ಲೇಖಕ, ಕತೆಗಾರ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಅವರ ‘ನಾಗ’ ಕತೆ ನಿಮ್ಮ ಓದಿಗಾಗಿ...
"ಕಾಟಗಾನ್ವೇ ಹೋಗಿದ್ರೆ ನನ್ನೇ ಹೊಡದವರೇ" ಎಂದು ನಾಗ ಗೋಳಾಡ್ತಿದ್ರೆ ಊರ ಜನವೆಲ್ಲಾ ಗುಂಪು ಸೇರಿದರು. "ಏನಾಯ್ತೋ ನಾಗ" ಎಂದು ಯಾರೋ ಕೇಳಿದ್ರು. ನಾಗ ಮತ್ತೆ ಶುರುಮಾಡಿದ " ಕಾಟಗಾನ್ವೇ ಹೋಗಿದ್ರೆ ನನ್ನೇ ಹೊಡದವರೇ". ಅಷ್ಟರಲ್ಲಿ ಊರ ದೊಡ್ಡಮನುಷ್ಯ ಎನ್ನಿಸಿಕೊಂಡ ಶಿವಾರೆಡ್ಡಿ ಅಲ್ಲಿಗೆ ಬಂದರು. ಎಲ್ಲರೂ ಅವರಿಗೆ ದಾರಿಕೊಟ್ಟರು. ನಾಗನ ರಾಗಾಲಾಪ ಇನ್ನೂ ಮುಂದುವರೆದಿತ್ತು, ಮತ್ತೆ ಮತ್ತೆ ಅದನ್ನೇ ಹಾಡುತಿದ್ದ. ಊರ ಜನರಿಗೆ ಅವನು ಹೇಳಿದ್ದು ಒಂದೂ ಅರ್ಥವಾಗುತ್ತಿರಲಿಲ್ಲ. ರೆಡ್ಡಿ ಬಂದವರೆ ಅವನ ತಲೆಗೆ ಒಂದುಬಿಟ್ಟು "ಬಡ್ಡಿ ಮಗನೆ ಸರಿಯಾಗಿ ಏನಾಯಿತು ಬೊಗಳು" ಅಂದರು. ನಾಗನಿಂದ ಎಲ್ಲರಿಗೂ ಅರ್ಥವಾಗಿದ್ದು ಇಷ್ಟು.
ನಾಗ ಮತ್ತು ಕಾಟ ದನ ಮೇಯಿಸಲು ಹೊಲದಕಡೆ ಹೊಡೆದುಕೊಂಡು ಹೋಗಿದ್ರು, ದನ ಮೇಯಿತಾ ಮೇಯಿತಾ ಪಕ್ಕದೂರಿನ ಹೊಲದೊಳಕ್ಕೆ ನುಗ್ಗಿದ್ದವು, ಊಟಕ್ಕೆ ಕಾಟಮಪ್ಪ ದೇವಸ್ಥಾನದ ಬೇವಿನ ಮರದ ಕೆಳಗೆ ಕೂತಿದ್ದ ನಾಗ, ಕಾಟ ಅದನ್ನ ಗಮನಿಸಲೇ ಇಲ್ಲ. ಊಟಮುಗಿಸಿ ಬಂದು ನೋಡುವಷ್ಟರಲ್ಲಿ ದನಗಳು ಪಕ್ಕದೂರಿನ ಹೊಲದಲ್ಲಿ ಮೇಯುತ್ತಿದ್ದವು. ಇದ್ದದ್ದು ಕಾಟನ ದನಗಳಾಗಿದ್ದರಿಂದ ನಾಗ ಅಲ್ಲೇ ನಿಂತು ನೋಡುತ್ತಿದ್ದ. ಕಾಟ ಓಡಿಹೋಗಿ ದನಗಳ್ಳನ್ನು ಎಳೆದುಕೊಂಡು ಬಂದು ದೂರ ಹೊಡೆದುಕೊಂಡು ಹೋದ. ಇಷ್ಟರಲ್ಲೇ ಹೊಲದ ಯಜಮಾನರು ಬಂದು ಅಲ್ಲೇ ನಿಂತಿದ್ದ ನಾಗನನ್ನು ಹಿಡಿದು ಬಾರಿಸತೊಡಗಿದರು. ನೋವು ತಡೆಯಲಾರದೆ ನಾಗ ಎಲ್ಲರನ್ನೂ ತಳ್ಳಿಕೊಂಡು ಓಡಿ ಬಂದಿದ್ದ.
ಕತೆ ಕೇಳಿದ ಜನ "ಥೂ ನಿನ್ನ, ದನ ಬೇರೆಯವರ ಹೊಲಕ್ಕೆ ನುಗ್ಗಿದರೆ ನೋಡಿಕೊಳ್ಳಬೇಕೆಂಬ ಜ್ಞಾನ ಇಲ್ಲವ" ಎಂದು ನಾಗನನ್ನೇ ಬಯ್ಯತೊಡಗಿದರು. ಊರ ರೌಡಿ ಸುಬ್ಬಾರೆಡ್ಡಿ "ನಮ್ಮ ಊರಿನ ಜನರನ್ನು ಹೊಡೆಯಲು ಅವರಿಗೆ ಎಷ್ಟು ಧೈರ್ಯ, ನಾವು ಹೋಗಿ ಎರಡು ಓದಿಯೋನ ಬರ್ರಲೇ" ಎಂದು ತನ್ನ ಪಟಾಲಂ ಅನ್ನು ಕರೆದ. ಶಿವಾರೆಡ್ಡಿ ಅವರತ್ತ ನೋಡಿ " ಗುಡ್ಡ ಕಡೆದು ಬೆಟ್ಟ ಮಾಡಬೇಡ್ರಲೇ ಸುಮ್ಮನೆ ಮನೆಗೆ ಹೋಗಿ" ಎಂದು ಅಲ್ಲಿಂದ ಹೊರಟರು. ಅಲ್ಲಿದ್ದ ಯಾರೋ "ಯಾಕ್ಲೆ ನಾಗ ಇಸ್ಕೂಲಿಗೆ ಹೋಗಿಲ್ಲ ಇವತ್ತು" ಎಂದರು. " ಇವತ್ತು ಭಾನುವಾರ" ಎಂದ ನಾಗ, ಅಲ್ಲಿದ್ದವರರೆಲ್ಲಾ ಜೋರಾಗಿ ನಕ್ಕರು.
