ಕತೆಗಾರ ಕುಮಾರ ಬೇಂದ್ರೆ ಅವರದ್ದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮ. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಪಡೆದಿದ್ದಾರೆ. ಇವರ ’ಜೋಗವ್ವ' ಕಾದಂಬರಿಗೆ 2006ರ ಅಮೆರಿಕಾದ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ' ಕಾದಂಬರಿ ಪುರಸ್ಕಾರ ದೊರತಿದೆ. ಅವರ ‘ನಿರ್ವಾಣ' ಕತಾ ಸಂಕಲನಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನಿಂದ 'ವಾಸುದೇವಾ ಚಾರ್ಯ ದತ್ತಿ' ಪ್ರಶಸ್ತಿ, 'ಋಣ' ನಾಟಕಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನಿಂದ 'ಕಾಕೋಳು ಸರೋಜಮ್ಮ ದತ್ತಿ' ಬಹುಮಾನ ಮುಂತಾದ ಗೌರವ ಪುರಸ್ಕಾರಗಳು ಅವರಿಗೆ ಸಂದಿವೆ.ಅವರ ‘ಕೆಂಪು ಚೇಳಿನ ನಿಗೂಢ ಹುತ್ತ’ ಕತೆ ಇಲ್ಲಿದೆ.
ಸುಧಾಕರ ಬೆಂಗಳೂರಿನಿಂದ ಹಿಂದಿರುಗಿ ಒಂದು ದಿನ ಕಳೆದಿತ್ತಷ್ಟೆ. ಏನೋ ಅಂದುಕೊಂಡು ಹೋದರೆ ಇನ್ನೇನೊ ಆಗಿ, ಅದರಿಂದ ಅಪೂರ್ವ ಜಗತ್ತಿನ ವಿಚಿತ್ರ ಅನುಭವೊಂದು ತನ್ನದಾಗಿ ಅವನು ಇನ್ನೂ ಅದೇ ಗುಂಗಿನಲ್ಲಿ ತೇಲಾಡುತ್ತಿದ್ದ. ಮತ್ತೆ ಮತ್ತೆ ಅದನ್ನೇ ನೆನೆದು `ಅದು ತನ್ನಿಂದ ಸಾಧ್ಯವಾಯಿತೆ?’ ಎಂದುಕೊಂಡು ಆ ಕ್ಷಣಗಳ ಅನುಭೂತಿಯನ್ನು ಮೈದುಂಬಿಕೊಳ್ಳತೊಡಗಿದ್ದ. ಅದಕ್ಕೆ ಕಾರಣವಾಗಿದ್ದ ಸ್ವಪ್ನಾಳ ಮಧುರ ಧ್ವನಿಯನ್ನು ಆ ಹೊತ್ತು ಆಲಿಸಬೇಕೆನಿತು. ಸಂಜೆ ಸಮಯ ಮನೆ ಅಂಗಳದ ಏಕಾಂತದಲ್ಲಿದ್ದ ಅವನು ಸ್ವಪ್ನಾಳಿಗೆ ಫೋನ್ ಕರೆ ಮಾಡಿದ. ಅವಳು ತಕ್ಷಣ ಕರೆ ಸ್ವೀಕರಿಸಿ `ಹಲೋ..’ ಎಂದಳು.
`ಫೋನಿನೊಳಗ ಹಿಂಗ ನಿನ್ನ ಧ್ವನಿ ಕೇಳಿಸಿಕೊಳ್ಳೊದ ಒಂಥರಾ ಖುಷಿ. ನೀನು ನನ್ನವ್ಳು ಅನ್ನೋದನ್ನ ನೆನೆಸಿಕೊಂಡ್ರನ ಮೈ ಝುಂ ಅಂತೈತಿ ಸ್ವಪ್ನಾ. ಆ ಗುಂಗಿನಿಂದ ಇನ್ನೂ ಹೊರಗ ಬರಾಕಾಗವಲ್ದು. ಯಾವ ಕೆಲಸದಾಗೂ ಆಸಕ್ತಿ ಇಲ್ಲದಂಗಾಗೈತಿ’ ಎಂದು ಅವಳನ್ನು ರಮಿಸಿದ.
`ಸುಧಾಕರ..ಜೀವನದೊಳಗ ಇದೊಂದು ಆಯ್ಕೆ ಮಾತ್ರ ಅನ್ನೋದು ನಿಮಗ ಗೊತ್ತಿರಲಿ. ಇದೇ ಜೀವನ ಅನ್ಕೊಂಡು ನಿಮ್ಮ ಬದುಕಿನ ಇತರ ಅವಕಾಶಗಳನ್ನ ಕಳಕೊಳ್ಳೋ ಹಾಗೆ ಮಾಡ್ಕೊಬೇಡಿ. ನಾನು ನಿಮಗೆ ಸಲಹೆ ಕೊಡುವಷ್ಟೇನೂ ದೊಡ್ಡವಳಲ್ಲ. ಕನಸುಗಳು ನಮಗೆ ಮಧುರ ಭಾವನೆಗಳನ್ನ ಕೊಡತವೆ. ಆ ಕನಸು ಈಡೇರಿದಾಗ ಅದೇ ಭಾವನೆಗಳು ಇನ್ನೂ ಸಿಹಿಯಾಗತವೆ. ಆದ್ರೆ ಬದುಕನ್ನ ಅರ್ಥ ಮಾಡಿಕೊಳ್ಳೊದಕ್ಕೆ ವಾಸ್ತವದ ಅರಿವೂ ನಮಗಿರಬೇಕಾಗತದೆ. ನಾನು ನಿಮ್ಮವಳೇ ಅನ್ನೋ ಭಾವ ಇರಲಿ. ಆದ್ರೆ ವಾಸ್ತವ ಏನೇ ಇದ್ರೂ ಅದನ್ನ ಸ್ವೀಕಾರ ಮಾಡೋ ಮನಸ್ಥಿತಿನ ಉಳಿಸಿಕೊಳ್ಳಿ. ಇಲ್ಲದಿದ್ರೆ ನಿಮಗೇ ಕಷ್ಟ ಆಗಬಹುದು’ ಎಂದು ಅವಳು ಆಪ್ತವಾಗಿಯೇ ಹೇಳಿದಳು.
`ನೀನೇನೋ ಒಗಟೊಗಟಾಗಿ ಮಾತಾಡ್ತಿದ್ದಿ ಸ್ವಪ್ನಾ. ನನಗ ಅದೆಲ್ಲಾ ಅರ್ಥ ಆಗಲಿಲ್ಲಾ ಬಿಡು. ಒಂದಾಗಿರೋ ಎರಡು ಮನಸ್ಸುಗಳ ಸುಖಾ ಎಂಥಾ ಅದ್ಭುತ ಅನ್ನೋದಷ್ಟ ಈ ಹೊತ್ತಿನ್ಯಾಗ ನನಗ ತಿಳದಿರೊ ಸತ್ಯ. ಅದು ನಿನ್ನಿಂದ ಸಿಕ್ತು ಅನ್ನೊದ ಖುಷಿಯ ವಿಚಾರ. ನಿನ್ನ ಧ್ವನಿ ಕೇಳಿಸಿಕೊಬೇಕು ಅನಿಸದಾಗೆಲ್ಲ ನೀನು ಹಿಂಗ ಮಾತಾಡಿದ್ರ ಸಾಕು. ಮತ್ತ ನಿನ್ನ ನೋಡಬೇಕು ಅನಿಸಿದಾಗ ಬರ್ತಿನಿ’
`ನೀವು ಸುಮ್ನೆ ಎಮೋಷನಲ್ ಆಗಿ ಮಾತಾಡ್ತಿರಿ. ನಿಮ್ಮ ಹಂಬಲ ಈಡೇರಿದ ಮೇಲೂ ಇಷ್ಟೊಂದು ಮನಸಿಗೆ ಹಚ್ಕೊಳ್ಳೋದು ಒಳ್ಳೆದಲ್ಲಾ. ನಾನು ಹೀಗೆ ಹೇಳ್ತಿದ್ದೀನಿ ಅಂತ ಯೋಚಿಸಬೇಡಿ. ಜೀವನದಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಹೆಚ್ಚು ಯೋಚಿಸಬೇಕು. ಅದರಿಂದ ಹೊಸ ಅನುಭವ, ಬೇರೆ ಬೇರೆ ಆಯಾಮಗಳನ್ನ ನೋಡಬಹುದು’
`ನೀನೇನ ಹೇಳು, ನಿನ್ನ ಹೊರತಾದ ಬದುಕನ್ನ ಕಲ್ಪಿಸಿಕೊಳ್ಳೊದು ನನಗ ಸಾಧ್ಯನ ಇಲ್ಲ ಸ್ವಪ್ನಾ. ನೀನು ಅದೇನು ಮೋಡಿ ಮಾಡಿದಿಯೋ ಏನೊ’ ಎಂದು ನಕ್ಕ. ಅವಳೂ ನಕ್ಕಳು. ಬಳಿಕ `ಸರಿ ನನಗೀಗ ಬೇರೆ ಕೆಲಸ ಇದೆ. ಮತ್ತೆ ಸಿಗತೀನಿ.. ಬೈ’ ಎಂದು ಫೋನ್ ಬಂದ್ ಮಾಡಿದಳು. ಅವಳ ಮಾತು ನಿಂತ ಬಳಿಕವೂ ಅವನು ಅದನ್ನೇ ಯೋಚಿಸುತ್ತ ಇದ್ದುಬಿಟ್ಟ.
ಇದರ ಬಳಿಕ, ಸ್ವಪ್ನಾ ಎಂಟತ್ತು ದಿನಗಳ ತನಕ ವಾಟ್ಸ್‍ಆ್ಯಪ್‍ನಲ್ಲಿ ಸಂದೇಶಗಳ ಮೂಲಕ ಸುಧಾಕರನ ಸಂಪರ್ಕದಲ್ಲಿದ್ದಳು. ಅವನು ಏನೇ ಹೇಳಿದರೂ ಅದಕ್ಕೆ ಸಲುಗೆಯಿಂದ ಪ್ರತಿಕ್ರಿಯಿಸಿದಳು. ರಾತ್ರೋರಾತ್ರಿ ನಡೆಯುವ ಮಾತು, ಸಂದೇಶಗಳು ಅವನಿಗೆ ಹುಚ್ಚು ಹಿಡಿಸುತ್ತಿದ್ದವು. ಹೀಗಿರುವಾಗ ಒಂದು ದಿನ ಇದ್ದಕ್ಕಿದ್ದಂತೆ ಸ್ವಪ್ನಾಳ ವಾಟ್ಸ್‍ಆ್ಯಪ್ ಸ್ತಬ್ಧಗೊಂಡಿತು. `ಏನಾದ್ರೂ ಮುಖ್ಯವಾದ ಕೆಲಸದಲ್ಲಿ ತೊಡಗಿರಬಹುದು. ಎರಡು ದಿನ ಬಿಟ್ಟು ಪ್ರತಿಕ್ರಿಯಿಸಬಹುದು’ ಎಂದು ಅವನು ಸಮಾಧಾನ ಮಾಡಿಕೊಂಡು ಸುಮ್ಮನಿದ್ದ. ಆದರೆ ವಾರ ಕಳೆದರೂ ಅವಳಿಂದ ಪ್ರತಿಕ್ರಿಯೆ ಬರಲಿಲ್ಲ. ಸುಧಾಕರನಿಗೆ ತಳಮಳ ಶುರುವಾಯಿತು.
ಒಂದೆರಡು ಬಾರಿ ಫೋನ್ ಕರೆ ಮಾಡಿದಾಗ `ಈ ದೂರವಾಣಿ ಸಂಖ್ಯೆ ವ್ಯಾಪ್ತಿ ಪ್ರದೇಶದ ಹೊರಗಿದೆ. ಇನ್ನೊಮ್ಮೆ ಪ್ರಯತ್ನಿಸಿ' ಎಂದು ಧ್ವನಿ ಬಂದಿತು. ಹೀಗೆಲ್ಲ ಆಗುತ್ತಿರುವುದರ ಹಿನ್ನೆಲೆ ಏನೆಂಬುದನ್ನು ಅವನಿಗೆ ಊಹಿಸಲಾಗಲಿಲ್ಲ. ಒಳ ಒಳಗೇ ಚಡಪಡಿಸಿದ. ಹೇಳಿಕೊಳ್ಳಲೂ ಆಗದ, ಸುಮ್ಮನಿರಲೂ ಆಗದ ಸ್ಥಿತಿಯಲ್ಲಿದ್ದ ಅವನು ಒಂದು ದಿನ ಹೆಂಡತಿ ಸೌಮ್ಯಳ ಮುಂದೆ ಈ ವಿಷಯ ಹೇಳಿ ತನ್ನ ಖಾಲಿತನ ತೋಡಿಕೊಂಡ. ಅವಳು ಒಗಟೊಗಟಾಗಿ ಮಾತನಾಡಿ, ಕಡೆಗೆ ಸಮಾಧಾನಪಡಿಸಿದಳು.
ಸ್ವಪ್ನಾಳೊಂದಿಗೆ ಸಂಪರ್ಕ ಸಾಧ್ಯವಾಗದೇ ಒಂದು ತಿಂಗಳೂ ಕಳೆಯಿತು. ಒಂದು ದಿನ ಅನಿರೀಕ್ಷಿತವಾಗಿ ಸ್ವಪ್ನಾ `ಹಾಯ್ ಸುಧಾಕರ... ಗುಡ್ ಮಾರ್ನಿಂಗ್' ಎಂದು ವಾಟ್ಸ್‍ಆ್ಯಪ್‍ನಲ್ಲಿ ಸಂದೇಶ ಕಳಿಸಿದಳು. ಅದನ್ನು ನೋಡಿ ಅವನಿಗೆ ಅಪರಿಮಿತ ಖುಷಿಯಾಗಿ ಸೌಮ್ಯಳಿಗೆ ತೋರಿಸಿ ವಿಚಿತ್ರ ಆನಂದ ಅನುಭವಿಸಿದ.
ಒಂದು ತಿಂಗಳ ಕಾಲ ತನ್ನ ಸಂಪರ್ಕಕ್ಕೆ ಸಿಗದಿರುವುದಕ್ಕೆ ಕಾರಣ ಕೇಳಿದರೆ, `ಮಗನನ್ನ ಪರೀಕ್ಷೆ ಸಲುವಾಗಿ ತಯಾರಿ ಮಾಡಬೇಕಿತ್ತು. ಅದಕ್ಕೆ ಒಂದು ತಿಂಗಳು ನಮ್ಮೂರಲ್ಲಿದ್ದೆ. ಅದೇ ಕಾರಣಕ್ಕೆ ಫೋನ್ ಬಂದ್ ಮಾಡಿಟ್ಟಿದ್ದೆ. ಪರೀಕ್ಷೆ ಮುಗೀತು. ಈಗ ಮದುವೆ ಸೀಜನ್ ಶುರುವಾಗತದಲ್ವಾ ಅದಕೆ ಮೂರು ತಿಂಗಳು ನನಗೆ ಕೆಲಸ ಜಾಸ್ತಿ ಇರತದೆ. ಅದಕೆ ನಿನ್ನೆ ರಾತ್ರಿ ಊರಿಂದ ಬೆಂಗಳೂರಿಗೆ ಬಂದೆ. ಈಗ ಪಿಜಿಯಲ್ಲಿರೋದು ಬಿಟ್ಟು ಪಾರ್ಲರ್ ಹತ್ರನೆ ಮನೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದೀನಿ' ಎಂದು ತಿಳಿಸಿದಳು. ಹಾಗೆ ವಾಟ್ಸ್‍ಆ್ಯಪ್‍ನಲ್ಲಿಯೇ ಮಾತುಗಳಾದವು. ಅವನ ಮನಸ್ಸಿಗೇನೋ ಸಮಾಧಾನವಾದಂತಾಯಿತು.
ಕೆಲವು ದಿನಗಳು ಕಳೆದವು. ಅವಳನ್ನು ಹುಡುಕಿಕೊಂಡು ಹೋದಾಗ ಎಷ್ಟೊಂದು ಸಲುಗೆ ತೋರಿದ್ದ ಸ್ವಪ್ನಾ ಈಗ ದಿನಗಳು ಕಳೆದಂತೆ ತನ್ನ ಮಾತು, ಭಾವನೆಗಳಿಗೆ ಹೆಚ್ಚೇನೂ ಪ್ರತಿಯಿಸಿದೇ ನಿರ್ಲಿಪ್ತವಾಗಿರುತ್ತಿದ್ದಾಳೆ ಅನಿಸಿತು. ಅದು ಯಾಕೆಂದು ಅರ್ಥವಾಗದೇ ಅವನಿಗೆ ಒಂಥರಾ ಯಾತನೆಯಾಗುತ್ತಿತ್ತು. `ಅದೊಂದು ರೀತಿಯ ಚೌಕಟ್ಟಿಲ್ಲದ ಸಂಬಂಧ, ಹೆಸರಿಸಲಾಗದ ಸೆಳೆತಕ್ಕೆ ಸಿಲುಕಿದ ದೈಹಿಕ-ಮಾನಸಿಕ ಒಡನಾಟ. ಅದನ್ನು ಹೇಗೆ ತಾನೆ ನಿರ್ದಿಷ್ಟ ಅರ್ಥಕ್ಕೆ ಸೀಮಿತಗೊಳಿಸಲು ಸಾಧ್ಯ. ನಾನು ಅವಳನ್ನು ಪ್ರಶ್ನಿಸುವ ಹಾಗಿಲ್ಲ, ನನಗೆ ಉತ್ತರಿಸುವ ಜರೂರು ಅವಳಿಗಿರುವುದಿಲ್ಲ. ಹುತ್ತದೊಳಗೆ ಹಕ್ಕಿ ಇರಬಹುದೆಂದು ಸುಮ್ಮನೇ ಹುಡುಕುತ್ತ ಹೋಗಿ ಕಣ್ಣು ಮುಚ್ಚಿ ಕೈ ಇಡುವುದು. ಅಲ್ಲಿ ಹಾವು ಕಚ್ಚುತ್ತದೊ, ಚೇಳು ಕಚ್ಚುತ್ತದೋ ಬರುವ ಸಂಕಟವನ್ನೋ ಅಥವಾ ಸಿಗುವ ಸುಖವನ್ನೋ ಅನುಭವಿಸಬೇಕಷ್ಟೇ ಇಲ್ಲಿ’ ಎನ್ನುವಂತಹ ಅನಿಶ್ಚಿತ ಭಾವನೆಗಳ ತಾಕಲಾಟ, ತಳಮಳದಲ್ಲಿ ನಾಲ್ಕು ತಿಂಗಳೇ ಕಳೆದವು. ಅವಳ ವ್ಯಕ್ತಿತ್ವ ಕುರಿತು ಅವನಲ್ಲಿ ವಿಚಿತ್ರ ಕುತೂಹಲ ಮೂಡಿತು. ಹೆಂಡತಿ ಸೌಮ್ಯ ಕೂಡ ಅದಕ್ಕೆ ದನಿಗೂಡಿಸಿ ತನಗೆ ತಿಳಿದ ವಿಚಾರಗಳನ್ನು ಹೇಳುತ್ತಿದ್ದಳು. ಆದರೆ ಯಾವುದನ್ನೂ ಹೀಗೇ ಎಂದು ನಿರ್ಧರಿಸಲಾಗದ ಸ್ಥಿತಿಯಲ್ಲೇ ಸುಧಾಕರ ದಿನಗಳನ್ನು ಕಳೆದ. ನಾಲ್ಕು ತಿಂಗಳ ಬಳಿಕ ಅವರಿಬ್ಬರೂ ಬೆಂಗಳೂರಿಗೆ ಹೋಗುವ ಸಂದರ್ಭ ಒದಗಿ ಬಂದಿತು.
