Story

ನೀಲಿ ಕಣ್ಣು ಗೋಧಿ ಬಣ್ಣ

"ಕತೆಗಾರ ಶಿವರಾಜ್ ಡಿ.ಎನ್.ಎಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಡಿಯವರು. ಬರಹ-ಓದು-ನಟನೆ ಹಾಗೂ ಛಾಯಾಗ್ರಹಣ ಅವರ ಹವ್ಯಾಸವಾಗಿದ್ದು, ಸಾಹಿತ್ಯಕ್ಷೇತ್ರದಲ್ಲಿಯೂ ವಿಭಿನ್ನ ಬರವಣಿಗೆಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅವರ ‘ನೀಲಿ ಕಣ್ಣು ಗೋಧಿ ಬಣ್ಣ’ ಕತೆ ನಿಮ್ಮ ಓದಿಗಾಗಿ...

ಪಾಲದ ಏರಿಯಾ ಮುಂದೆ ಆಲದ ಸೊಪ್ಪಿನ ಹೊರೆ ಕಟ್ಟಿದ್ದ ಸೈಕಲನ್ನು ಉಸಿರುಗಟ್ಟಿ ಎದ್ದು ನಿಂತು ಪೆಡಲ್‌ ತುಳಿಯುತ್ತ ಮನು ಬರುತ್ತಿದ್ದ. ಅವನ ನೋಡಿ ಮಾದೇವನು.. ಡೌ’ ಮುಂದುಲ್ ಚಕ್ರ ತಿರ್ಗತಾದ ನೋಡು, ಅಂದಿದ್ದಕ್ಕೆ.. ಮಿಂಡ್ರು ಗುಟ್ಟಿದೋರ ಕಣ್ಣಿಗೆ ಹಂಗೆ ಕಾಣದು, ಅಂತೇಳಿ ಏದುಸಿರು ಬಿಡುತ್ತಲೇ ಸೈಕಲ್ ತುಳಿಯುತ್ತ ಸೀದಾ ಹೋದ. ಕುಳಿತಿದ್ದ ನಾಲ್ವರು ತನ್ನ ನೋಡಿ ಪಳ್ಳೆಂದು ನಕ್ಕಿದ್ದು ಮಾದೇವನ ಗುಪ್ತಾಂಗಕ್ಕೆ ಗುದ್ದಿದಂತಾಯ್ತು.

ಕಣ್ಣಿತ್ತಿ ಕಾಣುವ ನೋಟಕ್ಕೆ ಹಸಿರುಟ್ಟು ನಿಂತ ಬೆಟ್ಟ ಗುಡ್ಡ, ಬಿಸಿಲೇರಿದರೆ ಹೊಳೆವ ಕೆರೆ-ಕಟ್ಟೆ, ಉತ್ತರೆ ಬಿತ್ತರೆ ಏಕವರ್ಣದಲ್ಲೇ ಕಂಗೊಳಿಸುವ ಹೊಲ-ಗದ್ದೆ, ಮಂದಿಗಿಂತಲೂ ಹೆಚ್ಚಾಗಿದ್ದ ದನ-ಕರು ಹಾಗೂ ತೋಟಗಳಿದ್ದು, ದಿನಕ್ಕೆ ಮೂರು ಬಾರಿಯಂತಷ್ಟೆ ಬಸ್ಸು ಬರುವಂತ ಸಾಮಾನ್ಯ ಹಳ್ಳಿಯೊಂದರ ಹಿರಿಯ ಪ್ರಾಥಮಿಕದಲ್ಲಿ ಓದುತ್ತಿದ್ದ ನೀಲಿ ಕಣ್ಣು ಗೋಧಿ ಬಣ್ಣದ ಸಹಜ ಸುಂದರ ಹುಡುಗ ಮನೋಹರ. ತರಗತಿಯಲ್ಲಿ ಎಲ್ಲರಿಗಿಂತಲೂ ಚೂರು ಚುರುಕೆ. ಈ ಮನು ಪುಂಡರಿಗೆ ಪುಂಡ, ಗೆಳೆಯಾರ‍್ಯಾರಿಗೂ ಬಗ್ಗದ ಮೊಂಡ, ಎಷ್ಟೇ ಕೆಲಸ ಮಾಡಿದರೂ ಮನೆಯವರ ದೃಷ್ಟಿಯಲ್ಲಿ ದಂಡಪಿಂಡ. ಸ್ವಾಭಿಮಾನಿ ಅಪ್ಪ-ಅಮ್ಮ, ಪ್ರೀತಿಯ ಅಕ್ಕನ ಒಬ್ಬನೇ ತಮ್ಮನಾದ ಈ ಮನೋಹರನನ್ನು ಊರಕೇರಿಯಾ ಮಂದಿ ಎಲ್ಲರೂ ಮನು, ಮನೂ.. ಎಂದೇ ಕರೆಯುತ್ತಿದ್ದರು. ಎಲ್ಲ ಹುಡುಗರು ಜಗಳವಾಡಿ ಮನೆಗೆ ಬಂದರೆ, ಅಪ್ಪನೊ-ಅಮ್ಮನೊ ಸಮಾಧಾನ ಮಾಡುವುದು ಸಾಮಾನ್ಯ, ಆದರೆ ಇವನು ಮನೆಯಲ್ಲೋಗಿ ಜಗಳದ ಕುರಿತು ಹೇಳಿದರೆ ಅಲ್ಲೂ ಖರ್ಚಿಗೆ ಬೆನ್ನಿನ ಮೇಲೆ ರುಂ' ಎನ್ನುವಂತೆ ಎರಡು ಸಿಗುತ್ತಿತ್ತು. ಹಾಗಾಗಿ ಕಾಲಾಂತರದಲ್ಲಿ ತಾನು ಹೊರಗಡೆ ಗೆಳೆಯರ ಜತೆ ಅದೆಂತಹ ರಂಪ-ರಗಳೆ ಮಾಡಿ ಒದೆ ತಿಂದರೂ, ಮನೆಗೆ ಹೋಗುವಾಗ ಪೂರ್ತಿ ಸಮಾಧಾನ ಮಾಡಿಕೊಂಡೆ ಹೋಗುವುದನ್ನು ಕಲಿತಿದ್ದ. ಬೇರೆಲ್ಲ ಹುಡುಗರಿಗಿಂತ ಇವನಿಗೆ ಬಾಲ್ಯದ ಆಟಗಳಿಗೆ ಅತಿ ಕಡಿಮೆ ಅವಧಿ, ಎಲ್ಲೂ ನಿಲ್ಲುವಂತಿಲ್ಲ, ಕೂರುವಂತಿಲ್ಲ, ಕಾರಣ..ಆಡು, ಕುರಿ, ದನ-ಕರುಗಳ ವ್ಯಾಪಾರ ಮಾಡುತ್ತಿದ್ದ ತಂದೆಯ ವ್ಯವಹಾರ. ಪ್ರತಿ ಮಂಗಳವಾರದ ಸಂತೆಗೆ ಕೊಂಡೊಯ್ಯುಲೆಂದು ಅಕ್ಕ-ಪಕ್ಕದ ಹಳ್ಳಿಗಳಿಂದ ದಿನಕ್ಕೊಂದೆರಡದರೂ ಮನೆಗೆ ಹೊಸ ಅತಿಥಿಗಳಂತೆ ಆಡು-ಕುರಿ ತಂದು ಸೇರಿಸುತ್ತಿದ್ದರು. ಬೆರಳೆಣಿಕೆ ದಾಟಿದರಷ್ಟೆ ಅಪ್ಪ ಅವುಗಳ ಮೇವು ಕುರಿತು ಚಿಂತಿಸುತ್ತಿದ್ದರು. ಕಡಿಮೆಯಿದಷ್ಟು ಮನೋಹರನದೆ ಅವುಗಳ ಹಾರೈಕೆಯ ಸಂಪೂರ್ಣ ಜವಾಬ್ದಾರಿಯಾಗಿರುತ್ತಿತ್ತು. ಶಾಲೆಯಿಂದ ಬರುವ ತನಕ ಅಪ್ಪ ಅವುಗಳನ್ನು ಗಮನಿಸುತ್ತಾ, ಮನೋಹರ ಮನೆಗೆ ಬಂದಾಕ್ಷಣವೇ ಬ್ಯಾಗು ಬಿಸಾಕಿ ಉಸ್’ ಎನ್ನುವ ಮೊದಲೇ ಅಪ್ಪ ಹೇಳಿ ಹೋಗಿದ್ದ ಅಡ್ರೆಸ್ಸಿಗೆ ಹೋಗಲು ಅಮ್ಮ ತಿಳಿಸುತ್ತಿದ್ದರು. ಮನು ಹೋಗಲೆ ಬೇಕಿತ್ತು. ಅಪ್ಪನಿಗೆ ಎಲ್ಲೂ ಹೊರಗಡೆ ಹೋಗುವಂತ ಕೆಲಸವಿಲ್ಲದಿದ್ದರೆ ಅವನಿಗೆ ಸೊಪ್ಪು ಕಡಿದು ತಂದಿಡಲು ಹೇಳು! ಅಂತಲಾದರೂ ಹೇಳಿ ತಾವು ಅವುಗಳನ್ನು ಮೇಯಿಸಲು ಹೋಗಿರುತ್ತಿದ್ದರು.

