ಸಂಜೆ ನಾಲ್ಕರ ಬಿಸಿಲಿಗೆ
ಕಣ್ಣು ಬಾಡುತ್ತಿದೆ ಮೆಲ್ಲಗೆ
ಹಾಗೇ ಒರಗಿ ದಿಂಬಿಗೆ
ಸೋಲಬಹುದು ಸಾವಿಗೆ
ಆದರೆ ಮಲಗುವ ಇಚ್ಛೆಯಿಲ್ಲ,
ಇನ್ನೂ ಸೊರಗಿದ ಸ್ವರಕ್ಕೆ.
ತಿರುವಲ್ಲಿ ಕಂಡ ಜಾರುಬಂಡೆಯ
ಮೇಲೆ ಜಾರಲು ಸಿದ್ಧವಾಗಿದೆ ಮಗು.
ಜಾರುಬಂಡಿಗೂ ಪುಳಕ ಅದರ
ಕಣ್ಣುಗಳ ಕುತೂಹಲ, ತವಕಕ್ಕೆ.
ಜಾರುವ ವಯಸ್ಸಿನಲ್ಲಿ ಮಗುವಿದೆ
ಏರುವ ಹುಮ್ಮಸ್ಸಿನಲ್ಲಿ ನಾನಿರ
ಬೇಕೆಂದು ನಡೆಯುತ್ತಿದ್ದೇನೆ
ಏದುಸಿರಿನಲ್ಲಿ ಮುಂದೆ ಮುಂದೆ
ಇವತ್ತೆಷ್ಟು ಹೆಜ್ಜೆಗಳಾದವು ನಡೆದು
ನಾಳೆಗೆಷ್ಟು ಆಯಸ್ಸು ಕಮ್ಮಿ ಆಗಬಹುದು ಸವೆದು.
ಪುಟ್ಟ ಬಾಕ್ಸಿನ ಆನಿವರ್ಸರಿ ಬಂಗಾರದಲ್ಲಿ
ಎಷ್ಟು ಹರಳುಗಳು, ಸರಕ್ಕೆ ಯಾರ ಕೊರಳು,
ಶ್, ಮೆತ್ತಗೆ ಮಾತಾಡು ಕಾಲ ಕೇಳಿಸಿಕೊಂಡಾನು
ಮಧ್ಯಾಹ್ನದ ಬಿಸಿಲಲ್ಲಿ ಬಾಡಿದ ಹೂ
ಮೇಲೆ ಚಿಮುಕಿಸಬಹುದೇ
ತುಸು ಬೆಚ್ಚಗಿನ ಕಣ್ಣೀರು.
ಬಾಡಿದ ಹೂ ಮೆತ್ತಗಾಗಬಹುದು
ಆದರೆ ಮರಳಿ ಹೋಗಿ ಸೇರಲಾಗುವುದಿಲ್ಲ ಗಿಡವನ್ನು.
ಆದರೆ ಗಿಡ, ಹೂವ ಹಾಗಲ್ಲ,
ಬಿಸಿಲಿಗೆ ಬಾಡಿಕೊಂಡರೂ ಮೆತ್ತಗೆ ಚಿಮುಕಿಸಿದರೆ ಪನ್ನೀರು,
ನಳನಳಿಸುತ್ತದೆ ಮತ್ತೆ, ಅರಳಿ ಬಳಬಳ ಹೂ,
ಹಸಿರು ಮುಕ್ಕಳಿಸಿ ನಗುತ್ತದೆ ಬೆಳಗಿನ ಬಿಸಿಲಿಗೆ.
ಈಗ ನಾನು ಬಿದ್ದ ಹೂವೋ, ಹೂವ ಕೊಟ್ಟ ಗಿಡವೋ
ಕೆನ್ನೆಯ ಮೇಲೆ ಬಿದ್ದ ಬಿಸಿಲೇ,
ಬಾಡಿರಬಹುದು ನಾನು
ಮಣ್ಣಾಗಿಲ್ಲ ಇನ್ನೂ.
