Poem

ಪರದೆ ಸರಿದಂತೆ

ತಣ್ಣಗೆ ನಡೆದಿದೆ
ದೃಶ್ಯಗಳ ಆವಲೋಕನ
ಒಂದೊಂದೇ ಪರದೆ ಸರಿದಂತೆ
ಆಗೀಗ ಮೂಡುವ ಅಮ್ಮನ
ಮಬ್ಬು ಬೆಳಕಿನ ಚಿಂತನಾ ಪರಿ
ಪ್ರಸ್ತುತ ಸಹಜೀವನದ ಮಾದರಿ
ಆಕೆಯ ಜಗತ್ತೆ ನಿರಾಡಂಬರ
ನಿರಹಂಕಾರ ಆಳ ಕಣಿವೆಯ ಪ್ರಪಾತ
ಭೂತದ ಹಳಹಳಿಕೆಯಾಗಲಿ
ಸವಿ ಬುತ್ತಿಯ ಸಂವಹನವಾಗಲಿ
ಸಮಚಿತ್ತದಲ್ಲೆ ನಡೆಯುವಂಥ
ಕಥನ-
ಹದವರಿತ ಅಂತರಗಂಗೆ
ಯಾತನೆಯ ದಿಗಿಲು ಕಣಕಣದೊಳಗೆ
ಹೆಪ್ಪುಗಟ್ಟಿಕೊಂಡೆ ಮಿಸುಕಾಡದಂತ
ತಪ್ಪ ನೆರಳು;
‘ಹೊಕ್ಕುಳ ಬಳ್ಳಿ ಬಿಡಿಸಿಕೊಂಡಾಗ
ಜ್ವಾಲೆಗಳ ಯಮಯಾತನೆಯ’
ಮೌನದ ಆ ಕಣ್ಣುಗಳೊಳಗೆ
ಅಸ್ಮಿತ ನೋಟ
ಬೆಂದ ಬಸರಿನ ಗಾಯ
ತೆರೆಸರಿದ ಪ್ರದರ್ಶನದೊಳಗಿನ
ಬಯಲು ಬಯಲೆ

-ರಜಿಯಾ ಡಿ.ಬಿ

ಡಿ. ಬಿ. ರಜಿಯಾ

ಡಿ. ಬಿ. ರಜಿಯಾ  ಮೂಲತಃ ಬಳ್ಳಾರಿ ಜಿಲ್ಲೆಯ ಹಿರೇಕಾಳಿನವರು. 1954 ಜನವರಿ 26ರಂದು ಜನನ. ತಂದೆ ಹೆಚ್. ಇಬ್ರಾಹಿಂ,  ತಾಯಿ ಸಕೀನಾ ಬೇಗಂ. ‘ಛಾಯೆ, ಕಳೆದು ಹೋಗುತ್ತೇವೆ, ಋತು’ ಎಂಬ ಹನಿಗವನಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.

‘ವಾಸ್ತವದ ಕನವರಿಕೆ’ ಅವರ ಕಥಾ ಸಂಕಲನವಾಗಿದೆ. ಅವರಿಗೆ ಡಾ. ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಬಹುಮಾನ, ಕರಾವಳಿ ಲೇಖಕಿಯರು ವಾಚಕಿಯರ ಸಂಘದ ಕೃಷ್ಣಬಾಯಿ ದತ್ತಿ ಬಹುಮಾನ, ಅಮ್ಮ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗಡೆ ಬಹುಮಾನ , ಹರಿಹರಶ್ರೀ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

More About Author