ಮಸರ ಊರಿನಲ್ಲಿ ಐವತ್ತು ರೆಡ್ಡಿ ಮನೆಗಳು, ಐವತ್ತು ಗೌಡರ ಮನೆಗಳ ಜೊತೆಗೆ ಹಲವಾರು ಜಾತಿಗಳ ಮನೆಗಳು ಇವೆ. ಒಂದು ಬ್ರಾಹ್ಮಣರ ಮನೆಯೂ, ಒಂದು ಲಿಂಗಾಯಿತರ ಮನೆಯು, ಮೂರು ಮುಸ್ಲಿಂ ಮನೆಗಳೂ ಇವೆ. ಇದರ ಜೊತೆ ಮೂವತ್ತು ದಲಿತ ಕುಟುಂಬಗಳು ಇವೆ. ಇದಲ್ಲದೆ ಒಂದು ಊರ ಶಾಲಾ ಮಾಸ್ತರ ಮನೆಯೂ ಇದೆ, ಅವರು ಪಕ್ಕದೂರಿನಲ್ಲಿ ಮಾಸ್ತರರು. ಎಲ್ಲರೂ ಅದನ್ನು ಮೇಸ್ಟ್ರ ಮನೆ ಎನ್ನುತ್ತಾರೆ. ಎಲ್ಲಾ ಹಳ್ಳಿ ಜನರೂ ಅನೋನ್ಯವಾಗಿದ್ದು ಸಣ್ಣ ಪುಟ್ಟ ಮನಸ್ತಾಪ ಜಗಳಗಳಿಂದ ಸುಖವಾಗಿದ್ದರು, ಊರಿನಲ್ಲಿ ಹೆಚ್ಚಾಗಿ ವ್ಯವಸಾಯಗಾರರೇ ಆಗಿದ್ದರು.
ಮಾರನೇ ದಿನ ನಾಗ ಎದ್ದು ಮುಖ ತೊಳೆದುಕೊಂಡು ಬ್ಯಾಗ್ ಎತ್ತಿಕೊಂಡ ಸ್ಕೂಲಿಗೆ ಹೊರಟಿದ್ದ. ದಾರಿಯಲ್ಲಿ ಬರುತ್ತಿರುವಾಗ ಜೋರಾಗಿ ಗಲಾಟೆ ಕೇಳಿಸಿತು. ಶಬ್ದ ಬಂದ ದಿಕ್ಕಿನ ಕಡೆ ಓಡಿದ. ನೆರೆಹೊರೆಯವರಾದ ಗಂಗಮ್ಮ ಮತ್ತು ಚೌಡಮ್ಮ ಜಗಳ ತಾರಕ್ಕೇರಿತ್ತು. ಅಲ್ಲಿದ್ದ ಇತರರನ್ನು ಕೇಳಿದಾಗ ನಾಗನಿಗೆ ತಿಳಿದಿದ್ದು ಇಷ್ಟು. ಗಂಗಮ್ಮ ಜೋಳವನ್ನು ಬಿಸಿಲಲಿ ಒಣಗಿಸಲು ಮನೆ ಮುಂದೆ ಹರಡಿದ್ದಳು. ಕಾಗೆ ಓಡಿಸಲು ಒಂದು ಕೋಲು ಹಿಡಿದೂ ಕುಳಿತ್ತಿದ್ದಳು. ಮದ್ಯಾನ್ಹ ಊಟದ ಸಮಯವಾಗಿರಲು ಎದ್ದು ಊಟ ಮಾಡಲು ಮನೆ ಒಳಗೆ ಹೋದಳು. ಊಟ ಮುಗಿಸಿ ಬಂದಾಗ, ಜೋಳ ಒಂದುಕಡೆ ಕಡಿಮೆಯಾಗಿರುವ ಅನುಮಾನ ಬಂತು, ಊಟಕ್ಕೆ ಒಳಹೋಗುವ ಮುಂಚೆ ಒಂದು ಗೆರೆ ಎಳೆದು ಹೋಗಿದ್ದ ಗಂಗಮ್ಮನಿಗೆ ಜೋಳ ಗೆರೆಯಿಂದ ಒಳ ಇರುವುದು ತಿಳಿಯಿತು. ಅಷ್ಟೇ , ರೌದ್ರವಾತಾರ ತಾಳಿದ ಗಂಗಮ್ಮ ದೊಡ್ಡದನಿಯಲಿ ಬಯ್ಯ ತೊಡಗಿದಳು.
"ಯಾರೇ ನನ್ನ ಸವತಿ, ಜೋಳ ಕಳವು ಮಾಡಿದ್ದು, ನಿನ್ನ ಮನೆ ಸೇದೋಗ, ನೀನು ಎಕ್ಕುಟ್ಟೋಗ, ನಿನ್ನಮನೇಲಿ ಹೆಣ ಬೀಳ, ನಿನ್ನ ಕಣ್ಣಿಗೆ ಹಕ್ಕಿಕಾಳು ಹಾಕ" ಹೀಗೆ ತರಾವರಿ ಬಯ್ಗಳಿಂದ ತನ್ನ ಗಿಡ್ಡ ಕೈಗಳ ಹಾವ -ಭಾವದಿಂದ ಊರಿಗೆ ಕೇಳುವಂತೆ ಕಿರಚ ಹತ್ತಿದಳು. ಎಲ್ಲಾ ಮನೆಯರು ಹೊರಗೆ ಬಂದರು.
