Poem

ನೆನಪುಗಳನ್ನು ಮಡಿಚಬೇಕಾಗಿತ್ತು 

ನೆನಪುಗಳನ್ನು ಮಡಿಚಬೇಕಾಗಿತ್ತು
ಜಾತ್ರೆ ಮುಗಿದ ಮೇಲೆ
ಉರುಳಬೇಕಾಗಿತ್ತು ತೇರು
ದವನದ ಘಮಲಿನಲಿ

ನೆನಪುಗಳನ್ನು ಮಡಿಚಬೇಕಾಗಿತ್ತು
ಬೆಟ್ಟಕ್ಕೊ ಬಾಲ್ಯದ ಬಳ್ಳಿ ಅಪ್ಪಿಕೊಳ್ಳಬೇಕಾಗಿತ್ತು
ಸೀತಾಫಲ ದಿಕ್ಕು ತಪ್ಪಬಾರದಿತ್ತು
ದನಕಾಯ್ವ ಹುಡುಗನ ಕಳೆ ಕಳೆಗುಂದಬಾರದಿತ್ತು

ನೆನಪುಗಳನ್ನು ಮಡಿಚಬೇಕಾಗಿತ್ತು
ಬಳಿದುಕೊಂಡ ಪಡಿಯ ಸುಣ್ಣದಲಿ
ಅಂಗೈ ಹುಣ್ಣುಗಳು
ಪರಮಾತ್ಮನ ಧ್ಯಾನದಲ್ಲಿ
ಗರಿಕೆಗಳನ್ನ ತಾಕಬೇಕಿತ್ತು

ನೆನಪುಗಳನ್ನು ಮಡಿಚಬೇಕಾಗಿತ್ತು
ಅಕ್ಕ ತಂಗಿಯರ ಹೊಂಡದಾಚೆ ಬೈರಾಪುರ ಈಚೆ
ನಟ್ಟ ನಡುವೆ
ಮುದುಡಿಹ ಬೆಟ್ಟದಲ್ಲೂ
ಪರಮಾತ್ಮನ ಧ್ಯಾನದಲ್ಲಿ ನಂದಿ

ನೆನಪುಗಳನ್ನು ಮಡಿಚಬೇಕಾಗಿತ್ತು
ನೀರ್ಗಲ್ಲಿನ ಸ್ಪರ್ಶ
ಪಾಚಿಯ ಘರ್ಷ
ಮುಕ್ಕಳಿಸಬೇಕಿತ್ತು ಕಿಲ್ಲೆಯ ತೊಟ್ಟಿಲು

ಜಾತ್ರೆ ಮುಗಿದ ಮೇಲೆ
ಆತ್ಮದ ತೇರ ಎಳೆಯುವಾಗಲೇ
ಬೆಟ್ಟದ ಕನವರಿಕೆಗಳು ಮರುಕಳಿಸುವಾಗಲೇ
ದವನದ ಘಮಲು ತೀರುವಾಗಲೇ
ನೆನಪುಗಳನ್ನು ಮಡಿಚಬೇಕಾಗಿತ್ತು

ಅಶೋಕ ಹೊಸಮನಿ

ವಿಡಿಯೋ
ವಿಡಿಯೋ

ಅಶೋಕ ಹೊಸಮನಿ

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು. 1983 ಜೂನ್ 01 ರಂದು ಜನನ ‘ಅಶೋಕವನ’ ಇವರ ಕಾವ್ಯನಾಮ. ತಂದೆ ಬಸವಂತಪ್ಪ, ತಾಯಿ ಮಲ್ಲವ್ವ. ಸಿಂಧನೂರಿನಲ್ಲಿ ಡಿ.ಇಡಿ ತರಬೇತಿ, ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಬಿ.ಎ. ಪದವಿ, ಹಾಗೂ ಎಂ.ಎ. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಕರ್ನಾಟಕ ರಾಜ್ಯ ಮುಕ್ತ ವಿ.ವಿ.) ಪಡೆದಿದ್ದಾರೆ.  ಸೂಫಿ ಸಾಹಿತ್ಯ ಅಚ್ಚು ಮೆಚ್ಚು. 'ಒಂಟಿ ಹೊಸ್ತಿಲು' ಮೊದಲ ಕವನ ಸಂಕಲನ. ‘ಅನಾಮಧೇಯ ಹೂ’ ಅವರ ಮತ್ತೊಂದು ಹನಿಗವನ ಸಂಕಲನ.

More About Author