Story

ಮಿನಿಕಥೆ

ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹನುಮಂತಪುರದವರು. 'ಎನಿ ವನ್ ಬಟ್ ದಿ ಸ್ಪೌಸ್' ಎನ್ನುವ ಇಂಗ್ಲೀಷ್ ಕಿರುಗತೆಗಳ (2017) ಸಂಕಲನ ಪ್ರಕಟಿಸಿದ್ದು, ಅವರು ಬರೆದಿರುವ ‘ಮಿನಿಕಥೆ’ ನಿಮ್ಮ ಓದಿಗಾಗಿ...

ಅದೊಂದು ಮುಂಜಾನೆ ಬೆಂಗಳೂರಿನ ಹೊರವಲಯದಲ್ಲಿದ್ದ ಆಧಾರ್ ಕಾರ್ಡ್ ಕೇಂದ್ರದಲ್ಲಿ ಎರಡು ಜಗಳಗಳು ಪರ್ಯಾಯವಾಗಿ ನಡೆಯುತ್ತಿದ್ದವು. ಮೊದಲನೆಯದು ಕಾಡಿಗೆ ಹಚ್ಚಿದ್ದ ಸುಂದರವಾದ ಕಣ್ಣುಗಳಷ್ಟೇ ಕಾಣುವಂತೆ ಮುಖದ ತುಂಬಾ ಮಾಸ್ಕ್ ಹಾಕಿಕೊಂಡಿದ್ದ ಆ ಆಧಾರ್ ಕೇಂದ್ರದ ಉದ್ಯೋಗಿ ಪಲ್ಲವಿ ಮತ್ತು ಮುಖದ ತುಂಬಾ ಗಡ್ಡವೇ ಕಾಣುತಿದ್ದ ಇಬ್ಬರು ನವಯುವಕರ ನಡುವಿನದು.ನಡೆದದ್ದಿಷ್ಟೇ!ಆ ಇಬ್ಬರು ಹುಡುಗರೂ ಟೋಕನ್ ಕೂಡ ತೆಗೆದುಕೊಳ್ಳದೆ, ತಮ್ಮ ಸರದಿಗಾಗಿ ಹೊರಗೆ ಇಟ್ಟಿದ್ದ ಕುರ್ಚಿಗಳ ಮೇಲೆ ಕುಳಿತು ಕಾಯದೆ, ಎಲ್ಲಕ್ಕಿಂತ ಹೆಚ್ಚಾಗಿ ಮಾಸ್ಕ್ ಕೂಡ ಹಾಕಿಕೊಂಡಿರದೆ ಆಫೀಸ್ ಒಳಗೆ ನುಗ್ಗಿ ಬಿಟ್ಟಿದ್ದರು. ಅವರಲ್ಲಿ ಒಬ್ಬ ಹುಡುಗನ ವಿಳಾಸ ಬದಲಿಸಬೇಕಾಗಿತ್ತು. ಆದರೆ ಅದಕ್ಕೆ ಬೇಕಾದ, ಪಲ್ಲವಿ ಕೇಳಿದ ಯಾವ ಪುರಾವೆಗಳೂ ಅವರಲ್ಲಿರಲಿಲ್ಲ."ನೋಡಿ ಸರ್, ಪ್ಯಾನ್ ಕಾರ್ಡ್ ನಲ್ಲಿ ವಿಳಾಸ ಇರೋದಿಲ್ಲ. ಅಲ್ಲಿ ಬೋರ್ಡ್ ಮೇಲೆ ಲಿಸ್ಟ್ ಹಾಕಿದೀವಿ. ಅದರಲ್ಲಿ ಯಾವುದಾದರೂ ಒಂದನ್ನು ತನ್ನಿ. ಇಲ್ಲಾಂದ್ರೆ ಆಗಲ್ಲ." ಎಂದು ಹೇಳುತ್ತಾ ತನ್ನೆದುರು ಕುರ್ಚಿಯ ಮೇಲೆ ಕುಳಿತಿದ್ದ ಪುಟ್ಟ ಹುಡುಗನ ಬೆರಳುಗಳನ್ನು ಬಯೋಮೆಟ್ರಿಕ್ ಮಷೀನ್ ಮೇಲೆ ಒತ್ತುತ್ತಿದ್ದಳು."ಪಾಸ್ಪೋರ್ಟ್ ಆಫೀಸಿಗೆ ಹೋಗ್ಬೇಕು ಮೇಡಂ, ಮಧ್ಯಾಹ್ನ ಅಪ್ಪೋಯಿಂಟ್ಮೆಂಟ್ ಇದೆ. ಏನಾದ್ರೂ ಮಾಡಿ." ಎಂದು ಒಬ್ಬ ಗೋಗರೆಯುತ್ತಿದ್ದ."