮನಸ್ಸು ಒಪ್ಪುವುದಿಲ್ಲ. ಇಬ್ಬರೂ ತಮ್ಮ ನಿಲುವನ್ನು ಬಿಟ್ಟು ಕೊಡುವುದಲ್ಲಿ. ಕೊನೆಗೆ ಸೋತು, ಸುಮನ್ ವಿಚ್ಛೇದನೆಗೆ ಮೊರೆ ಹೋಗುತ್ತಾಳೆ.

ತನ್ನ ಜೀವನವನ್ನು ಮತ್ತೆ ಕಟ್ಟಿ ಕೊಳ್ಳುವ ಪ್ರಯತ್ನದಲ್ಲಿ ಇಂಜಿನಿಯರಿಂಗ್ ಕಾಲೇಜೊಂದರ ಅಧ್ಯಾಪಕಿಯಾದ ಸುಮನ್ ಅಲ್ಲಿ ನಡೆಯುವ ಅಂಕಗಳ ಜಾತ್ರೆಯನ್ನು ನೋಡಿ ರೋಸಿ ಆ ಕಾಲೇಜನ್ನು ಬಿಟ್ಟು ತಾನು ಓದಿದ ಕಾಲೇಜಿಗೆ ಅಧ್ಯಾಪಕಿಯಾಗಿ ಮರಳುತ್ತಾಳೆ. ಬರಿ ಉನ್ನತ ಸ್ಥಾನ ಹಾಗೂ ಸಂಬಳದ ಸಲುವಾಗಿ ಅನೈತಿಕವಾಗಿಯಾದರೂ ಒಂದು ಎಮ್.ಟೆಕ್ ಹಾಗೂ ಪಿ.ಹೆಚ್.ಡಿ ಓದುವ ಅಧ್ಯಾಪಕರು ಪಾಠ ಮಾಡುವ ಕ್ಷಮತೆಯನ್ನು ಹೊಂದಿರುವರೆ? ಅವರೇ ನಕಲು ಮಾಡುವಾಗ ವಿಧ್ಯಾರ್ಥಿಗಳಿಗೆ ಯಾವ ನೈತಿಕತೆಯನ್ನು ಬೋಧಿಸುವರು? ಉನ್ನತ ಶಿಕ್ಷಣವಿಲ್ಲದ ಆದರೆ ಪಾಠವನ್ನು ಚೆನ್ನಾಗಿ ಮಾಡುವ ಅಧ್ಯಾಪಕರಿಗೆ ಮನ್ನಣೆ ಇಲ್ಲದ ಪದವಿಗಳೇ ದೊಡ್ಡಪ್ಪನೆನ್ನುವ ಶಿಕ್ಷಣ ವ್ಯವಸ್ಥೆಯ ಭವಿಷ್ಯವೇನು? ಈ ಸವಾಲುಗಳಿಗೂ ಉತ್ತರ ಹುಡುಕುವ ಪ್ರಯತ್ನ ಮಾಡುತ್ತದೆ “ಸುಮನ್” ಕಾದಂಬರಿ.

ವಿಚ್ಛೇದನೆಗೊಂಡ ಸುಮನಳ ವೈಯಕ್ತಿಕ ಜೀವನ ನಿಂತ ನೀರಾಯಿತೆ? ಅವಳ ಕನಸುಗಳು ನನಸಾಗುವುದೆ? ಓದಿ “ಸುಮನ್” ಕಾದಂಬರಿಯಲ್ಲಿ.

ಕಂಕಣ ಬಲ

ಅಶ್ವತನಾರಾಯಣರು ಊರಿನ ಪ್ರಮುಖ ಕಾಲೇಜೊಂದರಲ್ಲಿ ವಿಜ್ಞಾನದ ಪ್ರಾಧ್ಯಾಪಕರು. ಅವರಿಗೆ ಒಬ್ಬ ಮಗಳು. ಅವಳ ನಂತರ ಅವಳಿ ಜವಳಿ ಗಂಡು ಮಕ್ಕಳಿಬ್ಬರು ಸಂಜಿಯ(ಸಂಜು) ಹಾಗೂ ಸಂದೀಪ. ಅವರ ಹೆಂಡತಿ ರಾಜಲಕ್ಷ್ಮಿ ಗಂಡನಿಗೆ ತಕ್ಕ ಸತಿ.

ಆ ಮಗಳೇ ಸುಮನ್, ಸುಮನ್ ಒಂದು ಸುಮವೇ ಸರಿ. ನೋಡಲು ಸುಮ. ಅವಳ ಮನಸ್ಸು ಸುಮ. ದೇವರು ಪುರುಸತ್ತಿನಲ್ಲಿದ್ದಾಗ ಪ್ರೀತಿಯಿಂದ ಮಾಡಿದ್ದ ಅವಳನ್ನು. ನಕ್ಷತ್ರಗಳಂತೆ ಮಿನುಗುವ ನಯನ, ಅವುಗಳ ಮೇಲೆ ಕಾರುನಬಿಲ್ಲನ್ನು ಸೆರೆ ಹಿಡಿದ ಹುಬ್ಬುಗಳು, ತಿದ್ದಿದ ಮೂಗು ಅದರ ಕೆಳಗೆ ಪುಟ್ಟ ಬಾಯಿ, ನಕ್ಕರೆ ಮರೆಯಾದ ಸೂರ್ಯ ಒಮ್ಮೆಲೆ ಆಕಾಶದಲ್ಲಿ ಮೂಡಿದ ಅನುಭವ ನೋಡಿದವರಿಗೆ. ಸೊಂಟ ತಾರಲೋ ಬೇಡವೋ ಅನ್ನುವಷ್ಟು ದಟ್ಟ ರಶ್ಮಿಯಂಥಹ ಕೇಶರಾಶಿ, ಬಿಸಿಲಿನಲ್ಲಿ ಮಿರಿಮಿರಿ ಎನ್ನುವಷ್ಟು ಹೊಳಪು ಅದಕ್ಕೆ ಇದು ಯಾರೋ ಕವಿ ಅಥವ ಶಿಲ್ಪಿಯ ಕಲ್ಪನೆಯೋ ಎನ್ನುವ ಮೈಮಾಟ. ಕನ ಹಾಲು ಹಾಗೂ ಗುಲಾಬಿ ಸಂಮಿಶ್ರಣದ ಗೌರವರ್ಣ ಸುಮನ್ ಹೊವಾಗಿದ್ದರೆ ಯಾವ ಹೊವಾಗಿದ್ದಿರಬಹುದು ಎಂಬ ಪ್ರಶ್ನೆ ದೇವರನ್ನೇ ಕಾಡಿರಬಹುದು.