ಎಲ್ಲರ ಅನುಕಂಪ ಗಿಟ್ಟಿಸಿಕೊಳ್ಳಲು ಅಳುವಂತೆ ಮಾಡಿ "ಕಷ್ಟಪಟ್ಟ ಸೊತ್ತು ಯಾರು ಕದ್ದರೂ ಅವರ ಕೈ ಸೇದೋಗ" ಅಂದಳು . ಅವಳ ಕೈ ಹಾ ವಾ-ಭಾವವೆಲ್ಲಾ ತನ್ನಕಡೆಯೇ ಇರುವದಕಂಡು, ಇವಳಿಗೆ ತನ್ನ ಮೇಲೆ ಅನುಮಾನ ಬಂದಿರುವುದು ಎಣಿಸಿದ ಚೌಡಮ್ಮ "ಏನಲೇ ದ್ರೌಪದಿ" ಎಂದು ಅರಚಿದಳು. ಮಹಾಭಾರತದ ದ್ರೌಪದಿ ಪತ್ರಿವತೆಯಾದರೂ ಅಷ್ಟೇನೂ ಪುರಾಣದ ಜ್ಞಾನವಿಲ್ಲದ ಚೌಡಮ್ಮ ಮತ್ತು ಗಂಗಮ್ಮನಿಗೆ ದ್ರೌಪದಿ ಎಂದರೆ ಹಲವಾರು ಗಂಡದಿರ ಕೆಟ್ಟ ಹೆಂಗಸು. ಗಂಗಮ್ಮನಿಗೆ ತನ್ನನ್ನು ದ್ರೌಪದಿ ಎಂದು ಕರೆದ್ದಿದ್ದಕ್ಕೆ ಸಿಟ್ಟು ನೆತ್ತಿಗೇರಿತು, "ನಾನ್ಯಾಕೆ ದ್ರೌಪದಿ ಆಗಲಿ, ಚಿನಾಲಿ" ಎಂದು ಅಬ್ಬರಿಸಿದಳು. ಚೌಡಮ್ಮ "ನನ್ನನೇ ಚಿನಾಲಿ ಅಂತೀಯಾ" ಎಂದು ಗಂಗಮ್ಮನ ಕೂದಲಿಗೆ ಕೈಹಾಕಿದಳು. ಇಬ್ಬರೂ ಒಬ್ಬರ ಜುಟ್ಟು ಒಬ್ಬರು ಹಿಡಿದು ಎಳೆದಾಡಿಕೊಂಡರು, ಮೊರಗಳೆತ್ತಿ ಹೊಡೆದುಕೊಂಡರು. ದೂಳಲ್ಲಿ ಹೊರಳಾಡಿದರು. ಇದು ನಿಲ್ಲುವ ಲಕ್ಷಣ ಕಾಣದಿದ್ದಾಗ ಭಾವಿನ ಮನೆ ನರಸಮ್ಮ ನಾಗನಿಗೆ ಹೋಗಿ ಮೇಸ್ಟ್ರಕ್ಕನ ಕರೀ ಎಂದಳು. ನಾಗ ಮೇಸ್ಟ್ರ ಮನೆ ಹತ್ತಿರ ಓಡಿದ. ಮೇಷ್ಟ್ರಕ್ಕ ಎಂದರೆ ಮಾಸ್ತರರ ಪತ್ನಿ, ಎಲ್ಲರೂ ಅವರಿಗೆ ಗೌರವ ಕೊಡುತಿದ್ದರು, ಅವರೇ ಈ ಜಗಳ ನಿಲ್ಲಿಸಲು ಸರಿಯಾಗಿದ್ದವರು ಎಂದು ನರಸಮ್ಮ ಎಣಿಸಿದ್ದಳು. ಮಾಸ್ತರರ ಪತ್ನಿಗೆ ಮೇಸ್ತ್ರಕ್ಕ ಎಂದೂ, ಮಾಸ್ತರರ ತಾಯಿಗೆ ಮೇಸ್ಟ್ರಜ್ಜಿ ಎಂದೂ ಮಸರದಲ್ಲಿ ಕರೆಯುತಿದ್ದರು.
ಮಾಸ್ತರ ಧರ್ಮ ಪತ್ನಿ ಮನೆಯಲ್ಲಿ ಕುಳಿತು ತನ್ನ ಎರಡನೇ ಮಗನ, ಅಂಚಂದ್ರ, ರಾಜನ ಕಲ್ಪಿತ ಕತೆ ಕೇಳುತ್ತಿದ್ದರು. ಬೇರೆ ಮಕ್ಕಳೆಲ್ಲರೂ ಅದು ನಿಜವೇ ಎಂಬಂತೆ ತಲ್ಲೀನವಾಗಿ ಕೇಳುತಿದ್ದರು. ಮಗ ಎರಡು ಗುಂಡು ಕಲ್ಲುಗಳನ್ನು ಹಿಡಿದು ಒಂದನ್ನು ಅಂಚಂದ್ರ, ಇನ್ನೊಂದನ್ನು ರಾಜ ಎಂದು ಹೆಸರಿಸಿ ಸರಾಗವಾಗಿ ಕತೆಯನ್ನು ಮನಸಿನಲ್ಲಿ ಕಲ್ಪಿಸಿಕೊಂಡು ಹೇಳುತಿದ್ದಿದ್ದು ಸೊಗಸಾಗಿತ್ತು. ಎಲ್ಲರೂ ಕಥೆಯಲ್ಲಿ ಮುಳುಗಿರಿಲು "ಅಕ್ಕಾ" ಎಂಬ ನಾಗನ ಗಾಭರಿಕೊಂಡ ಧ್ವನಿ ಧ್ವನಿ ಕೇಳಿತು.
"ಏನಾಯಿತು ನಾಗ " ಎಂದು ಹೊರಗೆ ಬಂದರು, ಮಕ್ಕಳೂ ಹೊರಗೆ ಬಂದರು. ಮಾಸ್ತರರ ಪತ್ನಿ ಬರುವ ಹೊತ್ತಿಗೆ ಗಂಗಮ್ಮ ಮತ್ತು ಚೌಡಮ್ಮನ ಜಗಳ ಇನ್ನೂ ತಾರಕಕ್ಕೇರಿತ್ತು.
"ಏನಾಯಿತು"? ಎಂದರು ಮಾಸ್ತರರ ಪತ್ನಿ
ಗಂಗಮ್ಮ "ನೋಡಿ ಅಕ್ಕ ಇವಳು ಜೋಳ ಕದ್ದಿರೋದು" ಎಂದಳು.
ಮಾಸ್ತರ ಪತ್ನಿ ಏನೂ ಹೇಳುವ ಹೊತ್ತಿಗೆ ಅವರ ಮಗ ಹೇಳಿದ " ಜೋಳ ತೆಗೆದಿದ್ದು ಅವರಲ್ಲ ನಿಮ್ಮ ಮಗ ಕೇಶವ"
"ನನ್ನ ಮಗ ಕೇಶವಾನಾ? ಅವನ್ಯಾಕೆ ತೆಗೆದ" ಎಂದಳು ಗಂಗಮ್ಮ
"ಐಸ್ ಕ್ಯಾಂಡಿ ಗಾಡಿ ಬಂದಿತ್ತು, ಜೋಳ ಕೊಟ್ಟು ಐಸ್ ಕ್ಯಾಂಡಿ ತೊಗೊಂಡ"
"ಎಲಾ ಇವನ ಬರಲಿ ಮನೆಗೆ ಮಾಡ್ತಿನಿ ಅವನಿಗೆ"
ಮಾಸ್ತರರ ಪತ್ನಿ ಹೇಳಿದರು "ಏನಮ್ಮ ಜಗಳ ಮಾಡೋ ಮೊದಲು ಯೋಚನೆ ಮಾಡ್ಬೇಕಲ್ಲವಾ"
"ಹೌದಕ್ಕ ತಪ್ಪಾಯಿತು "
"ಚೌಡಮ್ಮನಿಗೆ ಹೇಳು" ಎಂದು ಮಾಸ್ತರರ ಪತ್ನಿ ಮಕ್ಕಳೊಂದಿಗೆ ಮನೆಗೆ ಬಂದರು.
ಮಸರದಲ್ಲಿ ಒಂದು ಸರ್ಕಾರಿ ಶಾಲೆ. ಒಂದನೇ ತರಗತಿಯಿಂದ ನಾಲ್ಕನೇ ತರಗತಿಯರವರೆಗೆ ಶಾಲೆ ನಡೆಯುತಿತ್ತು ಆ ಶಾಲೆಗೆ ಒಂದೊಂದು ಸಲ ಒಬ್ಬ ಮಾಸ್ತರರೂ, ಒಂದೊಂದು ಸಲ ಇಬ್ಬರು ಮಾಸ್ತರರೂ ಇರುತಿದ್ದರು. ಎರಡು ಕೊಠಡಿಗಳ ಶಾಲೆ ಆಗಿದ್ದು, ಒಂದೊಂದು ಕೊಠಡಿಯಲ್ಲಿ ಎರಡೆರೆಡು ತರಗತಿ ನಡೆಯುತಿದ್ದವು. ಮಾಸರರು ಒಬ್ಬರೇ ಇರುವ ಕಾಲದಲ್ಲಿ ಎಲ್ಲಾ ನಾಲ್ಕು ತರಗತಿಯ ಮಕ್ಕಳು ಒಂದೇ ಕೊಠಡಿಯಲ್ಲಿ ಕುಳಿತುಕೊಳ್ಳುತ್ತಿದ್ದವು.
ಆ ಶಾಲೆಯ ಮುಖ್ಯ ಆಕರ್ಷಣೆ ಉಪ್ಪಿಟ್ಟು. ಸರ್ಕಾರ ಒದಗಿಸುವ ಸಾಮಾಗ್ರಿಗಳಿಂದ ಉಪ್ಪಿಟ್ಟು ಮಾಡಲಾಗುತಿತ್ತು. ಉಪ್ಪಿಟ್ಟಿಗಿಂತಲೂ ಉಪ್ಪಿಟು ಮಾಡುವ ಅಶ್ವಥಪ್ಪನಿಗೆ ಹೆಚ್ಚು ಗೌರವ. ಸಣ್ಣಗೆ, ಉದ್ದಕ್ಕೆ ಇದ್ದ ಅಶ್ವಥಪ್ಪನನ್ನು ಎಲ್ಲರೂ ಕರೆಯುವುದು ಉಪ್ಪಿಟ್ಟು ಅಶ್ವಥಪ್ಪನೆಂದೆ, ಅಶ್ವತಪ್ಪ ಅದನ್ನು ಗೌರವವೆಂದೂ, ತನಗೆ ಸಿಕ್ಕ ಬಿರಿದೆಂದೇ ಭಾವಿಸುತಿದ್ದನು. ಉಪಿಟ್ಟನ್ನು ಅಶ್ವಥಪ್ಪ ಮಾಡಿದನೆಂದರೆ ಇಡೀ ಊರಿಗೆ ಅದರ ವಾಸನೆ ಹರಡುತ್ತಿತ್ತು, ಮಕ್ಕಳೇ ಏನು ದೊಡ್ಡವರ ಬಾಯಲ್ಲೂ ಅದು ನೀರೂರಿಸುತಿತ್ತು.
ಅಶ್ವತಪ್ಪ ಉಪ್ಪಿಟ್ಟನ್ನು ಮಾಡುವ ವಿಧಾನ ಎಲ್ಲರಿಗೂ ಆಕರ್ಷಕ. ಆತನು ಒಂದೊಂದೇ ಸಾಮಾಗ್ರಿಯನು ಪರಿಶೀಲಿಸಿ, ಒಗ್ಗರೆಣೆ ಹಾಕಿ,
ನೀರ ಕುದಿಸಿ, ರವೆ ಹಾಕಿ, ಎದ್ದುನಿಂತು ಉದ್ದವಾದ ಸೌಟನ್ನು ಹಿಡಿದು ತಿರಿವಿ ತಿರಿವಿ ಉಪ್ಪಿಟ್ಟು ಆದಮೇಲೆ ಅದನ್ನು ಒಂದು ಅಗಲವಾದ ಬಟ್ಟೆಯ ಮೇಲೆ ಹರಡಿ ಅದರಮುಂದೆ ತಣ್ಣಗಾಗುವವರೆಗೆ ಕಾವಲು ಕಾಯುತ್ತಿದ್ದ. ಮಕ್ಕಳೆಲ್ಲರೂ ಆಸೆಯಿಂದ ಉಪ್ಪಿಟ್ಟನ್ನೇ ನೋಡುತ್ತಾ ಪಾಠ ಕಲಿಯುತ್ತಿದ್ದರು. ಒಂದೊಂದುಸಲ ಅಶ್ವತಪ್ಪ ಸಣ್ಣ ಉಪ್ಪಿಟ್ಟಿನ ಉಂಡೆ ಮಾಡಿ ಆಸೆಯಿಂದ ನೋಡುತ್ತಿದ್ದ ಮಕ್ಕಳಿಗೆ ಕೊಡುವಂತೆ ಮಾಡಿ , ಅವರು ಕೈಚಾಚಿದಾಗ ತಟ್ಟನೆ ತನ್ನ ಬಾಯಲ್ಲಿ ಹಾಕಿಕೊಳ್ಳುತ್ತಿದ್ದ. ಮಕ್ಕಳಿಗೆ ನಿರಾಸೆ ಆಗುತ್ತಿತ್ತು, ಮಕ್ಕಳ ಪೆಚ್ಚುಮೋರೆ ನೋಡಿ ಜೋರಾಗಿ ನಗುತ್ತಿದ್ದ. ಕೊನೆಗೆ ಎಲ್ಲರಿಗೂ ಬಡಿಸಿ, ಸ್ವಚ್ಛಮಾಡಿ ಮನೆಗೆ ಬರುತ್ತಿದ್ದ.
ಸರ್ಕಾರ ಉಪ್ಪಿಟ್ಟಿಗೆ ನೀಡುತಿದ್ದ ಸಾಮಾಗ್ರಿಗಳನ್ನು ನಿಲ್ಲಿಸಿದ ಮೇಲೆ ಅಶ್ವತಪ್ಪನಿಗೆ ಶಾಲೆಯಲ್ಲಿ ಕೆಲಸ ಇಲ್ಲದಾಯಿತು. ಅಶ್ವಥಪ್ಪ ಉಪ್ಪಿಟ್ಟು ಮಾಡುವುದನ್ನು ನಿಲ್ಲಿಸಿದರೂ ಅವನ ಬಿರಿದು ಮಾತ್ರ ಹಾಗೆ ಉಳಿಯಿತು.