ನಾನೇನೂ ಮಾಡೋಕಾಗಲ್ಲ ಸರ್, ಸಿಸ್ಟಮ್ ಅಕ್ಸೆಪ್ಟ್ ಮಾಡ್ಕೊಬೇಕಲ್ಲಾ?"ಅಷ್ಟು ಹೊತ್ತೂ ತಾಳ್ಮೆಯಿಂದಿದ್ದ ಅವನ ಜೊತೆಯವನು ಇದ್ದಕ್ಕಿದ್ದಂತೆ, "ಏಯ್, ಇಲ್ಲೇನು ಫ್ಯಾಶನ್ ಷೋ ಮಾಡೋಕೆ ಬರ್ತೀಯಾ ಅಥವಾ ಕೆಲಸ ಮಾಡೋಕೆ ಬರ್ತೀಯಾ? ಅದ್ಯಾಕ್ ಅಕ್ಸೆಪ್ಟ್ ಮಾಡಿಕೊಳಲ್ಲ ಸಿಸ್ಟಮ್? ನಿಂಗೆ ನಿಜವಾಗ್ಲೂ ಕೆಲಸ ಬರುತ್ತಾ?" ಅಂತ ಕೂಗಾಡಲು ಶುರು ಮಾಡಿದ.ಆ ಪುಟ್ಟ ಬಾಲಕ "ಅಯ್ಯೋ ನೋಯ್ತಾದೆ ಆಂಟೀ," ಅಂತ ಚೀರಿದಾಗ ಪಲ್ಲವಿ ಸಿಟ್ಟಿನಲ್ಲಿ ಅವನ ಬೆರಳುಗಳನ್ನು ಜೋರಾಗಿ ಒತ್ತಿದ್ದು ಅರಿವಾಗಿ ಬೆದರಿದಳು. ಅವನ ಕೈಗಳನ್ನು ಬಿಟ್ಟು ಆಕೆ ಸೀದಾ ಹೊರಗೆ ಬಂದು ಅಲ್ಲಿ ಕುಳಿತಿದ್ದವರತ್ತ ನೋಡಿದಳು. ಸಿಟ್ಟು ಅಪಮಾನದಿಂದ ಕುದಿಯುತ್ತಿದ್ದ ಅವಳಿಗೆ ತನಗೆ ಸಪೋರ್ಟ್ ಮಾಡುವಂತ ಇತರೆ ಗ್ರಾಹಕರು ಬೇಕಾಗಿತ್ತು.ಹೊರಗೆ ಒಂದೇ ತರದ ಬಿಳಿ ಜುಬ್ಬಾ, ಬಿಳಿ ಪಂಚೆ ಧರಿಸಿ, ಒಂದೇ ರೀತಿಯ ಮೊಬೈಲ್ ಗಳನ್ನು ಹಿಡಿದು, ಹೊಸ ತೆಲುಗು ಸಿನಿಮಾ ಪುಷ್ಪಾದ ಒಂದೇ ವಿಡಿಯೋವನ್ನು ತಿರುಗಾ ಮುರುಗಾ ನೋಡುತ್ತಿದ್ದ ಇಬ್ಬರು ಅಜ್ಜಂದಿರು ಕಾಣಿಸಿದರು. ಅವರ ಮುಂದಿನ ಕುರ್ಚಿಗಳೆಲ್ಲಾ ಖಾಲಿಯಾಗಿದ್ದವು. ಅವರು ಮಾತ್ರ ತಮ್ಮ ಸರದಿ ಬಂದರೂ ಎದ್ದು ಹೊರಡುವ ಯೋಚನೆಯಿಲ್ಲದೆ ಆರಾಮಾಗಿ ಕುಳಿತಿದ್ದರು."ಅಂಕಲ್ ನೀವು ಬಂದು ಎಷ್ಟೊತ್ತಾಯ್ತು? ಬನ್ನಿ ಒಳಗೆ." ಎಂದು ಕೂಗಿ ಹೇಳಿದಳು. ಆದರೆ ಅವರಲ್ಲಿ ಒಬ್ಬ ಅಜ್ಜನಿಗೆ ಮುಂದಿನ ವಿಡಿಯೋ ನೋಡುವ ಕಾತುರವಿದ್ದರೂ ಇನ್ನೊಬ್ಬ ಆಗಷ್ಟೇ ನೋಡಿದ ವಿಡಿಯೋ ವನ್ನೇ ಮತ್ತೆ ಮತ್ತೆ ಹಾಕುವಂತೆ ಜಗಳ ಮಾಡುತಿದ್ದ.