* * *
ಮಳೆಗಾಲವಾಗಿದ್ದರಿಂದ ಬೆಂಗಳೂರಿನಲ್ಲಿ ಮಳೆ ಆಗಾಗ ತುಂತುರುವಾಗಿ ಹನಿಸಿ ರಸ್ತೆಗಳನ್ನು ಹಸಿಯಾಗಿರುವಂತೆ ಮಾಡಿತ್ತು. ಸುಧಾಕರ, ಸೌಮ್ಯ ಬೆಳಗ್ಗೆ ಒಂಬತ್ತು ಗಂಟೆ ಸುಮಾರು ಕಾಮಾಕ್ಷಿ ಪಾಳ್ಯದ ಸಂತೋಶನ ಮನೆಯಲ್ಲಿ ನಾಷ್ಟಾ ಮುಗಿಸಿಕೊಂಡು ತೆರಳಿದ್ದರು. ಎಂಜಿ ರಸ್ತೆಯಲ್ಲಿ ಉದ್ಯೋಗದ ಕಂಪನಿಗೆ ಸಬಂಧಿಸಿದ ಕೆಲಸ ಮುಗಿಸಿಕೊಂಡು, ಮೆಟ್ರೊ ರೈಲಿನಲ್ಲಿ ದೊಡ್ಡಸಂದ್ರ ತಲುಪುವಷ್ಟರಲ್ಲಿ ಸಮಯ ಮಧ್ಯಾಹ್ನದ ಎರಡು ಗಂಟೆ ಸಮೀಸುತ್ತಿತ್ತು.
ಮೆಟ್ರೋ ನಿಲ್ದಾಣದಿಂದ ರಸ್ತೆಗೆ ಇಳಿದಾಗ ಸುಧಾಕರನಿಗೆ ಆ ರಸ್ತೆಗಳೆಲ್ಲಾ ಪರಿಚಿತ ಅನಿಸಿದವು. ಒಮ್ಮೆ ಸುತ್ತಲೂ ನೋಡಿದಾಗ ರಸ್ತೆಯಲ್ಲಿ ದಿಕ್ಕೆಟ್ಟು ಓಡಾಡುವ ವಾಹನಗಳು, ಅವಸರದಿಂದ ಹೆಜ್ಜೆ ಹಾಕುವ ಜನರು, ಅವೇ ದೊಡ್ಡ ದೊಡ್ಡ ಕಟ್ಟಡಗಳು ಕಣ್ಣಿಗೆ ತುಂಬಿದವು. ಸುಮಾರು ಆರು ತಿಂಗಳುಗಳ ಹಿಂದೆ ಸ್ವಪ್ನಾಳನ್ನು ಹುಡುಕಿಕೊಂಡು ಬಂದು ಅದೇ ಪ್ರದೇಶದಲ್ಲಿ ತಾನು ವಿಳಾಸ ಹುಡುಕಿ ಸುತ್ತಾಡಿದ್ದು ನೆನಪಿಗೆ ಬಂದು ನಗು ಬಂದಿತು. ಆದರೀಗ ಆ ಪ್ರದೇಶ ಪರಿಚಿತವೆನಿಸುತ್ತಿದೆ.
ಮುಖ್ಯ ರಸ್ತೆ ದಾಟಿಕೊಂಡು ದೊಡ್ಡಸಂದ್ರ ಕಾಲೋನಿ ಕ್ರಾಸ್ ತಲುಪುವಾಗ ಬಲಬದಿಯ ಮೂಲೆಯಲ್ಲಿ ಮೋಡಗಳನ್ನೇ ಚುಂಬಿಸಲು ಸಿದ್ಧವಾಗಿ ನಿಂತಿರುವಂತೆ ಕಾಣುವ ಶುಭಾ ಅಪಾರ್ಟ್‍ಮೆಂಟ್‍ಅನ್ನು ಕೆಳಗಿಂದ ಮೇಲಿನ ವರೆಗೆ ನೋಡಿದ. ಅದು ಕದಲದೆ ನಿಂತು ಸ್ಥಿತಪ್ರಜ್ಞ ನಗು ತೋರುತ್ತಿರುವಂತೆ ಕಂಡಿತು. ಅದರ ಗೊಡವೆ ತನಗೇಕೆ ಎಂದು ರಸ್ತೆ ನೋಡಿಕೊಂಡು ನಡೆದ. ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಂತೆ ಸ್ವಪ್ನಾಳ `ಬ್ಯೂಟಿ ಸಲೂನ್' ಮಳಿಗೆ ಬಾಗಿಲು ಮುಚ್ಚಿರುವುದು ಕಂಡಿತು.
`ಪಾರ್ಲರ್ ಬಾಗಲಾ ಮುಚ್ಚೇತಿ, ಇಷ್ಟೋತ್ತಿನ್ಯಾಗ ಬಾಗಲಾ ಮುಚುಗೊಂಡು ಎಲ್ಲಿ ಹೋಗ್ಯಾಳೋ ಏನೊ ಅಕಿ' ಎಂದು ಸೌಮ್ಯ ಬೇಸರ ವ್ಯಕ್ತಪಡಿಸಿದಳು.
`ಅಕಿ ಎಲ್ಲಿ ಹೋಗತಾಳ, ಟೈಮು ಎರಡಗಂಟೆ ಆಗೇತಿ. ಬಹುಶಃ ಊಟಕ್ಕ ಮನೀಗೆ ಹೋಗಿರಬಹುದು. ಸೀದಾ ಮನೀಕಡೆಗೆ ಹೋಗಣ. ಅಲ್ಲೂ ಸಿಗದಿದ್ರ ಅಲ್ಲಿಂದ ಫೋನ್ ಮಾಡಿದ್ರ ಆತು' ಎಂದು ಅದೇ ರಸ್ತೆ ಹಿಡಿದು, ರಸ್ತೆಯ ಕೊನೆಗಿರುವ ಅವಳ ಮನೆ ಹುಡುಕಿಕೊಂಡು ನಡೆದರು. ಮನೆಯಿರುವ ಸ್ಥಳವನ್ನು ಅವಳೇ ಅವನಿಗೆ ಹೇಳಿರುವಂತೆ, ಅದರ ಜಾಡು ಹಿಡಿದು ಹೊರಟರು. ಆ ಕಿರಿದಾದ ರಸ್ತೆಯಲ್ಲಿ ಇವರಿಬ್ಬರೂ ಅತ್ತಿತ್ತ ನೋಡುತ್ತ ಹೆಜ್ಜೆ ಹಾಕುತ್ತಿದ್ದರೆ, ಮನೆ ಬಾಗಿಲಲ್ಲಿ, ಅಂಗಳದಲ್ಲಿ ನಿಂತಿದ್ದ ಅಲ್ಲಿನ ಜನರು ಇವರತ್ತಲೇ ದುರುದುಟ್ಟಿಕೊಂಡು ನೋಡಿದರು. ಅಪರಿಚಿತ ಪ್ರಾಣಿಗಳೆರಡು ಆ ಪ್ರದೇಶಕ್ಕೆ ಬಂದಿವೆಯೇನೋ ಎನ್ನುವಂತೆ ಅವರಿಬ್ಬರನ್ನು ಮುಂದೆ ಹೋಗುವ ತನಕವೂ ನೋಡಿದರು.
`ಇದೇನ್ ಸ್ಲಮ್ ಇದ್ದಂಗ ಐತ್ಯಲ್ಲ. ಜನಾ ಎಲ್ಲಾ ರಸ್ತೆದಾಗ ಅದಾರ. ಮನಿ ನೋಡು ಏಟೇಟು ಅದಾವು. ಅದಾರಗ ಜನಾ ಹೆಂಗ ತಂಬಿಕೊಂಡಾರ. ಸಿಕಾನ್ ಸಿಟಿ ಅಂತ ಜಗತ್ತಿನ್ಯಾಗ ಪ್ರಸಿದ್ಧ ಆಗಿರೋ ಬೆಂಗಳೂರಾಗೂ ಇಂಥಾ ಸ್ಲಮ್ ಅದಾವಂದ್ರ ವಿಚಿತ್ರ ಅನಸತೈತಿ. ಇಕಿ ಇಂತಲ್ಲೆ ಬಂದು ಮನಿ ಮಾಡ್ಯಾಕೊಂಡಾಳಲ್ಲ ಏನು ಅನಬೇಕು' ಎಂದ ಸುಧಾಕರ.
`ನೋಡ್ರಿ ನೀವ, ಹೆಂಗಿದ್ದಾಕಿಗೆ ಎಂಥಾ ಪರಿಸ್ಥಿತಿ ಬಂತು ಅಂತ' ಎಂದಳು ಸೌಮ್ಯ.
ಮಾತನಾಡುತ್ತ ಹೆಜ್ಜೆ ಹಾಕಿದರು. ಮನೆ ನಂಬರ್ ಇಲ್ಲ. ಸಣ್ಣ ಕಟ್ಟಡ. ಹಸಿರು ಬಣ್ಣ ಬಳಿಯಲಾಗಿದೆ. ಮನೆ ಮೇಲೆ ಇನ್ನೊಂದು ಮನೆ ಇದೆ. ಚಿಕ್ಕ ಕಂಪೌಂಡಿಗೆ ಗೇಟ್ ಇದೆ... ಒಂದು ಸಂದರ್ಭದಲ್ಲಿ ಅವಳೇ ಹೇಳಿದ ಮಾಹಿತಿಗಳನ್ನು ಸ್ಮರಿಸಿಕೊಂಡ. ಅಂಥದೊಂದು ಕಟ್ಟಡ ಎಡ ಭಾಗದಲ್ಲಿ ಕಂಡಿತು. ಕಂಪೌಡ್ ಗೇಟ್ ತಗೆದು ಒಳಗೆ ಹೋದರು. ಬಾಗಿಲು ಮುಚ್ಚಿತ್ತು.
`ಮನಿಗೆ ಚಾವಿ ಹಾಕಿದಂಗ ಕಾಣತೈತ್ರಿ... ಅಕಿ ಇರಲಿಕ್ಕಿಲ್ಲಾ' ಎಂದಳು ಸೌಮ್ಯ.
`ನೋಡು ನೋಡು, ಬಾಗಲಾ ಬಡಿ ನೋಡನ' ಎಂದ ಸುಧಾಕರ.
ಅವಳು ಹಾಗೇ ಮಾಡಿ `ಅದಾಳ ಅದಾಳ' ಎಂದಳು.
ಅವಳಿಗೆ ಅಚ್ಚರಿ ಮೂಡಿಸಬೇಕು ಎಂದುಕೊಂಡು ಸುಧಾಕರ ಒಂಚೂರು ಪಕ್ಕಕ್ಕೆ ಸರಿದು ನಿಂತ. `ಯಾರು?' ಎಂದು ಬಾಗಿಲು ತಗೆದ ಸ್ವಪ್ನಾಳಿಗೆ ಸೌಮ್ಯಳ ಮುಖವಷ್ಟೆ ಕಂಡಿತು. `ಹೇ... ಸೌಮ್ಯಾ ಒಬ್ಬಳೆ ಬಂದ್ಯಾ ಭಾವನೂ ಬಂದ್ರಾ?' ಎಂದು ಆಶ್ಚರ್ಯದಿಂದ ಕೇಳಿದಳು. ಅದೇ ಹೊತ್ತಿಗೆ ಸುಧಾಕರ ಮುಂದೆ ಬಂದ.
`ಭಾವಾ ನೀವೂ ಬಂದಿದ್ದೀರಾ ಬನ್ನಿ ಬನ್ನಿ ಒಳಗೆ' ಎಂದಳು.
ಇವರಿನ್ನೂ ಒಳಗೆ ಹೆಜ್ಜೆ ಇಟ್ಟಿರಲಿಲ್ಲ. `ಯಾರದು?' ಎಂದು ಒಳಗಿನಿಂದ ಪುರುಷನೊಬ್ಬನ ಧ್ವನಿ ಕೇಳಿಸಿತು!.
`ನಮ್ಮ ಚಿಕ್ಕಪ್ಪನ ಮಗಳು ಮತ್ತೆ ಭಾವ ಬಂದಿದ್ದಾರೆ' ಎಂದಳು ಅತ್ತ ಮುಖ ಮಾಡಿ. ಆ ಧ್ವನಿ ಕೇಳಿ ಒಳಗೆ ಯಾರಿರಬಹುದು ಎಂಬ ಕುತೂಹಲ, ಆತಂಕ ಇವರಿಗೆ! ಮೆಲ್ಲಗೆ ಒಳಗೆ ಹೆಜ್ಜೆ ಇಟ್ಟರು. ಅದೊಂದು ಹತ್ತು-ಹದಿನೈದು ಅಡಿ ಜಾಗದಲ್ಲೇ ನಿರ್ಮಿಸಿದ ಪುಟ್ಟ ಮನೆ. ಅಷ್ಟರಲ್ಲೇ ಸೋಫಾ, ಟೀವಿ, ಫ್ರಿಡ್ಜು ಅದು ಇದು ಎಂದು ಮನೆ ಬಳಕೆ ವಸ್ತುಗಳು ಜಾಗ ತುಂಬಿಕೊಂಡಿದ್ದವು. ಅವುಗಳೆಲ್ಲದರ ನಡುವೆ ಸುಮಾರು ನಲ್ವತ್ತು ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಕುಳಿತಿದ್ದ. ತಲೆ ಮೇಲೆ ಫ್ಯಾನ್ ತಿರುಗುತ್ತಿದ್ದರೂ ಆ ಮಳೆಗಾಲದ ದಿನಗಳಲ್ಲೂ ಯಾಕೋ ಅವನು ಬೆವರುತ್ತಿದ್ದ. ಅವನನ್ನು ನೋಡಿ ಸುಧಾಕರ, ಸೌಮ್ಯ ಗುಮಾನಿಯಿಂದ ಪರಸ್ಪರ ಮುಖ ನೋಡಿಕೊಂಡರು.
`ಇವಳು ಸೌಮ್ಯಾ, ನಮ್ಮ ಚಿಕ್ಕಪ್ಪನ ಮಗಳು. ಸಂತೋಶ ಇದ್ದಾನಲ್ಲ ಅವಳ ತಂಗಿ. ಅವರು ಸುಧಾಕರ್ ಅಂತ ನಮ್ಮ ಭಾವ. ಹುಬ್ಳಿಲಿರ್ತಾರೆ' ಎಂದು ಸ್ವಪ್ನಾ ಅವನಿಗೆ ಪರಿಚಯಿಸಿದಳು. ಇವರು ಸೋಫಾ ಮೇಲೆ ಕುಳಿತರು. ಸ್ವಪ್ನಾ ಕುಡಿಯಲು ನೀರು ತಂದು ಕೊಟ್ಟಳು.
`ನಾನು ಶ್ರೀಕಾಂತ ಅಂತ, ಸ್ವಪ್ನಾಳ ಊರಿನವನು. ಕೆಲಸದ ಮೇಲೆ ಆಗಾಗ ಬೆಂಗಳೂರಿಗೆ ಬರತಿರತಿನಿ' ಎಂದು ಅವನು ತನ್ನ ಬಗ್ಗೆ ತಾನೇ ಹೇಳಿಕೊಂಡ. ಆದರೆ ಆ ಮನೆಯಲ್ಲಿದ್ದ ಹಿನ್ನೆಲೆ ಏನು ಎಂಬುದನ್ನು ಮಾತ್ರ ಹೇಳಲಿಲ್ಲ. ಕೆಲವು ನಿಮಿಷಗಳ ಕಾಲ ಮಾತು ಮುಂದುವರಿದವು. `ಊಟ ಮಾಡಿ' ಎಂದು ಅವರಿಬ್ಬರೂ ಒತ್ತಾಯ ಮಾಡಿದರು. ಊಟ ಮಾಡಿರದಿದ್ದರೂ ಅಲ್ಲಿಯ ಪರಿಸ್ಥಿತಿ ಅರಿತು ಸೌಮ್ಯ `ನಾವು ಊಟ ಮುಗಿಸಿಕೊಂಡೆ ಬಂದೀವಿ' ಎಂದು ಸುಳ್ಳು ಹೇಳಿದರು. `ಇರಲಿ ಇಲ್ಲೊಂದಿಷ್ಟು ಊಟ ಮಾಡಿ. ಇವತ್ತು ಭಾನುವಾರ ಅಲ್ವಾ ಅದಕ್ಕೆ ಮೀನು ಸಾರು ಮಾಡಿದ್ದೀನಿ. ಮೀನು ಪ್ರೈ ಕೂಡ ಮಾಡಿದ್ದೀನಿ' ಎಂದು ಸ್ವಪ್ನಾ ಒತ್ತಾಯ ಮಾಡಿದಳು.
`ಎಂಜಿ ರೋಡ್ ಹತ್ರ ಆಫೀಸ್ ಕೆಲಸ ಮುಗಿಸಿಕೊಂಡು ಊಟ ಮಾಡಿಕೊಂಡೇ ಬಂದ್ವಿ. ಆದ್ರೂ ನೀವು ಮಾಡಿದ ಅಡಗಿ ರುಚಿನೂ ಸ್ವಲ್ಪ ನೋಡಿದ್ರ ಆತು ಬಿಡ್ರಿ' ಎಂದ ಸುಧಾಕರ.
`ಒಹೋ ಅದಕೇನಂತೆ ನೋಡಿ ನೋಡಿ. ನೀವು ಮೊದಲೇ ಫೋನ್ ಮಾಡಿದ್ರೆ ಮಟನ್ ಕೂಡ ತರತಿದ್ದೆ' ಎಂದ ಶ್ರೀಕಾಂತ.
`ಅದೆಲ್ಲಾ ಏನೂ ಬ್ಯಾಡ್ರಿ. ನಮ್ಮಕ್ಕನಿಗೆ ಸರಪ್ರೈಸ್ ಕೊಡನ ಅಂತ ಸಡನ್ನಾಗಿ ಬಂದ್ವಿ. ಇಲ್ಲಿಗೆ ಬರೋದು ಗ್ಯಾರಂಟಿ ಇರಲಿಲ್ಲ. ಇಲ್ಲೇ ಜಾಲಹಳ್ಳಿ ಕ್ರಾಸ್‍ನಲ್ಲಿ ಒಬ್ಬರನ್ನ ಭೇಟಿ ಮಾಡೋದಿತ್ತು. ಇಲ್ಲಿತನ ಬಂದೀವಿ ಅಕ್ಕನಿಗೆ ಭೇಟಿ ಆಗಿ ಹೋದ್ರ ಆತು ಅಂತ ಬಂದ್ವಿ' ಎಂದು ಸಮಜಾಯಿಸಿ ನೀಡಿದಳು ಸೌಮ್ಯ.
`ಪರ್ವಾಗಿಲ್ಲ, ಬಂದಿದ್ದು ಒಳ್ಳೇದಾತು' ಎಂದ ಶ್ರೀಕಾಂತ.