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಊರಲ್ಲಿ ಮನು ಹತ್ತದ ಮರಗಳಿಲ್ಲ, ಸುಬಾಬುಲ್, ಅತ್ತಿ, ಆಲ, ಬೇವು, ಬಸರಿಮರ ಸೇರಿದಂತೆ ಹೆಜ್ಜೇನು ಕಟ್ಟಿದ್ದ ಊರ ದೊಡ್ಡ ಅರಳಿಮರಕ್ಕೂ ಅಂಜದೆ ಹತ್ತಿ ಸೊಪ್ಪು ಕಡಿದು, ಹೊರಲಾಗದಷ್ಟು ಹೊರೆಕಟ್ಟಿ ಬೈಸಿಕಲ್‌ನಲ್ಲಿ ಹೇರಿಕೊಂಡು ಮನೆಗೆ ಸಾಗಿಸುತ್ತಿದ್ದ. ಮಂಗಳವಾರ ಸಂತೆಯಾಗಿದ್ದರಿಂದ ಸೋಮವಾರಕ್ಕೂ ಬೇಕಾಗುಷ್ಟು ಅಥವಾ ಸಾಕಾಗುವಷ್ಟು ಮೇವುಗಳಾದ (ಹುಲ್ಲು ಸೊಪ್ಪು) ಶೇಖರಣೆ ಮಾಡುವುದು ಮನುವಿನ ಭಾನುವಾರದ ಆದ್ಯ ಕರ್ತವ್ಯವಾಗಿತ್ತು.. ಹಾಗೆ ಅಪ್ಪನೂ ಮನೋಹರನ ಕಾರ್ಯವೈಖರಿ ನೋಡಿ ಒಂದೊ ಎರಡೊ ರುಪಾಯಿ ಕೊಡುತ್ತಿದ್ದರು. ಇವನು.. ಸಮಯ ಸಿಕ್ಕಾಗ ಅದನ್ನೇ ಗೋಲಿ, ಬುಗುರಿಯಲ್ಲೊ ಅಥವ ಚಿಲ್ಲರೆ ಅಂಗಡಿ ತಿನಿಸುಗಳಿಗೊ ಕಳಿಯುತ್ತಿದ್ದ. ಅಪ್ಪನ ವ್ಯವಹಾರಗಳಿಗೆ ಸಹಾಯಕನಂತಿದ್ದ ಮನುವಿಗೆ, ವಾರಕ್ಕೊಮ್ಮೆ ಸಂತೆಮರಳ್ಳಿಯಲ್ಲಿ ನೆಡೆಯುತ್ತಿದ್ದ ಸಂತೆಯ ದಿನ ಆ ಅಂಗಳದಲ್ಲೆ ಇದ್ದ ವಿಭೂತಿ ವೀರಪ್ಪನ ವೀರಭದ್ರೇಶ್ವರ ಹೋಟೆಲ್‌ನಲ್ಲಿ ಅವನ ಫೇವರೆಟ್ ಪೂರಿ-ಸಾಗು ಇಷ್ಟ ಬಂದಷ್ಟು ತಿನ್ನುವ ಅವಕಾಶಗಳಿರುತ್ತಿತ್ತು. ಶಾಲಾ ವಾರ್ಷಿಕ ರಜೆಗಳಲ್ಲದೆ, ಹಬ್ಬ-ಹರಿದಿನ ಹಾಗೂ ಅನಿರೀಕ್ಷಿತ ರಜೆ ಮಂಗಳವಾರ ಬಿದ್ದರಂತೂ ಮನೋಹರನಿಗೆ ಎರಡೂ ಬಾರಿ ಅದೇ.. ಅಂದರೆ ತಿಂಡಿ ಊಟ ಎರಡು ಸಲವೂ ಅವನಿಷ್ಟದ ಪೂರಿಯನ್ನೇ ಸವಿಯುವಂತ ಸೌಭಾಗ್ಯ ದೊರೆಯುತ್ತಿತ್ತು. ಅದಕ್ಕೆ ಮನುವಿಗೂ ಸಂತೆಯೆಂದರೆ ಒಂದು ರೀತಿ ಖುಷಿ. ಮಂಗಳವಾರ ಕೋಳಿ ಕೂಗುವ ಹೊತ್ತಿಗೆದ್ದು, ಒಮ್ಮೊಮ್ಮೆ ಬಸ್ಸು, ಒಮ್ಮೆ ಲಗೇಜ್ ಆಟೋಗಳಲ್ಲಿ ತಮ್ಮ ಆಡು-ಕುರಿಗಳನ್ನು ತುಂಬಿಕೊಂಡು ಸಂತೆಗೆ ಸಾಗಿಸುತ್ತಿದ್ದರು. ಮನು ಶಾಲೆಗೆ ಹೋಗುವ ಸಲುವಾಗಿ ಒಂಭತ್ತು ಹತ್ತರ ತನಕ ಊರ ಬಸ್ಸತ್ತಿ, ವಾಪಸು ತಲುಪಿ ಬಿಡುತ್ತಿದ್ದ. ರಜಾದಿನಗಳಾದರೆ ಎಲ್ಲಾ ಆಡು,ಕುರಿ ಮಾರಾಟವಾಗುವ ತನಕ ಮಧ್ಯಾಹ್ನ ಆಗುತ್ತಿತ್ತು. ನಂತರ ಅಪ್ಪನೊಂದಿಗೆ ಮನೆಗೆ ಬೇಕಾದಂತ ರೇಷನ್ ಹಾಗು ಸಣ್ಣ-ಪುಟ್ಟ ಪದಾರ್ಥಗಳೊಂದಿಗೆ ತನಗೆ ಬೇಕಾದ ಪುಸ್ತಕ, ಪೆನ್ನು, ಬಟ್ಟೆ, ಚಪ್ಪಲಿ ಇತ್ಯಾದಿಗಳನ್ನು ಪ್ರೀತಿಯಿಂದಲೆ ಕೊಡಿಸುತ್ತಿದ್ದರು. ಮನೆಯಲ್ಲಿ ಪ್ರತಿ ಮಂಗಳವಾರವೂ ಜಿಲೇಬಿ, ಸೇಬು ಘಮಲಿನೊಂದಿಗೆ ಮಾಂಸಹಾರವು ಖಾಯಂ. ಹಾಗಾಗಿ ಮನುವಿಗೆ ಭಾನುವಾರಕ್ಕಿಂತಲೂ ಈ ಮಂಗಳವಾರವೇ ಇಷ್ಟ.

