ಕತೆಗಾರ್ತಿ ನೂರ್ ಜಹಾನ್ ಕನ್ನಡ ಎಂ,ಎ ಪದವಿಗಳಿಸಿ, ಮಹಿಳಾ ಅಧ್ಯಯನದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ಹೊಸಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ ಹಾಗೂ ಕವಿಗೋಷ್ಠಿಗಳಲ್ಲಿ, ವಿಚಾರಗೋಷ್ಠಿಗಳಲ್ಲಿಯು ಭಾಗವಹಿಸಿದ್ದಾರೆ. ಪ್ರಸ್ತುತ ಅವರ ‘ಸಾರಾ (ಅವಳು?, ಅವನು?)’ ಕತೆ ನಿಮ್ಮ ಓದಿಗಾಗಿ.
ಅರ್ಷಿಯಾ ಫಾತಿಮಾಳ ಮೊದಲನೆಯ ಮಗಳು, ಆಕೆಯ ನಂತರ ಆಕೆಯ ತಾಯಿಗೆ ನಾಲ್ಕು ಜನ ಹೆಣ್ಣುಮಕ್ಕಳು ಆಗಿದ್ದರು, ಎಲ್ಲರೂ ಓದುತ್ತಿದ್ದರು, ಅವರ ತಂದೆ ಅವರು ಚಿಕ್ಕವರಾಗಿದ್ದಾಗಲೇ ತೀರಿ ಹೋಗಿದ್ದರು, ತಾಯಿ ಫಾತಿಮಾಳೇ ಮಕ್ಕಳನ್ನು ಸಾಕಿ ಬೆಳೆಸಿದ್ದರು, ಫಾತಿಮಾ ಹೊಲಿಗೆ ಮಿಷಿನ್ ನಲ್ಲಿ ಬೇರೆಯವರ ಬಟ್ಟೆಗಳನ್ನು ಹೊಲಿಯುತ್ತಾ ಜೀವನ ನಡೆಸುತ್ತಿದ್ದಳು, ಅವರ ಜೀವನ ಅಷ್ಟು ಸುಖವಾಗಿ ಅಲ್ಲದಿದ್ದರೂ ನೆಮ್ಮದಿಯಾಗಿ ಸಾಗುತ್ತಿತ್ತು, ಅರ್ಷಿಯಾ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಶಾಲೆಯನ್ನು ಬಿಟ್ಟುಬಿಟ್ಟಿದ್ದಳು, ಅರ್ಷಿಯಾಳಿಗೆ ಓದಿಗಿಂತ ಮನೆ ಕೆಲಸ ಮಾಡೋದೇ ಆಕೆಗೆ ಹೆಚ್ಚು ಇಷ್ಟ ಆಗಿತ್ತು, ಅರ್ಷಿಯಾ ಶಾಲೆ ಬಿಟ್ಟು ಮನೆಯ ಕೆಲಸವನ್ನು ಮಾಡುತ್ತಿದ್ದಳು, ಆಕೆಯ ತಂಗಿಯರು ಮುಂದೆ ಓದುತ್ತಿದ್ದರು.
ಒಂದು ದಿನ ಅರ್ಷಿಯಾ ಒಗೆದ ಬಟ್ಟೆಗಳನ್ನು ಒಣ ಹಾಕಲು ಮಹಡಿಯ ಮೇಲೆ ಹೋಗಿದ್ದಳು, ಅಲ್ಲಿ ಒಬ್ಬ ಹುಡುಗ ತನ್ನ ಮನೆಯ ಮಹಡಿಯ ಮೇಲೆ ನಿಂತು ಆಕೆಯನ್ನೇ ನೋಡುತ್ತಿದ್ದ, ಅರ್ಷಿಯಾ ಆತನನ್ನು ನೋಡಿಯೂ ನೋಡದಂತೆ ಮನೆಯ ಒಳಗೆ ಬಂದುಬಿಟ್ಟಳು, ಹೀಗೆ ಹಲವು ದಿನಗಳು ನಡೆದವು.
ಒಂದು ದಿನ ಆ ಹುಡುಗ ತನ್ನ ಮಹಡಿಯ ಮೇಲೆನಿಂದ ಜಿಗಿದು ಅವರ ಮಹಡಿಯ ಮೇಲೆ ಬಂದ, ಆತ ಬಂದದ್ದನ್ನು ನೋಡಿ ಅರ್ಷಿಯಾ ಹೆದರಿದಳು, "ನೀನು ಹೋಗು, ಇಲ್ಲಿಂದ, ಯಾರಾದರೂ ನಿನಗೆ ಇಲ್ಲಿ ನೋಡಿದರೆ ಹೇಗೆ" ಎಂದು ಹೇಳಿದಳು, ಆತ ಹೇಳಿದ, "ನೀನು ಯಾಕೆ ನನಗೆ ನೋಡಿ ಹೆದರುತ್ತೀಯಾ?, ನಾನೇನು ಮಾಡುವುದಿಲ್ಲ, ನಿನ್ನ ಹತ್ತಿರ ಮಾತನಾಡಲು ಬಂದೆ", ಎಂದ, ಆಕೆ "ಮೊದಲು ನೀನು ಇಲ್ಲಿಂದ ಹೋಗು" ಎಂದಳು, ಆತ ಹೋಗಿ ಬಿಟ್ಟ.
