ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತಮ್ಮದೇ ಛಾಪುಮೂಡಿಸಿರುವ ಉದಯ್ ಕುಮಾರ್ ಹಬ್ಬು ಅವರ ಪಾಲು ಕತೆ ನಿಮ್ಮ ಓದಿಗಾಗಿ
ಕಳೆದ ಮೂರು ದಿನಗಳಿಂದ ಕುಂಭದ್ರೋಣ ಮಳೆ ಬೀದ್ದು ಇಡಿ ಪ್ರದೇಶ ಜಲಾವ್ರತವಾಗಿತ್ತು. ಚರಂಡಿಯ ನೀರೆಲ್ಲ ರಸ್ತೆಯ ಮೇಲೆ ಹರಿದು ನೆರೆಯಲ್ಲಿ ಎಷ್ಟೊ ಎಷ್ಟೋ ವಾಹನಳು ತೇಲಿ ಹೋಗಿದ್ದವು. ಅಂತಹ ಮಳೆಯಲ್ಲಿ ವನಿತಾ ಆಸ್ಪತ್ರೆಯ ಮೆಟ್ಟಿಲುಗಳನ್ನು ಇಳಿಯುತ್ತಿದ್ದಳು. ರಾತ್ರಿಯಿಡಿ ನಿದ್ದೆಗೆಟ್ಟುದುದರಿಂದ ತಲೆ ಸಣ್ಣಗೆ ನೋಯುತ್ತಿತ್ತು. ಹೊಟ್ಟೆ ತೊಳಸಿ ಬಂದಂತಾಗಿತ್ತು. ಗಂಡನ ಸ್ಥಿತಿ ಚಿಂತಾಜನಕವಾಗಿತ್ತು. ಮೊದ ಮೊದಲು ಹಸಿವೆಯಿಲ್ಲ, ಊಟ ಸೇರುವುದಿಲ್ಲ ಎಂದು ಹೇಳುತ್ತಿದ್ದ. ಗ್ಯಾಸ್ಟಿಕ್ ತೊಂದರೆ ಎಂದು ಸ್ಥಳೀಯ ಡಾಕ್ಟರಲ್ಲಿ ತೋರಿಸಲಾಗಿ ಅವರು ಒಂದು ವಾರ ಔಷಧ ಗುಳಿಗೆಯನ್ನು ಕೊಟ್ಟರು. ಒಂದು ವಾರವಾದರೂ ಗುಣವಾಗದಾಗ ಡಾಕ್ಟರು ಹೇಳಿದ್ದರು.ʻʻನೀವು ದೊಡ್ಡ ಆಸ್ಪತ್ರೆಗೆ ಹೋಗಿ ತೋರಿಸಿ ಎಂದಿದ್ದರು. ದೊಡ್ಡ ಆಸ್ಪತ್ರೆ ಎಂದ ಕೂಡಲೆ ವನಿತಾಳ ಜಂಗಾಬಲವೇ ಉಡುಗಿ ಹೋಯಿತು. ದೊಡ್ಡ ಆಸ್ಪತ್ರೆಗೆ ಗಂಡನನ್ನು ಸೇರಿಸುವಷ್ಟು ಹಣವಂತರು ಅವರಲ್ಲ. ಅವಳು ಒಂದು ಗಾರ್ಮೆಂಟ್ ಕಂಪನಿಯಲ್ಲಿ ಓರ್ವ ಕೆಲಸದವಳು. ಗಂಡ ಒಂದು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಅವರ ಸಂಪಾದನೆ ದಿನ ನಿತ್ಯದ ಖರ್ಚಿಗೆ ಸಾಕಾಗುವಷ್ಟು ಮಾತ್ರ. ಇಬ್ಬರು ಪುಟ್ಟ ಪುಟ್ಟ ಮಕ್ಕಳು. ಚಿನ್ಮಯಿ ಮತ್ತು ತನ್ಮಯ. ಅವರಿಬ್ಬರನ್ನೂ ಇಂಗ್ಲಿಷ್ ಮೀಡಿಯಮ್ ಶಾಲೆಗೆ ಸೇರಿಸಲಾಗಿತ್ತು. ಅವರ ವಠಾರದಲ್ಲಿ ಎಲ್ಲ ಬಗೆಯ ಜನರು ವಾಸವಾಗಿದ್ದರು. ಅದು ಇಂದಿರಾ ನಿವಾಸ್ ಯೋಜನೆಯಲ್ಲಿ ಅವರಿಗೆ ಸಿಕ್ಕ ಒಂದು ಪುಟ್ಟ ಮನೆಯಾಗಿತ್ತು. ಆ ವಠಾರದಲ್ಲಿ ದಿನಗೂಲಿಯವರು, ಹಮಾಲರು, ತರಕಾರಿಗಳನ್ನು ಗಾಡಿಯ ಮೇಲೆ ತಳ್ಳಿಕೊಂಡು ಬೀದಿ ಬೀದಿ ಅಲೆದು ವ್ಯಾಪಾರ ಮಾಡುವವರು, ಹಣ್ಣುಗಳನ್ನು ಗಾಡಿಯ ಮೇಲೆ ತಳ್ಳಿಕೊಂಡು ವ್ಯಾಪಾರ ಮಾಡುವವರು, ಬಟ್ಟೆ ಹೊಲಿಯುವ ದರ್ಜಿಯವರು ವಾಸಿಸುತ್ತಿದ್ದರು. ಅಷ್ಟು ಇಷ್ಟು ಸಂಪಾದನೆ ಮಾಡಿ ಜೀವಿಸುವವರು. ಅಷ್ಟು ಕಡಿಮೆ ಸಂಪಾದನೆ ಇದ್ದರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಿದ್ದರು. ವಠಾರದ ಎಲ್ಲರಂತೆ ವನಿತಾ ಕೂಡ ತನ್ನ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೇ ಸೇರಿಸಿದ್ದಳು.
ಅವಳ ತಂದೆ ನಾಗಪ್ಪ ಒಂದು ಸರಕಾರಿ ಪ್ರಾಥಮಿಕ ಶಾಲೆಯ ಅಧ್ಯಾಪಕ. ನಿವೃತ್ತರಾದ ಮೇಲೆ ಬಂದ ಹಣದಿಂದ ಒಂದು ಮನೆಯನ್ನು ಕಟ್ಟಿಸಿದ್ದರು. ಹಿರಿಯರಿಂದ ಬಂದ ಒಂದು ಎಕರೆ ಗದ್ದೆ ಇತ್ತು. ಇಷ್ಟೆಲ್ಲ ತಿಳಿದ ತಂದೆ ಒಬ್ಬ ಮದುವೆಯ ದಲ್ಲಾಳಿಯ ಮಾತಿಗೆ ಮರುಳಾಗಿ ಈ ಬಡ ಗಂಡನಿಗೆ ಮದುವೆ ಮಾಡಿಕೊಟ್ಟಿದ್ದರು. ಗಂಡ ಸ್ವಭಾವದಲ್ಲಿ ಒಳ್ಳೆಯವನೆ. ಆದರೆ ಕಡುಬಡತನ. ವನಿತಾ ಸ್ವಾಭಿಮಾನದ ಹೆಣ್ಣು ಕಷ್ಟ ಬಂದರೂ ಸಹಿಸಿಕೊಂಡು ತಂದೆ ತಾಯಿಗೆ ತಿಳಿಸದೆ ಮರ್ಯಾದೆಯಿಂದ ಬದುಕನ್ನು ಸಾಗಿಸುತ್ತಿದ್ದಳು ಆದರೆ ವಿಧಿಯಾಟದ ಮುಂದೆ ಯಾರೇನು ಮಾಡಲು ಸಾಧ್ಯ?