ಎರಡು ನಿಮಿಷ ಕಾಯುವ ವ್ಯವಧಾನವಿಲ್ಲದ, ಅಗತ್ಯವಿರುವ ಕಾಗದ ಪತ್ರಗಳನ್ನು ತರದೇ ಸಿಬ್ಬಂದಿಯೊಂದಿಗೇ ಜಗಳವಾಡುವ ಆ ಯುವಕರೆಲ್ಲಿ? ಇಲ್ಲಿ ಜಗವನ್ನೇ ಮರೆತು ಒಂದು ವಿಡಿಯೋಗಾಗಿ ಜಗಳವಾಡುತ್ತಿರುವ ಈ ಮಕ್ಕಳಂತ ಅಜ್ಜಂದಿರೆಲ್ಲಿ ಎಂದು ಅವಳು ಯೋಚಿಸುತ್ತಾ, "ಅಂಕಲ್ ಅದೂ ಒಳಗೆ ಇಬ್ರು ಹುಡುಗ್ರು ನನ್ನೊಡನೆ ಸ್ವಲ್ಪವೂ ಶಿಷ್ಟಾಚಾರವಿಲ್ಲದೆ ... " ಎಂದು ಗೋಳು ಹೇಳಿಕೊಳುತ್ತಿರುವಾಗಲೇ ಹೊರಗೊಂದು ಕಾರು ಬಂದು ನಿಲ್ಲುತ್ತಿರುವುದು ಕಂಡಿತು. ಅದು ರಿವರ್ಸ್ ಗೇರ್ ಹಾಕಿದೊಡನೆ ಕಿಕಿ ಕಿಕಿ ...ಕಿಕಿ ಕಿಕಿ ಎಂದು ಸದ್ದು ಮಾಡತೊಡಗಿತು. ಅಷ್ಟೂ ಹೊತ್ತು ಜಗಳವಾಡುತ್ತಿದ್ದ ಆ ಮುದುಕರು ಇದ್ದಕ್ಕಿದ್ದಂತೇ ನಿಲ್ಲಿಸಿ, ತಾವೂ ಎದ್ದು ನಿಂತು, ಕಾರಿನ ರಿವರ್ಸ್ ಗೇರ್ ಸದ್ದಿನೊಂದಿಗೆ ದನಿಗೂಡಿಸಿ, "ಚಡ್ಡಿ ಚಿಕ್ಕ ... ಚಡ್ಡಿ ಚಿಕ್ಕ ... ಚಡ್ಡಿ ಚಿಕ್ಕ ..." ಎಂದು ಪುಟ್ಟ ಮಕ್ಕಳಂತೆ ಕೂಗಿಕೊಳ್ಳತೊಡಗಿದರು.ಅವರ ಮುಗ್ದತೆಯನ್ನೂ, ಜೀವನೋತ್ಸಾಹವನ್ನೂ ನೋಡಿ ಖುಷಿಯಿಂದ ಪಲ್ಲವಿ ಜೋರಾಗಿ ನಕ್ಕು ಒಳಗೆ ಹೆಜ್ಜೆ ಇಡತೊಡಗಿದಳು. ಆಗ ಒಬ್ಬ ಅಜ್ಜ ಇವಳತ್ತ ತಿರುಗಿ, "ನಾಟ್ ಆಲ್ ಫೈಟ್ಸ್ ಆರ್ ಅವರ್ಸ್!" ಎಂದರು. ಪಲ್ಲವಿ ಆಫೀಸ್ ಒಳಗೆ ಬಂದಾಗ, ಆ ಯುವಕರು ಕೆಲಸ ಕೆಟ್ಟಿತೆಂದು ಅರಿವಾಗಿ, "ಮೇಡಂ ಅದೂ ಸ್ವಲ್ಪ ಟೆನ್ಶನ್ ನಲ್ಲಿ ... " ಎಂದು ತೇಪೆ ಹಚ್ಚತೊಡಗಿದರು."ಸಿಸ್ಟಮ್ ನಿಮ್ಮ ಮೇಲೆ ಕೋಪಾನು ಮಾಡ್ಕೊಳಲ್ಲ, ಕ್ಸಮಿಸೋದೂ ಇಲ್ಲ ಸರ್. ಆದ್ರೆ ನೀವು ಕರೆಕ್ಟ್ ಡಾಕುಮೆಂಟ್ಸ್ ತರೋವರೆಗೂ ಅದಕ್ಕೆ ಕಾಯುವ ತಾಳ್ಮೆ ಇದೆ." ಎಂದು ಹೇಳಿ ಎದುರಿಗಿದ್ದ ಬಾಲಕನ ಮುಖದ ಮುಂದೆ ಕ್ಯಾಮೆರಾ ಅಡ್ಜಸ್ಟ್ ಮಾಡತೊಡಗಿದಳು.***

