ಗಾಳಿ ನಿಂತಿದೆ ಹೊರಗೆ
ಫ್ಯಾನು ತಿರುಗುತಿದೆ ಒಳಗೆ
ಮೈಯೊಳಗೆಲ್ಲ ಇಬ್ಬನಿ ಸಂಚಾರ
ತಲೆಮೇಲೆ ತಟತಟ ಮಳೆಹನಿ
ಅಂಗಾಲ ಕೆಳಗೆ ಬೆಂಕಿ ಬಿಸಿಲು
ಹಿತ್ತಲ ಗಿಡಗಳು ಬೋಳುಬೋಳು
ಅಂಗಳದಲ್ಲಿ ನೆರೆಯೋ ನೆರೆ
ಚಳಿ ತಾಳದೆ ನಡುಗುತಿದೆ
ನಡು ಮನೆಯ ಕಂಬ
ಕೇದಗೆಯ ಬನದ ಹಾವುಗಳು
ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷ
ಹೊಲದ ಬದುವಿನ ಗೂಟಗಳ್ಳಿ
ಡಬಗಳ್ಳಿ ದೆವ್ವಬಾಳಿ ಪೀಕಜಾಲಿಗಳು
ರಾಷ್ಟ್ರೀಯ ಹೆದ್ದಾರಿಯಲಿ
ಸೊಂಪಾಗಿ ಬೆಳೆದು ನಿಂತಿವೆ
ಕವಿ ನಾಳೆಯ ಬಗ್ಗೆ ಚಿಂತಿಸುತ್ತಿದ್ದಾನೆ
ಅವನಿಗೆ ಹಾಳೆಗಳು ಸಿಗುತ್ತಿಲ್ಲ
ಕಾಗದ ತಯಾರಿಕೆಯನು
ನಿರ್ಬಂಧಿಸಲಾಗಿದೆ ನಾಡಿನಲ್ಲಿ
ಪೆನ್ನು ಬಿದ್ದಿದೆ ಸುಮ್ಮನೆ
ಕಾಗದವಿಲ್ಲದೆ
ಲಕ್ಷ್ಮಣ ಬಾದಾಮಿ
ಲಕ್ಷ್ಮಣ ಬಾದಾಮಿ ಅವರ ಮೂಲ ಹೆಸರು ಲಕ್ಷ್ಮಣ ತುಕಾರಾಮ ಬಾದಾಮಿ. ಇವರು ಮೂಲತಃ ಬಾಗಲಕೋಟ ಜಿಲ್ಲೆ ಸಿರೂರು ಗ್ರಾಮದವರು. ಕಲಾ ವಿಭಾಗದಲ್ಲಿ ಎಂ.ಎಫ್.ಎ., ಎ.ಎಂ., ಜಿ.ಡಿ.(ಆರ್ಟ್) ಪೂರ್ಣಗೊಳಿಸಿದ್ದು, 2008ರಿಂದ ಸರಕಾರಿ ಪ್ರೌಢಶಾಲೆ ಕುರುಕುಂದದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಕಲೆ ಹಾಗೂ ಸಾಹಿತ್ಯ ವೇದಿಕೆ, ಸಿರೂರದ ಮೂಲಕ ಕಳೆದ 15 ವರ್ಷಗಳಿಂದ ಸಾಹಿತ್ಯ, ಜಾನಪದ ಕಲೆಗಳ ಪುನರುತ್ಥಾನಕ್ಕಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಕಲೆಯೊಂದಿಗೆ ಸಾಹಿತ್ಯದತ್ತರು ಆಸಕ್ತಿಹೊಂದಿರುವ ಅವರ ‘ಭವ’, ‘ಬೇರು ಮತ್ತು ಬೆವರು’, ‘ಒಂದು ಚಿಟಿಕೆ ಮಣ್ಣು’ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಮನುಷ್ಯರು ಬೇಕಾಗಿದ್ದಾರೆ’ ಅವರ ಪ್ರಕಟಿತ ಕವನ ಸಂಕಲನ. ‘ರೂಪ ನಿರೂಪ’ ಪೇಂಟಿಂಗ್ಸ್ ಗಳ ಕುರಿತ ಕೃತಿಯಾಗಿದೆ. ‘ಬಿಸಿಲ ಸೀಮೆಯ ಜಾನಪದ ಸಿರಿ’ ಅವರ ಸಂಪಾದಿತ ಕೃತಿ. ಅವರ ‘ಬೇರು ಮತ್ತು ಬೆವರು’ ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ, ‘ಒಂದು ಚಿಟಿಕೆ ಮಣ್ಣು’ ಕಥೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ ದೊರೆತಿದ್ದು, ಇದೇ ಶೀರ್ಷಿಕೆಯ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ.
More About Author