Story

ನಾಲ್ಕು ಕಾಕತಾಳೀಯ ಕತೆಗಳು

ಕತೆ - ೧

ಆತನ ಹೆಸರು ಜಿತೇಂದ್ರ. ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಸಹಪಾಠಿ, ಕೇರಿಯ ನಿವಾಸಿ. ಈತನ ಮಹಾನ್ ಕುಡುಕ ತಂದೆ, ಕೇರಿಯಲ್ಲಿ ದನದ ಮಾಂಸ ಮಾರುತ್ತಿದ್ದರು. ತುಂಬಾ ಕಪ್ಪಗಿದ್ದ ಜಿತೇಂದ್ರ, ಯಾವಾಗಲೂ ಸಿನೆಮಾ ನಟರ ಗುಂಗಿನಲ್ಲಿರುತ್ತಿದ್ದ. ಹಿಂದಿ ನಟ ಜಿತೇಂದ್ರನ ಮೇಲಿನ  ಆಭಿಮಾನದಿಂದ ತಂದೆ ಈತನಿಗೆ ಜಿತೇಂದ್ರ ಎಂದು ಹೆಸರಿಟ್ಟಿದ್ದರು. ವಯಸ್ಸಿನಲ್ಲಿ ನನಗಿಂತ ಒಂದೆರಡು ವರ್ಷ ದೊಡ್ಡವನಾಗಿದ್ದರೂ ನನ್ನ ಶಿಷ್ಯನಂತಿದ್ದ. ಓದಿನಲ್ಲಿ ಮುಂದಿದ್ದರೂ ತರಗತಿಯ ರೌಡಿಯಂತ್ತಿದ್ದ. ನನ್ನ ಬೆಂಗಾವಲಾಗಿ ಪುಡಿ ರೌಡಿಯಂತೆ ವರ್ತಿಸುತ್ತಿದ್ದ. ಜಿತೇಂದ್ರನಿಗೆ ಪ್ರೀತಿಯಿಂದ ನಾನು ‘ಕಾಳ್ಯಾ’(ಮರಾಠಿಯಲ್ಲಿ ಕಾಳ್ಯ ಎಂದರೆ ಕಪ್ಪು ಬಣ್ಣ) ಎಂದು ಕರೆಯುತ್ತಿದ್ದೆ. ಕಾಳ್ಯಾ ಹತ್ತನೆ ತರಗತಿ ಪಾಸಾಗದೆ ಓದು ಅಲ್ಲಿಗೆ ನಿಲ್ಲಿಸಿ, ಇಸ್ಪೀಟಾಟದ ಪ್ರವೀಣನಾಗಿ, ಜೂಜಾಡಿ ಹಣಗಳಿಸಿ ಜೀವನ ಸಾಗಿಸುತ್ತಿದ್ದಾನೆ. ತನ್ನದೇ ಇಂದ್ರೀಯಗಳಿಂದ ಸೋಲಿಸಲ್ಪಟ್ಟ ಜಿತೇಂದ್ರ ಈಗ ಚಟಸಾರ್ವಭೌಮ.

ಏನೇ ಇರಲಿ ಎಂಟನೆ ತರಗತಿಯಿಂದ ಹತ್ತನೆ ತರಗತಿ ಮುಗಿಯುವವರೆಗೆ  ಆತನ ಜೊತೆಯ ಗೆಳೆತನ, ಚೇಷ್ಟೆ, ಜಗಳಗಳು ನನಗಿನ್ನೂ ಹಸಿರು. ಈಗ ಜಿತೇಂದ್ರನಿಗೆ ಕುಡಿತ, ಜೂಜು ಮಾಡುವ ಶೋಕಿ. ಮೇಲ್ಜಾತಿಯವರನ್ನು ಹೆದರಿಸಿಕೊಂಡು ರಾಜಕೀಯದಲ್ಲಿ ಸಕ್ರೀಯನಾಗಿ ಆರಾಮವಾಗಿದ್ದಾನೆ. ಆತನ ಗೆಳೆತನ ಯಾರಿಗೂ ಇಷ್ಟವಿಲ್ಲ. ಹಳೆಯ ಗೆಳೆಯರು ಆತನ ಗೆಳೆತನ ನೆನೆಸಿ ನಾಚಿಕೆಪಡುತ್ತಾರೆ.