ಆಟೋಟಗಳಲ್ಲಿ ತೊಡಗಲು ಆಗದೆ ಇದ್ದಾಗ ಮನು, ತನ್ನ ಪರಿಸ್ಥಿತಿ ಹಾಗು ಕೆಲಸದೊತ್ತಡದ ಆಳ-ಅಗಲದ ಕುರಿತು ಹಿತ್ತಲಿನಲಿದ್ದ ಮರವೊಂದಕ್ಕೇರಿ ಕುಳಿತು ಚಿಂತಿಸುವಾಗ ಹೀಗೆಂದುಕೊಳ್ಳುತ್ತಿದ್ದ.. ಬುದ್ಧಿ ಬಂದಂತ ಕಾಲದಲ್ಲಿ ವರ್ಷಗಳ ಹಿಂದೆ, ಮನೆಯಲ್ಲಿ ರೇಷ್ಮೆಹುಳು ಸಾಕಾಣಿಕೆಯ ಮಾಡುವಾಗ ಅಪ್ಪ, ಅಮ್ಮ, ಅಕ್ಕನ ಜತೆಗೂಡಿ ಮನೂ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದ. ಆಗೆಲ್ಲ ಇಂತಹ ಹಣಕಾಸಿನ ಓಡಾಟವು ಕಡಿಮೆ, ತಿಂಡಿ ತಿನಿಸುಗಳೂ ಕಡಿಮೆ, ಆದರೆ ಮನೆಮಂದಿಯ ಕೆಲಸ ಮಾತ್ರ ಹೆಚ್ಚಿರುತ್ತಿತ್ತು. ಹೇ ಆ ಕಾಲದ ಕೆಲಸದ ಮುಂದೆ ಇದೇನೊ ದೊಡ್ಡದಲ್ಲ ಎಂಬಂತೆ ತನಗೆ ತಾನೇ ಸಮಾಧಾನಗೊಳ್ಳುತ್ತಿದ್ದ.

ಅಪ್ಪನ ಸೈಕಲ್ ತುಳಿಯುವುದನ್ನು ಕಲಿತು, ಪ್ರೌಢ ಶಾಲೆ ಮಟ್ಟಿಲೇರಿ ಬರುವಷ್ಟರಲ್ಲಿ ಸ್ವಲ್ಪ ಬುದ್ಧಿವಂತನೂ ಆಗಿದ್ದ ಮನೋಹರ, ಆಡು-ಕುರಿಗಳು ಮನೆಗೆ ಕಡಿಮೆ ಬಂದಂತಹ ಕಾಲದಲ್ಲಿ ಸುಮ್ಮನೆ ತನ್ನ ಪುಂಡಾಟಿಕೆಯಲ್ಲಿ ಕಾಲ ಕಳೆಯುವಂತ ಸಹಜನಾಗಿರಲಿಲ್ಲ. ಮೊದಲೇ ಮನೆಕೆಲಸಗಳಿಗೆ ಹೊಂದಿಕೊಂಡು ಬೆಳೆದವನು, ಅವನಿಗೂ ಸ್ವಲ್ಪ ಜವಾಬ್ದಾರಿಗಳ ಅರಿವಿತ್ತು. ಹಾಗಾಗಿ ತನಗಿಂತ ಹಿರಿಯರಾದ ಸ್ನೇಹಿತರೊಂದಿಗೆ ಕಾಡಿಗೆ ಹೋಗಿ ಸೌದೆ ತರುವಂತಹ ಕೆಲಸವನ್ನು ಮಾಡುತ್ತಿದ್ದ, ಒಮ್ಮೊಮ್ಮೆ ಇನ್ನೊಂದೆಜ್ಜೆ ಮುಂದೆಯೇ ಹೋಗಿ ಮನೆಗೆ ಸಹಕರಿಸುವ ಆಲೋಚನೆಯಿಂದಲೋ ಅಥವಾ ತಾನು ಕೂಡ ಖರ್ಚಿಗೆ ಅಂದರೇ ತಿಂಡಿ-ತಿನಸು, ಗೋಲಿ, ಬುಗರಿಗೆ ಕಾಸು ಮಾಡಿಕೊಳ್ಳುವ ಒಳ್ಳೆಯ ದೃಷ್ಟಿಯಿಂದಲೊ, ತನಗೆ ಕರಗತವಾಗಿದ್ದ ಮರ ಹತ್ತುವ ಕಲೆಯಿಂದ ಕೆಲವರ ತೆಂಗಿನ ತೋಟದಲ್ಲಿ ಮರ ಏರಿ, ಕಾಯಿಕಿತ್ತು ಕೊಟ್ಟು, ಮರಕ್ಕೊಂದೆರಡು ತೆಂಗಿನ ಕಾಯಿ ಅಂತಲೊ, ಐದು ರೂಪಾಯಿ ಎಂತಲೊ ಮಾತಾಡಿ ಮಾಲೀಕರಿಂದ ನೀಯತ್ತಿನಿಂದ ಹಣ ಪಡೆಯುವ ಸಂಪಾದನೆಯ ಹಾದಿ ಕಂಡುಕೊಂಡಿದ್ದ. ಆ ಹಳ್ಳಿಯ ಅಂಗಡಿ ಮುಂದಿನ ಹಲಗೆ ಸವೆಸಿ, ಅಂಡಲೆಯುತ್ತ ಕೂತ ಸೊಂಬೇರಿ ಯುವಕರ ಕಣ್ಣಿಗೆ ಮನೋಹರ ಅವನ ಕೆಲಸ ಕಾರ್ಯಗಳಿಂದ ಆಶ್ಚರ್ಯವಾಗಿ ಕಾಣುತ್ತಿದ್ದ. ಬೇಸಿಗೆ ರಜೆಯ ಸಮಯದಲ್ಲಿ ಆ ಪ್ರಾಂತ್ಯದ ಅವನ ವಯಸ್ಸಿನ ಮಕ್ಕಳೆಲ್ಲರು ಬೇವು, ಹೊಂಗೆ, ಇಪ್ಪೆಯ ಬೀಜಗಳನ್ನು ಆಯ್ದು ಮಾರಾಟ ಮಾಡಿ ಮುಂದಿನ ತರಗತಿಗೆ ಬೇಕಾದ ಪುಸ್ತಕ ಪೆನ್ನು ಕೊಳ್ಳಲು ಹಣ ಕೂಡಿಸುವ ಕೆಲಸ ಮಾಡುತ್ತಿದ್ದರು. ಮನೋಹರನಿಗೆ ಆ ತೊಂದರೆ ಇರಲಿಲ್ಲ, ಅಪ್ಪ ಕೇಳಿದ್ದೇಲ್ಲ ಕೊಡಿಸುತ್ತಿದ್ದರು. ಆದರೆ ಅವನು ಮನೆ ಕೆಲಸ ಮಾಡಬೇಕಿತ್ತಷ್ಟೆ. ಮಾಮೂಲು ಕೆಲಸದಲ್ಲಿ ಬಿಡುವಾದರೆ, ಹಿತ್ತಲಲ್ಲಿ ಬೆಳೆಸಿದ್ದ ಹೂವಿನ ಗಿಡಗಳಿಗೆ ಅಕ್ಕನ ಜೊತೆಗೂಡಿ ನೀರುಣಿಸುವುದು ಕೂಡ ಅವನ ಪಾಳಿಪಟ್ಟಿಯಲ್ಲಿರುತ್ತಿತ್ತು.

