Poem

ನಾನೂ ಸ್ವತಂತ್ರಳಾಗುವೆ !  

ನನಗೇಕೋ ಅನುಮಾನ;
ನಾನಿನ್ನೂ ಸ್ವತಂತ್ರಳಾಗಿಲ್ಲವೆ ?!
ಬೂಟುಗಳ ಸದ್ದಿಲ್ಲ; ಕಣ ರಂಗೇರಿದೆ !
ಬೇಟೆಯ ಹದ್ದಿಲ್ಲ; ಇಲ್ಲಿ ಹೆಣ ಬಿದ್ದಿದೆ !
ಕೊಲೆ, ರಕ್ತಪಾತ; ಪಂಥ - ಧರ್ಮ
ತಪ್ಪೋ ಒಪ್ಪೋ, ಪಾಪ - ಕರ್ಮ
ಮುಕ್ಕಟ್ಟಿನ ರಾಜಕೀಯ, ದಾಳ;
ಸತ್ತವನಾರೋ ? ಉಳಿದವ ನಿರಾಳ !
ಏನಿದು ಮಕ್ಕಳೆ ? ಏತಕೀ ರಗಳೆ ?
ಕೋಟೆ ಕಟ್ಟುವುದ ಬಿಡಿ
ಕೋಟಿಗಳ ಲೆಕ್ಕ ಬಿಡಿ
ಎದ್ದ ಗೋಡೆಗಳ, ಇದ್ದ ಬೇಲಿಗಳ
ಕಿತ್ತು, ಕೆಡವಿ ಮುಕ್ತಿ ಕೊಟ್ಟು ಬಿಡಿ
ನಾನೂ ಸ್ವತಂತ್ರಳಾಗುವೆ!
ಮೀಲಾಯಿಸಿ ಕೈಗಳ; ಸಲಿಗೆ ಇರಲಿ
ಎದುರಿಗಿರುವವನ ಎದೆಗಪ್ಪಿಕೊಳ್ಳಿ
ಗೋರಿ ಕಟ್ಟಿ ಮನಸ್ತಾಪಗಳಿಗೆ
ಕಿವಿ ನಿಮಿರಲಿ; ನಲ್ಮೆಯ ಮಾತುಗಳಿಗೆ
ನಾನಾಗ ಸ್ವತಂತ್ರಳಾಗುವೆ !
ಅಮೃತ ಮಹೋತ್ಸವ ನನಗಲ್ಲ
ನೆಪ ಮಾತ್ರ ನಾನು !
ಮದ್ದು ಸಿಡಿಸಿ; ಸಿಹಿ ಉಂಡು
ಮತ್ತೆ ಕೇಡು ಬಗೆಯುವಿರಾದರೆ;
ನನಗದೆಲ್ಲಿಯ ಮುಕ್ತಿ ?
ತೋರಿಕೆ - ದೇಶಭಕ್ತಿ!
- ಮನು ಗುರುಸ್ವಾಮಿ

 ಮನು ಗುರುಸ್ವಾಮಿ 

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ  ಕೃತಿಗಳು ಪ್ರಕಟಣಾ ಹಂತದಲ್ಲಿವೆ. 

ಕೃತಿಗಳು : ನಿಬ್ಬೆರಗು

 

 

 

More About Author