ವನಿತಾ ಗಂಡನ ಮನೆಯಲ್ಲಿ ಸುಖವಾಗಿ ಏನೂ ಇರಲಿಲ್ಲ. ತವರು ಮನೆಯಲ್ಲಿ ಸುಖವಿತ್ತು ಕಷ್ಟದ ಬದುಕು ಇಲ್ಲಿಯದಾಯಿತು. ಆದರೆ ವನಿತಾ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಪಕ್ಕದ ದರ್ಜೆಯವನ ಹತ್ತಿರ ಹೋಗಿ ಹೊಲಿಗೆಯನ್ನು ಕಲಿತಳು. ಮತ್ತು ಸ್ವತಃ ಮಷಿನ್ ಖರೀದಿಸಲು ಹಣವಿಲ್ಲದೆ ಗಾರ್ಮೆಂಟ್ ಕಂಪನಿಗೆ ಸೇರಿದಳು. ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದಳು. ಅದರೆ ಅವಳ ಶ್ರಮಕ್ಕೆ ತಕ್ಕ ಹಾಗೆ ಸಂಬಳ ಸಿಕ್ಕುತ್ತಿರಲಿಲ್ಲ. ಅದಲ್ಲದೆ ಕಾಮುಕ ಗಂಡಸರ ಕಿರುಕಳ ಬೇರೆ. ಆದರೆ ಹೊಟ್ಟೆಪಾಡಿಗಾಗಿ ಇವೆಲ್ಲವನ್ನೂ ಸಹಿಸಬೇಕಾಯಿತು. ಗಾರ್ಮೆಂಟ್ ಕಂಪನಿಯ ಮಾಲಿಕರಿಂದ ಸಾಲ ಪಡೆದು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಿದ್ದಳು. ಸರಕಾರಿ ಅಸ್ಪತ್ರೆಗೆ ಗಂಡನನ್ನು ಕರೆದುಕೊಂಡು ಹೋದಳು. ಅಲ್ಲಿ ವೈದ್ಯರು ಸರಿಯಾಗಿ ಬರುತ್ತಿರಲಿಲ್ಲ. ಅಲ್ಲಿ ಗಂಡನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿತ್ತು. ಅಲ್ಲಿನ ನರ್ಸ್ ಹೇಳಿದಳು:ʻʻಇಲ್ಲಿ ನಿಮಗೆ ಚಿಕಿತ್ಸೆ ಕೊಡಲು ವೈದ್ಯರು ಸರಿಕಟ್ಟಾಗಿ ಬರುತ್ತಿಲ್ಲ. ನೀವು ಖಾಸಗಿ ಆಸ್ಪತ್ರೆಗೆ ಹೋಗಿ ಎಂದಿದ್ದರು. ಖಾಸಗಿ ಆಸ್ಪತ್ರೆಗೆ ಸೇರಿಸುವಷ್ಟು ಹಣವನ್ನು ತರಬೇಕು ಎಲ್ಲಿಂದ? ಮದುವೆಯ ಸಮಯದಲ್ಲಿ ಅಪ್ಪ ಕೊಟ್ಟ ಸ್ವಲ್ಪ ಚಿನ್ನವಿತ್ತು. ಅದನ್ನು ಮಾರಿದಳು. ಸಿಕ್ಕ ಹಣ ಆಸ್ಪತ್ರೆಗೆ ಸೇರಿಸಲು ಸಾಕಾಯಿತು. ವಿವಿಧ ಪರೀಕ್ಷೆಗಳನ್ನು ಮಾಡಿದರು. ಹೊಟ್ಟೆಯಲ್ಲಿ ಒಂದು ಗಡ್ಡೆ ಬೆಳೆದಿದೆ. ಅದನ್ನು ತೆಗೆಯದಿದ್ದರೆ ನಿನ್ನ ಗಂಡನ ಜೀವಕ್ಕೆ ಅಪಾಯ. ಏನು ಮಾಡ್ತೀರಾ? ಗಡ್ಡೆಯನ್ನು ತೆಗೆಯಲು 50.000 ರೂಪಾಯಿ ಬೇಕು ಎಂದರು. ವನಿತಾ ಅಲ್ಲಿಗೆ ಕುಸಿದುಬಿದ್ದಳು. ಅಷ್ಟೊಂದು ಹಣ ಎಲ್ಲಿಂದ ತರುವುದು? ಕತ್ತಲು ಕವಿಯಿತು. ಹೊರಗೂ ಮೋಡ ಕವಿದು ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಮತ್ತು ಹೊರಗಿನಿಂದ ನಗರ ಪಾಲಿಕೆಯವರು ಮೈಕಿನಲ್ಲಿ ಘೋಷಿಸುತ್ತಿದ್ದರು. ʻತುಂಗಭದ್ರ ನದಿ ಉಕ್ಕಿ ಹರಿಯುತ್ತಿದೆ. ಯಾರೂ ಮನೆಯಿಂದ ಹೊರಗೆ ಬರಬೇಡಿ. ʼ ಎಂದು ಬೊಬ್ಬೆ ಹೊಡೆಯುತ್ತಿದ್ದರು. ವನಿತಾಳಿಗೆ ಮಕ್ಕಳ ಚಿಂತೆ. ಮನೆಯಿಂದ ಹೊರಡುವಾಗ ಮಕ್ಕಳಿಗೆ ಅಡುಗೆ ಮಾಡಿಟ್ಟು ʻʻಮಕ್ಕಳೆ ಹಸಿವಾದಾಗ ಬಡಿಸಿಕೊಂಡು ಉಣ್ಣಿʼ ಎಂದು ಬಂದಿದ್ದಳು. ಈಗ ಈ ನೆರೆಯಲ್ಲಿ ನಮ್ಮ ವಠಾರದ ಮನೆಗಳ ಗತಿಯೇನು? ನೆರೆಬಂದು ಮನೆಯೊಳಗೆ ನುಗ್ಗಿದರೆ ಮಕ್ಕಳ ಗತಿಯೇನು? ದೇವರೆ! ಎಂದು ಆಸ್ಪತ್ರೆ ಮೆಟ್ಟಿಲುಗಳ ಮೇಲೆ ಕುಸಿದು ಕುಳಿತಳು. ಮಕ್ಕಳು ನೆರೆಯಲ್ಲಿ ತೇಲಿಹೋದಂತೆ ಅವಳಿಗೆ ಭಾಸವಾಗುತ್ತಿದೆ. ಏನು ಮಾಡಲಿ? ಯಾರನ್ನು ಕೇಳಲಿ? ಹತ್ತಿರ ಆಸ್ಪತ್ರೆಯ ಒಳಗೆ ಹೋಗುತ್ತಿದ್ದರನ್ನು ಕೇಳಿದಳುʻʻಇಂದಿರಾ ನಿವಾಸದ ವಿಷಯವೇನಾದರೂ ಗೊತ್ತೆ?ʼ ಯಾರೂ ಅವಳ ಪ್ರಶ್ನೆಗೆ ಉತ್ತಿರಿಸುವವರಿಲ್ಲ. ಎಲ್ಲರೂ ತಮ್ಮ ತಮ್ಮದೆ ಚಿಂತೆಯ ಕಾರ್ಮೋಡದಲ್ಲಿ ಮುಳುಗಿಬಿಟ್ಟಿದ್ದಾರೆ. ಎಲ್ಲರೂ ಒದ್ದೆಯಾಗಿಬಿಟ್ಟಿದ್ದಾರೆ. ಯಾರಿಗೂ ಯಾರನ್ನೂ ಮಾತಾಡಿಸುವ ಸಹನೆ ಇಲ್ಲವಾಗಿದೆ.
ಮಳೆ ಮಧ್ಯರಾತ್ರಿಯವರೆಗೂ ನಿಲ್ಲಲಿಲ್ಲ. ಮತ್ತೆ ನಿಂತಾಗ ಮನೆಯ ಕಡೆ ಹೊರಟಳು. ಅದರೆ ರಸ್ತೆಯಿಡಿ ನೀರಿನಿಂದ ತುಂಬಿ ಹೋಗಿದ್ದರಿಂದ ಆ ರಾತ್ರಿ ಆಸ್ಪತ್ರೆಯ ವಠಾರದಲ್ಲಿಯೆ ಕಳೆದಳು. ಇಡಿ ರಾತ್ರಿ ಕುಳಿತೆ ಬೆಳಗು ಮಾಡಿದಳು. ಬೆಳಗಾಗುವಾಗ ಅವಳು ಮಳೆ ಕಡಿಮೆಯಾದ್ದರಿಂದ ಮನೆಯ ಕಡೆ ಹೊರಟಳು. ಮನೆಯಿರುವ ಜಾಗದಲ್ಲಿ ಮನೆಯೆಲ್ಲ ಕುಸಿದು ನೆಲಕಚ್ಚಿವೆ. ಮಕ್ಕಳು