ಮತ್ತೇ ಆತ ಮರುದಿನ ಬಂದ, ಅರ್ಷಿಯಾಳಿಗೆ ಆತನ ಮೊಬೈಲ್ ನಂಬರ್ ಕೊಟ್ಟ, "ನಿನ್ನ ಹತ್ತಿರ ಮಾತನಾಡುವುದಿದೆ, ನೀನು ನನಗೆ ಫೋನ್ ಮಾಡು" ಎಂದು ಹೇಳಿ ಹೋದ, ಅರ್ಷಿಯಾಳಿಗೂ ಆ ಹುಡುಗ ಇಷ್ಟ ಆಗಿದ್ದ, ಆದರೆ ಆಕೆಗೆ ಅದನ್ನು ಆತನ ಹತ್ತಿರ ಹೇಳಲು ಭಯ ಆಗುತ್ತಿತ್ತು.
ಒಂದು ದಿನ ಅರ್ಷಿಯಾ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆಯ ಅಮ್ಮ ಹೊರಗೆ ಹೋಗಿದ್ದವಳು ತುಂಬಾ ಹೊತ್ತಿನ ನಂತರ ಮನೆಗೆ ಬಂದಳು, ಮತ್ತೇ ಮತ್ತೇ ದಿನಾ ಹೀಗೇ ಅರ್ಷಿಯಾಳ ಅಮ್ಮ ಮನೆಯಿಂದ ಹೊರಗೆ ಹೋಗುತ್ತಿದ್ದಳು, ಮನೆಗೆ ತಡವಾಗಿ ಬರುತ್ತಿದ್ದಳು, ಆಕೆ ಅಮ್ಮನಿಗೆ ಏನೂ ಕೇಳಲೇ ಇಲ್ಲ, ಯಾಕೆಂದರೆ ಆಕೆ ಅಮ್ಮ ಆಗಿದ್ದಳು, ಅಮ್ಮ ಎಂದೂ ತಪ್ಪು ಮಾಡುವುದಿಲ್ಲ ಎನ್ನುವುದು ಅರ್ಷಿಯಾಳ ವಾದವಾಗಿತ್ತು, ಒಂದು ದಿನ ಆಕೆ ಅಡುಗೆ ಮನೆಯ ಕಿಟಕಿಯಿಂದಲೇ ಅಮ್ಮ ಹೋಗುವುದನ್ನು ನೋಡಿದಳು, ಅರ್ಷಿಯಳ ಅಮ್ಮ ಯಾರಾದರೂ ತನ್ನನ್ನು ನೋಡುತ್ತಿದ್ದಾರೇನೋ ಎನ್ನುವ ಹೆದರಿಕೆಯಿಂದಲೇ ಹೋಗುತ್ತಿದ್ದಳು, ಮತ್ತೇ ಮರುದಿನ ಅರ್ಷಿಯಾ ತನ್ನ ಅಮ್ಮನನ್ನು ಹಿಂಬಾಲಿಸಿದಳು, ಆದರೆ ಅರ್ಧ ದಾರಿಯಲ್ಲೇ ಆಕೆಗೆ ಅಮ್ಮ ಕಾಣದಾದಳು, ಆಕೆ ಮನೆಗೆ ಬಂದುಬಿಟ್ಟಳು.
ಕೆಲವು ದಿನಗಳ ನಂತರ ಅರ್ಷಿಯಾಳಿಗೆ ಒಂದು ಸಂಬಂಧ ಬಂತು, ಆಕೆಯ ಅಮ್ಮ ಆಕೆಗೆ ಹೇಳಿದಳು, "ಅವರು ನಿನಗೆ ನೋಡಲು ಬರುತ್ತಿದ್ದಾರೆ' ಎಂದು, ಅರ್ಷಿಯಾಳಿಗೆ ಆಶ್ಚರ್ಯ ಆಯಿತು, ಆಕೆ ಅಮ್ಮನಿಗೆ ಹೇಗೆ ಹೇಳಲಿ, ನನಗೆ ಆ ಹುಡುಗ ಇಷ್ಟ ಎಂದು ಮನಸಿನಲ್ಲಿ ಅಂದುಕೊಳ್ಳುತ್ತಾ ಅರ್ಷಿಯಾ ಸುಮ್ಮನೇ ಇದ್ದಳು, ಆಕೆಯ ಅಮ್ಮ ಆಕೆಯ ಪರಿಸ್ಥಿತಿ ನೋಡಿ "ನಿನಗೆ ಇಷ್ಟ ಇದ್ದರೆ ಹೇಳು, ಇಲ್ಲದಿದ್ದರೆ ನಿನ್ನ ದೃಷ್ಟಿಯಲ್ಲಿ ಯಾರಾದರೂ ಹುಡುಗ ಇದ್ದರೆ ಹೇಳು, ನಾನು ಮಾತಾಡುತ್ತೇನೆ", ಎಂದಳು, ಅರ್ಷಿಯಾ ಅಮ್ಮನಿಂದ ಈ ಮಾತನ್ನು ನಿರೀಕ್ಷಿಸಿರಲಿಲ್ಲ, ಆಕೆ ಇನ್ನೂ ಆತನ ಹತ್ತಿರ ಏನೂ ಮಾತಾಡಿರಲಿಲ್ಲ, ಆತನೂ ಅರ್ಷಿಯಾಳಿಗೆ ಇನ್ನೂ ಏನೂ ಹೇಳಿರಲಿಲ್ಲ, ಏನೂ ಹೇಳದೇ, ಕೇಳದೇ, ಹೇಗೆ ಹೇಳಲಿ, ಅಮ್ಮನಿಗೆ, ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತೇನೆ ಎಂದು, ಆಕೆ ಯೋಚಿಸುತ್ತಾ ಸುಮ್ಮನಾದಳು.
