Poem

ಸತ್ಯ

ಸತ್ಯವದು ಮೋಹನದಾಸರ ಪ್ರಯೋಗ,
ಕಾಮವದು ಹಿಂಸಾ`ರತಿ'
ಹಿಂಸೆಯಿಂದಲೆ ಹೊಸ ಸೃಷ್ಟಿ.

ಹಿಂಸೆ ಇಲ್ಲದೆ ನವ ಸೃಷ್ಟಿ ಎಂತು
ಹೇಳೈ ಸೃಷ್ಟಿಕರ್ತನೆ?
ಕಾಮವೆಂಬುದು ಹಿಂಸಾ`ಕಟ್ಟು'ಬಂಧನ.

ರತಿಸುಖಸಾರದಿ
ಹಡೆಯುವುದೆ ಹಿಂಸಯದೊಂದು ಪ್ರತಿಯನ್ನ,
ಈಡಿಪಸ್ಸಿನ ಗೂಢ ಪಾಪ ಲೇಪಿತರು.

`ರತಿತಮಾಲಚ್ಛಾಯೆಯಲ್ಲಿ ಬಿಚ್ಚಿತು ಬೋಧಿ',
ಅಹಿಂಸೆ, ಹಿಂಸಾಮುಕ್ತ ಕಾಮ,
ಬಾಪು ಕರೆದರು ಮೊಮ್ಮಗಳ ಶಯ್ಯೆಗೆ.

ಇಲ್ಲಿ ಗೆಲ್ಲಬೇಕು ಕಾಮವನ್ನ, ಹಿಂಸೆಯನ್ನ,
ಮೊಮ್ಮಗಳ ಸಮಾಗಮದ ಈ ಯಜ್ಞದಲ್ಲಿ
ನಳನಳಿಸ ಬೇಕು ಅಹಿಂಸಾಕಾಮದ ಕುಡಿ.

ಹಿಂಸಾಮುಕ್ತ ಕಾಮಕಾಮನೆಗಳು
ನಮ್ಮ ಮೊದಲ ಸ್ವಾತಂತ್ಯ್ರ
ಇದಿಲ್ಲದೆ ನಮಗಿಲ್ಲ ಸ್ವಾತಂತ್ಯ್ರ

ಕನಲಿದರು ಬಾಪು
ಮೊಮ್ಮಗಳು ಮನು* ಪಕ್ಕ
ಇದಕಿಲ್ಲ ಕೋಟಲೆಗಳ ಲೆಕ್ಕ

ಗೆದ್ದರು ಮಹಾನೈಷ್ಠಿಕರು*
ಬಿಟ್ಟುಕೊಟ್ಟರು ಬಾಪು
ಬ್ರಹ್ಮಚರ್ಯೆ ಪ್ರಯೋಗಗಳ

ರಾಜಧಾನಿಯ ರಸಸಂಜೆ ರಸ್ತೆಗಳಲಿ
ಹರಿಯುತಿದೆ
ಹಿಂಸಾ`ರತಿ'ಯ ರಕ್ತದ ಹೊಳೆ
ಅವಿರತ ಅವಿರತ ಅವಿರತ

-ಜಿ.ಎನ್.ರಂಗನಾಥ ರಾವ್

 

--------------------------------------------------------------------------------

*ಮನು: ಗಾಂಧೀಜಿಯವರ ಸೋದರ ಮೊಮ್ಮಗಳು(ಗ್ಯ್ರಾನ್ ನೀಸ್). ಜಿವಮಾನವಿಡೀ ಬ್ರಹ್ಮಚಾರಿಣಿಯಾಗೇ ಉಳಿದಿದ್ದ ಮನು, ನವಖಾಲಿ, ಬಿಹಾರ,ದೆಹಲಿಗಳಲ್ಲಿನ ಗಾಂಧಿಯವರ ಕೊನೆಯ ದಿನಗಳ ದಿನಚರಿಯನ್ನು ಬರೆದು ದಾಖಲಿಸಿದ್ದಾರೆ. ಭಾರತದ ವಿವಿಧ ಭಾಗಗಗಳಿಗೆ ಗಾಂಧೀಯವರ ಸಂದೇಶದ ವಾಹಕಿಯಾಗಿದ್ದ ಈಕೆ ಗಾಂಧಿಯವರ ಜನ್ಮ ಶತಾಬ್ದಿಯ ವರ್ಷ, 1969ರಲ್ಲಿ ನವದೆಹಲಿಯಲ್ಲಿ ನಿಧನ ಹೊಂದಿದರು. ನಿಧನಹೊಂದಿದಾಗ ಅವರ ವಯಸ್ಸು ನಲವತ್ತನ್ನೂ ದಾಟಿರಲಿಲ್ಲ.

