Poem

ಕವಿತಾ ತೀರ ವಿಹಾರ

ಕಡಲ ತೀರದ ಮೇಲೆ ಕವಿತೆಗಳು
ಸಾಲಾಗಿ ಮಲಗಿವೆ ನಿರಾತಂಕವಾಗಿ
ಅಲೆಗಳ ದಾಳಿಗೆ ಭಯಪಡದೆ

ತಂಗಾಳಿಯ ಆಲಿಂಗನವ ಅನುಭವಿಸುವ
ಹುಚ್ಚು ಹಂಬಲವೇನೋ ಅವುಗಳಿಗೆ
ಒಮ್ಮೆಯಾದರೂ ಸಹ....

ಭಾವನೆಗಳ ಬಣ್ಣದೊಡನೆ ಬೆಸೆದಿರುವ
ಬಂಧಕೆ ತುಸು ತಂಗಾಳಿಯ ಹಸಿ ಸ್ಪರ್ಶ
ಸೋಕಿಸಿ ಬಿಡುವ ಬಯಕೆ ಯಥೇಚ್ಛವಾಗಿ
ಕವಿತೆಗಳ ಪ್ರತಿ ಸಾಲಿನಲ್ಲೂ ತುಂಬಿ
ನೀರಲ್ಲಿ ಪ್ರತಿಬಿಂಬವಾಗಿದೆ

ತರಂಗದೊಡಗೂಡಿ ರಂಗಿನಾಟವಾಡಿ
ಕಂಗೊಳಿಸಿಕೊಳ್ಳುತಿವೆ ತಮ್ಮನ್ನು
ಮುಗಿಯುವಂತೆ ಕಾಣುತಿಲ್ಲ ಬಹುಶಃ
ಕವಿತೆಯ ತೀರ ವಿಹಾರ. ಏಳಿ ಬೇಗ
ಹೋಗೋಣ ನಾವು ಬರ್ತಾವೆ ಅವು
ಕಾರ್ಯಾಂತ್ಯವಾದ ಬಳಿಕ.

–ಅಜಯ್ ಅಂಗಡಿ

ಅಜಯ್ ಅಂಗಡಿ

ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.

More About Author