Poem

ಮೌನವೇ ಆವಿರ್ಭವಿಸು

ಅಂದದ ಮಾತೇ ಚಂದ
ನಿಸೂರು ಮೌನ ಮಹದಾನಂದ.

ಮನೆಯೊಳಗಿನ ಮಾತು ಬೀದಿಯಲ್ಲಿ ಹಾರಾಡಿ
ಊರ ಸುಡುವ ಅಧ್ವಾನದೆದುರು
ಶ್ರವಣದಲಿ ಪದ ರಿಂಗಣಿಸದೆ
ಮೂಕನಾಗಿ ವಿಕಲಾವಸ್ಥೆಯಾದರೂ ನಿರಾಳ.
ವಾಗ್ಝರಿಯ ಗ್ರಹಿಕೆಯ ಪೀಡನೆಯಿಲ್ಲ
ಮಾತೆಸೆದು ಅನರ್ಥಿಸುವ ಪ್ರಮೇಯವಿಲ್ಲ.

ಮೃದು ಮಾತು ಸುಡು ಮಾತಾಗಿ
ಏರುಮಾತಿನ ವಾದವಾಗಿ ಭಯಂಕರ ವಿವಾದವಾಗಿ
ಸೃಜಿಸುವ ಅನಗತ್ಯ ಕ್ಷೋಭೆಗಿಂತ
ಮಾತಿಲ್ಲದ ಧ್ಯಾನಸ್ಥ ಸ್ಥಿತಿಯೇ ಧನ್ಯ.

ವರ್ಷದಿಂದೆ ಎಂದೋ ವಿನೋದಕ್ಕಾಡಿದ
ಕಿಲುಬು ನುಡಿಯೂ ಕಿಡಿಯಾಗಿ ಹರಡಿ
ಲಂಕೆಯ ಸುಟ್ಟ ಬಾಲದ ಬೆಂಕಿಯಂತಾಗಿ
ಶಿಲುಬೆಗೇರಿಸುವ ಪರಿಯೆದುರು
ಮಾತು ಕಡಿದ ಮನಸೇ ನಿಶ್ಚಿಂತ

ಕುಲಕ್ಕಾಗಿ ಧನಕ್ಕಾಗಿ ಪೀಠಕ್ಕಾಗಿ
ಮಾತಿನ ದಾಳದ ಝರಿಯ ಪ್ರವಹಿಸಿ
`ಪ್ರೀತಿ ವಿಶ್ವಾಸಗಳ ಹಿಂದಟ್ಟಿದರೆ
ಅಂತರ್ಮುಖೀ ಭಾವವೇ ಕೃತಾರ್ಥ.

ಮಾತಿಗೆ ನೂರು ರೂಪ
ನೀರವ ಮೌನ ಆರೂಪ
ಮಾತು ನಂಜು;ಮೌನ ಮಂಜು,
ಅನುಸರಣೆಯಿಲ್ಲದ ಮಾತಿಗಿಂತ
ಮನದ ಮೂಲೆಯಲ್ಲಿ ಅನುರಣಿಸುವ ಮಾತು
“ಬಾ ಮೌನವೇ ಆವಿರ್ಭವಿಸು.
ನುಡಿಯ ಕಿಡಿಯ ಕೊಂದು ಸಂಭ್ರಮಿಸು"

- ಕೆ.ಎಸ್. ಗಂಗಾಧರ

ಕೆ.ಎಸ್ ಗಂಗಾಧರ

ಡಾ. ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author