Poem

ನೀನೇಕೆ ಬಳಿ ಬರುತ್ತಿಲ್ಲ

ಯಾವಾಗಲಾದರೂ ನಿನ್ನ ಕೈಗಳನ್ನು ಹಿಡಿದು ಕೇಳಬೇಕು
ಅಷ್ಟು ಸಲಿಗೆಯೆಂದ ಮೇಲೆ ನೀನೇಕೆ ಹಕ್ಕು ಸಾಧಿಸಲಿಲ್ಲ
ಒಳಗೊಳಗೆ ಅಷ್ಟೊಂದು ದುಃಖ ಕಣ್ಣೀರು ಹನಿಸುತ್ತಿದ್ದರು
ಬಳಿ ಕರೆದು ಹೆಗಲ್ಹಿಡಿದು ನನ್ನ ನೀನೇಕೆ ಎದೆಗಾನಿಸಿಲಿಲ್ಲ
ಚಾಚಿದ್ದ ಹಸ್ತಗಳು ಕಾದು ಸೋತವು ಪ್ರೇಮದ ಭಿಕ್ಷೆ ಕೇಳಿ
ಪ್ರೀತಿಭಾಷೆಗೆ ಪರ್ಯಾಯ ನಾನೆಂದ ನೀನೇಕೆ ಅಪ್ಪಿಕೊಳ್ಳಲಿಲ್ಲ
ಆ ದಾರದ ಮತ್ತೊಂದು ತುದಿ ನಿನ್ನದೇ ಬಳಿಯಿತ್ತು ತಾನೆ
ಸುರುಳಿಯಾದ ಗಂಟು ಬಿಡಿಸಿ ನೀನೇಕೆ ಸರಳವಾಗಿಸಲಿಲ್ಲ
ತಾಪದ ಬೇಗೆ ಒಳಗೆಲ್ಲ ಹೊರಳಾಡಿ ಕಾಡಿ ಕಂಗೆಡುವಾಗ
ಬಿಸಿಯುಸಿರ ಕೊರಳ ತಿರುವಲಿಟ್ಟು ನೀನೇಕೆ ಸಾಂತ್ವನಿಸಲಿಲ್ಲ
ಸಾಕಿನ್ನು ಕೊನೆಗೊಳ್ಳಲಿ ಈ ನೋವಿನಲೆಗಳ ಬಿರು ಬೆಳಗು
ಕಡೆಬಾರಿ ಕರೆಯಿದೆ ಬಾ ವಿರಮಿಸೋಣ ನೀನೇಕೆ ಬರುತ್ತಿಲ್ಲ

ಬಿ.ಎ. ಮಮತಾ ಅರಸೀಕೆರೆ

ಬಿ.ಎ. ಮಮತಾ ಅರಸೀಕೆರೆ ಅವರು ಮೂಲತಃ ಹಾಸನ ಜಿಲ್ಲೆಯವರು. 

ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಸಂತೆ ಸರಕು ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದಲ್ಲದೇ ಕಾಲಡಿಯ ಮಣ್ಣು ಎಂಬ ಅನುವಾದಿತ ಕೃತಿಯನ್ನೂ ರಚಿಸಿದ್ದಾರೆ. 

More About Author