ಇನ್ನು ಅವಳ ಮನಸ್ಸು ಬೆಣ್ಣೆಯಷ್ಟು ಮೃದು. ಅವರ ಮನೆಯಲ್ಲಿ ಎಲ್ಲರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸ್ವಸ್ಥರಾಗಿದ್ದಾರೆ ಎಂದು ಅಳಿಯಲು ಅವಳನ್ನೊಮ್ಮೆ ನೋಡಿದರೆ ಸಾಕು ಯಾರಿಗಾದರೂ ಏನಾದರು ಆದರೇ ಅವಳ ನಗುವಿನಲ್ಲೊಂದು ಎಳೆ ಕಮ್ಮಿ. ಅವಳ ಸ್ವರದಲ್ಲೊಂದು ದುಃಖದ ನೆರಳು, ಮನೆಯವರ ಬಾಯಲ್ಲಿ ಮೂರು ಹೊತ್ತು `ಸುಮನ್ ಸುಮನ್". ಅವಳನ್ನು ಯಾರೂ ಎತ್ತರದ ಧ್ವನಿಯಲ್ಲಿ ಮಾತಾಡಿಸುವುದೇ ಇಲ್ಲ. ಎಲ್ಲಿ ಅತ್ತು ಬಿಡುವಳು ಎಂಬ ಭಯ, ಕಾಳಜಿ ಎರಡು. ಧ್ವನಿ ಎತ್ತರಿಸುವ ಅವಶ್ಯಕತೆಯೇ ಇರಲಿಲ್ಲ. ಎಲ್ಲರನ್ನು ಅನುಸರಿಸಿಕೊಂಡು ಹೊಂದಿಕೊಂಡು ಹೋಗುತಿದ್ದಳು ಸುಮನ್. ಅವರಪ್ಪನ ಆದರ್ಶವನ್ನು ಅರೆದು ಕುಡಿದು ಆದರ್ಶವನ್ನೇ ಆ ಮೃದು ಮನಸ್ಸಿಗೆ ಕವಚ ಮಾಡಿಕೊಂಡಿದ್ದಳು. ಯಾವುದೇ ವಿಷಯದಲ್ಲಾಗಲಿ ಇದು ಸರಿ ಇದು ತಪ್ಪು ಎರಡೇ ದಡಗಳು ಅದಕ್ಕೆ ಎಲ್ಲಾ ಕಪ್ಪು ಬಿಳಪು. ಮಧ್ಯ ಯಾವುದೇ ಬಣ್ಣಕ್ಕೆ ಅವಕಾಶವಿರಲಿಲ್ಲ. ದ್ವಂದ್ವ ಪದಕ್ಕೆ ಅರ್ಥವೇ ಇರಲಿಲ್ಲ. ಅವಳ ಪದ ಪುಂಜದಲ್ಲಿ.

ಎಲ್ಲಾ ಹುಡಗಿಯರಿಗೂ ಮದುವೆಯಾಗುತ್ತದೆ, ಮಕ್ಕಳು ಆಗುತ್ತವೆ ಎಂದು ಯಾವಾಗ ಅರಿವಾಗಿತ್ತೋ ಅದೇ ಅವಳ ಆಸೆ ಹಾಗೂ ಕನಸಾಗಿತ್ತು, ಅವಳಿಗೆ ಪ್ರೀತಿಯ ಗಂಡ, ಮುದ್ದಾದ ಮಕ್ಕಳು ಬೇಕು, ಅದೇ ಅವಳ ಜೀವನದ ಗುರಿ. ದೇವರು ಅವಳನ್ನು ಜಾಣಳನ್ನಾಗಿ ಮಾಡಿದ್ದ ಆದರ ಮಹತ್ವಾಕಾಂಕ್ಷೆ ಕೊಟ್ಟಿರಲಿಲ್ಲ. ತರಗತಿಯಲ್ಲಿ ಸಲೀಸಾಗಿ ಮೊದಲ ಸ್ಥಾನ ಪಡೆಯುತ್ತಿದ್ದಳು. ಪಿಯುಸಿಯಲ್ಲಿ ಪಿ.ಸಿ.ಎಮ್.ಬಿ ತೆಗೆದುಕೊಂಡು ಇಂಜಿನಿಯರಿಂಗ್‌ ಆದರೂ ಸರಿ ವೈದ್ಯಕೀಯವಾದರೂ ಸರಿ ಎಂದು ಸಿ.ಇ.ಟಿ ಬರೆದಳು. ಅವರದೇ ಊರಿನ ಪ್ರಖ್ಯಾತ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಸೀಟು ದೊರೆಯಿತು, ಸಂತೋಷದಿಂದಲೆ ಸೇರಿದಳು. ಇಂಜಿನಿಯರಿಂಗ್ ನೀರು ಕುಡಿದಷ್ಟು ಸಲೀಸಾಗಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದಳು. ಮಹತ್ವಾಕಾಂಕ್ಷೆ ಇರಲಿಲ್ಲ ಸುಮನ್‌ಗೆ ಆದರೆ ಜ್ಞಾನದ ಮೋಹ ತುಂಬ ಇತ್ತು. ಒಂದೊಂದು ವರ್ಷದಲ್ಲಿ ಒಂದೋ ಎರಡೋ ವಿಷಯದ ಹುಚ್ಚು ಹಿಡಿಯುತ್ತಿತ್ತು ಅವಳಿಗೆ. ಆ ವಿಷಯದ ಬೆನ್ನ ಹತ್ತಿ ಅದರಲ್ಲಿ ಪರಿಣಿತಿ ಪಡೆಯುತ್ತಿದ್ದಳು, ಕೊನೆಯ ವರ್ಷದಲ್ಲಿ ಎಲ್ಲರೂ ಕೆಲಸಕ್ಕೆ, ಅಥವಾ ದಿನ, ಬಗ್ಗೆ ಯೋಚಿಸಲಾರಂಭಿಸಿದರೇ ಇವಳು ಹನಗೆ ಮದುವೆಯಾಗುವ ಸಮಯ ಹತ್ತಿರ ಬಂತು ಎಂದು ಸಂತಸಗೊಂಡಳು.