 

ಪೂರ್ಣಿಮಾ ಮಾಳಗಿಮನಿ

ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹನುಮಂತಪುರದವರು. ಮಂಡ್ಯ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿ, ಚಿತ್ರದುರ್ಗದ ಎಸ್.ಜೆ.ಎಂ.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಪದವೀಧರೆ. 

'ಎನಿ ವನ್ ಬಟ್ ದಿ ಸ್ಪೌಸ್' ಎನ್ನುವ ಇಂಗ್ಲೀಷ್ ಕಿರುಗತೆಗಳ (2017) ಸಂಕಲನ ಪ್ರಕಟಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಹಲವಾರು ತಾಂತ್ರಿಕ ಹಾಗೂ ಸಾಹಿತ್ಯಕ  ವಿಷಯ ಕುರಿತ ಲೇಖನಗಳು ಪ್ರಕಟವಾಗಿವೆ. ಪ್ರತಿಷ್ಠಿತ ಭಾರತೀಯ ವಾಯುಸೇನೆಯಲ್ಲಿ ಏರೊನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಧಿಕಾರಿಯಾಗಿ ಆರು ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಜಂಟಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  

ಕೃತಿಗಳು: Anyone but the Spouse- ಇಂಗ್ಲಿಷಿನಲ್ಲಿ ಬರೆದ ಸಣ್ಣ ಕಥೆಗಳ ಸಂಕಲನ, ಇಜಯಾ (ಕಾದಂಬರಿ),ಪ್ರೀತಿ ಪ್ರೇಮ: ಪುಸ್ತಕದಾಚೆಯ ಬದನೆಕಾಯಿ, ಆಗಮ್ಯ, ಡೂಡಲ್ ಕತೆಗಳು, ಲವ್ ಟುಡೆ, ಮ್ಯಾಜಿಕ್ ಸೌಟು

More About Author