ನಾಗ ಸ್ಕೂಲಿಗೆ ಹೋಗುತ್ತಿದ್ದುದೇ ಉಪ್ಪಿಟ್ಟ್ಟಿಗೋಸ್ಕರ. ಎಷ್ಟೋ ಸಲ ಉಪ್ಪಿಟ್ಟು ತಿಂದ ಮೇಲೆ ಸ್ಕೂಲಿಂದ ತಪ್ಪಿಸಿಕೊಂಡು ಹೊರಗಡೆ ಹೋಗಿದ್ದೂ ಉಂಟು. ಮರುದಿನ ಮಾಸ್ತರರಿಂದ ಹೊಡೆಸಿಕೊಂಡಿದ್ದೂ ಉಂಟು.
ಶಾಲೆಗೆ ಹೋಗಲು ಅಷ್ಟೇನು ಇಷ್ಟವಿರದ ಸಣ್ಣೀರ ಅಲ್ಲೆ ಊರಿನ ಚಾವಡಿ ಎಂದು ಕರೆಸಿಕೊಳ್ಳುವ ಸ್ಥಳದಲ್ಲಿ ಬಂದು ಇಸ್ಪೀಟ್ ಆಟ ನೋಡುತ್ತಾ ನಿಂತ. ಸಣ್ಣೀರನಿಗೆ ತನ್ನ ಬೆನ್ನಿಗೆ ಜೋರಾಗಿ ಪೆಟ್ಟು ಬಿದ್ದಾಗಲೇ ಎಚ್ಚರ ಬಂದಿದ್ದು. ಅಲ್ಲಿಯವರೆಗೆ ತಲ್ಲೀನವಾಗಿ ಇಸ್ಪೀಟ್ ಆಟ ನೋಡುತ್ತಿದ್ದವನಿಗೆ ಬೆನ್ನಿನ ಗುದ್ದು ಶಾಲೆಯನ್ನು ನೆನಪಿಸಿತು. ಹಿಂದೆ ತಿರುಗಿದಾಗ, ಅವನ ಅಮ್ಮ ಕೋಪದಿಂದ ಏದುಸಿರು ಬಿಡುತ್ತಿದ್ದಳು.
"ಬೇವಾರ್ಸಿ ನನ್ಮಗನೇ ಇಸ್ಕೂಲ್ಗೆ ಹೋಗೋದು ಬಿಟ್ಟು ಇಲ್ಲಿ ಇಸ್ಪೀಟ್ ಆಡ್ತಾ ಇದ್ದೀಯ' ಎಂದು ಮತ್ತೆ ಬಾರಿಸಿದಳು.
"ನಾನ್ ಆಡಲಿಲ್ಲ ಅಮ್ಮ ಸುಮ್ಮನೆ ನೋಡ್ತಿದ್ದೆ ಅಷ್ಟೇ " ಎಂದು ಸಣ್ಣೀರ ಸಮಜಾಯಿಸಿ ಕೊಟ್ಟು ಪೆಟ್ಟು ಕಡಿಮೆಯಾಗಬಹುದೇ ಎಂದು ನೀರೀಕ್ಷಿಸಿದ.
ಅವನ ಬೆನ್ನಿಗೆ ಮತ್ತೆ ಗುದ್ದಿದ ರಾಮಕ್ಕ "ಈಗ ನೋಡ್ತಿ, ಆಮೇಲೆ ಕೊತ್ಕೊಂಡು ಆಡ್ತಿ" ಎಂದು ಅವನ ಕೈ ಹಿಡಿದು ದರ ದರ ಎಂದು ಸ್ಕೂಲಿನ ಹತ್ತಿರ ಎಳೆದು ತಂದಳು.
ಸ್ಕೂಲಿನ ಹತ್ತಿರ ಬಂದವಳೇ " ಮೇಸ್ಟ್ಲು" ಎಂದು ಕೂಗಿದಳು. ಶಾಲೆಗೆ ಇರುವ ಒಂದೇ ಕೊಠಡಿಯಲ್ಲಿ ಒಂದರಿಂದ ನಾಲ್ಕನೇ ತರಗತಿಯವರಿಗೆ ಪಾಠ ಮಾಡುವುದು ಹೇಗೆ ಎಂದು ಯೋಚಿಸುತಿದ್ದ ಮಾಸ್ತರ ಮೂರ್ತಿ ಅವರಿಗೆ, ಏನೋ ಅನಾಹುತವಾಗಿದೆ ಎಂದು ಇದ್ದುಕೊಂಡು ಹೊರಗಡೆ ಓಡಿ ಬಂದರು.
"ನೋಡಿ ಮೇಷ್ಟ್ರೇ ಈ ನನ್ಮಗನಿಗೆ ಸರಿಯಾಗಿ ಬೆಂಡೆತ್ತಿ, ಇಸ್ಕೂಲಿಗೆ ಬರದಂದಗೆ ಇಸ್ಪೀಟ್ ಆಟ ನೋಡ್ತಾ ಇದಾನೆ"
"ಆಯಿತಮ್ಮ, ಏ ಸಣ್ಣೀರ ಒಳ್ಗೆ ಬಾ" ಎಂದು ಮೇಸ್ಟ್ರು ಶಾಲೆಯ ಒಳಗೆ ಹೋದರು. ಸಣ್ಣೀರ ಅವರ ಹಿಂದೇನೆ ಹೋಗಿ ನಾಲಕ್ಕನೆ ತರಗತಿ ಗುಂಪಿನಲ್ಲಿ ಕುಳಿತುಕೊಂಡ.
