Poem

ಮಣ್ಣಿನೊಂದಿಗೆ

ಮಣ್ಣಿನೊಂದಿಗೆ
ಸಂಧಾನ ಸಣ್ಣದೇ,
ಬೀಜ ಮಣ್ಣಿನೊಡನೆ
ಕೂಡಿಕೆ ಮಾಡುವುದು ಸರಳವಲ್ಲ!

ಬಂಧುಗಳಿಂದ ಬೇರಾಗಿ
ಬೇರೇ ಇಲ್ಲದೇ ಬೇರು ಮೂಡಿಸಿಕೊಳ್ಳುವ
ತವಕದಿ ಸುತ್ತ ಕವಿದ ಕತ್ತಲ ಕೂಡೆ
ಮಾತಿಲ್ಲದೇ ಮುದುಡಿ ಮೇಲೇಳಬೇಕು!

ಸಿಕ್ಕ ಸಣ್ಣ ಕಣವೇ ತಿಂದು
ದಾರಿ ಹುಡುಕಿ ಮುಗಿಲ ಹಾದಿಗೆ ಹೆಜ್ಜೆ
ಊರಬೇಕು!

ಬಂದ ಬಂದವರನ್ನೆಲ್ಲಾ ಬಾಚಿ
ತಬ್ಬಲು ಮಣ್ಣೇನು ರಾಜಕೀಯ ಪಕ್ಷವೇ?
ಒಡಲ ಗರ್ಭದಿ
ಮೌನ ಚಿಪ್ಪಲಿ ಭವ ಬಂಧನದಿ
ಬಂಧಿಯಾಗೋ ಅತಿಥಿಗಿದೋ ಮೈ ಮುರಿಯೆ
ಟಿಸಿಲೊಡೆವ ದಿವ್ಯ ಅವಕಾಶ!

ನಾಲ್ಕು ಮಾತನಾಡಿದರೆ ಹರದಾರಿ ಸಾಗೋ
ಪಯಣಿಗರೂ ಗೆಳೆಯರೆ;
ಮಡಿಲಲಿ ಮಲಗಿದ ಬೀಜ
ಅಂಕುರವಾಗೇ ನಾಳೆ ಕನಸ ಶಿಖರಕೆ ಆಲ!

ನೀರಧಾರೆ, ಬಿಸಿಲಝಳ,ಅಷ್ಟಿಷ್ಟು ಪ್ರೀತಿ
ಬೀಜ ಅದೋ ಗರ್ಭ ಧರಿಸಿ
ಬೆಳಕ ಸಲಿಗೆಯಲ್ಲಿ ಸಂಧಾನ!

ಸಾಗರದ ನೋವಿನ ನಡುವೆ
ಸಾಸಿವೆ ಪ್ರೀತಿ ಸಿಕ್ಕರೂ
ನಾಳಿನ ಬೆಳಕೇ ಬೆಳೆದ ಸಾಧನೆ!

-ಸಂತೆಬೆನ್ನೂರು ಫೈಜ್ನಟ್ರಾಜ್

ಸಂತೆಬೆನ್ನೂರು ಫೈಜ್ನಟ್ರಾಜ್

ಗೆಳೆಯ ನಟರಾಜ್ ಅವರ ಅಕಾಲಿಕ ಮರಣ ಸೈಯದ್‌ ಫೈಜುಲ್ಲಾ ಅವರಿಗೆ ಅರಗಿಸಿಕೊಳ್ಳಲಾಗಲೇ ಇಲ್ಲ. ಮಿತ್ರ ತನ್ನೊಂದಿಗೆ ಸದಾ ಇರಬೇಕೆಂಬ ಹಂಬಲ. ಪರಿಣಾಮ ತನ್ನ ಹೆಸರಿಗೆ ಗೆಳೆಯನ ಹೆಸರನ್ನು ಸೇರಿಸಿಕೊಂಡರು. ಸಂತೆಬೆನ್ನೂರು ಫೈಜ್ನಟ್ರಾಜ್ ಎಂದು ಬದಲಾದರು. 

ಬಹುಶಃ ನಾಡಿನ ಪತ್ರಿಕೆಗಳನ್ನು ನಿಯತಕಾಲಿಕಗಳನ್ನು ನಿರಂತರ ಓದುವವರಿಗೆ ಫೈಜ್ನಟ್ರಾಜ್‌ ಹೆಸರು ಚಿರಪರಿಚಿತ. ಅವರ ಹೆಸರು ನಾಡಿನ ಯಾವುದಾದರೂ ಪತ್ರಿಕೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಹಾಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಲೇ ಇರುವ ನಿರಂತರತೆ ಯನ್ನು ಅವರು ಕಾಯ್ದುಕೊಂಡಿದ್ದಾರೆ. 

ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಂತೆಬೆನ್ನೂರು ಗ್ರಾಮದಲ್ಲಿ ಜನನ. ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರು. ’ಎದೆಯೊಳಗಣ ತಲ್ಲಣ’, ’ಬುದ್ಧನಾಗ ಹೊರಟು’ ಕವನ ಸಂಕಲನಗಳಾದರೆ ’ಮಂತ್ರದಂಡ, ಸ್ನೇಹದ ಕಡಲಲ್ಲ’ ಮಕ್ಕಳ ಕೃತಿಗಳು. ರೇಷು ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಾಶಿಸುತ್ತಲೂ ಇದ್ದಾರೆ. 
 

More About Author