
ಅಲ್ವೇ ಮಾರಾಯ್ತಿ
ನೋವನ್ನೆಲ್ಲ ನುಂಗಿ ನೀನು ನಕ್ಕಿದ್ದರೆ,
ಯಾರಿಗೂ ಕಾಣದಂತೆ ಬಿಕ್ಕಿದ್ದರೆ,
ನೀನೂ ಎನಿಸುತ್ತಿದ್ದೆ ಎಲ್ಲರಂತೆ .
ನೀನು...
ನೋವನ್ನೆಲ್ಲ ಕಣ್ಮುಂದೆ ಕೂರಿಸಿಕೊಂಡು
ಒಂದಷ್ಟು ಸಮಾಧಾನ ಹೇಳಿ
ಹೆಗಲ ಮೇಲೆ ಅವನ್ನೆಲ್ಲ ಹೊತ್ತು ಸಾಗಿಬಿಟ್ಟೆ.
ಸಾಗಿದ ಆ ಪರಿ ಇದೆಯಲ್ಲ.....!
ಅದು ಗಟ್ಟಿಯಾಗಿಸಿಬಿಟ್ಟಿತು.
ಮೊನ್ನೆ ಮೊನ್ನೆವರೆಗೂ ಇದ್ದ ಬೆನ್ನು ನೋವು
ಅದೊಂದೇ ಕಾರಣವ ಹಿರಿ ಹಿಗ್ಗಿಸಿಕೊಂಡು
ಮೂಲೆ ಕೂತಿದ್ದ ನಾನು
ನೀ ಸಾಸಿವೆ ತಂದದ್ದ ಕಂಡೆ
ಅಕ್ಷರಗಳೊಂದಿಗೆ ನಿನ್ನ ನೋವು ನಲಿವ ನಾನೂ ಉಂಡೆ
ಏನ್ ಹೇಳಲಿ ಮಾರಾಯ್ತಿ?
ನಾನೂ ನೀನಾಗಿದ್ದೆ
ಸ್ವತಃ ನಾಗವಲ್ಲಿ ಎನ್ನುವಂತೆ
ನಿನ್ನ ಭಾವಗಳು ನನ್ನ ನೋವುಗಳಾದವು
ನಿನ್ನ ನೀ ಅಳಿದುಕೊಂಡದ್ದು,
ಕಳೆದುಕೊಂಡದ್ದು ಮತ್ತೆ
ನಿನ್ನ ನೀ ಹುಡುಕಿಕೊಂಡದ್ದು
ಎಲ್ಲವೂ ನಾ ಆದೆ.
ಮತ್ತೊಂದು ಮಾತು
ನಿನ್ನಿಂದಷ್ಟು ಕಲಿತೆ
ಎಂದೂ ನಿಲ್ಲುವುದಿಲ್ಲ
ನೋವಿದ್ದವರನ್ನ ಮತ್ತಷ್ಟು ನೋಯಿಸಲು,
ಕಣ್ಣೀರ ಒರೆಸುತ್ತೇನೋ ಇಲ್ಲವೋ
ಗುದ್ದಲಿ ಹಿಡಿಯುವುದಿಲ್ಲ
ಅಳುವಿನ ಕಾಲುವೆಯ ಮತ್ತಷ್ಟು ತೋಡಲು,
ಬೆತ್ತಲಾಗುವುದಿಲ್ಲ ಅನುಕಂಪದ ಅಂಗಿಯ
ಮತ್ತೆ ಮತ್ತೆ ತೊಡಲು.
- ರಶ್ಮಿ ಪ್ರವೀಣ್
ರಶ್ಮಿ ಪ್ರವೀಣ್
ಕವಿ ರಶ್ಮಿ ಅವರು ಮೂಲತಃ ಹಾಸನದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಕನ್ನಡ ಸಾಹಿತ್ಯದಲ್ಲಿ ಎಂ. ಎ ಮತ್ತು ಪಿಎಚ್. ಡಿ ಪದವಿಯನ್ನು ಗಳಿಸಿದ್ದಾರೆ. ಪ್ರಸ್ತುತ ಸೇಕ್ರೆಡ್ ಹಾರ್ಟ್ ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಜಾವಾಣಿ ಪತ್ರಿಕೆ ನಡೆಸುವ 'ದೀಪಾವಳಿ ವಿಶೇಷ ಕಥಾ ಸ್ಪರ್ಧೆ ಹಾಗೂ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.
ನೆನಪುಕೃತಿಗಳು: ಗಳ ನೆಪದಲ್ಲಿ(ಕನ್ನಡ ಪುಸ್ತಕ ಪ್ರಾಧಿಕಾದಿಂದ ಬಿಡುಗಡೆ)
More About Author