ನಾನು  ಓದು ಮುಂದುವರೆಸಿ ವೈದ್ಯನಾದೆ. ಒಂದು ಹಳ್ಳಿಯಲ್ಲಿ ಚಿಕ್ಕ ಕ್ಲಿನಿಕ್ ಮಾಡಿದ್ದೆ. ಒಂದು ದಿನ ಜಿತೇಂದ್ರನಂತಹ ವ್ಯಕ್ತಿತ್ವದ ಮೆಡಿಕಲ್ ರಿಪ್ರೆಸೆಂಟೇಟಿವ್ ಬಂದು ತನ್ನ ಕಂಪನಿಯ ಔಷಧಿಗಳ ಬಗ್ಗೆ ತುಂಬಾ ಸೊಗಸಾಗಿ ವಿವರಣೆ ನೀಡಿದ. ಆತನ ಪ್ರತಿ ಹಾವ ಭಾವ  ಜಿತೇಂದ್ರನನ್ನು ನೆನಪಿಸುತ್ತಿತ್ತು. ಬಹುಶಃ ಅದಕ್ಕೆ ಆತನ ಔಷಧಿಗಳ ವಿವರಣೆ ನನಗೆ ಹಿಡಿಸಿತ್ತೋ ಏನೋ. ಆತನ ವಿವರಣೆ ಮುಗಿದ ನಂತರ ತುಂಬಾ ಹಳೆಯ ಗೆಳೆಯನಂತೆ "ನಿಮ್ಮೆಸ್ರು ಜಿತೇಂದ್ರ ಅಲ್ವಾ?" ಎಂದೆ ನಗುತ್ತಾ. ಈ ಮಾತು ನನ್ನ ಬಾಯಿಗೆ  ಹೇಗೆ ಬಂದಿತೋ ನನಗೆ ಅರಿವಿಲ್ಲ. ಆದರೆ ತುಂಬಾ ಖಚಿತವಾಗಿ ಆತ್ಮವಿಶ್ವಾಸದಿಂದ ಅ ರಿಪ್ರಸೆಂಟೇಟಿವ್‌ಗೆ ಕೇಳಿದಾಗ ಆತ "ಸರ್, ಈ ಹೆಸರೆ ಯಾಕೆ ನಿಮಗೆ ಹೊಳೆಯಿತು?. ಬೇರೆ ಹೆಸರು ಹೇಳಬಹುದಾಗಿತ್ತು?" ಎಂದಾಗ ನನ್ನ ಚಡ್ಡಿ ದೋಸ್ತ ಜಿತೇಂದ್ರನ ಬಾಲ್ಯದ ಗೂಂಡಾಗಿರಿಯ ದಿನಗಳ ಸವಿ ನೆನಪುಗಳನ್ನು ಬಿಚ್ಚಿ ಹೇಳಿದೆ. ಬಾಲ್ಯದ ಕಥೆ ಕೇಳಿದ ರೆಪ್ ಕೂಡ ಖುಷಿಯಾದ. ನಂತರ ತನ್ನ ವಿಜಿಟಿಂಗ್ ಕಾರ್ಡ್ ನೀಡಿದ. ಅದರ ಮೇಲೆ ಎರಡು ಇನಿಷಿಯಲ್‌ಗಳ ನಂತರ ‘ಜಿತೇಂದ್ರ’ ಎಂದು ಆತನ ಹೆಸರು ಬರೆದಿತ್ತು.

                                                   ***********

ಕತೆ - ೨

        ಸುಮಾರು ವರ್ಷಗಳ ಹಿಂದೆ ಗಡಿಭಾಗದ ಜಿಲ್ಲಾ ಕೇಂದ್ರದಲ್ಲಿ, ರಂಜಾನ್ ತಿಂಗಳ ಶುಕ್ರವಾರದ ನಮಾಜಿನ ವೇಳೆ, ನನ್ನೆದುರಿಗೆ ನನ್ನದೆ ಹೆಸರು ಹಾಗೂ ಅಡ್ಡ ಹೆಸರು ಬರೆದಿದ್ದ ಹಾಗೂ ಹುಟ್ಟು ಹೆಸರಿನ ಪಟ್ಟಿಯನ್ನು ಅಂಗಿಯ ಜೇಬಿಗೆ  ಹಚ್ಚಿಕೊಂಡ ಖಾಕಿಧಾರಿ ಪೋಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕಾಣಿಸಿದರು. ಮಾತನಾಡಿಸಿದೆ. ನಂತರ ಇಬ್ಬರೂ ಗೆಳೆತನಕ್ಕೆ ಮುನ್ನುಡಿ ಬರೆದೆವು. ಮರುವರ್ಷ ನಾನು  ಹಳ್ಳಿಯೊಂದರಲ್ಲಿ ಸರಕಾರಿ ವೈದ್ಯನಾದೆ. ಅದೇ ಊರಿನಲ್ಲಿ ಅವರೂ ಇನ್ಸ್‌ಪೆಕ್ಟರಾಗಿ ಕೆಲ ದಿನಗಳ ನಂತರ ವರ್ಗವಾಗಿ ಬಂದರು. ನಂತರ ಅದೇ ಊರಿಗೆ ನಮ್ಮ ಹೆಸರಿನ ಪಶುವೈದ್ಯರೂ ಬಂದರು. ಒಂದೇ ಹೆಸರಿನ ನಾವು ಮೂವರು ಸೇರಿ ಮಾತನಾಡುತ್ತಿದ್ದರೆ, ನಮ್ಮನ್ನು ನೋಡಿ ಇಡೀ ಊರಿನ ಜನ ಸೋಜಿಗ ಪಡುತ್ತಿದ್ದರು. ಒಂದು ವರ್ಷದ ನಂತರ ನಾನು ಕಾರಣಾಂತರದಿಂದ ಸರಕಾರಿ ಕೆಲಸ ಬಿಟ್ಟೆ. ಇನ್ಸ್‌ಪೆಕ್ಟರ್ ಬೇರೆ ಕಡೆ ವರ್ಗವಾದರು. ಫೋನ್ ನಂಬರ್‌ಗಳು ಫೋನಿನಲ್ಲಿ ಸುರಕ್ಷಿತವಾಗಿದ್ದರೆ,ನಾವಿಬ್ಬರೂ ಸುಮಾರು ವರ್ಷ ಒಬ್ಬರನೋಬ್ಬರು ಮರೆತೆ ಹೋಗಿದ್ದೆವು .

