ಮಹಾತ್ಮಾ ಗಾಂಧೀಜಿಯವರು ಹಿಂದೂ - ಮುಸ್ಲಿಮ್ ಐಕ್ಯತೆಯನ್ನು ಬೋಧಿಸಿದ್ದರೆ ಅದನ್ನು ಕಾರ್ಯತಃ ಆಚರಣೆಗೆ ತಂದವನು ಕಾಡ ಮೇಸ್ತ್ರಿ ಅವನದು ವಿಚಿತ್ರ ಕಥೆ.
ಹುಟ್ಟಿನಿಂದವನು ಗಾಣಿಗ, ತನ್ನ ಒಂಭತ್ತು ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ. ತಾಯಿ ಪುನಃ ಮದುವೆಯಾದಳು. ಹತ್ತನೆಯ ವರ್ಷದ ತನಕವೂ ಹುಡುಗ ಹೇಗೋ ಆ ಮನೆಯಲ್ಲಿ ಬೆಳೆದ. ಚಿಕ್ಕಪ್ಪನ ಮನೆಯಲ್ಲಿ ಹುಡುಗನಿಗೆ ಸರಿಯಾಗಲಿಲ್ಲ. ಒಂದು ದಿನ ಹೇಳದೆ ಓಡಿಹೋದ. ಎರಡನೆ ಮದುವೆಯಿಂದ ಮಕ್ಕಳನ್ನು ಪಡೆದಿದ್ದ ತಾಯಿಯು ಅವನನ್ನು ಹುಡುಕುವ ಪ್ರಯತ್ನಕ್ಕೆ ಕೈಹಚ್ಚಲಿಲ್ಲ. ಚಿಕ್ಕ ತಂದೆಗೇನು ಮತ್ತೆ ಮನೆಯಿಂದ ಮಾರಿ ತೊಲಗಿದುದೇ ಸಾಕೆಂದು ಸುಮ್ಮನಿದ್ದುಬಿಟ್ಟ.
ಚಿಕ್ಕ ಹುಡುಗ, ಇನ್ನೂ ಹತ್ತೇ ವರ್ಷ ಪ್ರಾಯ. ವಿಶಾಲ ವಿಶ್ವದಲ್ಲಿ ಒಬ್ಬೊಂಟಿಗನಾಗಿ ಏನು ಮಾಡಬಲ್ಲ - ಎಂದು ಆಶ್ಚರ್ಯಪಡುವ ಕಾರಣವಿಲ್ಲ. ಕಷ್ಟದ ಮಡಿಲಲ್ಲಿ ಬೆಳೆದು ಕೆಲಸದ ಮೊಲೆಹಾಲುಂಡ ಕಾಡನಿಗೆ ಯಾವ ಬೆದರಿಕೆಯೂ ಇರಲಿಲ್ಲ. ಎಲ್ಲಾದರೂ ಚಿಕ್ಕಪ್ಪನ ಮನೆಯಲ್ಲಿ ಮಾಡುತ್ತಿದ್ದ ಕೆಲಸದ ಅರ್ಧ ಮಾಡಿದರೆ ಧಾರಾಳವಾಗಿ ಊಟ ದೊರೆಯುತ್ತಿತ್ತು, ಹೊಟ್ಟೆ ತುಂಬುವಷ್ಟು ಅನ್ನ ದೊರೆತರೆ ಸಾಕು - ಅದಕ್ಕಿಂತ ಹೆಚ್ಚಿನ ಆಸೆಯೇ ಅವನಿಗೆ ಇರಲಿಲ್ಲ. ಒಂದೆರಡು ತಿಂಗಳು ಹೀಗೆ ಅಲ್ಲಲ್ಲಿ ಸುತ್ತಾಡಿ ಅವರಿವರ ಮನೆಯಲ್ಲಿ ಕೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ. ಕೊನೆಗೊಂದು ದಿನ ಒಂದು ಕಾಫಿತೋಟಕ್ಕೆ ಹೋದ. ಸಾಲ-ಗೀಲ ಏನನ್ನೂ ಕೇಳದೆ ಹಿಡಿ ಕೂಳಿಗಾಗಿ ದುಡಿಯುವ ಆಳನ್ನು ಯಾರು ಬೇಡವೆನ್ನುವರು? ಮೇಸ್ತಿ ಜಿನ್‌ರಾಜು ಅವನನ್ನು ತನ್ನ ಪಟ್ಟಿಗೆ ಸೇರಿಸಿಕೊಂಡು ಮರುದಿನದಿಂದ ಕಾಫಿ ತೋಟದ ಕೆಲಸಕ್ಕೆ ಸುರುಮಾಡಿಸಿದ. ಹೀಗೆ ಮತ್ತೆರಡು ತಿಂಗಳುಗಳು ಕಳೆದವು.