ಮಗಳಿಗೆ ಗಂಡು ಹುಡುಕುವ ಎಂದು ಅಶ್ವತನಾರಾಣರು ಬೀರುವಿನಲ್ಲಿಲ್ಲ ಸುಮನಳ ಜಾತಕ ತೆಗೆದರು. ನೋಡಿದರೇ ಸುಮನರು ಮೂಲಾ ನಕ್ಷತ್ರ, ಅಂದರೆ ಮಾವನಿರದ ಮನೆಯಾಗಬೇಕು, ಒಂದು ನಿಮಿಷ ವಿಚಲಿತಗೊಂಡರು. ಯಾರೋ ಗಂಡು ಸಿಗುವುದು ಕಷ್ಟ ಎನಿಸಿತು. ಅಲ್ಲಿಯವರೆಗೂ ಸುಮನ ಕೆಲಸಕ್ಕೆ ಸೇರುವುದು ಲೇಸು ಎನಿಸಿ 'ಸುಮನ ಮನೆಯಲ್ಲಿದ್ದೇನು ಮಾಡ್ತೀಯಾ ಮರಿ, ಮದುವೆಯಾಗೊವರೆಗೂ ಇಲ್ಲೆ ಕಾಲೇಜಿನಲ್ಲಿ ಕೆಲಸಕ್ಕೆ ಸೇರು ಎಂದರು. ಸರಿ ಸುಮನ್ ತನ್ನ ವಿಭಾಗಕ್ಕೆ ಹೋಗಿ ಅರ್ಜಿ ಹಾಕಿದಳು, ಅದರ ಮುಖ್ಯಸ್ಥರಾದ ಸುರೇಶ ಅವರಿಗೆ ಅವಳನ್ನು ತೆಗೆದುಕೊಳ್ಳಲು ಯಾವ ಅಡಚನೆಯೂ ಕಾಣಲಿಲ್ಲ. ಸುಮನ್ ಸಂತೋಷದಿಂದಲೆ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಸೇರಿದಳು. ತುಂಬ ಮುತವರ್ಜಿಯಿಂದ ಪಾರಕ್ಕೆ ತಯಾರಾಗಿ ಚೆನ್ನಾಗಿ ವಾರ ಮಾಡುತ್ತಿದ್ದಳು. ಹುಡುಗರಿಗೆ ಅವಳು ಹೇಳುವ ವಿಷಯದಲ್ಲಿ ಕುತೂಹಲ ಮೂಡಿ, ಆ ವಿಷಯಕ್ಕೆ ಮಾರು ಹೋಗಿ ಅದರ ಬೆನ್ನು ಹತ್ತುತ್ತಿದರು, ನಾ ಮುಂದೆ ತಾ ಮುಂದೆ ಎಂಬ ಪೈಪೋಟಿ ಅವರಲ್ಲಿ ಶುರುವಾಗಿ ಆ ವಿಷಯದಲ್ಲಿ ತುಂಬ ಒಳ್ಳೆ ಅಂಶಗಳನ್ನು ಗಳಿಸುತ್ತಿದ್ದರು. ಹಾಗಿತ್ತು ಸುಮನಳ ಉತ್ಸಾಹ ಹಾಗೂ ಹುಮ್ಮಸ್ಸು ಕೊಟ್ಟ ಕೆಲಸ ಅವಳು ಮಾಡಿದರೆ ಇನ್ನು ಅದನ್ನು ಪರಿಶೀಲಿಸುವುದೇ ಬೇಡ ಎಂಬ ಭರವಸೆ ಅವರ ಮುಖ್ಯಸ್ಥರಿಗೆ ಬಂದಿತ್ತು ಒಂದೇ ಒಂದು ವರ್ಷದಲ್ಲಿ.

ಸುಮನ್ ಮ್ಯಾಮ್ ತುಂಬ ಅದರ್ಶವಾದಿ. ಸ್ಟ್ರಿಕ್ಟು. ಅವರಿಗೆ ಮೂಗಿನ ಮೇಲೆ ಕೋಪ, ಇದು ವಿದ್ಯಾರ್ಥಿಗಳ ಅಭಿಪ್ರಾಯ. ರಜೆ ಮುಗಿಸಿ ಒಂದು ವೇಳಾಪಟ್ಟಿಯಲ್ಲಿ ಅವಳ ಹೆಸರು ನೋಡಿದರೆ ಆ ವಿಷಯದಲ್ಲಿ ಇನ್ನು ತಾನು ಖಚಿತವಾಗಿ ಉತ್ತೀರ್ಣನಾಗುತ್ತೇನೆ ಎಂಬ ಭರವಸೆ ಪ್ರತಿ ವಿದ್ಯಾರ್ಥಿಯಲ್ಲೂ ಮೂಡುತ್ತಿತ್ತು. ಎರಡೇ ಎರಡು ವರ್ಷದಲ್ಲಿ ಅಂಥಹ ಹೆಸರು ಗಳಿಸಿದ್ದಳು. ಪಾಠದಲೊಂದೇ ಅಲ್ಲ ಕಾಲೇಜಿನಲ್ಲಿ ನಡೆಯುವ ಬೇರೆ ಚಟುವಟಿಕೆಗಳಿಗೂ ಅವಳ ಮುಖ್ಯಸ್ಥರು ಸುಮನ್‌ಳನ್ನ ಕಳುಹಿಸುತ್ತಿದ್ದರು. ಹಾಗಿತ್ತ ಅವಳ ದಕ್ಷತೆ ಹಾಗೂ ವರ್ಚಸ್ಸು.

ಇತ್ತ ಅವಳ ತಂದ ಸಂಬಂಧಿಗಳಿಗೆಲ್ಲ ಜಾತಕ ಕೊಟ್ಟು ವರನಿಗಾಗಿ ಹುಡುಕುತ್ತ ಹೊರಟರು. ಊರಿನಲ್ಲಿದ್ದ ವಧು ವರಾನವೇಶಣೆ ಕೇಂದ್ರದಲೆಲ್ಲ ಅವಳ ಹೆಸರು ನೋಂದಾಯಿಸಿದರು. ಸ್ನೇಹಿತರ ಕಿವಿ ಮೇಲೂ ಹಾಕಿದರು, ಆದರೆ ಏನೂ ಪ್ರಯೋಜನವಿಲ್ಲ. ಜಾತಕದಲ್ಲಿದ್ದ ಮೂಲಾ ನಕ್ಷತ್ರವು ಅವಳ ಮದುವೆಗೆ ಮೂಲವಾಯಿತು. ಬಂದು ಹೋಗುವವರೆಲ್ಲ "ಸುಮನ್‌ಗೆ ಮದುವೆಯಾಗಲಿಲ್ಲವೆ" ಎಂದು ಕೇಳುವವರೇ, "ಇಲ್ಲ" ಎಂದರೆ ಇಷ್ಟು ಮುದ್ದಾದ ಹುಡಗಿಗೆ ಇನ್ನೂ ಗಂಡು ಸಿಕ್ಕಲಿಲ್ಲವೆ ಎಂದು ಯಾರಿಗೂ ನಂಬಿಕೆಯಾಗುತ್ತಿರಲಿಲ್ಲ. ಮೂಲಾ ನಕ್ಷತ್ರ ಎಂದರೆ ಅಯ್ಯೋ ಆ ಜಾತಕ ಬಿಟ್ಟು ಬೇರೆ ಜಾತಕ ಬರಿಸಿಬಿಡಿ ಎಂಬ ಪುಕಟ್ಟೆ ಸಲಹೆ ನೀಡುವರು ಕೆಲವರಾದರೇ ಸುಮನ್ ನೀನೇ ಯಾರನ್ನಾದರು ಲವ್ ಮಾಡಿಬಿಡು ಎಂದು ತಮಾಷೆ ಮಾಡುವರಿನಿಷ್ಟು ಜನ ಜಾತಕ ಬೇರೆ ಬರೆಸುವುದು ಅವರಪ್ಪನ ಆದರ್ಶದ ಎದುರು ಸೋಲುವ ಸಲಹೆಯೇ ಸರಿ. ಇನ್ನು ಸುಮನ್‌ಗೆ ಮದುವೆಯಾಗದೆ ಯಾರನ್ನೂ ಇಷ್ಟಪಡುವುದು ಅವಳಿಗೆ ಒಪ್ಪದ ಮಾತು. ಜನರ "ಮದುವೆಯಾಗಲಿಲ್ಲವೆ” ಎಂಬ ಪ್ರಶ್ನೆಗೆ ಮುದಡಿ ಹೋಗಿದ್ದಳು. ಅವಳು ಒಬ್ಬ ಹೆಣ್ಣು ಅವಳಿಗೂ ಮದುವೆ ಆಸೆ ಇರುವುದು. ಅವಳನ್ನು ಹಾಗೆ ಹೇಳಿ ಅವಳ ಮನಸ್ಸನ್ನು ನೋಯಿಸಬಾರದು ಎನ್ನುವ ಅನುಕಂಪ ಯಾರಿಗೂ ಇಲ್ಲ.

