ಇದ್ದಿಲಂಗಡಿ ಕೆಲಸದ ಪೆಂಟಯ್ಯನಿಗೆ
ಇದ್ದುದು ಒಂದೇ ಒಂದು ಅಂಗಿ. ಗಿರಾಕಿಗಳ ಮನೆಗೆ
ಇದ್ದಿಲು ಸಪ್ಲೈ ಮಾಡುವಾಗಲೂ ರಾತ್ರಿ
ನಿದ್ದೆ ಮಾಡುವಾಗಲೂ, ಪೇಟೆಕಡೆ ಹೋಗುವಾಗಲೂ
ಇದೇ ಅಂಗಿ. ಮೂಸಿನದಿಯ ಕೊಚ್ಚೆಯಲ್ಲಿ
ಅದ್ದಿ ತೆಗೆದಂಥ ಬಣ್ಣ, ಇದರಿಂದ
ಬೇಸರಗೊಂಡ ಪೆಂಟಯ್ಯ ಕಾಸಿಗೆ
ಕಾಸು ಸೇರಿಸಿ ಖರೀದಿಸಿದ ಅನೇಕದಿನಗಳ ತನ್ನ
ಆಸೆಯಂತೆ ಒಂದು ಹೊಚ್ಚಹೊಸ ಅಂಗಿ. ಎಂದೋ
ಹೋಗಬೇಕೆಂದಿದ್ದ ಅಡವಿರಾಮುಡು ಚಿತ್ರಕ್ಕೆ ಈ ಸಂಜೆಯೆ
ಹೋಗಿಬಿಡುವುದು ಎಂದುಕೊಂಡ-ಪೋಲೀಸು ಪಠೇಲನ ಮನೆಗೆ
ಅರ್ಜೆಂಟಾಗಿ ಬೇಕಾಗಿದ್ದ ಇದ್ದಿಲ ಸಂಗತಿಯನ್ನು ಮರೆತು.
ಗರಿಗರೀ ಬಿಳಿ ಅಂಗಿ. ಮುಟ್ಟಿದರೆ ಎಲ್ಲಿ
ಮುರಿಯುತ್ತದೋ, ತೊಟ್ಟರೆ ಎಲ್ಲಿ ಇಸ್ತ್ರಿಯ ಗೆರೆಗಳು
ಮಾಯುತ್ತವೋ ಎಂದುಕೊಂಡೇ ಹಾಕಿ ಹೊರಟಿದ್ದ.
ಇದ್ದಿಲಂಗಡಿಗೂ ತನಗೂ ಏನೇನೂ ಸಂಬಂಧವಿಲ್ಲದಂತೆ
ಇದ್ದಿಲಂಗಡಿಯ ಪಕ್ಕದಲ್ಲೇ ನಡೆದು ಹೋದ. ಇನ್ನೇನು ಗೆದ್ದೆ-
ನೆನ್ನುವಷ್ಟರಲ್ಲಿ ಎದುರಾದ್ದು ಮತ್ತಾರು ಅಲ್ಲ ಪೋಲಿಸ್‌ಪಠೇಲ!
ಅಂದಿನಿಂದ-ಅಂದಿನಿಂದ ಯಾತಕ್ಕೆ, ಆ ಕ್ಷಣ.
ದಿಂದ ಪೆಂಟಯ್ಯನ ಬಳಿ ಅಂಗಿ
ಎಂದೂ ಬಿಳಿಯಂಗಿಯಾಗಿರಲಿಲ್ಲ.
- ಕೆ.ವಿ. ತಿರುಮಲೇಶ
ವಿಡಿಯೋ
ವಿಡಿಯೋ
ಕೆ.ವಿ. ತಿರುಮಲೇಶ್
ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ಅವರ ತಮ್ಮ ಕಾವ್ಯಕ್ಕೆ ಹಲವು ಪರಂಪರೆಗಳಿಂದ ತಾತ್ವಿಕತೆ, ಅನುಭವ ಮತ್ತು ಪ್ರತಿಮೆಗಳನ್ನು ತಂದಿದ್ದಾರೆ. ಶಬ್ದಗಳನ್ನು ಸಾಧ್ಯವಾದಷ್ಟೂ ನಿರಾಭರಣಗೊಳಿಸಿ ಬಳಲೆತ್ನಿಸಿದ ಎ.ಕೆ. ರಾಮಾನುಜನ್ ತರಹದ ಕನ್ನಡ ಕವಿಗಳ ಜೊತೆಗೆ ತಿರುಮಲೇಶ್ ಕೂಡ ಇದ್ದರು.
ನಾಯಕ ಮತ್ತು ಇತರರು, ಜಾಗುವ ಮತ್ತು ಇತರರು, ಕೆಲವು ಕಥಾನಕಗಳು, ಕಳ್ಳಿಗಿಡದ ಹೂ ಕಥಾಸಂಕಲನಗಳು. ಆರೋಪ, ಅನೇಕ, ತರಂಗಾಂತರ ಕಾದಂಬರಿಗಳು. ವ್ಯಕ್ತಿ ಮತ್ತು ಪರಂಪರೆಗಳು, ಸಮ್ಮುಖ, ನಮ್ಮ ಕನ್ನಡ, ಅಸ್ತಿತ್ವವಾದ, ವಿಮರ್ಶಾ ಬರಹಗಳು. ತಿರುಮಲೇಶ್ ಅವರ ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಮಕ್ಕಳ ಸಾಹಿತ್ಯ ರಚನೆ ಮಾಡಿರುವ ತಿರುಮಲೇಶ್ ಅವರು ಎಜ್ರಾ ಪೌಂಡ್, ಚೀನಿ ಕವಿತೆಗಳನ್ನು ಅನುವಾದಿಸಿದ್ದಾರೆ. ತಿರುಮಲೇಶ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ --ಪ್ರಶಸ್ತಿ ಸಂದಿದೆ.