ಕತೆಗಾರ ಶಿವರಾಜ್ ಡಿ.ಎನ್.ಎಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಡಿಯವರು. ಬರಹ-ಓದು-ನಟನೆ ಹಾಗೂ ಛಾಯಾಗ್ರಹಣ ಅವರ ಹವ್ಯಾಸವಾಗಿದ್ದು, ಸಾಹಿತ್ಯಕ್ಷೇತ್ರದಲ್ಲಿಯೂ ವಿಭಿನ್ನ ಬರವಣಿಗೆಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅವರ ‘ಕವಲುದಾರಿ’ ಕತೆ ನಿಮ್ಮ ಓದಿಗಾಗಿ...
ಒಂದ್ ದಿನ ಬೇಕಾರ ಟೈಂ ತಕ, ಯೋಚ್ನ ಮಾಡಿ ನಾಳಕೆ ಈ ಒಗ್ಟ್ ಬುಡ್ಸಿ ಯೋಳು, ಆಗ್ ನೀನು ಬುದ್ಧಿಯೊಂತ ಅಂತ ಒಪ್ಕತಿನಿ ಇಲ್ಲಾ ಅಂದ್ರ.. ನೀನೆಯ ಪೆದ್ದ ಅಂತ ಒಪ್ಕ, ನಿನ್ನ ಇನ್ಮೆಲ ಪೆದ್ದಪ್ಪ ಅಂತ ಕರಿತಿನಿ’ ಎಂದು ಕಬ್ಬು ಕಟಾವು ಕೆಲಸಕ್ಕೆ ಬಂದಿದ್ದ ಸೋಲಿಗರ ಊರಲ್ಲಿದ್ದ ಮುಸ್ಲಿಂ ಸಮುದಾಯದ ಖಲೀಲಣ್ಣ ಸಣ್ಣ ಚಾಲೆಂಜ್ ಹಾಕಿ ಒಂದು ಒಗಟು ಹೇಳಿದ್ದ, ಮೂವರು ಎಲ್ಲರಿಗಿಂತಲೂ ದೊಡ್ಡವರಿದ್ದಾರೆ ಅವ್ರು ನಮ್ಮ ದೇಶದ ಎಲ್ಲರಿಗೂ ಗೊತ್ತಿರ್ತಾರೆ, ಒಬ್ಬರಿಗೆ ಕಣ್ಣಿಲ್ಲ, ಒಬ್ಬರಿಗೆ ಕಿವಿಯಿಲ್ಲ, ಮತ್ತೊಬ್ಬರಿಗೆ ಕಾಲಿಲ್ಲ, ಯಾರವ್ರು.? ಅಂತ.
ನಾನು ಯಾರಿರಬಹುದು ಅಂತ ಯೋಚನೆ ಮಾಡ್ತಾನೆ ಆ ರಾತ್ರಿ ಮಲಗಿದ್ದೆ.. ನಿದ್ದೆ ಬಂದದ್ದು ಎಚ್ಚರವಾಗಿದ್ದು ಒಂದು ಗೊತ್ತಾಗಲಿಲ್ಲ, ಬೆಳಿಗ್ಯೆ ಎದ್ದು ಕಣ್ಣುಜ್ಜಿ ಗುಡಿಸಲಿನಿಂದ ಆಚೆ ಬಂದು ಟ್ಯಾಂಕ್ ಖಾಲಿ ಮಾಡುತ್ತ ನಿಂತಿದ್ದಾಗ ಗಂಟೆ ಏಳುವರೆ ಎಂಟಾಗಿತ್ತೇನೊ ಅಷ್ಟೇ, ಆವೊತ್ತಿಗೆ ಸರಿಯಾಗಿ ಸೂರ್ಯನ ಕಿರಣ ನಾಟಿದ ಕಾಳನ ಗುಡ್ಡ.. ತಿಳಿ ಸ್ವರ್ಣಬಣ್ಣಕ್ಕೆ ತಿರುಗಿತ್ತು, ಸುತ್ತೆಲ್ಲಾ ಅಚ್ಚ ಹಸಿರಿನ ಬೆಟ್ಟ ಗುಡ್ಡಗಳು ಮೈ ಮೇಲೆ ಮೋಡಗಳನ್ನ ಕಂಬಳಿಯಂತೆ ಹೊದ್ದುಕೊಂಡು ಮಲಿಗಿದೆ, ಇನ್ನೂ ಎದ್ದಿಲ್ಲ ಎಂಬಂತಿತ್ತು. ಇದೆಲ್ಲದರ ನಡುವೆ ಹೊಸದಾಗಿ ಆಗಿದ್ದ ಟಾರೋಡು.. ಮುಂಜಾವಿನ ಇಬ್ಬನಿ ಸುರಿದು ಕರಿ ಬಣ್ಣದ ಶೂವಿಗೆ ಪಾಲಿಷ್ ಹಾಕಿದ ಹಾಗೆ ಹೊಳೆಯುತ್ತಿತ್ತು, ನೋಡುತ್ತಿದ್ದಂತೆ ಆ ರಸ್ತೆ ಮೇಲೆ ಒಂದು ಪೋಲಿಸ್ ಜೀಪಿನ ಜೊತೆ ಒಂದರ ಹಿಂದೆ ಒಂದರಂತೆ ಆಂಬ್ಯುಲೆನ್ಸ್ ಎರಡು ಫಾರೆಸ್ಟ್ ಜೀಪು ಸೇರಿ ಒಂದೈದಾರು ಕಾರು ರೊಯ್ಗುಡುತ್ತ ದೇವರಹಳ್ಳಿ ಕಡೆಗೆ ಹಾದು ಹೋದವು. ನಾನು ಅಷ್ಟನ್ನೂ ಒಟ್ಟಿಗೆ ಹೊಸದಾಗಿ ಖುಷಿಯಿಂದ ನೋಡುತ್ತಾ, ಇದೇನು ಇಷ್ಟೊಂದ್ ಗಾಡಿ ಅದು ಇಷ್ಟೊತ್ತಿಗೆ ಈ ಕಡೆ ಹೋಗ್ತಾ ಇದಾವಲ್ಲ ಎಂದುಕೊಳ್ಳುತ್ತಿದ್ದ ಸಮಯಕ್ಕೆ ಅಪ್ಪ ಬಂದರು.. ಪ್ಲಾಸ್ಟಿಕ್ ಬಾಟಲಿಯಲಿ ತುಂಬಿಸಿಕೊಂಡು ಬಂದಿದ್ದ ಹಾಲಿನ ಬಾಟಲಿ ಕೈಗಿಟ್ಟು ‘ಟೀ ಮಡ್ಗಡೊʼ ಎಂದು ಒಂದು ಬೀಡಿ ಹಚ್ಚಿ ಕುಳಿತರು .. ನಾನು ‘ಅಣೈ ಇದ್ಯಾನ ದ್ಯಾವ್ರಳ್ಳಿದಿಕ ಇಷ್ಟ್ ಕಾರು ಜೀಪು ಹೊಯ್ತಾವಲ್ಲ,. ತಿಮ್ಮಗೋಡ ಆನ ತುಳ್ದು ಸತ್ತೋಗಿದನಂತ ಕಡ., ನನಗೆ ಒಂದ್ ಕ್ಷಣ ಗಾಬರಿ ಆಯ್ತು, ಆ ಭಯಗ್ರಸ್ತ ಭಾವದಲ್ಲೆ ‘ಆನ ತುಳಿತು.. ಅಯಪೊಯ್ಯ್ ಅಂದೆಂಗ್ಯ.. ನೆನ್ನ ಮೂರ್ಗಂಟ ಹೊತ್ಲಿ ಮಾತಾಡ್ಸ್ಕಂದ್ ಇದೆ ದಾರಿಲೋದ್ನಲ ಆ ವಂಯ್ಯ ಪಾಪ ಚೆ.!. ಅವ್ನ ಜೀಮ ಇಲ್ಲೆ ಇತ್ತೇನೊ, ತಿಂಗ್ಳುಗ್ ಮೂರ್ನಾಕ್ಸತಿ ಬತ್ತಿದ್ದ, ಹೋಗು ಟೀ ಮಡ್ಗು, ಟೇಮು ಒಂದೇ ತರ ಇರಲ ಕಣಾ. ಎಂದು ಅಪ್ಪ ಕಬ್ಬಿನ ಗದ್ದೆಯೊಳಗೆ ಹಾದು ಹೋದರು. ನಾನು ಒಲೆ ಹಚ್ಚುತ್ತ ನೆನ್ನೆ ಮೂರ್ನಾಲ್ಕು ಗಂಟೆಯ ಹೊತ್ತಲ್ಲಿ ದಾರಿಯಲ್ಲೆ ನಿಂತು ಕೂಗಿ ‘ಯಾರಡೊ ಅವಾ.. ಬೀಡಿ ಮಡ್ಗಿದಯಾ’ ಅಂತ ಮಾತಾಡ್ಸಿ ಅದೇ ರಸ್ತೆ ಮೇಲೆ ಹಾದು ಹೋಗಿದ್ದ ತಿಮ್ಮೆಗೌಡನನ್ನ ನೆನೆಪಿಸಿಕೊಳ್ಳುತ್ತ ದೀರ್ಘಾಲೋಚನೆಯಲ್ಲಿ ಪೊಳ್ಳುವೊಡ್ಡುತ್ತ ಟೀ ಕಾಯಿಸುತ್ತ ಕೂತೆ.
