ಈಗ ಹೇಳುತ್ತಿರುವ ಭೋಜನ ಮೀಮಾಂಸೆಯನ್ನು ನಾನು ಕೇಳಿಸಿಕೊಂಡಿದ್ದು, ಸಾಹಿತ್ಯ ಸಂಕಿರಣದ ಸಮಾರೋಪ ಸಮಾರಂಭದಲ್ಲಿ. ಮೀಮಾಂಸೆ ಕಟ್ಟಿದವರು ನಾಡಿನ ಪ್ರಸಿದ್ಧ ಕವಿ ರಾಜಶೇಖರ್. ರಾಜಶೇಖರರ ಕಾವ್ಯದಲ್ಲಿ ಕಥನದ ಅಂಶವೇ ಹೆಚ್ಚಿರುತ್ತಿದ್ದರಿಂದ ಭಾರತೀಯ ಕಥನ ಪರಂಪರೆ ಕುರಿತ ಸಂಕಿರಣದ ಸಮಾರೋಪಕ್ಕೆ ಅವರೇ ಸೂಕ್ತ ವ್ಯಕ್ತಿಯೆಂದು ಅಕಾಡೆಮಿ ಅಧ್ಯಕ್ಷರು ಮಾತ್ರವಲ್ಲದೆ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು ಕೂಡ ಸೂಚಿಸಿದ್ದರು. ಸಮಾರೋಪ ಭಾಷಣಕ್ಕೆ ಮುಂಚೆ ತಾಂತ್ರಿಕ ಗೋಷ್ಠಿಗಳ ಮುಕ್ತಾಯ. ನಂತರ ಭರ್ಜರಿ ಭೋಜನ. ಆಮೇಲೆ ರಾಜಶೇಖರ್ ಮೀಮಾಂಸೆ. ಆದರೆ ಮಾಡಿದ್ದು ಮಾತ್ರ ಸಾಹಿತ್ಯ ಮೀಮಾಂಸೆಯಲ್ಲ.
*****
ಈವತ್ತಿನ ಊಟ ತುಂಬಾ ಚೆನ್ನಾಗಿತ್ತು. ಅಡುಗೆಯವರನ್ನು ಇಲ್ಲಿಗೇ ಕರೆಸಿ, ದಿನಸಿ, ತರಕಾರಿ, ಹಾಲು-ತುಪ್ಪ ಎಲ್ಲವನ್ನೂ ನೀವೇ ತಂದುಕೊಟ್ಟು ಮುಂದೆ ನಿಂತು ಅಡುಗೆ ಮಾಡಿಸಿದ್ದೀರಿ. ಉತ್ತರ-ದಕ್ಷಿಣ ಭಾರತದ ಭಕ್ಷ್ಯಗಳ ಹದವಾದ ಮಿಶ್ರಣ. ಮುಖ್ಯವಾಗಿ ಸಪ್ಪೆ ಎನ್ನುವುದೂ ಕೂಡ ಒಂದು ಘನವಾದ ರುಚಿಯೆಂದು ಪರಿಗಣಿಸಿ, ಕೆಲವು ತಿನಿಸುಗಳಿಗೆ ಉಪ್ಪು-ಖಾರ ಹಾಕಿಸದೆ ಕೂಡ ರುಚಿಯಾಗಿ ಮಾಡಿಸಿದ್ದೀರಿ. ಅಭಿನಂದನೆಗಳು. ಊಟ ಮಾಡಿದ ಮೇಲೆ ಅವರವರ ಎಲೆಯನ್ನು ಅವರೇ ಎತ್ತಬೇಕೆಂಬ ಸೂಚನೆ ಕೂಡ ನಮ್ಮ ಸಂಸ್ಕೃತಿಗೆ ಅನುಗುಣವಾದದ್ದು.
ಇವೆಲ್ಲ ನನ್ನನ್ನು ಹೈಸ್ಕೂಲಿನ ಮೂರು ವರ್ಷ ಊಟ ಮಾಡುತ್ತಿದ್ದ ವಿಷ್ಣು ಪುರಾಣಿಕರ ಮನೆಯ ಊಟದ ನೆನಪಿಗೆ ಕರೆದುಕೊಂಡು ಹೋಯಿತು. ಕಿರಗಂದೂರಿನಿಂದ ಬಂದು ಮಂಗಲಪುರಕ್ಕೆ ಹೈಸ್ಕೂಲಿಗೆಂದು ಓದಲು ಹೋದ ಬಡಗಿ ನಟರಾಜಪ್ಪನ ಮಗ ನಾನು. ಕಸಬಾ ಸೇರಿಸಿಕೊಂಡು ಸುತ್ತಮುತ್ತಲ ಅಷ್ಟಗ್ರಾಮಗಳಿಗೂ ನಮ್ಮಪ್ಪನದೇ ಬಡಗಿ ಸೇವೆಯಾಗಿದ್ದರೂ ಗೌಡರುಗಳು ಕೊಡುತ್ತಿದ್ದ ದವಸ-ಧಾನ್ಯ ಬಿಟ್ಟರೆ ಬೇರೇನೂ ಆದಾಯದ ಬಾಬ್ತು ಇಲ್ಲದ್ದರಿಂದ, ಮನೆ ತುಂಬಾ ಇದ್ದ ಮಕ್ಕಳು-ಮರಿ, ಸೋದರತ್ತೆಯರು, ಚಿಕ್ಕಜ್ಜಿ ಎಲ್ಲರೂ ಸೇರಿ ಹದಿನೆಂಟು ಜನವಾಗಿ ಎರಡು ಹೊತ್ತಿನ ಹೊಟ್ಟೆ ತುಂಬಾ ಊಟಕ್ಕೇ ಕಷ್ಟವಾಗುತ್ತಿತ್ತು. ರಾತ್ರಿ ಹೊತ್ತು ಉಳಿದವರೆಲ್ಲಾ ಮಲಗಿದ್ದಾರೆ ಎಂದು ಪ್ರತಿಯೊಬ್ಬರೂ ಲೆಕ್ಕ ಹಾಕಿಕೊಂಡು ಒಬ್ಬರ ಕಣ್ಣಿಗೆ ಒಬ್ಬರು ಕಾಣದ ಹಾಗೆ ಇನ್ನೊಬ್ಬರು ಅಡುಗೆ ಮನೆಗೆ ಹೋಗಿ ಹಾಲು, ಬೆಲ್ಲ, ಕಡ್ಲೆ, ಕಾಳು, ತರಕಾರಿಯನ್ನೆಲ್ಲ ತಿಂದುಬಿಡುತ್ತಿದ್ದೆವು. ಬೆಳಿಗೆ ಆದರೆ ಡಬ್ಬವೂ ಖಾಲಿ, ಗೂಡೆಯೂ ಖಾಲಿ. ದಿನದುದ್ದಕ್ಕೂ ವ್ಯಾಸನ ರಂಪ, ವಾಲ್ಮೀಕಿಯ ರಾಮಾಯಣ. ಅದಕ್ಕೆ ಮುಲ್ಕಿ ಪರೀಕ್ಷೆಯಲ್ಲಿ ಇಡೀ ಹೋಬಳಿಗೆ ಫಸ್ಟ್ ಬಂದರೂ ಮುಂದೆ ಓದುವುದಕ್ಕೆ ಮಂಗಲಪುರಕ್ಕೆ ಹೋಗುವುದು ಬೇಡವೇ ಬೇಡವೆಂದು ಅಪ್ಪ ಹಠ ಮಾಡಿದ್ದು. ಸಾವಳಗಿ ಶಿವಲಿಂಗಪ್ಪ ಮಾಸ್ತರು ಬಿಡಬೇಕಲ್ಲ. ಇಲ್ಲ, ಹುಡುಗನಿಗೆ ಸರಸ್ವತಿ ಮಾತೆ ಒಲಿದಿದ್ದಾಳೆ; ಮುಂದೆ ಓದಲಿ; ಮಂಗಲಪುರದ ಹೈಸ್ಕೂಲಿನ ಹೆಡ್ ಮಾಸ್ತರು ಕಿರಗಂದೂರಿನ ಪುರಾಣಿಕರ ಮನೆತನದವರೇ; ಖಂಡಿತ ಅನುಕೂಲ ಮಾಡಿಕೊಡ್ತಾರೆ ಅಂತ ಬಲವಂತ ಮಾಡಿ ಹೈಸ್ಕೂಲಿಗೆ ಸೇರಿಸಿದರು. ನೀಲ ಶೆಟ್ಟರು ಬಡ ವಿದ್ಯಾರ್ಥಿಗಳಿಗೆಂದು ಮನೆಯ ಮುಂದಿನ ದೊಡ್ಡ ಕೋಣೆಯನ್ನು ಬಿಟ್ಟುಕೊಟ್ಟಿದ್ದರು. ಇಪ್ಪತ್ತೊಂದು ವಿದ್ಯಾರ್ಥಿಗಳ ಜೊತೆ ಅಲ್ಲಿ ವಾಸ. ಶಿವಲಿಂಗಪ್ಪ ಮಾಸ್ತರೇ ವಾಸಕ್ಕೆ ನೀಲ ಶೆಟ್ಟರ ಮನೆಯನ್ನು, ಊಟಕ್ಕೆಂದು ಪುರಾಣಿಕರ ಮನೆಯನ್ನು ಗೊತ್ತು ಮಾಡಿಕೊಟ್ಟದ್ದು.
ಮೇಷ್ಟರಾಗಿ ಪುರಾಣಿಕರು ತುಂಬಾ ಕಠಿಣ, ಕಠೋರ. ಅದಕ್ಕೆ ಅವರು ಕಲಿಸಬೇಕಾಗಿದ್ದ ಇಂಗ್ಲಿಷ್ ನಿಬಂಧಗಳು ಮತ್ತು ಬೀಜಗಣಿತವೇ ಕಾರಣವಾಗಿತ್ತು. ಹಸಿ ಬಿದರಿನ ಬೆತ್ತ, ಕರಿ ರೂಲು ದೊಣ್ಣೆ, ಗುಂಡುಸೂಜಿ, ಎಲ್ಲವನ್ನೂ ಪಾಠದ ಜೊತೆ ಜೊತೆಗೇ ಚೆನ್ನಾಗಿ ಬಳಸಿ ಕಲಿಸುತ್ತಿದ್ದರೂ ಚೆನ್ನಾಗಿ ಓದುವ ಮಕ್ಕಳನ್ನು ಕಂಡರೆ ಮಾತ್ರ ಎಲ್ಲಿಲ್ಲದ ಪ್ರೀತಿ. ಅಂತ ಮಕ್ಕಳನ್ನು ಮನೆ ಕೆಲಸಕ್ಕೂ ಹಾಕಿಕೊಂಡು ರಾತ್ರಿ ಹೊತ್ತು ಊಟ ಹಾಕಿ, ಅವರ ಮನೆಯಲ್ಲೇ ಇಟ್ಟುಕೊಂಡು ಓದಿಸುತ್ತಿದ್ದರು.