ಹೀಗೆ ಸಾಮಾನ್ಯವಾಗಿ ಆಟೋಟ, ಮನೆಯ ಕೆಲಸ-ಕಾರ್ಯ ಓದಿನೊಂದಿಗೆ ಮನೋಹರನ ಬಾಲ್ಯ ಜೀವನ ಸಂತೋಷವು ಅಲ್ಲದ, ದುಖಃವು ಅಲ್ಲದೇ ಸಮಯ ಸಂದರ್ಭಗಳೊಂದಿಗೆ ಸಾಗುತ್ತಿರುವಾಗ.. ಒಮ್ಮೆ ಬೇಸಿಗೆ ರಜೆಯ ಕೊನೆಯ ದಿನಗಳಲ್ಲಿ ಮನೆಯಲ್ಲಿ ಆಡು ಕುರಿಗಳು ಇನ್ನೂ ಬಂದಿರದ ಕಾರಣ ಸುಮ್ಮನೆ ಪೋಲಿ ಅಲೆಯುವುದು ಬೇಡ ಎಂದು ನಿರ್ಧರಿಸಿ ತನಗಿಂತ ಹಿರಿಯರೂ ಕಿರಿಯರು ಆದ ಗೆಳೆಯರೊಂದಿಗೆ ಕೆಲಸಕ್ಕೆಂದು ಹೋಗಿದ್ದ. ವೆಂಕಟೇಶ್ವರ ರಾವ್ ಆಂಧ್ರದಿಂದ ಬಂದು ಆ ಪ್ರಾಂತ್ಯಕ್ಕೆ ಹೊಸ ಬೆಳೆಯ ಪದ್ಧತಿಗಳನ್ನು ಹೊಸದಾಗಿ ತಂದು ಬುಡದಲ್ಲೆ ಕಾಯಿಬಿಡುವಂತ ಹೊಸದೇ ತಳಿಯ ಪರಂಗಿಹಣ್ಣಿನ ಪಸಲು ಬೆಳೆದಿದ್ದರು. ಆ ತೋಟದಲ್ಲಿ ಪಪ್ಪಾಯಿ ಬೆಳೆಯ ಕೊಯ್ಲು ನಡೆಯುತ್ತಿತ್ತು. ಹಣ್ಣಿನ ಮೇಲೆ ಕೆಂಪನೆ ಪಟ್ಟೆ ಬಿದ್ದಿದೆ ಎಂದರೆ ಆ ಕಾಯಿ ಹಣ್ಣಿಗೆ ಬಂದಿದೆ ಎಂಬಂತೆ ಅರ್ಥ. ಅಂತಹವನ್ನು ದೊಡ್ಡ ಆಳುಗಳು ಕಿತ್ತು ಬುಡದಲ್ಲಿ ಇಟ್ಟಿರುತ್ತಿದ್ದರು, ಅದಕ್ಕೆ ಪೇಪರ್ ಸುತ್ತಿ, ಒಗ್ಗೂಡಿಸಿ, ಗುಡ್ಡೆ ಹಾಕುವ ಕೂಲಿ ಕೆಲಸಕ್ಕೆ ಹೋಗಿದ್ದರು. ಮನುವನ್ನು ಪ್ಯಾಟ್ರಿ ಎನ್ನುವ ಹೆಸರಿನಿಂದ ಕರೆಯುತ್ತಿದ್ದ ಜೊತೆಗಾರರಾದ ಕರಡಿ ಸುನೀಲಾ, ಕೋಳಿಶಿವು, ದಪ್ಪತಲೆ ರುದ್ರ, ಮೂಗಟ್ಟಿ ಸಂತೂ ಮುಂತಾದವರಿದ್ದರು. ಉರಿ ಬಿಸಿಲಿನಲ್ಲಿ ಮಧ್ಯಾಹ್ನ ಊಟದ ಸಮಯ ಎಳೆದೇಹಗಳು ದಣಿದು ಬೆಂಡಾಗಿದ್ದವು. ಮಾಲೀಕರು ಹೋಟೆಲ್‌ನಿಂದ ತರಿಸಿದ್ದ ಪಾರ್ಸಲ್ ಪೊಟ್ಟಣ ಹಿಡಿದು ಆ ತೋಟದ ಪಕ್ಕದ ಖಾಲಿ ಜಮೀನಿನಲ್ಲಿ ರಸ್ತೆಗೆ ಕಾಣುವಂತೆ ಒಂದು ದೊಡ್ಡ ವಿಭೂತಿ ಮಾವಿನ ಮರದ ನೆರಳಿನಲ್ಲಿ ಮನು ಹಾಗು ಗೆಳೆಯರೆಲ್ಲ ವೃತ್ತಾಕಾರದಲ್ಲಿ ಕೂತು ಊಟ ಮಾಡುತ್ತಿದ್ದರು. ಹಿಂದಿನಿಂದ ಬಂದ ಮನೋಹರನ ಅಪ್ಪ ಹತ್ತಿರ ಬರುತ್ತಿದ್ದಂತೆ ಒಂದು ದಪ್ಪನೆ ಮಣ್ಣಿನ ಹಿಂಟೆ ತೆಗೆದು ರಸ್ತೆಕಡೆಗೆ ಬೆನ್ನುಮಾಡಿ ಕೂತಿದ್ದ ಮನೋಹರನಿಗೆ ಬೀಸಿ ಹೊಡೆದೇ ಬಿಟ್ಟರು, ಡುಬ್ಬೆನ್ನುವಂತೆ ಅವನ ಬೆನ್ನಮೇಲೆ ಬಿದ್ದು ಪುಡಿಯಾಯ್ತು ‘ಅವ್ವಾ’ ಎಂದು ಚೀರಿ ತಿರುಗಿ ಬೆನ್ನು ಮುಟ್ಟಿಕೊಳ್ಳುವಷ್ಟರಲ್ಲಿ ಅಪ್ಪ ಹಿಂದೆ ನಿಂತಿದ್ದರು, ‘ಬೋಳಿ ಮಗನೆ ಏನ್ಮಾಡ್ತಿದೈ ಇಲ್ಲಿ’ ಎಂದು ಬೈಯುತ್ತಲೆ ಬಂದವರು ಊಟ ಮಾಡುತ್ತ ಕುಳಿತಿದ್ದ ಅವರನ್ನು ನೋಡಿ ಕ್ಷಣಕಾಲ ಚಕಿತರಾಗಿ ‘ಯಾನ್ರ್ಯಡ ಇದು’ ಎಂದು ಕೇಳಿದಾಗ ಕೆಲಸಕ್ಕೆ ಬಂದಿರುವ ವಿಷಯವನ್ನು ಸುನೀಲ ವಿವರಿಸಿ ಹೇಳಿದ. ‘ದಾರಿಲೋಯ್ತಿದಿ ನಿಮ್ಮ ಮಾತು ಕ್ಯೋಳುಸ್ತು ನಾನೆಲ್ಲೊ ಇಸ್ಪೀಟ್ ಆಡ್ತಾ ಕೂತಿದ್ದರೇನೊ ಅನ್ಕಂದ್ ಬಂದಿ’ ಎಂದು ಅಳುತ್ತ ಕೂತಿದ್ದ ಮನೋಹನಿಗೆ ತನ್ನ ಟವಲ್ ಕೊಟ್ಟರು, ಮನುವಿನ ಅಳು ಕಣ್ಣೀರೊಂದಿಗೆ ಮೂಗಿನ ನೀರು ಅರಿಯುವಷ್ಟು ಗಾಢವಾಗಿತ್ತು. ಅಪ್ಪನಿಗೆ ಅಪರಾಧಿ ಪ್ರಜ್ಞೆ ಕಾಡಿತೋ ಏನೊ ಕಡೆಗೆ ಮನುವಿನ ಕೈಗೆ ಐದಾರು ರೂಪಾಯಿ ಇಟ್ಟು, ಕೊಟ್ಟ ಟವೆಲ್‌ ಅನ್ನು ಅಲ್ಲೆ ಬಿಟ್ಟು ಹೋದರು. ಹೊಡೆದದ್ದು ತಂದೆಯೇ ಆದರೂ ತಪ್ಪಿಲ್ಲದೆ ಬಿದ್ದ ಹೊಡೆತ ತಿಂದದ್ದಕ್ಕೆ ಶುಲ್ಕದಂತೆ ಐದು ರೂಪಾಯಿ ಕೊಟ್ಟಿದ್ದರೂ ಮನೋಹರನಿಗೆ ಆ ಘಟನೆ ಶಾಲೆ ಶುರವಾದ ಕೆಲ ದಿನಗಳ ತನಕವೂ ಕಾಡುತ್ತಲೇ ಇತ್ತು.

