Poem

ಮಧು ಬಟ್ಟಲ ಸಾಲು

ಸಾಲು ಬಟ್ಟಲುಗಳಿಗೆ ತುಂಬುತಿರುವಳು ಸಾಕಿ
ತುಂಬಿದಂತೆಲ್ಲ ಬರಿದಾಗುತಿದೆ ಹೂಜಿ;
ಮುಧು ಮುಗಿವ ಚಿಂತೆ ಇಲ್ಲ. ಎಲ್ಲ
ಋತುಗಳಲು ಮಧುಶಾಲೆ ಉಗ್ರಾಣ ಭರ್ತಿ.

ಕುಡಿದು ಉಳಿಸಿದ ಮದಿರೆ ಮರಳದು ಪಾತ್ರೆಗೆ,
ಬಟ್ಟಲು ತೊಳೆದಂತೆ ತೊಳೆಯಲಾಗು ಮದಿರೆ.
ಕುಡಿವುದಷ್ಟೆಂದು ತಿಳಿಯದಿರೆ ಆಗುವುದು ಹೀಗೆ
ಮದಿರೆ ತೊಳೆವುದನರಿತವ ಇರಬೇಕು ಒಳಗೆ.

ಬಟ್ಟಲು ತುಂಬಿ ಉಳಿದದ್ದು ಸೀಸೆಯಲ್ಲಿ,
ಬಾಗಿಲಗೆ ಬಂದವನು ಹೇೀಳಿದ : ಸುಂಕದ
ಕಟ್ಟೆಯಲಿ ಸುಂಕ ಪಾತಿಸಿ ಕಿಸೆ ಪೂರ ಖಾಲಿ.
ಕೊಡು ಉದ್ದರಿಗೆ ಒಂದು ಬಟ್ಟಲು ಮಧು.

ಹೂದೋಟದ ನಡುವೆ ಹಾದು ಹೋಗುವ ಹಾದಿ,
ಪರಿಮಳದ ತಂಗಾಳಿ, ನಿಧಾನಿಸುವುದು ಹೆಜ್ಜೆ.
ಕುಡಿದು ಹೋಗುವ ಮಂದಿ ಹೇಳುವರು :
ಸಾವಕಾಶದಿ ಹೋಗು ರಜೆ ಇಲ್ಲ ಮಧುಶಾಲೆಗೆ.

ಗುಟುಕು ಗುಟುಕಿಗೂ ತನ್ನಲ್ಲೆ ಮೆಲುಮಾತು,
ಕುಡಿಯದೆ ನಿಮಿಷದೆಣ ಕೆಯಲಿ ಇದ್ದವ
ಮದಿರೆಗಷ್ಟೇ ಕೇಳಿಸುವಂತೆ ಕೇಳಿದ,
ನಮ್ಮ ಅನುಬಂಧವೆಷ್ಟು ಜನ್ಮದ್ದು ಪ್ರಿಯೆ?

ಕುಡಿದ ಬಟ್ಟಲು ಕೆಳಗಿಟ್ಟು ಕೇಳಿದ : ಸಾಕೀ
ಮಧುವಿಗರ್ಥ ತಿಳಿದು ಕೊಡುವೆಯೋ,
ತಿಳಿದುಕೊಳ್ಳಲು ತುಂಬಿ ಕೊಡುವೆಯೊ?
ಅಮಲಾಯಿತು ಮಧು ಪ್ರಶ್ನೆ ಉಳಿಸಿ ನಾಳೆಗೆ.

ಕೇಳು ಸಾಕಿ, ಮುಜಾವಿನ ಕನಸು :
ಸಪ್ತಸಾರದಾಚೆ ಮಧುಶಾಲೆ ಕಟ್ಟಿ
ನಿನ್ನ ಒಡತಿಯ ಮಾಡಿ, ಇಳೆಗೆ
ಮಧು ಕೊಟ್ಟವನ ಹೆಸರು ಇಟ್ಟಿದ್ದೆ.

ಹೋಗುವಾಗ ಮನೆಗೆ ಹತ್ತಿರವೆನಿಸುವ ಮಧುಶಾಲೆ
ಹಿಂದಿರುಗುವಾಗ ದೂರವೆನಿಸಿದ್ದು ಹೇಗೆ?
ಯಾರೋ ಸರಿಸಿರಬೇಕು ಮನೆಯನ್ನು ದೂರ,
ಇಲ್ಲವಾದರೆ ಈ ಮಧುಶಾಲೆಯನ್ನೇ.

ಮಧು ತಾನೆ ಎಂಬ ಉದಾಸೀನಕ್ಕೆ
ಅದು ಮುನಿಯಿತೆ ಸಾಕೀ?
ಬಟ್ಟಲಲ್ಲಿ ತಣ್ಣಗಿದ್ದುದು ಕುಡಿದೊಡನೆ
ಜ್ವಾಲೆಯಾಯಿತು ಒಳಗೆ!