      ಸುಮಾರು ಎಂಟು ವರ್ಷಗಳ ವಿರಾಮದ ನಂತರ, ಕಳೆದ ರಂಜಾನ್ ತಿಂಗಳಲ್ಲಿ ಶುಕ್ರವಾರದ ನಮಾಜಿಗೆ ಹೊರಟಾಗ ಇನ್ಸ್‌ಪೆಕ್ಟರನ್ನು ನೆನೆಪಿಸಿಕೊಂಡೆ. ಅಂದು ನಾನು ಹೋದ ಬೆಂಗಳೂರಿನ ಮಸೀದಿಯಲ್ಲಿ  ನನ್ನ ಪಕ್ಕಲ್ಲಿದ್ದವರು ಹೆಗಲ ಮೇಲೆ ಕೈ ಇಟ್ಟು ಮಾತನಾಡಿಸಿದರು. ಹಿಂತಿರುಗಿ ನೋಡಿದರೆ ಅದೆ ಇನ್ಸ್‌ಪೆಕ್ಟರ್‌....!! ಅವರಿಬ್ಬರ ಮಕ್ಕಳನ್ನು ಕರೆದುಕೊಂಡು ನಮಾಜಿಗೆ ಬಂದಿದ್ದರು. ನನ್ನ ಕೊರಳಲ್ಲಿ ನೇತಾಡುತ್ತಿದ್ದ ಕಂಪನಿಯ ಐಡಿ ಕಾರ್ಡಿನಲ್ಲಿ ತನ್ನ ತಂದೆಯದೇ ಹೆಸರು ಕಂಡು ಇನ್ಸ್‌ಪೆಕ್ಟರ್, ಹತ್ತು ವರ್ಷದ ಕಿರಿಯ ಮಗ ದಂಗಾಗಿದ್ದ!!

                                                  ************

ಕತೆ - ೩

      ಸುಮಾರು  ಇಪ್ಪತು ವರ್ಷಗಳ ಹಿಂದೆ ಎಂ.ಬಿ.ಬಿ.ಎಸ್ ಅಡ್ಮಿಷನ್ ಮಾಡಿ ಊರಿಗೆ ಬಂದಿದ್ದೆ. ಬಾಗಲಕೋಟೆಯ ಕೂಡಲ ಸಂಗಮದ ಪಕ್ಕ ‘ಇದ್ದಲಗಿ’ ಎಂಬುದು ನಮ್ಮ ಅಜ್ಜಿಯ ಊರು. ಎನ್.ಎಚ್ 13ರ ಹೆದ್ದಾರಿಯಿಂದ ಸುಮಾರು ನಾಲ್ಕು ಕಿ.ಮೀ. ಒಳಗಡೆ ಹೋದಾಗ ಬರುವ ಕುಗ್ರಾಮ. ಹೈವೇಯಲ್ಲಿ ಇಳಿದು ಊರಿನ ಕ್ರಾಸಿನಲ್ಲಿದ್ದ ಗೋಣಿ ಚೀಲ, ಒಣ ಹುಲ್ಲಿನ ಹೊದಿಕೆಯ ಹೋಟೆಲ್ಲಿನ ಪಕ್ಕದ ಕಲ್ಲಿನ ಮೇಲೆ ಬಸ್ಸಿಗಾಗಿ ದಾರಿ ಕಾಯುತ್ತಾ ಕುಳಿತಿದ್ದೆ. ಗಾಢ ನೀಲಿ  ಬಣ್ಣದ ಚೂಡಿದಾರ ಹಾಕಿದ ವ್ಯಕ್ತಿಯೊಬ್ಬ ಬಂದು ನನ್ನ ಪಕ್ಕದ ಕಲ್ಲಿನ ಮೇಲೆ ಕುಳಿತುಕೊಂಡ. ಅವತರಿಸಿದಂತೆ ಕಂಡ ಆ ಮನಷ್ಯ ಬಹಳ ವಿಚಿತ್ರವೆನಿಸಿದರೂ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ.