---------------------------------------------------------------------------------------------------------------------
ಬಿಳಿಗಿರಿ ಬನದ ತಪ್ಪಲಿನ ನಮ್ಮ ಊರಿಂದ ಒಂದೈದಾರು ಕಿಲೋ ಮೀಟರ್ ದೂರದಲ್ಲಿ, ಮೂರೊ ನಾಲ್ಕೊ ಎಕರೆ ಜಮೀನಿತ್ತು, ಅದರಲ್ಲಿ ಕಬ್ಬು ಬೆಳೆದಿದ್ವಿ, ಚೌಕಟ್ಟಿನ ಆಯವಿಲ್ಲದ ಜಮೀನು ಕಾಡಿಗೆ ಅಂಟಿ ಕೊಂಡಂತಿದ್ದರೇ ಕಣ್ಣಳತೆ ದೂರದಲ್ಲಿ ಕಗ್ಗಾಡಿನ ಗುಡ್ಡಗಳು ಕಾಣುವಂತಿದ್ದವು. ಬಲಗಡೆಯ ಒಂದು ಅರ್ಧ ಕಿಲೋಮೀಟರಷ್ಟರಲ್ಲಿ ದೇವರಳ್ಳಿ, ಎಡಗಡೆ ಒಂದು ಕಿಲೋಮೀಟರ್ ದೂರದಷ್ಟರಲ್ಲಿ ಮುಂಟಿಪಾಳ್ಯ ಎನ್ನುವಂತ ಸೋಲಿಗರ ಊರುಗಳಿದ್ದವು. ಕವಲು ದಾರಿಯ ನಡುವಿನ ಜಮೀನು ಅದು, ಅಲ್ಲೆ ಒಂದು ಸಂಸಾರ ಉಳಿಯ ಬಹುದಾದಷ್ಟು ದೊಡ್ಡದಾಗಿ ಎತ್ತರದದ ಜಾಗದಲ್ಲಿ ಗುಡಿಸಲು ನಿರ್ಮಿಸಿದ್ವಿ, ಒಮ್ಮೊಮ್ಮೆ ಅಪ್ಪ ಅಥವ ಯಾರಾದರೂ ಕೆಲಸದ ಆಳುಗಳು ಕಾವಲಿಗೆ ಅಂತ ಅಲ್ಲೆ ಉಳಿಯುತ್ತಿದ್ದರು, ಹೈಸ್ಕೂಲ್ ಓದುತ್ತಿದ್ದ ನಾನು ರಜಾ ದಿನಗಳಲ್ಲಿ ಸಣ್ಣಪುಟ್ಟ ಕೆಲಸಮಾಡುತ್ತ ಕೆಲವೊಮ್ಮೆ ಅಲ್ಲಿಯೇ ಉಳಿದುಬಿಡುತ್ತಿದ್ದೆ. .ಆ ಬೆಟ್ಟಗುಡ್ಡ, ಪ್ರಾಣಿ ಪಕ್ಷಿ, ಮುಂಜಾವು ಮುಸ್ಸಂಜೆಯ ಚಿಲಿಪಿಲಿ, ಬೀಸುತ್ತಿದ್ದ ತಂಗಾಳಿ ಜೊತೆಗೆ.. ಪಕ್ಕದ ಜಮೀನಿನಲ್ಲಿದ್ದ ಸೀಬೆ ಸೀತಾಫಲದ ಗಿಡ, ಅತ್ತಿ, ಬಾಳೆ ಇವೆಲ್ಲದರ ಜೊತೆಗೆ ಸದಾ ರಾಜು ರಾಜು ಎಂದು ಕರೆದು ಪ್ರೀತಿಯಿಂದ ನೋಡುತ್ತಿದ್ದ ಅಡಿಕೆ ತೋಟದ ಮಾಲಿಕರಾಗಿದ್ದ ‘ಮೇಡಂ” ಎನ್ನುವವರ ಒಡನಾಟ ವಾತಾವರಣ ಎಲ್ಲವು ನನ್ನನ್ನ ಆಕರ್ಷಿಸಿತ್ತು. ಕಾಡು ಮತ್ತು ಜಮೀನಿನ ನಡುವೆ ಗೆರೆಯಂತೆ ರಸ್ತೆ ಇದ್ದು ಹೋಗುವವರು ಬರುವವರೆಲ್ಲರು ನಮ್ಮನ್ನು ಕಂಡಾಗ ಮಾತಾನಾಡಿಸಿಯೆ ಹೋಗ್ತಿದ್ರೂ, ಅಕ್ಕ ಪಕ್ಕದ ಹಳ್ಳಿಯ ಸೋಲಿಗರೆಲ್ಲರು ಅಪ್ಪನಿಗೆ ಬಹಳ ವರ್ಷದಿಂದ ಪರಿಚಯಸ್ಥರಾಗಿದ್ದು, ಎಲ್ಲರು ಬಹಳ ಪ್ರೀತಿಯಿಂದ ಮರಿಯಾದೆ ಕೊಟ್ಟು ಮಾತಾಡುತ್ತಿದ್ದರು, ನಾವು ಅಲ್ಲಿ ಜಮೀನು ಮಾಡಿ ವ್ಯವಸಾಯ ಶುರುಮಾಡಿದ ನಂತರದಲ್ಲಿ ಶಾಲಗೆಳಯರಲ್ಲದೇ ಮತ್ತೂ ಕೆಲವರು ಆ ಊರಿನ ಜನ ನನಗೆ ಪರಿಚಿತರಾದರು. ಜಮೀನಿನಲ್ಲಿ ಕೆಲಸಕ್ಕೆ ಆಳು ಬೇಕೆಂದಾಗ ಹೋಗಿ ಮಾಮೂಲಾಗಿ ಬರುತ್ತಿದ್ದ ಯಾರನ್ನಾದರೂ ಕಂಡು ಎಷ್ಟು ಜನ ಬೇಕು ಅಂತ ಹೇಳಿ ಬಂದರೆ ಸಾಕಿತ್ತು, ಅವರವರೆ ಮಾತಾಡಿಕೊಂಡು ಕೆಲಸಕ್ಕೆ ಬರುತ್ತಿದ್ದರು.
