Poem

ಕವಿತೆ ಕೈಜಾರುತ್ತದೆ

ಯುದ್ಧಭೂಮಿಯಲಿ ನಿಂತು
ಪ್ರೇಮದ ಕವಿತೆ ಓದುವಂತೆ
ನಿಟ್ಟುಸಿರಿನ ಜೊತೆ ಬದುಕಿನ ಕನಸ ಬೆರೆಸಿ
ಒಂದೊಂದೇ ತುತ್ತು ಗಂಟಲಿಗಿಳಿಸುತ್ತೇನೆ…
ಕವಿತೆ ಕೈಜಾರುತ್ತದೆ..

ಧರ್ಮದ ಮಾತು..!
ಸುಮ್ಮನೆ ಎದೆಗಿರಿಯುತ್ತದೆ
ಅಲ್ಲೆಲ್ಲೋ ...
ನಿಂತ ನೆಲಕ್ಕಾಗಿ ಹೋರಾಡುವವರ ಕೊಂದು,
ದೋಚಿದವರ ಪರ ಭಾಷಣ ಬಿಗಿಯುವವರ
ನಡುವೆ, ಪುಟ್ಟ ಕಂದಮ್ಮಗಳ ಹಸೀನೆತ್ತರಿಗಂಟಿದ
ಇದೇ ಧರ್ಮದ ಬಣ್ಣಕ್ಕೆ ಬೆಚ್ಚಿಬೀಳುತ್ತೇನೆ
ಆ ರಣ ಬೀದಿಗಳಲ್ಲಿ ನೆರೂಡನ ಕವಿತೆ ಕಾಣುತ್ತವೆ..

ರಕ್ತ…
ಇದರದ್ದು ಬೇರೆಯದೇ ಕತೆ
ನೆಲದೊಳಡಗಿದ ನೀರ ಒರತೆಯಂತೆ
ನೆಲದ ಮೇಲೆಲ್ಲಾ ರಕ್ತದ್ದೇ ಹರಿವು
ರಕ್ತ ಶುದ್ಧಿಗಾಗಿಯೇ ರಕ್ತ ಸುರಿಸುವವರ
ಮತ್ತೆ ಮತ್ತೆ ಹೆರುತ್ತಲೇ ಇರುವ
ಭೂತಾಯಿ ಮುಡಿದ ಹೂ, ಯಾರ ರಕ್ತದಲ್ಲರಳಿದ್ದೂ..
ಇಲ್ಲಿ ಹೂವಿಗೂ ರಕ್ತದ್ದೇ ಬಣ್ಣ
ಕವಿತೆ ನೀಲಿಗಟ್ಟುತ್ತದೆ..

ನೆಲದ ನಿಜ ಚರಿತ್ರೆಗಳ
ಮುಚ್ಚಿದ ಪುಣ್ಯ ಪುರಾಣಕತೆಗಳಲ್ಲಿ
ನನ್ನ ಜನ ಕಳೆದುಹೋಗಿದ್ದಾರೆ
ಸಮಾರಾಧನೆಯಲ್ಲಿ ಎಲ್ಲವೂ ಅಗ್ಗ
ಕೊಂದದ್ದು, ಕೊಲ್ಲಿಸುವುದು
ಯುದ್ಧೋನ್ಮಾದವಾಗಿಸುವ
ಮುಖೇಡಿಗಳ ನಡುವೆ
ನಾಳೆಯ ಕನಸು ಕಣ್ಗಳಲಿ
ಚರಿತ್ರೆಯ ಮರುಹುಟ್ಟು
ಕವಿತೆ ಮತ್ತೆ ಖಡ್ಗವಾಗುತ್ತದೆ…

ಯುದ್ಧ
ಕೇಳುತ್ತಲೇ ಇದೆ ಸದ್ದು
ಯುದ್ಧಕ್ಕೆ ಅದರ ಘಾತಕ್ಕೆ ದೇಶ ಭಾಷೆಗಳ
ಗಡಿ ಇಲ್ಲವೇ ಇಲ್ಲ
ಗಂಡು ಜಗತ್ತು ಸಾಮ್ರಾಜ್ಯ ವಿಸ್ತರಿಸುವುದು
ಹೆಣ್ಣುಗಳ ತೊಡೆ, ಯೋನಿ, ಮೊಲೆಗಳ ಮೇಲೆಯೇ
ಅವನ ಅಹಮ್ಮಿಕೆಯ ಮೊದಲ
ದಾಳಿ ಹೆಣ್ಣು ಮೈ-ಮನಗಳ ಮೇಲೆ
ಭೂಮಿಗಿಳಿದ ಮದ್ದು ಗುಂಡುಗಳಿಗಿಂತಲೂ
ನೆಲದ ಹೆಣ್ಣುಗಳ ಎದೆಗಿಳಿದ
ನಂಜಿನ ನರಕ ದೊಡ್ಡದೇ
ಬೇಕಿದ್ದರೇ ನಮ್ಮದೇ ಮಣಿಪುರ ಮೆರವಣಿಗೆ ನೋಡಿ…

ಧರ್ಮ ಯುದ್ಧವೆನ್ನುತ್ತಲೇ
ಹುಟ್ಟಿದ ಮಕ್ಕಳ ಕುತ್ತಿಗೆಗೆ
ಕತ್ತಿ ಹಿಡುವ ಕಟುಕರಿಗೂ
ಧರ್ಮವಿದೆ ಇಲ್ಲಿ.

ಕಿತ್ತು ತಿಂದು ಕೊಂದು ತೇಗಿದವರದ್ದೂ
ಶ್ರೇಷ್ಠತೆಯ ಕತೆ
ಕವಿತೆ ಕಾಲ ಕಾಯುತ್ತಲೇ ಇದೆ…

ಚರಿತ್ರೆ ಅಳಿಸಿ ಇಲ್ಲದ ಚರಿತ್ರೆ ಬರೆದವರ
ಚರಿತ್ರೆ ಇಲ್ಲಿ ಮತ್ತೆ ಮತ್ತೆ ಅರಾಜಾಗುತ್ತದೆ
ಕವಿತೇ ಎಲ್ಲವನ್ನೂ ಕಾಯ್ದಿಡುತ್ತದೆ…
ನಾಳೆಗಳ ಪ್ರೇಮದಲ್ಲಿ ಕಟ್ಟುವ ಪಣತೊಟ್ಟ
ನನ್ನ ಕವಿತೆ ಮತ್ತೆ ಮತ್ತೆ ಕೈಜಾರುತ್ತದೆ..

-ಮಂಜುಳಾ ಹುಲಿಕುಂಟೆ

ವಿಡಿಯೋ

ಮಂಜುಳಾ ಹುಲಿಕುಂಟೆ

ಕವಿ, ಪತ್ರಕರ್ತೆ ಮಂಜುಳಾ ಹುಲಿಕುಂಟೆ ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ. ಹುಟ್ಟೂರಿನಲ್ಲೇ ಪ್ರಾಥಮಿಕ ಮತ್ತು ಫ್ರೌಢಶಾಲಾ ಶಿಕ್ಷಣ ಮುಗಿಸಿದ ಮಂಜುಳಾ ತ್ಯಾಮಗೊಂಡ್ಲು ಶ್ರೀಮತಿ ನರಸಮ್ಮ ತಿಮ್ಮರಾಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮತ್ತು ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಆನಂತರ ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಡಿಪ್ಲಮಾ ಮಾಡಿದ್ದಾರೆ. ಕಸ್ತೂರಿ ಸುದ್ದಿವಾಹಿನಿಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದ ಮಂಜುಳಾ, ಸುವರ್ಣ ನ್ಯೂಸ್ , ಟಿವಿ 9 ಸೇರಿದಂತೆ ಕರ್ನಾಟಕದ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.  

ಸಂವಾದ ಸಂಸ್ಥೆಯಲ್ಲಿ ‘ಯುವಜನರ ಹಕ್ಕುಗಳು’ ಎಂಬ ವಿಷಯದಡಿ ನಡೆಸಿದ ಸಾಕ್ಷ್ಯ ಕಾರ್ಯದ ಫಲವಾಗಿ ‘ಹೆಡ್ಡಿಂಗ್‌ ಕೊಡಿ’ ಹೆಸರಿನ ಕೃತಿ ಸಂಪಾದನೆ ಮತ್ತು ದೀಪದುಳುವಿನ ಕಾತರ ಎಂಬ ಕವನ ಸಂಕಲನ ಬಿಡುಗಡೆಯಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಉದಯೋನ್ಮಕ ಕವಯತ್ರಿಯರಿಗೆ ನೀಡುವ 2016ನೇ ಸಾಲಿನ ಡಾ.ಸಿ.ವಿ.ವತ್ಸಲಾದೇವಿ ಸ್ಮಾರಕ ಪ್ರಶಸ್ತಿ, ವಿಜಯಪುರದ ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನದಿಂದ 2018ನೇ ಸಾಲಿನ ಯುವ ಸಾಹಿತಿ ಪುರಸ್ಕಾರ ಪಡೆದಿದ್ದಾರೆ. ಇವರ ಹಲವು ಕವಿತೆ, ಲೇಖನಗಳು ವಿಜಯ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆ, ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

 

More About Author