ಇವರಿಬ್ಬರ ಊಟ ಮುಗಿಯಿತು. `ರೂಮಲ್ಲಿ ಸ್ವಲ್ಪ ಹೊತ್ತು ರೆಸ್ಟ್ ಮಾಡು ಅಂತ ಹೇಳು' ಎಂದು ಶ್ರೀಕಾಂತ ಸ್ವಪ್ನಾಳಿಗೆ ಪಿಸುಗುಟ್ಟಿದ. ಅದನ್ನು ಕೇಳಿಸಿಕೊಂಡ ಸುಧಾಕರನಿಗೆ, ಅವರು ಯಾವುದೊ ಚಟುವಟಿಕೆಯನ್ನು ಅರ್ಧಕ್ಕೇ ನಿಲ್ಲಿಸಿದ ಧಾವಂತದಲ್ಲಿರುವಂತೆ ಭಾಸವಾಯಿತು.
`ಬೆಡ್‍ರೂಮಲ್ಲಿ ರೆಸ್ಟ್ ಮಾಡಿ ಇಬ್ಬರೂ' ಎಂದಳು ಸ್ವಪ್ನಾ. ಸುಧಾಕರ, ಸೌಮ್ಯಳ ಮುಖ ನೋಡಿದ. ಅವಳು ಸುಮ್ಮನಾದಳು.
`ಸಂಜೆ ಸ್ವಲ್ಪ ಶಾಫಿಂಗ್ ಮಾಡೋದ ಐತಿ. ಅರ್ಧ ಗಂಟೆ ಮಲಗಿ ರೆಸ್ಟ್ ಮಾಡಿದ್ರ ಫ್ರೆಶ್ ಆಗಬಹುದು' ಎಂದ ಸುಧಾಕರ.
`ಹಾಗೆ ಮಾಡಿ, ಹಾಗೆ ಮಾಡಿ' ಎಂದ ಶ್ರೀಕಾಂತ.
ಇಬ್ಬರೂ ಬೆಡ್ ರೂಮಿಗೆ ಬಂದರು. ಕಾಲು ಚಾಚಿದರೆ ತುಂಬಿಬಿಡುವ ಆ ರೂಮಿನಲ್ಲಿ ಸಣ್ಣ ಮಂಚವಿತ್ತು. ಅದರ ಒಂದು ಬದಿ ಬಟ್ಟೆ, ಹೊದಿಕೆ ಇತ್ಯಾದಿ ತುಂಬಿಕೊಂಡಿದ್ದವು. ಇನ್ನೊಂದು ಬದಿ ಕರ್ಟನ್ ಎಳೆದ ಕಿಟಕಿ. ಸ್ವಪ್ನಾ ಬಂದು ಹಾಸಿಗೆ ಸರಿ ಮಾಡಿ ಕೊಟ್ಟು `ಮಲಗ್ರಿ ಮಲಗ್ರಿ' ಎಂದು ಕಾಳಜಿ ತೋರಿದಳು.
`ಅಕ್ಕಾ ಅವ್ರು ಯಾರು. ಡ್ರಿಂಕ್ ಮಾಡಿರೋತರಾ ಇದೆಯಲ್ಲ' ಎಂದು ಕೇಳಿದಳು ಸೌಮ್ಯ.
`ನಮ್ಮೂರವ್ರೆ ಅವ್ರು. ಮೊದಲು ಇದೇ ಮನೇಲಿ ಇರತಿದ್ರು. ಮನೆ ಇನ್ನೂ ಪೂರ್ಣ ಖಾಲಿ ಮಾಡಿಲ್ಲ. ಇವೆಲ್ಲಾ ಅವ್ರವೇ ಸಾಮಾನು. ತೊಗೊಂಡು ಹೋಗೊದಕ್ಕೆ ಬರತಾ ಇರತಾರೆ' ಎಂದಳು.
ಅದನ್ನು ಕೇಳಿದಾಗ, `ಸ್ವಪ್ನಾ ನಾನು ಮನೆ ಮಾಡಿದ್ದೀನಿ ಎಂದದ್ದು ನೆನಪಿಗೆ ಬಂದು, ಮನೆ ಇವಳು ಮಾಡಿದ್ದಾಳೊ ಅಥವಾ ಅವನದೇ ಮನೆಯಲ್ಲಿ ಇವಳು ಬಂದು ಇದ್ದಾಳೊ?’ ಎನ್ನುವ ಪ್ರಶ್ನೆಗಳು ಅವನಲ್ಲಿ ಮೂಡಿದವು. ಆ ಪ್ರಶ್ನೆಗಳಿಗೆ ಉತ್ತರ ಕೇಳುವ ಸಮಯ ಅದಲ್ಲ ಎಂದು ಸುಮ್ಮನಾದ. ಸೌಮ್ಯಳಿಗೂ ವಿಷಯವನ್ನು ಹೆಚ್ಚು ಕೆದಕುವುದರಲ್ಲಿ ಅರ್ಥವಿಲ್ಲ ಅನಿಸಿತು.
ಇಬ್ಬರೂ ಹಾಸಿಗೆ ಮೇಲೆ ಅಡ್ಡಾದರು. ಸ್ವಪ್ನಾ ಹೊರಗೆ ಹೋದ ಬಳಿಕ, ಶ್ರೀಕಾಂತನೊಂದಿಗೆ ಊಟ ಮಾಡಿದಳು. ಊಟ ಮುಗಿದ ಬಳಿಕ ಮತ್ತೆ ರೂಮಿಗೆ ಬಂದು ಹೊದಿಕೆಯೊಂದನ್ನು ತೆಗೆದುಕೊಂಡು, ಬೆಡ್ ರೂಮಿನ ಬಾಗಿಲನ್ನು ಸರಿಯಾಗಿ ಮುಚ್ಚುವಂತೆ ಎಳೆದುಕೊಂಡು ಹೋದಳು.
ಇವರಿಬ್ಬರಿಗೆ ನಿದ್ದೆ ಬಂದಿರಲಿಲ್ಲವಾದರೂ ಸುಮ್ಮನೆ ವಿಶ್ರಾಂತಿ ಮಾಡಿದರು. ಆ ಹೊತ್ತು ಅಲ್ಲಿ ನಡೆಯಬಹುದಾದ ಸನ್ನಿವೇಶದ ಸುಳಿವು ದೊರೆತು ಸುಧಾಕರÀ, ಸೌಮ್ಯ ಪರಸ್ಪರ ಮುಖ ನೋಡಿಕೊಂಡರು.
ಹಾಗೇ ಹಾಸಿಗೆ ಮೇಲೆ ಹೊರಳಾಡಿ ಸಮಯ ಕಳೆಯುವ ಹೊತ್ತಿಗೆ, ಸಮಯ ಐದು ಗಂಟೆಯಾಗುತ್ತಿತ್ತು. `ಹೊರಡೋಣ?' ಎಂದು ಸುಧಾಕರ ಸೌಮ್ಯಳಿಗೆ ಕೇಳಿದ. ಆಕೆ `ಹೂಂ' ಎಂದಳು. ಅವನು ಎದ್ದು ಮೆಲ್ಲಗೆ ಬಾಗಿಲು ತೆಗೆದು ಹೊರಗೆ ಬಂದಾಗ, ಶ್ರೀಕಾಂತ ಸೋಫಾದ ಮೇಲೆ, ಸ್ವಪ್ನಾ ನೆಲದ ಮೇಲೆ ಹಾಸಿಕೊಂಡು ಹೊದ್ದು ಮಲಗಿದ್ದರು. ಇವನು ಬಾತ್ ರೂಮಿಗೆ ಹೋಗಿ ಮುಖ ತೊಳೆದುಕೊಂಡು, ರೂಮಿಗೆ ಬಂದ. ಬಳಿಕ ಸೌಮ್ಯ ಹೋಗಿ ಬಂದಳು.
`ನೋಡ್ರಿ, ಇದನ್ನೆಲ್ಲಾ ನೋಡಾಕ ಇಲ್ಲಿಗೆ ಬರಬೇಕಿತ್ತೇನು ನಾವು' ಎಂದಳು.
`ಹಿಂಗಂತ ನಮಗಾದ್ರೂ ಹೆಂಗ ಗೊತ್ತಾಗಬೇಕು. ಅದಕ ಹೇಳೋದು ಆಳ ತಿಳಕೊಂಡು ನೀರಿಗೆ ಇಳಿಬೇಕು ಅಂತ' ಎಂದ ಅವನು.
`ಇಕಿ ಯಾವಾಗ ಊರಬಿಟ್ಟು ಬಂದು ಬೆಂಗಳೂರಿನ್ಯಾಗ ಒಬ್ಬಾಕೆ ಅದಾಳ ಅಂದಾಗ ನಾನು ಇದನ್ನೆಲ್ಲಾ ಊಹಿಸಿದ್ದೆ. ಅವಳ ಜೀವನ ಅವಳಿಗೆ. ನಮಗ್ಯಾಕ ಬೇಕಿತ್ತು ಇದೆಲ್ಲಾ ಉಸಾಬರಿ'
`ಹೋಗಲಿ ಬಿಡು, ಏನೋ ಒಂದು ಸಾರಿ ಭೇಟಿ ಮಾಡಬೇಕು ಅಂತ ಬಂದವ್ರು ನಾವು. ಹಿಂಗಂತ ಗೊತ್ತಾತು ಏನ್ಮಾಡೋದು' ಎಂದು ಇಬ್ಬರೂ ಕುಳಿತಲ್ಲೇ ಪಿಸುಗುಟ್ಟಿದರು. ಸೌಮ್ಯ ತಲೆ ಬಾಚಿಕೊಂಡು ಸಿದ್ಧವಾಗಿ ಸ್ವಪ್ನಾಳನ್ನು ಎಬ್ಬಿಸಿದಳು. ಸ್ವಪ್ನಾ ಎದ್ದು ರೂಮಿಗೆ ಬಂದಳು. ಶ್ರೀಕಾಂತ ಎದ್ದು ಮುಖ ತೊಳೆದುಕೊಂಡು ಹೊರಗೆ ಹೋದ.
`ಅಕ್ಕಾ ನಾವು ಹೊರಡತಿವಿ' ಎಂದಳು ಸೌಮ್ಯ.
`ಕಾಫಿ ಮಾಡ್ತಿನಿ ಇರಿ, ಕುಡುದು ಹೋಗಿರಂತೆ' ಎಂದಳು ಸ್ವಪ್ನಾ.
`ಬ್ಯಾಡ ಬಿಡು, ಈಗ್ಯಾಕ ನಿನಗ ಮತ್ತ ತೊಂದ್ರಿ' ಎಂದ ಸುಧಾಕರ.
`ನಾನೂ ಕುಡಿಬೇಕು ಹೆಂಗಿದ್ರೂ ಮಾಡ್ತಿನಿ ಈಗ'
ಮಾತು ಶುರುವಾದವು.
ಸ್ವಪ್ನಾ, ಸುಧಾಕರನ ಮುಖ ನೋಡಿ `ನನ್ನ ತಂಗಿ ಭಾಳ ಮುಗ್ಧೆ, ಅವಳನ್ನ ಸಣ್ಣವಳಿದ್ದಾಗಿನಿಂದ ನೋಡತಿದ್ದೀನಲ್ಲ ನಾನು. ಅವಳಂತ ಹುಡುಗಿ ನಮ್ಮಲ್ಲಿ ಯಾರೂ ಇಲ್ಲ. ಅವಳನ್ನ ಚೆನ್ನಾಗಿ ನೋಡ್ಕೊಳ್ಳಿ' ಎಂದಳು.
`ಅಯ್ಯೋ ಅಕ್ಕಾ, ಇವ್ರು ನನ್ನ ಭಾಳ ಛೊಲೊ ನೋಡಿಕೊತಾರ. ನಾನು ತವ್ರು ಮನಿ ನೆನಸದಿರೊ ಹಾಂಗ ನೋಡಿಕೊತಾರ ಅಕ್ಕಾ. ಸ್ವಂತ ಮನಿ, ನೌಕರಿ, ಒಬ್ಬ ಗಂಡು ಮಗ ಇನ್ನೇನು ಬೇಕು ನನಗ. ನಾನು ಆರಾಮಾಗಿ ಅದೀನಿ' ಎಂದಳು ಸೌಮ್ಯ.
`ನೀನು ನೆಮ್ಮದಿಯಾಗೇ ಇರು. ಸಣ್ಣ ವಯಸ್ಸಿಗೆ ಅಪ್ಪ ಅಮ್ಮ ಹೋಗಿಬಿಟ್ರು. ಸಧ್ಯಕ್ಕೆ ಒಳ್ಳೆ ಗಂಡನಾದ್ರೂ ಸಿಕ್ಕನಲ್ಲ. ನಿನ್ನ ಪುಣ್ಯ' ಎಂದು ಸೌಮ್ಯಾಳ ಮೇಲೆ ಅಕ್ಕರೆ ತೋರಿದಳು.
`ನಿನ್ನ ತಂಗಿ ಯಾವೊತ್ತೂ ನನ್ನ ಬಿಟ್ಟುಕೊಡಂಗಿಲ್ಲಾ ಸ್ವಪ್ನಾ. ನಾನಿರೋವಾಗ ನೀನೇನು ಚಿಂತಿ ಮಾಡಬ್ಯಾಡ' ಎಂದ ಸುಧಾಕರ.
`ಅವಳು ನಿಶ್ಚಿಂತೆಯಿಂದ ಇರಬೇಕನ್ನೋದೇ ನನ್ನ ಬಯಕೆ. ಅವಳ ಜೀವನ ನನ್ನ ಜೀವನದಂಗ ಆಗಬಾರದು. ನೀವಿದ್ದೀರಲ್ಲ ಚಿಂತೆಯಿಲ್ಲ' ಎಂದಳು ಸ್ವಪ್ನಾ.
ಮಾತನಾಡುತ್ತ ಮೂವರೂ ಅಡುಗೆ ಮನೆಯತ್ತ ಹೋದರು. `ಕಾಫಿ ಮಾಡೋದಕ್ಕೆ ಹಾಲಿಲ್ಲ, ಹಾಲು ತರತೀನಿ ಇರಿ' ಎಂದಳು ಸ್ವಪ್ನಾ.
`ನೀನು ಹೋಗೊದು ಬ್ಯಾಡ. ನಾನು ಹೋಗಿ ತರತೀನಿ ಇರು' ಎಂದ ಸುಧಾಕರ.
`ಹೀಗೆ ಎಡಕ್ಕೆ ಹೋಗಿ, ಮುಂದೆ ಹೋದ್ರೆ ಅಲ್ಲೊಂದು ಅಂಗಡಿ ಇದೆ. ಅಲ್ಲೇ ಹಾಲು ಸಿಗತದೆ'
`ಸರಿ, ತರತೀನಿ ಬಿಡು' ಎಂದು ಹೊರಟ ಸುಧಾಕರ.
ಅವಳು ಹೇಳಿದ ಕಡೆಗೆ ಹುಡುಕುತ್ತ ಹೋದ. ಅಲ್ಲಿಂದ ಸ್ವಲ್ಪ ಅಂತರದಲ್ಲೇ ದೊಡ್ಡದಾದ ರಾಜ ಕಾಲುವೆ ಕೊಳಕು ನೀರನ್ನು ತನ್ನೊಡಲಲ್ಲಿ ತುಂಬಿಕೊಂಡು ಹರಿಯುತ್ತಿತ್ತು. ಅದನ್ನು ನೋಡುತ್ತಲೆ ಸ್ವಪ್ನಾಳ ಬದುಕಿನ ವಾಸ್ತವವೇ ದರ್ಶನವಾದಂತಾಗಿಬಿಟ್ಟಿತು ಅವನಿಗೆ. ಆ ಬೃಹತ್ ನಗರದಲ್ಲಿ ಮುಖವಾಡ ಧರಿಸಿಕೊಂಡು ಬದುಕಿರುವ ಅದೆಷ್ಟೋ ಜನರ ಬಣ್ಣ ಕಳಚಿಬಿದ್ದು ಹೀಗೆ ಕಪ್ಪಿಗೆ ತಿರುಗಿ ಅಲ್ಲಿ ಹರಿಯುತ್ತಿರುವಂತೆ ಭಾಸವಾಯಿತು. ಅಲ್ಲಿ ವರ್ಣರಂಜಿತ ಬದುಕಿನ ಹಿಂದಿನ ಕರಾಳ ಮುಖ ಕಂಡು, ಇಲ್ಲಿ ಹರಿಯುವ ಕೊಳಚೆಯ ವಾಸನೆ ಹೀರಿ ತಲೆ ಸುತ್ತಿದಂತಾಗಿ ಅಲ್ಲಿಂದ ಓಡಬೇಕೆನಿಸಿತು ಅವನಿಗೆ.
ಅಲ್ಲಿಂದ ಎಡಕ್ಕೆ ಹೊರಳಿ ಮುಂದಕ್ಕೆ ಹೋದ. ಕಿಕ್ಕಿರಿದು ಒಂದರ ಪಕ್ಕದಲ್ಲೊಂದು ಕಟ್ಟಿದ ಸಣ್ಣ ಸಣ್ಣ ಮನೆ... ಅವುಗಳ ನಡುವೆಯೊಂದು ಸಣ್ಣ ಕಿರಾಣಿ ಅಂಗಡಿ ಕಂಡಿತು. ಹಾಲಿನ ಪ್ಯಾಕೇಟ್ ತೆಗೆದಕೊಂಡು ಮನೆ ಸೇರಿದ.
ಬಳಿಕ ಸ್ವಪ್ನಾ ಕಾಫಿ ಮಾಡಿದಳು. ಕಾಫಿ ಕುಡಿಯುತ್ತ ಸುಧಾಕರ ಏನೋ ಕೇಳಲು ಮುಂದಾದಾಗ, ಸೌಮ್ಯ ವಿಷಯ ಕೆದಕದಿರುವಂತೆ ಅವನಿಗೆ ಸಂಜ್ಞೆ ಮಾಡಿದಳು. ಕಾಫಿ ಕುಡಿದಾದ ಮೇಲೆ `ಅಕ್ಕಾ ನಾವು ಹೊರಡತಿವಿ' ಎಂದಳು ಸೌಮ್ಯ. ಸ್ವಪ್ನಾ `ಹೂಂ' ಎಂದು ಇಬ್ಬರ ಮುಖ ನೋಡಿದಳು.
* * *
ಮಾರನೇ ದಿನ, ಸೌಮ್ಯ, ಸುಧಾಕರ ಕಾಮಾಕ್ಷಿ ಪಾಳ್ಯದ ಸಂತೋಶನ ಮನೆಯಲ್ಲಿದ್ದರು. ಅವರೊಂದಿಗೆ ಶಿಲ್ಪಾ ಇದ್ದಳು, ಸಂತೋಷ ಕೆಲಸಕ್ಕೆ ಹೋಗಿದ್ದ.
`ನಿನ್ನೆ ಏನು ಬೆಳಗ್ಗೆ ಹೋದವ್ರು ಅಷ್ಟು ಲೇಟಾಗಿ ಮನೆಗೆ ಬಂದ್ರಿ?... ಆಫೀಸ್ ಕೆಲಸ ಮುಗಿದ ಮೇಲೆ ಮತ್ತೆ ಎಲ್ಲೆಲ್ಲಿ ಸುತ್ತಾಡಿದ್ರಿ' ಎಂದು ಶಿಲ್ಪಾ ಕೇಳಿದಳು.