ಶ್ರಾವಣ ಮನದ ಸಾಕಿ ಆಡುವ ಮಾತು
ಮಾತಿನಲಿ ಹುಡುಕುತಿದ್ದ ವಿದ್ವಾಂಸ
ಕುಡಿಯುವುದ ಬಿಟ್ಟ ಶುದ್ಧ ವ್ಯಾಕರಣ.
ಕುಡಿಯುತ್ತ ಕವಿ ಅಂದ, ಮಾತು ಭಾಮಿನಿ ಛಂದ.

ಮಧುಶಾಲೆ ದಾರಿ ಕಾಣದವರ ಕಂಡು
ಭೈರಾಗಿ ಹಾಡಿದ ಮೀಟಿ ಏಕತಾರಿ,
‘ಮಧು ಬೇಕೆನೆದೆ ಕಾಣ ಸದು ದಾರಿ
ಶಂಕಿಸದೆ ನಡೆ, ಇರುವುದೊಂದೇ ದಾರಿ.’

ಮಧುಗೀತೆ ಬರೆಯೆ ಮಧುಶಾಲೆಗೆ ಬರುವೆ
ಸುಡುವುದದನು ಕುಡಿದ ಮಧುಜ್ವಾಲೆ
ಸುಡಂದು ಬರೆವೆ, ಮಧುಶಾಲೆಯಲ್ಲಿ
ಹಾಡುವ ಮೊದಲಿಗಳು ನೀನೆ ಸಾಕೀ.

ಊರೂರು ಅಲೆದು ಬರುವ ಪಕೀರನಿಗೆ
ಮೀಸಲಿರಿಸುವಳು ಸಾಕಿ ಬಟ್ಟಲು ಮಧು
ಅಂತೆಯೇ ಮಧುಶಾಲೆ ಬಾಗಿಲಲಿ ಗೋಲಕ
ಆ ಅಲೆಮಾರಿಗೆ ಕೊಡಿಸಲೆಂದು ಅತ್ತರು.

ಮಧುವಿನೆದೆಯಲಿರುವ ಅಮಲು
ಬರುವುದೊಳಗೆ ಅರಳಲೆಂದು.
ಅರಳಿದಾಗ ಉಮರ ಬರೆದ ರುಬಾಯತು
ಕುಡಿಸಿದರು ಡಿವಿಜಿ ಅದರ ಕದ ತೆರೆದು.

ಸ. ರಘುನಾಥ

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು.

1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ನೀಡಿಕೆ. ಆಪ್ತ ಸಮಾಮಾಲೋಚನೆ:ಉಚಿತ ಸಲಹೆ, ಸಹಕಾರ. 2006ರಲ್ಲಿ ಹಸಿರುಹೊನ್ನು ಬಳಗ ಸ್ಥಾಪನೆ: ಗಿಡಮರ ಸಂರಕ್ಷಣೆ. ಗಿಡಮೂಲಿಕೆ  ಸಂಗ್ರಹ, ಗಿಡ ನೆಡುವುದು, ನೀರಾವರಿ ಹೋರಾಟ. ಅದರ ಸ್ಥಾಪಕ ಕಾರ್ಯದರ್ಶಿ. 2015 ರಲ್ಲಿ ಬೊಮ್ಮಲಾಟಪರುದ ತೊಗಲುಗೊಂಬೆ ಕಲಾವಿದರ ಸಂಘಟನೆ. ಶಿಳ್ಳೇಕ್ಯಾತ ಬಂಗಾರಕ್ಕ ತೊಗಲುಗೊಂಬೆ ಕಲಾ ಸಂಘ ಸ್ಥಾಪನೆ. ಅದರ ಅಧ್ಯಕ್ಷತೆ. 2017ರಲ್ಲಿ ಅಲೆಮಾರಿ ನಿರಾಶ್ರಿತರಾಗಿ ನಮ್ಮ ಮಕ್ಕಳು-ಹಸಿರು ಹೊನ್ನೂರು ಗ್ರಾಮ ನಿರ್ಮಾಣ. 22 ಮಂದಿಗೆ ವಸತಿ, ಶೀಕ್ಷಣ, ಉದ್ಯೋಗ ವ್ಯವಸ್ಥೆ. ಇವೆಲ್ಲೂ ಸ ರಘುನಾಥ ಅವರ ಸಮಾಜಮುಖಿ ಕಾರ್ಯಗಳಿಗೆ ಕೆಲವು ಉದಾಹರಣೆಗಳಷ್ಟೆ.

ಸ. ರಘುನಾಥ ಅವರು ಈ ವರೆಗೂ 8 ಕವನ ಸಂಕಲನಗಳು, 3 ಸಣ್ಣ ಕಥೆಗಳು,  9ಲೇಖನ/ವಿಮರ್ಶೆಗಳ ಕೃತಿ, 3ಮಕ್ಕಳ ಸಾಹಿತ್ಯ, 3ಜಾನಪದ ಸಂಗ್ರಹ ಕೃತಿ, 19 ಅನುವಾದಗಳು , 15ಸಂಪಾದನ ಕೃತಿಗಳನ್ನು ಪ್ರಕಟಿಸಿದ್ದಾರೆ.

More About Author