ಮನೆಯಲ್ಲಿ ಮಾತ್ರ ಪುರಾಣಿಕ ಮಾಸ್ತರಾಗಲೀ ಅವರ ಶ್ರೀಮತಿ ಭಾಗ್ಯಲಕ್ಷ್ಮಿಯವರಾಗಲೀ ತುಂಬಾ ಧಾರಾಳಿಗಳು. ಪ್ರೀತಿಯ, ಅಕ್ಕರಾಸ್ಥೆಯ ಮಂದಿ. ಆದರೆ ಮನೆ ತುಂಬಾ ಮಡಿ ಹುಡಿ, ಪೂಜೆ, ಪುನಸ್ಕಾರ, ವ್ರತ, ಹಬ್ಬ, ಹರಿದಿನ, ಶ್ರಾದ್ಧ, ಪುರಾಣ ಶ್ರವಣ. ಒಂದೊಂದು ಹಬ್ಬಕ್ಕೂ, ವ್ರತಕ್ಕೂ ಒಬ್ಬೊಬ್ಬ ದೇವರಿಗೂ ಅದೆಷ್ಟೊಂದು ಕಾವ್ಯ ವಾಚನ, ಕಥಾ ವಾಚನ. ಕಾವ್ಯ ವಾಚನಕ್ಕೆ ಹಾರ್ಮೋನಿಯಂ ಮಾಸ್ತರು ಲೋಂಡಾದಿಂದ ದೇವೇಂದ್ರಪ್ಪ ಬರುತ್ತಿದ್ದರು. ಕತೆಗಳನ್ನು ಮಾತ್ರ ಹೆಚ್ಚಾಗಿ ಪುರಾಣಿಕ ಮಾಸ್ತರೇ ಎತ್ತರದ ಧ್ವನಿಯಲ್ಲಿ ಬಲು ಠೇಂಕಾರದಿಂದ ಓದುತ್ತಿದ್ದರು. ಗಂಟಲು ಶುದ್ಧವಾಗಿರಬೇಕೆಂದು ಮಾಸ್ತರು ಯಾವಾಗಲೂ ಬಿಸಿ ನೀರನ್ನೇ ಕುಡಿಯುತ್ತಿದ್ದರು. ಹಬ್ಬದ ದಿವಸದಲ್ಲೂ ಮೊಸರನ್ನವನ್ನ ಶಾಸ್ತ್ರಕ್ಕೆ ಅಂತ ಒಂದು ಚಿಟಿಕೆ ಮಾತ್ರ ತಿನ್ನುತ್ತಿದ್ದರು. ಈವತ್ತಿನ ನನ್ನ ಕಥನ ಪ್ರೀತಿ ಪುರಾಣಿಕ ಮಾಸ್ತರರ ಎತ್ತರಿಸಿದ ಕಂಠಕ್ಕೆ, ಆ ಕಂಠದಲ್ಲಿ ನಳನಳಿಸುತ್ತಿದ್ದ ಪಲುಕುಗಳಿಗೆ ಋಣಿಯಾಗಿರಬೇಕು. ಮುಖ್ಯ ವಿಷಯ ಅದಲ್ಲ ಬಿಡಿ.
ಒಂದೇ ಒಂದು ದಿನ ಕೂಡ ತಪ್ಪಿಸದೆ ಮೂರು ವರ್ಷದುದ್ದಕ್ಕೂ ನನಗೆ ಊಟ ತಿಂಡಿ ಕೊಡುತ್ತಿದ್ದರು. ಮನೆಯವರಿಗೆಲ್ಲ ಬಡಿಸುವಂತೆ ಭಾಗ್ಯಲಕ್ಷ್ಮಿ ಅಮ್ಮನವರೇ ನನಗೂ ನೇರವಾಗಿ ಬಡಿಸುತ್ತಿದ್ದರು. ಚೆನ್ನಾಗಿ ಊಟ ಮಾಡಬೇಕಪ್ಪಾ ಅಂತ ಪ್ರತಿದಿನವೂ ಹೇಳಿದ ಮಾತನ್ನೇ ಹೇಳುತ್ತಿದ್ದರು. ಹೋಮ ಹವನಗಳಿದ್ದ ದಿವಸ ಊಟ ತುಂಬಾ ತಡವಾಗುತ್ತಿದ್ದುದರಿಂದ ಬೆಳಿಗ್ಗೆ ಹೊತ್ತು ಅವರ ಮಕ್ಕಳಿಗೆ ಕೊಡುವಂತೆ ನನಗೂ ಅರಳು, ಮೊಸರು, ಕಾಯಿ ಹುರಿಹಿಟ್ಟು ಕಲಸಿ ಕೊಡುತ್ತಿದ್ದರು. ಆದರೆ ಊಟ ಬಡಿಸುವಾಗ ಮಾತ್ರ ನನ್ನ ಎಲೆಯಿಂದ ತುಂಬಾ ದೂರ ತುದಿಗಾಲ ಮೇಲೆ ನಿಂತುಕೊಂಡು ಬಡಿಸುತ್ತಿದ್ದರು. ನನ್ನ ಎಲೆಯಿಂದ ಅವರ ಮೈಗೆ, ಬಟ್ಟೆಗೆ ಏನೂ ಎಂಜಲು ಸಿಡಿಯಬಾರದೆಂದು.