ಮಸರ ಗ್ರಾಮ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ ಬರುತ್ತದೆ. ಅದು ಆಂಧ್ರ ಗಡಿಬಾಗಕ್ಕೆ ಹತ್ತಿರ ಇರುವುದರಿಂದ ಜನ ಕನ್ನಡ ಮಿಶ್ರಿತ ತೆಲುಗು ಮಾತನಾಡುತ್ತಾರೆ. ಎಲ್ಲರಿಗೂ ಕನ್ನಡ ಬರುತ್ತದೆ, ಆದರೆ ಅದು ಶಾಲೆಗೆ ಹೋದಮೇಲೆ ಮಾತ್ರ. ಮಕ್ಕಳಿಗೆ ಶಾಲೆಗೆ ಹೋಗುವವರೆಗೂ ತೆಲುಗು ಭಾಷೆ ಮಾತ್ರ ಮಾತನಾಡಲು ಬರುತ್ತದೆ. ತೆಲುಗು ಮಾತನಾಡಲು ಬಂದರೂ ಊರಿನ ಜನರಿಗೆ ತೆಲುಗು ಓದಲು, ಬರೆಯಲು ಬರುವುದಿಲ್ಲ. ಕನ್ನಡ ವಾರ್ತೆ, ತೆಲುಗು ಹಾಡುಗಳು ರೇಡಿಯೋದಲ್ಲಿ ಕೇಳುತ್ತಾರೆ, ಟಿವಿ ಯಲ್ಲಿ ಎರಡೂ ಭಾಷೆಯ ಸಿನಿಮಾ ನೋಡುತ್ತಾರೆ. ಆಂಧ್ರದ ಹಿಂದೂಪುರ ಹತ್ತಿರದಲ್ಲೇ ಇರುವುದರಿಂದ, ಬಟ್ಟೆ ಬರೆ, ಆಸ್ಪತ್ರೆ, ಮನೆ ಸಾಮಾನಿಗೆ ಅಲ್ಲಿಗೆ ಹೋಗುತ್ತಾರೆ. ತಾವು ಬೆಳೆದ ಮೆಣಸಿನಕಾಯಿ, ಕಡಲೇಕಾಯಿ, ಜೋಳ ಮುಂತಾದುವು ಹಿಂದೂಪುರದ ಮಂಡಿಗೇ ಹೋಗುತ್ತವೆ.
ಅಲ್ಲಿಗೆ ಮಾಸ್ತರರಾಗಿ ಹೊಸದಾಗಿ ಬಂದ ಮೂರ್ತಿ ಅವರಿಗೆ ಮಾತ್ರ ಆಗತಾನೆ ಶಾಲೆಗೆ ಸೇರಿದ ಮಕ್ಕಳು ಏನು ಹೇಳುತ್ತಾರೆ ಎಂದು ತಿಳಿಯುತ್ತಿರಲಿಲ್ಲ. ಕರ್ನಾಟಕದ ದಾವಣಗೆರೆಯಿಂದ ಬಂದ ಮೂರ್ತಿ ಅವರಿಗೆ ತೆಲುಗು ಅರ್ಥವಾಗುತ್ತಿಲ್ಲವಾದ್ದರಿಂದ ಅಲ್ಲಿನ ಮಕ್ಕಳಿಗೆ ಕನ್ನಡ ಅರ್ಥವಾಗುತ್ತಿಲ್ಲವಾದ್ದರಿಂದ ತುಂಬಾ ಗೊಂದಲವಾಗುತ್ತಿತ್ತು.
"ಹಸುವಿನ ಹಾಲು ಹೇಗಿರುತ್ತೋ" ಎಂದು ಮಕ್ಕಳನ್ನು ಕೇಳಿದರೆ. "ತೆಲ್ಲಗೆ ಇರುತ್ತೆ ಸಾ" ತೆಲ್ಲ ಅಂದರೆ ತೆಲುಗಿನಲ್ಲಿ ಬಿಳಿ. ಮೂರ್ತಿ ಮಾಸ್ತರರಿಗೆ, ಮಕ್ಕಳಿಗೆ ಬಣ್ಣಗಳು, ಗಿಡ ಗಂಟೆ, ಸುತ್ತ ಪ್ರಪಂಚದ ಸಾಮಾನ್ಯ ವಸ್ತುಗಳ ಹೆಸರನ್ನೂ ಕನ್ನಡದಲ್ಲಿ ಹೇಳಿಕೊಡಬೇಕು. ಇದೊಂತರ ಆಗತಾನೆ ಮಾತುಬರುತ್ತಿರುವ ಮಕ್ಕಳಿಗೆ ಹೇಳಿಕೊಡುವಂತೆ. ಇಂತಪ್ಪ ಮಾಸ್ತರರು ಕೊನೆಗೆ ತಾವೇ ತೆಲುಗು ಕಲಿತುಕೊಂಡರು, ಇದರಿಂದ ಅವರಿಗೆ ಪಾಠ ಮಾಡಲು ಸ್ವಲ್ಪ ಸುಲಭವಾಯಿತು.
ನಾಗನಿಗೆ ಹೇಳಿದ ಯಾವ ವಿಷಯವೂ ತಲೆಗೆ ಹೋಗುತ್ತಿರಲಿಲ್ಲ. ಮೇಸ್ಟ್ರು ಮೂರ್ತಿಯವರು ಅವನಿಗೆ ಬೈದೂ ಹೊಡೆದು ನೋಡಿದರು. ಕೊನೆಗೆ ಏನೂ ಮಾಡಲಾಗದೆ ಕೈಚೆಲ್ಲಿ ಬಿಟ್ಟರು. ನಾಗ ಮಾತ್ರ ಅಮ್ಮನಿಗೆ ಹೆದರಿ ಸ್ಕೂಲಿಗೆ ಹೋಗಿ ಕುಳಿತಿರುತ್ತಿದ್ದ.