**ಗಾಂಧಿಯವರು ತಮ್ಮ ಲೈಂಗಿಕತೆಯನ್ನು ದೇವರಿಗೆ ಆಹುತಿಕೊಡುವ ಯಜ್ಞ ಇದಾಗಿತ್ತು. ಅದರಿಂದ ಹಿಂಸೆಯನ್ನು ಗೆಲ್ಲ ಬಹುದು ಎಂಬುದು ನಂಬಿಕೆಯಾಗಿತ್ತು. ಅವರ ಈ ನಂಬಿಕೆ, ಅಹಿಂಸೆಯ ಪರಿಪೂರ್ಣತೆಯಿಂದ ಎಲ್ಲವನ್ನೂ ಗೆಲ್ಲಬಹುದು, ಅಹಿಂಸೆಯನ್ನು ಸಂಪೂರ್ಣವಾಗಿ ಪ್ರತಿಷ್ಠಾಪಿಸಿದಾಗ ಅದು ನೆರಹೊರೆಯ ಶತ್ರುತ್ವದ ಶಕ್ತಿಗಳನ್ನು ನಿರ್ಮೂಲನಗೊಳಿಸುತ್ತದೆ ಎನ್ನುವ ಪತಂಜಲಿ ಸೂತ್ರದಿಂದ ಪ್ರಭಾವಿತ ಎನ್ನುವ ಮಾತಿದೆ. ಕಾಮವನ್ನು ಗೆದ್ದಲ್ಲಿ ತಮ್ಮಿಂದ ಜಿನ್ನಾರವರನ್ನು ಸೋಲಿಸುವುದು ಸಾಧ್ಯ ಎಂದು ಅವರು ನಂಬಿದ್ದರು. ಈ ಯಜ್ಞದ ಬಗ್ಗೆ ಗಾಂಧಿಯವರ ಅನುಯಾಯಿ ಸಂಗಡಿಗರಲ್ಲಿ ಬಹುತೇಕ ಮಂದಿ ಅಸಮ್ಮತಿ ವ್ಯಕ್ತಪಡಿಸಿದ್ದರು. ಗಾಂಧಿ ಧರ್ಮಮಾರ್ಗದಿಂದ ಭ್ರಷ್ಟರಾಗಿದ್ದಾರೆಂದು ವಲ್ಲಭಭಾಯಿ ಪಟೇಲರು ಅಸಮ್ಮತಿ ವ್ಯಕ್ತಪಡಿಸಿದ್ದರು.`ನೀವು ಹಿಡಿದಿರುವ ಮಾರ್ಗ ಸರಿ ಇಲ್ಲ ಎಂದು ಮಗ ದೇವದಾಸ ಗಾಧಿ ತಂದೆಗೆ ಪತ್ರ ಬರೆದಿದ್ದರು.

ಹೆಚ್ಚಿನ ವಿವರಗಳಿಗೆ ಜಿ.ಎನ್. ರಂಗನಾಥ ರಾವ್ ಅವರು ಅನುವಾದಿಸಿರುವ `ಮಹಾತ್ಮ ಗಾಂಧಿ- ಒಂದು ಸತ್ಯ ಕಥೆ, ಪುಟ 798-892 ನೋಡಬಹುದು)

ಜಿ.ಎನ್. ರಂಗನಾಥ ರಾವ್

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.  

ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದರು. ತೂಕಬದ್ಧ ಸಾಹಿತ್ಯ ವಿಮರ್ಶೆಗೂ ಹೆಸರಾಗಿದ್ದ ಅವರು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರೂ ಹೌದು. ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕಲಿಕೆಗೆ ಸಹಾಯವಾಗುವ ಮಹತ್ವದ ಕೃತಿಗಳನ್ನೂ ರಚಿಸಿದ್ದಾರೆ. ಅವರು ವಾರ್ತಾ ಭಾರತಿ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ ’ನೇಸರ ನೋಡು ನೇಸರ ನೋಡು’ ಎಂಬ ಅಂಕಣ ಅಷ್ಟೇ ಖ್ಯಾತಿಗಳಿಸಿತ್ತು. 81ವರ್ಷಗಳ ತುಂಬು ಜೀವನ ನಡೆಸಿದ ರಂಗನಾಥರಾವ್ ವಯೋಸಹಜ ಅನಾರೋಗ್ಯದಿಂದ  2023 ಅಕ್ಟೋಬರ್ 09ರ ಸೋಮವಾರದಂದು ನಿಧನರಾದರು.

ಕೃತಿಗಳು: ಹೊಸ ತಿರುವು, ಮಾಸ್ತಿಯವರ ನಾಟಕಗಳು, ಒಳನೋಟ, ಹಿಂದಣ್ಣ ಹೆಜ್ಜೆ, ಅನ್ಯೋನ್ಯ, ಗುಣ- ದೋಷ ಮುಖ್ಯ (ವಿಮರ್ಶಾ ಕೃತಿಗಳು). ಶೇಕ್ಸ್ ಪಿಯರ್‍ನ ರೋಮಿಯೋ ಜೂಲಿಯಟ್ ಮತ್ತು ಆಂಟನಿ ಕ್ಲಿಯಾಪಾಟ್ರ, ಬ್ರೆಕ್ಟಮ ಕಕೇಷಿಯನ್ ಚಾಕ್ ಸರ್ಕಲ್, ಅನ್ವಿಯ ಅಂತಿಗೊನೆ, ಜೀನ್ ಜೆನೆಯ ದಿ ಬ್ಲ್ಯಾಕ್ಷ್, ಟಾಲ್ ಸ್ಟಾಯ್ನ ಡೆತ್ ಆಫ್ ಇವಾನ್ ಇಲಿಚ್, ಸೋಲ್ಜೆನಿತ್ಸಿನ್ನ ಇವಾನ್ ದೆನಿಸೊವಿಚ್, ಕಾಫ್ಕ ಕತೆಗಳು, ಓ ಹೆನ್ರಿ ಕತೆಗಳು, ಜೆ.ಡಿ ಬರ್ನಾಲ್ನ ಸೋಶಿಯಲ್ ಸೈನ್ಸ್ ಇನ್ ಹಿಸ್ಟರಿ, ರಾಮಚಂದ್ರ ಗುಹ ಅವರ ಇಂಡಿಯಾ ಆಫ್ಟರ್‍ ಗಾಂಧಿ(ಬಾಪೂ ನಂತರದ ಭಾರತ), ಮೇಕರ್ಸ್ ಆಫ್ ಮಾಡರ್ನ್ ಇಂಡಿಯಾ(ನವಭಾರತದ ನಿರ್ಮಾಪಕರು), ಪೇಟ್ರಿಯೆಟ್ಸ್ ಅಂಡ್ ಪಾರ್ಟಿಸಾನ್ಸ್( ದೇಶಪ್ರೇಮಿಗಳು ಮತ್ತು ಪಕ್ಷಪಾತಕರು. ಗಾಂಧಿ ಬಿಫೋರ್‍ ಇಂಡಿಯಾ( ಗಾಂಧಿ ಮಹಾತ್ಮರಾದುದು) ಮತ್ತು ಖಲೀಲ್ ಗಿಬ್ರಾನ್ರ ಕಾಲಾತೀತ ವಿಖ್ಯಾತ ಖಲೀಲ್ ಗಿಬ್ರಾನ್( ಅನುವಾದಿತ ಕೃತಿಗಳು)

ಪ್ರಶಸ್ತಿ ಪುರಸ್ಕಾರಗಳು: ಅವರಿಗೆ 2009ನೇ ಸಾಲಿನ ಖಾದ್ರಿ ಶಾಮಣ್ಣ ಪ್ರಶಸ್ತಿ ಹಾಗೂ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಕುವೆಂಪು ಭಾಷಾಭಾರತಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ಟೀಎಸ್ಸಾರ್‍ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಸಾಹಿತ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಸಂದಿದೆ.

 

More About Author