ಈ ಮಧ್ಯೆ ಆ ತೋಟದ ಯಜಮಾನ ಒಂದು ಜೊತೆ ಆಲ್‌ಶೇಷಿಯನ್ ನಾಯಿಗಳನ್ನು ಕೊಂಡು ತಂದ. ಅವುಗಳ ಲಾಲನೆ ಪಾಲನೆಗೆ ಒಬ್ಬ ಚುರುಕಾದ ಹುಡುಗ ಬೇಕಾಗಿತ್ತು. ದೊರೆ (ಕಾಫಿ ತೋಟಗಳಲ್ಲಿ ಯುರೋಪಿಯನ್ ಪ್ಲಾಂಟರ್‌ಗಳನ್ನು ದೊರೆ ಎನ್ನುತ್ತಾರೆ) ಜಿನ್‌ರಾಜು ಮೇಸ್ತ್ರಿಯೊಡನೆ ಒಬ್ಬ ಯೋಗ್ಯ ಹುಡುಗನನ್ನು ಕರೆಸಲು ಹೇಳಿದನು. ಅದೇ ಆಗೆರಡು ತಿಂಗಳ ಹಿಂದೆ ಬಂದಿದ್ದ ಕಾಡನ ಚಟುವಟಿಕೆಗೆ ಮೆಚ್ಚಿದ ಮೇಸ್ತ್ರಿ ಅಲ್ಲೇ ಕೆಲಸ ಮಾಡುತ್ತಿದ್ದ ಅವನನ್ನು ದೊರೆಗೆ ತೋರಿದ. ದೊರೆಗೂ ಅವನನ್ನು ನೋಡಿ ಮೆಚ್ಚಿಗೆಯಾಯ್ತು, ಕಾಡ ಮರುದಿನದಿಂದ ದೊರೆ ಬಂಗಲೆಯಲ್ಲಿ ನಾಯಿಗಳನ್ನು ಸಾಕುವ ಬಾಯ್' ಆದ. ಇದು ಕಾಡನ ಜೀವನದಲ್ಲಿ ಪ್ರಥಮಾಂಕ. ದೊರೆಗೆ ನಾಯಿಗಳೆಂದರೆ ಬಲು ಪ್ರೀತಿ. ಮೂರು ಹೊತ್ತೂ ಅವುಗಳನ್ನು ನೋಡಬೇಕು. ಅವುಗಳ ದೆಸೆಯಿಂದ ಅವುಗಳ ಪಾಲಕ ಕಾಡನ ಮೇಲೂ ದೊರೆಯ ದೃಷ್ಟಿ ಆಗಾಗ ಬೀಳುತ್ತಿತ್ತು. ಅವನ ಚಟುವಟಿಕೆ, ಕಾರ್ಯತತ್ಪರತೆ, ವಿನಯ-ಇವುಗಳು ದೊರೆಯ ಪ್ರೀತಿಯನ್ನವನಿಗೆ ಗಳಿಸಿ ಕೊಡಲು ಸಹಾಯಕವಾದವು. ಆ ಪ್ರೀತಿಯ ಪರಿಣಾಮವಾಗಿ, ಕಾಡ ನಾಯಿಗಳ ಕೆಲಸದಿಂದ ವಿಮುಕ್ತನಾಗಿ 'ದೊರೆಯ ಸ್ವಂತ ಬಾಯ್' ಆಗಿ ನೇಮಿಸಲ್ಪಟ್ಟ, ದೊರೆಯ ಪ್ರೀತಿ ಇಷ್ಟಕ್ಕೇ ಅಂತ್ಯವಾಗದೆ ಅವನನ್ನು ಕ್ರೈಸ್ತ ಧರ್ಮಕ್ಕೂ ಮತಾಂತರ ಹೊಂದುವಂತೆ ಮಾಡಿತು.