ಹೋದರೆಲ್ಲಿ? ಅಲ್ಲಿ ಕೇಳಲು ಯಾವ ಜನರೂ ಇರಲಿಲ್ಲ. ದೂರದಿಂದ ಅವರ ಪಕ್ಕದ ಮನೆಯಲ್ಲಿದ್ದ ದರ್ಜಿ ಇವಳನ್ನು ಕಂಡು ಹೇಳಿದ:ʻʻಎಲ್ಲರೂ ಸರಕಾರಿ ಶಾಲೆಯಲ್ಲಿದ್ದ ಗಂಜಿಕೇಂದ್ರಕ್ಕೆ ಹೋಗಿದ್ದಾರೆ. ನಿನ್ನ ಮಕ್ಕಳನ್ನು ನಾನು ರಾತ್ರಿ ಅಲ್ಲಿಗೆ ಕರೆದುಕೊಂಡು ಹೋದೆ ರಕ್ಷಣಾದಳದವರು ದೋಣಿಯಿಂದ ನಮ್ಮನ್ನೆಲ್ಲ ಪಾರು ಮಾಡಿದರು.ʼ ಎಂದ. ವನಿತಾ ಗಂಜಿ ಕೇಂದ್ರಕ್ಕೆ ಹೋಗಿ ಮಕ್ಕಳು ನೆಲದಲ್ಲಿ ಮಲಗಿ ನಿದ್ದೆ ಮಾಡುತಿರುವುದನ್ನು ಕಂಡಳು. ಮತ್ತೆ ಇಲ್ಲಿ ಮಕ್ಕಳು ಸುರಕ್ಷಿತವಾಗಿದ್ದಾರೆ. ಇರಲಿ.ʼ ಎಂದು ಗಂಡನ ಕುರಿತು ಮುಂದಿನ ವ್ಯವಸ್ಥೆಗೆ ಹೊರಟಳು. ಅಷ್ಟೊಂದು ಹಣ ತರುವುದು ಎಲ್ಲಿಂದ? ಹೌದು. ಈಗ ತವರು ಮನೆಯೆ ಗತಿ. ಅಣ್ಣ ರೆವೆನ್ಯೂ ಇಲಾಖೆಯಲ್ಲಿ ಕಾರಕೂನ. ಅವನಿಗೆ ಸಾಕಷ್ಟು ಸಂಬಳ ಬರುತ್ತಿದೆ. ಅಷ್ಟಲ್ಲದೆ ಮೇಲಿನ ಕಮಾಯಿ ಕೂಡ ಇದೆ. ಎಂದು ಯೋಚಿಸುತ್ತ ಅಣ್ಣನ ಮನೆಯತ್ತ ಹೆಜ್ಜೆ ಹಾಕಿದಳು.
ಅಂದು ರವಿವಾರ. ಅಣ್ಣ ಮನೆಯಲ್ಲಿಯೇ ಇದ್ದ. ಅತ್ತಿಗೆ ವನಿತಾಳನ್ನು ಕಂಡೂ ಕಾಣದಂತೆ ಒಳಗೆ ನಡೆದಳು. ವನಿತಾ ಅಣ್ಣನ ಕಾಲಿನ ಬುಡಕ್ಕೆ ಬಿದ್ದಳು.ʻʻಅಣ್ಣಾ ನನ್ನ ಗಂಡ ಗಂಭೀರ ಪರಿಸ್ಥಿತಿಯಲ್ಲಿದ್ದಾನೆ. ಅವರಿಗೆ ಹೊಟ್ಟೆಯಲ್ಲಿ ಗಡ್ಡೆ ಆಗಿದೆ. ಅದನ್ನು ತೆಗೆಯದಿದ್ದರೆ ನನ್ನ ಗಂಡನ ಪ್ರಾಣಕ್ಕೆ ಅಪಾಯ. ಶಸ್ತ್ರಚಿಕಿತ್ಸೆ ಮಾಡಲೇಬೇಕಿದೆ ಅಣ್ಣಾ! ಅದಕ್ಕೆ50.000 ಹಣ ಬೇಕಿದೆ. ನೀನು ಇಂದು ಸಹಾಯ ಮಾಡಿದರೆ ಹೇಗಾದರೂ ನಿನ್ನ ಹಣವನ್ನು ವಾಪಸು ಕೊಡುವೆ. ತಂಗಿಯ ಬಗ್ಗೆ ದಯೆ ತೋರು.ʼʼಅಣ್ಣ ಮಾತಾಡಲಿಲ್ಲ. ಪೇಪರಿನಲ್ಲಿ ಮುಖ ಮರೆಮಾಡಿಕೊಂಡ. ಮತ್ತೆ ಹೇಳಿದ:ʻ ನಮಗೆ ಹಣ ಸಾಕಾಗದೆ ಒದ್ದಾಡುತ್ತಿದ್ದೇವೆ. ನಿಮಗೆ ಅಷ್ಟೊಂದು ಹಣ ಎಲ್ಲಿಂದ ತರಲಿ?