ಈ ತಿಮ್ಮೆಗೌಡರು ನಮ್ಮ ಊರಿನ ಪಕ್ಕದ ಹಳ್ಳಿಯವರು, ಕಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಂತ ಹಿರಿ ಜೀವ, ವಯಸ್ಸಿನಲ್ಲಿ ಹತ್ತಿಪ್ಪತ್ತು ರಾಸು ದನಗಳನ್ನ ಮೇಯಿಸಲು ನಿತ್ಯಕಾಡಿಗೆ ಬರುತ್ತಿದ್ದರಂತೆ, ಹಿಂದಿರುಗಿ ಹೋಗುವಾಗ ಕಾಡಿನಿಂದ ಒಂದು ಹೊರೆ ಸೌದೆ ಅಥವ ಸೊಪ್ಪನ್ನಾದರೂ ಹೊತ್ತು ಹೋಗುತ್ತಿದ್ದರು ಎನ್ನುವುದನ್ನ ಹಲವರ ಮಾತುಗಳಲ್ಲಿ ಕೇಳಿದ್ದೆ. ಆದರೆ ಹೇಳ ಹೊರಟ ಈ ಘಟನೆ ನೆಡೆದಾಗ ಅವರಿಗೆ ವಯಸ್ಸು ಸುಮಾರು ಎಪ್ಪತ್ತೈದು ಏಂಬತ್ತು ಇದ್ದಿರಬಹುದು, ಆ ಸದ್ಯ ಅವರ ಮನೆಯಲ್ಲಿ ದನಕರುಗಳಿರಲಿಲ್ಲ ಉಳಿಮೆಗೆ ಬೇಕಾದಂತ ಎರಡು ರಾಸಿದ್ದವೇನೊ ಅಷ್ಟೆ, ಮಕ್ಕಳೆಲ್ಲ ಊರಿನ ಅಕ್ಕ ಪಕ್ಕದ ಹೊಲಗದ್ದೆಯ ವ್ಯವಸಾಯ ಮಾಡ್ಕೊಂಡಿದ್ರು, ಆದ್ರೆ ತಿಮ್ಮೆಗೌಡರು ಈಗಲೂ ಕೂಡ ತಿಂಗಳಿಗೆ ಮೂರು ಬಾರಿಯಾದರೂ ಕಾಡಿಗೆ ಬರುತ್ತಿದ್ದು, ಹೊರುವಷ್ಡು ಭಾರದ ಸೌದೆ ಹೊತ್ತು ಹೋಗುತ್ತಿದ್ದರು. ಒಂದು ಖಾಕಿ ಚಡ್ಡಿ, ದೊಗಳೆ ಅಂಗಿ, ತಲೆಗೊಂದು ಟವಲ್ ಏರಿಸಿ, ನೀಲಿ ಸೋಲಿನ ಪ್ಯಾರಗನ್ ಚಪ್ಪಲಿ ಲಟ್ʼಚಟ್ʼ ಸದ್ದು ಬರುವಂತೆ ಹೆಜ್ಜೆಹಾಕುತ್ತ ಊರಿನಿಂದ ನೆಡೆದು ಬಂದೇ ಕಾಡಿನಿಂದ ಹೊರೆ ಹೊತ್ತೋಗುತಿದ್ದರು. ಕೆಲವೊಮ್ಮೆ ತಡವಾದರೆ ದೇವರಹಳ್ಳಿಯಲ್ಲೊ ಮುಂಟಿಪಾಳ್ಯದಲ್ಲೊ ತಂಗಿದ್ದು, ಮರಾನೆಯ ದಿನ ಊರ ಹಾದಿ ಹಿಡಿಯುತ್ತಿದ್ದರು. ಈ ಕೆಲಸವೊಂತರ ಅವರ ಜೀವನದ ಅವಿಭಾಜ್ಯ ಕ್ರಿಯೇಯಾಗಿ ಹೋಗಿತ್ತು. ಹೀಗೆ ತಿಂಗಳಿಗೆ ಮೂರು ಬಾರಿಯಾದರೂ ಕಾಡಿಗೆ ರಸ್ತೆಯಲ್ಲಿ ನೆಡೆದೆ ಬರುತ್ತಿದ್ದ, ಆ ತಿಮ್ಮೆಗೌಡನನ್ನ ನೋಡುತ್ತ ಸೈಕಲ್ ತುಳಿಯುತ್ತಿದ್ದ ಎರಡು ಮೂರೂರ ಜನರು ‘ಕಾಡ್ಲಿ ಏನ್ ಮಡ್ಗಿದನಯ್ಯ ತಿಮ್ಮಗೌಡ.. ಈ ವಯಸ್ಸಲ್ಲಿ ಉಣ್ಕ ತಿನ್ಕ ಮನಲಿರದ್ ಬುಟ್ಟು ಯಾನಯ ಇವ್ನ ಚಪಲ’ ಎಂದು ಮಾತನಾಡಿಕೊಳ್ಳುತ್ತಿದ್ದರಲ್ಲದೆ ಬುದ್ದಿ ಹೇಳುವಂತೆ ಅವರ ಮನೆಮಂದಿಗೆ ಸಲಹೆ ನೀಡಿದ್ದಕ್ಕೆ,ನಿಮಗ್ಯಾನ್ ಕಷ್ಟ ಹೋಗವ್ ನಾನು ಬರವ್ ನಾನು, ನಿಮ್ಮ ಕೆಲ್ಸಾ ನೀವ್ ಮಾಡಿ ನನ್ನ ಪಾಡುಗ್ ನನ್ ಬುಡಿ ಎಂದಿದ್ದರಂತೆ ತಿಮ್ಮೆಗೌಡರು.