ತಮ್ಮ ಕಣ್ಣ ಮುಂದೆ ಓದಿದ ಜಾಣ ಹುಡುಗಿ ಎಂದು ಅವಳಿಗೆ ಈಗ ಸಹೋದ್ಯೋಗಿಗಳಾಗಿದ್ದ ಅವಳ ಅಧ್ಯಾಪಕರು 'ಮುಂದೆ ಓದು, ಸುಮನ್, ಎಮ್.ಇ ಮಾಡು ಇಲ್ಲ ಬೆಂಗಳೂರಿಗೆ ಹೋಗಿ ಸಾಫ್ಟ್ವೇರ್ ಕೆಲಸ ಹುಡಕಿಕೊ ಎನ್ನುತ್ತಿದರು. 'ನನಗೆ ಈಗಲೋ ಅವಾಗಲೋ ಮದುವೆಯಾಗುತ್ತದೆ ಆಮೇಲೆ ನಾನು ಮನೆಯಲ್ಲಿರುವೆ” ಎಂದು ಅವರ ಸಲಹೆ ನಗೆಯಲ್ಲಿ ಹಾರಿಸಿ ಬಿಡುತ್ತಿದ್ದಳು. ಅಶ್ವತನಾರಾಯಣರ ಪರಿಶ್ರಮಕ್ಕೆ ತಾವು ಮುಂದವರಿಯಬಹುದು ಎಂದೆನಿಸುವ ಒಂದಾದರೂ ವರ ಸಿಗಲಿಲ್ಲ. ಕೊನೆಗೆ ಕಂಕಣ ಕೂಡಿ ಬಂದಾಗ ದೇವರೇ ದಾರಿ ತೋರಿಸುತ್ತಾನೆ ಎಂದು ದೇವರ ಮೇಲೆ ಭಾರ ಹಾಕಿದರು. ಸುಮನ್ ಒಳಗೊಳಗೆ ದುಃಖಿಸಿದರೂ ತನ್ನ ಕಾಲೇಜಿನ ಕೆಲಸದಲ್ಲಿ ತನ್ನನ್ನು ಮುಳಗಿಸಿಕೊಂಡು ಒಂದೊಂದೇ ದಿನ ನೂಕುತ್ತಿದ್ದಳು. ಮನೆಯಲ್ಲಿ ಮಂಕು ಬಡಿದಿತ್ತು. ತಮ್ಮಂದಿರು ಓದು ಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದರು. ರಾಜಲಕ್ಷ್ಮಿ ಮಗಳ ಮುಂದೆ ಧೈರ್ಯಗೆಡದ ಅವಳಿಲ್ಲದ್ದಿದಾಗಲೆಲ್ಲಾ ಕೂರಗುತ್ತಿದ್ದರು. ಹೀಗೇ ವರ್ಷಗಳು ಉರುಳುತ್ತ ಹೋದವು. ಮನೆಯಲ್ಲಿ ಎಲ್ಲರಿಗೂ ಅವಳ ಮದುವೆಯದೇ ಚಿಂತ ಸುಮನ್‌ಗೂ ನಿರಾಸೆಯಾಗಿತ್ತು. ಅವಳ ಸಹಪಾಠಿಳಿಗೆಲ್ಲ ಮದುವೆಯಾಗಿ ಮಕ್ಕಳಾಗಿದ್ದವು. ಜೀವನದಲ್ಲಿ ತೊಡಕೇ ಕಾಣದ ಅವಳಿಗೆ ಈಗ ಹತ್ತಲಾರದ ಒಂದು ಬೆಟ್ಟದ ಎದುರು ನಿಂತಂತೆ ಭಾಸವಾಗುತ್ತಿತ್ತು.

ಸುಮನ್‌ಗೆ ಇಪತ್ತೆಂಟು ತುಂಬಲು ಇನ್ನೊಂದು ತಿಂಗಳು. ಅವಳಪ್ಪನಿಗೆ ನಿವೃತ್ತಿಯಾಯಿತು. ಇತ್ತ ಅವಳ ಮದುವೆಯೂ ಆಗಲಿಲ್ಲ. ಅದರ ಆಸೆಯಲ್ಲಿ ಅವಳು ತನ್ನ ಓದನ್ನೂ ಮುಂದವರಿಸಲಿಲ್ಲ. ಹೀಗಿರುವಾಗ ಒಂದು ದಿನ ಪರಿಚಯಸ್ಥರು ಅವರಪ್ಪನಿಗೆ ಒಂದು ವರನ ವಿವರಗಳನ್ನು ಕೊಟ್ಟು ವಿಚಾರಿಸಲು ಹೇಳಿದರು. ವಿಚಾರಿಸಿದಾಗ ತಿಳಿದು ಬಂದ ವಿವರಗಳು ಅಶ್ವತನಾರಾಯಣರಿಗೆ ಪ್ರಶಸ್ಥವಾಗಿ ಕಂಡವು. ಹುಡುಗನ ಹೆಸರು ಗಿರೀಶ, ಅವನಿಗೆ ಮುಖ್ಯವಾಗಿ ತಂದೆ ಇರಲಿಲ್ಲ. ಹಾಗೇ ತಾಯಿ ಕೂಡ ಇರಲಿಲ್ಲ. ಹುಡುಗ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿ.ಇ ಮುಗಿಸಿ ಬೆಂಗಳೂರಿನ ಐ.ಐ.ಎಮ್‌ನಿಂದ ಎಂ.ಬಿ.ಎ ಮಾಡಿದ್ದ. ಸಿಂಗಾಪುರದಿಂದ ಕೂಡ ಒಂದು ಮ್ಯಾನೆಜಮೆಂಟ್ ಪದವಿ ಪಡೆದು ಅಮೆರಿಕ, ಜರ್ಮನಿ, ಲಂಡನ್ನನಿನಲ್ಲಿ ಕೆಲಸ ಮಾಡಿ ಈಗ ಬೆಂಗಳೂರಿನ ಒಂದು ಒಳ್ಳೆಯ ಐ.ಟಿ ಕಂಪನಿಯಲ್ಲಿ ವೈಸ್ ಪ್ರಸಿಡೆಂಟ್ ಆಗಿದ್ದ. ಅವನಿಗೀಗ ಮೂವತ್ತೈದು ವರ್ಷ ವಯಸ್ಸು, ಅವನ ಚಿಕ್ಕಪ್ಪ, ಚಿಕ್ಕಮ್ಮ ಊರಿನಲ್ಲಿದ್ದರು. ಹೋಗಿ ಹುಡುಗನ ಚಿಕ್ಕಪ್ಪ ಚಿಕ್ಕಮ್ಮನನ್ನು ಭೇಟಿಯಾಗಿ ಜಾತಕ ಫೋಟೋ ಕೊಟ್ಟು ಬಂದರು. ಒಂದೇ ವಾರದಲ್ಲಿ ಹುಡುಗ ಹುಡಗಿಯನ್ನು ನೋಡಲು ಬಯಸಿದ್ದಾನೆ ಎಂಬ ಉತ್ತರ ಕೇಳಿ ಸುಮನ್ ಮನೆಯಲ್ಲಿ ಹೇಳು ತೀರದ ಸಂಭ್ರಮ. ಬಾಡಿದ ಸುಮನ್ ಮುಖ ಸ್ವಲ್ಪ ಕಳಕಳಯಾಯಿತು.

