Poem

ಮಗಳೇ...!

ಇಲ್ಲೊಂದು ಬೀದಿಯಲಿ ಕಾಣೆಯಾಗಿದೆ ಮಗು ರಾತ್ರಿ
ಗೊತ್ತಿಲ್ಲ ದಾರಿ; ಮರಳಿಲ್ಲ ಕೂಸು.
ಅಲ್ಲೊಂದು ಬೀದಿಯಲಿ ಹೊರಟಿತ್ತು ಶವ ಯಾತ್ರೆ
ಮುದ್ದಾದ ಕೂಸು; ಮಾಗಿಲ್ಲ ಮನಸು.‌

ಮನೆಗೊಬ್ಬಳೆ ಮಗಳು‌ ಹೆಗಲಾಗಿ ಬೆಳೆದಾಳ
ಹೆತ್ತವರ ಪ್ರೀತಿಯಲಿ ಮಗುವಾಗಿ.
ಬೆಳದಿಂಗಳ ರಾತ್ರಿಯಲಿ ಚೆಂದಿರನ ಕರೆದಾಳ
ಒಬ್ಬೊಬ್ಬಳೆ ಮಾತಾಡಿ ಹಗುರಾಗಿ.

ಬೆಳಗೆದ್ದು ಮನೆಮುಂದೆ ರಂಗೋಲಿ ಇಡುತಾಳ
ಒಂದೊಂದು ರಂಗೋಲಿ ಬಾಳ ಚೆಂದ.
ಕೂಗುತ್ತಾ ಕರೆಯುತ್ತಾ ಅವಳಮ್ಮ ಬರುತಾಳ
ಎದೆಗಪ್ಪಿ ಅನ್ನುತಾಳ ಮುದ್ದು ಕಂದ.

ಮನೆಯೊಳಗೆ ಮರಣದ ಕರೆಯೋಲೆ ಬರುವಾಗ
ಲಂಗದ ಹುಡಗಿ ಅಂಗಳದಿ ಮಲಗಿತ್ತು.
ತಡ ರಾತ್ರಿ ಕತ್ತಲೊಳಗೆ ಯಮಂಕಿಂಕರು ಬಂದಾಗ
ಚೆಂದದ ಹುಡುಗಿ ನಿದ್ದೆಯಲ್ಲೂ ನಗುತಿತ್ತು.


ಮನೆಯಲ್ಲಿ ಮಗಳಿಲ್ಲ ಅಂಗಳದಿ ರಂಗೋಲಿ ಇಲ್ಲ
ಹುಡುಕಿದರೂ ಸಿಗಲಿಲ್ಲ ಮುದ್ದು ಮಗಳು.
ಕಾರ್ಗತ್ತಲ ಕಾಮುಕರ ಕೊನೆ ಬೀದಿಯ ಕೋಣೆಯಲಿ
ಕೊಸರಾಡುತಲವಳು ಕೊನೆಗೂ ಸತ್ತಳು.

ಹೆತ್ತವರು ಹೊತ್ತವರು ಹೊರಳಾಡಿ ಅಳುತಿರಲು
ಬರಬಾರದೆ ಮಗಳು ಮತ್ತೊಮ್ಮೆ ಮಡಿಲಲ್ಲಿ.
ಅಂಗಳದಲಿ ಕಸಗುಡಿಸಿ ರಂಗೋಲಿ ಚುಕ್ಕಿಯಲೂ
ಬಿಡಿಸಬಾರದೆ ಕೊಂದವರ ಮುಖ ಚಿತ್ರದಲಿ.


ರವಿ ಶಿವರಾಯಗೊಳ.

ರವಿ ಶಿವರಾಯಗೊಳ

ರವಿ ಶಿವರಾಯಗೊಳ ಅವರು ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಭೀವರ್ಗಿ ಎಂಬ ಪುಟ್ಟ ಹಳ್ಳಿಯವರು. ಡಿಪ್ಲೋಮಾ ವಿದ್ಯಾರ್ಹತೆಯನ್ನು ಪಡೆದಿರುವ ಅವರು ಸದ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರ ಅವರ ಆಸಕ್ತಿಯಾಗಿದೆ. ದಿನಪತ್ರಿಕೆಗಳಾದ ವಿಶ್ವವಾಣಿ, ಕರ್ಮವೀರ, ಉದಯವಾಣಿ, ಓ ಮನಸೇ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕವಿತೆ, ಕವನ, ಕಥೆ, ಲೇಖನ ಪ್ರಕಟಗೊಂಡಿರುತ್ತದೆ.

More About Author