ಸಂಜೆಯ ಸೂರ್ಯ ಹಿಪೋಕ್ರಟ್- ಇಳಿದು ಹೋದರೂ
ಬಂದೆ ಅಂತ ಸರಿಯುತ್ತಾನೆ ಪಶ್ಟಿಮದಲ್ಲಿ,
ಮತ್ತೆ ಮೂಡುವೆನೆಂಬ ಧೈರ್ಯದಲ್ಲಿ.
ಮೂಡುವೆನೋ ಇಲ್ಲವೋ,
ಮುಳುಗುವಾಗ ಮಾತ್ರ
ನಾನು ಕಲ್ಲು.
ಬಿಸಿಲಿಗೆ ಅಷ್ಟು ಬೆಂದ ಕಲ್ಲು ಕೂಡ
ಮುಟ್ಟಿ ನೋಡಿದರೆ ಬೆರಳ ಸುಡುವುದೇ
ಹೊರತೂ
ಮೆದುವಾಗಿರುವುದಿಲ್ಲ.
-ವಿಕಾಸ ನೇಗಿಲೋಣಿ
ವಿಡಿಯೋ
ವಿಡಿಯೋ
ವಿಕಾಸ ನೇಗಿಲೋಣಿ
ವಿಕಾಸ ನೇಗಿಲೋಣಿ, ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ನೇಗಿಲೋಣಿಯಲ್ಲಿ. ಊರಲ್ಲೇ ಪ್ರಾಥಮಿಕ ಶಿಕ್ಷಣ, ಉಡುಪಿಯಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದರು. ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ವ್ಯಾಸಂಗ ಪೂರ್ಣಗೊಳಿಸಿದರು.
ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿ, ಅನಂತರ ವಿಜಯ ಕರ್ನಾಟಕ, ಉದಯವಾಣಿ, ಕನ್ನಡ ಪ್ರಭ, ಸುವರ್ಣ ನ್ಯೂಸ್, ಸಖಿ ನಿಯತಕಾಲಿಕೆಗಳಲ್ಲಿ ಸುಮಾರು 16 ವರ್ಷಗಳ ಕಾಲ ವೃತ್ತಿ ನಿರ್ವಹಿಸಿದರು. ‘ಯಶೋದೆ’, ‘ಗಾಂಧಾರಿ’ ಸೇರಿದಂತೆ ಹಲವು ಧಾರಾವಾಹಿಗಳಿಗೆ ಸಂಭಾಷಣೆ ರಚಿಸಿದ್ದಾರೆ. ‘ಯಶೋದೆ’, ‘ಗಾಂಧಾರಿ’, ‘ರಾಧಾ ರಮಣ’, ‘ಅಗ್ನಿಸಾಕ್ಷಿ’, ‘ಸೀತಾವಲ್ಲಭ’, ‘ನಮ್ಮನೆ ಯುವರಾಣಿ’, ‘ಮಿಥುನ ರಾಶಿ’ ಮೊದಲಾದ ಧಾರಾವಾಹಿಗಳಿಗೆ ಹಾಡುಗಳನ್ನು ಬರೆದ ಅನುಭವ ಇವರಿಗಿದೆ. ಸದ್ಯ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
‘ಮಳೆಗಾಲ ಬಂದು ಬಾಗಿಲು ತಟ್ಟಿತು’, ಮೊದಲ ಪ್ರಕಟಿತ ಕಥಾಸಂಕಲನ. ‘ರಥಬೀದಿ ಎಕ್ಸ್ ಪ್ರೆಸ್’ ಎಂಬ ಅಡಾಲಸೆಂಟ್ ಆತ್ಮಚರಿತ್ರೆ ಪ್ರಕಟವಾಗಿದೆ. ‘ಬಸವರಾಜ ವಿಳಾಸ’ ಮೂರನೇ ಸಂಕಲನವಾಗಿದೆ.