ಹೀಗಿರುವಾಗ ಒಂದು ದಿನ, ಮಕ್ಕಳಿಗೆ ಅಂಪಟ್ಟಿ (ಲಸಿಕೆ) ಹಾಕುವವರು ಬರುತ್ತಾರೆ ಎಂದು ಹೇಳಿದ ಮೇಸ್ಟ್ರು, ಯಾರೂ ಸ್ಕೂಲಿಗೆ ತಪ್ಪಿಸಿಕೊಳ್ಳುವ ಹಾಗೆ ಇಲ್ಲ, ಎಲ್ಲರೂ ತಪ್ಪದೇ ಬರಬೇಕು ಎಂದು ಹೇಳಿ, ಊರಿನ ಜನಕ್ಕೆಲ್ಲಾ ಮಕ್ಕಳ ಶಾಲೆ ತಪ್ಪಿಸಬೇಡಿ ಎಂದು ಹೇಳಿದರು. ನಾಗ ತನ್ನ ಕೆಲ ಸ್ನೇಹಿತರೊಡನೆ ಸೇರಿಕೊಂಡು ಸಮಾಲೋಚಿಸಿದ, ಅಂಪಟ್ಟಿ ಎಂದರೆ ಇಂಜೆಕ್ಷನ್, ನೋವು, ನಾಳೆ ಸ್ಕೂಲಿಗೆ ತಪ್ಪಿಸಿಕಳ್ಳೊಣ ಎಂದು ಮಾತನಾಡಿಕೊಂಡರು. ಬೆಳಿಗ್ಗೆ ಮನೆಯಲ್ಲಿ ಶಾಲೆಗೆ ಹೋಗುತ್ತೇವೆ ಎಂದು ಹೇಳಿ, ಕೆರೆಯಲ್ಲಿ ಹೋಗಿ ಈಜಾಡಿಕೊಂಡು ಇದ್ದು ಸಂಜೆ ಮನೆಗೆ ಬಂದರು. ಆದರೆ ಆದಿನ ಲಸಿಕೆ ಹಾಕಲು ಯಾರೂ ಬಂದಿರಲಿಲ್ಲ, ಮುಂದಿನ ವಾರ ಬರುತ್ತಾರೆ ಎಂದು ಮೇಸ್ಟ್ರು ಹೇಳಿದರು ಎಂದು ಸಹಪಾಠಿಗಳು ಹೇಳಿದರು. ಮುಂದಿನ ವಾರ ಮತ್ತೆ ಶಾಲೆ ತಪ್ಪಿಸಿಕೊಳ್ಳಬೇಕಲ್ಲಎಂದುಕೊಂಡ ನಾಗ. ಮರುದಿನ ಬೆಳಿಗ್ಗೆ ಶಾಲೆಗೆ ಹೋಗಿ ಕುಳಿತ. ಮೇಸ್ಟ್ರು ಹಿಂದಿನ ದಿನ ಶಾಲೆಗೆ ತಪ್ಪಿಸಿಕೊಂಡವರಿಗೆ ಎರಡೆರಡು ಲಾತ ಕೊಟ್ಟು, ಬಕಾಸುರನ ವದೆ ಕಥೆ ಹೇಳುತ್ತಿದ್ದರು. ಕಥೆ ಮುಗಿಯುವ ಹೊತ್ತಿಗೆ ಬಿಳಿ ಉಡುಗೆ ತೊಟ್ಟ ಇಬ್ಬರು ಶಾಲೆಯ ಬಾಗಿಲಲ್ಲಿ ಪ್ರತ್ಯಕ್ಷವಾದರು, ಅವರ ವಸ್ತ್ರ, ಅವರ ಕೈಯಲ್ಲಿನ ಪೆಟ್ಟಿಗೆ ನೋಡಿ ಮಕ್ಕಳೆಲ್ಲಾ ನಡಿ ಗೆ ಹೋದರು. ಅಂಪಟ್ಟಿ ಹಾಕುವವರು. ಮೇಸ್ಟ್ರು ಇಲ್ಲ್ಲೇ ಇದಾರೆ, ಹೊರಗಡೆ ಓಡುವಂತಿಲ್ಲ, ಆದರೂ ಒಂದು ಕೈ ನೋಡೋಣ ಎಂದು ಕೊಂಡು, ಎದ್ದುನಿಂತು ತೋರುಬೆರಳನ್ನು ಮಡಚಿ ನಿಂತು ಸಾ ಅಂದ. ಮೇಸ್ಟ್ರು ಮೂರ್ತಿ "ನಿನ್ನ ನಾಟಕ ಎಲ್ಲಾ ಗೊತ್ತು, ಕುಳಿತುಕೋ ಎಂದರು. ವಿದಿವಲ್ಲದೆ ನಾಗ ಅಂಪಟ್ಟಿ ಹಾಕಿಸಿಕೊಂಡು ನೋವಿನಿಂದ ಕುಯ್ಯಿ ಎಂದ. ಎಷ್ಟೇ ನೋವಾದರೂ, ಅಂಪಟ್ಟಿ ಹಾಕಿ ಅವರು ಕೊಟ್ಟ ಡಾ. ರಾಜಕುಮಾರ್ ಚಿತ್ರ ಎಲ್ಲಾ ನೋವನ್ನು ಒಮ್ಮೆಗೆ ಮರೆಸಿಬಿಟ್ಟಿತು. ಮಕ್ಕಳೆಲ್ಲ ನೋವು ಮರೆತು ತಮಗೆ ಸಿಕ್ಕ ಚಿತ್ರಗಳನ್ನು ನೋಡುತ್ತಾ' ನನಗೆ ರಾಜುಕುಮಾರ್, ನನಗೆ ವಿಷುವರ್ಧನ್ ಎಂದು ಎಲ್ಲರಿಗೂ ತೋರಿಸಿಕೊಂಡು ನಲಿದರು. ಮೇಸ್ಟ್ರು ಲಸಿಕೆ ಹಾಕಲು ಮುಂದಿನವಾರ ಬರುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಗೆದ್ದರು.
ಇಂತಿರುವಾಗ ಶಾಲೆಗೆ ಮೇಡಂ ಒಬ್ಬರು ಬಂದು ಸೇರಿಕೊಂಡರು. ಚಿಕ್ಕವಯಸ್ಸಿನ ಮೇಡಂ ಅವರು ಬೆಳ್ಳಗಿನ ದುಂಡುಮುಖ, ಸುಂದರ ಮಾತು, ಹಾಡು ಹೇಳುವ ಪರಿ ಮುಂತಾದವು ಮಕ್ಕಳಿಗೆ ತುಂಬಾ ಇಷ್ಟವಾಗಿಬಿಟ್ಟಿತು. ನಾಗನಿಗಂತೋ ಮೇಡಂ ಅವರನ್ನು ನೋಡಿ ಏನೂ ಒಂತರ ಖುಶಿಯಾಯಿತು. ಶಾಲೆಗೆ ಬಂದು ಅವರನ್ನೇ ನೋಡುತ್ತಾ ಕುಳಿತು ಬಿಟ್ಟಿರುತ್ತಿದ್ದ. ಮನೆಗೆ ಬಂದರೆ ಅವರದೇ ಮಾತು. ಅಮ್ಮನಿಗೆ ಮೇಡಂ ಬಗ್ಗೆ ಎಷ್ಟು ಹೇಳಿದರೂ ಸಾಲದು. ಮೇಡಂ ಹತ್ತಿರ ಎಷ್ಟೊಂದು ಸೀರೆಗಳಿವೆ,ದಿನಾ ಒಂದು ಹೊಸ ಸೀರೆ ಉಡುತ್ತಾರೆ, ನಿನ್ನ ತರ ಎರಡೇ ಸೀರೆ ಅಲ್ಲ ಎಂದು ಅಮ್ಮನಿಗೆ ಹೇಳಿ ಅವರಲ್ಲಿ ಆಸೆ ಹುಟ್ಟಿಸಿದ, ಹೂಂ ನಿಮಪ್ಪನಿಗೆ ಹೇಳು ನನಗೆ ಜಾಸ್ತಿ ಕೊಡಿಸು ಅಂತ ಎಂದು ಮುನಿಸು ತೋರಿದಳು.