ಕಪ್ಪು ಮೈ ಬಣ್ಣ ದಷ್ಟ ಪುಷ್ಟ ದೇಹ. ದಪ್ಪ ರಟ್ಟೆಗಳು ಗಡಸು ಮಾಂಸ ಖಂಡದ ಕೈಗಳ  ಚೂಡಿಧಾರೀ ವ್ಯಕ್ತಿತ್ವ ಗಂಡಸುತನದ ಉಪಮೆಯಂತಿದ್ದ. ತುಂಬಾ ಗಡಸು ದೇಹದ  ಗಂಡಸು. ಮೂರ್ನಾಲ್ಕು ದಿನಗಳಿಂದ ಗಡ್ಡ ಬೋಳಿಸರಲಿಲ್ಲವೇನೋ ಮುಖದ ತುಂಬಾ ಕ್ಯಾಕ್ಟಸ್‌ನಂತೆ  ಬೆಳೆದ ಕುರುಚಲು ಗಡ್ಡ. ಮೀಸೆ ಕೆಳಗೆ ಹೆಂಗಸರು ಧರಿಸುವ ನೀಲಿ ಬಣ್ಣದ ಚೂಡಿದಾರ!!. ಕಿವಿಗೆ ಬೆಲೆ ಬಾಳುವ ಲೋಲಾಕಿನಂತಹ ಬಂಗಾರದ ಓಲೆಗಳನ್ನು ಧರಿಸಿ ಎರಡು ಕಾಲಗಲಿಸಿ ತುಂಬಾ ಅಸಹ್ಯವಾಗಿ ಕುಳಿತಿದ್ದ. ಗಾಢ ಬಣ್ಣದ ಬಟ್ಟೆ ಧರಿಸಿ ಎತ್ತರದ ವ್ಯಕ್ತಿತ್ವದ ಆತ ಅಂದು ಕ್ರಾಸಿನಲ್ಲಿದ್ದ ಎಲ್ಲರ ಗಮನ ಸೆಳೆದಿದ್ದ.

ನಾನು ನೋಡಬಾರದು ಎಂದು ಹಿಂಜರಿಯುತ್ತಾ, ಆತನನ್ನು ನನಗೆ ಗೊತ್ತಿಲ್ಲದೆಯೇ ಚೆನ್ನಾಗಿ ಅಭ್ಯಸಿಸಿದ್ದೆ. ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ದೇವದಾಸಿ ಬಿಡುವ ಪದ್ಧತಿ ಇನ್ನೂ ಜೀವಂತವಿರುವ ಉತ್ತರ ಕರ್ನಾಟಕದಲ್ಲಿ ಸೀರೆಯುಟ್ಟು ದೇವಿಗಾಗಿ ಹೆಣ್ಣಾದ ಗಂಡಸರು ಆಗಾಗ ಕಾಣಸಿಗುತ್ತಿದ್ದರು. ಅದೇನು ವಿಶೇಷವಲ್ಲ. ಆದರೆ ಈ ವ್ಯಕ್ತಿ ತುಂಬಾ ಬೇರೆ ಎನಿಸುತ್ತಿದ್ದ.

ಕೆಲ ಪುರುಷರು, ಮಹಿಳೆಯರು ಆತನ ಕಾಲಿಗೆ ನಮಸ್ಕರಿಸಿ ಕುಶಲ ವಿಚಾರಿಸಿ ಐದು ಹತ್ತು ರೂಪಾಯಿಗಳ ದಕ್ಷಿಣೆ ಸಲ್ಲಿಸಿ ಹೋಗುತ್ತಿದ್ದರು. ಆ ಸನ್ನಿವೇಶ ಸುಮಾರು ಒಂದು ಗಂಟೆಗಿಂತ ಹೆಚ್ಚು ನಾನು ತುಂಬಾ ಕುತೂಹಲದಿಂದ ವೀಕ್ಷಿಸಿದ್ದೆ. ಚಿಕ್ಕಂದಿನಿಂದ ದೇವದಾಸಿಯರನ್ನು ಹಾಗೂ ಗಂಡು ಜೋಗಪ್ಪರನ್ನು ನೋಡಿದ ನನಗೆ ’ದೇವದಾಸ, ದಾಸಿಯರು’ ಎಂದೂ ವಿಶೇಷವೆನಿಸಿರಲಿಲ್ಲ. ಆದರೆ ಈ ‘ದೇವದಾಸ’ ಚಪ್ಪಲಿ ಹಾಗೂ ದಾವಣಿ ಧರಿಸದೆ ಕೇವಲ ಗಾಢನೀಲಿ ಬಣ್ಣದ ಹೂವುಗಳ ಚೂಡಿದಾರ ಧರಿಸಿದ್ದ. ಆ ವ್ಯಕ್ತಿಯ ಚಿತ್ರ, ಹಾವ ಭಾವಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಹೋದವು. ಆಗಾಗ ಆತನ ಚಿತ್ರ ಕಣ್ಣ ಮುಂದೆ ಬಂದು ಕಾಡಹತ್ತಿತ್ತು. ನೆನಪಿನ ಸಲಿಗೆಲ್ಲಿ ನಾನು ಆಗಾಗ ನಗುತ್ತಿದ್ದೆ. ಕೆಲ ಸಾರಿ ಆತ ಸರಕಾರಿ ಬೇಹುಗಾರನಿರಬಹುದಾ? ಎಂದು ಯೋಚಿಸಿ ನಕ್ಕಿದ್ದೂ ಉಂಟು. ಆತನನ್ನು ನೋಡಿ ಸುಮಾರು ಇಪ್ಪತ್ತು ವರ್ಷಗಳು ಗತಿಸಿದವು. ಆತನನ್ನು ಆಗಾಗ ನೆನೆಸಿಕೊಂಡು, ಆತನನ್ನು ಇನ್ನಷ್ಟು ಚೆನ್ನಾಗಿ ಗಮನಿಸಿದ್ದರೆ ಆತನನ್ನೇ ಕೇಂದ್ರವಾಗಿಟ್ಟುಕೊಂಡು ಕತೆಯೊಂದ ಬರೆಯಬಹುದಾಗಿತ್ತು ಎಂದು ಯೋಚಿಸಿ, ಬರೆಯಲಾಗದೆ ಸೋತು ಬಹಳಷ್ಟು ಸಲ ನಿರಾಶನಾಗಿದ್ದೆ.  