ಮನು ಬೇಸರವಾದಾಗ, ಹಿತ್ತಲಲ್ಲಿ ಬೆಳೆದಿದ್ದ ದೊಡ್ಡದು ಅಲ್ಲ, ಸಣ್ಣದೂ ಅಲ್ಲದಂತೆ ಇದ್ದ ಹುಣಸೆ ಮರವೇರಿ ಕೂತು ಯೋಚಿಸುತ್ತಿದ್ದ. ಹಿತ್ತಲ ಆ ಏಕಾಂತ ಜಾಗದಲ್ಲಿ ಮನೋಹರ ಈ ವಿಚಾರವಾಗಿ ಮೂರ್ನಾಲ್ಕು ದಿನಗಳ ಕಾಲ ಮರವನ್ನು ಏರಿಳಿದು ಚಿಂತಿಸಿದ್ದ. ಹುಣಸೆ ಮರದ ಬಿಸಿ ಹವೆಯಿಂದಾಗಿ ಹೂವಿನ ಗಿಡಗಳು ಒಣಗುತ್ತವೆ ಎನ್ನುವ ದೃಷ್ಟಿಯಲ್ಲಿ, ಖಾಲಿಯಿದ್ದ ಅಪ್ಪ ಒಂದು ದಿನ ಹಿತ್ತಲ ಆ ಹುಣಸೆ ಮರವನ್ನೆ ಕಡಿದು ಉರುಳಿಸಿ ಸಿಗಿದು ಸೌದೆ ಮಾಡಿದ್ದರೂ. ಆ ದಿನ ಮನುವಿಗೆ ಯಾರೋ ತನ್ನ ನೋವು ಹಂಚಿಕೊಳ್ಳುತ್ತಿದ್ದ ಪ್ರೀತಿಯ ಗೆಳೆಯನನ್ನೆ ಕಳೆದುಕೊಂಡಂತ ಬೇಸರವಾಗಿತ್ತು. ಒಮ್ಮೊಮ್ಮೆ ಮನೆಗೆ ಬರುತಿದ್ದ ಗೆಂಡಗ ಮರಿ (ಗಿಡ್ಡಗಿನ ಸಣ್ಣ ಮೇಕೆ ಅಥವ ಕುರಿ ಮರಿ), ಕುರಿಮರಿಗಳನ್ನೂ ವಾರಂತರಗಳ ತನಕ ಪ್ರೀತಿಯಿಂದ ಜೊತೆಗೆ ಓಡಾಡಿಸಿಕೊಂಡು ಕತ್ತಿಗೊಂದು ದಾರವೊ ಗೆಜ್ಜೆಯೊ ಗಂಟೆಯೊ ಕಟ್ಟಿಕೊಂಡು ಸಾಕಿ ಸಲಹುತ್ತಿದ್ದ, ಅದನ್ನ ಒಂದು ದಿನ ಯಾರೊ ಖರೀದಿಸಿಕೊಂಡು ಹೋದರು ಎಂದಾಗಲೂ ಮನೋಹರನಿಗೆ ಇಂತದ್ದೇ ಬೇಸರಗಳು ವರ್ಷಾರುತಿಂಗಳಿಗೆ ಸಾಮಾನ್ಯವಾಗಿತ್ತು. ಇದೆಲ್ಲದರ ನಂತರದಲ್ಲಿ ನೆಡೆದಂತ ಈ ಒಂದು ಘಟನೆಯು ಮನೋಹರನನ್ನ ಬಹುದೊಡ್ಡ ತಿರುವಿಗೆ ಕರೆದೊಯ್ದು ನಿಲ್ಲಿಸಿ ಕೈ ಬಿಟ್ಟಂತ್ತಾಯಿತು.

ಬೆಳಗ್ಗೆ ಎದ್ದವನೆ ನಿತ್ಯ ಕರ್ಮವನೆಲ್ಲ ಮುಗಿಸಿ, ಅಕ್ಕನ ಫೇರ್‌ ಎಂಡ್‌ ಲವ್ಲೀ ಕ್ರೀಮ್‌ ಅನ್ನು ತಾನೂ ತಿಕ್ಕಿಕೊಂಡು, ಫಾನ್ಸ್‌ ಪೌಡರ್ ಬಳಿದುಕೊಂಡು ಘಮ್ಮೆನ್ನುತ್ತ, ಶಾಲೆಗೆ ರೆಡಿಯಾಗಿ ಮನೆಯಲ್ಲಿ ಊಟ ಮಾಡುತ್ತ ಕುಳಿತಿದ್ದ. ಯಾರೋ ಕರೆದದ್ದು ಕೇಳಿದಂತಾಯ್ತು, ಮನೆ ಬಾಗಿಲ ಬಳಿ ಸೈಕಲನಲ್ಲಿ ಬಂದು ಚೆಲುವೇಗೌಡರು ನಿಂತಿದ್ದು, ‘ತಾಯೇ.. ತಾಯಿ, ನಿಮ್ಮಾಳ್ ಇದ್ದನವ್ವ ಎಂದು ಅವನು ಹೇಳುತ್ತಿದ್ದಂತೆ ಊಟ ಮಾಡುತ್ತ ಕೂತಿದ್ದ ಮನೋಹರ ಎಂಜಲು ಕೈಯಿಂದಲೆ ಹೊರ ಬಂದು ‘ಏನಣೈ’ ಅಂದಾ.. ಚೆಲುವೇಗೌಡ ‘ಎಷ್ಟ್ ಮರಕ್ಕೆ ಹತ್ತಿದ್ದೆಪ’. ಮನು ‘ಇಲ್ಲ ಕಣೈ ಈಗ ಆಗಲ್ಲ ಸ್ಕೂಲಿಗೆ ಹೋಗ್ಬೇಕು’ ಅಂದಾ.. ಮತ್ತೆ ಚೆಲುವೇಗೌಡ, ಅಲ್ಲಾ ಕಪ ಎಷ್ಟು ಮರಕ್ಕೆ ಹತ್ತಿದ್ದಾ ಅಂದಿ..! ಅದಕ್ಕೆ ಮನು ಏನು ಅರ್ಥವಾಗದೆ ಎಡಗೈಯಲ್ಲಿ ತಲೆಕೆರೆಯುತ್ತ ನಿಂತ, ಅಷ್ಟರಲ್ಲಿ ಮನೆಯ ಒಳಗಿಂದ ಬಂದ ಮನೋಹರನ ಅಮ್ಮ, ಹೊಸ್ತಿಲಿನಲ್ಲೇ ನಿಂತು.. ಏನಣ್ಣ ಅಂತ ಕೇಳಿದಾಗ ಚೆಲುವೆ ಗೌಡ, ಅಲ್ಲ ಕವ್ವ ನಮ್ಮ ತೋಟದಲ್ಲಿ ನಾಕೈದ್ ಮರ್ಕತ್ತಿ ಒಂದೂ ಬಿಡ್ದಂಗ ಇರಬರ ಕಾಯಿ, ಯಳ್ನೀರ್ನೆಲ್ಲ ಉದುರಿಸ್ಕಂಡೋಗಿ ಆ ಸ್ಯಾನ್ಬೋಗನ ಮಾಳದಲ್ಲಿ ಚೆಚ್ಚಿ ತಿಂದು ಬಂದೋರಲ್ಲ, ಇವ್ನು ಇವ್ನ ಸಂಗಡದವ್ರುವಾ.. ಇವ್ರುಗೇನ್ ಯೋಳವ್' ತಾಯಿ..? ಎನ್ನುವಾಗ ಮನೊಹರನಿಗೆ ತನ್ನ ಮೇಲೆ ಯಾವುದೋ ಕಳ್ಳತನದ ಆರೋಪ ಮಾಡುತ್ತಿರುವುದು ಸ್ಪಷ್ಟವಾಗಿ ಅರ್ಥ ಆಯ್ತು. ಆತಂಕಕ್ಕೆ ಒಳಗಾಗಿ ‘ಅಣೌ ಇಲ್ಲ ನಾ ನಿಮ್ಮ್ಯಾವ್ ಮರಕ್ಕೂ ಹತ್ತಿಲ್ಲ,’ ಎಂದು ಹೇಳಿದ, ಚೆಲುವೆಗೌಡ ‘ಅಂಗಾದ್ರ ನನ್ನೆಂಡ್ತಿ ಲಕ್ಷ್ಮಿ ಯೊಳಿದ್ದು ಸುಳ್ಳಾ, ಅವಾ ಬಂದೇಟ್ಕೆ ಎಲ್ಲಾ ಓಡೋದ್ರ್ಯಂತಲ್ಲ, ನೀನು ಮರ ಇಳ್ದು ಓಡಿ ಹೋದ್ಯಂತಲ್ಲ?’ ಎಂದಾಗ ತಾನು ಮಾಡದೆಯೇ ಇರುವಂತ ಯಾವುದೊ ದೊಡ್ಡ ಆರೋಪವನ್ನು ನೇರವಾಗಿ ತನ್ನ ಮೇಲೆ ಹೊರಿಸಿದ್ದರಿಂದ ಮನೋಹರ ಏನು ಹೇಳಲು ತಿಳಿಯದೆ ಇಲ್ಲ ನಾ ಹೋಗಿಲ್ಲ, ನಮ್ಮೌನಾಣು ಹೋಗಿಲ್ಲ ಎನ್ನುತ್ತ ಅವ್ವನೆದೆರೆ ಕಣ್ತುಂಬಿಕೊಂಡು ಗಳಗಳನೆ ಅಳಲು ಶುರುಮಾಡಿದ. ಎಷ್ಟೇ ಹೇಳಿದರೂ ಚೆಲುವೆ ಗೌಡನಾಗಲಿ ಅವನು ಹೋದ ನಂತರ ಮನೋಹರನ ಅಮ್ಮನಾಗಲಿ ಇವನು ಆ ತೋಟಕ್ಕೆ ಹೋಗಿಲ್ಲ, ಕಳ್ಳತನ ಮಾಡಿಲ್ಲ ಎನ್ನುವ ವಿಚಾರವನ್ನು ನಂಬಲಿಲ್ಲ. ನಿಮ್ಮಪ್ಪ್ ಬರ್ಲಿ ಇರು ನಮ್ಮ ಮಾನ ಮರ್ವಾದಿಯಲ್ಲಾ ಮೂರ್ ಕಾಸ್ಗ್ ಹರಾಜಾಕ್ಬುಟ್ಟೆಲ್ಲ, ನಾಯಿ.. ಬರ್ಲಿ ಮಾಡ್ತನ ಇರು ನಿಂಗ, ಎಂದಾಗ ಮನೋಹನಿಗೆ ಮತ್ತಷ್ಟು ಆತಂಕ ಹೆಚ್ಚಿತು. ಅಪ್ಪನಿಗೆ ವಿಷಯಗೊತ್ತಾದರೆ ನನ್ನ ಕತೆ ಮುಗಿಯಿತು, ಮೊದಲೇ ನಾನು ಹೊರಗೆ ಸಣ್ಣ-ಪುಟ್ಟ ಪುಂಡಾಟ ಮಾಡಿ ಬಂದಾಗ, ನನ್ನದೇ ತಪ್ಪು ಎಂದು ಬಡಿದು ಬುದ್ಧಿ ಹೇಳುತ್ತಿದ್ದವರು, ಈ ವಿಚಾರದಿಂದ ನನ್ನ ಪರಿಸ್ಥಿತಿ ಅದೇನಾಗುವುದೊ, ನಾನು ಆ ತೋಟಕ್ಕೆ ಹೋಗಿಲ್ಲ ನನಗೇನು ಗೊತ್ತಿಲ್ಲ ಎನ್ನುವುದನ್ನು ಅಪ್ಪನಿಗೆ ಹೇಳುವುದಾದರೂ ಹೇಗೆ ಎನ್ನುವುದನ್ನ ಚಿಂತಿಸುವಾಗಲೇ ಎದೆ ಬಡಿತ ದೀರ್ಘವಾಗಿದ್ದವು.