ರಾತ್ರಿ ಆತನಿಗೆ ಫೋನ್ ಮಾಡಿದಳು, "ಆತ ನಾನು ಮೇಲೆಯೇ ಇದ್ದೇನೆ, ನೀನು ಮೇಲೆ ಬಾ" ಎಂದು ಹೇಳಿದ, ಆಕೆ ಮೇಲೆ ಹೋದಳು, ಆತ ಬಂದ, ಆತ ಹೇಳಿದ, "ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ಆದರೆ ನಿನ್ನನ್ನು ಮದುವೆ ಆಗಲಾರೆ" ಎಂದು ಹೇಳಿದ, ಅಷ್ಟು ಹೇಳಿ ಆತ ಹೋಗಿ ಬಿಟ್ಟ, ಆಕೆ ಕೆಳಗೆ ಬಂದಳು, ರಾತ್ರಿಯೆಲ್ಲ, ತುಂಬಾ ಅತ್ತಳು, ಮರುದಿನ ಬಾತ ಕಣ್ಣುಗಳಿಂದಲೇ ಅಮ್ಮನಿಗೆ "ಮದುವೆ ಇಷ್ಟ ಇದೆ" ಎಂದು ಹೇಳಿದಳು, ಅಮ್ಮ ತುಂಬಾ ಸಂತೋಷಗೊಂಡಳು, ಅರ್ಷಿಯಾಳ ಮದುವೆ ಆಯಿತು.
ಅರ್ಷಿಯಾಳ ಗಂಡ ಮದುವೆ ಆದ ಹೊಸತರಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡ, ಆದರೆ ಬರುಬರುತ್ತಾ ಆತನ ಪ್ರೀತಿ ಕಡಿಮೆ ಆಗತೊಡಗಿತು, ಆದರೆ ಅರ್ಷಿಯಾಳಿಗೆ ಮದುವೆಯಾಗಿ ಎರಡು ವರ್ಷದ ನಂತರ ಮಗಳು ಹುಟ್ಟಿದಾಗ ಆಕೆಯ ಗಂಡ ತುಂಬಾ
ಸಂತೋಷಗೊಂಡ, "ನನಗೆ ಮೊದಲ ಮಗುವಾಗಿ ಹೆಣ್ಣು ಮಗಳೇ ಬೇಕಿತ್ತು" ಎಂದ, ಮನೆಯವರೆಲ್ಲರೂ ಸಂತೋಷವಾಗಿದ್ದರು, ಆದರೆ ಎರಡನೆಯದೂ ಹೆಣ್ಣಾದಾಗ ಅವರ ಸಂತೋಷ ಕ್ಷೀಣಿಸತೊಡಗಿತು.
ಹೀಗೆ ಅರ್ಷಿಯಾಳಿಗೆ ಒಂದರ ಹಿಂದೆ ಒಂದರಂತೆ ನಾಲ್ಕು ಹೆಣ್ಣುಮಕ್ಕಳಾದವು, ಇದನ್ನು ನೋಡಿ ಗಂಡ ಕುಡಿತದ ದಾಸನಾದ, ಅರ್ಷಿಯಾ ಮತ್ತೊಮ್ಮೆ ಗರ್ಭಿಣಿಯಾದಾಗ ಗಂಡ ಆಕೆಗೆ ಹೆದರಿಸಿದ, "ಈಗಲೂ ಹೆಣ್ಣಾದರೆ ನಾನು ನಿನಗೆ ಖಂಡಿತಾ ತಲಾಖ್ ಕೊಡುತ್ತೇನೆ" ಎಂದು, ಅರ್ಷಿಯಾ ಅಲ್ಲಾಡಿಹೋದಳು, ಆದರೆ ದೇವರ ಆಜ್ಞೆಯ ಮುಂದೆ ಯಾರದು ನಡೆಯುತ್ತದೆ, ಅರ್ಷಿಯಾಳಿಗೆ ಆಸ್ಪತ್ರೆಯಲ್ಲಿ ಹೆರಿಗೆಯಾದಾಗ ಯಾರೂ ಆಕೆಯ ಬಳಿ ಇರಲಿಲ್ಲ, ಆದರೆ ಆಕೆಗೆ ಈ ಸಲ ಹೆಣ್ಣೂ ಆಗಲಿಲ್ಲ, ಗಂಡೂ ಆಗಲಿಲ್ಲ, ಆಕೆಗೆ ಖೋಜಾ ಮಗು ಜನಿಸಿತು, ಅರ್ಷಿಯಾ ಹೆದರಿದಳು, ಯಾರೂ ಇಲ್ಲದ ಸಮಯ ನೋಡಿ ಆಕೆ ಆ ಮಗುವನ್ನು ಒಂದು ರಸ್ತೆಯ ಮೇಲೆ ಬಿಟ್ಟು ಬಂದಳು, ಮತ್ತೇ ಆಸ್ಪತ್ರೆಯ ಒಳಗೆ ಬಂದು ಯೋಚಿಸುತ್ತಾ ಕುಳಿತಳು, "ಅಷ್ಟು ಚಿಕ್ಕ ಮಗು ಬಿಸಿಲಿನಲ್ಲಿ ರಸ್ತೆಯ ಮೇಲೆ ಹೇಗೆ ಇರಬಹುದು" ಎಂದು ಓಡುತ್ತಾ ಹೋದಳು, ಆದರೆ ಅಲ್ಲಿ ಆ ಮಗು ಇರಲೇ ಇಲ್ಲ, ಸುತ್ತಲೂ ನೋಡಿದಳು, ಒಬ್ಬ ಬಿಕ್ಷುಕ ಆ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದ, ಅರ್ಷಿಯಾ ಆತನನ್ನು ಕೂಗಲು ನೋಡಿದಳು, ಆತ ತುಂಬಾ ದೂರ ಹೋಗಿ ಬಿಟ್ಟಿದ್ದ.
