Poem

ಮನದ ಮಾಳಿಗೆ

ಅರಿತಷ್ಟೂ ಜಟಿಲವೆನಿಸುವ
ಅದೆಷ್ಟೋ ಭಾವನೆಗಳು..!!
ಕೈ ಚಾಚಿದಷ್ಟು ದೂರ ಸರಿಯುವ
ಅದೆಷ್ಟೋ ಬಂಧಗಳು...!!
ಮನದ ಮಾಳಿಗೆಯಲ್ಲಿ
ನೆಲೆಸಿಬಿಟ್ಟಂತೆ...!!
ಆಗಾಗ ಸಹನೆ ಮೀರಿ
ಕಂಗಳಲಿ ಸೋರುವಂತೆ...!!

ಸೋರಿಹೋದರು ಉಳಿದುಬಿಡುವ
ಕಡೆಯ ಚೂರು...!!
ಸೋತು ಹೋದರೂ ನಿತ್ಯ ಚಿಗುರುವ
ಉಳಿದ ಬೇರು..!!

ಸರಿದಾರಿಯಲ್ಲೂ ದಿಕ್ಕುತಪ್ಪುವ
ಬಾಂಧವ್ಯಗಳು...!!
ಸಲಿಲ ಸ್ಪರ್ಶದಲ್ಲೂ ಸಿಡಿದೇಳುವ
ಬೆಂಕಿ ಕಿಡಿಗಳು...!!

ಸಿಡಿದ ಬೆಂಕಿ ಕಿಡಿಗಳು
ಮನದ ಮಾಳಿಗೆಯನ್ನು
ಸುಟ್ಟು ಬಿಡುವಂತೆ...!!
ವೇದನೆಯ ತಾಪದಲಿ
ಇಲ್ಲಣದ ಕುರುಹು ಸೂರಿನಲ್ಲಿ
ಉಳಿದು ಬಿಡುವಂತೆ...!!

✍️ ಶೋಭಾ ಸಾಗರ್

ಶೋಭಾ ಸಾಗರ್

ಲೇಖಕಿ ಶೋಭಾ ಸಾಗರ ಅವರು ಎಂಬಿಎ ಪದವೀಧರರು. ಇಂಗ್ಲೆಂಡ್‌ನ ಒಂದು ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದಾರೆ. ಗಾಯನ ಮತ್ತು ಸಂಗೀತ ಸಂಯೋಜನೆ, ಸಾಹಿತ್ಯ, ಕರ್ನಾಟಕ ಮೂಲ ಜನಪದ ಗೀತೆಗಳು ಹಾಗೂ ನೃತ್ಯಗಳ ಸಂಶೋಧನೆ ಅವರ ಆಸಕ್ತಿ ಕ್ಷೇತ್ರಗಳು. ಇಂಗ್ಲೆಡ್ ನ ಕನ್ನಡ ಸಂಘ ದಲ್ಲಿ ‘ಕನ್ನಡ ಕಲಿ’ ಎನ್ನುವ ಉಪಕ್ರಮದಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ. 

ಕೃತಿಗಳು: ಕಡಲ ತೀರದ ಮೌನ

More About Author