Poem

ಪುರುಷ ಸಬಲೀಕರಣ

ಅವಳ ದೇಹದ ಉಬ್ಬು ತಗ್ಗುಗಳು ನಿನಗೆ ಆಹ್ವಾನಪತ್ರಿಕೆಯಲ್ಲ.
ಇದು ಪ್ರಕೃತಿದತ್ತ ಅದ್ಬುತ ವಿನ್ಯಾಸ.
ನಿನ್ನ ಸೆಳೆಯಲೆಂದು ಅವಳು ರೂಪಿಸಿರುವುದಲ್ಲ.
ಅವಳಿಗೆ ಇನ್ನಷ್ಟು ಮುಚ್ಚಿಕೊಳ್ಳುವ ಪುಕ್ಕಟೆ ಸಲಹೆ ನೀಡುವ ಬದಲಾಗಿ,
ನಿನ್ನ ಕಾಮಾಲೆ ಕಣ್ಣಿನ ದೃಷ್ಟಿ ಸ್ವಲ್ಪ ಶುದ್ದೀಕರಿಸಿಕೊ.

ಅವಳ ದೇಹ ಪ್ರಚೋದನೆಯೆನಿಸುವುದು ನಿನ್ನ ವೈಯಕ್ತಿಕ ಸಮಸ್ಯೆ,
ಪರಿಹಾರವೂ ನಿನ್ನದೇ. ಸಂಯಮ ಬೆಳೆಸಿಕೊಂಡರೆ ನಿನಗೂ ಹಿತ.
ಮೀ-ಟೂ ಪ್ರಭಲವಾಗುತ್ತಿದೆ. ಸ್ವಅರಿವು ಹೆಣ್ಣನ್ನು ಎಚ್ಚರಿಸುತ್ತಿದೆ.
ಸುಧಾರಿಸಿಕೊಳ್ಳುವುದು ಬಹಳಷ್ಟಿದೆ. ಬದಲಾದರೆ ನಿನಗೇನೆ ಕ್ಷೇಮ.
ಇಲ್ಲವಾದಲ್ಲಿ ನೀನೆ ಮುಖ ಮುಚ್ಚಿ ಕೊಳ್ಳಬೇಕಾದೀತು.

ಹೆಣ್ಣನ್ನು ಬರಿ ದೇಹಕ್ಕೆ ಸೀಮಿತಗೊಳಿಸಿ, ಅರ್ಥೈಸುವ ಪರಿಭಾಷೆ
ಜಾಣ ಪುರುಷನ ಹಲವಾರು ತಲೆಮಾರುಗಳ ಬಳುವಳಿ.
ವರ್ತಮಾನದ ಸಮಾನತೆಯ ಅರಿವು, ಬದಲಾವಣೆ ಕೇಳುತ್ತದೆ.
ಇತಿಹಾಸದ ಸುಖದಿಂದ ಎಚ್ಚರಗೊಳ್ಳುವುದು ಸುಲಭವಲ್ಲ,
ಅನುಕೂಲಸಿಂಧುವಂತು ನಿಜ, ಮಾರ್ಪಾಡು ಅಸಾಧ್ಯವೇನಲ್ಲ.

ಹೆಣ್ಣೆಂದರೆ ಕೇವಲ ದೇಹವಲ್ಲ, ನಿನ್ನಂತೆ ದೇಹ-ಮನಸ್ಸುಗಳ ಸಮ್ಮಿಲನ.
ಆ ಮನಸ್ಸಿನಲ್ಲಿ ಆಸೆಗಳಿವೆ, ಕನಸ್ಸುಗಳಿವೆ, ಬದುಕಿನ ರೂಪು ರೇಷೆಗಳ ಲೆಕ್ಕಾಚಾರವಿದೆ.
ಅವುಗಳ ಗೋರಿಯ ಮೇಲೆ ನಿನ್ನ ಸಾಮ್ರಾಜ್ಯ ಕಟ್ಟಬೇಡ.
ಅಜ್ಞಾನದಲ್ಲಿಟ್ಟು ಮುಸಿನಗುವುದ ಬಿಟ್ಟು ಕೈಹಿಡಿದು ಹೊರಗೆ ಜೊತೆಯಾಗು.
ಈ ಸೂಕ್ಷ್ಮಗಳ ಅರಿವು ನಿನಗಾಗದಿದ್ದರೆ, ನೀನು ದಡ್ಡನೇ ಸರಿ.

ಸಾಕಿನ್ನು, ಶತಮಾನಗಳ ಒಣ ಪ್ರತಿಷ್ಠೆ.
ಸರಿಯಾಗಿ ಬದುಕುವುದೆಂದರೆ ಅವಳ ರೀತಿ.
ಅವಳಂತೆ ಸಂಯಮ ಮೈಗೂಡಿಸಿಕೊಂಡು ಬದುಕುವುದ ಕಲಿ.
ನೀನು ಅವಳ ಸಮನಾದರೆ, ಅದೇ ನಿನ್ನ ಸಬಲೀಕರಣ.
ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಮನೆ ಒಪ್ಪವಾಗಿಡುವುದು...

-ಜ್ಯೋತಿ ತುಮಕೂರು

ಜ್ಯೋತಿ ಎಸ್

ಜ್ಯೋತಿ ತುಮಕೂರು ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾದ್ಯಾಪಕರಾಗಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ಓದು ಅವರ ಆಸಕ್ತಿಯ ವಿಚಾರವಾಗಿದೆ.

More About Author