ಅದೇ ಅಳುಮುಂಜಿ ಮುಖ ಹೊತ್ತು ಬಂದು ಬಸ್‌ ಸ್ಟಾಂಡ್ ಬಳಿ ಬಂದು ಕುಳಿತಿದ್ದ. ತನ್ನ ದುಗುಡ ದುಮ್ಮಾನಗಳೊಂದಿಗೆ, ಆತಂಕದಲ್ಲಿ ಎಲ್ಲರಿಗಿಂತ ಮುಂಚೆಯೇ ಬಂದು ಬಸ್ಸಿಗಾಗಿ ಕೂತ ಮನೋಹರನ ಪರಿಸ್ಥಿತಿ ಚಿಂತಾಜನಕವಾಗಿತ್ತು. ಮನೋಹರನು ಯಾವುದೇ ತಪ್ಪು ಮಾಡದಂತ ಅಮಾಯಕನೂ ಅಲ್ಲ.. ತಾನು ಸಣ್ಣವನಿದ್ದಾಗ ಅಕ್ಕನಿಗೆ ಅಂಗನವಾಡಿ ಸಿಹಿ ಹುಂಡೆ ಜಗಳದಲ್ಲಿ ಅರ್ಧ ತಿಂದು ಒಳಗೆ ಮಣ್ಣು ತುಂಬಿ ಉಂಡೆ ಮಾಡಿ ಹಿಂದಿರಿಗಿಸಿದ್ದ, ಆಗಾಗ ಅಜ್ಜಿ ಮನೆಯಲ್ಲಿ ಬೆಲ್ಲ ಹಾಗು ಚಿಲ್ಲರೆ ಕದಿಯುತ್ತಿದ್ದದ್ದ, ಮನೆಯ ಗೋಲಕದ ಡಬ್ಬಿಯಾಗಿ ಪರಿವರ್ತನೆಯಾಗಿದ್ದ ಬಣ್ಣದ ತಗಡು ಡಬ್ಬಿಯಲ್ಲಿ ಯಾರಿಗೂ ಕಾಣದಂತೆ ಮುಚ್ಚುಳ ತೆಗೆಯದೆಯೆ ಕಾಸು ಎಗರಿಸುವ ಜಾದು ಮಾಡುತ್ತಿದ್ದ, ಊರಿನ ಬಯಲಿನ ತೆರೆ ಮರೆಯಲ್ಲಿ ಯಾರೋ ಏನೊ ಮಾಡುವುದನ್ನೇ ಕುಚೇಷ್ಟೆಯಿಂದ ಕದ್ದು ನೋಡಿದ್ದ. ಊರಿನೆಲ್ಲ ಹುಡುಗಿಯರಿಗಿಂತ ಹೆಚ್ಚು ಸುಂದರಿಯೇನಲ್ಲದ ಎಲ್ಲರೂ ಗಂಡುಬೀರಿ ಎನ್ನುವ ಹುಡುಗಿಯ ಪ್ರೇಮದಲ್ಲಿದ್ದ. ಹೀಗೆ ಅವನಿಗೆ ಆ ಕಾಲಕ್ಕೆ ಭಯಂಕರ ತಪ್ಪು ಎನಿಸಿದ್ದ ಹಲುವು ತಪ್ಪುಗಳ ನಾಲಿಕನಾಗಿದ್ದ, ಆದರೆ ಅವೆಲ್ಲವು ಯಾರಿಗು ಯಾವುದೂ ಗೊತ್ತಾಗದಂತೆ ಅವನೊಳಗೆ ಅಂತರ್ಗತವಾಗಿದ್ದವು. ಈಗ ಅವನು ಮಾಡದೆ ಇದ್ದಂತ ಈ ತೆಂಗಿನ ತೋಟದ ಕಳ್ಳತನದ ಆರೋಪ, ಅವನ ಪಾಲಿಗೆ ಯಾವುದೊ ಮರದಿಂದ ತೆಂಗಿನ ಕಾಯಿ ದೊಡ್ಡ ಕಲ್ಲು ಬಂಡೆಯಂತೆ ನೇರ ಅವನ ತಲೆಮೇಲೆ ಬಿದ್ದಂತಾಗಿತ್ತು. ಪರಿಸ್ಥಿತಿ ಹೀಗಿರುವಾಗ ಬಸ್‌ ಸ್ಟ್ಯಾಂಡ್‌ ಬಳಿಯೂ ಸೈಕಲ್ ತುಳಿದು ಬಂದ ಚೆಲುವೇಗೌಡ ಅರೆಕುಂಡಿಯಲ್ಲಿ ಸೈಕಲ್ ನಿಲ್ಲಿಸಿಕೊಂಡು ‘ಈ ಇಚಾರ ಇಲ್ಲಿಗೆ ಬುಡಲಾ ಕುಸೆ.. ನಿಮ್ಮ ಅಪ್ ಸಿಕ್ಲಿ ನಾ ಯೋಳ್ತಿನಿ ಸರಿಯಾಗಿ. ಬೋಳಿ ಮಕ್ಳ್ಯಾ ತ್ವಾಟ ನಿಮ್ ತಾತಂದ್ರುದು ಅನ್ಕಂಡು ಕಾಯ್ ಕಿತ್ತರ್ಯಾ ಬೊಸುಡಿ ಮಕ್ಳ್ಯ?, ಅದ್ಯಾವನ ನಿಮ್ಗ್ ಪಾಠ ಮಾಡ ಮೇಷ್ಟು, ಬತ್ತಿನಿ ನೆಡ ಇವತ್ತು ಇಸ್ಕೂಲ್ಗುವ ಅಂತ ಮತ್ತೊಂದಷ್ಟು ಮಾತೆರೆದು ಹೇಳುತ್ತಿದ್ದಂತೆ, ಮನೋಹರನಿಗೆ ಅಳು ಒತ್ತರಿಸಿ ಬಂತು, ಬಿಕ್ಕುತ್ತಲೇ.. ಹೇ ಹೋಗಣೊ, ಯೋ ಯೋಳ್ನಿಲ್ವಾ ನಾ ಹೋಗಿಲ್ಲ ಅಂತಾ, ಪುನ್ ಪುನಾ ಅದೇನ ಲವ್ಡಾ ಅಂತನ, ಹಾ ಹೋ ಹೋಗು. ಅದ್ಯಾವನ್ಗೊಳ್ದಯ ಯೋಳೊಗು, ನಿಮ್ಮ ತ್ವಾಟಕ್ಕ ನಾ ಹೋಗುಯಿಲ್ಲ, ಯಾರೋಗಿದ್ದ್ರು ಅಂತ್ಲೂ ಗೊತ್ತಿಲ್ಲ. ಅಂತ ಅಳುತ್ತ ಸೊರೆಯುತ್ತ ಬಿಕ್ಕಳಿಸುತ್ತಲೇ ಅಳುತ್ತಿದ್ದಾನೋ ಬೈಯ್ಯುತ್ತಿದಾನೋ ಎನ್ನುವುದೇ ಅರ್ಥವಾಗದಂತೆ ಗನಮಟಲು ಹರಿದುಕೊಂಡುಕೊಂಡ. ಚೆಲುವೆಗೌಡನಿಗೆ ಕೋಪಬಂದರು, ಈ ಸಣ್ಣ ಹುಡುಗನ ಜೊತೆ ಏನು ಜಗಳ ಅಂತಲೋ ಅಥವ ಜನರೆಲ್ಲರು ನೋಡುತ್ತಿದ್ದಾರೆ ಅಂತಲೊ ಸುಮ್ಮನೆ ಇವನ ಬಾಯಲ್ಲಿ ದೊಡ್ಡ ಬೈಗುಳ ಕೇಳುವುದ್ಯಾಕೆ, ಎನ್ನುವ ಆಲೋಚನೆಯಲ್ಲೋ. ಸರಿ..ಸರಿ ಬತ್ತಿನಿ ನೆಡ ನಿಮ್ಮ ಇಸ್ಕೂಲಿಗೆ ಇವತ್ತು. ಅಂತ ಸೈಕಲ್ ಹತ್ತಿ ಹೊರಟ. ಇತ್ತ ಬಸ್ಟ್ಯಾಂಡಿನ ಸುತ್ತಮುತ್ತಲಿದ್ದ ಎಲ್ಲರ ಚಿತ್ತ ಮನೋಹರನ ಕಡೆಗೇ ಇತ್ತು, ವಿಷಯ ಏನಾಗಿದೆ ಎಂಬುದರ ಪ್ರಶ್ನೋತ್ತರಗಳ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಇಂದೆಂದೊ ಏನೊ ಅಂದ ಮಾತಿನ ಮುಳ್ಳು ತಾಕಿಸಿಕೊಂಡಿದ್ದ ಮಾದೇವನೂ ಅಲ್ಲೆ ಕುಳಿತಿದ್ದ, ಇವತ್ತೂ ಇಸ್ಕೂಲಿ ಹಬ್ಬ ಅಗಾರ, ಜಿಲೇಬಿಬಕೊಟ್ಟರೊ ಬಾದೂಶಾ ಕೊಟ್ಟರೊ ಕಾಣಿ ಅಂತ ಅವನ ಪಕ್ಕದಲ್ಲಿ ಕುಳಿತ ಸಂತೋಷನ ಜೊತೆಗಂದು ನಕ್ಕ, ಮನೋಹರನು ಮುಜುಗರಕ್ಕೆ ಒಳಗಾಗಿ ಅಳುತ್ತ ಕೂತಿದ್ದ. ಅಲ್ಲೇ ಊರಿನಿಂದ ಮೂರು ಮೈಲಿ ದೂರದೂರಿಗೆ ಬಸ್ಸಿನಲ್ಲಿ ಹೋಗುತ್ತಿದ್ದ ಶಾಲಾ ಗೆಳಯ ಗೆಳತಿಯರೂ ಇದ್ದರು, ಆದರೆ ಯಾರು ಅವನನ್ನ ಏನು ಕೇಳಲಿಲ್ಲ, ಪಾಲದ ಮೇಲೆ ಬೀಡಿ ಊದುತ್ತ ಕೂತಿದ್ದ ತಿಮ್ಮಯ್ಯ, ಎಲ್ಲಿಗೊ ಹೊರಟು ಬಸ್ಸಿಗೆಂದೆ ಕಾಯುತ್ತ ಕೂತಿದ್ದ ನಿಂಗೇಗೌಡರು ‘ಅಷ್ಟುಕ್ಯಾಕುಡ ಅತ್ತಯೈ ಕುಸು, ಹೋಗು ಹೋಗು. ಕಣ್ಣೊರ್ಸ್ಕಂಡ್ ಇಸ್ಕುಲ್ಗೋಗು. ಅವ್ನದು ಕಾಲ್ದಿಂದಲೂ ಇದೆ. ಎಂದು ಹೇಳಿದರು ಅಷ್ಟೆ, ನಿಜಕ್ಕೂ ತಪ್ಪುಒಪ್ಪುಗಳನ್ನು ಹಂಚಿಕೊಳ್ಳುವಂತ ಯಾರೊಬ್ಬ ಬಾಲ್ಯದ ಆತ್ಮಿಯಾ ಗೆಳೆಯ ಗೆಳತಿಯೂ ಮನೋಹರನಿಗೆ ಇಲ್ಲದಿರುವುದು ಆ ವಯಸ್ಸಿನ ಅವನ ವಿಪರ್ಯಾಸ. ಈ ಹಿಂದೆ ಜೊತೆಗೆ ಶಾಲೆಗೆ ಬರುತ್ತಿದ್ದ ಅಕ್ಕನ ಆಗಲೇ ಒಂಭತ್ತಕ್ಕೆ ಶಾಲೆ ಬಿಡಿಸಿ ವರ್ಷವಾಗಿತ್ತು, ಇದ್ದರೇ ಅವಳಾದರೂ ಇವನನ್ನ ಸಮಾಧಾನಿಸುತ್ತಿದ್ದಳೇನೊ.