ಊಟ ತಿಂಡಿ ಆದ ಮೇಲೆ ನಾನೇ ನನ್ನ ಎಲೆಯನ್ನು ಎತ್ತಿ ತೆಗೆದುಕೊಂಡು ಹೋಗಿ ಹಿತ್ತಲಲ್ಲಿದ್ದ ತಿಪ್ಪೆಗೆ ಹಾಕಿ, ಮನೆ ಹೆಂಗಸರು ಚಿಮುಕಿಸಿದ ನೀರಿನಿಂದ ಗೋಮ ಕೂಡ ಹಚ್ಚುತ್ತಿದ್ದೆ. ಉಳಿದವರ ಊಟದ ಎಲೆಯನ್ನೆಲ್ಲ ಮನೆಯ ಹೆಂಗಸರೇ ಎತ್ತು ಹಾಕುತ್ತಿದ್ದರು. ಹಜಾರದ ಮೂಲೆಯೊಂದರಲ್ಲಿ ಕೂರಿಸಿ ನನಗೆ ಊಟ ಹಾಕುತ್ತಿದ್ದುದು, ಬರೇ ಮಾಸ್ತರ ಮನೆಯವರೇ ಇದ್ದಾಗ, ನನಗೆ ಎಲೆ ಎತ್ತಲು, ಗೋಮ ಹಚ್ಚಲು ಏನೂ ಬೇಜಾರಾಗುತ್ತಿರಲಿಲ್ಲ. ಹಬ್ಬ, ಹರಿದಿನ, ವ್ರತಗಳಿಗೆ ಬಂದ ಮನೆ ತುಂಬಾ ನೆಂಟರಿಷ್ಟರೆದುರಿಗೆ ನಾನೊಬ್ಬ ಮಾತ್ರ ನನ್ನ ಎಲೆಯನ್ನು ಎತ್ತಬೇಕಾದ್ದಕ್ಕೆ ಮನಸ್ಸಿಗೆ ಒಂದು ಥರಾ ಅನಿಸುತ್ತಿತ್ತು. ಮೂರು ವರ್ಷ ಚೆನ್ನಾಗಿ ಊಟ ಮಾಡಿ ಪಳಗಿದೆ. ಎಷ್ಟೆಂದರೆ ಯಾವ ಹಬ್ಬಕ್ಕೆ ಹಯಗ್ರೀವ, ಯಾವ ಹಬ್ಬಕ್ಕೆ ಗೆಣಸಿನ ಪಲ್ಯ, ಯಾವ ಪೂಜೆಗೆ ಸಜ್ಜಿಗೆಯ ನೈವೇದ್ಯ, ಯಾವ ಹೋಮದ ದಿನ ಸಕ್ಕರೆ ಹೋಳಿಗೆ, ಯಾರ ಆರಾಧನೆಗೆ ಹೆಸರುಬೇಳೆ ಪಾಯಸ ಎಂಬುದೆಲ್ಲಾ ನನಗೆ ಹೃದ್ಗತವಾಗಿ ಹೋಗಿತ್ತು.
ಭಾಗ್ಯಮ್ಮ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು – ಮನೆಯಲ್ಲಿರುವಷ್ಟು ಜನಕ್ಕೆಂದು ಮಾತ್ರವೇ ಲೆಕ್ಕಾಚಾರ ಹಾಕಿ ಅಡುಗೆ ಮಾಡಬಾರದು. ಇನ್ನೂ ನಾಲ್ಕು ಜನ ಅತಿಥಿಗಳು ಬಂದೇ ಬರುತ್ತಾರೆ, ದೇವರು ಕಳಿಸೇ ಕಳಿಸುತ್ತಾನೆ ಅಂತಾ ನಂಬಿ ಅಡುಗೆಗೆ ಇಡಬೇಕು. ದೇವರಿಗೆ ನಮ್ಮ ಮೇಲೆ ನಿಜವಾಗಿ ಪ್ರೀತಿ ಇದ್ದರೆ, ಊಟದ ಹೊತ್ತಿಗೆ ಯಾರಾದರೂ ಅತಿಥಿಗಳನ್ನು ಕಳಿಸೇ ಕಳಿಸ್ತಾನೆ ಅಂತ. ಯಾವಾಗಲೂ ಭಾಗ್ಯಮ್ಮ ಬಯಸಿದ ಹಾಗೆ ಯಾರಾದರೂ ಅತಿಥಿಗಳು ಊಟದ ಹೊತ್ತಿಗೆ ಸರಿಯಾಗಿ ಬಂದೇ ಬಿಡುತ್ತಿದ್ದರು. ಹಾಗೆ ಯಾರಾದರೂ ಬರದೇ ಹೋದ ದಿನ ಭಾಗ್ಯಮ್ಮನವರ ದುಃಖ ಹೇಳತೀರದು. ಊಟವನ್ನೇ ಸರಿಯಾಗಿ ಮಾಡುತ್ತಿರಲಿಲ್ಲ. ಊಟ ಮಾಡುತ್ತಲೇ ಅಳೋರು. ಈವತ್ತು ರಾತ್ರಿಗೆ ಬಿಸಿಯಡುಗೆ ಮಾಡೋಲ್ಲ. ಭಗವಂತ ತಿರಸ್ಕರಿಸಿದ್ದನ್ನು ಪಾಪದ ಊಟ ಅಂತ ಎಲ್ಲರೂ ಮಾಡಿ ಎಂದು ರೇಗಿಬಿಡುತ್ತಿದ್ದರು.
*****
ಈಗ ನಾನು ಇದನ್ನೆಲ್ಲ ಕತೆ ಮಾಡಿ ಹೇಳುವಾಗ, ಬರೆಯುವಾಗ ಎಲ್ಲಿಂದ ಪ್ರಾರಂಭಿಸಬೇಕು, ಏನನ್ನು ಹೇಳಬೇಕು, ಏನನ್ನು ಬಿಡಬೇಕು, ನೀವೇ ಹೇಳಿ. ಕತೆಯೇನೋ ಯಾವಾಗಲೂ ತನ್ನ ಪಾಡಿಗೆ ತಾನು ತನ್ನದೇ ಜಗತ್ತಿನಲ್ಲಿ ಇರುತ್ತದೆ. ಅದನ್ನು ನೋಡುವವರಿಂದ, ಹೇಳುವವರಿಂದ, ಬರೆಯುವವರಿಂದ ಕತೆಯ ಒಂದಷ್ಟು ಭಾಗ ಮಾತ್ರ ಈ ಜಗತ್ತಿಗೆ ಬರುತ್ತದಷ್ಟೆ.