 ಹೋದ ತಿಂಗಳು ಮಂಗಳೂರಿಗೆ ಹೋಗಿದ್ದೆ. ಏಡಿ ತಿನ್ನಬೇಕೆಂದು ‘ಹೋಟೆಲ್ ತಮ್ಮಣ್ಣ’ ಎಂಬಲ್ಲಿ ನಾಲ್ಕು ಜನ ಉಣ್ಣುವಷ್ಟು ಮೀನು, ಏಡಿ ತಿಂದು ನಡೆಯಲಾಗದೆ ಕಷ್ಟ ಪಡುತ್ತಾ ಯಾರೂ ಇಲ್ಲದ ಬಿಲ್‌ಕೌಂಟರ್ ಹತ್ತಿರ ಬಂದಾಗ ಏನಾಶ್ಚರ್ಯ?. ಅದೇ ವ್ಯಕ್ತಿ ಬೇರೆ ಬಣ್ಧದ ಚೂಡಿದಾರ ಧರಿಸಿ ಕ್ಯಾಷ್ ಕೌಂಟರ್ ಹತ್ತಿರ ದಕ್ಷಿಣೆಗಾಗಿ ಕಾಯುತ್ತಿದ್ದ. ದಾವಣಿಯನ್ನು ಸೆರಗಿನಂತೆ ತಲೆ ಮೇಲೆ ಹಾಕಿದ್ದ ಆತ ಮೊದಲನೆ ಸಲ ನೋಡಿದ ಜಾಗದಿಂದ ಸರಿಯಾಗ ಐನೂರು ಕಿ.ಮೀ. ದೂರದಲ್ಲಿ ಅಂತುಹುದೆ ಬೇಸಿಗೆಯ ಮಧ್ಯಾಹ್ನ ನನಗೆ ಕಾಣಿಸಿದ್ದ ಸರಿಯಾಗಿ ಇಪ್ಪತ್ತು ವರ್ಷದ ನಂತರ ಆತನನ್ನು ಕಂಡು ನನಗೆ ಆಶ್ಚರ್ಯ, ಸಂತೋಷಗಳೆರಡೂ ಉಂಟಾದರೂ, ತೋರಿಸಿಕೊಳ್ಳದೆ ಆತನನ್ನು ನೋಡುತ್ತಾ ನಿಂತೆ. ತುಂಬಾ ಹಳೆಯ ಮಿತ್ರನಂತೆ ಆತ ಹಲವಾರು ನೆನಪುಗಳನ್ನು ತಂದಿದ್ದ. ಹೇಗಾದರೂ ಮಾಡಿ ಆತನ ಫೋಟೋ ತೆಗೆದುಕೊಳ್ಳಬೇಕೆಂದುಕೊಂಡು ಮೊಬೈಲ್ ನೋಡಿದವನಂತೆ ನಟಿಸಿ ಆತನ ಎರಡು ಚಿತ್ರ ಹಿಡಿದೆ. ಅಷ್ಟರಲ್ಲಿ ಬಂದ ಕ್ಯಾಷ್ ಕೌಂಟರ್‌ನವನು ಕೊಟ್ಟ ಹತ್ತು ರೂಪಾಯಿ ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಒಂದು ನಿಂಬೆ ಇಟ್ಟು ಹೊರಟುಹೋದ. ಆ ಕೃಷ್ಣ ವರ್ಣದ ಚೂಡಿಧಾರಿ ಗಂ(ಹೆಂ)ಗಸಿನ ಮತ್ತೊಮ್ಮೆ ಹೆಚ್ಚು ಕಡಿಮೆ ಅಂತಹುದೆ ವಸ್ತ್ರಗಳಲ್ಲಿ ಕಂಡು ನಾನು ನಿಜವಾಗಲು ದಂಗಾಗಿದ್ದೆ. ಆತನ ಗುಂಗಿನಲ್ಲಿಯೇ ಲಾಡ್ಜ್‌ಗೆ ಮರಳಿ ಬಂದು, ನಾ ಸೆರೆಹಿಡಿದ ಆತನ  ಫೋಟೋ ನೋಡಿದರೆ, ಆತ ನಾಚಿಕೊಂಡ ಹೆಣ್ಣಿನಂತೆ ಮುಗುಳ್ನಗುತ್ತಾ ಫೋಜು ಕೊಟ್ಟಿದ್ದ. ಇನ್ನೊಂದು ಸಲ ನಾನು ಈ  ತರಹದ ಚಟುವಟಿಕೆ ಮಾಡಬಾರದು, ಯಾರಾದರೂ  ನನ್ನ  ವಿಕೃತಕಾಮಿ ಎಂದುಕೊಂಡಾರೆಂಬ ಆಲೋಚನೆ ನನ್ನೊಳಗೆ ಗಾಬರಿಯಾದೆ.

