ಟೇಬಲ್ ಮೇಲೊಂದು ಪುಟ್ಟ ಗಡಿಯಾರವಿದೆ
ಅದು ಟಿಕ್ ಟಿಕ್ ಅಂದಂತೆಲ್ಲಾ
ಪುಟಗಳು ಹಾರಿದಂತೆಲ್ಲಾ
ಕಾಫಿಯ ಘಮಲು ಬಿರಿದಂತೆಲ್ಲಾ
ಸುಗಂಧ ಹಾಡಾಗಿ
ರೆಂಬೆಯ ಮೇಲೆ ಜೋತಾಡುವಾಗ
ಧೂಪ ಗುಬ್ಬಿಯಾಗಿ ಹಾರುವಾಗ
ಕಿಟಕಿಯ ನಡುವೆ ನುಸುಳಿ
ಕೂತ ಪಾರಿಜಾತ ಹೂವಾಯಿತಂತೆ!
ಬಾಗಿಲಾಚೆ ಇಬ್ಬರು ನಡು ವಯಸ್ಸಿನ ಯುವಕರು
ರಂಜಕ ತುಂಬಿದ ಕೋವಿಯ
ಉಸಿರಿಡಿದು ಹೆಗಲಿಗೆ ಓರೆಯಾಗಿಸಿ ಓಡುತ್ತಿದ್ದಾರೆ
ಅದುವೇ ಮಳೆಯ ಇಳಿಸಿಕೊಂಡ ಕೋಮಲ ತ್ವಚೆಯ ಮೇಲೆ
ಗಮ್ ಬೂಟ್ಸಗಳು ಭದ್ರ ತಳದ ಮಾತನಾಡುತ್ತಾ
ಹಲ್ಲು ಕಿರಿಯುತ್ತಿವೆ
ಈ ಸದ್ದು ಸ್ವತಃ ಅವರಬ್ಬರನ್ನೇ
ತಬ್ಬಿಬ್ಬಾಗಿಸಿದ್ದು ಇದೆ
ಅವರ ಪಂದಿ ಓಡದಿರಲೆಂದು
ಅದರ ಹೆಸರ ಪಿಸುಗುಡಲೆದರುತ್ತಾರೆ
ಎಷ್ಟಾದರೂ ಬಹು ದಿನದ ಶಿಕಾರಿಯಲ್ಲವೇ..
೨
ಇನ್ನಾ ಈ ಕಡೆ
ಬಂಗಾರದ ಸೂಜಿಯ ಮೊನಚಿಂದ ಹೆಣೆದ ಬಲೆಯ ಕಂಡು
ಜಿಪ್ಸಿಯಂತ ಯಶನಿಗೆ
ಕಮಾನು ಕಟ್ಟಿ ಊರಿಂದ ಊರಿಗೆ
ಅಲೆಯುವ ಬದುಕೇ ಶಿಕಾರಿ ಎನಿಸಿ
ಪೋಲ್ಯಾಂಡ್ ಗಲ್ಲಿಯೊಳಗಿನ ಹೆಂಗಳೆಯರ ನೆನೆಯುತ್ತಾನೆ..
ಜಗತ್ತಿನ ಒಂದೇ ಮೂಲೆಯಲ್ಲಿ
ಒಂದೇ ತರನಾಗಿ ಬದುಕುವುದೆಂದರೆ
ಇವನಿಗೆ ಹಗ್ಗದ ಮೇಲೆ ನಡೆದಷ್ಟು ಸಲೀಸಲ್ಲಾ
ಇದರ ಜೊತೆಗೆ
ಕಳಚಿಕೊಳ್ಳಬೇಕೆಂಬ ಧರ್ಮ
ಮಧ್ಯ ರಾತ್ರಿಯ ಮಳೆಯೊಂದಿಗೆ
ಉಕ್ಕಿಸುವುದು ಬಾಲ್ಯದ ನೆನಪ..
ದಿನದಿಂದ ದಿನಕ್ಕೆ ಏಕತಾನತೆಯ ಕ್ಷೋಭೆ
ಉಲ್ಬಣಗೊಳ್ಳುತ್ತಲೆ ಇರುತ್ತದೆ
ಚಿಗುರುತ್ತಿರುವ ದಾಸವಾಳದ ಕಡ್ಡಿಯಂತೆಯೇ
ಮೋಡ ಮುಸುಕಿ ಮತ್ತಷ್ಟು
ಚೀರುಳಗಳ ಸದ್ದು
ದೂರದಲ್ಲೆಲ್ಲೋ ಮೂಡುವಾಗ
ಅಡ್ಡವೊಂದರಲ್ಲಿ ಕೂತು
ಬೀಗಗಳ ಮುರಿಯುವಾಗ
ಮತ್ತೆ ಮತ್ತೆ ಎಲೆಗಳ ಪಳಗಿಸುವಾಗ
ಇವನೊಳಗಿರುವ ಚತುರ ನಗುತ್ತಾನೆ..
ಕಾಡಿನ ಒಂದೊಂದೆ ಪಕಳೆ ಮುದುಡುವಾಗ
ಕಾಡ ಹುಡುಗಿಯ ಹಾಡು ತೇಲಿ
ಅದರ ಮಾರುದದ್ದ ಮೂತಿಗೆ ಏನೋ ಸವಿದಂತೆ!
