ಆರಿ ಹೋದ ಕೆರೆಗೆ
ನೀರು ತುಂಬಿಸಲು ಪಟ್ಟ ಶ್ರಮ
ಪಟ್ಟವರಿಗಷ್ಟೇ ಗೊತ್ತು
ಮುಂಜಾನೆ, ಮದ್ಯಾಹ್ನ
ಮತ್ತು ಇಳಿ ಸಂಜೆಯೂ
ಸುರಿಯುವ ಮಳೆಗೆ
ಕೆರೆ ತುಂಬಲು ಬಯಸಿದರೆ
ಭೂಮಿಗಿಳಿಯುವ ನೀರು ಹಳ್ಳವನ್ನೇ ಗುರಿ ಇಟ್ಟಿದೆ
ಹನಿಹನಿಗೂಡಿ ಕೆರೆ ತುಂಬಲು ಸಾಧ್ಯವೆ?
ಹೀಗೊಂದು ಪ್ರಶ್ನೆ ನೀರಲ್ಲಿ ಬರೆದರೆ
ಪ್ರಶ್ನೆಯ ಉಳಿಗಾಲವೆಷ್ಟು?
ಕೆರೆಯಲ್ಲಿ ನೀರು ತುಂಬಿದರೆ
ಗೋಡೆಯ ಕಾಮಗಾರಿ ಪುನರಾರಂಭಿಸಬಹುದು.
ಏಕೆಂದರೆ ಶುದ್ಧ ಹೃದಯದವರಿಗೆ
ಪರಿಶುದ್ಧ ನೀರು ಬಳಸಿಯೇ ಗೊತ್ತು
ಮಾರುಕಟ್ಟೆಯಲ್ಲಿ ಸಿಗುವ ನೀರು
ಖರೀದಿಸಿ ಗೋಡೆ ಕಟ್ಟಿದರೆ
ನಮ್ಮ ಸೈಜುಗಲ್ಲಿಗೆ
ಇನ್ನೆಲ್ಲಿಯ ಆತ್ಮಸಾಕ್ಷಿ..!
ಮಳೆಯ ಅಬ್ಬರಕ್ಕೆ ಕುಸಿದು ಬಿದ್ದರೂ
ಸುಡುವ ಬಿಸಿಲಿಗೆ ಓಣಗಿ ಹೋದರೂ
ಪರಿಣಾಮದ ಸಂಕಲನದೊಳಗೆ
ಸಂಕೊಲೆಯಲ್ಲಿ ಬಂಧಿಯಾಗುವುದು
ಸೈಜುಗಲ್ಲಿನ ವಾರಿಸುದಾರರು...
ನೀವು ಕೆಡವುವ ಗೋಡೆಯೊಳಗೆ
ನಮ್ಮದೊಂದು ಸೈಜುಗಲ್ಲಿದೆ....
- ಆಮಿರ್ ಬನ್ನೂರು
ಆಮಿರ್ ಬನ್ನೂರು
ಕವಿ ಆಮಿರ್ ಬನ್ನೂರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಕವನ, ಬರವಣಿಗೆ ಹಾಗೂ ಓದು ಅವರ ಆಸಕ್ತಿಕ್ಷೇತ್ರವಾಗಿದೆ. ಪ್ರಸ್ತುತ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಯುವ ಸಂಘಟಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ; ತುಮಕೂರಿನ ಮಾತೃ ಭೂಮಿ ಸೇವಾ ಟ್ರಸ್ಟ್ ವತಿಯಿಂದ ಎ ಪಿ ಜೆ ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ.
More About Author