ಘಟನೆ ನೆಡೆದ ಕೆಲವೇ ನಿಮಿಷಗಳಲ್ಲಿ ದಿನ ಬೆಳಿಗ್ಗೆ ಒಂಭತ್ತು ಮೂವತ್ತಕ್ಕೆ ಬರ್ತಿದ್ದ ಹರಿಹರ ಬಸ್ಸು ಇಪ್ಪತ್ತು ನಿಮಿಷ ತಡವಾಗಿ ಬಂದಿತ್ತು. ಹತ್ತಿ ಕೂತ ಮನೋಹರನಿಗೆ ಮುಂದೆ ಏನಾಗಬಹುದು, ಎನ್ನುವ ಹತ್ತಾರು ಭ್ರಮಾಲೋಚನೆಗಳು ಕಾಡತೊಡಗಿದವು. ಚೆಲುವೇಗೌಡ ಶಾಲೆಗೆ ಬಂದು ಅದೇನೇನು ಹೇಳುವನೊ, ಶಾಲೆಯ ಯಾವ ಮಾಸ್ಟರ್ ಅದೆಷ್ಟೆಷ್ಟು ಏಟು ಕೊಡುವರೊ, ಸಂಜೆ ಮನೆಗೆ ಬಂದಾಗ ಅಪ್ಪ ಅದ್ಯಾವ ಕೋಲು ಬಾರ್ಲೋಲು, ಹುರಿ-ಹಗ್ಗ ಬಡಿಗೆ ಹಿಡಿದು ನಿಂತಿರುತ್ತಾರೊ, ಈ ದಿನ ನಿಜಕ್ಕೂ ನನ್ನ ಕಡೆ ದಿನವ..? ಎಂಬಂತೆಲ್ಲ ಚಿಂತಿಸಲು ಕಾಡುತ್ತಿತ್ತು. ಮಂಕು ಬಡಿದಂತೆ ಬಸ್ಸಿನಲ್ಲಿ ಊರಿನ ಮಾತು ಬಂದರೂ ಮೂಗಿ ಎಂದು ಕರೆಯುತ್ತಿದ್ದ ಅಂಗನವಾಡಿ ಆಯಾ ಪಕ್ಕದಲ್ಲಿ ಕುಳಿತಿದ್ದ. ಮಾಮೂಲಾಗಿ ಇಳಿಯಬೇಕಾದ ಇಳಿಯುತ್ತಿದ್ದ ಬಸ್ಟಾಪಿನಲ್ಲಿ ಇಳಿಯಲಿಲ್ಲ. ಬಸ್ಸು ತಾಲೂಕು ತಲುಪುವಷ್ಟರಲ್ಲಿ ದಿನಗಟ್ಟಲೆ ಕ್ರಮಿಸಿದಂತ ಅನುಭವವನ್ನು ನೀಡಿ, ಯಳಂದೂರು ಸ್ಟ್ಯಾಂಡಿನ ಮಾಮೂಲು ಜಾಗದಲ್ಲಿ ಬಂದು ನಿಂತಿತ್ತು. ಆದರೆ ಮನೋಹರ ಊರಿನಿಂದ ಹೊರಟಾಗ ಕೂತಿದ್ದ ಸೀಟಿನಲ್ಲಿ ಕುಳಿತಿರಲಿಲ್ಲ.

