ಇನಿತು ಮುನಿಸೇಕೆ ಗೆಳತಿ ನಸು ನಗುತ ಅವತರಿಸು
ಅನಿತು ದೂರದಲಿ ನಿಂತು ಮನ ಹರುಷ ಆಸ್ವಾದಿಸು
ನೀಳ ಕುರುಳು ನವಿರಾಗಿ ಜಾರುತಿರೆ ಇಳೆಗೆ ಮಳೆ ಸುರಿದಂತೆ
ಆಳ ಸಾಗರ ಅಲೆಯಾಗಿ ಹೊಮ್ಮುತಿರೆ ಬಾಳಿಗೆ ಭಾವ ಹರಿದಂತೆ
ಇನಿದಾದ ಸರದಲಿ ಮನವೆಲ್ಲ ಜತನದಿ ಓಡಾಡಿ ನದಿಯಾದೆ
ಸನಿಹದಿ ನವಿರಾಗಿ ಕನಸೆಲ್ಲಾ ತುಳುಕುತ ಓಲಾಡಿ ಕಲೆಯಾದೆ
ಒಂದು ಗಂಭೀರ ಮೌನ ನಿನ್ನ ವದನಕೆ ಸೊಗಸು ಸುರಿಸಿದೆ
ಅಂದದ ತಿಳಿ ನಗುವು ನಿನ್ನ ಕಣ್ಣಿಗೆ ಒಲವು ತುಂಬಿದೆ
ನಿನ್ನೊಲವಿನಲಿ ಒಯ್ದಾಡಿ ಒಡನಾಡಿ ಮನ ಮುದಗೊಂಡಿದೆ
ಕಣ್ಣಿನಾಳದಲಿ ಸೊಗಸಾಗಿ ತುಳುಕಾಡಿ ಎದೆ ಮೇರೆ ಮೀರಿದೆ
ಅಷ್ಟು ಬೆಳಕಾಯಿತು ನನ್ನ ಜಗವು ನಿನ್ನಿರುವಿಕೆಯ ದೆಸೆಯಿಂದ
ಇಷ್ಟು ಸಾಕಾಯಿತು ಬಾಳಿಗೆ ಮನ ಹಗುರವಾಯಿತು ಒಲವಿಂದ
ರಚನೆ: ಎಂ.ವಿ. ಶಶಿಭೂಷಣ ರಾಜು
ಎಂ.ವಿ. ಶಶಿಭೂಷಣ ರಾಜು
ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.
ಕೃತಿಗಳು: ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,
More About Author