Poem

ಖಾಲಿಯಾಗಬೇಕು

ಬಯಲಂತೆ ಬಟಾ ಬಯಲಾಗಬೇಕು
ಮಾತುಗಳು ಹರಿಯಲಿ ಸರಾಗವಾಗಿ
ಬಯಲಲಿ ಅಲೆವ ಗಾಳಿಯಂತೆ
ಸುತ್ತಿ ಬಳಸದೆ
ಒಳಗೊಂದು ಹೊರಗೊಂದಾಗದೆ
ಖಾಲಿಯಾಗಬೇಕು ಬಯಲಿನಂತೆ

ವಿಶಾಲವಾಗಬೇಕು
ನೀಲಾಗಸದಂತೆ
ಮೋಡವೆಂಬ ದುಗುಡವನ್ನೆಲ್ಲಾ
ಮಳೆಯೆಂಬ ಕಣ್ಣೀರಲಿ ಹೊರಹಾಕಿ
ಸ್ವಚ್ಛಂದ ಬಾನಾಗಬೇಕು
ಮನವೆಂಬ ಹಕ್ಕಿ ರೆಕ್ಕೆಬಿಚ್ಚಿ ಹಾರಲು

ಹದವಾಗಬೇಕು ನೆಲದಂತೆ
ಬಿದ್ದ ಬೀಜವನ್ನೆಲ್ಲ
ಮರವನ್ನಾಗಿಸುವ ಮಣ್ಣಾಗಿ
ಅನ್ನದಾತನಿಗೆ ಕಣ್ಣಾಗಿ
ಅನುಭವವ ಪಡೆದು ಹಣ್ಣಾಗಬೇಕು

ನೀರಾಗಬೇಕು
ಒರಟನ್ನೂ ನುಣುಪಾಗಿಸಿ
ಅಡೆ ತಡೆಗಳೆಲ್ಲವ ಮೀರಿ ಹರಿವಂತೆ
ಆಗಾಗ ಭೋರ್ಗರೆವ ಜಲಪಾತದಂತೆ
ಕಾದ ಭೂಮಿಯ ತಂಪಾಗಿಸುವ
ಮಳೆಯ ಹನಿಯಂತೆ

ಹಾಗಾಗಬೇಕು
ಹೀಗಾಗಬೇಕು
ಅವರಂತೆ ಇವರಂತೆ ಎಲ್ಲರಂತೆ
ಕೊನೆಗೊಮ್ಮೆ ಉಳಿಯಬೇಕು
ನಾನು ನಾನಾಗಿಯೇ
ಜಗದಲಿ ಉಳಿಯಲಿ ಒಳಿತೆಂಬುದು ಒಂದೇ

ರಶ್ಮಿ ಶಮಂತ್
ಶಿವಮೊಗ್ಗ

ವಿಡಿಯೋ
ವಿಡಿಯೋ

ರಶ್ಮಿ ಶಮಂತ್

ರಶ್ಮಿ ಶಮಂತ್ ಅವರು ಮೂಲತಃ ಶಿವಮೊಗ್ಗದವರು. ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಅವರು ಕವನಗಳ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

More About Author