---------------------------------------------------------------------------------------------------------------------
ನಾವು ಟೀ ಕಾಯಿಸಿ ಕುಡಿದು ಮುಗಿಸುವ ಹೊತ್ತಿಗೆ ಬಾವ ಮನೆಯಿಂದ ಟಿಫಿನ್ ಕ್ಯಾರಿಯರ್ ನಲ್ಲಿ ಚಿತ್ರಾನ್ಹ ತಂದಿದರು, ತಿನ್ನುತ್ತ ಕುಳಿತಿದ್ವಿ, ಆ ಹೊತ್ತಿಗೆ ಖಲೀಲನು ಬಂದ, ಅಪ್ಪ ಖಲೀಲಣ್ಣನನ್ನ ‘ನಾಷ್ಟ ಮಾಡುಡೌ’ ಅಂದ್ರು ಅವ್ನು‘ಆಯ್ತು ಕಪೊ ಅಟ್ಲೆ ಮಾಡ್ದಿ.. ಮಾದೇವ್ನು ಜಡಿನು ಬಂದ್ರ ನಾ ಬಂದಿನಿ ಅಂತಾ ಯೋಳಿ, ನಾನು ದೇವ್ರಳ್ಳಿಗೋಗಿದು ಆ ತಿಮ್ಮಗೌಡನ್ ನೋಡ್ಕ ಬತ್ತಿನಿ’ ಅಂತ ಹೋದ, ನಾನು ಅಲ್ಲಿಗೆ ಹೋಗೋದ ಬೇಡವ ಎನ್ನುವ ಗೊಂದಲದಲ್ಲೆ.. ‘ಅಣಾ ನಾನುವ ಹೋಗ್ಲ್ಯಾ' ಎಂದಾಗ ಅಪ್ಪ.. ಹೋಗು ನೋಡ್ಕಬರೋಗು ಅಂದ್ರು, ‘ಏ ಖಲೀಲೂ.. ನಾನು ಬತ್ತಿನಿ ಇರು ಅಂತ ಕೂಗಿ ಹೇಳಿ, ಅವನನ್ನ ಇರಿಸಿಕೊಂಡು ಗಬಗಬನೆ ತಿಂಡಿ ತಿನ್ನುತ್ತಿದ್ದೆ, ದೇವರಹಳ್ಳಿ ಕಡೆಗೆ ಹೋಗಿದ್ದ ಆ್ಯಂಬುಲೆನ್ಸ್ ಈಗ ಹಿಂದಿರುಗಿ ಹೋಯ್ತು, ಅದರಿಂದೆ ಒಂದು ಪಾರಿಸ್ಟ್ ಜೀಪು ಪೋಲಿಸ್ ಜೀಪು ಹೋಯ್ತು, ಖಲೀಲ ‘ಎತ್ಕ ಒಂಟೋದ್ರು ಅನ್ಸುತ್ತಕಪೊ’ ಅಂತ ಗುಡಿಸಲ ಬಳಿ ಬಂದು ಹೇಳಿದ, ನಾನು ತಿಂಡಿ ಮುಗಿಸಿ ಕೈ ತೊಳಿಯೊ ಹೊತ್ತಿಗೆ ದೇವರಳ್ಳಿ ಮಾದೇವ ಜಡಿಯಾ ಮುಂತಾದವರು ಬಂದರು, ಖಲೀಲ ‘ಎತ್ಗ ಹೋದ್ರಯ ಅಂತ ಕೇಳಿದ್ದಕ್ಕೆ ಹು ಕಣೌ ಅಂದ್ರು, ಯಾತವ ಆಗಿದ್ದು,.. ಆ ತಿಗ್ಲಾಣಿ ಗುಡ್ಡ ಕೆಳಗೆ ಕಣೌ' ಎಂದಾ ಮಾದೇವ. ರಾತ್ರೆ ಆನಿಳಿದಿದ್ವ ಕೆಳಕ.. ಎಂದು ಮತ್ತೆ ಖಲೀಲಣ್ಣ ಮಾದೇವನ ಪ್ರಶ್ನೆಮಾಡಿದ.. ಅದೇನಪ ಏಡ್ಮೂರ್ದಿನದಿಂದಲೂ ಎಲ್ಲು ಕಂಡಂಗಿಲ್ಲ ಎಂದ ಮಾದೇವನಿಗೆ ಯಾತವ್ಕ್ ತುಳ್ದಿತ್ತು ಎಂದು ಖಲೀಲಣ್ಣ ಮರು ಪ್ಪ್ರಶ್ನೆ ಮಾಡಿದಕ್ಕೆ ಮಾದೇವ ‘ಏಕೌ ಅದೂ ಏತವ್ ತುಳಿತು, ಎಲ್ಲಿಕ ತುಳಿತು, ಯಾವ ಕಾಲಲಿ ತುಳಿತು, ಸೊಂಡಿಲಲ್ಲಿ ಬೀಸಿತ್ತ ಕೋರೆಯಲಿ ತಿವಿದಿತ್ತ ಅಂತ ನನಗೇನು ಗೊತ್ತೌ, ನೀನು ಇವತ್ತು ಪೋರ್ತೆ ನಮ್ಮನೆ ಸಾಯ್ಸ್ತಿಯ ಲೌಡಿ ಮಙೆ.. ಎಂದು ಹೀಗೆ ಅವರದೇ ಪರಿಭಾಷೆಯಲ್ಲಿ ಮಾತನಾಡುತ್ತಲೇ ತಮ್ಮ ಕೆಲಸ ಶುರುಮಾಡಿದರು.
ಆನೆಗಳು ರಸ್ತೆಯಂಚಿನ ಯಾವುದಾದರು ಗುಡ್ಡದಮೇಲೆ ಕಾಣಿಸಿಕೊಂಡರೆ ಸುಮಾರು ಮೂರ್ನಾಲ್ಕು ದಿನ ಆ ಗುಡ್ಡದಂಚಿನಲಿ ಅಕ್ಕಪಕ್ಕದಲ್ಲೆ ಕಾಣಿಸಿಕೊಳ್ತಿದ್ವು, ಫಾರೆಸ್ಟ್ ನವರು ಅವು ಕಾಡಿನಿಂದಾಚೆ ಬಾರದಿರಲಿ ಎಂದು ಗುಡ್ಡದ ಹಂಚಲ್ಲಿ ಕಾಡಿನ ಸುತ್ತಲು ಆಳವಾದ ಕಂದಂಕ ತೋಡಿ, ಒಳ ಭಾಗಕ್ಕೆ ಮನುಷ್ಯನ ಎತ್ತರಕ್ಕಿಂತಲೂ ಎತ್ತರಕ್ಕೆ ನಾಲ್ಕೈದು ಲೈನು ಸೋಲರ್ ತಂತಿಗಳನ್ನ ಅಳವಡಿಸಿದ್ದರು, ಚಾಲಾಕಿ ಆನೆಗಳು ಆಯಾ ನೋಡಿ ಇಳಿದು ಹತ್ತಬಹುದಾದಂತ ಜಾಗದಲ್ಲಿ ಸೋಲರ್ ತಂತಿಗಳ ಕಂಬವನ್ನೆ ನಾಜೂಕಾಗಿ ತುಳಿದು ನೆಲಕ್ಕೊರಗಿಸಿ ಕಾಡು ದಾಟಿ ಹೊಲ ಗದ್ದೆಗೆ ನುಗ್ಗಿ ಧ್ವಂಸ ಮಾಡುತ್ತಿದ್ದವು, ಕೆಲವೊಮ್ಮೆ ಡಿಪಾರ್ಟ್ಮೆಂಟಿನವರು ತಮ್ಮ ಬಂದೂಕೀನಿಂದ ಸದ್ದು ಮಾಡಿ ಕಾಡಿಗೆ ಕಳುಹಿಸುತ್ತಿದ್ದರು. ಒಮ್ಮೆ ನಮ್ಮ ಜಮೀನಿಗೂ ನುಗ್ಗಿ ಒಂದೆರಡು ಕುಂಟೆಯಷ್ಟು ಕಬ್ಬನ್ನ ತಿಂದು ತೇಗಿದ್ವ. ಕೆಲವೊಮ್ಮೆ ಏನು ಸಿಗದಾಗ ದಾರಿಲಿ ಸಿಕ್ಕ ಮರಗಳನ್ನೆ ಸಿಗಿಯುತ್ತಿದ್ದವು, ಆಳೆತ್ತರದ ತೆಂಗಿನ ಮರದ ಸುಳಿಯನ್ನೆ ಮೇಯಇದು ಹೋಗುತಿದ್ದವು, ಅಲ್ಲಿ ಇಲ್ಲಿ ಹೀಗೆ ಆನೆಗಳ ಅನೇಕ ಪುಂಡಾಟ ತಿಂಗಳಿಗೊಂದು ಬಾರಿಯಾದರು ಕೇಳಿಬರ್ತಿದ್ವು, ಆದರೆ ಮನುಷ್ಯರಿಗೆ ಪ್ರಾಣಾಪಾಯ ಮಾಡಿದ್ದಂತಹ ಉದಾಹರಣೆ ನಮ್ಮ ಆ ಪ್ರಾಂತ್ಯದಲ್ಲಿ ಅಪರೂಪದ ವಿಷಯವಾಗಿತ್ತು, ಎಲ್ಲೊ ಎರಡು ಮೂರುವರ್ಷದಲ್ಲಿ ಒಮ್ಮೆ ಹೊಲಗದ್ದೆಗೆ ನುಗ್ಗಿ ಅಟ್ಣ (ಮರದಮೇಲಿನ ಸಣ್ಣ ಗುಡಿಸಲು) ಕೆಡವಿ ಯಾರಿಗೊ ಪೆಟ್ಟು ಮಾಡಿವೆ ಅಂತ ಕೇಳಿದುಂಟು ಅಷ್ಟೆ, ಆದರೆ ನನಗೆ ಬುದ್ದಿ ಬಂದಂತ ಕಾಲದಿಂದ ಆನೆ ತುಳಿತದ ಪ್ರಕರಣ ಇದು ಎರಡನೆಯದಾಗಿತ್ತು.