ಇವರುಗಳು ಸಂತೋಷವಾಗಿ ಭೇಟಿಯಾಗಬಹುದು ಎಂದ್ದಿದ ತಡ ಒಂದು ಭಾನುವಾರ ಗಿರೀಶ ತನ್ನ ಚಿಕ್ಕಪ್ಪ ಚಿಕ್ಕಮ್ಮನೊಂದಿಗೆ ಸುಮನಳನ್ನು ನೋಡಲು ಬಂದ. ಸುಮನ್ ಗುಲಾಬಿ ಬಣ್ಣದ ಲಖನವ್ ಸೀರೆಯಲ್ಲಿ ಗುಲಾಬಿಯನ್ನ ಹೊಲುತ್ತಿದ್ದಳು, ಅತಿಥಿಗಳು ಬಂದು ಹೋದ ಮೇಲೆ ಅಶ್ವತನಾರಾಯಣರು ಹುಡುಗ ನೋಡಲು ಚೆನ್ನಾಗಿದ್ದಾನೆ ತುಂಬ ಓದಿದವನು ಬೇರೆ. ಒಪ್ಪಿದರೆ ನಮ್ಮ ಸುಮನಳ ಅದೃಷ್ಟ' ಎಂದು ರಾಜಲಕ್ಷ್ಮಿಗೆ ಹೇಳಿ ಅಂದು ಸಂತಸದಿಂದ ನಿದ್ರೆ ಮಾಡಿದರು. ರಾಜಲಕ್ಷ್ಮಿ ದೇವರಿಗೆ ತುಪ್ಪದ ದೀಪ ಹಚ್ಚಿ ಕಂಕಣ ಬಲ ಕೂಡಿ ಬರಲಿ ನನ್ನ ಮಗಳಿಗೆ" ಎಂದು ಬೇಡಿದರು. ಮಾರನೆಯ ದಿನ ಹುಡುಗ ಒಪ್ಪಿದ್ದಾನೆ ಎಂದು ಗಿರೀಶನ ಚಿಕ್ಕಪ್ಪ ಕರೆ ಮಾಡೇ ಬಿಟ್ಟರು. ಅಶ್ವತನಾರಾಯಣರು ಸುಮನ್ “ನಿಂಗೆ ಒಪ್ಪಿಗೆಯೇನಮ್ಮ' ಎಂದು ಕೇಳಿದಕ್ಕೆ ಸುಮವಳ ನಗುವೇ ಉತ್ತರ. ಹುಡುಗನಿಗೆ ತಂದೆ ತಾಯಿ ಇಲ್ಲದ್ದರಿಂದ ತಾವೇ ಧಾರೆ ಎರಸಿಕೊಳ್ಳುತ್ತೇವೆ ಎಂದು ಗಿರೀಶ ಚಿಕ್ಕಪ್ಪ ಹೇಳಿದರು. ಅವರ ಜೊತೆಯಲ್ಲಿ ಅಶ್ವತನಾರಾಯಣರು ಪುರೋಹಿತರ ಬಳಿ ಹೋಗಿ ದೀಪಾವಳಿಯಾದ ಮೂರು ದಿನಕ್ಕೆ ಲಗ್ನದ ಮುಹೂರ್ತ ಗೊತ್ತು ಮಾಡಿಕೊಂಡು ಬಂದರು.

ಅಶ್ವತನಾರಾಯಣರ ಮನ ಸಂತೋಷ ಸಂಭ್ರಮದಿಂದ ಕಂಗೊಳಸುತ್ತಿತ್ತು. ಎಲ್ಲರ ಮುಖದಲ್ಲೂ ಏನೋ ಉಲ್ಲಾಸ ಏನೋ ಸಂತಸ. ಬಂದು ಹೋದವರಿಗೆಲ್ಲ ಗಿರೀಶನ ಫೋಟೋ ತೋರಿಸಿ ನಮ್ಮ ಸುಮನ್‌ ಅದೃಪ್ಟ ತುಂಬಾ ಚೆನ್ನಾಗಿದೆ ಎಂದು ಬೀಗುವರು. ಸುಮನ್ ಕನ್ನಡಿಯಲ್ಲಿ ತನ್ನ ಮುಖ ನೋಡಿ ಒಮ್ಮೆ ನಕ್ಕರೆ ಒಮ್ಮೆ ನಾಚುತ್ತಾಳೆ "ಸುಮನ್ ಗಿರೀಶ" ಎಂದು ಕಾಗದದ ಚೂರುಗಳಲ್ಲಿ ಬರೆದು ಸಂತಸಪಡುತ್ತಾಳೆ. ಅವಳು ನಡೆದರೆ ಅವಳ ಕಾಲ್ಗೆಜ್ಜೆ ಏನೋ ಹೊಸದೊಂದು ರಾಗ ಹಾಡುತ್ತಿತ್ತು.