ʼʼಎಂದ. ಅತ್ತಿಗೆ ಮೈತುಂಬ ಚಿನ್ನ ಹೇರಿಕೊಂಡು ಮುಂದೆ ಬಂದಳು: ಕೊಟ್ಟ ಹೆಣ್ಣು ಕುಲಕ್ಕೆ ಹೊರಗು. ನಿಮ್ಮಪ್ಪ ಸಾಕಷ್ಟು ಹಣ ಖರ್ಚು ಮಾಡಿ ನಿನ್ನ ಮದುವೆ ಮಾಡಿಕೊಟ್ಟ. ಈಗ ಅಪ್ಪ ಇಲ್ಲ ಲೆಕ್ಕ ಕೊಡಲು. ನಾವು ಬಂದುವರಿಗೆಲ್ಲ ಹಣ ದಾನ ಮಾಡಲು ಏನು ಹಣದ ಮರ ನೆಟ್ಟಿದ್ದೇವೆಯೆ? ನೆಟ್ಟಗೆ ವಾಪಸು ಹೋಗು ನಿನ್ನ ಮನೆಗೆ. ಮತ್ತೆ ಪದೆ ಪದೇ ಇಲ್ಲಿಗೆ ಬಂದು ತ್ರಾಸು ಕೊಡಬೇಡ. ಎಂದಳು. ಒಳಗಿನಿಂದ ವನಿತಾಳ ಅಮ್ಮ ʻಮಗಾ! ನಿನ್ನ ತಂಗಿಯನ್ನು ರಕ್ಷಿಸಬೇಕಾದ್ದು ನಿನ್ನ ಕರ್ತವ್ಯ. ಅವಳು ಮನೆಯ ಮಗಳಲ್ಲವೆ?ʼ ಎಂದಳು. ʻಅಮ್ಮಾ! ನಿನ್ನಲ್ಲಿ ಹಣ ಇದ್ದರೆ ಕೊಡು. ಸದ್ಯ ನನ್ನಲ್ಲಿ ಹಣವಿಲ್ಲ.ʼ ಎಂದ. ಅಮ್ಮ ಒಳಗಿನಿಂದಲೇ ಗೊಣಗುಡುತ್ತಿದ್ದಳು. ಇಲ್ಲಿ ಅಪ್ಪ ಸತ್ತ ಮೇಲೆ ಅಮ್ಮ ಕಾಲಕಸವಾಗಿಬಿಟ್ಟಿದ್ದಾಳೆ.ʼ ವನಿತಾ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಅಲ್ಲಿಂದ ಹೊರಟಳು. ಕುತ್ತಿಗೆಯಲ್ಲಿ ಅಪ್ಪ ಮಾಡಿಸಿದ್ದ ನಾಲ್ಕು ಪವನಿನ ಮಂಗಳಸೂತ್ರವಿದೆ. ಅದನ್ನೆ ಮಾರಿ ಗಂಡನನ್ನು ಉಳಿಸಿಕೊಳ್ಳುವೆ. ಅಷ್ಟೊಂದು ಹಣ ಮನೆಯಲ್ಲಿ ಕೊಳೆತುಬಿದ್ದಿದ್ದರೂ ಸ್ವಂತ ತಂಗಿಯ ಕಷ್ಟಕ್ಕೆ ಹಣ ಕೊಡಲಿಲ್ಲ. ಈ ಕ್ರೂರಿ ಅಣ್ಣನಿಗೆ ಪಾಠ ಕಲಿಸದೆ ಬಿಡೆ.ʼ ಎಂದು ತೀರ್ಮಾನಿಸಿದಳು.
ಸರಾಫನ ಅಂಗಡಿಗೆ ಹೋಗಿ ಮಂಗಳಸೂತ್ರವನ್ನು ಮಾರಿ ಸುಮಾರು 60.000 ಮೊತ್ತ ಸಿಕ್ಕಿತು. ಗಂಡನ ಶಸ್ತ್ರಚಿಕಿತ್ಸೆ ನಡೆಯಿತು. ಈಗ ಮನೆಯಲ್ಲಿ ಸುಧಾರಿಸಿಕೊಳ್ಳುತ್ತಿದ್ದಾನೆ. ವನಿತಾ ವಕೀಲರಲ್ಲಿಗೆ ಹೋದಳು. ಮತ್ತು ಹೇಳಿದಳು:ʻʻ ನನ್ನ ಅಪ್ಪನ ಆಸ್ತಿಗೆ ನನಗೆ ಹಕ್ಕಿಲ್ಲವೆ ವಕೀಲರೆ?ʼ ವಕೀಲರು ಉತ್ತರಿಸಿದರು,:ʻʻಖಂಡಿತವಾಗಿ ಇದೆ. ನಿನಗೆ ಅಮ್ಮ ಇದ್ದರೆ ಆಸ್ತಿಯನ್ನು ಮೂರು ಪಾಲನ್ನಾಗಿ ಮಾಡಬೇಕು. ʼ ಎಂದರು.