ಆ ದಿನ ತಿಮ್ಮೆಗೌಡ ಆನೆ ತುಳಿತಕ್ಕೆ ಒಳಗಾದ ಎಂದರೆ ಯಾರೊಬ್ಬರು ನಂಬಲಾರದ ಮಾತೇನು ಆಗಿರಲಿಲ್ಲ. ಆತನಿಗೆ ಕಾಡು ಅಲೆಯುವ ಚಟ, ವಯಸ್ಸಾಗಿ ಕಣ್ಣು ಮಂಜಾದರೂ ಕಾಡಿಗೆ ಬರಬೇಕೆನ್ನುವಂತ ಅವನ ಆಸೆ ನಂಜಾಗಿರಲಿಲ್ಲ. ಇವನಿಗೆ ಹೀಗಾಗಿದ್ದಕ್ಕೆ ಅವನೇ ಕಾರಣ ಎಂದೆಲ್ಲ ಕಬ್ಬು ಕಟಾವು ಮಾಡುತ್ತಿದ್ದ ಎಲ್ಲರು ಮಾತನಾಡುತಿದ್ದರು. ಆ ದಿನವಿಡಿ ಅವರಿವರ ಜಮೀನನಲ್ಲಿ ಆನೆಗಳು ಮಾಡಿದ್ದ ಅವಾಂತರಗಳು ಹಿಂದೆಂದೊ ಆಗಿದ್ದ ಚಿರತೆ ದಾಳಿ, ಹುಲಿದಾಳಿಯಂತಹ ವಿಚಾರದ ಮಾತುಕತೆ ಚರ್ಚೆಗಳೆ ಆದವು, ನಾನು ಎಲ್ಲವನ್ನೂ ಕುತುಹಲದಿಂದ ಕೇಳುತ್ತ ಅತ್ತಿತ್ತೆಲ್ಲೂ ಹೋಗದೆ ದಿನಪೂರ್ತಿ ಅಲ್ಲೆ ಕುಳಿತಿದ್ದೆ. ಲಾರಿ ಬಂತು ಕಬ್ಬು ತೂಕಮಾಡಿ ಎಲ್ಲವನ್ನು ತುಂಬುವಷ್ಟರಲ್ಲಿ ಸಂಜೆಯಾಯ್ತು, ಕೆಲಸದವರೆಲ್ಲ ಅವರವರ ಮನೆಕಡೆ ಹೊರಟರು. ನಾನು ಊರು ತಲುಪಿ ಊಟ ಮುಗಿಸಿಕೊಂಡು ಅಪ್ಪನಿಗೆ ಟಿಫನ್ ಕ್ಯಾರಿಯರ್ ಕಟ್ಟಿಕೊಂಡು ಮತ್ತೆ ಹಿಂದಿರುಗಿ ಜಮೀನಿನಲ್ಲೆ ಮಲಗಲೆಂದೊರಟೆ, ಈಗಷ್ಟೆ ಮುಸ್ಸಂಜೆ ಆಗಿದ್ದರೂ ಹಿಂದೆಂದೂ ಇರದ ಕಾಡು ಪ್ರಾಣಿಗಳ ಭಯ ನನ್ನನ್ನ ಆ ದಿನ ಕಾಡಿತ್ತು, ಸುಮಾರು ಏಳುಗಂಟೆಯ ಹೊತ್ತಿಗೆ ಜಮೀನಿಗೆ ತಲುಪಿದೆ. ಅಪ್ಪನು ಊಟ ಮುಗಿಸಿದರು ನಾ ಅಷ್ಟುದಿನ ಆಚೆ ಹೋಗಿ ಒಂದಷ್ಟೊತ್ತು ಬೆಂಕಿ ಕಾದು ಕುಳಿತು ನಂತರದಲ್ಲಿ ಮಲಗುತ್ತಿದ್ದವನು ಆದಿನ ಯಾಕೊ ಖಲೀಲ' ಮಾದೇವ' ಜಡಿಯ' ರಂಗ ಅವರೆಲ್ಲ ಹೇಳಿದ ಕಾಡು ಪ್ರಾಣಿಯ ಪ್ರಕರಣಗಳನ್ನ ನೆನಪಿಸಿಕೊಳ್ಳುತ್ತ ಒಂದು ರೀತೀಯ ಭಯದ ವಾತರಣದಲ್ಲೆ, ಇಲ್ಲಿ ಯಾವು ಪ್ರಾಣಿ ಬರ್ದೆ ಇದ್ರೆ ಸಾಕಪ್ಪ, ಎಂದುಕೊಳ್ಳುತ್ತ ಮಧ್ಯರಾತ್ರಿ ಎಚ್ಚರವಾಗದೆ ಇರಲಿ ಎಂದು ಬ್ಯಾಟರಿ ಹಿಡಿದು ಹೊರಗೆ ಬಂದು ಟ್ಯಾಂಕ್ ಖಾಲಿ ಮಾಡಿ, ಜೋರಾಗಿ ಕೇ' ಹು... ಎಂದು ಕೂಗುತ್ತ ಊರಿಗೆ ಮುಂಚೆ ಎಂಬಂತೆ ಕಂಬಳಿ ಹೊದ್ದು ಮಲಗಿದೆ. ತಿಮ್ಮೆಗೌಡನ ವಿಚಾರ ಮತ್ತೆ ತಲೆಗೆಬಂದು ಯೋಚನೆ ಮಾಡುವಾಗ ತಟ್ಟನೆ ಖಲೀಲ ನನ್ನ ಬಳಿ ಚಾಲೆಂಜ್ ಹಾಕಿದ್ದ ಒಗಟಿನಿ ವಿಚಾರ ಕೇಳಲೇ ಇಲ್ವಲ್ಲಾ ಎನ್ನುವ ಆಲೋಚನೆಯು ಬಂತಾದರೂ.. ಕೇಳಿದ್ರೆ ಏನಾದ್ರು ಹೇಳೋಣ, ಇಲ್ಲಾs ಬೆಳಿಗ್ಗೆ ಬಂದಾಗ ಕೇಳಿದ್ರೆ ಅವನೇ ಹೇಳ್ತಾನೆ ಬಿಡು ಎಂದು ನಿಟ್ಟುಸಿರು ಬಿಟ್ಟು ಧ್ಯಾನಸ್ಥನಾದೆ.
