ಮಗನೆ, ಒಂದು ಕಾಲವಿತ್ತು
ಜನರು ಹೃದಯ ತುಂಬಿ ನಗುತ್ತಿದ್ದರು
ನಗುವಿರುತ್ತಿತ್ತು ಅವರ ಕಣ್ಣ ತುಂಬ
ಈಗ ಜನ ಬರಿ ಹಲ್ಲುಗಳಿಂದ ನಗುವರು
ಅದೇ ಹೊತ್ತಿಗೆ ಅವರ ಬರ್ಫ ಶೀತಲ
ಕಣ್ಣುಗಳ ಹುಡುಕಾಟ
ನನ್ನ ನೆರಳ ಹಿಂದೆ
ಒಂದು ಕಾಲವಿತ್ತು
ಅವರ ಹಸ್ತಲಾಘವದಲ್ಲಿ ನಿಜವಾಗಲೂ
ಹೃದಯದ ಸ್ಪರ್ಶವಿತ್ತು
ಮಗನೆ, ಅದೆಲ್ಲ ಈಗ ಮಾಯ
ಉಳಿದಿರುವುದು ಹೃದಯವಿಲ್ಲದ ಹಸ್ತಲಾಘವ
ಅದೇ ಕ್ಷಣ ಅವರ ಎಡಗೈ
ನನ್ನ ಖಾಲಿ ಜೋಬನ್ನು
ಹುಡುಕಿದೆ
“ನಿಮ್ಮದೇ ಮನೆ, ಬನ್ನಿ ಮತ್ತೆ” ಎನ್ನುವರು
ಮತ್ತೆ ಹೋದರೆ
ನನ್ನ ಮನೆಯೆಂದುಕೊಂಡು
ಒಮ್ಮೆ, ಎರಡು ಸಲ
ಮೂರನೆ ಬಾರಿ
ಮುಚ್ಚಿರುವುದು ಬಾಗಿಲು
ಕಲಿತಿರುವೆ ಅನೇಕ ಸಂಗತಿಗಳ ನಾನೂ
ವಿವಿಧ ಮುಖಗಳ ಧರಿಸುವುದ
ಬಟ್ಟೆಗಳಂತೆ-
ಮನೆಮುಖ, ಆಫೀಸುಮುಖ
ರಸ್ತೆಮುಖ, ಅತಿಥೇಯಮುಖ
ಕಾಕ್‌ಟೇಲಮುಖ; ಜೊತೆಗೆ
ಎಲ್ಲಕ್ಕೂ ಒಪ್ಪುವ ಮುಗುಳ್ಳಗೆ
ಸ್ಥಿರವರ್ಣ ಚಿತ್ರದ ನಗೆಯಂತೆ
ಕಲಿತಿರುವೆ ನಾನೂ ಈಗ
ಬರಿ ಹಲ್ಲುಗಳ ನಗೆಯ
ಹೃದಯರಹಿತ ಹಸ್ತಲಾಘವ
“ಗುಡ್ ಬೈ” ಎಂದು ಹೇಳುವುದ
“ಹೋದರಲ್ಲ ಒಳ್ಳೆಯದಾಯಿತು” ಅಂದುಕೊಳ್ಳುತ್ತ
“ಭೇಟಿಯಾಗಿದ್ದು ಸಂತೋಷ” ಅನ್ನುವೆ
ಯಾವ ಸಂತೋಷವಿರದಿದ್ದರೂ
“ನಿಮ್ಮೊಂದಿಗೆ ಮಾತಾಡಿ ಖುಷಿಯಾಯಿತು” ಅನ್ನುವೆ
ಬೇಸರ ಬಂದಾಗಲೂ
ಆದರೆ ಮಗನೆ, ನನ್ನನ್ನು ನಂಬು
ನಾನು ಹಿಂದೆ ಇದ್ದಂತೆ ಇರುವ ಆಸೆ
ಬಿಡ ಬಯಸುವೆ
ಮನ ಮೂಕವಾಗಿಸುವ
ಈ ಕಲಿತ ಸಂಗತಿಗಳೆಲ್ಲವ ಎಲ್ಲಕ್ಕಿಂತ ಹೆಚ್ಚಾಗಿ
ಮತ್ತೆ ನಗುವುದನ್ನು ಕಲಿಯ ಬಯಸುವೆ
ನನ್ನೀಗಿನ ನಗು ಕನ್ನಡಿಯಲ್ಲಿ
ಬರಿಯ ಹಲ್ಲುಗಳ ತೋರಿಸಿದೆ
ಹಾವಿನ ಹಲ್ಲುಗಳಂತೆ
ಮಗನೆ, ನನಗೆ ನಿನ್ನಂತೆ
ನಗುವುದ ಕಲಿಸು
ಹಿಂದೆ ನಾನು ನಕ್ಕಂತೆ
ನಿನ್ನಷ್ಟಿರುವಾಗ ನಕ್ಕಂತೆ
ನಗಲು ಕಲಿಸು
-ವಿಜಯಾ ಗುತ್ತಲ
ವಿಡಿಯೋ
ವಿಡಿಯೋ
ವಿಜಯಾ ಗುತ್ತಲ
ಲೇಖಕಿ, ಅನುವಾದಕಿ ವಿಜಯಾ ಗುತ್ತಲ ಅವರು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ (ಜನನ: 27-06-1952) ಹಂಸಭಾವಿಯಲ್ಲಿ ಜನಿಸಿದರು. ತಂದೆ ಸಿ. ಗುತ್ತಲ, ತಾಯಿ ದಾಕ್ಷಾಯಿಣಿ ಗುತ್ತಲ.
`ತೇಜಸ್ವಿ, ಸಾರಾ ಅಬೂಬಕರ್, ಗೀತಾ ನಾಗಭೂಷಣ ಮತ್ತು ವಚನಗಳು (ಇಂಗ್ಲಿಷಿಗೆ ಅನುವಾದ), ಹುಚ್ಚು ದಾಳಿಂಬೆ ಗಿಡ (ಆಧುನಿಕ ಗ್ರೀಕ್ ಕವಿತೆಗಳು) ಒಡೆಸಿಯಸ್, ಎಲೇಲೆಸ್ ಕವಿತೆಗಳು, ವಸಂತ ನನ್ನೊಳಗಿದೆ (ಕವಾಫಿ ಕವನಗಳು), ಒರಸ್ತಿಯ (ಇನ್ನಿಲಸ್ ನಾಟಕ ತ್ರಿವಳಿ)ಗಳನ್ನುಅವರ ಕೃತಿಗಳು. ಇಂಗ್ಲಿಷಿನಲ್ಲಿ ‘ Vachanas of Sharanas, The Sign, Vachanas’ ರಚಿಸಿದ್ದಾರೆ.
ಅವರಿಗೆ ‘ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ’ಗಳು ಲಭಿಸಿದೆ.