
ನನ್ನ ನೀರಡಿಕೆಗೆ ತನ್ನ ಹಸಿ ಮೈಯ ಬೆವರನೇ ಎರಕವಾಗಿಸುತ್ತಾಳೆ.
ಸಮುದ್ರಗಳೂ ಕೂಡ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ ಆಗ, ಒಡಲು ಬಸಿದರೂ
ಉಪ್ಪು ರುಚಿ ಕಳೆದು ಕೊಳ್ಳುತ್ತದೆ.
ನನ್ನ ಹಸಿವಿಗವಳ
ಮೊಲೆ ತೊಟ್ಟಿನಿಂದ ಕೆಂದುಟಿ ಸವರುತ್ತಾಳೆ. ಆದರೇನು
ಒಂದು ಪಕಳೆಯೂ ನೆನೆಯುವುದಿಲ್ಲ, ನಾನು ಹುಡುಕುತ್ತೇನೆ, ಮಿಡುಕುತ್ತೇನೆ,
ತಡಕಾಡುತ್ತೇನೆ,ಹಾಲಿನ ಬದಲಿಗೆ ಅವಳ ನುಚ್ಚು ನೂರು ಕನಸುಗಳು ಬಣ್ಣ ಬಳಿದುಕೊಳ್ಳುತ್ತವೆ.
ನನ್ನ ಕನಸುಗಳಿಗೆ ಅವಳು ಮೈ ಚಾಚುತ್ತಾಳೆ, ಎಷ್ಟೊಂದು ಭಯಂಕರ ಸ್ವಪ್ನಗಳು ಅಲ್ಲಿ
ಸ್ಖಲನಗೊಳ್ಳುವುವು,ನನಸಾದ ಕನಸುಗಳು ಒಂದೂ ಇಲ್ಲ ಅವಳ ಪಾಲಿಗೆ,ಆದರೂ
ಸೊಗದಿರುಳು ನಿನಗೆ ಎನ್ನುವಳು. ಆಗ ಬೆಳದಿಂಗಳು ಇರುಳ ಕಳೆದು ಕೊಳ್ಳುತ್ತದೆ.
ನನ್ನ ದಿಕ್ಕೆಟ್ಟ ದಾರಿಗಳಿಗೆ ಮಾರ್ಗವಾಗುತ್ತಾಳೆ, ಹೆಪ್ಪುಗಟ್ಟಿದ ನೋವುಗಳನ್ನು ಎದೆ
ಜ್ವಾಲೆಯೊಳಗೆ ಸುಟ್ಟು ರೊಟ್ಟಿಯಾಗುವಳು, ನೆತ್ತಿಗೇರಿ
ನದಿಯಾಗುವಳು,ಕುಲನಾರಿಯಾಗುವಳು,ಝರಿಯಾಗುವಳು,ಜಲಪಾತದಂತೆ
ಧುಮ್ಮಿಕ್ಕುವಳು..ಆಗ ಜಗ ಮೂಕವಾಗುತ್ತದೆ.
ಮಂಜುಳಾಭಾರ್ಗವಿ.
ಮಂಜುಳಾ ಭಾರ್ಗವಿ
ಮಂಜುಳಾ ಭಾರ್ಗವಿ ಅವರು ಮೂಲತಃ ಬೆಂಗಳೂರಿನವರು. ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದ್ದು, ಹಲವಾರು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿರುತ್ತಾರೆ.
More About Author