ಮೇಡಂ ಊರಿಗೇ ಬಂದು, ಒಂದು ಬಾಡಿಗೆ ಮನೆ ಹುಡುಕಿಕೊಂಡು ಉಳಿದುಕೊಂಡರು. ನಾಗ ಮತ್ತು ಆವನ ಸ್ನೇಹಿತರು ಮೇಡಂ ಸಹಾಯಕ್ಕೆ ನಿಂತರು, ಮೇಡಂ ಮನೆಗೆ ನೀರು ತರುವುದು, ಕಸ ಗುಡಿಸುವುದು, ತರಕಾರಿ ತರುವುದು ಹೀಗೆ ನಾನಾ ತರದ ಕೆಲಸ ಮಾಡುತ್ತಾ ಮೇಡಂನ ಪ್ರಿಯ ಶಿಷ್ಯರಾದರು. ಮೇಡಂ ಬಂದಮೇಲೆ ನಾಗನ ತಲೆಗೆ ಶಾಲಾಪಾಠ ಚನ್ನಾಗಿ ಹತ್ತತೊಡಗಿತು. ಕನ್ನಡ, ಸಮಾಜ, ಗಣಿತ, ವಿಜ್ಞಾನ ಎಲ್ಲವೂ ಸುಲಭವಾಗತೊಡಗಿದವು, ಮೇಡಂ ಸ್ಕೂಲಿನಲ್ಲಿ ಅಲ್ಲದೆ ಸಂಜೆ ಮನೆಯಲ್ಲೂ ಪಾಠ ಹೇಳಿಕೊಡುತಿದ್ದರು. ನಾಗ ಮತ್ತು ಅವನ ಕೆಲ ಸ್ನೇಹಿತರು ಮೇಡಂ ಮನೆಯಲ್ಲಿ ರಾತ್ರಿ ಮಲಗಿ ಮನೆಗಗೆ ಕಾವಲುಗಾರರೂ ಆದರು.
ಇದ್ದಕಿದ್ದ ಹಾಗೆಯೇ ನಾಗ ಶಾಲೆಯ ಎಲ್ಲ ವಿಷಯಗಳಲ್ಲೂ ಮೊದಲಿಗನಾಗಿಬಿಟ್ಟ. ಊರಿನ ಶಾನುಭೋಗರ ಮಗ ರಮೇಶನಿಗಿಂದ ಹೆಚ್ಚು ಅಂಕ ತೆಗದುಕೊಳ್ಳತೊಡಗಿದ. ಶಾಲೆ ತುಂಬಾ ಇಷ್ಟವಾಗತೊಡಗಿತು. ಮನೆಗೆ ಬಂದು "ಕಾದಿರುವಳು ಶಬರಿ ರಾಮ ಬರುವನೆಂದು", ಧರಣಿ ಮಂಡಲ ಮಧ್ಯದೊಳಗೆ; ಎಂದು ರಾಗವಾಗಿ ಹಾಡುತ್ತಿದ್ದರೆ, ಅವನ ಅಮ್ಮ ಮಗನನ್ನೇ ನೋಡುತ್ತಾ ಕುಳಿತುಬಿಡುತ್ತಿದ್ದಳು.
ಹೀಗೆ ಕಾಲ ತುಂಬಾ ಸಂತೋಷಕರವಾಗಿ ಸಾಗುತ್ತಿರಲು, ನಾಗನ ಬದುಕಿನಲ್ಲಿ ಬರಸಿಡಿಲು ಬಡಿಯಿತು. ಊರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಪ್ಪನ ಬಳಿ ಕೆಲಸಮಾಡುತ್ತಿದ್ದ ನಾಗನ ಅಪ್ಪ ಸಿದ್ದ ಮರದಿಂದ ಬಿದ್ದು ತೀರಿಕೊಂಡ. ಊರಿಗೆ ಊರೇ ಅಯ್ಯೋ ಅಂತು. ಕೆಲದಿನಗಳಾದಮೇಲೆ ರಾಮಪ್ಪ ನಾಗನ ಮನೆಗೆ ಬಂದು ಸಿದ್ದ ಮಾಡಿದ್ದ ಸಾಲ ತೀರಿಸಲು ಹಾಗು ತನ್ನ ಹೊಲದಲ್ಲಿ ಕೆಲಸ ಮಾಡಲು ನಾಗನನ್ನು ಕಲಿಸಬೇಕು ಎಂದು ತಾಕೀತು ಮಾಡಿ ಹೋದರು. ಮನೆ ನಡೆಯಬೇಕಾದರೆ ಅದೇ ಗತಿ ಅಂದುಕೊಂಡ ನಾಗನ ಅಮ್ಮ, ನಾಗನಿಗೆ ಪರಿ ಪರಿಯಾಗಿ ಹೇಳಿ ಒಪ್ಪಿಸಿದಳು. ತನಗೆ ಶಾಲೆ ಎಷ್ಟು ಇಷ್ಟವೆಂದು ಹೇಳಿದರೂ" ನಮ್ಮ ಮನೆಗಳಲ್ಲಿ ಯಾರೂ ಓದಿಕೊಂಡಿದ್ದಾರೆ, ದೊಡ್ಡ ಓದು ಓದಿಸಲು ನನಗೆ ತಾಕ್ಕತ್ತು ಎಲ್ಲಿದೆ ಎಂದು ಹೇಳಿ, ನೀನು ಕೆಲಸಕ್ಕೆ ಹೋಗುವುದಿಲ್ಲ ಎಂದರೆ ನಾವು ಉಪವಾಸವೇ ಗತಿ ಎಂದು ಕಣ್ಣೇರು ಹಾಕಿದಳು.
ಮರುದಿನ ಬೆಳಿಗ್ಗೆ ನಾಗ ಶಾಲೆಯನ್ನು ಹೊರಗಡೆಯಿಂದ ನೋಡುತ್ತಾ, ಕಣ್ಣೀರು ತುಂಬಿಕೊಂಡು ರಾಮ್ಮಪ್ಪನ ಹೊಲದಕಡೆ ಹೊರಟ.
ರಚನೆ: ಎಂ.ವಿ. ಶಶಿಭೂಷಣ ರಾಜು
ಎಂ.ವಿ. ಶಶಿಭೂಷಣ ರಾಜು
ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.
ಕೃತಿಗಳು: ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,
More About Author