ಎಷ್ಟಾದರೂ ಹನ್ನೊಂದು ವರ್ಷದ ಪ್ರಾಯದ ಹುಡುಗ. ಜಾತಿ-ನೀತಿಗಳ ವಿಷಯದ ತಿಳಿವಳಿಕೆ ಇಲ್ಲದೆ, ಹುಟ್ಟುವುದು ಕೆಲಸ ಮಾಡಲು – ಹೊಟ್ಟೆ ಹೊರೆಯಲು ಎಂಬ ಒಂದೇ ಒಂದು ಭಾವನೆಯಿಂದ ಬೆಳೆದ ಮಗು. ಅವನಿಗೇನು ಗೊತ್ತು - ತನ್ನ ಜಾತಿಯನ್ನು ತ್ಯಜಿಸಿ ವಿಧರ್ಮಿಯಾಗಬಾರದೆಂದು? ಯಾವ ಜಾತಿಯಾದರೇನು? ಯಾವ ಮತವಾದರೇನು? ಹೊಟ್ಟೆ ತುಂಬ ಕೂಳು- ಮೈತುಂಬ ಬಟ್ಟೆ , ಜೊತೆಗೆ ತಿಂಗಳಿಗೆ ಎರಡು ರೂಪಾಯಿ ಸಂಬಳ ಬೇರೆ. ಇಷ್ಟೆಲ್ಲ ಸಿಕ್ಕುವಾಗ ಜಾತಿ ನೀತಿ ಎಂದೇಕೆ ಸುಮ್ಮನೆ ಪೇಚಾಡಬೇಕು? ಅದರಲ್ಲೂ ದೊರೆ ತನ್ನನ್ನು ತಮ್ಮ ಜಾತಿಗೆ ಸೇರಿಕೋ ಎನ್ನುವಾಗ ಬಡ ಕಾಡನಿಗೆ ಸಂತೋಷವಾಯಿತೆಂದರೆ ಆಶ್ಚರ್ಯವೇನು? ದೊರೆಯ ಜಾತಿಗೆ ಸೇರುವುದೇನು ಕಡಿಮೆ ಭಾಗ್ಯವೆ? ಕಾಡ ಕ್ರಿಶ್ಚಿಯನ್ ಆಗಿ ಜೋಸೆಫ್ ಕಾಡ' ಆದ. ದೊರೆಯ ಸ್ವಂತ ನೌಕರನಾದುದರಿಂದ ಕಾಡನಿಗೆ ಬಂದ ಭಾಗ್ಯ ಅಷ್ಟೇ ಅಲ್ಲ, ಕನ್ನಡ ಬಾರದಿದ್ದ ದೊರೆಯೊಡನೆ ಮಾತಾಡಿ ಹರಕುಮುರುಕಾಗಿ ಇಂಗ್ಲಿಷ್ ಮಾತಾಡಲೂ ಅಭ್ಯಾಸವಾಯ್ತು.