ಅರ್ಷಿಯಾ ಗಂಡನಿಗೆ ಹೇಳಿದ್ದಳು, "ನನಗೆ ಗಂಡು ಮಗು ಹುಟ್ಟಿತ್ತು, ಯಾರೋ ಎತ್ತಿಕೊಂಡು ಹೋದರು" ಎಂದು, ಅವರು ಆ ಬಿಕ್ಷುಕನನ್ನು ತುಂಬಾ ಹುಡುಕಿದರೂ ಆ ಬಿಕ್ಷುಕ ಅವರಿಗೆ ಎಲ್ಲಿಯೂ ಸಿಗಲಿಲ್ಲ, ಗಂಡ ಇದೇ ಚಿಂತೆಯಲ್ಲಿ ಕಾಯಿಲೆ ಬಿದ್ದು ಸತ್ತು ಹೋಗಿ ಬಿಟ್ಟ, ಅರ್ಷಿಯಾ ತವರು ಮನೆ ಸೇರಿದಳು, ಆಕೆಯ ಕಣ್ಣುಗಳು ಆತನನ್ನು ಹುಡುಕುತ್ತಿದ್ದವು, ಆತ ಸಿಗಬಹುದೇನೋ ಎಂದು ಆಕೆ ತನ್ನ ತಾಯಿಯ ಮನೆಯ ಮಹಡಿಯ ಮೇಲೆನೂ ಹತ್ತಿ ನೋಡಿ ಬಂದಳು, ಆದರೆ ಆತ ಆಕೆಯ ಮದುವೆ ಆದ ಮರುದಿನವೇ ಊರು ಬಿಟ್ಟು ಹೋಗಿದ್ದಾನೆ ಎಂದು ಬೇರೆಯವರಿಂದ ತಿಳಿದು ಸುಮ್ಮನಾದಳು, ಕೆಲವು ದಿನಗಳ ನಂತರ ಬೇರೆ ಮನೆ ಮಾಡಿದಳು, ಹೊಲಿಗೆ ಕೆಲಸ ಮಾಡುತ್ತಾ ಮಕ್ಕಳನ್ನು ಓದಿಸಿದಳು, ಮಕ್ಕಳು ದೊಡ್ಡವರಾಗಿದ್ದರು.
ಒಂದು ದಿನ ಅರ್ಷಿಯಾಳ ಮಗಳು ಆಕೆಗೆ ಹೇಳಿದಳು, "ಅಮ್ಮ ನನ್ನ ಸ್ನೇಹಿತೆಯೊಬ್ಬಳು ನಿನ್ನನ್ನು ಭೇಟಿಯಾಗಬೇಕಂತೆ, ಅವರು ತುಂಬಾ ಶ್ರೀಮಂತರು, ನಾನು ನಮ್ಮ ಜೀವನದ ಬಗ್ಗೆ ಹೇಳಿದಾಗ ಅವರು ನಿನ್ನನ್ನು ಕರೆದು ತರಲು ಹೇಳಿದರು, ಬಾ ಅವರ ಮನೆಗೆ ಕರೆದುಕೊಂಡು
ಹೋಗುತ್ತೇನೆ, ಆದರೆ ನೀನು ಮದುಮಗಳ ವೇಷದಲ್ಲಿ ಬರಬೇಕು" ಎಂದಳು, ಅರ್ಷಿಯಾಳಿಗೆ ಕೋಪ ಬಂದಿತು, ಆಕೆ ತನ್ನ ಮಗಳಿಗೆ ಬೈದಳು, ಮಗಳೂ ಅಷ್ಟೇ ಶಾಂತ ರೀತಿಯಿಂದ ಹೇಳಿದಳು, ""ಅಮ್ಮ ನೀನು ಬಂದರೆ ನಿನಗೆ ಅವರು ಒಂದು ಲಕ್ಷ ರೂಪಾಯಿ ಕೊಡುತ್ತಾರಂತೆ" ಎಂದು ಹೇಳಿದಾಗ ಆಕೆ ಯೋಚಿಸಿದಳು, "ನಮ್ಮ ಬಡತನ ಅದರಿಂದ ದೂರಾಗಬಹುದು ಎಂದಾದರೆ ಹೋಗಲು ಏನೂ ಅಭ್ಯಂತರ ಇಲ್ಲ" ಎಂದು ಯೋಚಿಸಿ ಹೋಗಲು ಒಪ್ಪಿಕೊಂಡಳು.
ಅವರ ಮನೆಗೆ ಹೋದಾಗ ಅರ್ಷಿಯಾ ಅಲ್ಲಿ ಆತನನ್ನು ಕಂಡಳು, ಆಕೆಯನ್ನು ನಿರಾಕರಿಸಿದಾತ, ನೋಮನ್ ಎಂದು ಆತನ ಹೆಸರು, ಆತ ಅರ್ಷಿಯಾಳ ಕೈ ಹಿಡಿದು ಕುಳ್ಳರಿಸಿದ, ಅರ್ಷಿಯಾ ನೋಮನ್ ಗೆ "ನೀನು ಎಲ್ಲಿಗೆ ಹೋಗಿದ್ದೆ, ಯಾಕೆ ಹಾಗೆ ಮಾಡಿದೆ," ಎಂದಾಗ, ನೋಮನ್ ತನ್ನ ಜೀವನದ ಕಥೆಯನ್ನು ಹೇಳಲು ಆರಂಭಿಸಿದ.