ಕೋವಿಯವರ ಹಾವ ಭಾವದ ಅಂದಾಜಿನ್ನಲ್ಲೇ
ಗುಟುರು ಹಾಕುತ್ತಾ ಅಲೆಯವ ಈ ಪಂದಿಗೆ
ತೋಟದ ಅಂಚಿನ ಬಲೆ ತೀರಾ
ಆಕಸ್ಮಿಕದ್ದೇನಲ್ಲಾ, ಆದರೂ
ತಗಲಿಕೊಂಡದ್ದು ಸೋಜಿಗವೇ!!
ಯುವಕರಿಬ್ಬರಿಗೆ ಅದರ ಕೂಗು ಇನ್ನಿಲ್ಲದ
ಉಮೇದು ಸುರಿದು ಬಲೆಯ ದಾರಿ ಓಡುತ್ತಾರೆ
೪
ಈ ಮೂರು ಜಗತ್ತುಗಳು ಒಂದಾಗಿದ್ದು
ನನ್ನ ಕಣ್ಣ ಜಗತ್ತಿಗೆ ಕೌತುಕದ ವಿಷಯವೇ ಸರಿ!
೫
ಕಾಲ ನಿಮಿಷಗಳಾಗಿ ಉರುಳುವಾಗ
ಯಶನಿಗೆ ಬದುಕು ಜಾಡಿನಾಚೆ ಹೊರಳಿ
ತನ್ನನ್ನೇ ಕಿಂಡಿಯೊಂದಿರುವ ಕದವಿಲ್ಲದ
ಕೊಠಡಿಯೊಳಗೆ ಬಂದಿಸಿಕೊಂಡಾಗ
ಅವನ ಕಾಲುಗಳೇ ಅವನ ನೋಡಿ
ನಕ್ಕಂತೆ!
ಅವನ ಹಳೆಯ ಪ್ರೇಯಸಿಯರಾದಿಯಾಗಿ
ಎಲ್ಲರಿಗೂ ನಿಜದ ಸಂತನೆನಿಸಿ ಕ್ಷಮೆಯಾಚಿಸುವಾಗ
ಉಳಿದವರ ಸೇಡಿನ ಮೂಟೆ
ಅವನ ಜಾಗವ ನೆಲಸಮ ಮಾಡಿದಾಗಲೂ
ಸಿಗದ ಯಶ, ತಪ್ಪಿಸಿಕೊಳ್ಳಲು
ಉರುಳಾಡುತ್ತಿರುವ ಪಂದಿ
ಅದನ್ನ ಬೆನ್ನಟ್ಟಿರುವ ಕೋವಿ
ಎಲ್ಲವೂ..,
ಒಂದಲ್ಲಾ ಒಂದರಿಂದ ತಪ್ಪಿಸಿಕೊಳ್ಳುವ
ಇನ್ನೇನು ಸಿಕ್ಕಿಕೊಳ್ಳುವ ಮಿಣುಕು ಹುಳದಂತೆ
ಇದ್ದಂದೆ ಮತ್ತೆ ಇಲ್ಲಂದೆ ಇರುವ ಇವಕ್ಕೆ
ಕಾಲವುಂಟು, ಕಾಲುವುಂಟು!
ಕಲಾಕೃತಿ: ಅಶೋಕ ಶೆಟಕಾರ
ಆಡಿಯೋ
ವಿಡಿಯೋ
ಸ್ಮಿತಾ ಮಾಕಳ್ಳಿ
ಕವಿ, ಲೇಖಕಿ, ಸ್ಮಿತಾ ಮಾಕಳ್ಳಿ ಮೂಲತಃ ತಿಪಟೂರಿನವರು. ಪಿ.ಯೂ ವರೆಗೆ ತಿಪಟೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಆನಂತರ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ನಂತರ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಹಾಗೂ ಭಾಷಾಂತರ ಡಿಪ್ಲೊಮೋ ಪದವಿ, ಅಲ್ಲಿಯೇ ಕೆಲ ಕಾಲ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ ಸದ್ಯ ಅದೇ ವಿಶ್ವವಿದ್ಯಾನಿಲಯದಲ್ಲಿ ನೊಬೆಲ್ ಬಹುಮಾನ ಪುರಸ್ಕೃತ ಲೇಖಕ ಇಸಾಕ್ ಬಾಶೆವಿಸ್ ಸಿಂಗರ್ ಅವರ ಕಾದಂಬರಿಗಳ ಕುರಿತು ಪಿಹೆಚ್.ಡಿ ಮಾಡುತ್ತಿದ್ದಾರೆ. ಈ ವರೆಗೆ ಎರಡು ಕೃತಿಗಳು ಪ್ರಶಸ್ತಿಗಳು ಪ್ರಟಕವಾಗಿವೆ. ಮೊದಲ ಪುಸ್ತಕ ಕೈಗೆಟಕುವ ಕೊಂಬೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿಗಳು ದೊರೆತಿವೆ.
ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಕಾವ್ಯ ಸ್ಪರ್ಧೆಯಲ್ಲಿ ಎರಡು ಬಾರಿ ಹಾಗೂ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ದ.ರಾ. ಬೇಂದ್ರೆ ಅಂತರ ಕಾಲೇಜು ಸ್ಪರ್ಧೆಯಲ್ಲಿ ಮೂರು ಬಾರಿ ಬಹುಮಾನ ಪಡೆದಿದ್ದಾರೆ.