ಈಗ ಕಾಡ ಒಂದು ವರ್ಷದ ಹಿಂದಿನ ಕೂಳಿಲ್ಲದ ಕಂಗೆಟ್ಟ ಕಾಡನಲ್ಲ. ಚೂಟಿಯಾದ, ಶುಚಿಯಾದ ಅವನನ್ನು ಅವನ ಸ್ವಂತ ತಾಯಿ ನೋಡಿದ್ದರೂ ಗುರುತಿಸುವಂತಿರಲಿಲ್ಲ, ಹೀಗೆ ಕಾಡ ತನ್ನ ಬಾಲ್ಯದ ಏಳೆಂಟು ವರ್ಷಗಳನ್ನು ಹೆಚ್ಚಿನ ಕಷ್ಟಗಳೊಂದೂ ಇಲ್ಲದೆ ಕಳೆದ. ಇಷ್ಟರಲ್ಲಿ ಆರ್ಥಿಕ ಅಡಚಣೆಯಿಂದ ಕಂಗೆಟ್ಟಿದ್ದ ಅವನ ದೊರೆ ತೋಟವನ್ನು ಮಾರಿ ವಿಲಾಯಿತಿಗೆ ಹೊರಟುಹೋದನು. ಆದರೆ ಹೋಗುವ ಮೊದಲು ಹೊಸ... ಯಜಮಾನನಿಗೆ ಕಾಡನ ವಿಷಯ ಶಿಫಾರಸು ಮಾಡದೆ ಇರಲಿಲ್ಲ. ತೋಟವನ್ನು ಹೊಸದಾಗಿ ಕೊಂಡ ಪ್ಲಾಂಟರ್ ಗೆ ಆ ತೋಟವಲ್ಲದೆ ಬೇರೆ ನಾಲ್ಕಾರು ತೋಟಗಳಿದ್ದವು. ಅದರಿಂದ ಆತ ಸ್ವಂತವಾಗಿ ಅಲ್ಲಿ ಬಂದಿರದೆ ಒಬ್ಬ ಮೇನೇಜರರನ್ನು ನಿಯಮಿಸಿದ. ಹಿಂದಿನ ದೊರೆಯ ಶಿಫಾರಸಿನ ಪರವಾಗಿ ಕಾಡನಿಗೆ ಮೇನೇಜರರ ಕುದುರೆಯ ಯೋಗಕ್ಷೇಮದ ಕೆಲಸ ಸಿಕ್ಕಿತು. ಕುದುರೆ ಚಾಕರಿಯಲ್ಲದೆ ತೋಟದಿಂದ ಮೂರು ಮೈಲಿ ದೂರವಿದ್ದ ಊರಿಗೆ ದಿನಕ್ಕೆರಡು ಸಾರಿ ಹೋಗಿ ಟಪ್ಪಾಲು ತರುವ ಕೆಲಸವನ್ನೂ ಅವನೇ. ಮಾಡುತ್ತಿದ್ದನು.
ಕಾಡನಿದ್ದ ತೋಟದಿಂದ ಊರಿಗೆ ಮೂರು ಮೈಲೆಂದು ಹೇಳಿದೆನಲ್ಲ - ಹೆಚ್ಚಿನ ಕೆಲಸವಿಲ್ಲದ ಮೇನೇಜರರ ಕುದುರೆಗೆ ವ್ಯಾಯಾಮವಾಗಲೆಂದು ಕಾಡ ಟಪ್ಪಾಲಿಗೆ ಹೋಗುವಾಗ ಕೆಲವು ಸಾರಿ ಕುದುರೆಯ ಮೇಲೆ ಹೋಗುವಂತೆ ಹೇಳುತ್ತಿದ್ದರು. ಅವರು ಊರಿಗೆ ಹೋಗುವ ದಾರಿಯಲ್ಲೊಂದು ಮಾಪಿಳ್ಳೆ ಚಿಲ್ಲರೆ ಅಂಗಡಿ, ಅಂಗಡಿಯ ಯಜಮಾನ ಮುಮ್ಮುಕಾಕ ವ್ಯಾಪಾರವಲ್ಲದೆ, ಆಳು ಕಟ್ಟುವ ಮೇಸ್ತ್ರಿ ಕೆಲಸವನ್ನೂ ಮಾಡುತ್ತಿದ್ದರು. ಅದರಿಂದ ಕೆಲವು ಸಮಯ ಅವನು ಆಳು ತರುವುದಕ್ಕಾಗಿ ಕನ್ನಡ ಜಿಲ್ಲೆಗೆ (ದ.ಕ.) ಹೋಗಬೇಕಾಗುತ್ತಿತ್ತು ಆ ಸಮಯಗಳಲ್ಲಿ ಅವನ ತಂಗಿ ಹುಸೇನ್ ಬೀಬಿಯು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಳು. ತಾಯಿ ಮುದುಕಿಗೆ ಲೆಕ್ಕ ಗೊತ್ತಿಲ್ಲದಿದ್ದರಿಂದ ಹುಸೇನ್‌ಬೀಬಿ ಕೆಲಸ ಕಾರ್ಯಗಳಲ್ಲಿ ಚತುರೆ, ಲೆಕ್ಕಾಚಾರ-ವ್ಯಾಪಾರ ವ್ಯವಹಾರಗಳಲ್ಲಿ ನಿಪುಣೆ. ಸಾಲುದುದಕ್ಕೆ ತೆಳ್ಳಗೆ ಬೆಳ್ಳಗಾಗಿ ಲಕ್ಷಣವಾಗಿದ್ದಳು. ಅಣ್ಣ ಮುಮ್ಮುಕಾಕ ಅಂಗಡಿಯಲ್ಲಿ ಕೂತರೆ ಆಗುವ ವ್ಯಾಪಾರಕ್ಕಿಂತಲೂ, ತಂಗಿ ಹುಸೇನ್ ಬೀಬಿಯು ಕೂತರೆ, ಹೆಚ್ಚು. ಸುತ್ತಮುತ್ತಲಿನ ತೋಟಗಳಿಂದ ಮೇಸ್ತ್ರಿಗಳು - ಆಳುಗಳು ಎಲ್ಲಾ ಬೀಡಿ - ಹೊಗೆ ಸೊಪ್ಪು, ಎಲೆ ಅಡಿಕೆ -ಸೋಡಾ ಮುಂತಾದವುಗಳಿಗಾಗಿ ಅವಳ ಅಂಗಡಿಗೇ ಬರುವರು.