"ನಾನು ನಿನಗೆ ಇಷ್ಟ ಪಟ್ಟಿದ್ದೆ, ನಮ್ಮ ತಾಯಿಗೆ ನಿನ್ನ ಬಗ್ಗೆ ಹೇಳಿದಾಗ ಅವರು ಖಂಡಿತಾ ಈ ಮದುವೆ ಸಾಧ್ಯನೇ ಇಲ್ಲ, ನಾನು ಆ ಮನೆಗೆ ಹೆಣ್ಣು ಕೇಳಲು ಹೋಗುವುದಿಲ್ಲ, ನೀನು ಏನಾದರೂ ಆ ಹುಡುಗಿಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿದರೆ ನನ್ನ ಮೃತ್ಯುವನ್ನು ನೋಡುತ್ತೀಯಾ ಎಂದರು, ಅದಕ್ಕೆ ನಾನು ನಿನಗೆ ಅವತ್ತು ಹಾಗೆ ಹೇಳಿದ್ದು, ಮತ್ತೆ ನಿನ್ನ ಮದುವೆ ಆದ ನಂತರ ನಾನು ಊರು ಬಿಟ್ಟೆ, ಇಲ್ಲಿಗೆ ಬಂದೆ", ಎಂದು ಹೇಳಿದ, "ಹಾಗೇ ಇನ್ನೊಂದು ವಿಷಯ ಇದೆ ನಿಮ್ಮ ತಾಯಿಯ ರಹಸ್ಯ" ಎಂದು ಹೇಳಿದಾಗ ಅರ್ಷಿಯಾ "ಏನು?" ಎಂದು ಕೇಳಿದಳು, ಅದಕ್ಕೆ ನೋಮನ್ ಹೇಳಿದ.
" ಒಂದು ದಿನ ನಾನು ನಿಮ್ಮ ತಾಯಿ ಬಚ್ಚಿಟ್ಟುಕೊಂಡು ಹೋಗುತ್ತಿದ್ದುದನ್ನು ನೋಡಿ ಅವರು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ನೋಡಲು ಅವರ ಹಿಂದೆ ಹೋದೆ, ಅವರು ಒಂದು ಮನೆಯ ಒಳಗೆ ಹೋಗುವುದನ್ನು ನೋಡಿ ನನಗೆ ಆಶ್ಚರ್ಯ ಆಯಿತು, ಯಾಕೆಂದರೆ ಅದು ಒಂದು ಹರಕು ಮುರುಕು ಗುಡಿಸಲು, ಅದರಲ್ಲಿ ಯಾರೂ ಇರುವುದಿಲ್ಲ, ನಾನು ಒಳಗೆ ಇಣುಕಿ ಹಾಕಿದಾಗ, ಅಲ್ಲಿ ಒಬ್ಬ ಖೋಜಾ ಕುಳಿತಿದ್ದ, ನಾನು ಅವರು ಆತನ ಹತ್ತಿರ ಮಾತನಾಡುವುದನ್ನು ನೋಡಿದೆ," ಅವರು ಮನೆಯಿಂದ ಹೊರಗೆ ಬಂದು ನನ್ನನ್ನು ಅಲ್ಲಿ ನೋಡಿ ಹೌಹಾರಿದರು, ಅವರು ನನಗೆ ಕೈ ಮುಗಿಯುತ್ತಾ ಹೇಳಿದರು, "ಇದು ನನ್ನ ಮಗ, ನನಗೆ ಹುಟ್ಟಿದ್ದು, ನಾನೇ ಈತನನ್ನು ಬೇರೆಯವರ ಹತ್ತಿರ ಕೊಟ್ಟಿದ್ದೆ, ಅವರು ತುಂಬಾ ಖಾಯಿಲೆಯಲ್ಲಿ ಇದ್ದರು, ಅದಕ್ಕೆ ಈಗ ಈತನನ್ನು ನನ್ನ ಹತ್ತಿರ ಕಳಿಸಿದ್ದಾರೆ, ನಾನು ಮತ್ತೆ ಈತನನ್ನು ಭೇಟಿ ಮಾಡಲು ಬರುವುದಿಲ್ಲ, ಇದೇ ಕೊನೆ ಭೇಟಿ, ನೀನು ಈ ವಿಷಯವನ್ನು
ದಯವಿಟ್ಟು ಯಾರಿಗೂ ಹೇಳಬೇಡ, ಎಂದು ಮಾತು ತೆಗೆದುಕೊಂಡರು, ಎಂದು ಹೇಳಿ ನೋಮನ್ ಅಲ್ಲಿಂದ ಹೋಗಿಬಿಟ್ಟ, ಅರ್ಷಿಯಾ ಮನೆಗೆ ಬಂದಳು.
