Poem

ನಾವಿಬ್ಬರೇ ಗುಬ್ಬಿ

ಎರಡು ದೇಹಗಳು ಬೇರೆ
ಎರಡು ಆತ್ಮಗಳು ಬೇರೆ
ಒಂದಾಗುವ ಎರಡು ಆತ್ಮಗಳು ಸುಳ್ಳು

ಪಂಜರದ ಗುಬ್ಬಿ ಚೆಂದ ಹಾಡುತ್ತೆ,
ಹಾರಿ ಹೋದರೆ ಸದ್ದು ಕೇಳಲ್ಲ;
ಹಣ ಕೊಟ್ಟು ನ್ಯಾಯಯುತವಾಗಿ
ಮನೆಗೆ ಹೊಂದುವ ಹಾಗೆ,
ಸರಿಯಾದ ಜಾಗಕ್ಕೆ ನೇತಾಕಿರುವೆ

‘ಪಂಜರ’ ಗಾಳಿಗೆ ತೇಲುತ್ತೆ
ಹಕ್ಕಿ ಚೆಂದ ಹಾಡುತ್ತೆ

ಜೊತೆಗಿದ್ದು, ಪ್ರೀತಿ ಹಂಚಿದರೂ
ಯಾಕೆ ಯಾವಾಗಲೂ ಹೀಗೆ
ಸಂಬಂಧ ಇಬ್ಬರದ್ದೂ ಅಲ್ವಾ
ನಾನೇ ಕ್ಷಮಿಸಬೇಕು
ಗುಬ್ಬಿ ಹಾಡುವುದ ಬಿಟ್ಟು
ನನ್ನ ಜೊತೆ ಮಾತಾಡಿದರೆ
ಚೆಂದ ಅನಿಸುತ್ತೆ,
ಬೇರೆ ಯಾರೂ ಇಲ್ಲ ಕೇಳಲು

ಹೇಳು ಗುಬ್ಬಿ ಹೇಳು
ನಾವಿಬ್ಬರೂ ಒಬ್ಬರಿಗೊಬ್ಬರು
ಒಂದೇ ಪ್ರೀತಿ ಅಲ್ಲವೇ

ಕೀಲಿ ನನ್ನ ಕೈಯಲ್ಲಿ
ಪಂಜರ ನಿಂದು
ನೀ ಕೊಟ್ಟ ಹಣ
ಅದು ಮಾರಿದವನ ಹಣ
ಕದ ತೆಗಿ ಬೇಗ,
ಹಾರಬೇಕು, ನಮ್ಮವರ ನೋಡಬೇಕು

ಅದೆಷ್ಟು ಚೆಂದ ಹಾಡ್ತಿ
ಮಾತಾಡುವವ;
ನನ್ನ ಮಾತು ಕೇಳುವವ,
ಇದ್ದಿದ್ದರೆ!

ನಮಗೆ ನಾವಿಬ್ಬರೇ ಗುಬ್ಬಿ
ನಡುವೆ ಪ್ರೀತಿ ಒಂದೇ!

- ವಿಕ್ರಮ ಬಿ.ಕೆ

ವಿಡಿಯೋ
ವಿಡಿಯೋ

ವಿಕ್ರಮ ಬಿ.ಕೆ

ಬಳ್ಳಾರಿ ಸೀಮೆಯ ಈಗಿನ ವಿಜಯನಗರ ಜಿಲ್ಲೆಯ ಹೊಸಪೇಟೆ ಕಡೆಯವರು. ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮ ಓದಿ, ತಮ್ಮ ಓಣಿಯ ಮತ್ತು ಕುಟುಂಬದಲ್ಲೇ ಮೊದಲ ಎಂಜಿನಿಯರಿಂಗ್ ಪದವಿ ಪಡೆದವರು. Sales and marketing ನಲ್ಲಿ ಜನರೊಂದಿಗೆ ಹೆಚ್ಚು ಬೆರೆಯಬಹುದು ಎಂದು ತಿಳಿದು ಅದೇ ಪ್ರೊಫೆಷನ್ನಲ್ಲಿ career ಬೆಳೆಸುತ್ತಾ NMIMS ಕಾಲೇಜಿನಲ್ಲಿ MBA in General Management ಪದವಿಯನ್ನು ಪಡೆದರು. 8 ವರ್ಷಗಳ ಕಾಲ ಸಮಕಾಲೀನ ನೃತ್ಯ ಪ್ರಕಾರವನ್ನು Attakkalari centre for movement arts ನಲ್ಲಿ ಕಲೆತು, ಒಟ್ಟಾರೆ ಸ್ಟೇಜ್ ಮೇಲೆ ನೂರಕ್ಕೂ ಹೆಚ್ಚು ಪ್ರದರ್ಶನ ಕೊಟ್ಟಿದ್ದಾರೆ. Beru - space for anchoring arts ಸಂಸ್ಥೆಯ ಒಡನಾಡಿಯಾಗಿದ್ದಾರೆ. ಪದ್ಮಶ್ರೀ ಮಾತಾ ಬಿ ಮಂಜಮ್ಮ ಜೋಗತಿ ಪ್ರತಿಷ್ಠಾನದ ಸದಸ್ಯರು, ಸಮಾನತೆಯ ಸಂದೇಶವನ್ನು ಎಲ್ಲರಿಗು ತಲುಪಲಿ ಎಂದು ವಿಭಿನ್ನ ಕಲೆ ಪ್ರಕಾರಗಳ ಮೂಲಕ, ಸಾಹಿತ್ಯದ ಮೂಲಕ, ಜನರ ಸಮಯ ಪಡೆದು ಗಮನ ಸೆಳೆದು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕೇಳು ಮನಸೇ ಎನ್ನುವ ಒಂದು ವಿಶಿಷ್ಟ ಸಾಹಿತ್ಯ ವೇದಿಕೆಯನ್ನು ಗೆಳೆಯರೊಂದಿಗೆ ಸೇರಿ ಪ್ರಾರಂಭಿಸಿದ್ದಾರೆ. ಕನ್ನಡದಲ್ಲಿ ಕತೆ ಮತ್ತು ಕವನಗಳನ್ನು ಓದಿ ಹೇಳುವ ಈ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕವನಗಳನ್ನು ಬರೆಯೋದರ ಜೊತೆಗೆ ಕವನ ಓದುವಿಕೆ ಇವರಿಗೆ ಅಚ್ಚುಮೆಚ್ಚು. ವಿಕ್ರಮ ಬಿಕೆ “VikramBK” ಹೆಸರಿನ youtube channel ನಲ್ಲಿ ತಮ್ಮ ಇಷ್ಟದ ಕವನಗಳನ್ನು ಓದಿ ಪ್ರಕಟಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ.

ಕೃತಿಗಳು: ನಾವಿಬ್ಬರೇ ಗುಬ್ಬಿ

More About Author