                                            *************

ಕತೆ - ೪

     ಜಿನಿವಾದ ಹೋಟೆಲ್‌ಯಿಂದ ಏರ್‌ಪೋಟ್‌ಗೆ ಹೊರಡುವಾಗ ಬಾಡಿಗೆ ಪಡೆದ ಟ್ಯಾಕ್ಸಿಯ ಡ್ರೈವರ್ ತುಂಬಾ ವಿನಯವಂತ ಹಾಗೂ ವಯಸ್ಸಾದವನಂತಿದ್ದ. ಆತ ಸ್ವಿಸ್ ನಾಗರಿಕನಂತೆ ಕಾಣಲಿಲ್ಲ. ತುಂಬಾ ಒಳ್ಳೆಯ ಇಂಗ್ಲೀಷ್ ಮಾತನಾಡುತ್ತಿದ್ದ ಆತನ ಜೊತೆ ನಾನು ಸುಮ್ಮನಿರದೆ.

  "ನಿಂದ್ಯಾವ ದೇಶ? ನಿನ್ನ ಹೇಸರೇನು ಅಣ್ಣಾ?" ಎಂದು ನಯವಾಗಿ ಕೇಳಿಯೆ ಬಿಟ್ಟೆ.

ಅವನು ಬೇಜಾರಾಗದೆ ಮುಗುಳ್ನಗುತ್ತಾ "ನನ್ನ ಹೆಸರು ಶಫಕತ್, ನಾನು ಸರ್ಬಿಯಾದವ. ನೀನು ಟರ್ಕಿಯವನಾ?" ಎಂದು ಉತ್ತರಿಸಿ ಮರು ಪಶ್ನಿಸಿದ ಆ ವೃದ್ಧ ಟ್ಯಾಕ್ಸಿ ಚಾಲಕ.

"ನಾನು ಇಂಡಿಯನ್...ವೈದ್ಯ ...." ಎಂದೆ.

ಶಾಲೆಯಲ್ಲಿದ್ದಾಗ, ಯುಗೋಸ್ಲಾವಿಯಾ ಒಡೆದುಹೋಗಿ, ಬೋಸ್ನಿಯಾ ಹರ್ಜೆಗೋವಿನಾದ ನರಮೇದದ ವಾರ್ತೆ ನೋಡಿದ ನೆನಪು ಅಚ್ಚಳಿಯದೆ ಮನದಲ್ಲಿ ಉಳಿದಿತ್ತು. ಸೆರ್ಬಿಯಾದ ಹೆಸರು ಕೇಳಿದಾಗ ಕಪ್ಪು ಬಿಳುಪು ಟಿ.ವಿ.ಯಲ್ಲಿ ದೂರದರ್ಶನ ವಾರ್ತೆಗಳ ವಿಡಿಯೋಗಳೂ ಕಣ್ಣ ಮುಂದೆ ಹಾದು ಹೋದವು.

ಶಫಕತ್ನೊಂದಿಗೆ ಮಾತು ಮುಂದುವರೆಸಿ "ಹೇಗಿದೆ ನಿಮ್ದೇಶಾ? ಈಗ  ಹೇಗಿದ್ದಾರೋ ನಿಮ್ಮ ಜನ?" ಎಂದೆ. 

"ಪರ್ವಾಗಿಲ್ಲ ಹೆಂಗೋ ಜೀವನಸಾಗಿಸ್ಬೋದು... ಸ್ವಲ್ಪ ಕಷ್ಟಾನೆ ಅನ್ನಿ" ಎಂದ ಶಫಕತ್. 

ಬೋಸ್ನಿಯಾ, ಯುಗೋಸ್ಲಾವಿಯಾ, ಕೋಸೊವೋ, ಹರ್ಜೆಗೋವಿನಾದ ನರಮೇದಗಳನ್ನು ನೆನಪಿಸಕೊಂಡು ಮನ ಕಂಪಿಸಿತು .

ಆಂತರಿಕ ಸಂಕಷ್ಟದಲ್ಲಿ ನರಳಾಡುತ್ತಿರುವ ಮುಸ್ಲಿಂ ರಾಷ್ಟ್ರಗಳಲ್ಲಿ ಸೆರ್ಬಿಯಾ ಕೂಡ ಒಂದು.

"ಬಡತನದಿಂದ ಇನ್ನೂ ಹೊರಬಂದಿಲ್ಲ ನಮ್ಮ ದೇಶ. ನಾನು ಸ್ವಿಟ್ಜರ್‌ಲ್ಯಾಂಡ್ ಗೆ ಬಂದು ಸುಮಾರು ವರ್ಷಗಳೆ ಆಯಿತು. ನನ್ನ ಎರಡೂ ಮಕ್ಕಳು ಇಲ್ಲಿನ ನಾಗರಿಕತೆ ಹೊಂದಿದ್ದಾರೆ" ಎಂದ.