ಅಷ್ಟರಲ್ಲಿ ಅರ್ಷಿಯಾಳ ಅಮ್ಮನಿಗೆ ಆರಾಮ ಇಲ್ಲ ಎಂದು ತಿಳಿದು ಆಕೆ ಅಮ್ಮನ ಮನೆಗೆ ಹೋದಾಗ ಅರ್ಷಿಯಾಳ ಅಮ್ಮ ಹಾಸಿಗೆಯಲ್ಲಿ ಇದ್ದರು, ನೋಮನ್ ಆಕೆಯ ಜೊತೆಯಲ್ಲಿ ಇದ್ದ, ಆಕೆಯ ಅಮ್ಮ ಅಳುತ್ತಾ ಹೇಳಿದರು, "ನಾನು ಒಂದು ರಹಸ್ಯವನ್ನು ನಿನ್ನಿಂದ ಬಿಚ್ಚಿಟ್ಟಿದ್ದೆ, ನಿನ್ನ ತಮ್ಮನೂ ಇದ್ದ, ಆದರೆ ಆತ ಖೋಜಾ ಆಗಿ ಹುಟ್ಟಿದ್ದ, ಅದಕ್ಕಾಗಿ ನಾನು ಜನರಿಗೆ ಹೆದರಿ ಆತನನ್ನು ಬೇರೆಯವರಿಗೆ ಕೊಟ್ಟುಬಿಟ್ಟಿದ್ದೆ, ನನಗೆ ಕ್ಷಮಿಸು" ಎಂದಳು, ಅಕೆ "ಅಮ್ಮ ಆದದ್ದು ಆಯಿತು, ಈಗ ಆತ ಎಲ್ಲಿದ್ದಾನೆ ಎಂದು ಹೇಳಿದರೆ ನಾನು ಆತನನ್ನು ಕರೆದುಕೊಂಡು ಬಂದು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ" ಎಂದಾಗ, ಆಕೆಯ ಅಮ್ಮ "ಆತ ಈಗ ಇಲ್ಲ ಆತ ಒಂದು ಅಪಘಾತದಲ್ಲಿ ತೀರಿಹೋದ, ನನ್ನ ಮಗನೂ ಹೋದ ಹಾಗೆ ನಿನ್ನ ಮಗನನ್ನೂ ಕಳೆದುಕೊಳ್ಳಬೇಡ, ನಿನ್ನ ಮಗನನ್ನು ಹುಡುಕು", ಎಂದಳು, ಆಕೆ ಆಶ್ಚರ್ಯದಿಂದ ಅಮ್ಮನನ್ನು ನೋಡಿದಳು, ಆಕೆ ಅಮ್ಮನಿಗೂ ಅದನ್ನೇ ಹೇಳಿದ್ದಳು, ಬೇರೆಯವರಿಗೆ ಹೇಳಿದ್ದು, ಆದರೆ ಅಮ್ಮನಿಗೆ ಹೇಗೆ ಗೊತ್ತು, ನನ್ನ ಮಗನೂ ಖೋಜಾ ಎಂದು ಆಕೆ ಯೋಚಿಸಿ ಅಮ್ಮನ ಮುಖ ನೋಡಿದಾಗ ಆಕೆಯ ಅಮ್ಮ ಕಣ್ಣು ಮುಚ್ಚಿದ್ದಳು.
ಆಕೆ ಅಮ್ಮನ ಅಂತ್ಯ ಸಂಸ್ಕಾರ ಮಾಡಿ ಮನೆಗೆ ಬಂದಾಗ, ಮತ್ತೆ ಅರ್ಷಿಯಾಳ ಮಗಳು ತನ್ನ ಸ್ನೇಹಿತೆಯನ್ನು ಭೇಟಿ ಮಾಡಲು ಹಟ ಮಾಡಿದಳು, ಅರ್ಷಿಯಾ ಆಕೆಯ ಹಟಕ್ಕೆ ಮಣಿದು ಮತ್ತೆ ಅಲ್ಲಿಗೆ ಹೋದಾಗ ಅಲ್ಲಿ ಒಬ್ಬ ಸುಂದರ ಹುಡುಗಿಯನ್ನು ನೋಡಿದಳು, ಉದ್ದವಾದ ಕೂದಲು, ಕೂದಲನ್ನು ಎತ್ತಿ ಮೇಲಕ್ಕೆ ಪೋನಿಟೆಲ್ ಕಟ್ಡಿದ್ದಾಳೆ, ಮೊಣಕಾಲಿನವರೆಗೆ ಬರುವ ಟೀ ಷರ್ಟ್, ಮತ್ತು ಲೆಗಿನ್ಸ್ ತೊಟ್ಟಿದ್ದಾಳೆ ಮುಖಕ್ಕೆ ಮೇಕಪ್ ಮಾಡಿಕೊಂಡಿದ್ದಾಳೆ, ತುಟಿಗಳಿಗೆ ಕೆಂಪಗಿನ ಲಿಪಸ್ಟಿಕ್ ಹಾಕಿದ್ದಾಳೆ, ಬಿಳಿಯ ಮೈ ಬಣ್ಣ, ತುಂಬಾ ಸುಂದರ ಹುಡುಗಿ, ಅಲ್ಲಿ ನೋಮನ್ ನೂ ಸಹಾ ಇದ್ದ, ಆ ಹುಡುಗಿ ಆಕೆಗೆ "ನಮಸ್ತೆ" ಎಂದು ಹೇಳಿದಳು, ಆಕೆಗೆ ಆಶ್ಚರ್ಯ ಆಯಿತು, ಯಾಕೆಂದರೆ ಅದು ಗಂಡಸರ ಧ್ವನಿ, ಆಕೆಗೆ ಆಕೆಯ ಮಗಳು ಹೇಳಿದಳು, "ಅಮ್ಮ ಇದು ನಿನ್ನ ಮಗ, ನೀನು ಕಳೆದುಕೊಂಡ ಮಗ, ನನಗೆ ನೋಮನ್ ಅಂಕಲ್ ನಿಂದ ಎಲ್ಲಾ ತಿಳಿಯಿತು" ಎಂದಳು.