ತೋಟದ ಒಳಗೇ ಇದ್ದಷ್ಟು ದಿನವೂ ಯಾವ ಚಟವೂ ಇಲ್ಲದಿದ್ದ ಕಾಡನಿಗೆ ದಿನಾ ಊರಿಗೆ ಹೋಗಿಬರುವುದೆಂದಾದ ಮೇಲೆ ಬೀಡಿ ಸೇದುವ ಅಭ್ಯಾಸವಾಯ್ತು, ಸುರುಸುರುವಿನಲ್ಲಿ ಕಾಡ ಊರಿನಿಂದಲೇ ಬೀಡಿ ಕೊಳ್ಳುತಿದ್ದನು. ಒಂದು ದಿನ ಅವನ ಬೀಡಿ ಸಂಪೂರ್ಣ ಖರ್ಚಾಗಿತ್ತು. ದಾರಿಯಲ್ಲಿ ಹೋಗುವಾಗಲೇ ಸೇದಬೇಕಾದುದರಿಂದ ದಾರಿಕರೆಯಲ್ಲಿದ ಅಂಗಡಿಗೆ ಹೋದ. ಆ ದಿನ ಹುಸೇನ್‌ಬೀಬಿ ಅಂಗಡಿಯಲ್ಲಿ ಕೂತಿದ್ದಳು. ಒಂದಾಣೆ ಕೊಟ್ಟು ಒಂದು ಕಟ್ಟು ಬೀಡಿ ಕೊಂಡುಕೊಂಡ. ಹುಸೇನ್‌ಬೀಬಿ ಬೆಟ್ಟದಂಥ ಕುದುರೆಯ ಮೇಲೆ ಕೂತು ದಿನಾ ಊರಿಗೆ ಹೋಗಿ ಬರುತ್ತಿದ್ದ ಕಾಡನನ್ನು ಯಾವಾಗಲೂ ನೋಡುತ್ತಿದ್ದಳು.