"ಎಷ್ಟ್‌ ದೂರ ನಿಮ್ಮೂರು ಇಲ್ಲಿಂದ. ಡೈರೆಕ್ಟ್‌ ವಿಮಾನ ಇರಬಹುದಲ್ಲ" ಎಂದು ಕೇಳಿದೆ 

"ಇಲ್ಲಿಂದ ಸುಮಾರು ಸಾವಿರದ ಎಂಟನೂರು ಕಿ.ಮೀ....... ಒಂದು ಎಂಟು ಸೊನ್ನೆ ಸೊನ್ನೆ..... ನಾನು ಫ್ಲೈಟಲ್ಲಿ ಹೋಗಲ್ಲ..... ಈ ಮರ್ಸಿಡಿಸ್ ವ್ಯಾನ್‌ನಲ್ಲಿ ನಾನು ನನ್ನ ಫ್ಯಾಮಿಲಿ ಎಲ್ಲಾ ಡ್ರೈವ್ ಮಡ್ಕೊಂಡೆ ಹೊಗುತ್ತೇವೆ" ಎಂದು  ಬಲ ಹಸ್ತ ತನ್ನ ವಾಹನದ ಸ್ಟೇರಿಂಗ್ ಮೇಲೆ ಅಕ್ಕರೆಯಿಂದ ಸವರಿದ. ಇದ್ದಕ್ಕಿಂದಂತೆ ನನಗೆ ಮಿಲೋಸೋವಿಚ್ ನೆನಪಾದ. 

"ನಿನಗೆ ಸ್ಲೋಬೋದಾನ್ ಮಿಲೋಸೋವಿಚ್ ಗೊತ್ತಾ" ಎಂದೆ 

"ಆಂ ..ಯಾರು...ಯಾರು ...." ಎಂದ 

"ಮಿಲೋಸೋವಿಚ್.....ಮಿಲೋಸೋವಿಚ್...ಸ್ಲೋಬೋದಾನ್ ಮಿಲೋಸೋವಿಚ್ " ಎಂದೆ 

"ಅವನೆಂಗ್ ಮರೆಯಲು ಸಾಧ್ಯ?...ತುಂಬಾ ಕ್ರೂರಿಯಗಿದ್ದ...... ತುಂಬಾ ಜನ್ರನಾ ಸಾಯಿಸ್ದಾ.. ಅವನು ..." ಎಂದ ಜೋರಾಗಿ. 

ಇಬ್ಬರೂ ಕೂಡಿ ಕ್ರೂರ  ಮಿಲೋಸೋವಿಚ್ನ ನೆನಸಿಕೊಂಡೆವು.ಮಿಲೋಸೋವಿಚ್ ಯುಧ್ದಾಪರಾಧಗಳಿಗಾಗಿ ಜೈಲು ಸೇರಿ, ಜೈಲಲ್ಲೆ ಮೃತ ಪಟ್ಟಿದ್ದು ನೆನಸಿ ಸಂತುಷ್ಟನಾದ ಶಫಕತ್. 

"ನಿನಗೆ ಅರೆಬಿಕ್ ಭಾಷೆ ಓದಕ್ ಬರುತ್ತಾ? ನೀವೆಲ್ಲಾ ಅರೆಬಿಕ್ ಕುರಾನ್ ಓದೋದು ಕಲ್ತಿರಬೇಕಲ್ಲಾ?" ಎಂದೆ 

"ಇಲ್ಲ ನನಗೆ ಅರೆಬಿಕ್ ಬರಲ್ಲ... ನಾನು ಅಲ್ಜಿರಿಯನ್ ಲಿಪಿಯ ಕುರಾನ್ ಪಠಣ ಮಾಡುತ್ತೇನೆ" ಎಂದ. 

ತನ್ನ ಮಾತೃಭಾಷೆ ಅಲ್ಜೀರಿಯನ್ ಎಂದು ಶಫಕತ್ ಹೇಳಿ ಮಾತಿಗೆ ನಾನು ಪ್ರಾನ್ಸ್‌ ಫುಟಬಾಲ್ ತಂಡದ ಪೂರ್ವ ನಾಯಕ "ಜಿನೆಡಿನೆ ಜಿಡಾನ್"ನ ನೆನಸಿಕೊಂಡೆ.

"ಜಿಡಾನ್ ಗೋತ್ತಾ ನಿನಗೆ" ಎಂದೆ. 