ಅರ್ಷಿಯಾ ತುಂಬಾ ಸಂತೋಷಗೊಂಡಳು, ತನ್ನ ಮಗ(ಳ) ಹತ್ತಿರ ಕ್ಷಮೆ ಕೇಳಿದಳು, "ನಮ್ಮ ಮನೆಗೆ ಬಾ" ಎಂದು ಹೇಳಿದಾಗ ಅವನು ( ಅವಳು) ಹೇಳಿದ(ಳು), "ಇಲ್ಲ ನಾನು
ಅಪ್ಪನನ್ನು ಬಿಟ್ಟು ಎಲ್ಲಿಗೂ ಬರುವುದಿಲ್ಲ" ಎಂದು ನೋಮನ್ ಕಡೆ ತೋರಿಸಿದಾಗ ನೋಮನ್ ಮುಗುಳ್ನಗುತ್ತಿದ್ದ.
ನೋಮನ್ ಹೇಳಿದ, "ನನಗೆ ನಿನ್ನ ನೆನಪು ಬಂದು ನಿನ್ನನ್ನು ಹುಡುಕಲು ಬಂದಾಗ ನೀನು ಆಸ್ಪತ್ರೆಗೆ ಹೋಗಿದ್ದೀಯಾ ಎಂದು ಗೊತ್ತಾಯಿತು, ನಾನು ಅಲ್ಲಿಗೆ ಬಂದಾಗ ನೀನು ಆಸ್ಪತ್ರೆಯ ಒಳಗಿನಿಂದ ಮಗುವನ್ನು ತೆಗೆದುಕೊಂಡು ಬಂದು ರಸ್ತೆಯಲ್ಲಿ ಬಿಟ್ಟು ಹೋದಾಗ, ನಾನು ಮೈ ಮರೆತು ನಿನ್ನನ್ನು ನೋಡುತ್ತಲೇ ಇದ್ದುಬಿಟ್ಟೆ, ನೀನು ಯಾಕೆ ಹಾಗೆ ಮಾಡಿದೆ ಎಂದು ಯೋಚಿಸುತ್ತಾ ಇದ್ದೆ, ಅಷ್ಟರಲ್ಲಿ ಒಬ್ಬ ಬಿಕ್ಷುಕ ಆ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದ, ನಾನು ಅಲ್ಲೇ ನಿಂತಿದ್ದೆ, ನೀನು ಮತ್ತೇ ಹೊರಗೆ ಬಂದು ಮಗುವನ್ಬು ನೋಡಿ ಅಳುತ್ತಾ, ಮತ್ತೇ ಆಸ್ಪತ್ರೆಯ ಒಳಗೆ ಹೋದಾಗ ನಾನು ಆ ಬಿಕ್ಷುಕನನ್ನು ಹಿಂಬಾಲಿಸಿ, ಮಗುವನ್ನು ಪಡೆದು ನಾನೇ ಸಾಕಿಕೊಂಡಿದ್ದೆ.
ನಿನ್ನ ಅಮ್ಮನಿಗೂ ಈ ವಿಷಯ ಹೇಳಿದ್ದೆ, ಅವರು ನಿನ್ನ ಗಂಡನಿಗೆ ಈ ವಿಷಯ ತಿಳಿಸಬೇಡಿ, ಆ ಮಗು ಎಲ್ಲಿತ್ತೋ ಅಲ್ಲೇ ಬಿಟ್ಟು ಬನ್ನಿ ಎಂದಾಗ, ನಾನು ಆ ಮಗುವನ್ನು ಮತ್ತೆ ಆ ಬಿಕ್ಷುಕನಿಗೆ ಒಪ್ಪಿಸಲು ಮನಸಾಗದೇ ನಾನೇ ಸಾಕಿದೆ, ಅವಳಿಗೆ ಸಾರಾ ಎಂದು ಹೆಸರನ್ನು ಕೊಟ್ಟೆ, ಅವಳು ಗಂಡಾಗಿ ಬೆಳೆಯಬೇಕು ಅಥವಾ ಹೆಣ್ಣಾಗಿ ಬೆಳೆಯಬೇಕು ಎಂದು ಅವಳ ಮೇಲೆ ನಾನು ಎಂದಿಗೂ ಒತ್ತಾಯ ಹೇರಲಿಲ್ಲ, ನಾನು ಅವಳ ಇಚ್ಛೆಗೆ ಅಡ್ಡಿಪಡಿಸಲಿಲ್ಲ, ಅವಳನ್ನು ಸ್ವಾತಂತ್ರ್ಯದಿಂದ ಬೆಳೆಯಲು ಬಿಟ್ಟೆ, ಅವಳ ಇಚ್ಛೆಯಂತೆ ಓದಿಸುತ್ತಿದ್ದೇನೆ, ಅವಳನ್ನು ಮುಂದೆ ಓದಿಸಿ, ಅವಳು ತನ್ನ ಕಾಲ ಮೇಲೆ ನಿಂತು ಬದುಕನ್ನು ಕಟ್ಟಿಕೊಳ್ಳುವಂತೆ ಮಾಡುತ್ತೇನೆ, ಅವಳು ನನ್ನ ಮಗಳೂ ಹೌದು, ನನ್ನ ಮಗನೂ ಹೌದು, ನಾನು ಆಕೆಯನ್ನು ಅವನೋ ಅವಳೋ ಎಂದು