`ಎಲ್ಲೂ ಸುತ್ತಾಡ್ಲಿಲ್ಲ... ಇವ್ರು ಸ್ವಪ್ನಾ ಮನಿಗೆ ಕರಕೊಂಡು ಹೋಗಿದ್ರು. ಭೆಟ್ಟಿ ಆಗಿ ಬಂದ್ರ ಆತು ಅಂತ ಹೋಗಿದ್ವಿ... ಆದ್ರ..'
`ಆದ್ರ ಏನಾಯ್ತು?'
`ಅಕಿಗೆ ಸರಪ್ರೈಸ್ ಕೊಡಣ ಅಂತ ಫೋನ್ ಮಾಡದ ಹೋಗಿದ್ವಿ. ಅಲ್ಲಿ ಏನೋ ಬ್ಯಾರೇನ ಇತ್ತುಬಿಡು!'
`ಏನದು?' ಎಂದು ಕುತೂಹಲದಿಂದ ಕೇಳಿದಳು ಶಿಲ್ಪಾ.
`ನಾವು ಅಕಿಗೆ ಫೋನ್ ಮಾಡದ ಮನೀಗೆ ಹೋಗಿದ್ದರಿಂದ ಅಕೀಗೆ ಖರೆನೂ ಶಾಕ್ ಆತು. ಯಾಕಂದ್ರ ಅಲ್ಲೆ ಅಕಿನ ಕೂಡ ಯಾರೋ ಒಬ್ಬ ವ್ಯಕ್ತಿ ಇದ್ದ. ನಾವು ಹೋದ ಕೂಡಲೇ ಅವರಿಬ್ಬರಿಗೂ ಅಡಚಣಿ ಆದಂಗಾತು. ಲಗೂನ ಒಳಗ ಬಾ ಅನ್ನೋಹಾಂಗಿಲ್ಲ, ಸುಮ್ಮನಿರೋ ಹಾಂಗಿಲ್ಲ. ವಿಷಯ ತಿಳದ ಕೂಡಲೇ ಅಂವಾ ಬಾಟಲಿ ಸೈಡಿಗೆ ಸರಸಿ ಇಟ್ಟು ಕುಂತ' ಎಂದು ಸೌಮ್ಯ ಅವಳೆದಿರು ವಿವರಿಸಿದಳು.
ಇನ್ನೇನು ಸೌಮ್ಯ ಎಲ್ಲ ಹೇಳಿಬಿಟ್ಟಳಲ್ಲ ಎಂದು ಸುಧಾಕರ ಮುಂದಿನದನ್ನು ಹೇಳಿ, `ಅಂವಾ ಯಾರು ಅಂತ ನಮಗ ಗೊತ್ತಾಗಲಿಲ್ಲ. ಹಂಗಾಗಿ ನಮಗ ಲಗೂ ಒಳಗ ಹೋಗಾಕ ಮನಸಾಗಲಿಲ್ಲ. ಶ್ರೀಕಾಂತ ಅಂತ ನೋಡು ಅವನ ಹೆಸರು' ಎಂದು ಕೆದಕಿದ.
ಶಿಲ್ಪಾಗೂ ಅಷ್ಟು ಹೇಳುವುದೇ ಸಾಕಾಗಿತ್ತು. ಆ ವಿಷಯ ಮುಂದುವರಿಸಿದಳು.
`ಅವನಾ!? ಗೊತ್ತು ಬಿಡ್ರಿ. ಅವಳು ಅವನ ಕೂಡನೇ ಇರತಾಳೆ'
`ಯಾರವನು?' ಎಂದು ಇಬ್ಬರೂ ಕೇಳಿದರು.
`ಇಲ್ಲೇ ರಾಜಾಜಿ ನಗರದಲ್ಲಿ ಅವಂದು ದೊಡ್ಡ ಬಿಜಿನೆಸ್ ಇತ್ತು. ಹಿಂದೆ ಅವನ ಫ್ಯಾಕ್ಟರಿಯಲ್ಲಿ ಅವಳು ಮ್ಯಾನೇಜರ್ ಆಗಿ ಕೆಲಸಕ್ಕಿದ್ದಳು. ಅವಾಗಲೇ ಇಬ್ಬರ ನಡುವೆ ಸಂಬಂಧ ಬೆಳದಿತ್ತು. ಕಡೆಗೆ ಅವನು ಇವಳ ಹಿಂದೆ ಬಿದ್ದ. ಯಾಕಂತ ಗೊತ್ತಿಲ್ಲ, ಬಿಜಿನೆಸ್ ಲಾಸ್ ಆಗಿ, ಫ್ಯಾಕ್ಟರಿ ಬಂದ್ ಆಯಿತು' ಎಂದಳು ಶಿಲ್ಪಾ.
`ಹಿಂಗೇನು. ಅವನಿಗೆ ಮದವಿ ಆಗಿಲ್ಲೇನು?' ಎಂದು ಕೇಳಿದ ಸುಧಾಕರ.
`ಹೋ... ಮದುವಿ ಆಗಿ ಎರಡು ಮಕ್ಕಳು ಇದ್ದಾವೆ. ಬಿಜಿನೆಸ್ ಹಾಳಾದಮೇಲೆ ದೊಡ್ಡಸಂದ್ರದಲ್ಲಿ ಈಗಿರೋ ಸಣ್ಣ ಮನೇಲಿ ಹೆಂಡ್ತಿ ಮಕ್ಕಳ ಜೊತೆನೆ ಇದ್ದ. ಈಗ ಮೂರು ತಿಂಗಳ ಹಿಂದಷ್ಟೆ ಅವರನ್ನ ಊರಿಗೆ ಶಿಪ್ಟ್ ಮಾಡಿ, ಈಗ ಅದೇ ಮನೇಲಿ ಸ್ವಪ್ನಾ ಜೊತೆ ಇದ್ದಾನೆ'
`ಮತ್ತ ಸ್ವಪ್ನಾ ತನ್ನ ಮನಿ ಅಂತ ಹೇಳತಾಳಲ್ಲ. ಹಂಗಾದ್ರ ಅದು ಅವನ ಮನಿ ಅಂದಂಗಾತಲ್ಲ'
`ಅವನಿದ್ದ ಮನೆಗೇ ಹೋಗಿ ಇವಳು ಸೇರಿಕೊಂಡಿದ್ದಾಳೆ. ಅಲ್ಲಿರೋ ಎಲ್ಲಾ ಸಾಮಾನು ಕೂಡ ಅವನವೆ. ಇವಳದು ಏನೂ ಇಲ್ಲ' ಎಂದಾಗ, ಸೌಮ್ಯ ಸುಧಾಕರ ಅಚ್ಚರಿಯಿಂದ ಮುಖ ನೋಡಿಕೊಂಡರು.
`ಹಿಂಗೈತೇನು ಹಕೀಕತ್ತು!. ನೋಡು ಶಿಲ್ಪಾ ನಮಗೇನೂ ಗೊತ್ತಿರಲಿಲ್ಲ. ನಾವು ಸುಮ್ಮನ ಭೇಟಿ ಆಗಾಕ ಅಂತ ಹೋಗಿದ್ವಿ. ಇದೆಲ್ಲಾ ಗೊತ್ತಿದ್ದಿದ್ರ ಹೋಗತಿರಲಿಲ್ಲ' ಎಂದಳು ಸೌಮ್ಯ.
`ಅಯ್ಯೋ ಇದೇನು ಹೊಸದಲ್ಲ ಬಿಡ್ರಿ. ಎಲ್ಲರಿಗೂ ಗೊತ್ತಿರೊ ವಿಷಯಾನೆ. ಅವಳಣ್ಣನಿಗೂ ಗೊತ್ತು, ಇವನ ಹೆಂಡ್ತಿಗೂ ಗೊತ್ತು. ಶ್ರೀಕಾಂತ ಅವಳ ಊರಿನವನೆ. ಬಿಜಿನೆಸ್ ಸಲುವಾಗಿ ಬಂದು ಮೊದಲೇ ಬೆಂಗಳೂರು ಸೇರಿಕೊಂಡಿದ್ದ. ಅಲ್ಲಿರೊವಾಗಿಂದಲೇ ಇಬ್ಬರದೂ ಸಂಪರ್ಕ ಇತ್ತು. ಅವಾಗಲೇ ಎಲ್ಲರಿಗೂ ಗೊತ್ತಿರೊ ವಿಷಯ. ಮನೇಲಿ ಗೊತ್ತಾದಾಗ ಎಲ್ಲರೂ ವಿರೋಧ ಮಾಡಿದ್ರು. ಆದ್ರೆ ಇವಳ ಗಂಡನ ಮನೆ ವಿಷಯ ಬೇರೆ ಹೀಗಾಗಿತ್ತಲ್ಲ. ಅದಕೆ, ನನ್ನ ಜೀವನ ನನ್ನ ನಿರ್ಧಾರ... ನಾನು ಹೇಗಾದ್ರೂ ಇರತೀನಿ. ನನ್ನ ಮನಸಿಗೆ ಬಂದ್ಹಾಗೆ ಇರೋದಕ್ಕೆ ಬಿಡದಿದ್ರೆ ಸೂಸೈಡ್ ಮಾಡಿಕೊಂಡು ಸಾಯಿತಿನಿ ಅಂತ ರಾದ್ಧಾಂತ ಮಾಡಿ, ಬಂದು ಬೆಂಗಳೂರು ಸೇರಿದ್ಲು. ಬ್ಯೂಟಿ ಸಲೂನ್ ಶುರು ಮಾಡಿದಳು. ಅವನ ಬಿಜಿನೆಸ್ ಹಾಳಾತು ಅಂತ ಹೆಂಡ್ತಿ ಮಕ್ಕಳನ್ನ ಊರಿಗೆ ಕಳಿಸಿ, ಈಗ ಇವಳ ಜೊತೆ ಇದ್ದಾನೆ. ನಿನ್ನೆ ಸಂಡೆ ಅಂತ ಊರಿಂದ ಬಂದಿರಬಹುದು. ನನಗಾದ್ರೂ ಎಲ್ಲಾ ಅವಳು ಹೇಳಿದಾಗಲೆ ವಿಷಯ ತಿಳಿದಿದ್ದು. ಅವರ ಇವರ ವಿಷಯ ನಮಗಾದ್ರೂ ಯಾಕೆ ಬೇಕು ಹೇಳಿ. ಸಂತೋಷ ಕೂಡ ಈಗ ಅವಳ ಕಡೆ ಜಾಸ್ತಿ ಹೋಗಲ್ಲ' ಎಂದು ವಿವರಿಸಿದಳು ಶಿಲ್ಪಾ.