ಕೋರ್ಟಿನಲ್ಲಿ ದಾವೆ ದಾಖಲಾಯಿತು. ಅಣ್ನನಿಗೆ ನೋಟಿಸ್ ಹೋಯಿತು. ಅವನೂ ವಕೀಲರನ್ನು ಸಂಪರ್ಕಿಸಿದ್ದ. ಅದರೆ ಅಂತಿಮವಾಗಿ ವನಿತಾಳಿಗೆ ಒಂದು ಪಾಲು ಕೊಡಬೇಕೆಂದು ನ್ಯಾಯಾಲಯದ ತೀರ್ಮಾನವಾಯಿತು. ಅಮ್ಮ ತನ್ನ ಪಾಲಿನ ಆಸ್ತಿಯನ್ನು ಮಗಳಿಗೆ ಕೊಟ್ಟಳು. ಅರ್ಧ ಎಕರೆ ಜಮೀನು ವನಿತಾಳ ಪಾಲಿಗೆ ಸಿಕ್ಕಿತು. ಅದರೆ ನ್ಯಾಯಾಯಲಯವು ಆರು ತಿಂಗಳು ಮಗಳ ಮನೆಯಲ್ಲಿಯೂ ಮತ್ತಿನ್ನಾರು ತಿಂಗಳು ಮಗನ ಮನೆಯಲ್ಲಿಯೂ ಇರುವ ವ್ಯವಸ್ಥೆಯನ್ನು ಮಾಡಿತು.
ಇಂಗುತಿಂದ ಮಂಗನಂತಾದರೂ ಹಗೆಯನ್ನು ಬಿಡಲಿಲ್ಲ. ಅಮ್ಮ ಕೊನೆಯ ದಿನಗಳನ್ನು ಎಣಿಸುತ್ತಿದ್ದಳು. ಹಾಸಿಗೆಯಿಂದಲೇ ಬೊಬ್ಬೆ ಹೊಡೆದು ಹೇಳಿದಳು:ʻʻಅಣ್ಣಂಗೆ ಫೋನ್ ಮಾಡಿದ್ಯೇನೆ ಮನೆಹಾಳಿ? ನೀನು ಮಾಡ್ತಿದ್ರೆ ಇಷ್ಟೊತ್ತಿಗೆ ಬಂದುಬಿಡ್ತಿದ್ದ.ʼʼ ʻʻಫೋನ್ ಮಾಡದೇ ಇರ್ತೀನಾ? ಅವ್ನು ಫೋನ್ ಎತ್ಕೊಂಡ್ರೆ ತಾನೆ ? ಮತ್ತು ನಾನು ನಿನ್ನ ನೋಡಿಕೊಳ್ಳೊ ಆರು ತಿಂಗಳ ಅವಧಿ ಮುಗಿದಿಲ್ಲ ತಾನೆ?ʼʼ ಎಂದು ಮಗಳು ಬೊಬ್ಬೆ ಹೊಡೆದಳು. ಇತ್ತೀಚಿಗೆ ಅಮ್ಮನಿಗೆ ಕಿವಿ ಕೇಳಿಸುತ್ತಿರಲಿಲ್ಲ. ʻʻನಿನ್ನ ಹೇಲ್ ಉಚ್ಚಿ ತೆಗೆಯೋಕೆ ಆ ಗಯ್ಯಾಳಿ ತಯಾರಿರಬೇಕಲ್ಲ?ʼ ಎಂದಳು ವನಿತಾ. ಆರು ತಿಂಗಳು ಮಗನ ಹಾದಿ ಕಾಯುತ್ತಾ ಅಮ್ಮ ಕೊನೆಯ ಉಸಿರು ಎಳೆದಳು. ಮಗಳು ಅಮ್ಮನನ್ನು ನೋಡಿಕೊಳ್ಳುವ ಆರು ತಿಂಗಳು ಅವಧಿ ಮುಗಿದಿರಲಿಲ್ಲ. ತಂಗಿ ಯಾರಲ್ಲಿಯೋ ಅಣ್ಣನಿಗೆ ಹೇಳಿ ಕಳಿಸಿದಳು: ಅಣ್ಣ ಅಂದನಂತೆ:ʻʻಅವಳ ಆರು ತಿಂಗಳ ಅವಧಿ ಮುಗಿಯಲಿಲ್ಲ. ಮುಗೀಲಿ. ಮತ್ತೆ ನಾನು ಅಲ್ಲಿಗೆ ಹೋಗುತ್ತೇನೆ. ಅಮ್ಮನ ವೈಕುಂಠ ಸಮಾರಾಧನೆಗೂ ಮಗ ಬರಲಿಲ್ಲ. ಸಾಯುವವರೆಗೂ ಮಗನ ಧ್ಯಾನದಲ್ಲಿಯೇ ಅಮ್ಮ ಪ್ರಾಣ ಬಿಟ್ಟಳು.