ಸುತ್ತುಮುತ್ತಲಿನ ತೋಟದ ಟಪ್ಪಾಲಿನವರೆಲ್ಲ ನಡೆದು ಹೋಗುತ್ತಿರುವಾಗ ಕಾಡ ಮಾತ್ರ ಕುದುರೆಯ ಮೇಲೆ ಹೋಗುತ್ತಿರುವುದನ್ನು ನೋಡಿ ಅವನು ಅವರೆಲ್ಲರಿಗಿಂತ ಹೆಚ್ಚೆಂದು ಅವಳ ಭಾವನೆ. ಅವನೆಂದೂ ತನ್ನಂಗಡಿಗೆ ಬರದಿರುವುದು ಅವನ ಗೌರವವನ್ನು ಮತ್ತೂ ಹೆಚ್ಚಿಸಿತ್ತು ಅವಳ ದೃಷ್ಟಿಯಲ್ಲಿ ದೊರೆಯ ಮನೆಯಲ್ಲಿ ಬೆಳೆದುದರ ಪರಿಣಾಮವಾಗಿ ಅವನ ಉಡುಪುಗಳೂ, ತೋಟದ ಮೇಸ್ತಿ ಆಳುಗಳಿಗಿಂತ ಹೆಚ್ಚಿನ ತರನ್ನೂ ಶುಚಿಯಾದದ್ದೂ ಆಗಿತ್ತು. ದೊರೆಯ ಹಳೆಯ ಹೇಟೊ (Hat), ಹರಕುಮುರುಕು ಇಂಗ್ಲಿಷ್ ಅವನನ್ನು ಸರ್ವ ಸಾಧಾರಣ ಕೂಲಿ ವರ್ಗದಿಂದ ಹೆಚ್ಚಿನ ಮಟ್ಟಕ್ಕೇರಿಸಲಿಕ್ಕೆ ಸಹಾಯಕವಾಗಿದ್ದವು. ಇವುಗಳೆಲ್ಲಕ್ಕೂ ಕಳಸವಿಟ್ಟಂತೆ ಅವನ ನಗುಮುಖ. ಹುಸೇನ್‌ಬೀಗೆ ಅವನು ಅನನ್ಯ ಸಾಧಾರಣನಾಗಿ ತೋರಿದುದು ಆಶ್ಚರ್ಯವೇನು? ಆ ದಿನ ಅವನು ತನ್ನ ಅಂಗಡಿಗೆ ಬಂದುದನ್ನು ನೋಡಿ ಅವಳಿಗೆ ಬಹಳ ಸಂತೋಷವಾಯ್ತು, ನಗುನಗುತ್ತ ಬೀಡಿಯ ಕಟ್ಟನ್ನವನಿಗೆ ಕೊಟ್ಟು ಇನ್ನೇನು ಬೇಕು?' ಎಂದು ಕೇಳಿದಳು. ಕೇವಲ ಬೀಡಿಯ ಧ್ಯಾನದಲ್ಲಿದ್ದ ಕಾಡ ಒಂದು ಬೀಡಿಯನ್ನು ಬಾಯಲ್ಲಿಟ್ಟು ಬೆಂಕಿಪೊಟ್ಲದ ಸಲುವಾಗಿ ಜೇಬಿಗೆ ಕೈಹಾಕಿ ನೋಡಿದ, ಇರಲಿಲ್ಲ. ಅವಳು ಕೊಟ್ಟಳು. ಅವನು ಬೀಡಿಯನ್ನು ಹೊತ್ತಿಸಿ ಬೆಂಕಿಪೊಟ್ಲವನ್ನು ಜೇಬಿಗೆ ಹಾಕಿ ಹೊರಟ. ಆಗವಳು - 'ಬೆಂಕಿಪೊಟ್ಲದ ಕ್ರಯ?' ಎಂದಳು. ಬೀಡಿಯಲ್ಲೇ ತಲ್ಲೀನನಾಗಿದ್ದವನಿಗೆ ಬೆಂಕಿಪೊಟ್ಲದ ಕ್ರಯ ಕೊಡಲು ಮರೆತುಹೋಗಿತ್ತು. ಅವಳು ಕೇಳುವಾಗ ಮರೆತಿದ್ದೆ; ‘ಕೊಡುತ್ತೇನೆ' ಎಂದು ಹಿಂದಿರುಗಿದ. ಅವಳು 'ಪರವಾ ಇಲ್ಲ’ ಎನ್ನುತ್ತ ನಗುತ್ತ ನಿಂತಿದ್ದಳು. ಕಾಸು ಕೊಡುತ್ತ ಅವಳನ್ನು ನೋಡಿದ ಕಾಡ. ಆ ದಿನದಿಂದ ಊರಿನಲ್ಲಿ ಕಾಡನ ಬೀಡಿ ವ್ಯಾಪಾರ ಅಂತ್ಯವಾಗಿ ಹೋಯ್ತು, ಈಗ ಕಾಡನಿಗೆ ಬೀಡಿ ಬೇಕಾದರೆ ಹುಸೇನ್‌ಬೀಯ ಅಂಗಡಿ, ಬೀಡಿ ಬೇಕಾದರೆ ಏಕೆ - ಬೇಡದಿದ್ದರೂ ಬೇಕೆಂದು ನೆವನ ಮಾಡಕೊಂಡು ಅಲ್ಲಿಗೆ ಹೋಗುತ್ತಿದ್ದ. ಆದರೆ ಮುಮ್ಮುಕಾಕ ಅಂಗಡಿಯಲ್ಲಿ ಕೂತಾಗ ಮಾತ್ರ ಕಾಡನಿಗೆ ಹೆಚ್ಚಿನ ಬೀಡಿ ಬೇಕಾಗುತ್ತಿರಲಿಲ್ಲ. ಹೀಗೆ ಒಂದಾರು ತಿಂಗಳು ಕಳೆಯುವುದರೊಳಗೆ ಬೀಡಿ ಮಾತ್ರವಲ್ಲ ಬೀಡಿ ಮಾರುವ ಹುಸೇನ್ ಬೀಯನ್ನು ಬಿಟ್ಟು ಬದುಕುವುದು ಅಸಾಧ್ಯವೆಂದು ತೋರಿತು ಕಾಡನಿಗೆ.