ಮದುವೆಗೆ ಇನ್ನೂ ಎರಡು ತಿಂಗಳಿದ್ದರೂ ಮಾಡಲು ಅದೆಷ್ಟು ಕೆಲಸ. ಜವಳಿ ತೆಗೆಯಬೇಕು. ಬೆಳ್ಳಿ ಸಾಮಾನು ಮಾಡಲು ಹಾಕಬೇಕು. ಸುಮನ್‌ಗೆ ಒಡವೆ ಮಾಡಿಸಬೇಕು. ಚತ್ರ ಗೊತ್ತು ಮಾಡಬೇಕು. ಅಡಿಗೆಯವರನ್ನು ಹುಡುಕಬೇಕು ಇನ್ನೂ ಏನೇನೋ. ಮನೆಯಲ್ಲಿ ಎಲ್ಲರಿಗೂ ಕೈ ತುಂಬ ಕೆಲಸ. ಹುಡುಗನ ಚಿಕ್ಕಿಪ್ಪ “ಹುಡುಗ ಚಿಕ್ಕದಾಗಿ ಮಧ್ಯಾಹ್ನದ ಹೊತ್ತಿಗೆ ಮುಗಿಯುವ ಹಾಗೆ ಮದುವೆ ಮಾಡಿಕೊಡಿ ಎಂದು ಹೇಳಿದ್ದಾನೆ" ಎಂದು ತಿಳಿಸಿದರು, "ಅಂದೇ ಸಂಜೆ ಹುಡುಗ ಹುಡುಗಿ ಬೆಂಗಳೂರಿಗೆ ಹೋಗಿ ಅಲ್ಲಿಂದ ಮಧುಚಂದ್ರಕ್ಕೆ ವಿದೇಶಕ್ಕೆ ಹೊರಡುವರು" ಎಂದು ಹೇಳಿದ್ದಾನೆ ಎಂದು ತಿಳಿಸಿದರು. ಅಂದೇ ಸಂಜೆ ಹುಡುಗ ಹುಡುಗಿ ಬೆಂಗಳೂರಿಗೆ ಹೋಗಿ ಅಲ್ಲಿಂದ ಮಧುಚಂದ್ರಕ್ಕೆ ವಿದೇಶಕ್ಕೆ ಹೊರಡುವರು" ಎಂದು ಸೇರಿಸಿದರು. ಅಶ್ವತನಾರಾಯಣರಿಗೆ ಏನೂ ಅಭ್ಯಂತರವಿಲ್ಲದ್ದರಿಂದ ಸಂತೋಷದಿಂದ ಒಪ್ಪಿದರು.

ಅಶ್ವತನಾರಾಯಣರು ಹೆಂಡತಿ ಮಗಳ ಜೊತೆಗೂಡಿ ಮಗನ ಮನೆಗೆ ಬಂದಿಳಿದರು. ಮಳಿಗೆಗಳಿಗೆ ಓಡಾಡಿ ಮಗಳಿಗೆ ಒಪ್ಪುವ ಸೀರೆಗಳನ್ನು ಆರಿಸಿದರು. ಚಿನ್ನದ ಅಂಗಡಿಗೆ ಹೋಗಿ ಸುಮನ್‌ಗೆ ಹಿಡಿಸಿದ ಒಂದು ಹವಳದ ಸೆಟ್ ಅನ್ನು ಕೊಂಡರು. ಊರಿಗೆ ಬಂದು ಪರಿಚಯಸ್ಥ ಅಕ್ಕಸಾಲಿಗನಿಗೆ ಹೇಳಿ: ಬೆಳ್ಳಿಯ ಸಾಮಾನು, ಸುಮನಗೆ ದಿನ ಹಾಕಿಕೊಳ್ಳಲು ಎರಡು ಜೊತೆ ಹೊಸ ವಿನ್ಯಾಸದ ಬಳೆಗಳು, ಮಾಂಗಲ್ಯದ ಸರ ಎಲ್ಲಾ ಮಾಡಲು ಹಾಕಿದರು. ಸುಮನ್‌ನನ್ನು ಎತ್ತಾಡಿಸಿದ ಕೆಲಸದ ಲಕ್ಷ್ಮಿಗೆ ಭರ್ಜರಿ ಸೀರೆ ತೆಗೆದ್ದಿದಾಯಿತು. ಪಕ್ಕದ ಮನೆ ಗಿರಿಜಮ್ಮ, ಮೇಲೆ ಮನೆ ಸರೋಜಮ್ಮ ಇಬ್ಬರೂ ರಾಜಲಕ್ಷ್ಮಿಯವರ ಗೆಳತಿಯರು. ಅವರಿಬ್ಬರಿಗೂ ಕಾಂಚಿವರಂ ಸೀರೆ, ಗಿರಿಜಮ್ಮನ ಎಜಮಾನರಾದ ಶ್ರೀಧರ ಮೂರ್ತಿಗಳಿಗೆ ಶರ್ಟು ಪ್ಯಾಂಟ್ ಬಟ್ಟೆ ಕೊಂಡಿದ್ದಾಯಿತು. ಹೀಗೇ ಒಂದೊಂದು ಸಾಮಾನನ್ನು ಆಸೆ, ಪ್ರೀತಿಯಿಂದ ಅಶ್ವತನಾರಾಯಣರು, ರಾಜಲಕ್ಷ್ಮಿ, ಊರೆಲ್ಲಾ ಓಡಾಡಿ ಆರಿಸಿ ತೆಗೆದಿಟ್ಟರು. ಎಲ್ಲಾದರು ಸುಮನ್ ಸಂಭ್ರಮದಿಂದ ಓಡಾಡಿ ಅವರುಗಳ ಕಣ್ಣಿಗೆ ಹಬ್ಬವಾದಳು.