ಪುರಾಣಿಕ ಮಾಸ್ತರರ ಶಿಷ್ಯ ಪ್ರೀತಿಯನ್ನು ಹೊಗಳಬೇಕೋ? ಇಲ್ಲ ಮೂರು ವರ್ಷ ನನ್ನಂತಹ ಹಳ್ಳಿಯ ಶಾಣ್ಯಾನಿಗೆ ಮನೆಯಲ್ಲೇ ಊಟ ಹಾಕಿದ ಔದಾರ‍್ಯದ ಬಗ್ಗೆ ಹೇಳಬೇಕೋ? ನನಗೇ ಗೊತ್ತಿಲ್ಲದಂತೆ ನನ್ನಲ್ಲಿ ಬೆಳೆಸಿದ ಕಥನದ ಪ್ರೀತಿ, ಹಾರ್ಮೋನಿಯಂ ಆಸೆ, ಹಬ್ಬ ಹರಿದಿನಗಳ ಪೂಜೆ-ಪುನಸ್ಕಾರದ ತಿಳುವಳಿಕೆಗೆ ಕೃತಜ್ಞತೆ ಹೇಳಬೇಕೋ? ಇಲ್ಲ ನನ್ನೊಬ್ಬನ ಕೈಯಲ್ಲೇ ಊಟದೆಲೆ ಎತ್ತಿಸಿ, ಗೋಮ ಹಚ್ಚಿಸಿ, ಉಳಿದವರೆಲ್ಲರ ಎಲೆಯನ್ನು ಮಾತ್ರ ಮನೆ ಹೆಂಗಸರು ಎತ್ತುತ್ತಿದ್ದರಲ್ಲಿ ಆ ಬೇಧಭಾವದ ಬಗ್ಗೆ ಹೇಳಬೇಕೋ? ಊಟ ಹಾಕಿದ ಅವರ ಔದಾರ‍್ಯ ಏನೇ ಇದ್ದರೂ ಅವರ ಮನಸ್ಸಿನ ಒಂದು ಮೂಲೆಯಲ್ಲಿ ಬೇಧಭಾವ ಇದ್ದೇ ಇತ್ತು ಎಂದು ವಾದಿಸಬೇಕೋ? ದಿನವೂ ಮನೆಗೆ ಊಟದ ಹೊತ್ತಿಗೆ ಅತಿಥಿಗಳು ಬಂದೇ ಬರಲಿ ಎಂದು ಕಳಕಳಿಯಿಂದ ಹಾತೊರೆಯುತ್ತಿದ್ದ ಭಾಗ್ಯಮ್ಮನವರ ಒದ್ದಾಟದ ಬಗ್ಗೆಯೂ ಹೇಳಬೇಕೋ?
ಆವಾಗ ಮೂರು ವರ್ಷ ಊಟ ಮಾಡುವಾಗ ಇದೆಲ್ಲ ಯಾವುದೂ ಮುಖ್ಯವಾಗುತ್ತಿರಲಿಲ್ಲ. ಮುಂದಿನ ಊಟಕ್ಕೆ ಭಾಗ್ಯಲಕ್ಷ್ಮಮ್ಮ ಏನು ಅಡುಗೆ ಮಾಡಬಹುದು ಎಂದು ಮಾತ್ರ ಯೋಚಿಸುತ್ತಿದ್ದೆ. ಬೇಸಿಗೆ ರಜಾಕ್ಕೆ ಕಿರಗಂದೂರಿಗೆ ಹೋದಾಗ ದಿನಾ ಒಂದೇ ರೀತಿಯ ಊಟ ಮಾಡತಾ, ಮಾಡತಾ, ಅದೇ ರೊಟ್ಟಿ, ಅದೇ ಆಲೂ ಬಾಜಿ, ಅದೇ ಅಗಸೆ ಪಲ್ಯ ತಿನ್ನುತ್ತಾ ತಿನ್ನುತ್ತಾ, ನಾಲಿಗೆಯೆಲ್ಲ ಜಡ್ಡುಗಟ್ಟಿ ಹೋಗಿ ಮನಸ್ಸು ಪುರಾಣಿಕ ಮಾಸ್ತರ ಮನೆಯ ಊಟವನ್ನೇ ಕನವರಿಸೋದು.
ಆದರೆ ಬೆಳೆದಾದ ಮೇಲೆ ಮನಸ್ಸಿಗೆ ಕಾಣೋದು, ಮತ್ತೆ ಮತ್ತೆ ಹೇಳಬೇಕೆನ್ನಿಸುವುದು, ಆವತ್ತಿನ ಬೇಧಭಾವವನ್ನು ಕುರಿತೇ! ಏಕೆಂದರೆ ಯಾವುದೇ ರೀತಿಯ ಕೃತಜ್ಞತೆಯ, ಋಣದ ಭಾವವು ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವುದಿಲ್ಲ. ಅದು ಋಣದ ಸ್ವರೂಪವೂ ಇರಬಹುದು, ಮನುಷ್ಯ ಸ್ವಭಾವವೂ ಇರಬಹುದು. ಅಲ್ಲದೆ ಹಿಂದಿನದನ್ನು ನೆನಸಿಕೊಳ್ಳುವಾಗ ಮನಸ್ಸು ಮತ್ತೆ ಮತ್ತೆ ಗಾಯದ, ಅವಮಾನದ ನೆಲೆಗಳನ್ನು ಹುಡುಕುತ್ತದೆ. ಹುಡುಕಿ ಹುಡುಕಿ ಮನಸ್ಸನ್ನು ರಣ ಮಾಡಿಕೊಳ್ಳುತ್ತದೆ ಎಂದು ಕಾಣುತ್ತದೆ. ನಾನು ಬೇಧಭಾವದ ವಿಚಾರವನ್ನು ಮುಂದೆ ಮಾಡಿದರೆ, ಇಲ್ಲಿ ಬೆಂಗಳೂರಿನಲ್ಲಿ ಈಗ ನನ್ನ ಮನೆಯ ಸುತ್ತುಮುತ್ತಲೇ ಇರುವ ಪುರಾಣಿಕರ ಮನೆತನದವರಿಗೆ ಮನಸ್ಸಿಗೆ ನೋವಾಗುತ್ತೆ. ಏನಪ್ಪಾ ಈ ಮನುಷ್ಯನಿಗೆ ಕೃತಜ್ಞತೆಯೇ ಇಲ್ಲ ಅಂತ ಅಂದುಕೊಳ್ಳಬಹುದು. ಹಾಗಂತ ಬೇಧಭಾವದ ವಿಚಾರವನ್ನೂ ಬಿಡೋಕಾಗೋಲ್ಲ. ಬಿಟ್ಟರೆ ಕಥೆಗೆ, ಕಥೆಯಂತ ಮಾತಿಗೆ ಹದ, ಬಿಗಿ ಬರೋಲ್ಲ. ಪುರಾಣಿಕ ಮಾಸ್ತರರ ಮನೆಯವರಿಗೆ ಆವಾಗ, ಆ ಕಾಲಕ್ಕೆ ಅದು ಸರಿ ಅನಿಸಿರಬಹುದು, ಸಹಜ ಅನಿಸಿರಬಹುದು. ಈಗ ನನ್ನ ಮನಸ್ಸು ಅದನ್ನು ಒಪ್ಪದಿರಬಹುದು. ಹಾಗೆಂದು ಅಂದು ಚೆನ್ನಾಗಿಯೇ ಕಂಡಿದ್ದ, ನಾನೇ ಸದಾ ಕಾಲವೂ ಹಂಬಲಿಸುತ್ತಿದ್ದ ಅವರ ಔದಾರ‍್ಯದ ಧಾರಾಳವನ್ನು ಹಿನ್ನೆಲೆಗೆ ಸರಿಸಿ ನನ್ನ ಮನಸ್ಸಿನ ಧಾರಾಳತನವನ್ನು ಕೊಂದುಕೊಳ್ಳಲೇ. ಹೇಗೆ ಹೇಳಿದರೂ, ಹೇಗೆ ಕೇಳಿದರೂ, ಪ್ರಶ್ನೆ, ಮಾತು, ಕತೆ ಎಲ್ಲವೂ ಅಲ್ಲಿಗೇ ಬಂದು ನಿಲ್ಲುತ್ತದೆ. ಕತೆ, ಘಟನೆ ಹಿಂದೆ ನಡೆದಾಗ ಸಂಬಂಧಪಟ್ಟವರ ಮನಸ್ಸಿನಲ್ಲಿ ಏನೇನಿತ್ತು ಅದನ್ನು ಹೇಳಬೇಕೋ, ಇಲ್ಲ ಅದನ್ನೆಲ್ಲ ಕುರಿತ ಈವತ್ತಿನ ಭಾವ ವಿಚಾರಗಳನ್ನು ಹೇಳಬೇಕೋ? ಯಾರಿಗೂ ನೋವಾಗದಂತೆ, ಎಲ್ಲರಿಗೂ ಬೇಕಾದ ಸಮತೋಲನ ಸಾಧಿಸಿ ಕತೆ ಹೇಳುವುದಾದರೂ ಹೇಗೆ? ಎಲ್ಲವನ್ನೂ ಸಮತೋಲನ ಭಾವದಿಂದ ನೋಡ ಹೊರಟರೆ, ಕತೆಯೇ ಇರುವುದಿಲ್ಲವಲ್ಲ. ಕತೆ ಇರುವುದೇ ಮನುಷ್ಯನ ಬದುಕಿನಲ್ಲಿ ಏನಾದರೂ ಹುಳುಕು, ಊನ ಇದೆ ಎಂದು ತೋರಿಸಲು ತಾನೇ?
ಆದರೆ ಈವತ್ತಿನ ನಾನು ಆವತ್ತಿನ ಕತೆಯನ್ನು ಈವತ್ತಿಗೆ ಬೇಕಾದ ಹಾಗೆ ಹೇಳುವುದು ಮಾತ್ರ ಕತೆಯಾಗುವುದಿಲ್ಲವಲ್ಲ! ಈವತ್ತಿನ ನನ್ನ ಬಗ್ಗೆಯೂ ಹೇಳಬೇಕಲ್ಲ. ನೋಡಿ, ನಾನು ಪ್ರಾಧ್ಯಾಪಕನಾದೆ, ನಿರ್ದೇಶಕನಾದೆ, ಹತ್ತಾರು ಪ್ರಶಸ್ತಿಗಳು ಬಂದಿವೆ, ಪಿಂಚಣಿ ಹಣವೂ ಬರುತ್ತದೆ. ಪುಸ್ತಕಗಳ ರಾಯಧನವೂ ನಿರಂತರವಾಗಿ ಬರುತ್ತಲೇ ಇರುತ್ತದೆ. ಮಕ್ಕಳೂ ಕೂಡ ಚೆನ್ನಾಗಿ ಓದಿ ಒಳ್ಳೆಯ ಕೆಲಸದಲ್ಲಿದ್ದಾರೆ. ಎಲ್ಲ ಅನುಕೂಲವೂ ಇದೆ. ಎಲ್ಲವೂ ಕೂಡಿ ಬಂದಿದೆ.