ಹುಸೇನ್‌ಬೀಯೂ ದಿನಾ ಬೀಡಿಯ ವ್ಯಾಪಾರಕ್ಕೆ ಬರುತ್ತಿದ್ದ ಕಾಡನಿಗೆ ಬೀಡಿಯನ್ನಲ್ಲದೆ ಹೃದಯವನ್ನು ಕೊಟ್ಟುಬಿಟ್ಟಳು. ಬೀಡಿಯ ನೆವನದಿಂದ ಬೆಳೆಯುತ್ತಿದ್ದ ಅವಳ ಪ್ರಣಯ ಮುದಿ ತಾಯಿಯ ಮೂಲಕ ಮುಮ್ಮುಕಾಕನಿಗೆ ತಿಳಿಯಿತು. ಒಬ್ಬಳೇ ತಂಗಿ ಅವನಿಗೆ. ಬಲು ಪ್ರೀತಿಯಿಂದ ಸಾಕಿದ್ದ. ಅವಳ ಸುಖಕ್ಕೆ ಅಡ್ಡಿ ಬರುವ ಇಚ್ಛೆ ಇರಲಿಲ್ಲ. ಕಾಡನೂ ಯೋಗ್ಯನಾದ ವರ ಹೌದು, ಯುವಕ, ಅಹಂಕಾರಿಯಲ್ಲ.
ಅನೇಕ ವರ್ಷಗಳಿಂದ ಒಂದೇ ಕಡೆಗೆ ನಿಂತು ಪ್ರಾಮಾಣಿಕನಾಗಿ ಕೆಲಸ ಮಾಡಿ ಸ್ವಲ್ಪ ಹಣ ಬೇರೆ ಮಾಡಿದ್ದಾನೆ. ತಂಗಿಗೂ ಅವನಲ್ಲಿ ಪ್ರೇಮವಿದೆ. ಆದರೆ? ಜಾತಿಯೊಂದು ಬೆಟ್ಟದಂತೆ ಅಡ್ಡವಾಗಿ ನಿಂತಿತ್ತು ಒಂದು ದಿನ ತಾನೇ ಕಾಡನೊಡನೆ ಆ ವಿಷಯ ಪ್ರಸ್ತಾಪಿಸಿದ. ಕಾಡನಿಗೇನು? ಜಾತಿಗೆ ಅವನ ದೃಷ್ಟಿಯಲ್ಲಿ ಮೌಲ್ಯವಿಲ್ಲ, ಎಷ್ಟು ಸುಲಭವಾಗಿ ಕ್ರಿಶ್ಚನ್ ಆಗಿದ್ದನೋ ಅದಕ್ಕಿಂತಲೂ ಹೆಚ್ಚಿನ ಉತ್ಸಾಹದಿಂದ ಮುಸಲ್ಮಾನನಾಗಲೊಪ್ಪಿದ. ಹಿಂದೆ ಹಿಡಿ ಕೂಳಿಗಾಗಿ ಜಾತಿ ಬಿಟ್ಟಿದ್ದರೆ ಈಗ ಪ್ರೇಮ ಕಾರಣವಾಗಿತ್ತು. ಹುಸೇನ್‌ಬೀಗಾಗಿ ಜೀವಬಿಡಲು ಸಿದ್ಧನಿದ್ದ. ಅವನಿಗೆ ಬೆಲೆಯಿಲ್ಲದ ಜಾತಿಯನ್ನು ಬಿಟ್ಟ ಮಾತ್ರಕ್ಕೆ ಅವಳು ಲಭಿಸುವಳೆಂದಾದ ಮೇಲೆ ಮುಸಲ್ಮಾನ ಧರ್ಮಕ್ಕೆ ಮತಾಂತರ ಹೊಂದಲು ಹೆಚ್ಚು ಸಮಯವಾಗಲಿಲ್ಲ. ಬಹುಶಃ ಅವನ ಹಿಂದಿನ ದೊರೆಯಿದ್ದಿದ್ದರೆ ಈ ಸಂದರ್ಭದಲ್ಲಿ ಕೊಂಚ ತೊಂದರೆಯಾಗುತ್ತಿತ್ತೇನೋ! ಆದರೆ, ಈಗಿನ ಮೇನೇಜರ್ ಹಿಂದೂ ಆದುದರಿಂದ ಕ್ರಿಶ್ಚಿಯನ್ ಕಾಡ ಮುಸಲ್ಮಾನನಾದರೆ ತಮಗೇನೆಂದು ಸುಮ್ಮನಿದ್ದು ಬಿಟ್ಟರು. ಎಂತೂ ಪ್ರೇಮದ ಸಲುವಾಗಿ ಕಾಡ ಎರಡನೆಯ ಸಾರಿ ಜಾತಿ ಬದಲಾಯಿಸಿ 'ಇಸ್ಮಾಯಿಲ್ ಕಾಡಕಾಕ' ಆಗಿ ಹುಸೇನ್‌ಬೀಯನ್ನು ನಿಕಾ ಮಾಡಿಕೊಂಡ.
ಇದು ಕಾಡನ ಜೀವನದಲ್ಲಿ ದ್ವಿತೀಯಾಂಕ.
ವಿಡಿಯೋ
ಕೊಡಗಿನ ಗೌರಮ್ಮ
ಕೊಡಗಿನ ಗೌರಮ್ಮನವರು ಕನ್ನಡದ ಮೊದಲ ಕಾದಂಬರಿಗಾರ್ತಿ ಕತೆಗಾರ್ತಿ ಎಂದರೆ ತಪ್ಪಾಗಲಾರದು. ಅವರು ಮಿಸೆಸ್ ಬಿ.ಟಿ.ಜಿ.ಕೃಷ್ಣ ಎನ್ನುವ ಹೆಸರಿನಲ್ಲಿ ಕತೆಗಳನ್ನು ಬರೆಯುತ್ತಿದ್ದರು. 1931 ರಿಂದ 1939ರವರೆಗೆ ಇವರು ರಚಿಸಿದ ಸಣ್ಣ ಕಥೆಗಳು ‘ಮಗುವಿನ ರಾಣಿ, ಕಂಬನಿ, ಚಿಗುರು’ ಗೌರಮ್ಮನ ಕಥೆಗಳು ಎಂಬ ಶೀರ್ಷಿಕೆಗಳಲ್ಲಿ ಪ್ರಕಟವಾಗಿವೆ. ಇವರು 1912ರಲ್ಲಿ ಮಡಿಕೇರಿಯಲ್ಲಿ ಜನಿಸಿದರು. ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಕೊಡಗಿನಲ್ಲಿ ಪ್ರವಾಸ ಕೈಗೊಂಡಾಗ ಅವರನ್ನು ತಮ್ಮ ಮನೆಗೆ ಬರಮಾಡಿಕೊಂಡು ತಮ್ಮ ಆಭರಣಗಳನ್ನೆಲ್ಲ ದಾನ ನೀಡಿದರು. ಗೌರಮ್ಮನವರು ತಮ್ಮ ಮನೆಯ ಸಮೀಪದ ಹೊಳೆಯಲ್ಲಿ ಈಜಲು ಹೋದಾಗ ಆಕಸ್ಮಿಕವಾಗಿ ಮುಳುಗಿ 1940ರಲ್ಲಿ ದುರಂತ ಸಾವಿಗೀಡಾದರು. ಇಲ್ಲವಾಗಿದ್ದರೆ ಕನ್ನಡ ಸಾರಸ್ವತ ಲೋಕಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಿದ್ದಲ್ಲಿ ಸಂಶಯವಿಲ್ಲ.