ಎಂದಿಗೂ ಯೋಚಿಸಲೇ ಇಲ್ಲ, ಅವಳು ಅಥವಾ ಅವನು ಏನೇ ಇರಲಿ, ಅದು ನನ್ನ ಮಗು ಅಷ್ಟೇ, ನಾನು ಮದುವೆಯಾದರೆ ನನ್ನ ಸಾರಾಳನ್ನು ಬೇರೆಯವರು ಹೇಗೆ ನೋಡಿಕೊಳ್ಳುತ್ತಾರೋ, ಹಾಗಾದರೆ ಆಕೆಗೆ ಯಾರಿಂದಲೂ ತೊಂದರೆ ಆಗಬಾರದು, ಯಾಕೆಂದರೆ ನನಗೆ ಸಾರಾ ನನ್ನ ಮಗು, ಆದರೆ ಬೇರೆಯವರು ಹಾಗೆ ಯೋಚಿಸುತ್ತಾರೆಯೇ ?, ಅದಕ್ಕೆ ನಾನು ಮದುವೆಯಾಗಲಿಲ್ಲ, ನನ್ನ ಇಡೀ ಜೀವನ ನನ್ನ ಸಾರಳ ಬೆಳವಣಿಗೆಗಾಗಿ ಮುಡುಪಾಗಿಟ್ಟಿದ್ದೇನೆ, ಅದಕ್ಕೆ ನಾನು ಆಕೆಯನ್ನು ಚೆನ್ನಾಗಿ ಓದಿಸಿ, ಆಕೆ ತನ್ನ ಜೀವನದಲ್ಲಿ ಮುಂದೆ ಯಾರಿಗೂ ಭಾರವಾಗದೇ ತನ್ನ ಕಾಲ ಮೇಲೆ ನಿಂತು, ತನ್ನ ಜೀವನ ಸಾಗಿಸಲಿ, ಗಂಡು ಹೆಣ್ಣು ಎಂಬ ಭೇದವಿಲ್ಲದೇ, ಅವಳೋ?, ಅವನೋ? ಎಂದು ಪ್ರಶ್ನಾತೀತಳಾಗದೇ ಆಕೆ ಸಾಧನೆಯನ್ನು ಮಾಡಿ ಬೆಳೆಯಬೇಕು ಎಂದು ನನ್ನ ಆಸೆ.
ಅದು ಬಿಡು, ಅರ್ಷಿಯಾ, ಈಗ ನಿನ್ನ ಜೀವನ ಹೇಗೆ ಇದೆ, ಅದನ್ನು ಹೇಳು, ನಾನು ನಿನ್ನ ಗಂಡ ತೀರಿಕೊಂಡಿದ್ದು, ನೀನು ಮಕ್ಕಳನ್ನು ಸಾಕಲು ಕಷ್ಟ ಪಡುತ್ತಿದ್ದುದನನ್ನು ನೋಡಿದೆ, ನಿನ್ನ ಮಗಳು ನನ್ನ ಸಾರಾಳ ಗೆಳತಿ, ಆಕೆ ಓದುತ್ತಿರುವ ಕಾಲೇಜಿನಲ್ಲೇ ಓದುತ್ತಿದ್ದಾಳೆ ಎಂದು ತಿಳಿದು ನನಗೆ ತುಂಬಾ ಸಂತೋಷವಾಗಿ ನಿನಗೆ ಭೇಟಿ ಮಾಡಲು ಈ ಪ್ಲಾನ್ ಮಾಡಿದೆ" ಎಂದು ಹೇಳಿದ, ಆಕೆ ಆತನಿಗೆ ತನ್ನ ಜೀವನದ ಬಗ್ಗೆ ಹೇಳುತ್ತಾ ತನ್ನ ಮಗಳನ್ನು ಸಾಕಿದ್ದಕ್ಕೆ ಆತನಿಗೆ ಧನ್ಯವಾದಗಳನ್ನು ಹೇಳಿದಳು.
ಅರ್ಷಿಯಾ ತನ್ನ ಮನೆಗೆ ಬಂದುಬಿಟ್ಟಳು, ಆಗಾಗ ಆಕೆಯ ಮಗ(ಳು) ಸಾರಾ ಮತ್ತು ನೋಮನ್ ಅವರ ಮನೆಗೆ ಬರುತ್ತಿದ್ದರು, ಅವರು ಸಹಾ ಅವರ ಮನೆಗೆ ಹೋಗುತ್ತಿದ್ದರು, ಹೀಗೆ ಕೆಲವು ದಿನ ಸರಿದಾಗ ನೋಮನ್ ಆಕೆಯ ಹತ್ತಿರ ಮದುವೆಯ ಪ್ರಸ್ತಾಪ ಇಟ್ಟ, ಆಕೆ ತಿರಸ್ಕರಿಸಿದಳು, "ಇಷ್ಟು ದೊಡ್ಡ ಮಕ್ಕಳ ಎದುರಿಗೆ ಮದುವೆಯೇ?" ಎಂದು ಆಕೆ ಹೇಳಿದಾಗ, ಮಕ್ಳಳೇ ಹೇಳಿದರು, "ಅಮ್ಮ ನಿನಗೂ ಜೀವನದಲ್ಲಿ ಸಂತೋಷದಿಂದ ಇರುವ ಹಕ್ಕು ಇದೆ, ನೀನು ಮದುವೆ ಆಗಲೇಬೇಕು" ಎಂದರು.
- ನೂರ್ ಜಹಾನ್, ಹೊಸಪೇಟೆ