ದೀಪಾವಳಿ ಹಬ್ಬ ಆ ಸಲಿ ಅಶ್ವತನಾರಾಯಣರ ಮನೆಯಲ್ಲಿ ಬರಿ ಪಾಯಸದ ಊಟದಲ್ಲಿ ಸುಮನ್‌ಳನ್ನು ಟ್ರೈಲರ್ ಅಂಗಡಿಗೆ ಕರೆದೊಯ್ಯಬೇಕು. ಬಳೆ ಅಂಗಡಿಗೆ ಕರೆದೊಯ್ಯಬೇಕು. ಅವಳು ಮರೆತು ಸೆಫ್ಟಿ ಪಿನ್ ತರಬೇಕು. ಇವೇ ಮೊದಲಾದ ಕೆಲಸಕ್ಕೆ ತಮ್ಮಂದಿರು ನಾ ಮುಂದೆ ತಾ ಮುಂದೆ ಎಂದು ಹುಮ್ಮಸಿನಿಂದ ಓಡಾಡುತ್ತಿದ್ದರು. ಊರಿಂದ ನೆಂಟರು ಬಂದು ಮನೆ ಗಿಜಿಗಿಜಿಯಾಗಿತ್ತು. ದೇವರ ಸಮಾರಾಧನೆಯ ಊಟ ಮಾಡಿದ ಸುಮನಗೆ ಪಾರ್ಲರ್ ಹುಡುಗಿ ಗೊರಂಟಿ ಹಚ್ಚಿ ಒಂದು ಕಡೆ ಕೂರಿಸಿದಳು. ಅವಳ ಗೆಳತಿಯರಾದ ಶ್ವೇತ ಹಾಗೂ ಲತಾ ಅವಳನ್ನು ರೇಗಿಸಿ ರೇಗಿಸಿ ಅವಳ ಗುಲಾಬಿ ಕೆನ್ನೆ ಕೆಂಪಗಾಗಿಸಿದರು. ನಾಳೆಯೇ ಮದುವೆ ಕೊನೆಗೂ ಸುಮನ್‌ಳ ಆಸೆ ಕೈಗೂಡುವ ದಿನ ಬಂದೇ ಬಿಟ್ಟಿತು. ಮೊಗ್ಗಿನ ಜಡೆ, ಮೀನಾಕ್ಷಿ ಬಣ್ಣದ ಸೀರೆ ಉಟ್ಟು ಮಾಂಗಲ್ಯಧಾರಣೆಗೆ ಕುಳಿತ ಸುಮನ್ ಸುರಲೋಕದ ಅಪ್ಸರೆಯಂತ್ತಿದ್ದಳು. ಗಟ್ಟಿ ಮೇಳದ ಮಧ್ಯ ಗಿರೀಶ ತಾಳಿ ಕಟ್ಟಿ ಧಾರ್ಮಿಕವಾಗಿ ಸುಮನ್‌ಳನ್ನು ವರಿಸಿದ. ಹನ್ನೆರಡು ಗಂಟೆಗೆಲ್ಲ ಊಟ, ಒಂದು ಗಂಟೆಗೆ ಗಿರೀಶನ ಚಿಕ್ಕಪ್ಪ ಚಿಕ್ಕಮ್ಮ ಮನೆ ತುಂಬಿಸುವ ಶಾಸ್ತ್ರ ಮಾಡಿಯೇ ಬಿಟ್ಟರು. ಸುಮನ್ ಬಟ್ಟೆ ಬದಲಿಸಿ ಕಡು ನೀಲಿ ಬಣ್ಣದ ಚುಡಿದಾರ ಹಾಕಿಕೊಂಡು ಗಂಡನ ಜೊತೆ ಹೊಸ ಜೀವನದ ಹೊಸ್ತಿಲಲ್ಲಿ ನಿಂತಿರುವಳು, “ನಮ್ಮ ಮನೆಯ ಅಂಗಳದ ಹೂವನ್ನು ನಿಮ್ಮ ಮನೆಯ ಅಂಗಳಕೆ' ಇದು ಸುಮನ್‌ಗಾಗಿಯೇ ಬರೆದ ಹಾಡು, ತಂದೆ ತಾಯಿಗಳಿಗೆ ನಮ್ಮಸ್ಕರಿಸಿ ಕೆನ್ನೆ ಮೇಲೆ ಹರಿದು ಹೋಗುತ್ತಿರುವ ಕಣ್ಣೀರನ್ನು ಒರೆಸುತ್ತ ಗಿರೀಶನ ಕಾರು ಹತ್ತಿದಳು.

ಅಶ್ವತನಾರಾಯಣರು ಹಾಗೂ ರಾಜಲಕ್ಷ್ಮಿ ಕಾರು ಕಾಣುವವರೆಗೂ ಕೈ ಬೀಸುತ್ತ ನಿಂತಿದ್ದರು, ಸುಮನ್‌ಳ ತಮ್ಮಂದಿರ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು.

 

 

ಸುಚೇತಾ ಗೌತಮ್

ಸುಚೇತಾ ಗೌತಮ್ ಅವರು ಎಂ. ಟೆಕ್ ಪದವೀಧರೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಸದ್ಯ, ಸಾಫ್ಟ್ ವೇರ್ ಕಂಪೆನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದಾರೆ. ಸೈಬರ್ ಕ್ರೈಮ್ ಸರಣಿ, ವೈಜ್ಞಾನಿಕ ಹಾಗೂ ಸಾಮಾಜಿಕ ಕಥೆ, ಕಾದಂಬರಿಗಳನ್ನು ತರಂಗ, ಸುಧಾ, ಕರ್ಮವೀರ, ಕಸ್ತೂರಿ ಮತ್ತು ಇತರೆ ವಾರ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಆಂಗ್ಲ ಭಾಷೆಯಲ್ಲಿ ಪ್ರವಾಸ ಕಥನಗಳನ್ನುಬ್ಲಾಗ್ ( https://suchetagautham.blogspot.com) ನಲ್ಲಿ ಬರೆಯುತ್ತಾರೆ. “ಮೂವತ್ತು ಸಾವಿರ ವರ್ಷಗಳ ನಂತರ ಮತ್ತು ಇತರ ಕಥೆಗಳು” ಅವರ ಸಾಮಾಜಿಕ, ವೈಜ್ಞಾನಿಕ ಕಥೆಗಳ ಹಾಗೂ ಐಟಿ ಕ್ಷೇತ್ರದಲ್ಲಿ ನಡೆಯುವ ಒಂದು ವಿಭಿನ್ನ ಪತ್ತೇದಾರಿ ಕಥಾ ಸಂಕಲನ. "BLR ಝೀರೋ” ಮತ್ತು “ಬೈನರಿ” ಸೈಬರ್ ಕ್ರೈಮ್ ಸರಣಿಯ ಮೊದಲ ಹಾಗೂ ಎರಡನೆಯ ಕಿರು ಕಾದಂಬರಿಗಳು. “ಕಳ್ಳ ಮತ್ತು ಪೋಲಿಸ್” ಹಾಗೂ “ಹೈಜಾಕ್ಡ್” ಆ ಸರಣಿಯ ಮೊರನೆಯ ಹಾಗೂ ನಾಲ್ಕನೆಯ ಕಿರು ಕಾದಂಬರಿಗಳು.

More About Author