ಹೌದು ಮತ್ತೆ
ತಯಾರಾಗುತ್ತಿದ್ದೇವೆ.
ಗುಜರಿಯಿಂದ
ತೆರವುಗೊಂಡು
ಕತ್ತಲಕೋಣೆಗಳಾಸಿ
ಕಸರತ್ತಿನ ಗುತ್ತಿಗೆಯೊಳಗೆ
ಮೆಷಿನ್ ನಡುವೆ
ಕಿರುದಾಗಿ
ಎದೆಯುಬ್ಬಲು ಯತ್ನಿಸಿ
ಏದುಸಿರ ಕಾವ
ಬಗಲಿನವರಿಗಂಟಿಸಿ
ಮತ್ತೆ ತಯಾರಾಗುತ್ತಿದ್ದೇವೆ.
ಕೈಯಿಂದ ಕೈದಾಟಿ
ಒಳಕೋಣಿಯಿಂದ
ಹೊರಕೋಣಿಗೆ
ಮಾಲೀಕನ ಕೈಯಾನಿಸಿ
ದರ ಪಟ್ಟಿಯ
ಮೈಯೊಳಗಂಟಿಸಿಕೊಂಡು
ಹೊರ ಬೀಳುತ್ತಿದ್ದೇವೆ..
ಬನ್ನಿ ಬನ್ನಿ
ಎಂಆರ್ ಪಿ ದರಕ್ಕೆ
ಮೂವತ್ತೂ ನಲವತ್ತು
ಪರಸೆಂಟು
ಡಿಸ್ಕೊಂಟೂ
ಕೊಂಡೋಗಿ ಬನ್ನಿ
ಮಾರ್ಕೆಟ್ಟಿನಲ್ಲಿ ಹರಾಜಿಗಿದ್ದೇವೆ
ಹಳೆಯ ಸವಕಲನ್ನು
ತಿದ್ದಿ ತೀಡಿ ನಯಗೊಳಿಸಿ
ನವಿರಾಗಿ ಧಿರಿಸು ಧರಿಸಿ
ನಿಂತಿರುವೆವು..
ಚಿತ್ರ : ಮಹಾಂತೇಶ ದೊಡ್ಡಮನಿ
ರವಿಕುಮಾರ್ ನೀಹ
ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನಸೆಳೆದಿರುವ ಡಾ. ರವಿಕುಮಾರ್ ನೀಹ ಅವರು ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೋಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ- ಎನ್.ಸಿ. ಹನುಮಂತಯ್ಯ, ತಾಯಿ ದೊಡ್ಡಕ್ಕ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾರ್ ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ.ಪದವಿಗಳಿಸಿದ್ದಾರೆ. ಆನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ.
ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ಒಂದೂವರೆ ದಶಕದಿಂದಲೂ ಕನ್ನಡ ಪ್ರಾಧ್ಯಾಪಕರಾಗಿ ಅಧ್ಯಾಪನ ನಿರತರಾಗಿರುವ ರವಿಕುಮಾರ್ ಈವರೆಗೆ ಸುಮಾರು ಹನ್ನೆರಡು ಕೃತಿಗಳನ್ನು ರಚಿಸಿದ್ದಾರೆ. ಸೂಲು, ಪುಸ್ತಕ ವಿಮರ್ಶಾ ಕಥನಗಳು, ಕಂಡದಾರಿ, ಧರ್ಮ ರಾಜಕಾರಣ, ಜಲಜಂಬೂಕನ್ಯೆ(ಖಂಡಕಾವ್ಯ), ಕ್ರಿಯಾಪದ, ನೆಲನಿಲ್ಲದ ಭೂಮಿ, ನಡೆದದಾರಿ, ಸುವರ್ಣ ಮುಖಿ, ಪುಸ್ತಕ ವಿಮರ್ಶೆ: ಸಾಂಸ್ಕೃತಿಕ ಬಿಕ್ಕಟ್ಟುಗಳ ಹುಡುಕಾಟ, ನೆರಳಿಲ್ಲದ ಕಾಯ ಮತ್ತು ಬಯಲ ಬನಿ ಪ್ರಕಟಿತ ಕೃತಿಗಳು. ನಾಡಿನ ಅನೇಕ ಪತ್ರಿಕೆಗಳಲ್ಲಿ ರವಿಕುಮಾರ್ ಅವರ ಲೇಖನಗಳು ಪ್ರಕಟಗೊಂಡು ಓದುಗರ ಚಿಂತನಾಲಹರಿಯನ್ನು ವಿಸ್ತರಿಸಿವೆ. ಕೊರಟಗೆರೆ ತಾಲೋಕು ಕನ್ನಡ ರಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
More About Author