Poem

ಒಲವಿನೆದೆಯಲ್ಲಿ ಪ್ರೇಮದಸಿರ ನೆಡಿ

ಬದುಕಿಗಂಟಿದ ಚರ್ಮ ಸುಕ್ಕು ಸುಕ್ಕಾಗಿ ಕಾಣಿಸುತಿದೆ
ಸತ್ಯ ಶಾಂತಿಯ ಜೀವನವ ನಿರಾಕರಿಸಿ
ಹತ್ತು ಕೈಬೆರಳುಗಳು ಸೋತು ನೆಲ ನೋಡುತ್ತಿವೆ
ಪ್ರಜಾಪ್ರಭುತ್ವ ಕೆ ಗಾಯ ಮಾಡಿ
ರಕ್ಷಣೆಗೆಂದು ಬಲಿದಾನವ ಕೊಡುತಿರುವಾಗ||

ಮನಸುಗಳಿಗೆ ಗಾಯಗಳಾಗಿ
ಕನಸುಗಳು ಖಾಲಿಯಾದಂತಿವೆ
ದಿನವಿಡೀ ಕೋಮು ಗಾದಿಗೆಗೆ ತಳ್ಳಿ
ಮನಸ ಹೊಡೆಯುವ ಪ್ರತಿಷ್ಠೆಗೆ ಡಾಳಾಗಿರುವಾಗ
ಹಸಿರ ನೆಟ್ಟು ಉಸಿರ ಪಡೆಯುವಾಗ
ದ್ವೇಷದ ಕಥೆ ಹೇಳಿ ಉಣ್ಣುವವರಿರುವಾಗ

ಮನ-ಘನವು ತನ್ನ ಗಡಿ ದಾಟಿ
ಯುದ್ಧ ಸಾರಿದಂತಿದೆ
ಮನದ ಸ್ವಾರ್ಥವು ಖಾಲಿ ಕುಂಟೆಯ ಗಡಿಯಲ್ಲಿ
ಮಾನವರ ರಕ್ತ ಚಿಮ್ಮಿಸಿ ಕಾಲಿಗಂಟಿಸಿಕೊಳ್ಳುತಿರುವಾಗ
ನೆಲ ಬಿರಿದು ಗಹಗಹಿಸುತ್ತಿದೆ
ಈ ಜಗಕೆ ಶಾಂತಿಯ ಹೇಗೆ ಮೂಡಿಸಲೆಂದು!

ಮನ ಮುರಿದು ವಲಸೆ ಸಾಗಿ
ತನ್ನ ತಾ ರಕ್ಷಿಸಿಕೊಳ್ಳಲು ಹಪಹಪಿಸುತಿರುವಾಗ
ರಾಷ್ಟ್ರ ಪ್ರೇಮವು ಇಲ್ಲಿ ಅಭಾಸವಾಗಿದೆ!
ತಂಪಿನರಮನೆಯಲಿ ಕೂತು
ರಾಷ್ಟ್ರ ಪ್ರೇಮದ ಸೋಗನು ಸೊಲ್ಲುವವರಿರುವಾಗ
ಯಾರು ಯಾರ ರಕ್ಷಣೆಯಲಿ?!
ರಕ್ಷಕನು ತನ್ನ ಜೀವರಕ್ಷಣೆಗೆ ಭಯದಲ್ಲಿರುವಾಗ!?
ಮಾನವರೆದುರು ಪ್ರತಿಷ್ಠೆಯ ಪರಾಕಾಷ್ಠೆ ನೆಲದಲ್ಲಿ
ಮಾನವ ಪ್ರೇಮದಿ ಅಭಯ ನೀಡಲ ?!
ರಾಷ್ಟ್ರ ಪ್ರೇಮದಿ ಬಲಿದಾನ ಆಗಲ?!

ಅಹಂಕಾರದ ಪರಮಾವಧಿಗರ ರಾಷ್ಟ್ರಧರ್ಮಕೆ
ಜೀವ ವಿಜ್ಞಾನ ವ ಬಲಿನೀಡಿ
ನೆಲದುಸಿರ ಕಂಪನು ವಿಷಮಯಗಳಿಸುವ
ದ್ವೇಷ ಹುಟ್ಟಿಸುವ ಪರಿ ಸಾಕು
ಜೀವ ವಿರೋಧಿ ಪರಾಕಾಷ್ಠೆ ಗೆ ಬಲಿದಾನ ಸಾಕು
ಜಗಕೆ ಮಾನವ ಪ್ರೇಮದ ಸೋಂಕನು
ರಾಷ್ಟ್ರ-ರಾಷ್ಟ್ರಕೂ ಹರಡಿ ಬೆಳೆಸಬೇಕು
ವಿಶ್ವ ಶಾಂತಿಯು ಈ ಮಾನವ ಪ್ರೇಮದಲಿ
ಬಹುತ್ವಗೊಂಡಿರುವ
ರಾಷ್ಟ್ರ-ರಾಷ್ಟ್ರ ಪ್ರೇಮವ ಮಾನವಪ್ರೇಮದಲಿ ಕೂಡಿ
ಒಲವಿನೆದೆಯಲ್ಲಿ ಪ್ರೇಮದಸಿರ ನೆಡಿ
ಪ್ರೇಮ ತುಂಬಿದ ಮನದಲ್ಲಿ
ಕನಸ ಕಾಣಲು ಬಿಡಿ||

~ಶ್ರೀಧರ ಜಿ ಯರವರಹಳ್ಳಿ

ಶ್ರೀಧರ ಜಿ ಯರವರಹಳ್ಳಿ

ಶ್ರೀಧರ ಜಿ ಯರವರಹಳ್ಳಿ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನವರು. ಬಿ ಎಸ್ ಸಿ ಪದವೀಧರರಾಗಿರುವ ಅವರು ಈಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಒಲವಿರುವ ಅವರಿಗೆ ಬರವಣಿಗೆ, ಓದುವುದು ಹವ್ಯಾಸವಾಗಿದೆ. ಅವರ ಕೆಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.

More About Author