Poem

ಕಟ್ಟು-ಬಿಚ್ಚು

ಬದುಕು ಬಂಗಾರವಾದೀತೆಂದು
ಬಗೆದು ಇಂದಿನವರೆಗೂ
ಕಬ್ಬಿಣದ ಪಂಜರದೊಳಗಿದ್ದೆ

ಯಾರೂ ಬಂಧಿಸಿರಲಿಲ್ಲ ನನ್ನ ದೇವರೆ
ಪಂಚೇಂದ್ರಿಯಗಳಿಗೆ ನಾನೆ
ಸರಪಣಿ ಬಿಗಿದು ತಡೆದು ನಿಲ್ಲಿಸಿದ್ದೆ

ಕೈ ಕಾಲು, ತೋಳು, ತೊಡೆಗಳ ಮೇಲೆಲ್ಲ
ಅಚ್ಚಳಿಯದೇ ನಿಂತ ಗುರುತುಗಳು
ಆಳವಾಗಿ ಬೇರೂರಿ ಮನವನ್ನೇ
ಹಿಂಡುತ್ತಿರುವ ಭಾರಿ ಗಾತ್ರದ ಮೊಳೆಗಳು

ನನ್ನ ಜೀವಿತದ ಮೂವತ್ತು ವಸಂತಗಳು
ಬರಿ ಕಟ್ಟುವುದರಲ್ಲೇ ಕಳೆಯಿತು
ದೇವರೆ
ಮನಸು ಕಟ್ಟಿದ ಕಾಲು ಕಟ್ಟಿದೆ
ಕೊನೆಗೊಮ್ಮೆ
ಬಾಯಿ ಕಣ್ಣು ಕಿವಿಗಳನ್ನು
ಕಟ್ಟಿಟ್ಟು ಜೀವಿಸಿದೆ

ಆದರೆ ಕಟ್ಟಿದ ಜೀವ ಒಮ್ಮೆಲೆ
ಭೋರ್ಗರೆದು ಹರಿಯಿತು
ಬಿಚ್ಚುವುದರಲ್ಲಿನ ಸುಖ ಆಗ ತಿಳಿಯಿತು

ಮನಸು ಬಿಚ್ಚಿದೆ ದೇಹ ಬಿಚ್ಚಿದೆ
ಅಂಜಿಕೆ ನಾಚಿಕೆ ಗಾಂಭೀಯ್ಯಗಳನ್ನೆಲ್ಲ
ಒಮ್ಮೆಗೇ ಬಿಚ್ಚಿಟ್ಟೆ
ತ್ಯಾಗಿಯಂತೆ ಭೋಗಿಯಂತೆ ಲೋಭಿಯಂತೆ
ಕುಡುಮಿಯಂತೆ ಎಲ್ಲವ ಹೀರಿದೆ
ಹಕ್ಕಿಯಾಗಿ ಕೀಟವಾಗಿ ಮರವಾಗಿ
ಬದುಕ ಸ್ಪರ್ಶಿಸುವುದ ಅರಿತೆ

ನನ್ನ ದೇವರೆ
ಬದುಕನ್ನೇ ಕಟ್ಟಿಟ್ಟ
ಬಗ್ಗೆ ಪಶ್ಚಾತ್ತಾಪವಿದೆ
ಬಿಚ್ಚುತ್ತಿರುವುದರ ಬಗ್ಗೆ
ನೆಮ್ಮದಿ ಇದೆ

ಕಲೆ : ಮಹಾಂತೇಶ ದೊಡ್ಡಮನಿ

ವಿಡಿಯೋ

ಅಕ್ಷತಾ ಹುಂಚದಕಟ್ಟೆ

ಅಕ್ಷತಾ ಹುಂಚದಕಟ್ಟೆ ಅವರು ಹುಟ್ಟಿದ್ದು 1980ರಲ್ಲಿ, ತೀರ್ಥಹಳ್ಳಿ ತಾಲೋಕಿನ ಪುಟ್ಟ ಗ್ರಾಮ ಹುಂಚದಕಟ್ಟೆಯ ಕೆ.ವಿ.ಕೃಷ್ಣಮೂರ್ತಿಯವರ ಮೊದಲ ಮಗಳು. ತಾಯಿ ಶೈಲಾ ಅವರಿಂದ ಸಾಹಿತ್ಯಾಭಿರುಚಿ ಹತ್ತಿಸಿಕೊಂಡ ಅಕ್ಷತಾ, ಕನ್ನಡ ಸಾಹಿತ್ಯಲೋಕದಲ್ಲಿ ಲೇಖಕಿಯಾಗಿ, ಪ್ರಕಾಶಕಿಯಾಗಿ ತಮ್ಮದೇ ಹೆಸರು ಗಳಿಸಿದ್ದಾರೆ . ಅಕ್ಷತಾ ಕೆ. ಎಂಬ ಹೆಸರಿನಲ್ಲಿ ಪರಿಚಿತರಾದ ಇವರು  ಈಗ ಸಾಹಿತ್ಯ ವಲಯಕ್ಕೆ ಅಕ್ಷತಾ ಹುಂಚದಕಟ್ಟೆ ಎಂದೇ ಚಿರಪರಿಚಿತರು.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಓದಿದ ಅವರು, ಅಲ್ಲಿನ ಸಾಹಿತ್ಯಿಕ ವಾತಾವರಣದಿಂದ ಪ್ರೇರೇಪಣೆಗೊಂಡು ಕವಿತೆ ಬರೆಯಲು ಶುರುಮಾಡಿದರು. ಅಕ್ಷತಾ ಕಾಲೇಜುದಿನಗಳಲ್ಲೇ  ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಪ್ರಶಸ್ತಿ ಪಡೆದವರು, ‘ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ’ ಅವರ ಮೊದಲ ಕವನ ಸಂಕಲನ. ರೈತ ಹೋರಾಟಗಾರ ಕಡಿದಾಳು ಶಾಮಣ್ಣನವರ ಆತ್ಮಕಥನ ‘ಕಾಡತೊರೆಯ ಜಾಡು’ ಕೃತಿಯ ನಿರೂಪಣೆ ಮತ್ತು ಸಂಗ್ರಹ, ಕನ್ನಡದ ಮಹತ್ವದ ಲೇಖಕ, ವಿಮರ್ಶಕ ಕಿ.ರಂ.ನಾಗರಾಜ ಅವರ ಬೇಂದ್ರೆ ಕಾವ್ಯ ಕುರಿತ ಭಾಷಣಗಳನ್ನು ಬರಹ ರೂಪಕ್ಕೆ ತಂದು ‘ಮತ್ತೆ ಮತ್ತೆ ಬೇಂದ್ರೆ’ ಹೆಸರಿನಲ್ಲಿ ಪ್ರಕಟ. ಸದ್ಯ ಶಿವಮೊಗ್ಗದಲ್ಲಿ ವಾಸಿಸುತ್ತಿರುವ ಅಕ್ಷತಾ ಹುಂಚದಕಟ್ಟೆ ಅವರು ಅಹರ್ನಿಶಿ ಪ್ರಕಾಶನವನ್ನು ನಡೆಸುತ್ತಿದ್ದಾರೆ. 

More About Author