"ಓ, ಜಿನೆಡಿನೆ ಜಿಡಾನ್..?.....ಅವನ ಮಾತೃ ಭಾಷೆನೂ ಅಲ್ಜಿರಿಯನ್ " ಎಂದ ನಗುತ್ತಾ

ಜಿಡಾನ್ ಕೂಡ ಶಫಕತ್ ನಂತೆ ಅಲ್ಜಿರಿಯನ್ ಮುಸ್ಲಿಂ ,ಇಬ್ಬರ  ಮಾತೃ ಭಾಷೆ ಕೂಡ ಅಲ್ಜಿರಿಯನ್ ...! .ಆತ ನಮ್ಮಿಬ್ಬರ ಇಷ್ಟದ ಆಟಗಾರನಾಗಿದ್ದ .ಜಿಡಾನೆಯ ದೇಶದ ಹಾಗೂ ವೈಯುಕ್ತಿಕ ವಿವರ ಕೇಳಿದಾಗ ಶಫಕತ್, ತನ್ನ ಸಂಬಂಧಿಕನ ವಿವರ ಕೊಟ್ಟಂತೆ , ಪಟಪಟನೆ ಹೇಳಿದ . ತುಂಬಾ ಸಂತುಷ್ಟನಾದ ವೃದ್ಧ ಶಫಕತ್ ಮಾತಿನ ಮಧ್ಯ ರಸ್ತೆಯಲ್ಲಿ ಕಾಣಿಸಿದ  ಸಂಯುಕ್ತ ರಾಷ್ಟ್ರಗಳ ಮುಖ್ಯ ಕಚೇರಿಯ ಕಟ್ಟಡ ತೋರಿಸಿ.

"ಅಲ್ಲಿ ನೋಡಿ ಡಾಕ್ಟರೆ ..ಯುನೈಟೆಡ್ ನೇಷನ್ಸ ಬಿಲ್ಡಿಂಗ್ ..." ಎಂದು ದಾರಿಯಲ್ಲಿದ್ದ ವಿಶ್ವಪ್ರಸಿದ್ದ ಸ್ಮಾರಕಗಳನ್ನು ತೋರಿಸುವದ ಮರೆಯಲಿಲ್ಲ. ಮುಂದುವರಿಯಿತು ನಮ್ಮ ಜಿಡಾನ್ ಚರ್ಚೆ .

"ಜಿಡಾನ್ ಈಗ ರಿಯಲ್ "ಮ್ಯಾದ್ರಿದ್" ತಂಡದ ಬಾಸ್" ಎಂದ ಶಫಕತ್ ಹೆಮ್ಮಪಟ್ಟುಕೊಳ್ಳುತ್ತಾ.

ನಾನು ತಲೆ ಅಲ್ಲಾಡಿಸುತ್ತ  "ಹೌದು ಆತ ರಿಯಲ್ ಮ್ಯಾಡ್ರಿಡ್  ತಂಡದ ಕೋಚ್" ಎಂದೆ.

ಶಫಕತ್ಗೆ ಕೋಚ್ ಪದ ಹೊಳೆದಿರಲಿಲ್ಲ. ನಾನು ಹೇಳಿದ ತಕ್ಷಣ ಮತ್ತೆ "ಯಾ... ಜಿನೆದಿನ್ ಇಸ್ ಕೋಚ್ ಫಾರ್ ರಿಯಲ್ ಮಾದ್ರೀದ " ಎನ್ನುವಷ್ಟರಲ್ಲಿ ಜಿನಿವಾ ಏರಪೋರ್ಟಗೆ ಬಂದಿತ್ತು ನಮ್ಮ ಟ್ಯಾಕ್ಸಿ. ಶಫಕತ್ಗೆ ವಿದಾಯ ಹೇಳಿ ,ಏರ್ಪೋರ್ಟನ  ಒಳಬಂದು  ಲೌಂಜ್ನಲ್ಲಿ ಸ್ಥಳೀಯ ಆಂಗ್ಲ ಪತ್ರಿಕೆ ಓದಲಾರಂಭಿಸಿದೆ.ಪದಬಂಧಗಳ ಬಿಡಿಸುವಾಗ ಪೇಪರ್ನ ಎಡ ಮೂಲೆಯಲ್ಲಿ ,"ಇಂದು ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಿರುವ ಸೆಲೆಬ್ರಿಟಿಗಳು ಈ ಕೇಳಗಿನವರು", ಎಂದು ಬರೆದ ಒಕ್ಕಣಿಕೆಯ ಕೆಳಗೆ  ಮೊದಲ ಹೆಸರು ಜಿನೆಡಿನೆ ಜಿಡಾನ್‌ ಎಂದಿತ್ತು. ನನಗೆ ಮುಂದೆ ಪೇಪರ್ ಓದಲಾಗಲಿಲ್ಲ....

ಸಲೀಂ ನದಾಫ್‌

ಡಾ‌ಸಲೀಂ ನದಾಫ ,ವೃತ್ತಿಯಲ್ಲಿ ವೈದ್ಯರು. ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮೋಳೆ ಗ್ರಾಮದವರು. 1978 ರ ಜುಲೈ 8 ರಂದು ಜನನ. ಹವ್ಯಾಸಿ ಬರಹಗಾರು. THE WHITE DISCHARGE ; PRIVATE STORIES OF A GOVERNMENT DOCTOR-ಇದು ಅವರ ಪ್ರಥಮ ಕೃತಿ. ಹಲವಾರು ಪತ್ರಿಕೆಗಳಲ್ಲಿ ಇವರ ಕಥೆಗಳು,ಕವನಗಳು, ವೈದ್ಯಕೀಯ ಬರೆಹಗಳು ಪ್ರಕಟವಾಗಿವೆ. ಅಬುಯಾಹ್ಯಾ -ಇವರ ಕಾವ್ಯನಾಮವಾಗಿದೆ.

More About Author