ಉದಯ್ ಕುಮಾರ್ ಹಬ್ಬು
ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ, ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ, ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ಕಪ್ಪೆ ರಾಜಕುಮಾರಿ ಮತ್ತು ಇತರ ಕತೆಗಳು ಮತ್ತು ಲುಂಡೀರಿಯಾ ಇಂಗ್ಲಿಷ್ ಮಕ್ಕಳ ಕಾದಂಬರಿಯ ಅನುವಾದವನ್ನು ಮಾಡಿದ್ದಾರೆ. ಯಶಸ್ವಿ ಜೀವನದ ರಹಸ್ಯ, ನಿಮ್ಮ ಹಣ ನಿಮ್ಮ ಕೈಯಲ್ಲಿ ಇವರ ವ್ಯಕ್ತಿತ್ವ ವಿಕಸನ ಪುಸ್ತಕಗಳು. ತತ್ವಶಾಸ್ತ್ರೀಯಕ್ಕೆ ಸಂಬಂಧಿಸಿದಂತೆ ಯೋಗ ಮತ್ತು ತಂತ್ರ ಮತ್ತು ಪ್ರಾಚೀನ ಭಾರತದ ತತ್ಬದರ್ಶನಗಳು ಪುಸ್ತಕ ರೂಪುಗೊಂಡಿದೆ.
ಧಾರ್ಮಿಕ ಕೃತಿಗಳಾದ ಬುದ್ಧತ್ವ- ಸಂತೋಷಕ್ಕೆ ಒಂದೆ ದಾರಿ, ವಿಪಶ್ಸನ ಧ್ಯಾನ-ಅರಿವಿನ ದಾರಿ, ನಾಗಾರ್ಜುನ ಬದುಕು ಮತ್ತು ಶೂನ್ಯತಾ ಸಿದ್ಧಾಂತ, ಬೌದ್ಧ ಧ್ಯಾನದ ತಂತ್ರಗಳು ಓದುಗರಿಗೆ ಲಭಿಸಿದೆ.
ಚಂದ್ರ ಕೀರ್ತಿ ಮತ್ತು ನಾಗಾರ್ಜುನ ಮತ್ತು ವಾಸ್ತು ಮತ್ತು ಫೆಂಗ್ಶ್ಯೂ -ಒಂದು ತೌಲನಿಕ ಅಧ್ಯಯನ,ವನ್ನು ಇವರು ನಡೆಸಿದ್ಧಾರೆ. ನಳಪಾಕಕ್ಕೆ ಸಂಬಂಧಿಸಿದಂತೆ ಸಸ್ಯಾಹಾರಿ ರೆಸಿಪಿಗಳು ಕೃತಿ ಪ್ರಕಟವಾಗಿದೆ. ಸಂಕ್ರಮಣ ಪತ್ರಿಕೆಗಳಲ್ಲಿ ಇವರ ವಿಮರ್ಶಾ ಲೇಖನಗಳು ಪ್ರಕಟಣೆಗೊಂಡಿವೆ.
ಹೊನ್ನಾವರದ ದೀವಟಿಗೆ ಪ್ರಕಾಶನದಿಂದ ಕತಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ಧಾರೆ. ಮಕ್ಕಳ ಸಂಗನ, ಮೈಸೂರು ಇವರಿಂದ ಅತ್ಯುತ್ತಮ ಹಿರಿಯರು ಬರೆದ ಮಕ್ಕಳ ಕತೆಗಾಗಿ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೇವನೂರು ಕಾದಂಬರಿಗಳು ಮತ್ತು ಕಥೆಗಳು ಅವಲೋಕನ ಪುಸ್ತಕಕ್ಕೆ ಬೆಂಗಳೂರಿನ ಚೇತನ ಪ್ರಕಾಶನದ ಪ್ರಶಸ್ತಿ ಇವರಿಗೆ ಲಭಿಸಿದೆ. ತುಮಕೂರಿನ ಜೀವನ ಮಿತ್ರ ರಾಜ್ಯಮಟ್ಟದ ಕವಿತಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಪಾತ್ರರಾಗಿದ್ದಾರೆ. ವಿಪಶ್ಸನ ಧ್ಯಾನದ ತರಬೇತುದಾರ, ಕಪ್ಪು ದೇವತೆ ಕಾದಂಬರಿಗೆ ವರ್ಷದ ಕಾದಂಬರಿ ಎಂಬ ಮನ್ನಣೆಯನ್ನು ಗಳಿಸಿದ್ಧಾರೆ.
More About Author