ಕವಿ ಮಹಾಂತಪ್ಪ ನಂದೂರ ಕಲಬುರಗಿ ತಾಲೂಕಿನ ’ಪಟ್ಟಣ’ದವರು. ಗ್ರಾಮೀಣ ಹಿನ್ನೆಲೆಯ ಇವರಿಗೆ ಆಧುನಿಕ ಜಗತ್ತು ಸೃಷ್ಟಿಸುವ ತಲ್ಲಣಗಳು ಬಹುವಾಗಿ ಕಾಡುವ ವಿಷಯ. ಅವರ ‘ಕಲ್ಯಾಣವೆಂಬ ಪ್ರಣತಿ’ ಸುನೀತ ಸಂಗ್ರಹ ಕೃತಿಗೆ ಡಾ. ಡಿ. ಎಸ್. ಕರ್ಕಿ ಕಾವ್ಯ ಪುರಸ್ಕಾರ ಹಾಗೂ ಅಮ್ಮ ಪ್ರಶಸ್ತಿ, ಅವರ ‘ಅರಿವೆ ಪ್ರಮಾಣು’ ಕವನ ಸಂಕಲನಕ್ಕೆ 2019 ನೇ ಸಾಲಿನ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ ಸಂದಿದೆ. ಅವರ ‘ಸಂಬೋಳಿ’ ಕವಿತೆ ಇಲ್ಲಿದೆ.
ಸಂಬೋಳಿ ಸಂಬೋಳಿ ಸಂಬೋಳಿ!
ಬಸವಣ್ಣ ಬರುತಿಹರು ಬೀದಿಯಲ್ಲಿ
ಬಾಗಿಲು ತೆರೆದು ಹೊರ ಬನ್ನಿರಿ
ಬಲದ ಕೈಯಲ್ಲಿ ಭವದ ಬಟ್ಟಲು
ಎಡದ ಕೈಯಲ್ಲಿ ಅನುಭಾವದ ತೊಟ್ಟಿಲು
ಬರುವ ದಾರಿಯ ತುಂಬ ದಯದ ಮೆಟ್ಟಿಲು
ವಚನ ಬುತ್ತಿ ತಲೆಗೆ ಹೊತ್ತು
ಬಸವಣ್ಣ ಬರುತಿಹರು ಬೀದಿಯಲ್ಲಿ
ಎದೆಯ ಕದವ ತೆರೆದು ಹೊರ ಬನ್ನಿರಿ
ಹರಿವ ನೀರು ಇಳಿಜಾರಿಗೆ ಹರಿವಂತೆ
ಬರುತಿದ್ದಾರೆ ಕೆಳಗೇರಿಗೆ ಹೊರಕೇರಿಗೆ.
ಚನ್ನಯ್ಯ ಕಕ್ಕಯ್ಯ ಚಿಕ್ಕಯ್ಯ ನಮ್ಮಯ್ಯ
ಕರೆ ಕರೆಯುತ್ತ ಮೊರೆ ಮೊರೆಯುತ್ತ
ಸಮತೆಯ ಪ್ರಣತಿ ಹಿಡಿದು
ಬಸವಣ್ಣ ಬರುತಿಹರು ಬೀದಿಯಲ್ಲಿ
ಕುಲದ ಕೀಲಿಯ ಕಳಚಿ ಹೊರ ಬನ್ನಿರಿ
ಹರ ಗುರು ಪೀಠದ ಜಗದ್ಗುರು ಅಲ್ಲ
ಕಾವಿ ಕಾಷಾಂಬರ ಇಲ್ಲ ಮಂತ್ರ ದಂಡವೂ ಇಲ್ಲ
ಶುಭ್ರ ಬಿಳಿಯುಡುಗೆ ಸಹಜ ನಡಿಗೆ
ನಗು ಮೊಗಕೆ ನೊಸಲ ವಿಭೂತಿ
ನುಡಿದಂತೆ ನಡೆ ನಡೆದು ನಮ್ಮೆಡೆಗೆ
ಬಸವಣ್ಣ ಬರುತಿಹರು ಬೀದಿಯಲ್ಲಿ
ಮಠ ಮಂದಿರ ತೊರೆದು ಹೊರ ಬನ್ನಿರಿ
ಮುಟ್ಟು ಮೈಲಿಗೆ ಮಡಿಯಿಲ್ಲ
ಗಡಿಯಿಲ್ಲ ತಾಯಿಯಾತ್ಮ ಚೇತನಕೆ.