ಇನ್ನೂ ಮುಖ್ಯವಾಗಿ ನನ್ನ ಬಂಗಲೆಯನ್ನು ಕೂಡ ಕಲಾತ್ಮಕವಾಗಿ ಕಟ್ಟಿಕೊಂಡಿದ್ದೇನೆ, ವಾಸ್ತುಗನುಗುಣವಾಗಿ. ನಮ್ಮ ಪೂಜಾಗೃಹವನ್ನು ನೀವೊಮ್ಮೆ ದಯವಿಟ್ಟು ಬಂದು ನೋಡಬೇಕು. ಯಾವ ಶ್ರೀಮಠದ ಸ್ವಾಮಿಗಳ ಪೂಜಾಗೃಹದಲ್ಲೂ ಇಲ್ಲದ, ಇರುವಷ್ಟು ಸಾಲಿಗ್ರಾಮದ ಶಿಲೆಗಳಿವೆ. ನಾನಾ ಆಕಾರದ ಶಿವಲಿಂಗಗಳಿವೆ. ದಿನವೂ ಕುಳಿತು ನಾನೇ ಸಾಂಗವಾಗಿ ಪೂಜೆ ಮಾಡುತ್ತೇನೆ. ಪುರಾಣಿಕ ಮಾಸ್ತರ ಮನೆಯಲ್ಲಾಗುತ್ತಿದ್ದಂತೆ ಇಲ್ಲೂ ಕಾವ್ಯ ವಾಚನ, ಕಥಾ ವಾಚನ, ಎರಡನ್ನೂ ನಾನೇ, ನಾನೊಬ್ಬನೇ ಮಾಡುತ್ತೇನೆ. ಯಾವ ಹಾರ್ಮೋನಿಯಂ ಮಾಸ್ತರ್ ದೇವೇಂದ್ರಪ್ಪನೂ ಇಲ್ಲಿ ಸಿಗುವುದಿಲ್ಲ. ಒಂದೊಂದು ಸಲ ಮಾತ್ರ ಪುರಾಣಿಕ ಮಾಸ್ತರು ಕೂಡ ಬಂದು ನನ್ನ ವಾಚನದಲ್ಲಿ ಸೇರಿಕೊಂಡು ಎಲ್ಲ ಮುಗಿದ ಮೇಲೆ ಮುಖದ ತುಂಬಾ ನಗುತ್ತಾ ಮತ್ತೆ ದೇವಲೋಕಕ್ಕೆ ಆತುರಾತುರವಾಗಿ ಹೊರಟು ಹೋಗ್ತಾರೆ. ಬತ್ತಿ ಮಂಗಳಾರತಿ, ಏಕಾರತಿ, ಕರ್ಪೂರದ ಮಹಾ ಮಂಗಳಾರತಿ ಎಲ್ಲವೂ ಉಂಟು. ನೈವೇದ್ಯದ ಎಡೆ ಕೂಡ ಪೂಜಾಗೃಹ ತುಂಬುವಷ್ಟು. ಆದರೆ ಊಟಕ್ಕೆ ಕುಳಿತಾಗ ಮಾತ್ರ ನಾವು ಮನೆ ಮನೆಯವರೇ. ಬಹುಪಾಲು ನಾನು, ನನ್ನ ಹೆಂಡತಿ ಮಾತ್ರವೇ ಇರುತ್ತೇವೆ. ಯಾವೊಬ್ಬ ಅತಿಥಿಯೂ, ಅಭ್ಯಾಗತರೂ ಇರುವುದಿಲ್ಲ. ಹಾಗೆಲ್ಲ ರಾಜಧಾನಿಯ ಪಟ್ಟಣವಾಸದಲ್ಲಿ ಇದ್ದಕ್ಕಿದ್ದಂತೆ ಯಾರೂ ಒಬ್ಬರ ಮನೆಗೆ ಇನ್ನೊಬ್ಬರು ದಿಢೀರನೆ ಬರುವ ಹಾಗಿಲ್ಲ. ಎಲ್ಲವನ್ನೂ ಮುಂಚಿತವಾಗಿ ನಿಗದಿ ಮಾಡಿಕೊಂಡೇ ಭೋಜನಕ್ಕೆ ಆಹ್ವಾನ ಕೊಡಬೇಕು, ಕೊಡಿಸಿಕೊಳ್ಳಬೇಕು. ಹಾಗೆ ಅಪರೂಪಕ್ಕೆ ಬರುವ ಒಬ್ಬರೋ ಇಬ್ಬರೋ ಕೂಡ ನೆಲದ ಮೇಲೆ ಕೂರುವುದಿಲ್ಲ. ಟೇಬಲ್ ಕುರ್ಚಿಯ ಮೇಜವಾನಿಯೇ ಆಗಬೇಕು. ತೀರ್ಥ ಸ್ವೀಕರಿಸಲು ಸರಿಯಾಗಿ ಅಂಗೈ ಒಡ್ಡಲು ಕೂಡ ಬರುವುದಿಲ್ಲ. ಇದೆಲ್ಲ ರಗಳೆ ಏಕೆ ಎಂದು ಮನೆಯ ಹತ್ತಿರದಲ್ಲಿರುವ ಹೋಟಲುಗಳಲ್ಲೇ ಊಟದ ವ್ಯವಸ್ಥೆ ಮಾಡಿಬಿಡುತ್ತೇವೆ. ಸಾರಾಂಶದಲ್ಲಿ ಹೇಳಬೇಕೆಂದರೆ, ಏಕೋ ಯಾರೊಬ್ಬರನ್ನೂ ಮನೆಗೆ ಊಟಕ್ಕೆ ಕರೆಯಬೇಕು, ಅವರಿಗೆ ಏನೇನು ತಿಂಡಿ ತಿನಿಸು ಬೇಕು, ಯಾವ ಪಥ್ಯ ಆಗಬೇಕು ಎಂದು ವಿಚಾರಿಸಿಕೊಂಡು ಅವರಿಗೆ ಇಷ್ಟವಾಗುವ ಹಾಗೆ ಅಡುಗೆ ಮಾಡಿ ಹಾಕಬೇಕು ಎಂದು ನನಗೂ, ನನ್ನ ಹೆಂಡತಿಗೂ ಅನಿಸುವುದೇ ಇಲ್ಲ. ನಮ್ಮ ಪ್ರೀತಿ ತೋರಿಸಲು, ವಂದನೆ ಹೇಳಲು ಸುತ್ತಮುತ್ತ ನಾಲ್ಕು ಜನ ಇರಬೇಕು, ನಾವು ಅವರ ಮೇಲೆ ಭಾವನಾತ್ಮಕವಾಗಿ ಅವಲಂಬಿತವಾಗಿರಬೇಕು, ಎಲ್ಲ ವಿಷಯದಲ್ಲೂ ನಾವು ಬದುಕಿನಲ್ಲಿ ಸ್ವತಂತ್ರವಾಗಿಬಿಟ್ಟರೆ, ಸ್ವಾವಲಂಬಿಗಳಾಗಿಬಿಟ್ಟರೆ, ಯಾವುದಕ್ಕೂ ಯಾರ ಅಗತ್ಯವೂ ಇಲ್ಲದಿದ್ದರೂ ಮನಸ್ಸಿನಲ್ಲಿ ಪ್ರೀತಿ, ಕೃತಜ್ಞತೆಯೆಲ್ಲ ಹೇಗೆ ಬೆಳೆಯುತ್ತವೆ ಹೇಳಿ?