ನಂತರದ ದಿನ ಸ್ವಲ್ಪ ಬೆಳಿಗ್ಯೆ ಬೇಗನೆಯೆ ಎದ್ದು ಈಚೆ ಬಂದೆ, ಸೈಕಲ್ ಅಲ್ಲೆ ಇತ್ತು, ವಾಡಿಕೆಯಂತೆ ಅಪ್ಪ ಎದ್ದ ತಕ್ಷಣ ಜಮೀನು ಸುತ್ತ ಸುತ್ತಿರ ಬರುವುದು ಎಂದು ಊಹಿಸಿ, ನಾನು ಹೋಗಿ ಹಾಲಾದರು ತರುವ ಎನ್ನುವ ಆಲೋಚನೆಯಲ್ಲಿ.. ‘ ಅಣೋ... ನಾನು ಮುಂಟಿಪಾಳ್ಯಕೊಯ್ತಿನಿ ಅಂತಾ ಕಬ್ಬಿನ ಗದ್ದೆಯ ಕಡೆಗೆ ಕೂಗಿ ಹೇಳಿದೆ, ಸದ್ದು ಬರಲಿಲ್ಲ ಮತ್ತೊಮ್ಮೆ ಜೋರಾಗಿ.. ‘ಣೋ ನಾ ಮುಂಟಿಪಾಳ್ಯ ಕೊಯ್ತಿನಿ ಅಂದೆ, ಹಾ... ಹೋಗು ಹೋಗು ಬ್ಯಾಗುನ್ ಬಾ, ನಾ ಒಂಚೂರ್ ಊರ್ಗೋಗಿದ್ ಬರ್ಬೇಕು' ಅಂತ ಆ ಮೂಲೆಯಿಂದೆಲ್ಲೊ ಉತ್ತರ ಬಂತು, ನಾನು ಬಾಟೆಲ್ ತಗಲಾಕಿಕೊಂಡು ಸೈಕಲ್ ಹತ್ತಿ ಹೊರಟೆ' ಹೋಗಿ ಹಾಲು ತುಂಬಿಸಿಕೊಂಡು ಬಂದು ಎಂದಿನಂತೆ ಟೀ ಕೂಡಿದು ತಿಂಡಿ ಮುಗಿಸುಷ್ಟರಲ್ಲಿ ಎಲ್ಲರು ಬಂದು ಕಬ್ಬು ಕಟಾವಿನ ಕೆಲಸ ಶುರುಮಾಡಿದ್ದರು. ಹೀಗೆ ಮಾತು ಶುರುಮಾಡಿದ ಅಪ್ಪ ‘ತಿಮ್ಮಗೊಡ್ನ್ ಇಚಾರ ಯಾನಾಯ್ತಡ ಮಾದೇವ’ ಅಂತ ದೇವರಳ್ಳಿ ಮಾದೇವನ ಕೇಳಿದ್ದಕ್ಕೆ, ಒಂದು ಲಚ್ಚಕ್ಕೆ ತೀರ್ಮಾನ ಆಯ್ತಂತ ಕಪೊ, ಅಂದ. ನನಗೆ ಏನು ಸರಿಯಾಗಿ ಅರ್ಥ ಆಗಲಿಲ್ಲ, ನನಗೆ ತೀರ ಆತ್ಮಿಯನಂತೆ ಗೆಳೆಯನಂತೆ ತಮಾಷೆಗೆ ತೀರ ಹತ್ತಿರನಾಗಿದ್ದ ಖಲೀಲನ್ನ ಕೇಳಿದೆ, ಯಾನ ಖಲೀಲಣ್ಣಣ್ಣ ಯಾನಾಯ್ತು’ ಅಂತ ಅವನು ಆಗ ಬಿಡಿಸಿ ಹೇಳ್ದ.. ‘ತಿಮ್ಮಗೋಡ ಆನ ತುಳ್ದು ಸತ್ತಿರ್ನಿಲ್ವಂತ ಕಣೌ... ಸಣ್ಣ ಬಾಬುನೊಲ್ದಲ್ಲಿ ಕರಂಟಿಗೆ ಸಿಕ್ಕಿ ತೀರ್ಕಂದಂತ, ಪೋಲಿಸ್ನೊರು ಕಂಡಿಡ್ದರ’. ಆ ವಿಚಾರ ಕೇಳಿ ಕ್ಷಣಕ್ಕೇನೂ ಹೊಳೆಯದಿದ್ದರೂ ಚಕಿತನಾದೆ.. ಹಾ.. ‘ಅದೆಂಗೆ ಅದೆಲ್ಲಾ..? ಅಂತ ಮತ್ತೆ ಪ್ರಶ್ನೆಮಾಡಿದೆ ಖಲೀಲಾ ಯೋಳ್ತಿನಿ ನಿಮ್ಮಪ್ಪನ ತವ್ ಎರಡ್ ಬೀಡಿ ಈಸ್ಕಬ, ಎಂದು ಅಲ್ಲೆ ದೂರದಲ್ಲೆ ಕಬ್ಬಿನ ತರಗು ತಳ್ಲಿ ಗುಡ್ಡೆ ಮಾಡುತ್ತಿದ್ದ ಅಪ್ಪನಿಗೆ ‘ಪೌ ಬೀಡಿ ಕೊಡು ಏಡ’ ಅಂತ ಅವನೇ ಕೂಗಿ ಹೇಳಿದ, ‘ಅಪ್ಪ ಜೇಬಿಗೆ ಕೈ ಹಾಕಿ ನೋಡಿ ಮುರಿದಿದ್ದ ಒಂದು ಮೋಟು ಬಿಸಾಕಿ, ‘ಇಲ್ಲ ಕಡ ನನ್ತವು ತಿರೋಗದ, ಹೋಗಡ ದೇವರಳ್ಳಿಲೋಗಿ ಚನ್ನಂಜನ್ ತವು ಏಡ್ಕಟ್ ಬೀಡಿ ಈಸ್ಕ ಬಾ' ಎಂದು ಆಜ್ಞಾಪಿಸಿದರು. ನಾನು ಸೈಕಲ್ ಹತ್ತಿ ಹೊರಟವನೆ ಎರಡೆ ನಿಮಿಷಕ್ಕೆ ದೇವರಳ್ಳಿ ತಲುಪಿದೆ, ಅಂಗಡಿಯ ಚನ್ನಂಜನ ಹತ್ರ ಬರಿ ಬೀಡಿಕೊಂಡು ಸುಮ್ಮನೆ ಬರದೆ ಅವನ ಬಳಿಯು ತಿಮ್ಮೆಗೌಡನ ಸಾವಿನ ವಿಚಾರ ಕೆದಕಿದೆ. ಅವನ ಮಾತುಗಳು ಹೀಗಿತ್ತು.. ‘ಹು ಕಪೊ.. ಆ ಲೌಡಿ ಮಙ ಅಂಗ್ಯೆಪೊ ಮಾಡದು, ಗೊರ್ಮೆಂಟ್ನೋರು ಜಮೀನು ಸುತ್ತ ಸೋಲರ್ ಬುಡಿ ಅಂದ್ರ, ಇವ ಕರೆಂಟ್ ಬುಟ್ಟಿದ್ನಂತಲ್ಲಾ.. ಆ ವಯ್ಯ ತಿಮ್ಮೆಗೌಡ ನೋಡಿ ಪಾಯಿ, ಮಾವುನ್ ಮರುದ್ತವು ಅದ್ಯಾನ್ ನೋಡಿ ಅದೇತಕ್ ಕೈಯ್ ಹಾಕಿದ್ನೌ ಏನೌ, ಪಾಪ ಈಗ ಒಂಠೇಹೋದ, ಅದುವಲ್ದಿಯೆ ಈಗೆ ಯಣನ ಇಲ್ಲಿ ಗುಡ್ಡದಂಚಿಗೆ ಆಳುಗಳ ಕೈಲಿ ಎತ್ಕ ಬಂದ್ಹಾಕ್ಸಿ, ಜನಕೆಲ್ಲಾ ಆನ ತುಳ್ದದ ಅಂತ ಅಬ್ಬುಸ್ಬುಡಿ ಅಂತ ಯೋಳಿದ್ನಂತ, ನಮ್ಮ ವಾಚರ್ ಬಸವ ಅವೌನಲ್ಲಪೋ ಅವಾ.. ಸಾ ಏಂಟು ದಿನದಿಂದ ಆನೆಯಾವು ಕೆಳ್ಗೆ ಕಂಡಿಲ್ಲಾ, ಸುತ್ತೆಲುವೆ ಹಸಿ ಲದ್ದಿಯು ಇಲ್ಲ, ಅಂತಲೂವ ಆಪೀಸೊರ್ಗಳ್ಗೆ ರಿಪೋಟು ಕೊಟ್ಟನಂತ ಕಪೌ, ಯಣ ಬಿದ್ದಿದ್ ಜಾಗ್ದಲಿ ಅಜ್ಜಗುರ್ತುವು ಯಾವ್ದು ಇರ್ನಿಲಕಪೊ.. ಮೈ ಮೇಲಿ ಚಣ್ಣ ಗಾಯವು ಇರ್ನಿಲ್ಲ, ಎಲ್ಲಾ ಆಫೀಸೋರು ಏನೇನ ಎಲ್ಲರು ಒಬ್ಬರಿಗೊಬ್ಬ್ರು ಮಾತಾಡಿಕೊಂಡಿದ್ದು ಊರ ಜನಕ್ಕೆ ಗೊತ್ತಾಗಿ ಆಮೇಲೇನೂ ಮಿಸ್ಮಿಲಿ ಮಾಡಕಾಗ್ನಿಲ ಕಪೌ.. ಅವ್ರ ಊರಿನವರುವೆ ಬಾಬುನುವೆ ಒಂದಿಬ್ರು ಆಪಿಸೊರುವೆ ಕೂತು ಮಾತಾಡಿ ಒಂದ್ ತಿಮ್ಮಗೌಡ್ನ ಮನ್ಯವ್ರಗ ಒಂದ ಲಚ್ಚನ ಏನೊ ಕೊಡಬೇಕು ಅಂತಾಯ್ತಂತ, ಫೋಲಿಸ್ನೋರಿಗೆ ಪಾರಿಸ್ಟನವ್ರಿಗೆ ಎಷ್ಟಾಯ್ತೊ ಗೊತ್ತಿಲ್ಲ. ನಮ್ಮ ಊರಿನ ಐಕ ಮಕ್ಕ ಓಡಾಡ್ತವ ಹುಷಾರಾಗಿರಿ ಅಂತ ಯೋಳ್ಬೇಕು, ಚೂರು ಎಚ್ಚುಕಮ್ಮಿ ಆಯ್ತು ಅಂದ್ರ ಬಾರಿ ಕಷ್ಟಕಪೊ., ಲೌಡಿ ಮಕ್ಕಳು ಅಲ್ಲೆಲ್ಲಿಂದಲೊ ಬಂದು ಏನಪೋ ಇವ್ರ ಮಾಡ್ತಿರ ಕತ, ಇನ್ನು ಯಾನ್ಯಾನ್ ಮಾಡ್ದರೊ ಏನೌ. ಎಂದು ಸವಿವರವಾದ ಚಿತ್ರಣ ವಿವರಿಸ. ಆಗ ನನಗೆ ಅಲ್ಲಿಗೆ ಘಟನೆಯ ಸಂಪೂರ್ಣ ವಿಷಯ ಅರ್ಥವಾಗಿ ನನ್ನೊಳಗೇನೊ ಹತ್ತಾರು ರೀತಿಯ ಆಲೋಚನೆ ಶುರುವಾಯ್ತು.. ಹಳ್ಳಿಯನ್ನೊಮ್ಮೆ ನೊಡಿದೆ ಆ ದೇವರಳ್ಳಿಯು ಎಂದಿನಂತೆ ಮಾಮುಲಾಗಿತ್ತು, ಸೋಪು ಪೇಸ್ಟು ಫೇರನ್ಲೌಲಿ ಪೌಡರ್ ಕಾಣದ, ನಾಡ ಜನರ ಕಪಟ ಕ್ರೌರ್ಯ ಏನನ್ನು ಅರಿಯದ ಮುಗ್ದ ಮಂದಿ ಹಾಗು ಪೋಡಿನ ಬೀಡಿಯಲ್ಲಿ ಆಡಿ ಕಣಿಯುತ್ತಿದ್ದ ಪುಟಾಣಿ ಮಕ್ಕಳು ಎಲ್ಲರನ್ನೂ ನೋಡುತ್ತ ಸೈಕಲ್ ತುಳಿಯುತ್ತ ಹೊರಟೆ. ನನ್ನ ಅಲೋಚನೆಗಳು ಗಿರಕಿ ಹೊಡೆಯುತ್ತಿದ್ದು ದೊಡ್ಡವರ ನ್ಯಾಯ ಹೇಗೆಲ್ಲಾ ಇದೆ, ನೆಡದ ಘಟನೆಯನ್ನೆ ಹೇಗೆಲ್ಲ ತಿರುಚ ಬಲ್ಲರು ಎಂಬುದು ಆ ವಯಸ್ಸಲ್ಲೆ ಅರಿವಾಗುವಂತ ಉದಾಹರಣೆಯ ಅನುಭವ ಉಂಟುಮಾಡಿತು. ಆ ದಿನ ನೆಡೆದಂತ ಘಟನೆ, ಅದ್ಯಾಕೊ ಏನೊ ಕಾಡನ್ನ ಘಾಡವಾಗಿ ಹಚ್ಚಿಕೊಂಡಿದ್ದ ತಿಮ್ಮೆಗೌಡ ನನ್ನೊಳಗೆ ಕಾಡುವ ಮನುಷ್ಯನಾಗಿ ಉಳಿದ.
------------------------------------------------------------------------------------------------------------------
ಸೈಕಲ್ ಕಲ್ಲುಕಂಬಕ್ಕೆ ಹೊರಗಿಸಿ ಕಬ್ಬು ಕಟಾವು ಮಾಡುತ್ತಿದ್ದವರ ಬಳಿ ಬಂದು ಖಲೀಲನಿಗೆ ಮೂರು ಬೀಡಿ ಎಳೆದು ಕೊಟ್ಟು ಕಟ್ಟು ಅಪ್ಪನ ಕೈಲಿಟ್ಟೆ, ಏನೊನು ವಿಚಿತ್ರ ಆಲೋಚನೆಗಳು ತಲೆಗತ್ತಿ ತಣ್ಣಗಾದವು. ಮತ್ತೆ ಖಲೀಲಣ್ಣನ ಬಳಿ ಬಂದವನೇ ಹು ಖಲೀಲಣ್ಣ ಮೊನ್ನ ನೀನ್ ಯೋಳಿದ್ ಒಗ್ಟು ಗೊತ್ತಾಗ್ನಿಲ್ಲ ಅದ್ಯಾನಂತ ನೀನೆ ಯೋಳ್ಬುಡು ಅತ್ತಗ' ಎಂದೆ. ಅಂಗಾರ ನೀನು ಪೆದ್ದಪ್ಪ ಅಂತ ಒಪ್ಕತಿದೈ ಅನ್ನು' ಎಂದ. ನಾನೊಪ್ಕಂದೇಟ್ಕೆ ನಾನು ಪೆದ್ನಾಗೋದನ ಆಯ್ತು ಯೋಳಪ, ಎನ್ನುವ ಹುಂಬತನದಿಂದ ಹು ನಾನು ಪೆದ್ದನೆ' ಅನ್ಕಪ ಆಯ್ತು. ನಸುನಕ್ಕ ಖಲೀಲ ಸೆರಿ ಯೋಳ್ತಿನಿ ಕ್ಯೋಳು, ಎಂದು ಅವನೆ ಲಾಜಿಕ್ ಸಮೇತ ಒಗಟು ಬಿಡಿಸಿ ಹೇಳ್ದಾ.. ‘ನಮ್ಮೋರು ಮೈಕಾಕಂದು ಅಲ್ಲಾ ಹೋ ಅಕ್ಬರ್ ಅಂತ ಕೂಗ್ತ ಪ್ರಾರ್ಥನೆ ಮಾಡ್ತಿವಲ್ಲ ಯಾಕ.. ನಮ್ ದೇವ್ರುಗ ಕಿವುಡು ಅದ್ಕ. ನಾನು ಇನ್ನಿಬ್ರು ? ಅಂದೆ, ಅವನು ‘ಹೇಳ್ತಿನಿ ತಡ್ಕಪೊ, ಕ್ರೈಸ್ತ್ರು ಏಸಪ್ಪನ ಮುಂದ ಮ್ಯಾಣುದ್ ಬತ್ತಿ ಅಚ್ಚಿ ಪ್ರಾರ್ತನ ಮಾಡ್ತಾರ ಯಾಕ..? ಅವ್ರ ದೇವ್ರುಗ ಕಣ್ ಸರಿಯಾಗ್ ಕಾಣದಿಲ್ಲ ಕುರ್ಡು ಅದ್ಕ, ಇನ್ನು ನಿಮ್ಮೊರೆಲ್ಲ ದೇವ್ರುನ ಒತ್ಕಂದು ಊರಲೆಲ್ಲವೆ ಮೆರೊಣ್ಗ ಮಾಡ್ತಾರಲ್ಲ ಯಾಕ..? ಪಾಪ ನಿಮ್ ದೇವರಿಗೆ ಕಾಲಿಲ್ಲ ಅದ್ಕಾ, ಇವ್ರ್ ಮೂರ್ ಜನುವೆ ನಮ್ದೇಶುದ್ ಜನಕೆಲ್ಲ ಗೊತ್ತಿರ್ತ ತಾನ ಎಂದ. ಮುಗುಳ್ನಕ್ಕೆ, ಅರೆ ಹೌದಲ್ವ ಒಂತರೀತಿ ಹೌದು ಎನಿಸಿ ಆಶ್ಚರ್ಯವಾಯ್ತು, ಅಕ್ಷರ ಪರಿಚಯ ಇಲ್ಲದ ಖಲೀಲಣ್ಣಣ್ಣ ಎಷ್ಟು ತರ್ಕ ಹುಡ್ಕಿದಾನೆ ಇದಕ್ಕೆಲ್ಲ ಅನಿಸಿತು, ಸೂಪರ್ ಚೆನಾಗದ. ಎಂದೆ. ಆ ಒಗಡು ಬಿಡಿಸಿದ ನಂತರದಲಿ ಖಲೀಲಣ್ಣ ನನಗೊಂದು ರೀತಿ ಹೊಸದಾಗೆ ಕಾಣಿಸಿದ, ಸದ ತಲೆಗೊಂದು ಟವಲ್ ಕಟ್ಟಿ ಮಾತಾಡುವಾಗ ಹಸ್ಮುಖಿಯಾಗಿ ಬಿಡಿಯಾಗಿದ್ದ ತನ್ನ ಮುಂದಿನೆಲ್ಲ ಹಲ್ಲು ಕಾಣಿಸುವಂತೆಯೆ ಮುಗುಳು ನಗೆಯೊಂದಿಗೆ ಮಾತಾಡುತ್ತಿದ್ದ, ಅವನ ಭಾವ ಭಂಗಿ ಮಾತು ಕಥೆಯಲ್ಲ ನೆನಪಿನ ಬುತ್ತಿಯಲ್ಲಿ ಅಚ್ಚಳಿದು ಉಳಿಯಿತು, ಅವನ ಒಗಟಿನ ಪರ್ಯಾಲೋಚನೆ, ಹಾಗೆ ನನ್ನನ್ನೂ ಸೇರಿ ನಮ್ಮ ಆ ಹಳ್ಳಿಗಾಡಿನ ಜನಕ್ಕೆ ಪೋಸ್ಟ್ಮೊರ್ಟಮ್ ಎಂದರೇನು.. ಹಿರಿಯ ಫಾರೆಸ್ಟ್ ಹಾಗು ಪೋಲಿಸ್ ಅಧಿಕಾರಿಗಾಳು ಹೇಗಿರ್ತಾರೆ, ಉಳ್ಳವರ ಬುದ್ದಿವಂತಿಕೆ ಹೇಗೆಲ್ಲ ಕೆಲಸ ಮಾಡುತ್ತದೆ ಎನ್ನುವುದರ ತಿಳುವಳಿಕೆಯ ಜೊತೆಗೆ ಜಿಲ್ಲಾಸ್ಪತ್ರೆಯ ಆ್ಯಂಬ್ಯುಲೆನ್ಸ್ ಟೈಯರ್ ಕಾಡಂಚಿನ ಕಡೆ ಹಳ್ಳಿಯ ತನಕ ಉರುಳಿ ಬರುವಂತಾಗಿ ಮಾಡಿದ ತಿಮ್ಮೆಗೌಡನ ಸಾವು ಕೂಡ ನನ್ನಲಿ ನೆಲೆನಿಂತು ಇಂದು ಈ ಕಥೆಯಾಯ್ತು.
ಆ ಘಟನೆ ಈ ಕತೆಯಿಂದಾಚೆಗೂ ವಾಸ್ತವದಲ್ಲಿ ನನ್ನನ್ನ ಕಾಡೋದು, ಇಂದಿಗೆ ಆ ಸಣ್ಣ ಬಾಬುವಿನಂತಹ ನೂರಾರು ದೊಡ್ಡ ಮಂದಿ ನಮ್ಮೂರಿನ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ನೆಲೆಯೂರಿದ್ದಾರೆ. ಆಗಿನ ಕಾಲದಲ್ಲಿ ನಮ್ಮ ದೇಶಕ್ಕೆ ಬ್ರಿಟಿಷರು ಬಂದಿದ್ದು ಎಷ್ಟು ಒಳ್ಳೆಯದಾಯ್ತೊ ಕೆಟ್ಟದಾಯ್ತೊ ಅನ್ನೊನನ್ನೊಳಗಿನ ಗೊಂದಲದಂತೆಯೇ, ಈ ಆಂದ್ರಾದ ಧಣಿಗಳು ನಮ್ಮ ಈ ಪ್ರಾಂತ್ಯಕ್ಕೆ ಬಂದು ನೆಲೆಯೂರಿ ವ್ಯವಸಾಯದಲ್ಲಿ ತೊಡಗಿಕೊಂಡಿರುವುದು ಅಷ್ಟೇ ಗೊಂದಲಮಯವಾಗಿದೆ. ಒಂದು ಕಾಲದಲ್ಲಿ ಉಚ್ಚಳ್ಳು, ಉರುಳಿ, ರಾಗಿ, ಮಳೆ ಬಂದು ಕೆರೆ ತುಂಬಿದರಷ್ಟೆ ಭತ್ತವನ್ನ ಬೆಳೆಯುತ್ತಿದ್ದ ನಾವು ಅವರಿಂದ ಕಲಿತುಕೊಂಡದ್ದು ಕಳೆದುಕೊಂಡದ್ದು ತುಂಬಾ ಇವೆ, ಆದರೆ ಬೇಲಿಗೆ ಸೋಲಾರ್ ಬದಲು ವಿದ್ಯುತ್ ಅಳವಡಿಕೆಯಿಂದ ಆಗಬಹುದಾದ ಅನಾಹುತದ ಬಗ್ಗೆ ಕಿಂಚಿತ್ತು ಚಿಂತಿಸದ ಇವರು, ನಮ್ಮ ವಾತವರಣಕ್ಕೆ ಒಗ್ಗದಂತ ಬೆಳೆಗಳಾದ ಮೊಸಂಬಿ, ದಾಳಿಂಬೆ, ಶುಂಠಿ ಅರಿಸಿಣ ಜವನೆ, ಮುಂತಾದ ಬೆಳೆಗಳನ್ನ ಒತ್ತಡದಿಂದ ಬೆಳೆಯುತ್ತಿರುವ ಇವರು, ಅಧಿಕ ಲಾಭದ ಆಸೆಯಿಂದ ಅತಿಯಾಗಿ ರಾಸಯನಿಕ ಬಳಸುವವುದರಿಂದ ಭೂಮಿ ಹಾಳಾಗುತ್ತದೆ ಎನ್ನುವುದರ ಕುರಿತು ಚಿಂತಿಸುವರೆ..?.
ಶಿವರಾಜ್ ಡಿ.ಎನ್.ಎಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ದಾಸನಹುಂಡಿಯವರು. ಬರಹ-ಓದು-ನಟನೆ ಹಾಗೂ ಛಾಯಾಗ್ರಹಣ ಅವರ ಹವ್ಯಾಸ. ಕಲರ್‍ಸ್ ಕನ್ನಡದ ‘ಕಾಮಿಡಿ ಕಂಪನಿ’ಶೋ ನಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಅವರ ಆಸಕ್ತಿ ಕ್ಷೇತ್ರ.
More About Author