ಭವವಿಲ್ಲ ಬದುಕಿಲ್ಲ ತಾನಿಲ್ಲ ನೀವಿಲ್ಲದೆ.
ತಾಯಿ ಮಡಿಲಿಗೆ ಮಗು ಹಂಬಲಿಸಿ ಬರುವಂತೆ
ಬಾಯಿ ತುಂಬ ಅಮ್ಮಾ ಅಕ್ಕಾ ಎಂದು ಕರೆಯುತ್ತ
ಬಸವಣ್ಣ ಬರುತಿಹರು ಬೀದಿಯಲ್ಲಿ
ಮನೆ ಹೊಸಿಲು ದಾಟಿ ಹೊರ ಬನ್ನಿರಿ
ಕಾಯದ ಶೃತಿ ಮಿಡಿದು
ಕಾಯಕದ ತಂಬೂರಿ ಮೀಂಟುತ್ತಾ
ದಾಸೋಹ ದೀಪ್ತಿಯಂತೆ ಲೋಕ ತುಂಬ
ಕರುಳ ಸ್ವರವಿಡಿದು ಬತ್ತೀಸ ರಾಗ ಹಾಡುತ್ತ
ಬಸವಣ್ಣ ಬರುತಿಹರು ಬೀದಿಯಲ್ಲಿ
ದೇವರ ಭಯ ತೊರೆದು ಹೊರ ಬನ್ನಿರಿ
ಸಂಬೋಳಿ ಸಂಬೋಳಿ ಸಂಬೋಳಿ!
ಬಸವಣ್ಣ ಬರುತಿಹರು ಬೀದಿಯಲ್ಲಿ
ಬಾಗಿಲು ತೆರೆದು ಹೊರ ಬನ್ನಿರಿ
ಚಿತ್ರ : ಕಂದನ್ ಜಿ. ಮಂಗಳೂರು
ಮಹಾಂತಪ್ಪ ನಂದೂರ
ಕವಿ ಮಹಾಂತಪ್ಪ ನಂದೂರ ಅವರು ಕಲಬುರಗಿ ತಾಲೂಕಿನ ’ಪಟ್ಟಣ ’ದಲ್ಲಿ(1965) ಜನಿಸಿದರು. ಗ್ರಾಮೀಣ ಹಿನ್ನೆಲೆಯ ಇವರಿಗೆ ಆಧುನಿಕ ಜಗತ್ತು ಸೃಷ್ಟಿಸುವ ತಲ್ಲಣಗಳು ಬಹುವಾಗಿ ಕಾಡುವ ವಿಷಯ. ‘ಉದಕದೊಳಗಣ ಬೆಂಕಿ, ದೂರದ ಪದ, ಜೀವ ಕೊಳಲು’ ಅವರ ಕವನ ಸಂಕಲನಗಳು. ‘ಕಲ್ಯಾಣವೆಂಬ ಪ್ರಣತಿ’ - ಸುನೀತ ಸಂಗ್ರಹ, ಆಯಿತಾರ ಅಮಾಸಿ - ಕಥಾ ಸಂಕಲನ, ಆನಂದ ನಿನಾದ - ವಿಮರ್ಶಾ ಲೇಖನ ಸಂಗ್ರಹ ಅವರ ಮತ್ತಿತರ ಕೃತಿಗಳು. ‘ಕಲ್ಯಾಣವೆಂಬ ಪ್ರಣತಿ’ ಸುನೀತ ಸಂಗ್ರಹ ಕೃತಿಗೆ ಡಾ. ಡಿ. ಎಸ್. ಕರ್ಕಿ ಕಾವ್ಯ ಪುರಸ್ಕಾರ ಹಾಗೂ ಅಮ್ಮ ಪ್ರಶಸ್ತಿ, ಅವರ ‘ಅರಿವೆ ಪ್ರಮಾಣು’ ಕವನ ಸಂಕಲನಕ್ಕೆ 2019 ನೇ ಸಾಲಿನ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ಗೆ ಭಾಜನರಾಗಿದ್ಧಾರೆ.
More About Author