ಸಂಜೆ ಕಳೆದಂತೆ ಮನೋಹರ ಮನೆಗೆ ಹಿಂದುರಿಗಿಲ್ಲ, ಶಾಲೇಗೂ ತಲುಪಿಲ್ಲ ಎನ್ನುವ ಸುದ್ದಿ ಊರಿಗೆಲ್ಲ ಹಬ್ಬಿತು, ಮನೋಹರನ ಅಪ್ಪ ಹಾಗು ಊರಿನ ಕೆಲ ಜನರೆಲ್ಲ ಸೇರಿ ಸುತ್ತಮುತ್ತಲ ಕೆರೆ-ಕೆಟ್ಟೆ ಮರಗಳನೆಲ್ಲ ಹುಡುಕಿದರೂ ಎಲ್ಲೂ ಇವನ ಸುಳಿವು ಸಿಗಲಿಲ್ಲ.

ಭವಿಷ್ಯದ ಭರವಸೆಯ ಕನಸು ಕಾಣುತ್ತಾ, ಬೇಕು ಬೇಡಗಳನ್ನು ಬೇಡಿಕೆಯಿಡುವ ಮೊದಲೇ ನೀಡುತ್ತ, ಬೆಟ್ಟದಷ್ಟು ಪ್ರೀತಿಯಿದ್ದರೂ ಪುಟ್ಟದಾಗಿಯೂ ಅವನ ಮುಂದೆ ತೋರ್ಪಡಿಸಿಕೊಳ್ಳದ ಅಪ್ಪ-ಅಮ್ಮ ಕಂಗಾಲಾದರು. ಅಪ್ಪ ಅವನ ಬರುವಿಕೆಯ ಹಾದಿ ಕಾಯುತ್ತ, ಕಣ್ತುಂಬಿಕೊಂಡು ಊರೆಲ್ಲ ಅಲೆದು ಅವನ ವಾರಿಗೆಯ ಗೆಳೆಯರನ್ನೆಲ್ಲ ಸಮಾಧಾನದಿಂದ ವಿಚಾರಿಸಿದರು ಯಾವುದೇ ಸುಳಿವು ಸಿಗಲಿಲ್ಲ. ಅವರೇಳಿದ ಣೈ, ಅವ ನಮ್ಜೊತ್ಗೆಸೇರಲ್ಲ ಸರಿಯಾಗಿ ಯಾವಾಗ್ ಕಾರ್ದ್ರುವ ಸೊಪ್ತರ್ಬೇಕು, ಹುಲ್ತರ್ಬೇಕು,ಅಟ್ಲಿ ಕೆಲ್ಸದ ಅಂತಿದ್ದ ಯಾವ್ ಆಟ್ಗೊಳ್ಗು ಬತ್ತಿರ್ನಿಲ್ಲ ಸರಿಯಾಗಿ ಅಂದದ್ದು ಅಪ್ಪನನ್ನ ಚುಚ್ಚಿತು.

ಮೂರು ದಿನಗಳಕಾಲ ಕೆರೆಕಟ್ಟೆಗಳೆಲ್ಲ ಹುಡುಕಿಯೂ ಎಲ್ಲಿಯೂ ಯಾರಿಗೂ ಕಾಣದ ಮನೋಹ ಏನಾದ ಎನ್ನುವ ವಿಷಾದಮಯ ವಿಷಯ ವೈಚಿತ್ರ್ಯ ಪ್ರಶ್ನೆಯಾಗಿ ಊರಿಂದೂರಿಗೆ ಸುತ್ತಮುತ್ತಲ ನಾಲ್ಕೂರಿಗೂ ಹಬ್ಬಿತು. ಪಕ್ಕದ ಹಳ್ಳಿಯವರು ಯಾರೋ ಮನೋಹರನಂತೆಯೇ ಯಾರೊ ಹುಡುಗ ಬೆಂಗಳೂರಿನ ಕೆಂಪು ಬಸ್ಸು ಹತ್ತಿದ್ದನ್ನು ಕಂಡನಂತೆ, ಎನ್ನುವ ಅಂತೆ-ಕಂತೆ ವಿಚಾರವು ಉತ್ತರವಾಗಿ ಊರಿಗೆ ತಲುಪಿತು. ಅಪ್ಪ-ಅಮ್ಮ ಎಂದರೇ ತನ್ನ ಪಾಲಿಗೆ ನಿತ್ಯ ಕೆಲಸ ಹೇಳುವವರು.. ಶಿಸ್ತು, ನಿಯಮ, ಶಿಕ್ಷೆಗಳಷ್ಟೆ ಎಂದುಕೊಂಡಿದ್ದ ಮನೋಹರ.. ನಿಜಕ್ಕೂ ಪುಟ್ಟ ಹಳ್ಳಿಯೇ ಪ್ರಪಂಚ ಎಂದುಕೊಂಡಿದ್ದ ಆ ಮನೋಹರ, ಈ ವಿಶಾಲ ಪ್ರಪಂಚದಲ್ಲಿ ಅದೆಲ್ಲಿ ನುಸಿಳಿಕೊಂಡನೊ ಯಾರಿಗೂ ತಿಳಿಯಲಿಲ್ಲ. ತಾಲೂಕಿನ ಪೊಲೀಸ್‌ ಸ್ಟೇಷನ್‌ನಲ್ಲಿ : ಮನೋಹರ ವಯಸ್ಸು-15 ನೀಲಿಕಣ್ಣಿನ ಗೋಧಿಬಣ್ಣ ಸಹಜ ಸುಂದರ ಹುಡುಗ ಕಾಣೆಯಾಗಿದ್ದಾನೆ ಎನ್ನುವ ಪ್ರಕರಣವೊಂದು ದಾಖಲಾಯ್ತು.

- ಶಿವರಾಜ್ ಡಿ.ಎನ್.ಎಸ್

ಶಿವರಾಜ್ ಡಿ.ಎನ್.ಎಸ್

ಶಿವರಾಜ್ ಡಿ.ಎನ್.ಎಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ದಾಸನಹುಂಡಿಯವರು. ಬರಹ-ಓದು-ನಟನೆ ಹಾಗೂ ಛಾಯಾಗ್ರಹಣ ಅವರ ಹವ್ಯಾಸ. ಕಲರ್‍ಸ್ ಕನ್ನಡದ ‘ಕಾಮಿಡಿ ಕಂಪನಿ’ಶೋ ನಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಅವರ ಆಸಕ್ತಿ ಕ್ಷೇತ್ರ.

More About Author