`ತನ್ನ ಗಂಡನಿಗೆ ಬೇರೆ ಸಂಬಂಧ ಇತ್ತು ಅದಕ ಬಿಟ್ಟು ಬಂದೆ ಅಂತ ಹೇಳತಾಳ. ಅಂವಾ ದೊಡ್ಡ ಹುದ್ದೆಯೊಳಗಿದ್ದ. ಛೊಲೊ ಪಗಾರ ಬರತಿತ್ತು. ಹೆಂಗೊ ಹೊಂದಾಣಿಕಿ ಮಾಡಿಕೊಂಡು ಇದ್ದಿದ್ರ ಆಗ್ತಿದ್ದಿಲ್ಲೇನು. ಬೆಂಗಳೂರಾಗ ಅದೀನಿ ಅಂತ ಹೇಳಿಕೊಂಡು ಹೋಗಿ ಹೋಗಿ ಆ ಸ್ಲಮ್‍ನ್ಯಾಗ ಅಂತವ್ನಕೂಡ ಅದಾಳ!' ಎಂದಳು ಸೌಮ್ಯ.
`ಗಂಡನ್ನ ಬಿಟ್ಟು ಬರೋದಕ್ಕ ಅದೊಂದ ಕಾರಣ ಅಲ್ಲ. ಗಂಡ ಭಾಳ ಒಳ್ಳೆಯವನು ಅಂತ ಸ್ವಪ್ನಾ ಈಗಲೂ ಹೇಳತಾಳೆ. ಅವನ ತಂದೆ ತಾಯಿ ಕಿರಿಕಿರಿ ತಡಕೊಳ್ಳಕಾಗದೇ ಬಿಟ್ಟು ಬಂದೆ ಅಂತ ಹೇಳಿದ್ಲು. ಆದ್ರೆ ಈಗ ಅವಳ ಜೊತೆ ಇರೋ ಈ ವ್ಯಕ್ತಿಕೂಡ ಅನುಕೂಲಕ್ಕೆ ಮಾತ್ರ ಅಷ್ಟೆ. ನಾನು ತಿಳಕೊಂಡಂಗೆ ಅವಳದು ಇನ್ನೊಂದು ಜಗತ್ತು ಬೇರೆನೆ ಇದೆ. ಹೀಗೆಲ್ಲಾ ಆದ ಮೇಲೆ ಅವಳು ಹಣದ ಹಿಂದೆ ಬಿದ್ದು ಕರೆದವ್ರ ಜೊತೆಗೆ ಹೋಗಿ ಗಂಡಸರಿಗೆ ಹೋಮ್ ಸರ್ವೀಸ್ ಕೊಡ್ತಾಳಂತೆ. ನನಗೂ ಬೇರೆಯವ್ರಿಂದ ವಿಷಯ ತಿಳೀತು. ಅದೆಷ್ಟು ಗಳಸ್ತಾಳೋ, ಖರ್ಚು ಮಾಡ್ತಾಳೋ! ಇತ್ತಿತ್ತಲಾಗೆ ಅವಳ ಮೋಜು ಮಸ್ತಿ ಹೆಚ್ಚಾಗಿಬಿಟ್ಟಿದೆ. ಏನ್ ಮಾಡಾಕಾಗತದೆ ಅವರವ ಜೀವನ, ಅವರವರ ಸ್ವಾತಂತ್ರ. ನಮಗೇನು!?’ ಎಂದಳು.
ಹಾಗೆ ಶಿಲ್ಪಾ, ಸೌಮ್ಯ ಮಾತು ಮುಂದುವರಿಸಿದರು. ಅದನ್ನೆಲ್ಲಾ ಕೇಳಿಸಿಕೊಂಡು, ಸ್ವಪ್ನಾ ಕುರಿತು ತಾನು ಕಲ್ಪಿಸಿಕೊಂಡದ್ದೆಲ್ಲ ಭ್ರಮೆಯೇನೋ ಅನಿಸಿ ಸುಧಾಕರನಿಗೆ ಅಸಹನೀಯ ವ್ಯಥೆಯಾಯಿತು. ಎಂದೋ ಎಲ್ಲೋ ಕಲ್ಪನಾ ಲೋಕದಲ್ಲಿ ಕಂಡಿದ್ದ ನಿಗೂಢ ಹುತ್ತದೊಳಗಿನ ಕೆಂಪು ಚೇಳೊಂದು ಸರಕ್ಕನೇ ಹೊರಕ್ಕೆ ಬಂದು, ಕುಟುಕಿ ಸರಸರನೇ ಹರಿದು ಹೋದಂತೆ ಭಾಸವಾಯಿತು. ಅದರಿಂದ ಕುಳಿತಲ್ಲೇ ಮೈಯೆಲ್ಲಾ ಬೆವರು ಒಡೆದಂತಾಯಿತು. `ತಾನಾದರೂ ಹುತ್ತವನ್ನು ಕೆದಕುವ ಹುಚ್ಚು ಪ್ರಯತ್ನ ಯಾಕೆ ಮಾಡಬೇಕಿತ್ತು!’ ಅನಿಸಿತು. ಚೇಳು ಕುಟುಕಿ ಮೈಯೆಲ್ಲಾ ವಿಷಯೇರಿದವನಂತೆ ಬಳಲಿ ಅಲ್ಲಿಂದ ಎದ್ದು ಹೋಗಿ, ಟೆರೇಸ್ ಮೇಲೆ ಒಂಟಿಯಾಗಿ ನಿಂತ. ಆ ಎತ್ತರದ ಕಟ್ಟಡದ ಮೇಲೆ ಬೇಸರದಿಂದ ಸುತ್ತಲೂ ನೋಡಿದರೆ, ಬರೀ ಕಟ್ಟಡಗಳೇ ಕಣ್ಣಿಗೆ ರಾಚಿದವು.
ಕಲಾಕೃತಿ : ಬಿ. ಕೆ. ಬಡಿಗೇರ
ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ.
ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ.
ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ಮನಸೆಂಬ ಮಾಯಾವಿ (೨೦೧೭) ಕಥಾ ಸಂಕಲನವಾಗಿದೆ. ತಲ್ಲಣ (೨೦೧೬), ನೆಲೆ (೨೦೧೧) ಜೋಗವ್ವ (೨೦೦೭) ಇವರ ಕಾದಂಬರಿಗಳಾಗಿವೆ. ಋಣ (೨೦೧೬). ಅಸ್ತಿತ್ವ (೨೦೧೮) ನಾಟಕಗಳನ್ನು ರಚಿಸಿದ್ದು, ಬಯಲು ಬೆರಗು (೨೦೧೭) ಕಾಲಯಾನ (೨೦೦೫) ತುಮುಲ (೨೦೦೦) ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಸಂತೆಗೆ ಬಂದವರು (೨೦೦೨) ಎಂಬ ನೀಳ್ಗತೆಯನ್ನೂ ರಚಿಸಿದ್ದಾರೆ.
ಇವರಿಗೆ ಸಂದ ಪುರಸ್ಕಾರ: 2006ರಲ್ಲಿ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ'ದ ಅಂಗವಾಗಿ ನಡೆದ ಕಾದಂಬರಿ ಸ್ಪರ್ಧೆಯಲ್ಲಿ ದೊರಕಿತು. ಇವರ ’ಜೋಗವ್ವ' ಕಾದಂಬರಿಗೆ ಪುರಸ್ಕಾರ ದೊರಕಿದೆ. “ನಿರ್ವಾಣ' ಕಥಾ ಸಂಕಲನಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನಿಂದ 'ವಾಸುದೇವಾ ಚಾರ್ಯ ದತ್ತಿ' ಪ್ರಶಸ್ತಿ, 'ಋಣ' ನಾಟಕಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನಿಂದ 'ಕಾಕೋಳು ಸರೋಜಮ್ಮ ದತ್ತಿ' ಹಾಗೂ 'ಮನಸೆಂಬ ಮಾಯಾವಿ' ಆಯ್ದ ಕತೆಗಳ ಸಂಕಲನಕ್ಕೆ 'ಜಿ.ಎನ್. ಹೇಮರಾಜ ದತ್ತಿ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ಕಥಾ ಬಹುಮಾನ, ಮುಂಬಯಿಯ ಕನ್ನಡ ಮಾಸಿಕ “ಮೊಗವೀರ' ಆಯೋಜಿಸಿದ್ದ ರಾಷ್ಟ್ರಮಟ್ಟದ ಕಥಾ ಸ್ಪರ್ಧೆಯಲ್ಲಿ ಬಹುಮಾನ. 'ಉತ್ಥಾನ' ಮಾಸಿಕದ ಸಂಕ್ರಾಂತಿ ಕಥಾಸ್ಪರ್ಧೆಯಲ್ಲಿ ಬಹುಮಾನ, 'ಸಂಯುಕ್ತ ಕರ್ನಾಟಕ'ದ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಬಹುಮಾನ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ರಾಜ್ಯೋತ್ಸವದ ಶ್ರೇಷ್ಠ ಕಾವ್ಯ ಪುರಸ್ಕಾರ ಇವರಿಗೆ ಸಂದಿದೆ.
More About Author