ಈಗ ಸಮಾರೋಪಕ್ಕೆ ಬರುತ್ತೀನಿ. ಈವತ್ತಿನ ಮಧ್ಯಾಹ್ನದ ಊಟ ಚೆನ್ನಾಗಿತ್ತಲ್ಲವೇ? ಎಲ್ಲರೂ ಆಕಳಿಸುತ್ತಿದ್ದೀರಿ, ನಿದ್ದೆಗೆ ಸರಿಯುತ್ತಿದ್ದೀರಿ. ಸಾಲದು ಅಂತ ನಾನು ಬೇರೆ ಸಾಹಿತ್ಯ ವಿಮರ್ಶೆಯ ಮಾತುಗಳನ್ನು ಬಿಟ್ಟು ಭೋಜನ ವ್ಯಾಖ್ಯಾನಕ್ಕೆ ಹೊರಟಿದ್ದೀನಿ. ಇನ್ನು ಒಂದೇ ಒಂದೆರಡು ಮಾತುಗಳನ್ನು ಹೇಳಿ ಮುಗಿಸ್ತೀನಿ.
ಪುರಾಣಿಕ ಮಾಸ್ತರ ಬಂಧು ಬಳಗವೆಲ್ಲ ಈಗ ರಾಜಧಾನಿಯಲ್ಲಿ ತುಂಬಿಹೋಗಿ ನಮ್ಮ ಬಡಾವಣೆಯ ಸುತ್ತಮುತ್ತಲೂ ಕೂಡ ಕೆಲವರಿದ್ದಾರೆ. ಹೆಚ್ಚಿನವರು ನನ್ನ ಮನೆಗೆ ಒಂದೇ ಒಂದು ಸಲವೂ ಬಂದಿಲ್ಲ. ನಾನು ಕೂಡ ಮೇಲೆ ಬಿದ್ದು ಯಾರನ್ನೂ ಕೂಗಲು ಹೋಗಿಲ್ಲ. ಹೋದ ತಿಂಗಳು ಮಾಸ್ತರ ಜನ್ಮ ಶತಮಾನೋತ್ಸವ ಆಯಿತಲ್ಲ. ದೊಡ್ಡ ಹೋಟೆಲಿನಲ್ಲಿ ಆವಾಗ ಎಲ್ಲರೂ ಸೇರಿದ್ದೆವು. ಈವತ್ತಿನಷ್ಟೇ ಆವತ್ತಿನ ಭೋಜನವೂ ಚೆನ್ನಾಗಿತ್ತು.
ನನ್ನ ಮಾತುಗಳು ಮುಗಿಯಿತು. ನಾವೆಲ್ಲರೂ ನಾಡಿನ ಪಳಗಿದ ಕಥನಕಾರರು. ಕತೆಯನ್ನು ಎಲ್ಲಿಂದ ಪ್ರಾರಂಭಿಸಬೇಕು, ಎಲ್ಲಿಗೆ ನಿಲ್ಲಿಸಬೇಕು, ಯಾವ ವಿಚಾರ, ಯಾವ ಭಾವ, ಯಾವ ತಿರುವು, ಯಾವ ಬೇಧಭಾವಕ್ಕೆ ಎಷ್ಟೆಷ್ಟು ಪ್ರಾಮುಖ್ಯತೆ ನೀಡಬೇಕು ಎನ್ನುವುದು ನಿಮಗೆ ಬಿಟ್ಟದ್ದು. ಆದರೆ ಏನನ್ನೂ ಬಿಡಬೇಡಿ, ಯಾವುದನ್ನೂ ಬಿಡಬೇಡಿ, ಯಾವೊಂದು ನೆಲೆಗೂ ಮೋಸಮಾಡಬೇಡಿ ಎಂದು ಮಾತ್ರವಷ್ಟೇ ಕೇಳಿಕೊಳ್ಳುತ್ತೇನೆ.
ಚಿತ್ರ: ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಆಡಿಯೋ
ವಿಡಿಯೋ
ಕೆ. ಸತ್ಯನಾರಾಯಣ
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.
1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.
ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಹಲವಾರು ಕೃತಿಗಳ ಪ್ರಕಟನೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಬಂಧ ಹಾಗೂ ಕಾದಂಬರಿ ಹಾಗೂ ಸಣ್ಣ ಕಥೆಗಳಿಗೆ ಪುರಸ್ಕಾರ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010 ) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಒಟ್ಟು ಸಾಹಿತ್ಯ ಸಾಧನೆಗೆ ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸಾವಿನ ದಶಾವತಾರ ಕಾದಂಬರಿಗೆ ಸೂರ್ಯನಾರಾಯಣ ಚಡಗ ಪ್ರಶಸ್ತಿ ಲಭಿಸಿದೆ.